ಕಾರ್ಗಿಲ್ ಗಡಿಯಲ್ಲಿ ಒಳನುಗ್ಗಿ ಟೆಂಟ್ ಹೂಡಿದ ಪಾಕಿ ಅತಿಕ್ರಮಣಕಾರರನ್ನು ಹೊಡೆದೋಡಿಸಿ, ಹಿಮಬೆಟ್ಟಗಳ ಮೇಲೆ ವಿಜಯ ಧ್ವಜ ನೆಟ್ಟ ನೆನಪಿನ ದಿನ ಇಂದು. 1999ರ ಜುಲೈ 25ರ, 21 ವರ್ಷಗಳ ಹಿಂದಿನ, ನಮ್ಮ ಯೋಧರ ಸಾಹಸಗಾಥೆಯನ್ನು ನೆನಪಿಸಿಕೊಳ್ಳಲು ಇದು ಸುಸಮಯ. ಕಡಿದಾದ ಬೆಟ್ಟಗಳ ಮೇಲಿನಿಂದ ದಾಳಿ ನಡೆಸುತ್ತಿದ್ದ ವೈರಿಗಳನ್ನು ಹೊಡೆದುರುಳಿಸಿದ ಪ್ರತಿಯೊಬ್ಬ ಯೋಧನ ಕತೆಯೂ ರೋಮಾಂಚಕವೇ.
ಒಳನುಸುಳಿದ ಪಾಕಿಗಳು
1999ರ ಫೆಬ್ರವರಿಯಲ್ಲಿ ಪಾಕ್‌ನೊಂದಿಗೆ ಶಾಂತಿ ಸಂದೇಶದೊಂದಿಗೆ ಅಂದಿನ ನಮ್ಮ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದ ಲಾಹೋರ್‌ಗೆ ಬಸ್ ಯಾತ್ರೆ ಕೈಗೊಂಡರು. ಪಾಕಿಸ್ತಾನದ ಆಗಿನ ಪ್ರಧಾನಿ ನವಾಜ್ ಷರೀಫ್ ಈ ಸ್ನೇಹಹಸ್ತಕ್ಕೆ ಕೈಚಾಚಿದರು. ಅದೇ ವೇಳೆ, ಕಾರ್ಗಿಲ್‌ನಲ್ಲಿ ಒಳನುಸುಳುವ ಯೋಜನೆಯನ್ನು ಸಿದ್ಧಪಡಿಸಿಟ್ಟುಕೊಂಡಿತ್ತು ಪಾಕಿಸ್ತಾನ ಸೇನೆ. ಜನವರಿ- ಫೆಬ್ರವರಿಯಲ್ಲಿ ಇಲ್ಲಿ ಭಯಂಕರ ಚಳಿ ಇರುವುದರಿಂದ ಭಾರತದ ಯೋಧರು ಪ್ಯಾಟ್ರೋಲಿಂಗ್ ಮಾಡುವುದಿಲ್ಲ. ಇದೇ ಸನ್ನಿವೇಶದಲ್ಲಿ ಪಾಕಿಸ್ತಾನ ಸೇನೆಯ ಕೆಲವು ತುಕಡಿಗಳು ಕಳ್ಳರಂತೆ ಗಡಿ ನಿಯಂತ್ರಣ ರೇಖೆಯ ಒಳನುಸುಳಿ ಕಾರ್ಗಿಲ್‌ನ ಬೆಟ್ಟಗಳಲ್ಲಿ ಡೇರೆ ಹೂಡಿ ಕುಳಿತರು. ‘ಆಪರೇಷನ್ ಬದ್ರ್’ ಎಂಬ ಗುಪ್ತನಾಮದಲ್ಲಿ ನಡೆದ ಆ ಕಾರ್ಯಾಚರಣೆಯ ಮುಖ್ಯ ಗುರಿ ಕಾಶ್ಮೀರ ಮತ್ತು ಲಡಾಖ್ ನಡುವಿನ ಕೊಂಡಿಯನ್ನು ಒಡೆದು, ಭಾರತ ಪಡೆಗಳು ಸಿಯಾಚಿನ್ ಗ್ಲೇಸಿಯರ್‌ನಿಂದ ಹಿಂದೆ ಸರಿಯುವಂತೆ ಮಾಡುವುದಾಗಿತ್ತು.
