ಕನ್ನಡಿಗರೇ ವೃತ್ತಿ ನೈಪುಣ್ಯ ಪ್ರದರ್ಶಿಸಿ

ರಾ.ನಂ. ಚಂದ್ರಶೇಖರ್.  

ಹೊರ ರಾಜ್ಯಗಳಿಂದ ಬಂದಿದ್ದ ವಲಸೆ ಕಾರ್ಮಿಕರು ಭಾರೀ ಸಂಖ್ಯೆಯಲ್ಲಿ ತಮ್ಮ ಊರುಗಳಿಗೆ ಮರಳಿದ್ದಾರೆ. ಕಾರ್ಖಾನೆಗಳು, ಕಟ್ಟಡ ನಿರ್ಮಾಣ, ಗ್ರಾನೈಟ್‌ ಉದ್ಯಮ ಸೇರಿ ನಿರ್ಮಾಣ ಕಾರ್ಯಗಳಲ್ಲಿ ಇವರ ಪಾಲು ದೊಡ್ಡದಾಗಿತ್ತು. ಜೊತೆಗೆ ಸೆಕ್ಯುರಿಟಿ, ಹೋಟೆಲ್‌, ಮಾಲ್‌ಗಳು ಸೇರಿದಂತೆ ಹಲವು ಕ್ಷೇತ್ರಗಳಿಗೂ ವ್ಯಾಪಿಸಿದ್ದರು. ಸಹಜವಾಗಿ ಈ ಎಲ್ಲ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆ ಕಾಡಲಿದೆ. ಇಂತಹ ಪರಿಸ್ಥಿತಿ ಉದ್ಭವಿಸಿರುವುದು ಇದೇ ಮೊದಲಲ್ಲ. ಈ ಪರಿಸ್ಥಿತಿಯನ್ನು ರಾಜ್ಯ ಸರಕಾರ ಮತ್ತು ಕನ್ನಡಿಗರು ಸರಿಯಾಗಿ ಬಳಸಿಕೊಂಡರೆ ವರದಾನವಾಗಲಿದೆ.
1991ರಲ್ಲಿ ಪ್ರಕಟವಾದ ಕಾವೇರಿ ನ್ಯಾಯ ಮಂಡಳಿಯ ಮಧ್ಯಂತರ ತೀರ್ಪು ಕರ್ನಾಟಕದ ಹಿತಕ್ಕೆ ಮಾರಕವಾಗಿತ್ತು. ಅದನ್ನು ಪ್ರತಿಭಟಿಸಿ ನಿರಂತರ ಹೋರಾಟ ನಡೆಯಿತು. ಆ ಸಂದರ್ಭದಲ್ಲಿ ನಡೆದ ಬಂದ್‌ ದಿನ ಬೆಂಗಳೂರಿನಲ್ಲಿ ತಮಿಳರ- ಕನ್ನಡಿಗರ ನಡುವೆ ಗಲಭೆಯಾಗಿ 16 ಜನ ಬಲಿಯಾದರು. ಬೆದರಿದ ತಮಿಳು ಕಾರ್ಮಿಕರು, ತಮ್ಮ ಊರುಗಳಿಗೆ ಮರಳಿದರು.

ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸ ನಿಂತುಹೋಗುತ್ತದೆ ಎನ್ನುವ ಆತಂಕದ ಮಾತುಗಳು ಕೇಳಿಬಂದವು. ಕೆಲವು ದಿನಗಳು ಕಟ್ಟಡ ನಿರ್ಮಾಣಕ್ಕೆ ಕಾರ್ಮಿಕರಲ್ಲದೇ ಸ್ಥಗಿತಗೊಳ್ಳುವ ಹಂತ ತಲುಪಿತು. ಆಗ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರು ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳ ಜನರನ್ನು ಕರೆತರುವಂತೆ ಹೇಳಿ, ಸ್ವತಃ ಅವರೇ ಆ ಪ್ರದೇಶದ ಜನಪ್ರತಿನಿಧಿಗಳು, ಅಧಿಕಾರಿಗಳ ಮೂಲಕ ಈ ಬಗ್ಗೆ ಅಲ್ಲಿನ ಜನರಿಗೆ ವಿಚಾರ ತಿಳಿಸಿ, ಜನರನ್ನು ಅಲ್ಲಿಂದ ಬರುವಂತೆ ಮಾಡಿದರು. ಆಗ ಉತ್ತರ ಕರ್ನಾಟಕದ ಜನ ನಿರ್ಮಾಣ ಉದ್ಯಮಕ್ಕೆ ಪ್ರವೇಶಿಸಿದರು. ಈಗ ಅವರು ಬೆಂಗಳೂರಿನ ನಿರ್ಮಾಣ ವಲಯದಲ್ಲಿ ಭದ್ರನೆಲೆ ಕಂಡುಕೊಂಡಿದ್ದಾರೆ.
