ಕನ್ನಡದ ಪ್ರಶ್ನೆಗಳ ಸಮುದಾಯ ಶೋಧ

ಭಾಷೆಯ ಪ್ರಶ್ನೆಯನ್ನು ಚರ್ಚಿಸುವಾಗ ಅದೊಂದೇ ಪ್ರಶ್ನೆಯಂತೆ ಚರ್ಚಿಸಿದರೆ, ನಾನಾರೀತಿಯ ವಿರೋಧಾಭಾಸಗಳಿಗೆ, ಗೊಂದಲಗಳಿಗೆ ಕಾರಣವಾಗುತ್ತದೆ. ಭಾಷೆಯ ಪ್ರಶ್ನೆಯು ಅಭಿವೃದ್ಧಿಯ ಶೈಲಿ, ಜೀವನದ ಶೈಲಿಯ ಪ್ರಶ್ನೆಗಳೊಂದಿಗೂ ತಳುಕು ಹಾಕಿಕೊಂಡಿರುತ್ತದೆ ಎಂಬುದು ನಿಜ. ಆದರೆ ಅಭಿವೃದ್ಧಿಯ, ಜೀವನಶೈಲಿಯ ಪ್ರಶ್ನೆಗಳನ್ನು ಎದುರಿಸಿಬಿಟ್ಟರೆ ಭಾಷೆ, ಶಿಕ್ಷಣ ಮಾಧ್ಯಮದ ಪ್ರಶ್ನೆ ತನಗೆ ತಾನೇ ಪರಿಹಾರವಾಗುತ್ತದೆ ಎಂಬ ಭಾವನೆ ತಪ್ಪು. ಈ ದೃಷ್ಟಿಯಿಂದ ಅಭಿಯಾನವು ಸಕಾರಣವಾಗಿಯೇ ಭಾಷೆ ಮತ್ತು ಶಿಕ್ಷಣ ಮಾಧ್ಯಮದ ಪ್ರಶ್ನೆಗಳನ್ನು ಸ್ವತಂತ್ರ ಪ್ರಶ್ನೆಯಾಗಿ ಮುನ್ನೆಲೆಗೆ ತಂದಿದೆ.

=====

KSATYANARAYAN ಕೆ.ಸತ್ಯನಾರಾಯಣ

ವಿಜಯವಾಣಿಯ ಕನ್ನಡ ಅಭಿಯಾನದಲ್ಲಿ ಮೂಡಿ ಬಂದ ಚರ್ಚೆಯು ಒಂದು ರೀತಿಯಲ್ಲಿ ಕನ್ನಡ ಸಮುದಾಯದ ಸಾಮೂಹಿಕ ಶೋಧವೆಂದೇ ಹೇಳಬಹುದು. ಕಲಿಕೆ, ಭಾಷಾಮಾಧ್ಯಮ, ಶಿಕ್ಷಣ ನೀತಿ, ಸಾಂಸ್ಕøತಿಕ ಅಸ್ಮಿತೆ- ಹೀಗೆ ನಮ್ಮ ಭವಿಷ್ಯಕ್ಕೆ ಮುಖ್ಯವಾದ ಸಂಗತಿಗಳನ್ನು ಈ ಶೋಧವು ಸದ್ಯದ ತುರ್ತಿನಿಂದಲೂ ನಾಳೆಯ ದೂರದೃಷ್ಟಿಯಿಂದಲೂ ಓದುಗರ ಮುಂದಿಟ್ಟಿದೆ. ಸರ್ಕಾರ, ನ್ಯಾಯಾಂಗ, ಶಿಕ್ಷಣ ವ್ಯವಸ್ಥೆ – ತತ್‍ಕ್ಷಣವೇ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸುವುದರ ಜೊತೆಗೆ, ನಾಗರಿಕರಾಗಿ ಪೋಷಕರಾಗಿ ನಾವೆಲ್ಲರೂ ಕೂಡಾ ಆತ್ಮಪರೀಕ್ಷೆ ಮಾಡಿಕೊಂಡು ನಮ್ಮ ನಮ್ಮ ಮನೋಧರ್ಮವನ್ನು ಕೂಡಾ ಪರಿವರ್ತಿಸಿಕೊಳ್ಳಬೇಕು ಎಂಬುದರ ಅಗತ್ಯವನ್ನೂ ಮನದಟ್ಟು ಮಾಡಿಕೊಟ್ಟಿದೆ. ಇಂತಹ ಒಂದು ಅಪೂರ್ವ ಸಾಮೂಹಿಕ ಸಾಂಸ್ಕøತಿಕ ಶೋಧಕ್ಕೆ ವೇದಿಕೆಯಾದ ಪತ್ರಿಕೆಗೆ ಅಭಿನಂದನೆಗಳು.

ಚರ್ಚೆಯು ಇನ್ನೂ ವಿಸ್ತಾರವಾದ ಮತ್ತು ಸೂಕ್ಷ್ಮ ನಡೆಗಳನ್ನು ಪಡೆಯುವ ದೃಷ್ಟಿಯಿಂದ ಅಭಿಯಾನವು ಈ ಚರ್ಚೆಗೆ ಮಾತ್ರ ಸೀಮಿತಗೊಳ್ಳದ ಒಂದು ಸಾರ್ವಜನಿಕ ಅಭಿಪ್ರಾಯದ ಆಂದೋಲನವಾಗಿ ರೂಪುಗೊಳ್ಳಲು ಕೂಡಾ ಪತ್ರಿಕೆ ಪ್ರಯತ್ನಿಸಬೇಕು ಮತ್ತು ಈ ಚರ್ಚೆ, ಸಾರ್ವಜನಿಕ ಅಭಿಪ್ರಾಯ-ಆಂದೋಲನಗಳಿಂದ ಮೂಡಿಬಂದ ನೋಟಗಳನ್ನು ಪ್ರಭುತ್ವದ ಮುಂದೆ ಮಂಡಿಸಲು ಪತ್ರಿಕೆಯು ಸಕ್ರಿಯವಾದ ಜವಾಬ್ದಾರಿಯುತವಾದ ಪಾತ್ರವನ್ನು ವಹಿಸಬೇಕು ಎಂಬುದು ಈ ಚರ್ಚೆಯಲ್ಲಿ ಭಾಗಿಯಾದವರೆಲ್ಲರ ಮನದಾಳದ ಇಂಗಿತವೆಂದು ಸೂಚಿಸಬಯಸುತ್ತೇನೆ.

ಕೇವಲ ಸಂವಾದದಲ್ಲಿ ಮುಕ್ತಾಯಗೊಳ್ಳಲು ಇದೇನು ವಿಶ್ವವಿದ್ಯಾಲಯವು ನಡೆಸುತ್ತಿರುವ ಅಕಾಡೆಮಿಕ್ ಮಾದರಿಯ ಸಂಕಿರಣವಲ್ಲವಷ್ಟೆ. ಈ ಸಂದರ್ಭದಲ್ಲೇ ಮತ್ತಷ್ಟು ವಿಷಯಗಳನ್ನು ಬೇರೆ ಬೇರೆ ಮೂಲಗಳಿಂದ ಪಡೆದು ನಮ್ಮ ಸನ್ನಿವೇಶವನ್ನು ಮತ್ತಷ್ಟು ಸ್ಪಷ್ಟಗೊಳಿಸಿಕೊಳ್ಳಬಹುದು. ಹೀಗೆ ಬೇರೆ ಬೇರೆ ಮೂಲಗಳಿಂದ ನನ್ನ ಸೀಮಿತ ತಿಳಿವಳಿಕೆಗೆ ಬಂದ ಕೆಲವು ನೋಟಗಳನ್ನು ಓದುಗರೊಂದಿಗೆ ಹಂಚಿಕೊಳ್ಳಬಹುದು.
ಆತ್ಮಪರೀಕ್ಷೆಯ ಸಮಯ