ಇದರ ಯಾವ ಪರಿವೆಯೂ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗಿರಲಿಲ್ಲ. ಈ ವಿಷಯವನ್ನು 2007ರಲ್ಲಿ ಅವರೇ ಸ್ವತಃ ಬಹಿರಂಗ ಮಾಡಿದ್ದರು. ಪಾಕ್ ಯೋಧರ ಜತೆಗೆ ಉಗ್ರರೂ ಇದ್ದರು. ಪಾಕಿಸ್ತಾನ ಸೇನೆಯು ಮೊದಲಿಗೆ ಇದು ಬಂಡುಕೋರರ ಕೃತ್ಯ ಎಂದು ಹೇಳಿ ತಿಪ್ಪೆ ಸಾರಿಸಲು ಯತ್ನಿಸಿತು. ಆದರೆ, ಕದನ ಬಿಗಡಾಯಿಸಿದಾಗ ನಿಜ ಒಪ್ಪದೆ ಗತ್ಯಂತರವಿರಲಿಲ್ಲ. ಅಂದಿನ ಪಾಕ್ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರ್ರಫ್ ಹಾಗೂ ಮತ್ತೊಬ್ಬ ಸೇನಾಧಿಕಾರಿ ಅಜೀಜ್ ಜತೆ ಕಾರ್ಗಿಲ್ ವಿಷಯಕ್ಕೆ ಸಂಬಂಧಿಸಿದಂತೆ ನಡೆಸಿದ ಸಂವಹನ ಸಂದೇಶಗಳನ್ನು ಭಾರತ ಸಂಗ್ರಹಿಸಿ, ಹೊರ ಜಗತ್ತಿಗೆ ಇದು ಗೊತ್ತಾಗುವಂತೆ ಮಾಡಿತು.
ಎಚ್ಚೆತ್ತುಕೊಂಡ ಭಾರತೀಯ ಸೇನೆ
1999ರ ಮೇ ತಿಂಗಳಲ್ಲೇ ಭಾರತೀಯ ಸೈನ್ಯಕ್ಕೆ ನುಸುಳುಕೋರರ ಪತ್ತೆ ಹಚ್ಚಿತು. ಆರಂಭದಲ್ಲಿ, ಇದು ಉಗ್ರಗಾಮಿಗಳ ಕೃತ್ಯ ಇರಬೇಕು ಅಂದುಕೊಂಡರು. ಮೇ 3ರಂದು ಬೆಟ್ಟಗುಡ್ಡಗಳಲ್ಲಿ ತಿರುಗಾಡುವ ಕುರಿಗಾಹಿಗಳು ಈ ನುಸುಳುಕೋರರ ಮಾಹಿತಿಯನ್ನು ಭಾರತೀಯ ಸೇನೆಗೆ ನೀಡಿದರು. ಮೇ 5ರಂದು ಇವರನ್ನು ವಿಚಾರಿಸಲು ಹೋದ ಭಾರತೀಯ ಗಡಿಭದ್ರತಾ ಪಡೆಯ ಐವರು ಯೋಧರನ್ನು ಪಾಕಿಗಳು ಕೊಂದು ಹಾಕಿದರು. ಪಾಕ್ ಸೈನ್ಯದ ಚಲನೆ ಖಚಿತವಾಯಿತು. ಪ್ರಧಾನಿ ವಾಜಪೇಯಿ ಹಾಗೂ ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್ ಅವರಿಗೆ ಮಾಹಿತಿ ಹೋಯಿತು. ಅವರು ಪಾಕ್ ಸೈನ್ಯವನ್ನು ಹೊರದೂಡಲು ಸೈನ್ಯಕ್ಕೆ ಮುಕ್ತಹಸ್ತ ನೀಡಿದರು. ಭೂಸೇನಾ ಮುಖ್ಯಸ್ಥ ಜ.ವೇದಪ್ರಕಾಶ್ ಮಲಿಕ್ ಹಾಗೂ ವಾಯುಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅನಿಲ್ ಯಶವಂತ ಟಿಪ್ನಿಸ್ ಮುಂದಿನ ಕಾರ್ಯಾಚರಣೆಯ ಆಗುಹೋಗುಗಳನ್ನು ರೂಪಿಸಿದರು. ಕಾರ್ಯಾಚರಣೆಗೆ ‘ಆಪರೇಷನ್ ವಿಜಯ್’ ಎಂದು ಹೆಸರಿಡಲಾಯಿತು. ಕಾರ್ಗಿಲ್ ಪ್ರದೇಶದ ಪ್ರಮುಖ ಬೆಟ್ಟವಾದ ಟೈಗರ್ ಹಿಲ್ ಜೊತೆಗೆ ದ್ರಾಸ್, ಕಸ್ಕರ್, ಮುಷ್ಕೋಹ್ ಬೆಟ್ಟಗಳನ್ನೂ ಪಾಕಿಗಳು ಹಿಡಿದಿಟ್ಟುಕೊಂಡಿದ್ದರು.
