ಕಂಕಣ ಗ್ರಹಣದಿಂದ ಕಂಟಕವಿಲ್ಲ

– ಪ್ರಾಕೃತಿಕ ವಿಸ್ಮಯದ ಬಗ್ಗೆ ವೈಜ್ಞಾನಿಕ ಕುತೂಹಲವಿರಲಿ
– ಭಕ್ತಿ, ನೇಮಗಳ ಆಚರಣೆ ಜತೆಗಿರಲಿ, ಗ್ರಹಣದ ಬಗ್ಗೆ ಭಯಪಡಬೇಕಿಲ್ಲ
– ನಂಬಿಕೆ, ಆಚರಣೆ ಎಲ್ಲವೂ ತಪ್ಪಲ್ಲ

ಗ್ರಹಣ ಸ್ಪರ್ಶ- ಬೆಳಗ್ಗೆ- 10.6
ಗ್ರಹಣ ಮಧ್ಯ- ಮಧ್ಯಾಹ್ನ 12.01
ಮೋಕ್ಷ ಕಾಲ – ಮಧ್ಯಾಹ್ನ 1.27

ಇಂದು ಘಟಿಸಲಿರುವ ಈ ವರ್ಷದ ಮೊದಲ ಹಾಗೂ ಅಪರೂಪದ ಸೂರ್ಯ ಗ್ರಹಣದಿಂದ ಅಷ್ಟೇನು ದುಷ್ಪರಿಣಾಮಗಳಾಗುವುದಿಲ್ಲ, ಆದರೆ, ಕೆಲವು ರಾಶಿ ಮತ್ತು ನಕ್ಷತ್ರಗಳ ಮೇಲೆ ಗ್ರಹಣದ ಪ್ರಭಾವ ಇರಲಿದ್ದು, ಅಂತಹವರು ಎಚ್ಚರದಿಂದ ಇರುವುದು ಒಳಿತು: ಇದು ಖ್ಯಾತ ಜ್ಯೋತಿಷಿ, ದೈವಜ್ಞ ಕೆ.ಎನ್. ಸೋಮಯಾಜಿ ಅಭಿಮತ.
‘ವಿಜಯ ಕರ್ನಾಟಕ’ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದ ನೂರಾರು ಕರೆಗಳಿಗೆ ಉತ್ತರಿಸಿದ ಅವರು, ಈ ಸೂರ್ಯ ಗ್ರಹಣ ಎಂದಿನಂತೇ ಅಮಾವಾಸ್ಯೆಯ ದಿನದಂದೇ ಘಟಿಸುತ್ತಿದ್ದು, ಇದನ್ನು ‘ಚೂಡಾಮಣಿ ಗ್ರಹಣ’ ಎಂದೂ ಕರೆಯಲಾಗುವುದು. ಈ ಬಾರಿಯ ಸೂರ್ಯ ಗ್ರಹಣ ಮೃಗಶಿರಾ ನಕ್ಷ ತ್ರ ಮತ್ತು ಮಿಥುನ ರಾಶಿಯಲ್ಲಿ ಸಂಭವಿಸಲಿದೆ ಎಂದರು.
ಹಾಗಾಗಿ ಮಿಥುನ ರಾಶಿ, ಮೃಗಶಿರಾ ನಕ್ಷತ್ರದ ಹಿಂದೆ ಮುಂದಿರುವ ರಾಶಿ, ನಕ್ಷತ್ರಗಳ ಮೇಲೂ ಗ್ರಹಣದ ಛಾಯೆ ಸ್ವಲ್ಪಮಟ್ಟಿಗೆ ಇರಲಿದೆ. ಹಾಗಾಗಿ ಆ ರಾಶಿ ನಕ್ಷತ್ರದವರು ಸ್ವಲ್ಪಮಟ್ಟಿನ ಜಾಗ್ರತೆಯಿಂದ ಇರುವುದು ಒಳ್ಳೆಯದು ಎಂದು ಹೇಳಿದರು.