ಶಿಕ್ಷಣ ಮಾಧ್ಯಮ, ಭಾಷಾ ನೀತಿ ಮತ್ತು ಸಾಂಸ್ಕøತಿಕ ಅಸ್ಮಿತೆಯ ಪ್ರಶ್ನೆಯು ಕಳೆದೆರಡು ಮೂರು ದಶಕಗಳಲ್ಲಿ ಮುಂಚೂಣಿಗೆ ಬಂದಿರುವುದು, ನಮ್ಮನ್ನು ಸದಾ ಆತಂಕದ ಸ್ಥಿತಿಯಲ್ಲಿಟ್ಟಿರುವುದು ನಿಜವಾದರೂ, ಜಾಗತೀಕರಣವೆಂಬ ವಿದ್ಯಮಾನಕ್ಕೆ ನಮ್ಮ ಸಮಸ್ಯೆಯನ್ನು-ಸನ್ನಿವೇಶವನ್ನು ಇಡಿಯಾಗಿ ತಳುಕು ಹಾಕುವುದು ಉಚಿತವಲ್ಲ. 1990ರ ದಶಕಕ್ಕೆ ಮುಂಚೆ ಕೂಡಾ, ಜಾಗತೀಕರಣದ ಕೂಗು- ಪ್ರಭಾವ ಕೇಳಿಬರುವ ದಿನಗಳಿಗೆ ಮುನ್ನ ನಾವು ಈ ಸಮಸ್ಯೆ ಬಗ್ಗೆ ಯೋಚಿಸಿದ್ದೆವೆ? ಹಾಗೆ ಯೋಚಿಸಿದ್ದರೆ, ಅದರ ಫಲಶ್ರುತಿ ಏನು?ಸರ್ಕಾರದ ಯಾವ ಯಾವ ಸ್ತರದ ಮೇಲೆ ಈ ಆಲೋಚನೆಗಳು ಯಾವ ರೀತಿ ಪರಿಣಾಮ ಬೀರಿದವು? ಯಾವ ಯಾವ ಯೋಜನೆಗಳು ಕ್ರಿಯಾಶೀಲವಾಗಿ ಜಾರಿಗೆ ಬಂದವು ಎಂಬುದರ ಬಗ್ಗೆ ಕೊಂಚವಾದರೂ ಆತ್ಮಪರೀಕ್ಷೆ ಮಾಡಿಕೊಳ್ಳಬೇಕು.

ನ್ಯಾಯಾಂಗ, ಪೋಷಕರು, ಶಾಲೆಗಳು, ಭಾಷಿಕ ಅಲ್ಪಸಂಖ್ಯಾತರು, ರಾಜಕೀಯ ನಾಯಕತ್ವ ಇವೆಲ್ಲವೂ ಸೇರಿಯೇ ಒಂದು ಸಮುದಾಯ ರೂಪುಗೊಳ್ಳುವುದು. ಭಾಷಾ ನೀತಿ, ಶಿಕ್ಷಣ ಮಾಧ್ಯಮದಂತಹ ಸೂಕ್ಷ್ಮಪ್ರಶ್ನೆಗಳನ್ನು ಒಂದು ಸಮುದಾಯವು ತನ್ನ ಎಲ್ಲ ಸದಸ್ಯರ ತತ್‍ಕ್ಷಣದ ಮತ್ತು ದೀರ್ಘಕಾಲೀನ ಪ್ರಗತಿ ಮತ್ತು ನೆಮ್ಮದಿಗೆ ಅನುಕೂಲವಾಗುವಂತೆ ರೂಪಿಸುವ, ಪ್ರಯೋಗಿಸುವ, ಮರುಪರಿಶೀಲಿಸುವ ಜಾಣ್ಮೆಯನ್ನು ತೋರುತ್ತದೆ. ಇಂತಹ `ಸಮುದಾಯ ಜಾಣ್ಮೆ’ಯನ್ನು ತೋರಲು ಇಲ್ಲ, ರೂಪಿಸಲು ನಾವು ಹಲವು ದಶಕಗಳಿಂದ ವಿಫಲರಾಗಿದ್ದೇವೆ. ಈ ವಿಫಲತೆಯು ಎಲ್ಲಕ್ಕಿಂತ ಮುಖ್ಯವಾಗಿ ನಾವು ಸಮಸ್ಯೆ ಬಗ್ಗೆ ನಿರಂತರವಾಗಿ ತೋರುತ್ತಿರುವ ಪಾಶ್ರ್ವಗ್ರಹಿಕೆಯಲ್ಲಿ ವ್ಯಕ್ತವಾಗುತ್ತದೆ. ನಮ್ಮ ಸಾಮಾಜಿಕ ನಾಯಕತ್ವವು ಕೂಡಾ ಸಂಪೂರ್ಣವಾಗಿ ತನ್ನ ವರ್ಗ- ಹಿತಾಸಕ್ತಿಗಳಲ್ಲಿಯೇ ಮುಳುಗಿ ಸಮುದಾಯದ ಬಹುಸಂಖ್ಯಾತರಿಗೆ ಸಮಸ್ಯೆಯ ಎಲ್ಲ ಆಯಾಮಗಳನ್ನು ವಸ್ತುನಿಷ್ಠವಾಗಿ ಪರಿಚಯ ಮಾಡಿಕೊಡಲು ವಿಫಲವಾಗಿದೆ. ಇದಲ್ಲದೆ ನಮ್ಮ ವೈವಿಧ್ಯಮಯವಾದ ಸಮಾಜದಲ್ಲಿ ಜನಜೀವನದ ಬೇರೆ ಬೇರೆ ಸ್ತರಗಳು ಪ್ರಗತಿಯ ವಿವಿಧ ಹಂತಗಳಲ್ಲಿರುವುದರಿಂದ ಅವುಗಳ ವರ್ಗ ನಿರೀಕ್ಷೆ-ಆಕಾಂಕ್ಷೆಗಳು-ಸಾಂಸ್ಕೃತಿಕ ಅಭೀಪ್ಸೆಗಳು ಕೂಡಾ ಬೇರೆ ಬೇರೆಯಾಗಿರುತ್ತವೆ. ಮತ್ತು ವಿರೋಧಾಭಾಸದಿಂದ ಕೂಡಿರುತ್ತವೆ. ಆರ್ಥಿಕವಾಗಿ ನಾವು ಬಲಪಂಥೀಯ ವಿಚಾರಗಳನ್ನು ಬೆಂಬಲಿಸುತ್ತಲೇ ಸಾಂಸ್ಕೃತಿಕವಾಗಿ ಪ್ರಗತಿಶೀಲರಾಗಿರಬಹುದು. ಯಾವುದೇ ಸಾಮಾಜಿಕ ಸಾಂಸ್ಕøತಿಕ ಸಮಸ್ಯೆ ಬಗ್ಗೆ ಯೋಚಿಸುವಾಗ ತತ್‍ಕ್ಷಣಕ್ಕೆ ನಮ್ಮ ನಮ್ಮ ಜಾತಿ- ವರ್ಗಗಳಿಗೆ ಎಷ್ಟು ಅನುಕೂಲವಾಗುತ್ತದೆಂದು ಮಾತ್ರ ಯೋಚಿಸಬಹುದು. ಇತಿಹಾಸವು ಹಿಂದೆ ಚಲಿಸಿರುವ ದಿಕ್ಕು ದೆಸೆಯಲ್ಲಿ ಮಾತ್ರವೇ ಮುಂದೆಯೂ ಚಲಿಸುತ್ತದೆ ಎಂದು ಭ್ರಮಿಸಬಹುದು. ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ನಾವೆಲ್ಲ ಇಂತಹ ಗೊಂದಲ ಮತ್ತು ವಿರೋಧಾಭಾಸದಲ್ಲಿ ಸಿಕ್ಕಿಹಾಕಿಕೊಂಡಿರುತ್ತೇವೆ. ಸಮುದಾಯದ ನಾಯಕತ್ವವು ಇಂತಹ ಗೊಂದಲ ಮತ್ತು ವಿರೋಧಾಭಾಸಗಳಿಂದ ನಮ್ಮನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಬೇಕು. ನ್ಯಾಯಾಂಗವೇ ಆಗಲಿ, ಪೋಷಕವರ್ಗವೇ ಆಗಲಿ ಈ ಸಮಾಜದಿಂದಲೇ ಮೂಡಿಬಂದಿರುವುದರಿಂದ ಒಟ್ಟು ಸಮುದಾಯದಲ್ಲಿ ಕಾಣದ ವಿವೇಚನೆ ಮತ್ತು ದೂರದೃಷ್ಟಿಯನ್ನು ಸಮುದಾಯದ ಕೆಲಭಾಗಗಳು ಮಾತ್ರ ತೋರಬೇಕೆನ್ನುವುದು ವಾಸ್ತವದ ನಿರೀಕ್ಷೆಯಲ್ಲ.