ಟೈಗರ್ ಹಿಲ್ ವಶಕ್ಕಾಗಿ ಹೋರಾಟ
ಕಾರ್ಗಿಲ್- ದ್ರಾಸ್ ಪ್ರಾಂತ್ಯದಲ್ಲಿ ಟೈಗರ್ ಹಿಲ್ ಪ್ರಮುಖವಾಗಿತ್ತು. ಇದನ್ನು ಏರಿ ಕುಳಿತಿದ್ದ ಪಾಕಿಗಳನ್ನು ಹಿಮ್ಮೆಟ್ಟಿಸದೆ ವಿಜಯ ಪೂರ್ಣವಾಗಲು ಸಾಧ್ಯವಿರಲಿಲ್ಲ. ಇದು ಭಾರತದ ಕಡೆಯಿಂದ ಏರಲು ತುಂಬಾ ಕಠಿಣವಾದ ಮೈ ಹೊಂದಿದೆ. ಎತ್ತರದಲ್ಲಿ ಪಾಕ್ ಸೈನಿಕರು ಕುಳಿತಿದ್ದು, ಕೆಳಗಿನಿಂದ ಬರುತ್ತಿದ್ದ ಭಾರತೀಯ ಸೈನಿಕರನ್ನು ಸುಲಭವಾಗಿ ಸಾಯಿಸುತ್ತಿದ್ದರು. ಇಲ್ಲಿಂದ ಅವರಿಗೆ ಭಾರತದ ಹೆದ್ದಾರಿ ಎನ್‌ಎಚ್1ಎ ಕಾಣಿಸುತ್ತಿತ್ತು. ಅಲ್ಲಿಂದಲೇ ಹೆದ್ದಾರಿಯ ಮೇಲೆ ಬಾಂಬ್ ಸುರಿಮಳೆಯನ್ನೂ ಅವರು ಸುರಿಸಿ, ಭಾರತೀಯ ಸೇನೆಯ ವಾಹನಗಳು ಓಡಾಡಲಾಗದಂತೆ ಮಾಡಿಬಿಟ್ಟಿದ್ದರು. ಇದನ್ನು ವಶಪಡಿಸಿಕೊಳ್ಳುವುದು ಮುಖ್ಯವಾಗಿತ್ತು.
ಜುಲೈ 1ರ ಹೊತ್ತಿಗೆ ಟೈಗರ್ ಹಿಲ್‌ನ ಅಕ್ಕಪಕ್ಕದ ಬೆಟ್ಟಗಳನ್ನು 8 ಸಿಖ್ ರೆಜಿಮೆಂಟ್ ವಶಪಡಿಸಿಕೊಂಡಿತ್ತು. ಟೈಗರ್ ಹಿಲ್ ಅನ್ನು ಕೆಳಗಿನಿಂದ ಏರಲು 18 ಗ್ರೆನೆಡಿಯರ್ಸ್ ಪಡೆ ಸಜ್ಜಾಯಿತು. ಡಿ ಕಂಪನಿ ಮತ್ತು ಘಾತಕ್ ಪ್ಲಟೂನ್‌ಗಳ ಕ್ಯಾಪ್ಟನ್ ಸಚಿನ್ ನಿಂಬಾಳ್ಕರ್ ಮತ್ತು ಲೆ.ಬಲವಾನ್ ಸಿಂಗ್ ಅವರು ವೈರಿಗಳಿಗೆ ಆಶ್ಚರ‍್ಯವಾಗುವಂತೆ, ಕಡಿದಾದ ಶಿಖರದ ಕಡೆಯಿಂದ ಏರಿಬಂದು, ಗುಂಡಿನ ದಾಳಿ ಆರಂಭಿಸಿದರು. ಇನ್ನೊಂದು ಕಡೆಯಿಂದ 8 ಸಿಖ್ ರೆಜಿಮೆಂಟ್ ಗುಂಡಿನ ದಾಳಿ ನಡೆಸಿತು. ಬೆಟ್ಟದ ಕಡಿದಾದ ಮೈಯಿಂದ ಹವಿಲ್ದಾರ್ ಮದನ್‌ಲಾಲ್ ಎಂಬ ಧೀರಯೋಧ ತನ್ನ ಪರ್ವತಾರೋಹಿ ಕೌಶಲ್ಯವನ್ನೆಲ್ಲ ಬಳಸಿ ಕಣ್ಣುಕುಕ್ಕುವ ಕಗ್ಗತ್ತಲಿನಲ್ಲಿ ರಾತ್ರಿಯಿಡೀ ಬೆಟ್ಟವೇರಿದ. ಮುಂಜಾನೆ ಶತ್ರುಗಳ ಮೇಲೆ ಇದಕ್ಕಿದ್ದಂತೆ ಎರಗಿದ. ದಿಕ್ಕು ತೋಚದಂತಾದ ವೈರಿಗಳು ಭಯಭೀತರಾಗಿ ಕಾಲಿಗೆ ಬುದ್ಧಿ ಹೇಳಿದರು; ಇಲ್ಲವೇ ಭಾರತೀಯ ಸೈನಿಕರ ಕೈಯಲ್ಲಿ ಹತರಾದರು. ಈ ಯುದ್ಧದಲ್ಲಿ ಗಾಯಗೊಂಡ ಮದನ್‌ಲಾಲ್ ಹುತಾತ್ಮನಾದ. ಯೋಗೇಂದ್ರ ಯಾದವ್ ಎಂಬ ಯೋಧ ಏಕಾಂಗಿಯಾಗಿ ಹೋರಾಡುತ್ತಾ ಹತ್ತಾರು ಯೋಧರನ್ನು ಕೊಂದ. 18 ಗ್ರೆನೆಡಿಯರ್ಸ್ ನಿರಂತರವಾಗಿ ಶೆಲ್ ದಾಳಿಗಳನ್ನು ನಡೆಸುತ್ತ ವೈರಿಗಳ ದಿಕ್ಕೆಡಿಸಿದರು. ಟೈಗರ್ ಹಿಲ್ ವಿಜಯ ನಿರ್ಣಾಯಕವಾಗಿತ್ತು. ಈ ಎತ್ತರದ ಬೆಟ್ಟವನ್ನು ಗೆದ್ದ ಬಳಿಕ ಉಳಿದ ಬೆಟ್ಟಗಳನ್ನು ಗೆಲ್ಲಲು ಸುಲಭವಾಯಿತು.
ಕಾರ್ಗಿಲ್ ಕದನದ ಕಲಿಗಳು
ವಿಕ್ರಮ ಬಾತ್ರಾ ಕಾರ್ಗಿಲ್
ಯುದ್ಧದ ವೇಳೆ, ಕಡಿದಾದ ಶಿಖರ-5140 ಅನ್ನು ವಶಪಡಿಸಿಕೊಳ್ಳುವಂತೆ ವಿಕ್ರಮ ಬಾತ್ರಾ ಮತ್ತು ತಂಡಕ್ಕೆ ಆದೇಶಿಸಲಾಯಿತು. ಶಿಖರದ ತುದಿಯಲ್ಲಿದ್ದ ಪಾಕ್ ಸೈನಿಕರಿಗೆ ಪರಿಸ್ಥಿತಿ ಅನುಕೂಲಕರವಾಗಿತ್ತು. ಪ್ರತಿಕೂಲಕರ ಸನ್ನಿವೇಶದಲ್ಲಿ ತನ್ನ ಐದು ಸೈನಿಕರೊಂದಿಗೆ ಮುನ್ನುಗ್ಗಿದರು ವಿಕ್ರಮ್. ತುದಿಯಲ್ಲಿ ಶತ್ರು ಸೈನಿಕರು ಮಷಿನ್ ಗನ್‌ನಿಂದ ದಾಳಿ ಮಾಡುತ್ತಿದ್ದರು. ಛಲ ಬಿಡದ ವಿಕ್ರಮ್, ಮೂವರು ಶತ್ರು ಸೈನಿಕರನ್ನು ಸಾಯಿಸಿದರು. ಇದರಿಂದ ಸೂರ್ತಿಗೊಂಡ ವಿಕ್ರಮ್ ತಂಡದ ಇತರ ಸೈನಿಕರೂ ಕೆಚ್ಚೆದೆಯ ಹೋರಾಟ ನಡೆಸಿದರು. 