ರಾಜ್ಯ ಕಾಂಗ್ರೆಸ್‌ನಲ್ಲಿ ಅಸಲಿ ಯುದ್ಧ ಆರಂಭ

– ಶಶಿಧರ ಹೆಗಡೆ.  
ಮಹಾ ಸಮರ್ಥ ಸರ್ವಸೇನಾಧ್ಯಕ್ಷನೇ ಇರಲಿ. ಅಂಥವನನ್ನೂ ಅಂಕೆಯಲ್ಲಿ ಇರಿಸಿಕೊಳ್ಳಲು ಬೆದರುಗೊಂಬೆಯನ್ನು ಎದುರು ಬಿಡುವುದು ರಾಜಕಾರಣದ ತಂತ್ರಗಾರಿಕೆಯ ಭಾಗ. ಸೇನಾಪತಿಯನ್ನು ಪ್ರಶ್ನಿಸುವ, ಛೇಡಿಸುವ ಜಾಯಮಾನದವರು ಬೀದಿಗೊಬ್ಬರು ಸಿಗಬಹುದು. ಆದರೆ, ಅದಕ್ಕೆ ತೂಕವಿರುವುದಿಲ್ಲ. ಪರಿಣಾಮವೂ ಶೂನ್ಯ. ಹಾಗಾಗಿ ಸೇನಾಧ್ಯಕ್ಷನಿಗೆ ಅಂಕುಶ ಹಾಕಬೇಕೆನಿಸಿದಾಗ ಅಳೆದೂ ತೂಗಿ ಅದೇ ಪಕ್ಷ ದ ರಥಿಕರನ್ನೇ ಪಕ್ಕಕ್ಕೆ ಕರೆತಂದು ನಿಲ್ಲಿಸಲಾಗುತ್ತದೆ. ಪ್ರಭುತ್ವವು ಇತಿಹಾಸದುದ್ದಕ್ಕೂ ಇದೇ ನೀತಿ ಅನುಸರಿಸಿರುವುದನ್ನು ಇಣುಕಿ ನೋಡಬಹುದು. ವಾನರ ಸೇನೆಯ ಬಲದೊಂದಿಗೆ ಸೀತಾನ್ವೇಷಣೆಗಾಗಿ ಲಂಕೆಗೆ ಹೊರಟ ಶ್ರೀರಾಮಚಂದ್ರನ ರಣನೀತಿಯೂ ಈ ದೃಷ್ಟಿಯಿಂದ ಕೌತುಕಪೂರ್ಣವಾದುದು. ಕಪಿ ಸೈನ್ಯದ ನೇತಾರ ಸುಗ್ರೀವನಾಗಿದ್ದ. ವಾನರ ವೀರರು ಅವನನ್ನು ಕಪಿ ಶ್ರೇಷ್ಠನೆಂದು ಗೌರವಿಸಿದ್ದರು. ರಾಮನ ಅನುಗ್ರಹಕ್ಕೂ ಸುಗ್ರೀವ ಪಾತ್ರನಾಗಿದ್ದ. ಈ ನಡುವೆಯೂ ಸುಗ್ರೀವನ ಬಗಲಿನಲ್ಲಿ ವಾಲಿಯ ಪುತ್ರ ಅಂಗದನನ್ನು ಇದೇ ರಾಮ ಪ್ರತಿಷ್ಠಾಪಿಸಿದ್ದ. ಲಂಕೆಗೆ ಹೋದಾಗ ಸಂಧಾನಕ್ಕಾಗಿ ರಾವಣ ಆಸ್ಥಾನಕ್ಕೂ ಅಂಗದನನ್ನೇ ಕಳುಹಿದ್ದ. ಪರ್ಯಾಯವೆಂಬ ನೆಲೆಯಲ್ಲಿ ಸ್ವಜಾತಿ ಬಾಂಧವ ಅದರಲ್ಲೂ ಅಣ್ಣನ ಮಗ ಅಂಗದನಿದ್ದರೆ ಸುಗ್ರೀವನಲ್ಲಿ ಅಧಿಕಾರದ ಅಹಂಕಾರ ಹೆಡೆಯೆತ್ತುವುದಿಲ್ಲ. ಅವನು ಬಾಲ ಬಿಚ್ಚುವುದಿಲ್ಲ ಎನ್ನುವುದು ರಾಮನ ತಂತ್ರವಿದ್ದಿರಬಹುದು. ಮಹಾಭಾರತದಲ್ಲಂತೂ ಭೀಷ್ಮ, ದ್ರೋಣರಿಗೆ ಬೆದರಿಕೆಯೊಡ್ಡಿ ಕಾರ್ಯಸಾಧನೆ ಮಾಡಿಕೊಳ್ಳಲು ಕರ್ಣನನ್ನು ಸುಯೋಧನ ಮತ್ತು ಅವನ ಸೋದರಮಾವ ಶಕುನಿ ಬಳಸಿಕೊಂಡಿದ್ದರು. ಬ್ಲ್ಯಾಕ್‌ಮೇಲ್‌ ಮಾಡುವ ಈ ಕೃತ್ಯಕ್ಕೆ ಅಂಧನೃಪ ಧೃತರಾಷ್ಟ್ರ ಮೌನವಾಗಿ ಸಮ್ಮತಿಸುತ್ತಿದ್ದ. ಇಲ್ಲಿ ರಾಷ್ಟ್ರದ ಹಿತಚಿಂತನೆಗಿಂತ ಸ್ವಹಿತಾಸಕ್ತಿ ಹಾಗೂ ಅಧಿಕಾರ ದಾಹವೇ ಮೇಲುಗೈ ಪಡೆದಿತ್ತು.

ಚಮಕ್ ಕೊಟ್ಟ ಕಾಂಗ್ರೆಸ್!
ರಾಜ್ಯ ವಿಧಾನ ಪರಿಷತ್ ಚುನಾವಣೆಯೆಡೆಗೆ ಹೊರಳೋಣ. ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಯಾರಾಗಬಹುದು ಎಂದು ಮೊದಲೇ ತಿಳಿದಿತ್ತು. ಹೆಚ್ಚುಕಡಿಮೆ ಅದೇ ರೀತಿಯಲ್ಲಿ ಬಿಜೆಪಿ ಉಮೇದುವಾರರ ಆಯ್ಕೆ ಪ್ರಕ್ರಿಯೆಯಾಗಿದೆ. ಜೆಡಿಎಸ್‌ನಲ್ಲಂತೂ ಪಕ್ಷದ ಚೌಕಟ್ಟು, ಆಂತರಿಕ ಪ್ರಜಾಪ್ರಭುತ್ವದ ರೀತ್ಯ ಯೋಗ್ಯರು, ಅರ್ಹರು, ಸಾಮಾನ್ಯರಲ್ಲಿ ಸಾಮಾನ್ಯರನ್ನು ಇಂತಹ ಸ್ಥಾನಮಾನಗಳಿಗೆ ಪಾತಾಳ ಗರಡಿ ಹಾಕಿ ಶೋಧಿಸಲಾಗುತ್ತದೆ ಎನ್ನುವುದು ಗೊತ್ತಿರುವ ವಿಚಾರ. ಅದರಂತೆ ಜನತಾ ಪರಿವಾರದ ಸಂಘಟನೆಯಲ್ಲೆ ತೊಡಗಿಸಿಕೊಂಡಿದ್ದ ಗೋವಿಂದರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗಾಗಿ ಜೆಡಿಎಸ್ ಕ್ಯಾಂಪ್‌ನಿಂದ ಪವಾಡದ ನಿರೀಕ್ಷೆಯೇನೂ ಇರಲಿಲ್ಲ. ಕಾಂಗ್ರೆಸ್‌ನಲ್ಲಂತೂ ಇಂತಹ ಚುನಾವಣೆಗಳಲ್ಲಿ ಒಂದೆರಡು ಸ್ಥಾನ ದಕ್ಕುವುದಿದ್ದರೂ ನೂರಾರು ಆಕಾಂಕ್ಷಿಗಳು ಸಾಲು ಹಚ್ಚಿರುತ್ತಾರೆ. ಅದೆಷ್ಟೇ ಒತ್ತಡವಿದ್ದರೂ ಏನಾದರೊಂದು ಖಾಜಿ ನ್ಯಾಯ ಮಾಡಿ ಸುಧಾರಿಸುವುದು ಕಾಂಗ್ರೆಸ್‌ನ ರಕ್ತಗುಣ. ಈ ಬಾರಿಯೂ ಹಾಗೇ ಆದೀತೆಂದು ಎಣಿಸಿದ್ದವರಿಗೆ ಕಾಂಗ್ರೆಸ್ ವರಿಷ್ಠರು ಚಮಕ್ ಕೊಟ್ಟಿದ್ದಾರೆ. ಅದು ಅಂತಿಂತಹ ಶಾಕ್ ಅಲ್ಲ. ರಾಜ್ಯ ಕಾಂಗ್ರೆಸ್‌ನ ಒಂದು ವಲಯಕ್ಕೆ ಇದನ್ನು ಪಚನ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಯಾಕೆಂದರೆ, ಬಿ.ಕೆ.ಹರಿಪ್ರಸಾದ್ ಎನ್ನುವ ಫೈರ್ ಬ್ರ್ಯಾಂಡ್ ವ್ಯಕ್ತಿತ್ವದ ರಾಜಕಾರಣಿ ವಿಧಾನ ಪರಿಷತ್‌ಗೆ  ಪ್ರವೇಶಿಸುತ್ತಿದ್ದಾರೆ!