ಗ್ರಹಣ ಎಂದರೆ ಪ್ರಕೃತಿಯಲ್ಲಿವಿ ಶಿಷ್ಟವಾದ ಶಕ್ತಿ ಸಂಚಲನವಾಗುವ ಸಮಯ. ಅದನ್ನು ಸದುಪಯೋಗ ಪಡಿಸಿಕೊಳ್ಳುವಂತಹ ಪರಂಪರೆ, ಪದ್ಧತಿ ಭಾರತಿಯರದು. ಹಾಗಾಗಿ ಗ್ರಹಣ ಸಮಯದಲ್ಲಿ ದೋಷ ಇಲ್ಲವೆಂದು ಬೇಕಾಬಿಟ್ಟಿಯಾಗಿ ಇರುವುದು, ದೋಷ ಇದೆ ಎಂದು ಅಳುತ್ತಾ ಕೂರುವುದು ಎರಡೂ ಸರಿಯಲ್ಲ. ಗ್ರಹಣವನ್ನು ನಾವು ಪರ್ವಕಾಲ. ಶಕ್ತಿ ಸಂತುಲಿತ ಸಮಯ ಎಂದೂ ಹೇಳುತ್ತೇವೆ, ಎಲ್ಲ ರಾಶಿ-ನಕ್ಷತ್ರಗಳ ಮೇಲೂ ಗ್ರಹಣದ ಪ್ರಭಾವ ಇರುವುದಿಲ್ಲ, ಕೆಲವೇ ಕೆಲವು ರಾಶಿ-ನಕ್ಷತ್ರಗಳವರಿಗೆ ಸ್ವಲ್ಪ ದೋಷಗಳಿರುತ್ತವೆ, ಉಳಿದಂತೆ ಕೆಲವರಿಗೆ ಶುಭ ಫಲ ಕೆಲವರಿಗೆ ಮಿಶ್ರ ಫಲಗಳು ಉಂಟಾಗಲಿವೆ.
ಶಾಸ್ತ್ರ, ಸಂಪ್ರದಾಯದಂತೆ ಗ್ರಹಣದ ಅವಧಿಯಲ್ಲಿ ಆಹಾರ ಸೇವನೆ ನಿಷಿದ್ಧ. ಗ್ರಹಣ ಆರಂಭಕ್ಕೆ ಮುನ್ನ ದ್ರವರೂಪದ ಆಹಾರ ಸೇವಿಸಬಹುದು. ಆದರೆ, ಇದರಿಂದ ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರಿಗೆ ವಿನಾಯ್ತಿ ಇದೆ. ಗ್ರಹಣದ ವೇಳೆ ದೇವರ ಸ್ಮರಣೆ, ಮಂತ್ರಪಠಣ, ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಒಳ್ಳೆಯದು ಎಂದು ಅವರು ಹೇಳಿದರು. ಗ್ರಹಣದ ದೋಷ ಇರುವಂತಹವರು ದಾನಗಳನ್ನು ನೀಡಿ ದೋಷವನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದರು.