5140 ಶಿಖರವನ್ನು ವಿಕ್ರಮ್ ತಂಡ ವಶಕ್ಕೆ ಪಡೆಯಿತು. ಇದಾದ ಬಳಿಕ ಶಿಖರ-4575 ಅನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಲಾಯಿತು. ಹೋರಾಟಕ್ಕೆ ನಿಂತ ವಿಕ್ರಮ ಅವರಿಗೆ ಪರಿಸ್ಥಿತಿ ಅವರ ಪರವಾಗಿರಲಿಲ್ಲ. 1600 ಅಡಿ ಎತ್ತರದಿಂದ ಶತ್ರು ಸೈನಿಕರು ದಾಳಿ ನಡೆಸಿದರು. ಜುಲೈ 9ರಂದು ವಿಕ್ರಮ್ ಮತ್ತು ಅವರ ತಂಡ, ಕಡಿದಾದ ಶಿಖರ ಏರತೊಡಗಿದರು. ಮುನ್ನುಗ್ಗತೊಡಗಿದ ಸುಬೇದಾರ್‌ರೊಬ್ಬರನ್ನು ತಡೆದು ಹಿಂದೆ ಕಳಿಸಿದ ವಿಕ್ರಮ್ ತಾವೇ ನುಗ್ಗಿದರು. ಗಾಯಗಳಿಂದ ಜರ್ಜರಿತರಾಗಿದ್ದ ವಿಕ್ರಮ್ ಶತ್ರುಗಳ ಗುಂಡುಗಳಿಗೆ ವೀರಮರಣ ಅಪ್ಪಿದರು.
ಮನೋಜ್‌ಕುಮಾರ್ ಪಾಂಡೆ
ಇವರು ಗೂರ್ಖಾ ರೈಫಲ್ಸ್‌ನ ಕಿರಿಯ ಅಧಿಕಾರಿ. ಪಾಂಡೆ ನೇತೃತ್ವದ ತುಕಡಿಗೆ ಬಟಾಲಿಕ್ ಸೆಕ್ಟರ್‌ನಿಂದ ಎದುರಾಳಿ ಸೈನಿಕರನ್ನು ಹೊರಹಾಕುವ ಜವಾಬ್ದಾರಿ ನೀಡಲಾಯಿತು. 1999 ಜುಲೈ 3ರಂದು ಖಲುಬಾರ್ ಪರ್ವತ ತುದಿಯಲ್ಲಿದ್ದ ಶತ್ರು ಸೈನಿಕರನ್ನು ಹೊರದಬ್ಬುತ್ತ ಮಧ್ಯರಾತ್ರಿಯ ವೇಳೆಗೆ ಪಾಂಡೆ ನೇತೃತ್ವದ ತಂಡ ಅಂತಿಮ ಗುರಿಯತ್ತ ಸಾಗಿತ್ತು. ಅಲ್ಲಲ್ಲಿ ಕುಳಿತಿದ್ದ ಶತ್ರುಗಳು ಪಾಂಡೆ ನೇತೃತ್ವದ ತುಕಡಿ ಮೇಲೆ ದಾಳಿ ನಡೆಸಿ, ಅವರು ಮುಂದೆ ಹೋಗದಂತೆ ತಡೆದಿದ್ದರು. ಬೆಳಕು ಮೂಡುವಷ್ಟರಲ್ಲಿ ಅವರನ್ನು ಹೊಡೆದೋಡಿಸಬೇಕಿತ್ತು. ಸಾಹಸಿ ಪಾಂಡೆ ಶತ್ರುಗಳ ಸಮೀಪವೇ ತಮ್ಮ ತಂಡವನ್ನು ತಂದು ನಿಲ್ಲಿಸಿದರು. ಗುಂಡಿನ ದಾಳಿ ಆರಂಭವಾಯಿತು. ಶತ್ರುಗಳ ಬಂಕರ್‌ಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾದರು. ಆದರೆ, ಗುಂಡಿನ ದಾಳಿಯಿಂದ ಸಾಕಷ್ಟು ಗಾಯಗೊಂಡಿದ್ದ ಪಾಂಡೆ ಕುಸಿದು ಬಿದ್ದು, ವೀರಮರಣ ಅಪ್ಪಿದರು.