ಕೊರೊನಾದಿಂದ ಮತ್ತೆ ಈಗ ಅಂಥದೇ ಪರಿಸ್ಥಿತಿ ಉದ್ಭವಿಸಿದೆ. ಆದರೆ, ಆಗ ತಮಿಳುನಾಡಿನವರು ಮಾತ್ರ ಇದ್ದರು. ಇಂದು ಅವರ ಜೊತೆಗೆ ಉತ್ತರ ಮತ್ತು ಈಶಾನ್ಯ ರಾಜ್ಯದವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಮಾಲ್‌ಗಳು, ಹೋಟೆಲ್‌ಗಳಲ್ಲಿ ಈಶಾನ್ಯದವರು ಹೆಚ್ಚಿದ್ದಾರೆ. ವಲಸೆ ಕಾರ್ಮಿಕರು ಹಲವು ಕ್ಷೇತ್ರಗಳಿಗೂ ವ್ಯಾಪಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿ ಸಂಕೀರ್ಣವಾಗಿದೆ. ಆದರೆ, ಈ ಪರಿಸ್ಥಿತಿಯನ್ನು ಕರ್ನಾಟಕ ಸರಕಾರವು ಸರಿಯಾಗಿ ನಿಭಾಯಿಸಿದರೆ ಹೊರ ರಾಜ್ಯದಲ್ಲಿರುವ ಕನ್ನಡಿಗರಿಗೆ ಮತ್ತು ಬರ ಪೀಡಿತ ಉತ್ತರ ಕರ್ನಾಟಕದವರಿಗೆ ಉದ್ಯೋಗ ಸಿಗುವಂತೆ ಮಾಡಬಹುದು.
ಬೇರೆ ರಾಜ್ಯಗಳಿಂದ ಬಂದಿರುವ ಕಾರ್ಮಿಕರು ಸ್ಥಳೀಯರಿಗಿಂತ ಕಡಿಮೆ ವೇತನಕ್ಕೆ ದುಡಿಯುತ್ತಾರೆ. ಹೋಟೆಲ್‌ಗಳಲ್ಲಿ ಈಶಾನ್ಯ ಭಾರತದ ಹುಡುಗರು ಹೆಚ್ಚು ಕಡಿಮೆ ಜೀತದಾಳುಗಳಾಗಿದ್ದಾರೆ. ಸ್ಥಳೀಯ ಕನ್ನಡಿಗರನ್ನು ನೇಮಕ ಮಾಡಿಕೊಂಡರೆ ಸೂಕ್ತ ಸೌಲಭ್ಯಗಳನ್ನು ನೀಡಬೇಕಾಗುತ್ತದೆ. ಕನಿಷ್ಠ ವೇತನವೂ ಸೇರಿದಂತೆ, ಕೆಲವು ಕಾರ್ಮಿಕ ಕಾನೂನುಗಳನ್ನಾದರೂ ಪಾಲಿಸುವುದು ಅನಿವಾರ್ಯವಾಗುತ್ತದೆ ಎಂಬುದನ್ನು ಅರಿತಿರುವ ಬಿಲ್ಡರ್‌ಗಳು ಮತ್ತು ಇತರ ಉದ್ಯಮಿಗಳು ‘ತಮ್ಮ ಊರುಗಳಿಗೆ ಹೋಗಿರುವ ಕಾರ್ಮಿಕರನ್ನು ಮನವೊಲಿಸಿ ಮತ್ತೆ ಕರತರಬೇಕು; ಇಲ್ಲವಾದರೆ, ನಿರ್ಮಾಣ ಉದ್ಯಮದಲ್ಲಿ ಕಾರ್ಮಿಕರ ಕೊರತೆ ತೀವ್ರವಾಗಿ ಆರ್ಥಿಕ ಹೊರೆ ಹೆಚ್ಚಲಿದೆ’ ಅನ್ನುವ ಮಾತಗಳನ್ನಾಡಿದ್ದಾರೆ. ಈ ಮಾತುಗಳಿಗೆ ಸರಕಾರ ಕಿವಿಗೊಟ್ಟರೆ, ಕನ್ನಡಿಗರನ್ನು ಅವಕಾಶ ವಂಚಿತರನ್ನಾಗಿ ಮಾಡಿದಂತಾಗುತ್ತದೆ. ಮಾತ್ರವಲ್ಲ ಕಾರ್ಮಿಕರ ಶೋಷಣೆಯನ್ನು ಬೆಂಬಲಿಸಿದಂತಾಗುತ್ತದೆ. ‘ಮಹಾರಾಷ್ಟ್ರ, ಗೋವಾಗಳಲ್ಲಿ ಕನ್ನಡಿಗರು ಉತ್ತಮ ಕೆಲಸ ಮಾಡುತ್ತಾರೆ ಎಂದು ಕನ್ನಡಿಗರಿಗೇ ಆದ್ಯತೆ ನೀಡುತ್ತಾರೆ. ‘ಕನ್ನಡ ಕೂಲಿಗಳು ಶ್ರಮ ಜೀವಿಗಳು’ ಎಂದು ಪುಣೆಯಲ್ಲಿ ಹೇಳುತ್ತಾರೆ.
‘ಕನ್ನಡಿಗರ ರಕ್ಷ ಣೆ ಬದ್ಧ’ ಅನ್ನುವ ಹೇಳಿಯನ್ನು ಪ್ರಕಟಪಡಿಸಲು ಇದೀಗ ಸದವಕಾಶ ದೊರೆತಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಕನ್ನಡದ ಬಗ್ಗೆ ಅಭಿಮಾನ, ಕನ್ನಡಿಗರ ಬಗ್ಗೆ ಕಾಳಜಿ ಉಳ್ಳವರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಬೇರೆ ರಾಜ್ಯಗಳಿಂದ ಹಿಂದಿರುಗಿರುವ ತಮ್ಮ ರಾಜ್ಯದ ಕಾರ್ಮಿಕರನ್ನು ಅಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬುಂದೇಲ್‌ ಖಂಡ್‌ ಎಕ್ಸ್‌ಪ್ರೆಸ್‌ ವೇ, ಗ್ರಾಮೀಣ ಪ್ರದೇಶದಲ್ಲಿ ಕೆರೆ, ಕಟ್ಟಡ, ಸಾಮಾಜಿಕ ಅರಣ್ಯ ನಿರ್ಮಾಣ ಸೇರಿದಂತೆ ಕೆಲವು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಅದನ್ನು ಆದರ್ಶವಾಗಿಟ್ಟುಕೊಂಡು ಕರ್ನಾಟಕ ಸರಕಾರವೂ ರಾಜ್ಯಕ್ಕೆ ಮರಳಿರುವ ವಲಸೆ ಕಾರ್ಮಿಕರ ಕೆಲಸಗಳನ್ನು ಕನ್ನಡಿಗರಿಗೆ ಸಿಗುವಂತೆ ಮಾಡಬೇಕಿದೆ. ಹಿಂದೆ ಕಾವೇರಿ ಗಲಭೆಯಾದಾಗಲೂ ಇಂತಹದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಉತ್ತರ ಕರ್ನಾಟಕದ, ಜನರು ರಾಜಧಾನಿಗೆ ಬರುವಂತೆ ಮಾಡಿದ್ದರಿಂದ ಕಟ್ಟಡ ನಿರ್ಮಾಣದಲ್ಲಿ ಕನ್ನಡ ಧ್ವನಿ ಕೇಳುವಂತಾಯಿತು.