ಸಂವಿಧಾನ ತಿದ್ದುಪಡಿಯ ಹಾದಿ :  ಈ ಸಂವಾದದಲ್ಲಿ ಭಾಗವಹಿಸಿದ ರಾಜಕೀಯ ನಾಯಕರು ಮತ್ತು ಕಾನೂನು ಪರಿಣತರು ಇಬ್ಬರೂ ಸಮಸ್ಯೆಯನ್ನು ಸಂವಿಧಾನದ ತಿದ್ದುಪಡಿಯಿಂದ ಮಾತ್ರ ಪರಿಹರಿಸಬಹುದೆಂದು ಸರಿಯಾಗಿಯೇ ಒಪ್ಪುತ್ತಾರೆ. ನ್ಯಾಯವಾದಿಗಳು ಸೂಚಿಸಿರುವ ಹಾಗೆ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಪರಿಶೀಲಿಸುವುದೇ ಅಪರೂಪ. ಪರಿಶೀಲಿಸಿದರೂ ಇಷ್ಟೇ ಸಮಯದೊಳಗೆಂಬ ನಿಯಮವೂ ಇಲ್ಲ. ಇದನ್ನು ಪರಿಶೀಲನೆಗೆ ತೆಗೆದುಕೊಳ್ಳುವುದು ಸುಪ್ರೀಂಕೋರ್ಟಿನ ಮರ್ಜಿಗೆ ಸಂಬಂಧಿಸಿದ್ದು. ನಮ್ಮ ಅದೃಷ್ಟ ಚೆನ್ನಾಗಿದ್ದು ಕೋರ್ಟ್ ಇದನ್ನು ಪರಿಶೀಲಿಸಿದರು ಕೂಡ ಏನಾಗುತ್ತದೆ? ಮತ್ತೆ ವಾದ- ವಾಗ್ವಾದ ಮತ್ತೊಮ್ಮೆ ವಾಗ್ವಾದ ಮಂಡಿಸಿದ ಮೇಲೂ ಸುಪ್ರೀಂಕೋರ್ಟ್ ತನ್ನ ಹಿಂದಿನ ತೀರ್ಪನ್ನು ಮತ್ತೆ ಇನ್ನಷ್ಟು ವಿಶದವಾಗಿ ವಿವರಿಸಬಹುದು. ಆವಾಗ ಏನು ಮಾಡಬೇಕು? ಸುಮ್ಮನೆ ಸಮಯ ವ್ಯರ್ಥವಷ್ಟೆ. ಕ್ಯುರೇಟಿವ್ ಅರ್ಜಿಯು ಇನ್ನೂ ವಿಚಾರಣೆಗೆ ಬಂದಿಲ್ಲ ಎಂದು ರಾಜ್ಯ ಸರ್ಕಾರ ಜನತೆಗೆ ಹೇಳಿ ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಕೈ ತೊಳೆದುಕೊಳ್ಳಬಹುದು. ಇಲ್ಲ ಜನರನ್ನು ಸುಮ್ಮಸುಮ್ಮನೆ ಸಮಾಧಾನಪಡಿಸಲು ಮಾತೃಭಾಷೆಯ ಕಲಿಕೆ ಮತ್ತು ಕನ್ನಡ ಭಾಷಾಮಾಧ್ಯಮದ ಬಳಕೆ ಶಿಕ್ಷಣದ ವಿವಿಧ ಘಟ್ಟಗಳಲ್ಲಿ ಹೇಗಿರಬೇಕೆಂದು ಕಾನೂನು ಮಾಡಬಹುದು. ಇಲ್ಲವೇ ಈಗ ರಾಜ್ಯ ಸರ್ಕಾರ ಸೂಚಿಸುತ್ತಿರುವಂತೆ ಇರುವ ಕಾನೂನಿಗೆ ಮತ್ತಷ್ಟು ತಿದ್ದುಪಡಿಗಳನ್ನು ತಂದು, `ನೋಡಿ ನಮ್ಮ ಪ್ರಯತ್ನ ನಾವು ಮಾಡುತ್ತಲೇ ಇದ್ದೇವೆ, ಕನ್ನಡಕ್ಕೆ ನಮ್ಮ ಬದ್ಧತೆಯನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ’ ಎಂದು ಬೀಗಬಹುದು. ಖಾಸಗಿ ಶಿಕ್ಷಣ ಸಂಸ್ಥೆಗಳು, ಭಾಷಾ ಅಲ್ಪಸಂಖ್ಯಾತರ ಸುಳ್ಳು ವಕ್ತಾರರು, ಮತ್ತೆ ರಾಜ್ಯ ಸರ್ಕಾರವನ್ನು ದೀರ್ಘ ಕಾನೂನು ಸಮರದಲ್ಲಿ ಸಿಕ್ಕಿಹಾಕಿಸುವುದಿಲ್ಲ ಎಂಬ ಗ್ಯಾರಂಟಿಯಾದರೂ ಏನು? ಅಭಿಯಾನದಲ್ಲಿ ಭಾಗವಹಿಸಿರುವ ಎಲ್ಲ ವಕೀಲರಿಗೆ ಈ ಹಾದಿ (ಸುಳ್ಳು ಹಾದಿ)ಯ ಬಗ್ಗೆ ಅನುಮಾನವಿದೆ. ಇದು ಕಾರ್ಯಕ್ಷಮವಲ್ಲ ಎಂಬುದು ಗೊತ್ತಿದೆ. ಸರ್ಕಾರಕ್ಕೂ ಇದೆಲ್ಲ ಗೊತ್ತಿಲ್ಲವೆಂದು ನಾವು ಭಾವಿಸಲು ಯಾವ ಕಾರಣಗಳೂ ಇಲ್ಲ.