ಯಾವುದರ ದ್ಯೋತಕ?
ಭರ್ತಿ ಮೂರು ಅವಧಿಗೆ ರಾಜ್ಯಸಭೆ ಸದಸ್ಯರಾಗಿ ದಶಕಗಳಿಂದ ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದ ಬಿ.ಕೆ.ಹರಿಪ್ರಸಾದ್ ಎಂಎಲ್ಸಿ ಆಗುತ್ತಿರುವುದರ ಹಿಂದಿನ ಕಥನವೂ ಬಹಳ ಕುತೂಹಲಕಾರಿಯಾಗಿದೆ. ರಾಷ್ಟ್ರದಲ್ಲಿ ಅತ್ಯುನ್ನತ ಸ್ಥಾನಕ್ಕೇರಿ ಕೆಳಗಿಳಿದವರು ಗ್ರಾಮ ಪಂಚಾಯಿತಿ ರಾಜಕಾರಣ ಮಾಡಿದ್ದನ್ನೂ ಜನ ನೋಡಿದ್ದಾರೆ. ಹಾಗಿರುವಾಗ ರಾಜ್ಯಸಭೆ ಸದಸ್ಯರಾಗಿ ನಿವೃತ್ತಿ ಹೊಂದಿದವರು ವಿಧಾನ ಪರಿಷತ್‌ಗೆ ಬರುವುದು ಅಪಮಾನವೇನೂ ಅಲ್ಲ! ದೇಶದ ಸಂವಿಧಾನವೇ ಈ ಅವಕಾಶ ನೀಡಿರುವಾಗ ಇದನ್ನು ವಿರೋಧಿಸುವುದು ಸಾಧುವಾಗಲಾರದು. ಇಲ್ಲಿರುವ ಒಂದೇ ಒಂದು ಪ್ರಶ್ನೆಯೆಂದರೆ ಸುದೀರ್ಘ ಕಾಲ ರಾಜ್ಯಸಭೆ ಸದಸ್ಯರಾಗಿದ್ದವರು ವಿಧಾನ ಪರಿಷತ್‌ಗೆ ಎಂಟ್ರಿ ಪಡೆಯುವ ಬದಲು ಹೊಸಬರಿಗೆ ದಾರಿ ಬಿಡಬಹುದಿತ್ತು ಎಂಬುದು. ಅದೇನೇ ಇದ್ದರೂ ಕಾಂಗ್ರೆಸ್ ವರಿಷ್ಠ ಮಂಡಳಿಯೇ ಹರಿಪ್ರಸಾದ್ ಅವರಿಗೆ ಈ ಸ್ಥಾನ ನೀಡಿದೆ. ಇದಕ್ಕೆ ರಾಜ್ಯ ಕಾಂಗ್ರೆಸ್‌ನ ಘಟಾನುಘಟಿಗಳ ಒತ್ತಾಸೆಯೂ ಇದೆ. ಈ ಅಂಶವೇ ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಮುಂಬರುವ ದಿನಗಳಲ್ಲಿ ಅಸಲಿ ಆಟ ಶುರುವಾಗುವುದರ ದ್ಯೋತಕದಂತಿದೆ.

ಸಿದ್ದರಾಮಯ್ಯಗೆ ಹರಿಪ್ರಸಾದ್ ಚೆಕ್‌ಮೇಟ್‌
ಹಾಗೆ ನೋಡಿದರೆ ಕಳೆದ ಬಾರಿಯೇ ಬಿ.ಕೆ.ಹರಿಪ್ರಸಾದ್ ಬಹಳ ಪ್ರಯಾಸ ಪಟ್ಟು ರಾಜ್ಯಸಭೆಗೆ ಹೋಗಿದ್ದರು. ಆಗ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದರು. ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಈ ಮಟ್ಟಕ್ಕೆ ಬೆಳೆಯುವುದರಲ್ಲಿ ಹರಿಪ್ರಸಾದ್ ಯೋಗದಾನ ಇರುವುದನ್ನು ಸಾರಾಸಗಟಾಗಿ ತಳ್ಳಿಹಾಕಲಾಗದು. ದಿಲ್ಲಿಯ ಹೈಕಮಾಂಡ್ ಅಂಗಳಲ್ಲಿ ಸಿದ್ದರಾಮಯ್ಯ ಪರ ವಹಿಸುವುದರಲ್ಲಿ ಹರಿಪ್ರಸಾದ್ ಮುಂಚೂಣಿಯಲ್ಲಿದ್ದರು. ದೇವರಾಜ ಅರಸು ಬಳಿಕ ಹಿಂದುಳಿದವರು ಹಾಗೂ ದಮನಿತರ ಪರ ದನಿ ಎತ್ತುವುದರಲ್ಲಿ ತಾವು ಛಾಂಪಿಯನ್ ಎಂದು ಸಿದ್ದರಾಮಯ್ಯ ಗುರುತಿಸಿಕೊಂಡಿದ್ದಾರೆ. ಇದೇ ಕಾರಣದಿಂದ ಸ್ವತಃ ಹಿಂದುಳಿದ ವರ್ಗಕ್ಕೆ ಸೇರಿದ ಹರಿಪ್ರಸಾದ್ ಪ್ರದೇಶ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಬಲಿಸಿದ್ದರು. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ವರ್ಷೊಪ್ಪತ್ತಿನಲ್ಲೇ ಉಭಯರ ನಡುವಿನ ಸಂಬಂಧವೂ ಹಳಸಿ ಹೋಗಿತ್ತು. ಇದರ ಪರಿಣಾಮವಾಗಿ ಹಿಂದಿನ ಬಾರಿ ಹರಿಪ್ರಸಾದ್ ರಾಜ್ಯಸಭೆಗೆ ಆಯ್ಕೆಯಾಗುವಾಗ ಸಿದ್ದರಾಮಯ್ಯ ಅವರನ್ನು ನೆಚ್ಚಿಕೊಳ್ಳುವುದಕ್ಕಿಂತ ಹೈಕಮಾಂಡ್ ಮೇಲೆ ವಿಶ್ವಾಸವಿರಿಸಿ ದಾಳ ಉರುಳಿಸುವಂತಾಗಿತ್ತು. ವರಿಷ್ಠರು ಕೂಡ ಹರಿಪ್ರಸಾದ್ ಕೈಬಿಟ್ಟಿರಲಿಲ್ಲ. ಬಿ.ಕೆ.ಹರಿಪ್ರಸಾದ್ ನೇರ ಚುನಾವಣೆಯಲ್ಲಿ ಒಮ್ಮೆಯೂ ಗೆದ್ದಿಲ್ಲ. ಪ್ರಬಲ ಒಬಿಸಿ ಸಮುದಾಯದ ನಾಯಕರಾದರೂ ಪಕ್ಷ ಕ್ಕೆ ವೋಟ್‌ ಬ್ಯಾಂಕ್‌ ತಂದುಕೊಡುವ ವರ್ಚಸ್ಸು ಇಲ್ಲದಿರಬಹುದು. ಇದೆಲ್ಲದರ ಹೊರತಾಗಿಯೂ ಪಕ್ಷ ದ ಸಂಘಟನೆಯಲ್ಲಿ ತೊಡಗಿಸಿಕೊಂಡು ಹೈಕಮಾಂಡ್‌ಗೆ ನಿಷ್ಠರಾಗಿ ರಾಜಕಾರಣ ಮಾಡಿರುವುದೇ ಅವರ ಸ್ವಯಾರ್ಜಿತ ಆಸ್ತಿ. ಹರಿಪ್ರಸಾದ್ ಆರ್ಜಿಸಿರುವ ಈ ಸ್ವತ್ತಿನಿಂದ ತಮಗೆ ಲಾಭವಾಗಬಹುದು ಎನ್ನುವ ಪ್ರದೇಶ ಕಾಂಗ್ರೆಸ್‌ನ ಪ್ರಮುಖರ ಆಲೋಚನೆಯಾಗಿದೆ. ಈ ಮೂಲಕ ಪ್ರಶ್ನಾತೀತ ಎಂಬಂತೆ ಗತ್ತಿನಿಂದಿರುವ ಸಿದ್ದರಾಮಯ್ಯ ಅವರ ಓಟಕ್ಕೆ ಕಡಿವಾಣ ಹಾಕಬಹುದು ಎಂಬ ಲೆಕ್ಕಾಚಾರ. ರಾಜ್ಯ ಕಾಂಗ್ರೆಸ್‌ನ ಸಿದ್ದರಾಮಯ್ಯ ವಿರೋಧಿ ಬಣಕ್ಕೆ ಹರಿಪ್ರಸಾದ್ ಪರಮಾಪ್ತರೂ ಅಲ್ಲ. ಅಚ್ಚುಮೆಚ್ಚಿನವರೂ ಅಲ್ಲ. ಹಾಗಿದ್ದರೂ ಸಿದ್ದರಾಮಯ್ಯ ಎದುರು ಖಡಕ್ ಆಗಿ ಮಾತಾಡಬಲ್ಲರು. ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಳ್ಳುವ ದಾಷ್ಟ್ರ್ಯ ತೋರಬಲ್ಲರು ಎಂಬ ನೆಲೆಯಲ್ಲಿ ಹರಿಪ್ರಸಾದ್ ಅವರೀಗ ಮುನ್ನೆಲೆಗೆ ಬಂದಿದ್ದಾರೆ. ಹರಿಪ್ರಸಾದ್ ಎಂದರೆ ಅಷ್ಟಕ್ಕಷ್ಟೇ ಎಂಬಂತಿದ್ದವರೂ ಅವರನ್ನು ಅಪ್ಪಿ ಮುದ್ದಾಡುವಷ್ಟು ಬದಲಾಗಿದ್ದಾರೆ. ಅಂದರೆ ಈ ಮುಖಂಡರೆಲ್ಲರೂ ಸಿದ್ದರಾಮಯ್ಯ ವರ್ಚಸ್ಸಿನ ಮುಂದೆ ಮುಂಕಾದವರು. ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರಿಂದ ಸಂತ್ರಸ್ತರಾದವರು. ಹಾಗಾಗಿ ಸಿದ್ದರಾಮಯ್ಯ ಮುಂದೊಬ್ಬರು ‘ಚೆಕ್‌ಮೇಟ್‌’ ಇರಲಿ ಎಂಬ ಧಾವಂತಕ್ಕೆ ಬಿದ್ದಿದ್ದಾರೆ. ಹರಿಪ್ರಸಾದ್ ಅವರನ್ನು ಎಂಎಲ್ಸಿ ಮಾಡಿಸುವುದರೊಂದಿಗೆ ಈ ಪ್ರಯತ್ನದಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ.

ವ್ಯಕ್ತಿ ಕೇಂದ್ರಿತವಾಗುವ ಆತಂಕ
ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ಮೈತ್ರಿ ಸರಕಾರದ ಪತನದ ಬಳಿಕ ರಾಜ್ಯ ಕಾಂಗ್ರೆಸ್‌ಗೆ ಹೊಸ ಸ್ವರೂಪ ಕೊಡಲು ಹೈಕಮಾಂಡ್ ಹೊರಟಿದೆ. ಈ ನಿಟ್ಟಿನಲ್ಲಿ ಒಂದಷ್ಟು ಬದಲಾವಣೆಯೂ ಆಗಿದೆ. ಕೆಪಿಸಿಸಿಯ ಹೊಸ ಸಾರಥಿ ಡಿ.ಕೆ.ಶಿವಕುಮಾರ್ ಅವರೂ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬುತ್ತ ಮುನ್ನುಗ್ಗುತ್ತಿದ್ದಾರೆ. ಇದರ ಅರ್ಥ ಎಲ್ಲವೂ ಸರಿಹೋಗಿದೆ. ಡಿಕೆಶಿ ರಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಲಲಿತವಾಗಿ ಸಾಗಿದೆ ಎಂದಲ್ಲ. ಕೋವಿಡ್ ವಿಪತ್ತು ಹಾಗೂ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆ ಕೈಗೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಈ ಅಡೆತಡೆ ನಡುವೆ ತಂತ್ರಜ್ಞಾನ ಬಳಸಿಕೊಂಡು ಅವರು ಸಂಘಟನೆಯ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರೂ ಪಕ್ಷ ದ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ, ಹೆಚ್ಚಿನ ಶಾಸಕರು