ಸಂಜಯ್ ಕುಮಾರ್
ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ ಯೋಧ ಸಂಜಯ ಕುಮಾರ್. ಜುಲೈ 4ರಂದು ಅವರ ತಂಡಕ್ಕೆ ಮುಷ್ಕೋಹ ಕಣಿವೆಯ 4874 ಶಿಖರವನ್ನು ಕ್ಲಿಯರ್‌ಗೊಳಿಸುವ ಕೆಲಸ ಒಪ್ಪಿಸಲಾಯಿತು. ಸಂಜಯಕುಮಾರ್ ಸ್ಕೌಟ್ ತಂಡವನ್ನು ಮುನ್ನಡೆಸುತ್ತಿದ್ದರು. ಕಡಿದಾದ ಭಾಗವನ್ನು ಹತ್ತಿ ಶತ್ರು ಸೈನಿಕರತ್ತ ಧಾವಿಸಿದರು. ಜುಲೈ 5 ಬೆಳಗಿನ ಜಾವ, ಪರ್ವತದ ಮೇಲೆ ಅನುಕೂಲಕರ ಸ್ಥಿತಿಯಲ್ಲಿದ್ದ ಶತ್ರುಗಳ ಮೇಲೆ ದಾಳಿ ನಡೆಸಲಾಯಿತು. ಶತ್ರುಗಳ ಒಂದೊಂದೇ ಬಂಕರ್ ನಾಶ ಮಾಡುತ್ತಾ ಮುಂದೆ ಹೋದರು. ಗುಂಡುಗಳು ಖಾಲಿಯಾದವು. ವೈರಿಗಳ ಬಂದೂಕಿನಿಂದ 2 ಗುಂಡುಗಳು ಸಂಜಯಕುಮಾರ್ ತೊಡೆ ಹೊಕ್ಕವು. ದಾಳಿಕೋರರತ್ತ ನುಗ್ಗಿ ಅವರಿಂದಲೇ ಮಷಿನ್‌ಗನ್ ಕಿತ್ತುಕೊಂಡು ಕಾದಾಡಿದರು. ಎರಡನೇ ಬಂಕರ್ ಕೂಡ ವಶಪಡಿಸಿಕೊಂಡರು. ಅಂತಿಮವಾಗಿ ಪಾಯಿಂಟ್ 4874 ಅನ್ನು ಭಾರತೀಯ ಸೇನೆ ತನ್ನದಾಗಿಸಿಕೊಂಡಿತು.
ಯೋಗೇಂದ್ರ ಯಾದವ್ ದೇಹದಲ್ಲಿ
15ಕ್ಕೂ ಹೆಚ್ಚು ಗುಂಡು ಹೊಕ್ಕಿದ್ದರೂ ಪಾಕಿ ಸೈನಿಕರನ್ನು ಎದುರಿಸಿದ ಮಹಾಯೋಧ. ಪರಮವೀರ ಚಕ್ರ ಗೌರವ ಪಡೆದ ಅತ್ಯಂತ ಕಿರಿಯ ಯೋಧ ಎಂಬ ಹೆಗ್ಗಳಿಕೆ. ‘ಘಾತಕ್’ ತುಕಡಿಯ ಭಾಗವಾಗಿದ್ದ ಯಾದವ್ ಮತ್ತು ಅವರ ತಂಡಕ್ಕೆ ಟೈಗರ್ ಹಿಲ್ ಮೇಲಿದ್ದ ಮೂರು ಬಂಕರ್‌ಗಳನ್ನು ವಶಡಿಸಿಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಬಂಕರ್‌ಗಳು ಪರ್ವತ ಮೇಲಿದ್ದವು ಮತ್ತು ಹಿಮ ಆವರಿಸಿತ್ತು. ಅವರು ಅರ್ಧ ದಾರಿ ಕ್ರಮಿಸುವಷ್ಟರಲ್ಲೇ ಬಂಕರ್‌ಗಳಿಂದ ಶತ್ರು ಸೈನಿಕರು ದಾಳಿ ಆರಂಭಿಸಿದರು. ಕಮಾಂಡರ್, ಮತ್ತಿಬ್ಬರು ಯೋಧರು ಮೃತರಾದರು. ಯಾದವ್‌ಗೆ ತೊಡೆಸಂದು ಮತ್ತು ಭುಜಕ್ಕೆ ಗುಂಡು ತಾಗಿದ ಹೊರತಾಗಿಯೂ, ಉಳಿದಿದ್ದ 60 ಅಡಿ ಕಡಿದಾದ ಭಾಗವನ್ನು ಹತ್ತಿ ಮೇಲಕ್ಕೆ ಹೋಗಿ, ಬಂಕರ್ ಮೇಲೆ ದಾಳಿ ಮಾಡಿ, ನಾಲ್ಕು ಶತ್ರು ಸೈನಿಕರನ್ನು ಕೊಂದರು. ಉಳಿದ ಯೋಧರು ಪರ್ವತ ಮೇಲೆ ಬರುವಂತಾಯಿತು. ಎರಡನೇ ಬಂಕರ್ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ನಾಲ್ಕು ಸೈನಿಕರನ್ನು ಕೊಂದು ಹಾಕಿದರು. ಈ ವೇಳೆಗೆ ಹಲವಾರು ಬುಲೆಟ್‌ಗಳು ಅವರ ದೇಹ ಹೊಕ್ಕಿದ್ದವು.