ಇನ್ನು ಸಂವಿಧಾನಕ್ಕೆ ತಿದ್ದುಪಡಿ ತರುವುದು, ದೇಶಭಾಷೆಗಳಿಗೆ, ಮಾತೃಭಾಷೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಸೂಕ್ತ ಮತ್ತು ಅಗ್ರಸ್ಥಾನ ನಿರ್ಮಾಣವಾಗುವಂತಹ ರಾಜಕೀಯ- ಸಾಂವಿಧಾನಿಕ ವಾತಾವರಣವನ್ನು ಸೃಷ್ಟಿಸುವುದು ರಾಜಕೀಯ ನಾಯಕತ್ವಕ್ಕೆ, ವಿಶೇಷವಾಗಿ ರಾಷ್ಟ್ರೀಯ ಪಕ್ಷಗಳಾದ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್‍ಗೆ ಸಂಬಂಧಪಟ್ಟದ್ದು. ಭೂಮಿಯನ್ನು ಭೂಮಾಲೀಕರಿಂದ ಯಾವ ದರದಲ್ಲಿ ಸರ್ಕಾರವು ಕೊಂಡುಕೊಳ್ಳಬೇಕು ಎಂಬುದು ರಾಷ್ಟ್ರೀಯ ತುರ್ತಿನ ಪ್ರಶ್ನೆಯಾಗುವುದಾದರೆ, ಸರಕು ಸೇವೆಗಳ ಮೇಲೆ ವಿಧಿಸಲಾಗುವ ತೆರಿಗೆಗೆ ಸಂಬಂಧಪಟ್ಟಂತೆ ರಾಷ್ಟ್ರಮಟ್ಟದಲ್ಲಿ ಸಾರ್ವತ್ರಿಕ ಕಾನೂನೊಂದು ತತ್‍ಕ್ಷಣವೇ ಜಾರಿಗೆ ಬರಬೇಕಾದದ್ದು ರಾಷ್ಟ್ರೀಯ ಪ್ರಶ್ನೆಯಾಗುವುದಾದರೆ, ದೇಶದ ಬಹುಸಂಖ್ಯಾತರ ತಲೆತಲೆಮಾರುಗಳ ಭವಿಷ್ಯವನ್ನು ನಿರ್ಧರಿಸುವ ಶಿಕ್ಷಣ ಮಾಧ್ಯಮದ ಪ್ರಶ್ನೆ ಮತ್ತು ನಮ್ಮೆಲ್ಲರ ಮಕ್ಕಳ ಕಲಿಕೆಯ ವಿಧಾನ ಏಕೆ ತುರ್ತಿನ ರಾಷ್ಟ್ರೀಯ ಪ್ರಶ್ನೆಯಾಗುವುದಿಲ್ಲ? ಈ ಸಮಸ್ಯೆ ಕೇವಲ ಕನ್ನಡ, ಕರ್ನಾಟಕ ಅಥವಾ ದಕ್ಷಿಣ ಭಾರತದ ರಾಜ್ಯಗಳ ಪ್ರಶ್ನೆಯಲ್ಲ. ಭಾರತದ ಬೇರೆ ದೇಶ ಭಾಷೆಗಳೂ ಇದೇ ಸ್ಥಿತಿಯಲ್ಲಿವೆ. ಹಾಗಾಗಿ ರಾಷ್ಟ್ರೀಯ ಪಕ್ಷಗಳ ಬೇರೆ ಬೇರೆ ಸ್ತರದ ನಾಯಕರು ಕೇಂದ್ರ ಸರ್ಕಾರ ಇದನ್ನು ಮಾಡಬೇಕು ಎಂದು ಸಾಮಾನ್ಯ ನಾಗರಿಕರಂತೆ ಪ್ರಲಾಪಿಸುವುದರಲ್ಲಿ ಯಾವ ರೀತಿಯ ಪ್ರಯೋಜನವೂ ಇಲ್ಲ. ಪ್ರಶ್ನೆ ಏನೆಂಬುದು ಸ್ಪಷ್ಟವಿದೆ, ಉತ್ತರ-ಕಾರ್ಯಕ್ರಮಗಳು ಯಾವ ದಿಕ್ಕಿನಲ್ಲಿರಬೇಕು ಎಂಬುದು ಕೂಡ ಎಲ್ಲರಿಗೂ ಗೊತ್ತಿದೆ. ಹಾಗಿರುವಾಗ ಪ್ರಧಾನಮಂತ್ರಿಗಳ ಹತ್ತಿರ, ರಾಷ್ಟ್ರಪತಿಗಳ ಹತ್ತಿರ ಸರ್ವಪಕ್ಷ ನಿಯೋಗ ಹೋಗಬೇಕು, ಒತ್ತಾಯ ಮಾಡಬೇಕೆಂಬುದು ಸಮಸ್ಯೆಯನ್ನು ಮುಂದೂಡುವ ಅಥವಾ ಎದುರಿಸದೆ ಹೋಗುವ ತಂತ್ರವಾಗಬಹುದು- ಮಾತ್ರ. ಇದನ್ನು ಒಂದು ರಾಷ್ಟ್ರೀಯ ಪ್ರಶ್ನೆಯಾಗಿ ಪ್ರಧಾನಮಂತ್ರಿಯವರೇ ಸ್ವಯಂಪ್ರೇರಣೆಯಿಂದ ಪರಿಗಣಿಸಿ, ಮುಂದಿನ ಹೆಜ್ಜೆ ಹೇಗಿರಬೇಕು, ಎಷ್ಟುಬೇಗ ಇರಬೇಕು ಎಂಬುದರ ಬಗ್ಗೆ ರಾಷ್ಟ್ರೀಯ ಚರ್ಚೆಯನ್ನು ಹುಟ್ಟುಹಾಕಬೇಕು, ಆ ಚರ್ಚೆಯ ನಾಯಕತ್ವವನ್ನು ವಹಿಸಬೇಕು. ಸಂವಿಧಾನ ತಿದ್ದುಪಡಿಗೆ ಬೇಕಾದಂತಹ ವಾತಾವರಣ ಮಾತ್ರ ಇಂತಹ ಚರ್ಚೆಯಿಂದ ನಿರ್ಮಾಣವಾಗುವುದಿಲ್ಲ. ಶಿಕ್ಷಣ ವ್ಯವಸ್ಥೆ, ಭಾಷಾ ಕಲಿಕೆ ಎದುರಿಸುತ್ತಿರುವ ನಾನಾ ಸಮಸ್ಯೆಗಳು ಕೂಡ ತಮ್ಮಷ್ಟಕ್ಕೇ ತಾವೇ ಈ ಚರ್ಚೆಯಲ್ಲಿ ಮುಂಚೂಣಿಗೆ ಬರುತ್ತವೆ.

ಮೋದಿ ಮನಸ್ಸು ಮಾಡಲಿ : ಕೇಂದ್ರ ಸರ್ಕಾರ ಮತ್ತು ಮುಖ್ಯವಾದ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಜವಾಬ್ದಾರಿ ಈ ಸಂದರ್ಭದಲ್ಲಿ ಹೆಚ್ಚಾಗಿದೆ. ಇಂತಹ ಒಂದು ಸನ್ನಿವೇಶಕ್ಕೆ ಅದು ತೋರುವ ಪ್ರತಿಕ್ರಿಯೆ, ದೂರದೃಷ್ಟಿ ನಿಜವಾಗಿಯೂ ಐತಿಹಾಸಿಕವಾಗಬಲ್ಲದು. ದೇಶೀವಾದ, ದೇಶೀ ಸಂಸ್ಕೃತಿಗೆ ಬದ್ಧರಾಗಿದ್ದೇವೆ ಎಂಬ ಮಾತಿಗೆ ಕ್ರಿಯಾರೂಪ ಕೊಡುವ ಅವಕಾಶವೂ ಇದಾಗಿದೆ. ವಿದೇಶಿ ಗಣ್ಯರ ಜೊತೆ ನಮ್ಮ ರಾಷ್ಟ್ರಭಾಷೆಯಲ್ಲಿ ಮಾತನಾಡುವ, ಹಾಗೆ ಮಾತನಾಡಲು ಸಕಾರಣವಾಗಿ ಹೆಮ್ಮೆಪಡುವ ಪ್ರಧಾನಮಂತ್ರಿಯವರು ಇಂತಹ ಒಂದು ರಾಷ್ಟ್ರೀಯ ಚರ್ಚೆಯನ್ನು ಹುಟ್ಟುಹಾಕಲು, ಏಳಿಗೆ ದಿಕ್ಕುಗಳನ್ನು ತೋರಲು ಮನಸ್ಸು ಮಾಡಬೇಕು. ಸುಪ್ರೀಂಕೋರ್ಟಿನ ಮುಂದೆ ದೇಶಭಾಷೆಗಳಿಗೆ ಸಂಬಂಧಪಟ್ಟ ವಾದ-ವಿವಾದಗಳಲ್ಲಿ ಕರ್ನಾಟಕವೇ ಮುನ್ನೆಲೆಯಲ್ಲಿರುವುದರಿಂದ ಬಿಜೆಪಿಯ ರಾಜ್ಯಮಟ್ಟದ ನಾಯಕರು ಈ ಬಗ್ಗೆ ಹೆಚ್ಚು ಮುತುವರ್ಜಿಮಾಡಬೇಕು. ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸೇರಿಸಿ ಒಂದು ಸಮ್ಮೇಳನ ಮಾಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೂಡುವ ನಮ್ಮ ಮುಖ್ಯಮಂತ್ರಿಗಳ ಯೋಚನೆ ಕೂಡಾ ಸರಿಯಾದ ದಿಕ್ಕಿನಲ್ಲಿದೆ. ನ್ಯಾಯಾಂಗದ ಮುಂದೆ ಹೋರಾಟ ಮುಂದುವರಿಸದಿದ್ದರೆ ಸಾರ್ವಜನಿಕರು ತಪ್ಪುತಿಳಿಯಬಹುದೆಂಬ ಭಯ ರಾಜಕೀಯ ನಾಯಕರಿಗೆ ಸಹಜ. ಭಯ ನಿವಾರಣೆಗೆ ಕ್ರಮ ತೆಗೆದುಕೊಳ್ಳುವ ಜೊತೆಗೆ ರಾಜಕೀಯ ಕ್ರಮಗಳನ್ನು ಕೂಡಾ ತೆಗೆದುಕೊಳ್ಳಬೇಕು. 