ಇದೊಂದು ಚಾರಿತ್ರಿಕ ಸದವಕಾಶ. ಇದನ್ನು ಕನ್ನಡಿಗರ ಪುರೋಭಿವೃದ್ಧಿಗೆ ಬಳಸಿಕೊಳ್ಳುವ ಚಾಕಚಕ್ಯತೆಯನ್ನೂ, ಇಚ್ಛಾಶಕ್ತಿಯನ್ನೂ ನಮ್ಮ ಕನ್ನಡ ರಾಜಕಾರಣಿಗಳು, ಮುಖ್ಯಮಂತ್ರಿಗಳೂ, ಕೈಗಾರಿಕೆ ಮತ್ತು ಕಾರ್ಮಿಕ ಸಚಿವರು ಪ್ರದರ್ಶಿಸಬೇಕು.

ಎಲ್ಲ ರಾಜಕೀಯ ಪಕ್ಷಗಳವರು ಪಕ್ಷ ಭೇದ ಮರೆತು ನೆರವಾಗಬೇಕು. ಸರಕಾರ ಎಲ್ಲ ಇಲಾಖೆ ಅಧಿಕಾರಿಗಳ ಸಮನ್ವಯ ಸಮಿತಿ ರಚಿಸಬೇಕು. ಎಲ್ಲಾ ಜಿಲ್ಲೆಗಳು, ಹೊರ ರಾಜ್ಯದಿಂದ ಬಂದಿರುವ, ಬರಲು ಇಚ್ಛಿಸುತ್ತಿರುವ ಕಾರ್ಮಿಕರು ಮತ್ತು ಬರಪೀಡಿತ ಪ್ರದೇಶಗಳ ಜನರಿಗೆ ತಿಳಿಸಿ, ಕೆಲಸ ಮಾಡಲು ಸಿದ್ಧರಿರುವ ಪಟ್ಟಿ ಸಿದ್ಧಪಡಿಸಬೇಕು. ಬಿಲ್ಡರ್ಸ್‌, ಮೆಟ್ರೊ, ರಸ್ತೆ ಗುತ್ತಿಗೆದಾರರು, ಹೋಟೆಲ್‌, ಮಾಲ್‌ಗಳ ಮಾಲೀಕರ ಸಂಘದವರನ್ನು ಸಂಪರ್ಕಿಸಿ, ಅಗತ್ಯವಿರುವ ನೌಕರರ ಮಾಹಿತಿ ಪಡೆಯಬೇಕು. ಕನ್ನಡಿಗರೂ ಈ ಅವಕಾಶವನ್ನು ಸವಾಲಾಗಿ ಸ್ವೀಕರಿಸಿ, ತಮ್ಮ ಕಠಿಣ ಪರಿಶ್ರಮದ ಮೂಲಕ ಕೆಲಸಕ್ಕೆ ಗೌರವ ತಂದುಕೊಟ್ಟು, ಕನ್ನಡಿಗರಿಗೆ ಅಂಟಿರುವ ಅಪವಾದಗಳನ್ನು ಸುಳ್ಳು ಮಾಡಬೇಕು. ಅನ್ಯ ರಾಜ್ಯದವರು ಮಾಡುತ್ತಿದ್ದುದಕ್ಕಿಂತ ಉತ್ತಮ ಕೆಲಸ ಮಾಡಿ ತೋರಿಸುವ ಮೂಲಕ, ಸಿಗುತ್ತಿರುವ ಅವಕಾಶವನ್ನು ಬಾಚಿಕೊಳ್ಳಬೇಕು.
(ಲೇಖಕರು ಹಿರಿಯ ಕನ್ನಡ ಹೋರಾಟಗಾರರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top