– ಕೈಗಾರಿಕೆ ಸೌಲಭ್ಯ ಕಾಯಿದೆಗೆ ತಿದ್ದುಪಡಿ, ಸುಗ್ರೀವಾಜ್ಞೆ ಶೀಘ್ರ
– ಜಿಲ್ಲಾ ಸಮಿತಿ ಒಪ್ಪಿಗೆ ಸಿಕ್ಕ ಕೂಡಲೇ ಚಟುವಟಿಕೆ ಆರಂಭಕ್ಕೆ ಅಸ್ತು
ವಿಕ ಸುದ್ದಿಲೋಕ ಬೆಂಗಳೂರು
ಕೊರೊನಾ ಸಂಕಷ್ಟದಿಂದ ನೆಲ ಕಚ್ಚುತ್ತಿರುವ ಆರ್ಥಿಕತೆಗೆ ಕೈಗಾರಿಕೆ ಮೂಲಕ ಪುನಶ್ಚೇತನ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಂತೆ ರಾಜ್ಯ, ಜಿಲ್ಲಾಮಟ್ಟದ ಉನ್ನತಾಧಿಕಾರ ಸಮಿತಿಯಿಂದ ಅನುಧಿಮೋದನೆ ಸಿಕ್ಕ ತಕ್ಷ ಣವೇ ಕಟ್ಟಡ ನಿರ್ಮಾಣ ಸೇರಿ ಮೂಲಸೌಕರ್ಯ ಸಂಬಂಧಿತ ಚಟುವಟಿಕೆಯನ್ನು ಕೈಗಾರಿಕಾ ಸಂಸ್ಥೆಗಳು ಪ್ರಾರಂಭಿಸಬಹುದು. ಈ ಸಂಬಂಧ ಸರಕಾರ ಸುಗ್ರೀವಾಜ್ಞೆ ಹೊರಡಿಸಲಿದೆ.
ಈ ಉದ್ದೇಶಕ್ಕೆ ‘ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮ 2002’ಕ್ಕೆ ತಿದ್ದುಪಡಿ ತರಲು ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಿಂದಾಗಿ ಹೂಡಿಕೆ ಹರಿದು ಬರುವ ನಿರೀಕ್ಷೆಯಿದೆ. ಕೈಗಾರಿಕೆ ಆರಂಭಿಸಲು ಎದುರಾಗುತ್ತಿದ್ದ ಅಡೆತಡೆ ನಿವಾರಣೆಯಾಗಲಿದೆ. ‘ಮೊದಲು ಕೈಗಾರಿಕೆ ಪ್ರಾರಂಭಿಸಿ. 3 ವರ್ಷದೊಳಗೆ ಎಲ್ಲ ಪರವಾನಗಿ ಪಡೆದು ಉತ್ಪಾದನೆಗೆ ಚಾಲನೆ ನೀಡುವುದು ವಿಧಾನ’ ಎನ್ನುವುದು ಕೈಗಾರಿಕಾ ಸೌಲಭ್ಯ ಕಾಯಿದೆ ತಿದ್ದುಪಡಿ ಪ್ರಮುಖಾಂಶವಾಗಿರಲಿದೆ.
ಸಮಸ್ಯೆಯೇನಿತ್ತು?
ರಾಜ್ಯದಲ್ಲಿ ಹೂಡಿಕೆ ಪ್ರಸ್ತಾವಕ್ಕೆ ನಾನಾ ಹಂತದಲ್ಲಿ ಸಮ್ಮತಿಸಲಾಗುತ್ತಿದೆ. ಇದಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಗಳಲ್ಲಿ ಸಮಿತಿಗಳಿವೆ. ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಅವರನ್ನು ಒಳಗೊಂಡ ಸಮಿತಿಯಿರುತ್ತದೆ. ಆದರೆ, ಈ ಸಮಿತಿಗಳಿಂದ ಅನುಮೋದನೆ ದೊರೆತರೂ ಕೈಗಾರಿಕೆ ಪ್ರಾರಂಭಿಸುವುದು ಸುಲಭವಲ್ಲ. ಇದಕ್ಕೆ ಪರಿಸರ ಇಲಾಖೆ ಸೇರಿದಂತೆ ಹಲವು ಹಂತದಲ್ಲಿ ಕೊಕ್ಕೆ ಹಾಕಲಾಗುತ್ತದೆ. ಈ ಸಮಸ್ಯೆಯಿಂದಾಗಿ ಹೂಡಿಕೆ ಕೈತಪ್ಪುವ ಸಾಧ್ಯತೆಯೇ ಹೆಚ್ಚು. ಇಂತಹ ಅನುಭವ ರಾಜ್ಯಕ್ಕೆ ಸಾಕಷ್ಟು ಬಾರಿ ಆಗಿದೆ.