ಆಪರೇಶನ್ ವಿಜಯ್ ಮೈಲುಗಲ್ಲು
ಮೇ 3: ಕಾರ್ಗಿಲ್‌ನೊಳಗೆ ಪಾಕಿಸ್ತಾನದ ಸೇನೆ ನುಗ್ಗಿದ್ದನ್ನು ಪತ್ತೆ ಹಚ್ಚಿದ ಕುರಿಗಾಹಿಗಳು
ಮೇ 5: ಭಾರತೀಯ ಸೇನೆ ರವಾನೆ- ಭಾರತದ ಐವರು ಯೋಧರನ್ನು ಸೆರೆಹಿಡಿದ ಪಾಕ್ ಯೋಧರು ಚಿತ್ರಹಿಂಸೆ ನೀಡಿ ಕೊಂದು ಹಾಕಿದರು.
ಮೇ 9: ಪಾಕಿಸ್ತಾನದಿಂದ ಶೆಲ್ಲಿಂಗ್ ದಾಳಿ, ಕಾರ್ಗಿಲ್‌ನಲ್ಲಿದ್ದ ಸೇನಾ ಶಸ್ತ್ರಾಗಾರಕ್ಕೆ ಹಾನಿ
ಮೇ 10: ಡ್ರಾಸ್, ಕಾಕ್ಸಾರ್ ಮತ್ತು ಮುಷ್ಕೊಹ್‌ನಲ್ಲಿ ಪಾಕಿಗಳು ಒಳನುಗ್ಗಿದ್ದನ್ನು ಮೊದಲಿಗೆ ಪತ್ತೆ ಹಚ್ಚಲಾಯಿತು.
ಮೇ 3ನೇ ವಾರ: ಕಾಶ್ಮೀರ ಕಣಿವೆಯಿಂದ ಕಾರ್ಗಿಲ್‌ಗೆ ಭಾರತೀಯ ಸೇನೆಯಿಂದ ಯೋಧರ ತುಕಡಿ ರವಾನೆ
ಮೇ 26: ಒಳನುಗ್ಗಿದವರ ಮೇಲೆ ವಾಯುಪಡೆಯಿಂದ ದಾಳಿ ಆರಂಭ
ಮೇ 27: ಮಿಗ್ 21 ಮತ್ತು ಮಿಗ್ 27 ಯುದ್ಧವಿಮಾನಗಳನ್ನು ಕಳೆದುಕೊಂಡ ಭಾರತೀಯ ಸೇನೆ
ಮೇ 28: ಐಎಎಫ್ ಎಂಐ-17 ಲಘುಯುದ್ಧ ವಿಮಾನ ಹೊಡೆದುರುಳಿಸಿದ ಪಾಕಿಸ್ತಾನ ಸೇನೆ, ನಾಲ್ವರು ಸಿಬ್ಬಂದಿ ಸಾವು
ಜೂನ್ 1: ರಾಷ್ಟ್ರೀಯ ಹೆದ್ದಾರಿ ಎನ್‌ಎಚ್1ಎ ಮೇಲೆ ಬಾಂಬ್ ದಾಳಿ ನಡೆಸಿದ ಪಾಕಿಸ್ತಾನ
ಜೂನ್ 5: ಸೆರೆಯಾದ ಮೂವರು ಪಾಕ್ ಯೋಧರಿಂದ ಮಾಹಿತಿ ಪಡೆದು, ವರದಿ ಬಿಡುಗಡೆ ಮಾಡಿದ ಭಾರತ. ಈ ವರದಿಯು ಕಾರ್ಗಿಲ್‌ನಲ್ಲಿ ಪಾಕಿಸ್ತಾನ ಸೇನೆ ಒಳನುಗ್ಗಿರುವುದನ್ನು ಖಚಿತ ಪಡಿಸಿತು.