ಜಾಗತೀಕರಣದ, ಹೊಸ ಆರ್ಥಿಕ ವ್ಯವಸ್ಥೆಯ ಲಾಭವನ್ನು ನಿಜವಾಗಿಯೂ ಪಡೆದವರು ನಮ್ಮ ವಣಿಕವರ್ಗದವರು. ತಮಗೂ ಈ ಸಮಸ್ಯೆಗೂ ಸಂಬಂಧವೇ ಇಲ್ಲವೆನ್ನುವಂತೆ ಈ ವರ್ಗ ಮೌನವಾಗಿದೆ. ಕೆಲವರಂತೂ ಇಂಗ್ಲಿಷ್ ಪರ ವಾದಿಸುವುದರಿಂದ ತಾವು ಅಂತಾರಾಷ್ಟ್ರೀಯ ವಣಿಕಪತಿಗಳಾಗಬಹುದೆಂದು ಹಗಲುಗನಸು ಕಾಣುತ್ತಾರೆ. ಬೆಂಗಳೂರಿನ, ಕರ್ನಾಟಕದ ಎಷ್ಟೊಂದು ಬೃಹತ್ ಕಂಪನಿಗಳಿಗೆ ಬೇರೆ ಬೇರೆ ದೇಶಗಳ ವಣಿಕ ನಾಯಕರು, ಸಾಮಾಜಿಕ ನಾಯಕರು, ರಾಜಕೀಯ ನಾಯಕರ ಜೊತೆ ವ್ಯವಹರಿಸುವ ಎಷ್ಟೊಂದು ಅವಕಾಶಗಳಿರುತ್ತವೆ. ಇಂತಹ ಕಂಪನಿಗಳಿಗೆ ನಮ್ಮ ಕರ್ನಾಟಕ ಸರ್ಕಾರ ಎಷ್ಟೊಂದು ಭೂಮಿಯನ್ನು ಬಡವರಿಗೆ ಸೈಟು ನೀಡುವ ದರಕ್ಕಿಂತಲೂ ಕಡಿಮೆ ದರದಲ್ಲಿ ನೀಡುತ್ತದೆ. ಜೊತೆಗೆ ತೆರಿಗೆ ವಿನಾಯಿತಿ ಮತ್ತು ನಾನಾ ರೀತಿಯ ಸಬ್ಸಿಡಿಗಳು. ಈ ಕಂಪನಿಗಳ ಒಡೆಯರು ಕೃಪೆಮಾಡಿ ತಮ್ಮ ವ್ಯವಹಾರಗಳನ್ನು ಒಪ್ಪಂದಗಳನ್ನು ಭಾಗಶಃ ಕನ್ನಡದಲ್ಲಿ ಮಾಡಿದರು. ನಮ್ಮ ಭಾಷೆಯ ಮಹತ್ವದ ಬಗ್ಗೆ ಸಂದೇಶಗಳನ್ನು ಸಂಕೇತಗಳನ್ನು ನೀಡಬಹುದು. ಸಾಮಾನ್ಯ ಜನಕ್ಕೆ ಕನ್ನಡ ಉದ್ಯೋಗಪತಿಗಳು, ಪ್ರಭಾವಿಗಳು ಬಳಸುವ ಭಾಷೆ ಎಂಬುದು ವಿದಿತವಾಗುತ್ತದೆ. ರಾಜಕೀಯ ನಾಯಕರ ಮೇಲೂ ಇದು ಪರಿಣಾಮ ಬೀರುತ್ತದೆ. ಹೊರದೇಶದವರಿಗೂ ನಮ್ಮ ಭಾಷೆಯ ಮಹತ್ವ ಮತ್ತು ಅಸ್ತಿತ್ವ ಗೊತ್ತಾಗುತ್ತದೆ.

ಬೇರು ಹುಡುಕುವ ಯತ್ನ
ಕನ್ನಡ ಉಳಿದಿರುವುದು ಗ್ರಾಮೀಣರಿಂದ, ಹಿಂದುಳಿದವರಿಂದ, ಇವರೇ ಬಹುಸಂಖ್ಯಾತರಾದ್ದರಿಂದ ಕನ್ನಡದ ಭವಿಷ್ಯಕ್ಕೆ ಏನೂ ತೊಂದರೆ ಇಲ್ಲ ಎಂಬ ಒಂದು ಅರೆಸತ್ಯದ ಮಾತು ಕೂಡ ನಮ್ಮಲ್ಲಿದೆ. ಇದು ಭಾಷೆಗೆ ಇರುವ ಬೇರುಗಳ ವೈವಿಧ್ಯ ಮತ್ತು ಒತ್ತಾಸೆಯ ದೃಷ್ಟಿಯಿಂದ ಮಾತ್ರ ನಿಜ. ಆದರೆ ಒಂದು ಭಾಷೆ ಸದಾ ವಿಕಾಸಶೀಲ ಗತಿಶೀಲತೆಯಲ್ಲಿರಬೇಕಾದರೆ ಸಾಮಾಜಿಕವಾಗಿ ಆರ್ಥಿಕವಾಗಿ ಮುಂದುವರಿಯುತ್ತಿರುವ ವರ್ಗಗಳ ಭಾಷೆಯೂ ಆಗಬೇಕಾಗುತ್ತದೆ. ಇಂಗ್ಲಿಷ್ ಪ್ರಭಾವಶಾಲಿಯಾದ್ದೇ ಹೀಗೆ. ಚೀನಿ ಭಾಷೆಯನ್ನು ಜಗತ್ತಿನಾದ್ಯಂತ ಕಲಿಯಲೇಬೇಕು ವಾಣಿಜ್ಯಕ್ಕೆ-ವ್ಯವಹಾರಕ್ಕೆ ಎಂಬ ಒತ್ತಾಯ ಮೂಡಿದ್ದು ಕೂಡ ಹೀಗೇ. ಅದೇಕೋ ಕನ್ನಡಿಗರು ಮಾತ್ರ ಒಂದೆರಡು ತಲೆಮಾರಿನ ಆಧುನಿಕ ಶಿಕ್ಷಣ ಪಡೆದ ನಂತರ ಮಾತೃಭಾಷೆಗೆ ಎಲ್ಲರೀತಿಯಲ್ಲೂ ವಿಮುಖರಾಗಿ ಬಿಡುತ್ತಾರೆ. 1916ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಈ ವಿಶ್ವವಿದ್ಯಾಲಯದ ಮೊದಲ ತಂಡದ ಪದವೀಧರರ ಮರಿಮಕ್ಕಳುಗಳ ಒಕ್ಕಲಿಗೆ ಈಗ ಕನ್ನಡ ಭಾಷೆ ಮತ್ತು ಸಂಸ್ಕøತಿಯಲ್ಲಿ ಇನ್ನೂ ಎಷ್ಟು ಬೇರುಗಳಿವೆ ಎಂಬುದು ಸಂಶೋಧನೆಗೆ ವಸ್ತುವಾಗಬಲ್ಲದು.