ಸಿದ್ದರಾಮಯ್ಯ ಅವರನ್ನೇ ತಮ್ಮ ನಾಯಕರೆಂದು ಈಗಲೂ ಘಂಟಾಘೋಷವಾಗಿ ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷ ದ ನಾಯಕ ಹಾಗೂ ಪ್ರತಿಪಕ್ಷ ದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಪಕ್ಷ ದ ಶಾಸಕರು ನಿರಂತರ ಸಂಪರ್ಕ ಮಾಡುತ್ತಿರುತ್ತಾರೆ. ಇದು ಕಾಂಗ್ರೆಸ್‌ನ  ಸಿದ್ದರಾಮಯ್ಯ ವಿರೋಧಿ ಕ್ಯಾಂಪ್‌ಗೆ ಬಿಸಿತುಪ್ಪವಾಗಿದೆ. ಪಕ್ಷ ವ್ಯಕ್ತಿಕೇಂದ್ರಿತವಾಗಬಾರದು ಎನ್ನುವುದು ಈ ಬಣದ ನಾಯಕರ ಅಂಬೋಣ. ಈ ವಿಷಯದಲ್ಲಿ ಸಾಕಷ್ಟು ಘರ್ಷಣೆ ನಡೆದರೂ ನೇರಾನೇರ ಸಿದ್ದರಾಮಯ್ಯ ಅವರತ್ತ ವಾಗ್ಬಾಣ ಪ್ರಯೋಗಿಸುವ ಛಾತಿ ಈ ಯಾರಲ್ಲೂ ಇಲ್ಲ. ಯಾಕೆಂದರೆ ಸಿದ್ದರಾಮಯ್ಯ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿದ್ದರು. ಪಾಂಗಿತವಾಗಿ ಊಟ ಮಾಡುವುದು(ಕ್ರಮಬದ್ಧ, ಶಿಸ್ತುಬದ್ಧವಾಗಿ ಊಟ ಮಾಡುವುದು) ಎನ್ನುತ್ತಾರಲ್ಲ? ಹಾಗೆಯೇ ಐದು ವರ್ಷದ ಅವಧಿಯಲ್ಲಿ ಬರ, ನೆರೆ, ಭಿನ್ನಮತ ಏನೇ ಬಂದರೂ ಎಲ್ಲವನ್ನೂ ಮೆಟ್ಟಿನಿಂತು ವ್ಯವಸ್ಥಿತವಾಗಿ ಆಡಳಿತ ನಡೆಸಿದ್ದರು. ಈ ಅವಧಿಯಲ್ಲಿ ಶಾಸಕರನ್ನೂ ಸಂಭಾಳಿಸಿಕೊಂಡಿದ್ದರು. ಐದು ವರ್ಷ ಹೀಗೆ ಆಡಳಿತ ನಡೆಸಿದ ನಾಯಕ ರಾಜಕಾರಣದಲ್ಲಿ ಸಕ್ರಿಯವಾಗಿರುವಾಗ ಶಾಸಕರು, ಮುಖಂಡರು, ಕಾರ್ಯಕರ್ತರು ಅಂಥವರನ್ನು ಅರಿಸಿಕೊಂಡು ಬರುವುದು ಸಹಜ. ಈ ಭಾರ ಹೊರುವುದು ಸವಾಲಾಗಿ ಪರಿಣಮಿಸಿದೆ ಎನ್ನುವುದು ಪಕ್ಷದ ಇತರ ನಾಯಕರ ಆತಂಕ. ಹಾಗಾಗಿ ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರಾಗಬಾರದು ಎನ್ನುವುದನ್ನು ಸಿದ್ದರಾಮಯ್ಯ ಅವರಿಗೆ ನೆನಪಿಸಲು ವರಿಷ್ಠರು ಹಾಗೂ ರಾಜ್ಯ ಕಾಂಗ್ರೆಸ್‌ನ ಒಂದು ವಲಯದವರು ಈ ಬಲೆ ಹೆಣೆದಿದ್ದಾರೆ. ಈ ರಾಜಕೀಯ ಸಂಘರ್ಷದಲ್ಲಿ ಸಿದ್ದರಾಮಯ್ಯ ಅವರಂತಹ ಮಹಾರಥಿಯ ಪಕ್ಕ ದೃಢವಾಗಿ ನಿಲ್ಲಲು ತಮ್ಮದೇ ಪಕ್ಷದ ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎಲ್ಲಕಾಲದಲ್ಲೂ ಬಲಾಢ್ಯ ನಾಯಕರನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ರಾಜಕಾರಣ ಈ ಬಗೆಯ ವ್ಯವಸ್ಥೆ ಮಾಡಿಕೊಳ್ಳುತ್ತದೆ ಎನ್ನುವುದು ಇದರಿಂದ ವೇದ್ಯವಾಗುತ್ತದೆ.