ಜೂನ್ 6: ಕಾರ್ಗಿಲ್‌ನಲ್ಲಿ ಬೃಹತ್ ಮಟ್ಟದಲ್ಲಿ ದಾಳಿ ಆರಂಭಿಸಿದ ಭಾರತೀಯ ಸೇನೆ
ಜೂನ್ 9: ಬಟಾಲಿಕ್ ಸೆಕ್ಟರ್‌ನ ಎರಡು ಪ್ರಮುಖ ಸ್ಥಳಗಳನ್ನು ಮರುವಶಪಡಿಸಿಕೊಂಡ ಭಾರತ
ಜೂನ್ 11: ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಮತ್ತು ಲೆಫ್ಟಿನೆಂಟ್ ಜನರಲ್ ಆಜೀಜ್ ಖಾನ್ ನಡುವಿನ ಸಂದೇಶವಾಹಕ ಸಂಭಾಷಣೆಯನ್ನು ಬಿಡುಗಡೆ ಮಾಡಿ, ಇದರಲ್ಲಿ ಪಾಕಿಸ್ತಾನ ಸೇನೆಯ ಕೈವಾಡ ಇರುವುದನ್ನು ಹೊರ ಜಗತ್ತಿಗೆ ತೋರಿಸಿಕೊಟ್ಟ ಭಾರತ
ಜೂನ್ 13: ಡ್ರಾಸ್‌ನಲ್ಲಿನ ಟೊಲೊಂಲಿಂಗ್‌ನ ಮೇಲೆ ನಿಯಂತ್ರಣ ಸಾಧಿಸಿದ ಭಾರತೀಯ ಸೇನೆ
ಜೂನ್ 15: ಪಾಕ್‌ನ ಅಂದಿನ ಪ್ರಧಾನಿ ಷರೀಫ್‌ಗೆ ದೂರವಾಣಿ ಕರೆ ಮಾಡಿದ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್, ಕಾರ್ಗಿಲ್‌ನಿಂದ ಸೇನೆಯನ್ನು ವಾಪಸ್ ಕರೆಯಿಸುವಂತೆ ಸೂಚಿಸಿದರು.
ಜೂನ್ 29: ಟೈಗರ್‌ಹಿಲ್ ಹತ್ತಿರದ ಪ್ರಮುಖ ಪೋಸ್ಟ್‌ಗಳಾದ ಪಾಯಿಂಟ್ 5060 ಮತ್ತು ಪಾಯಿಂಟ್ 5100ಗಳನ್ನು ವಾಪಸ್ ಪಡೆದ ಸೇನೆ
ಜುಲೈ 2: ಕಾರ್ಗಿಲ್‌ನಲ್ಲಿ ಮೂರು ದಿಕ್ಕುಗಳಿಂದ ನಿರ್ಣಾಯಕ ದಾಳಿ ಆರಂಭಿಸಿದ ಭಾರತ
ಜುಲೈ 4: ಹನ್ನೊಂದು ಗಂಟೆಗಳ ಘನಘೋರ ಕಾಳಗದ ಬಳಿಕ ಟೈಗರ್‌ಹಿಲ್ ವಾಪಸ್ ಪಡೆದ ಭಾರತೀಯ ಸೇನೆ
ಜುಲೈ 5: ಡ್ರಾಸ್ ಮೇಲೆ ಸಂಪೂರ್ಣ ನಿಯಂತ್ರಣ. ಕ್ಲಿಂಟನ್ ಜತೆಗಿನ ಭೇಟಿ ಬಳಿಕ ಕಾರ್ಗಿಲ್‌ನಿಂದ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳುವುದಾಗಿ ಷರೀಫ್ ಘೋಷಣೆ
ಜುಲೈ 7: ಬಟಾಲಿಕ್‌ನಲ್ಲಿ ಜುಬಾರ್ ಹೈಟ್ಸ್ ಅನ್ನು ವಾಪಸ್ ಪಡೆದ ಭಾರತ
ಜುಲೈ 11: ಬಟಾಲಿಕ್‌ನಿಂದ ಹೊರಬರಲು ಆರಂಭಿಸಿದ ಪಾಕಿಸ್ತಾನದ ಸೇನೆ
ಜುಲೈ 14: ಆಪರೇಷನ್ ವಿಜಯ್ ಯಶಸ್ವಿಯಾಯಿತು ಎಂದು ಘೋಷಿಸಿದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ.
ಜುಲೈ 26: ಪಾಕಿಸ್ತಾನ ದಾಳಿಕೋರರಿಂದ ಸಂಪೂರ್ಣವಾಗಿ ಕಾರ್ಗಿಲ್ ಮುಕ್ತವಾಯಿತು.