ಇದಕ್ಕೆ ಸಂಬಂಧಪಟ್ಟ ಹಾಗೆ ನಾವು ಇನ್ನೊಂದು ಪ್ರಶ್ನೆಯನ್ನು ಕೂಡ ಪರಿಶೀಲಿಸಲೇಬೇಕಾಗುತ್ತದೆ. ಒಂದು ಭಾಷೆ ಸತ್ವಯುತವಾಗಿ ನಿರ್ಮಾಣಗೊಳ್ಳುವುದು ಅದು ಜ್ಞಾನದ ಬೇರೆ ಬೇರೆ ಶಾಖೆಗಳ ಅಭಿವೃದ್ಧಿಗೆ ಸಮರ್ಥ ಮಾಧ್ಯಮವಾದಾಗ. ಸಾಹಿತ್ಯಿಕ ಭಾಷೆಯಾಗಿ ಕನ್ನಡದ ಸಾಧನೆಯ ಬಗ್ಗೆ ಯಾವ ಪ್ರಶ್ನೆಯೂ ಇಲ್ಲ. ಆದರೆ ಭಾಷೆಯು ಸಾಹಿತ್ಯಿಕ ಭಾಷೆಯಾಗಿ ಮಾತ್ರ ಉಳಿಯುವುದು ಸಾಧ್ಯವಿಲ್ಲ. ಜ್ಞಾನದ ಬೇರೆ ಬೇರೆ ಶಾಖೆಗಳಲ್ಲಾಗಿರುವ ಮತ್ತು ಇನ್ನೂ ಮುಖ್ಯವಾಗಿ ಸಮಕಾಲೀನ ಜಗತ್ತಿನಲ್ಲಿ ನಮ್ಮ ಕಣ್ಣೆದುರಿಗೇ ಆಗುತ್ತಿರುವ ಚಳವಳಿಗಳನ್ನು, ಪರಿವರ್ತನೆಗಳನ್ನು ಕನ್ನಡವೂ ಸೇರಿದಂತೆ ನಮ್ಮ ದೇಶಭಾಷೆಗಳು ಒಳಗೊಳ್ಳುತ್ತಿವೆಯೇ, ಇಂತಹ ಬೆಳವಣಿಗೆಗೆ ಪ್ರತಿಕ್ರಿಯಿಸುತ್ತಿವೆಯೆ? ಈಗೇನಿದ್ದರೂ ಅನುವಾದವಾಗುತ್ತಿರುವುದು ಜ್ಞಾನದ ಬೇರೆ ಬೇರೆ ಶಾಖೆಗಳಲ್ಲಿ ಈಗಾಗಲೇ ಮಾನ್ಯತೆ ಪಡೆದಿರುವ ಶಾಸ್ತ್ರ-ಅಭಿಜಾತ ಗ್ರಂಥಗಳು. ಇವುಗಳು ಖಂಡಿತ ಬೇಕೆಬೇಕು. ಆದರೆ ಇದು ಸಮಕಾಲೀನದಲ್ಲಿ ಸ್ಫೋಟಿಸುತ್ತಿರುವ ಬೆಳವಣಿಗೆ-ಜ್ಞಾನಕ್ಕೆ ಪರ್ಯಾಯವಾಗಲಾರದು. ಕರ್ನಾಟಕ, ಕನ್ನಡದ ಹಿನ್ನೆಲೆಯಿಂದ ಮೂಡಿಬಂದ ಎಷ್ಟೊಂದು ಜನ, ವಿಜ್ಞಾನಿಗಳು, ತಂತ್ರಜ್ಞರು, ಸಮಾಜಶಾಸ್ತ್ರಜ್ಞರು ಈವತ್ತು ದೇಶದ-ದೇಶದ ಹೊರಗಿನ ಪ್ರಮುಖ ಸಂಶೋಧನಾಲಯಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿಲ್ಲ. ಇವರೆಲ್ಲ ಕರ್ನಾಟಕಕ್ಕೆ ಬಂದು ಕೆಲಸ ಕೇಳುವುದು ಬೇಡ. ತಮ್ಮ ಅನುಭವಗಳನ್ನು, ಚಿಂತನೆಯನ್ನು, ತಹತಹವನ್ನು ಕಾಲದಿಂದ ಕಾಲಕ್ಕೆ ಕರ್ನಾಟಕದೊಡನೆ-ಕನ್ನಡಿಗರೊಡನೆ ಹಂಚಿಕೊಳ್ಳುವಂತಹ ಒಂದು ಸೂಕ್ತ ವೇದಿಕೆಯ ಬಗ್ಗೆ ಸರ್ಕಾರ/ಸಾರ್ವಜನಿಕರು ಯೋಚಿಸಬಹುದೆ?

ಗ್ಲೋಬಿಷ್ ಪರಿಕಲ್ಪನೆ
ಕಳೆದ ಮೂರು ದಶಕಗಳಲ್ಲಿ ಇಂಗ್ಲಿಷ್ ಬಗ್ಗೆ ಇನ್ನಿಲ್ಲದ ವ್ಯಾಮೋಹ ಮೂಡಿದ್ದು ಈವತ್ತಿನ ಬಿಕ್ಕಟ್ಟಿಗೆ ಒಂದು ಮುಖ್ಯ ಕಾರಣ. ಜಾಗತೀಕರಣದ ಹಿನ್ನೆಲೆಯಲ್ಲಿ ಮುಂಚೂಣಿಗೆ ಬಂದ ನವ ಆರ್ಥಿಕವಲಯದಲ್ಲಿ ಹೊರದೇಶಗಳಲ್ಲಿ ಉದ್ಯೋಗ ಪಡೆಯಬೇಕಾದರೆ ಇಂಗ್ಲಿಷ್ ಬೇಕೆಬೇಕು ಎಂಬ ತಪ್ಪು ತಿಳಿವಳಿಕೆಯೊಂದು ಕ್ರಮೇಣವಾಗಿ ಚಾಲ್ತಿಗೆ ಬಂದು ಈವತ್ತು ಪರಮನಂಬಿಕೆಯ ಸ್ಥಾನವನ್ನು ಗಳಿಸಿದೆ. ಹೊಸ ಆರ್ಥಿಕವಲಯದ ಕೆಲಸಗಳಿಗೆ ಬೇಕಾದ್ದು ಇಂಗ್ಲಿಷ್ ಅಲ್ಲ. ಗ್ಲೋಬಿಷ್ (GLOBISH) ಎಂಬ ವಾದವೂ ಇದೆ. ಗ್ಲೋಬಿಷ್ ಎಂದರೆ ENGLISH+MICROSOFT  ಎಂಬುದು ಪ್ರಮೇಯ.

ಹೊಸ ಆರ್ಥಿಕವಲಯದ ಉದ್ಯೋಗಗಳಿಗೆ ಇಂಗ್ಲಿಷ್‍ಗಿಂತ ಹೆಚ್ಚಿಗೆ ಬೇಕಾದದ್ದು-MICROSOFT ಪದವು ಸೂಚಿಸುವ ಕಂಪ್ಯೂಟರ್ ತಂತ್ರಜ್ಞಾನ, ಸಂವಹನ ಕಲೆ, ಬೇರೆ-ಬೇರೆ ದೇಶ-ಸಂಸ್ಕೃತಿಗಳಲ್ಲಿ ಕೆಲಸ ಮಾಡುವ ಕಷ್ಟಸಹಿಷ್ಣುತೆ ಇತ್ಯಾದಿ. ಹಾಗೆ ನಿಜವಾಗಿಯೂ ಹೊಸ ಆರ್ಥಿಕವಲಯಗಳ ಉದ್ಯೋಗಗಳಿಗೆ ಇಂಗ್ಲಿಷ್ ಅಷ್ಟೊಂದು ಅವಶ್ಯವಾಗಿದ್ದರೆ ನಮ್ಮ ಎಂಜಿನಿಯರಿಂಗ್ ಕಾಲೇಜುಗಳಲ್ಲಿ, ಮ್ಯಾನೇಜ್‍ಮೆಂಟ್ ಸಂಸ್ಥೆಗಳಲ್ಲಿ ಏಕೆ ಇಂಗ್ಲಿಷ್ ಕಲಿಕೆ ಕಡ್ಡಾಯವಾಗಿಲ್ಲ? ವಾಸ್ತವವಾಗಿ ನಾವು ಶಿಕ್ಷಣದ ಈ ಹಂತದಲ್ಲಿ ಯಾವ ಭಾಷೆ-ಸಾಹಿತ್ಯವನ್ನೂ ಕಲಿಸುವುದಿಲ್ಲ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಅಧ್ಯಯನಕ್ಕೆ ಹೋಗುವ ನಮ್ಮ ವಿದ್ಯಾರ್ಥಿಗಳು ಅಲ್ಲೂ ವಿಶೇಷವಾಗಿ ಇಂಗ್ಲಿಷ್ ಕಲಿಯಬೇಕಾಗಿಲ್ಲ. ಗ್ಲೋಬಿಷ್‍ಗೆ ಬೇಕಾದಷ್ಟು ಇಂಗ್ಲಿಷ್ ಕಲಿಯಲು ಮೊದಲನೆಯ ತರಗತಿಯಿಂದ ಇಂಗ್ಲಿಷ್ ಕಲಿಯುವುದಾಗಲೀ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ಅಗತ್ಯವಾಗಲೀ ಇಲ್ಲ. ಇಷ್ಟೆಲ್ಲ ಮಾಡಿ ಬಿಪಿಒಗಳಲ್ಲಿ ಕೆಲಸ ಮಾಡುವ ನಮ್ಮ ತಲೆಮಾರಿಗೆ, ನಮ್ಮ ಮನೆ, ಕಚೇರಿಗಳಲ್ಲಿ ಕಂಪ್ಯೂಟರ್ ಕೆಲಸಗಳನ್ನು ನಿರ್ವಹಿಸುತ್ತಿರುವವರಿಗೆ ಬರುತ್ತಿರುವ ಇಂಗ್ಲಿಷ್ ಸ್ವರೂಪವಾದರೂ ಯಾವುದು? ಗ್ಲೋಬಿಷ್ ಸ್ವರೂಪದ ಇಂಗ್ಲಿಷ್ ಕಲಿಯುವುದರಿಂದ ದೇಶೀ ಭಾಷೆ-ಸಂಸ್ಕøತಿಗಳಿಗೆ ಯಾವ ರೀತಿಯ ತೊಂದರೆಯೂ ಆಗುವುದಿಲ್ಲ. GLOBISH ಗ್ರಂಥದ ಲೇಖಕ ROBERT MCCRUMರ ಈ ಮಾತುಗಳನ್ನೂ ಗಮನಿಸಿ. GLOBISH-A WORLD DIALECT WILL BE LESS A LANGUAGE AND MORE A MEANS TO AN END. IT WILL CONTINUE TO ENFRANCHISE MILLIONS WITH LACK THE BENEFIT OF FORMAL EDUCATION INTO GLOBAL ECONOMY AND PREPARE A MEANS OF COMMUNICATION THAT WILL FOR. MOST PART LEAVE LOCAL LANGUAGES UNSCATHED.ಕಳೆದೆರಡು ಮೂರು ದಶಕಗಳಲ್ಲಿ ಚೀನಾ ಕಲಿತ ಇಂಗ್ಲಿಷಿನ ಸ್ವರೂಪ ಕೂಡ ಗ್ಲೋಬಿಷ್ ರೀತಿಯದೇ. ನಮ್ಮ ನವ ಮಧ್ಯಮವರ್ಗದ ಜನಕ್ಕೆ, ನವ ಮಧ್ಯಮವರ್ಗಕ್ಕೆ ಪ್ರವೇಶಿಸಲು ತವಕಿಸುತ್ತಿರುವ ಗ್ರಾಮಿಣರಿಗೆ, ಸಾರ್ವಜನಿಕವಾಗಿ ಹಿಂದುಳಿದವರಿಗೆ, ಹೊಸ ಆರ್ಥಿಕ ವ್ಯವಸ್ಥೆಯ ಉದ್ಯೋಗಗಳಿಗೆ ಬೇಕಾದ ಇಂಗ್ಲಿಷಿನ ಸ್ವರೂಪದ ಬಗ್ಗೆ ನಾವು ಖಚಿತವಾಗಿ ತಿಳಿವಳಿಕೆ ಮೂಡಿಸದಿದ್ದರೆ, ಈಗಿರುವಷ್ಟು ಇಂಗ್ಲಿಷ್ ಶಾಲೆಗಳ ವ್ಯಾಮೋಹ ಖಂಡಿತ ಇರುತ್ತಿರಲಿಲ್ಲ.