ಇದೊಂದು ಕ್ರಾಂತಿಕಾರಿ ಕ್ರಮ. ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಹೊಸ ಶಕೆ ಆರಂಭವಾಗಲಿದೆ. ಇದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ನಿರ್ಧರಿಸಲಾಗಿದೆ.
-ಜಗದೀಶ ಶೆಟ್ಟರ್ ಕೈಗಾರಿಕೆ ಸಚಿವ
ರಾಜ್ಯ ಸರಕಾರ ನಮ್ಮ ಮನವಿಗೆ ಸ್ಪಂದಿಸಿದೆ. ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮ ತಿದ್ದುಪಡಿಯಿಂದ ರಾಜ್ಯ ಕೈಗಾರಿಕೋದ್ಯಮ ಬೆಳೆಯಲಿದೆ. ಉದ್ಯೋಗ ಸೃಷ್ಟಿಯಾಗಲಿದೆ.
-ಸಿ ಆರ್ ಜನಾರ್ಧನ್ ಎಫ್‌ಕೆಸಿಸಿಐ ಅಧ್ಯಕ್ಷ
ಬದಲಾವಣೆಯೇನು?
ಉನ್ನತಾಧಿಕಾರ ಸಮಿತಿಯ ಅನುಮೋದನೆ ದೊರಕುತ್ತಿದ್ದಂತೆ ಕಂಪನಿಗಳು ಕಟ್ಟಡದ ಕೆಲಸ ಶುರು ಮಾಡಬಹುದು. ಯಂತ್ರೋಪಕರಣ ಅಳವಡಿಸಿಕೊಳ್ಳಬಹುದು. ಆದರೆ, ಉದ್ಯಮ ಸಂಸ್ಥೆಗಳು 3 ವರ್ಷದೊಳಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಇನ್ನಿತರ ಸಂಸ್ಥೆಗಳಿಂದ ನಿರಾಕ್ಷೇಪಣ ಪತ್ರ ಪಡೆಯಬೇಕು. ಅದಾದ ಬಳಿಕವೇ ಉತ್ಪಾದನೆ ಚಟುವಟಿಕೆಗೆ ಚಾಲನೆ ನೀಡಬೇಕು. ಇದಲ್ಲದೆ ಕಟ್ಟಡ ಇನ್ನಿತರ ಮೂಲಸೌಕರ್ಯದ ಕೆಲಸ ಪ್ರಾರಂಭಿಸುವಾಗ ಉದ್ಯಮ ಸಂಸ್ಥೆಗಳು ಸ್ವಯಂ ದೃಢೀಕರಣ ಪತ್ರ ನೀಡಬೇಕಾಗುತ್ತದೆ. ತಕ್ಷ ಣ ಕೈಗಾರಿಕೆ ಪ್ರಾರಂಭಕ್ಕೆ ಅವಕಾಶ ನೀಡಿದರೂ ಇಂತಹ ಉದ್ಯಮಗಳು ಉತ್ಪಾದನೆ ಪ್ರಾರಂಭಿಸುವ ಮುನ್ನ ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ಅಂತಹ ಕೈಗಾರಿಕಾ ಸಂಸ್ಥೆಗಳಿಗೆ ದಂಡ
ವಿಧಿಸಲಾಗುತ್ತದೆ.