ಹೊಂದಾಣಿಕೆಯ ಜರೂರತ್ತು
ಈ ದೃಷ್ಟಿಯಿಂದ ರಾಜ್ಯ ಕಾಂಗ್ರೆಸ್‌ನಲ್ಲಿ  ಬಿ.ಕೆ.ಹರಿಪ್ರಸಾದ್ ಸಕ್ರಿಯರಾಗುತ್ತಿರುವುದಕ್ಕೆ ಮಹತ್ವವಿದೆ. ಹಾಗಾಗಿ ಸಿದ್ದರಾಮಯ್ಯ ಅವರೂ ಎಚ್ಚರಿಕೆಯಿಂದ ಹೆಜ್ಜೆಯಿರಿಸಬೇಕಾಗುತ್ತದೆ. ಸಿಕ್ಸರ್, ಬೌಂಡರಿ ಬಾರಿಸಿಯೇ ರನ್ ಪೇರಿಸುತ್ತೇನೆ ಎಂದರೆ ಅದು ಆಗುವ ಮಾತಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಸಿಂಗಲ್ಸ್, ಡಬಲ್ಸ್ ರನ್‌ಗೆ ಓಡಬೇಕಾಗುತ್ತದೆ. ಹಾಗೆ ಓಡುವಾಗ ರನ್ ಔಟ್ ಆಗಬಾರದೆಂದರೆ ಹೊಂದಾಣಿಕೆ ಇರಬೇಕಾಗುತ್ತದೆ. ಸಿದ್ದರಾಮಯ್ಯ ನಾಟೌಟ್ ಆಗಿರಬೇಕೆಂದರೆ ಹೊಂದಿಕೊಂಡು ಹೋಗಬೇಕು ಎನ್ನುವ ವ್ಯೂಹರಚನೆಯನ್ನು ಅವರ ವಿರೋಧಿಗಳೀಗ ಮಾಡಿದ್ದಾರೆ. ಹಾಗಂತ ಸಿದ್ದರಾಮಯ್ಯ ಅವರನ್ನು ಅಲಕ್ಷಿಸುವಂತೆಯೇ ಇಲ್ಲ. ವಿಧಾನ ಪರಿಷತ್‌ಗೆ ಹರಿಪ್ರಸಾದ್ ಬರುತ್ತಿರುವುದರಿಂದ ಸಿದ್ದರಾಮಯ್ಯ ವಿರೋಧಿ ಕ್ಯಾಂಪ್ ಮೇಲುಗೈ ಸಾಧಿಸಿರಬಹುದು. ಆದರೆ, ವಿಧಾನ ಪರಿಷತ್‌ಗೆ  ಕಾಂಗ್ರೆಸ್‌ನ ಮತ್ತೊಬ್ಬ ಕ್ಯಾಂಡಿಡೇಟ್ ಆಗಿರುವ ನಜೀರ್ ಅಹ್ಮದ್ ಅವರಿಗೆ ಸಿದ್ದರಾಮಯ್ಯ ಬೆಂಲವಿತ್ತು. ಕಾಂಗ್ರೆಸ್‌ನ ಇತರರು ಅಲ್ಪಸಂಖ್ಯಾತರಲ್ಲೇ ಬೇರೆಯವರ ಹೆಸರು ಶಿಫಾರಸು ಮಾಡಿದ್ದರು. ನಜೀರ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಸಫಲರಾಗಿದ್ದರು. ಹಾಗಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ  ಹಿಡಿತವಿರಿಸಿಕೊಳ್ಳಲು ಮುಂಬರುವ ದಿನಗಳಲ್ಲಿ ತಂತ್ರ-ಪ್ರತಿತಂತ್ರಗಳ ರಾಜಕಾರಣ ಹರಳುಗಟ್ಟುವ ಲಕ್ಷಣವಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top