ವಸ್ತುನಿಷ್ಠ ಚಿಂತನೆಯ ಅಗತ್ಯ
ಇಂಗ್ಲಿಷ್ ವ್ಯಾಮೋಹ ನಮ್ಮ ದೇಶಕ್ಕೆ-ಸಂಸ್ಕøತಿಗೆ ಮಾತ್ರ ಸೀಮಿತವಾಗಿಲ್ಲ. ಇಂತಹ ವ್ಯಾಮೋಹಕ್ಕೆ ಸಿಕ್ಕಿಹಾಕಿಕೊಂಡ ದೇಶಗಳು ಯಾವ ಯಾವ ರೀತಿಯ ಸಮಸ್ಯೆಯನ್ನು ಎದುರಿಸಿವೆ ಎಂಬ ಅಧ್ಯಯನವೊಂದನ್ನು ಬ್ರಿಟಿಷ್ ಕೌನ್ಸಿಲ್ ಸಂಸ್ಥೆಯು ಪ್ರಕಟಿಸಿದೆ (DREAMS AND REALITIES-DEVELOPING COUNTRIES AND ENGLISH LANGUAGE-ಸಂಪಾದಕರು-ಹ್ರೆವಲ್ ಕೋಲ್‍ಮನ್). ಈ ಅಧ್ಯಯನದ ಒಟ್ಟು ಧ್ವನಿಯೆಂದರೆ ಇಂಗ್ಲಿಷ್ ಭಾಷೆಯೊಂದನ್ನು ಮಾತ್ರವೇ ವೈಯಕ್ತಿಕ-ಸಾಮಾಜಿಕ ವಿಕಾಸದೊಡನೆ ಸಮರ್ಥಿಸಿ ಎಲ್ಲ ರೀತಿಯಲ್ಲೂ ಮುನ್ನುಗ್ಗಲು, ನಮ್ಮೆಲ್ಲ ಸಂಪನ್ಮೂಲಗಳನ್ನೂ ಇಂತಹ ಕಾರ್ಯಕ್ರಮಗಳಿಗೇ ಮೀಸಲಿಡಲು ಯಾವ ಬಲವಾದ ಕಾರಣಗಳೂ ಇಲ್ಲ. ಬದಲಿಗೆ ಇಂಗ್ಲಿಷ್ ಬಗ್ಗೆ ಇರುವ ಅನಗತ್ಯ ಉತ್ಸಾಹದಿಂದಾಗಿ ಸಾಂಸ್ಕøತಿಕ-ಶೈಕ್ಷಣಿಕ ಸನ್ನಿವೇಶವೇ ಸಂಕೀರ್ಣಗೊಂಡು ಇಂತಹ ಸಂಕೀರ್ಣತೆಯನ್ನು ನಿರ್ವಹಿಸಬಲ್ಲ ರಾಜಕೀಯ ನಾಯಕತ್ವ ಯಾವ ಅಭಿವೃದ್ಧಿಶೀಲ ದೇಶಗಳಲ್ಲೂ ಕಂಡುಬರುತ್ತಿಲ್ಲ. ಇಂತಹ ಅಧ್ಯಯನಗಳ ಫಲಶ್ರುತಿಯನ್ನು ಕೂಡ ನಾವು ನಮ್ಮ ನಾಗರಿಕರಿಗೆ ತಲುಪಿಸಿದರೆ ಇಂಗ್ಲಿಷ್ ಪ್ರಶ್ನೆ ಮತ್ತು ಭಾಷಾ ಮಾಧ್ಯಮದ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸಬಹುದೇನೋ.

ಕನ್ನಡವನ್ನು ಚೆನ್ನಾಗಿ, ಧ್ವನಿಪೂರ್ಣವಾಗಿ ಕಲಿಸುವುದರಿಂದಲೇ ಇಂಗ್ಲಿಷನ್ನೂ ಕಲಿಸಬಹುದಲ್ಲವೇ? ಒಂದು ಭಾಷೆಯನ್ನು ಕಲಿಯುವ ವಿಧಾನವನ್ನು ಸರಿಯಾಗಿ ಕಲಿತುಕೊಂಡ ಒಬ್ಬ ವಿದ್ಯಾರ್ಥಿಗೆ ಮತ್ತೊಂದು ಭಾಷೆಯನ್ನು ಕಲಿಯುವುದು, ನಿರ್ವಹಿಸುವುದು ಯಾವ ರೀತಿಯಲ್ಲೂ ಸಮಸ್ಯೆಯಾಗಲಾರದು. ನಿಜಹೇಳಬೇಕೆಂದರೆ ನಮ್ಮ ಶಾಲೆಗಳಲ್ಲಿ ಇಂಗ್ಲಿಷನ್ನು ಕಲಿಸುತ್ತಿದ್ದ ರೀತಿಯೆಂದರೆ ಕನ್ನಡವನ್ನೂ ಚೆನ್ನಾಗಿ, ಧ್ವನಿಪೂರ್ಣವಾಗಿ ಕಲಿಸುವುದೇ ಆಗಿತ್ತು. ಕಲಿಕೆಯ ಯಾವ ಯಾವ ಹಂತದಲ್ಲಿ, ಯಾವ ಯಾವ ವಿಷಯಗಳನ್ನು ಕಲಿಸುವಾಗ ಮಾತೃಭಾಷೆಗೆ ಯಾವರೀತಿಯ ಒತ್ತಿರಬೇಕು ಎಂಬುದನ್ನು ಡಾ.ಎಸ್.ಎಲ್.ಭೈರಪ್ಪನವರ ಬರಹಗಳು ಚೆನ್ನಾಗಿ ವಿವರಿಸಿವೆ. ಸದ್ಯ ಈಗಿರುವಂತೆ ನಾವು ಕನ್ನಡವನ್ನು ಕೂಡ ಸರಿಯಾಗಿ ಕಲಿಸಲು ಗಮನ ಕೊಡುತ್ತಿಲ್ಲ. ಭಾಷಾ ಕೌಶಲವನ್ನು ಕಲಿಸುವುದು ಈವತ್ತಿನ ಶಿಕ್ಷಣದ ಆದ್ಯತೆಯಲ್ಲ. ವಿಪರ್ಯಾಸವೆಂದರೆ ಇಂಗ್ಲಿಷ್ ಭಾಷಾ ಕೌಶಲ್ಯವನ್ನು ಮಾತ್ರ ನಾವು ವೃತ್ತಿಕೌಶಲ್ಯವೆಂದು, ಭಾವನಾಸಂಪನ್ನತೆಯೆಂದು ತಪ್ಪು ತಿಳಿದು ನಂಬಲ್ಪಟ್ಟಿರುವುದು.
ಮಾತೃಭಾಷೆಗೆ ಪ್ರಾಮುಖ್ಯತೆ ಬರುವುದರಿಂದ ಒಂದು ರಾಜ್ಯದೊಳಗೆ ಇರುವ ಬೇರೆ ಬೇರೆ ಭಾಷೆಗಳಿಗೆ ತೊಂದರೆಯಾಗುತ್ತದೆ ಎಂಬ ತಪ್ಪುಕಲ್ಪನೆಯಿರುವವರು ಬರಗೂರು ರಾಮಚಂದ್ರಪ್ಪನವರ ಲೇಖನವನ್ನು ಕಡ್ಡಾಯವಾಗಿ ಓದಲೇಬೇಕು. ದಕ್ಷಿಣ ಭಾರತ ವಿಶೇಷವಾಗಿ ಕರ್ನಾಟಕವು ಭಾಷಾ ಅಲ್ಪಸಂಖ್ಯಾತರನ್ನು ಗೌರವದಿಂದ, ಸಮಾನ ನೆಲೆಯಲ್ಲಿ ನಡೆಸಿಕೊಂಡಿರುವ ವಿವರಗಳು ಈ ಬರಹದಲ್ಲಿ ಸಿಗುತ್ತವೆ. ನವ ಆರ್ಥಿಕವಲಯದ ಉದ್ಯೋಗಗಳಿಗೆ ಜಗತ್ತಿನ ಬಹುಭಾಗಗಳಲ್ಲಿ ಚಾಲ್ತಿಯಲ್ಲಿದೆಯೆಂದು ನಾವು ನಂಬಿರುವ ಇಂಗ್ಲಿಷ್ ಅಗತ್ಯವಾಗುವುದಾದರೆ, ನಮ್ಮ ದೇಶದಲ್ಲಿ ಮೂಡುವ ಹೊಸ ಆರ್ಥಿಕ ವಲಯಗಳ ಉದ್ಯೋಗಗಳಿಗೂ ಇಲ್ಲಿಯ ರಾಜ್ಯಭಾಷೆಗಳನ್ನು ಕಲಿಯುವ ಅಗತ್ಯವಿದೆಯಲ್ಲವೆ? ಭಾಷಾ ಅಲ್ಪಸಂಖ್ಯಾತರ ದೃಷ್ಟಿಕೋನವನ್ನು ಅವರ ಬಗ್ಗೆ ನಮಗಿರುವ ಕಾಳಜಿ ತೋರಿಸುವುದಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಪರವಾದ, ರಾಜ್ಯಭಾಷೆಗಳ ವಿರೋಧಿಯಾದ ನಮ್ಮ ನಿಲುಮೆಗಳನ್ನು ಸಮರ್ಥಿಸಿಕೊಳ್ಳಲು ಒಂದು ತಂತ್ರವಾಗಿ ನಾವು ಉಪಯೋಗಿಸುತ್ತೇವಷ್ಟೆ.

ಕನ್ನಡ ಅಭಿಯಾನದಲ್ಲಿ ಭಾಗಿಯಾದ ಎಲ್ಲ ಪರಿಣತರು ಸರಿಯಾಗಿ ಸೂಚಿಸಿರುವ ಹಾಗೆ ಸಮಸ್ಯೆಗೆ, ಸನ್ನಿವೇಶಕ್ಕೆ ಸದ್ಯದ ಉತ್ತರ, ದೀರ್ಘಕಾಲದ ಉತ್ತರವೆಂದು ಬೇರೆ ಬೇರೆ ಉತ್ತರಗಳಿಲ್ಲ. ಒಂದು ಸರಿಯಾದ ಉತ್ತರ ಇಂದು ಮತ್ತು ನಾಳೆಯನ್ನು ಒಟ್ಟಿಗೇ ಗಣನೆಗೆ ತೆಗೆದುಕೊಳ್ಳುತ್ತದೆ.

ಭಾಷೆಯ ಪ್ರಶ್ನೆಯನ್ನು ಚರ್ಚಿಸುವಾಗ ಅದೊಂದೇ ಪ್ರಶ್ನೆಯಂತೆ ಚರ್ಚಿಸಿದರೆ, ಬರಗೂರರು ಸೂಚಿಸಿರುವ ನಾನಾರೀತಿಯ ವಿರೋಧಾಭಾಸಗಳಿಗೆ, ಗೊಂದಲಗಳಿಗೆ ಕಾರಣವಾಗುತ್ತದೆ. ಭಾಷೆಯ ಪ್ರಶ್ನೆಯು ಅಭಿವೃದ್ಧಿಯ ಶೈಲಿ, ಜೀವನದ ಶೈಲಿಯ ಪ್ರಶ್ನೆಗಳೊಂದಿಗೂ ತಳುಕು ಹಾಕಿಕೊಂಡಿರುತ್ತದೆ ಎಂಬುದು ನಿಜ. ಆದರೆ ಅಭಿವೃದ್ಧಿಯ, ಜೀವನಶೈಲಿಯ ಪ್ರಶ್ನೆಗಳನ್ನು ಎದುರಿಸಿಬಿಟ್ಟರೆ ಭಾಷೆ, ಶಿಕ್ಷಣ ಮಾಧ್ಯಮದ ಪ್ರಶ್ನೆ ತನಗೆ ತಾನೇ ಪರಿಹಾರವಾಗುತ್ತದೆ ಎಂಬ ಭಾವನೆ ತಪ್ಪು. ಈ ದೃಷ್ಟಿಯಿಂದ ಅಭಿಯಾನವು ಸಕಾರಣವಾಗಿಯೇ ಭಾಷೆ ಮತ್ತು ಶಿಕ್ಷಣ ಮಾಧ್ಯಮದ ಪ್ರಶ್ನೆಗಳನ್ನು ಸ್ವತಂತ್ರ ಪ್ರಶ್ನೆಯಾಗಿ ಮುನ್ನೆಲೆಗೆ ತಂದಿದೆ. ಸಾರ್ವಜನಿಕ ಜೀವನ ಈ ಅಭಿಯಾನವನ್ನು ಹೇಗೆ ಮುಂದುವರಿಸುತ್ತದೆ, ಯಾವ ಹಂತಕ್ಕೆ ಕೊಂಡೊಯ್ಯುತ್ತದೆ ಎಂಬುದು ನಿಜಕ್ಕೂ ಕುತೂಹಲದ ಪ್ರಶ್ನೆ.

(ಇದು ವಿಜಯವಾಣಿ ಕನ್ನಡ ಅಭಿಯಾನದ ಲೇಖನ ಸರಣಿಯ ಕೊನೆಯ ಬರಹ)
(ಲೇಖಕರು ಕನ್ನಡ ಬರಹಗಾರರು ಮತ್ತು ಆದಾಯ ತೆರಿಗೆ ಇಲಾಖೆಯ ನಿವೃತ್ತ ಮುಖ್ಯ ಆಯುಕ್ತರು)

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top