ಗ್ರಹಣ ಕಾಲದಲ್ಲಿ ಏನು ಮಾಡಬೇಕು?
– ಸ್ಪರ್ಶವಾಗುವುದಕ್ಕೂ ಮುನ್ನ ಸ್ನಾನ ಮಾಡಿದರೆ ಒಳ್ಳೆಯದು.
– ಸ್ನಾನ ಮಾಡಿ ತಮಗೆ ತಿಳಿದಿರುವ ರೀತಿಯಲ್ಲಿ ದೇವತಾ ಪ್ರಾರ್ಥನೆ, ಆರಾಧನೆ, ಸಹಸ್ರನಾಮ, ರುದ್ರಪಠಣ, ಜಪ, ತಪ ಮಾಡಬಹುದು.
– ಗ್ರಹಣ ಮೋಕ್ಷದ ಬಳಿಕ ಸ್ನಾನ ಮಾಡಿ, ಪೂಜೆ ಇತ್ಯಾದಿಗಳನ್ನು ನಡೆಸಬಹುದು.
– ಗ್ರಹಣ ಕಾಲದಲ್ಲಿ ಆಹಾರ ಸೇವಿಸುವುದಕ್ಕೆ ನಿಷೇಧವಿದೆ. ಆದರೆ, ಚಿಕ್ಕಮಕ್ಕಳಿಗೆ, ವಯಸ್ಕರಿಗೆ, ಗರ್ಭಿಣಿಯರಿಗೆ ವಿನಾಯಿತಿ ಇದೆ.
– ಗ್ರಹಣ ಕಾಲದಲ್ಲಿನಿದ್ದೆ ಮಾಡುತ್ತಾ ಸಮಯ ಕಳೆಯುವುದು, ಅನಗತ್ಯವಾಗಿ ಹೊರಗೆ ಓಡಾಡುವುದು ಸರಿಯಲ್ಲ.
– ತೀರಾ ಅಗತ್ಯವನ್ನು ಹೊರತುಪಡಿಸಿದರೆ ಶೌಚಾದಿ ಕ್ರಿಯೆಗಳನ್ನು ನಿಯಂತ್ರಿಸಿಕೊಳ್ಳಬಹುದು.
– ಗ್ರಹಣ ಮೋಕ್ಷದ ಬಳಿಕ (ಮಧ್ಯಾಹ್ನ 1:27) ಮನೆಯನ್ನು ಶುದ್ಧಮಾಡಿ, ಸ್ನಾನ ಮಾಡಿಕೊಂಡು ಹೊಸದಾಗಿ ಅಡುಗೆ ಮಾಡಿ ಊಟ ಮಾಡುವುದು ಒಳಿತು.
– ಗ್ರಹಣ ದೋಷ ಇಲ್ಲದವರೂ ಬೇಕಾಬಿಟ್ಟಿ ಇರಬಾರದು, ಮುಂದೆ ಕೆಟ್ಟದಾಗದಿರಲಿ ಎಂಬ ಕಾರಣದಿಂದ ದೇವರ ಪ್ರಾರ್ಥನೆ ಮಾಡಬೇಕು.

ಗ್ರಹಣ ದೋಷಕ್ಕೆ ಪರಿಹಾರ
ಗ್ರಹಣ ಆರಂಭವಾದ ನಂತರ ಸ್ನಾನ ಮಾಡಿ, ದೇವರ ಸ್ಮರಣೆ ಮಾಡಿ, ಗ್ರಹಣದ ಮಧ್ಯಕಾಲದಲ್ಲಿ ಗೋಧಿ ಹಿಟ್ಟು ಅಥವಾ ಗೋಧಿ. ಉದ್ದು ಅನ್ನು ವೈದಿಕರಿಗೆ ದಾನ ನೀಡುವುದು. ಗ್ರಹಣದ ನಂತರ ಮತ್ತೆ ಸ್ನಾನ ಮಾಡಿ, ದೇವರ ಪ್ರಾರ್ಥನೆ ಮಾಡಿ ಭೋಜನ ಸ್ವೀಕರಿಸಬಹುದು.

ಗರ್ಭಿಣಿಯರು ಹೊರಬರುವುದು ಒಳ್ಳೆಯದಲ್ಲ
ಗ್ರಹಣದ ಅವಧಿಯಲ್ಲಿಅಂದರೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಗರ್ಭಿಣಿಯರು ಮನೆಯಿಂದ ಹೊರಗೆ ಬರದಿರುವುದು ಒಳ್ಳೆಯದು. ಆಹಾರ ಸೇವೆ ಮತ್ತು ವಿಶ್ರಾಂತಿಗೆ ಅಡ್ಡಿಯಿಲ್ಲ, ಅವರು ಬೇಕಿದ್ದರೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಬಹುದು, ಶೌಚಾಲಯ ಬಳಸಬಹುದು.

ದೇಶದ ಬಗ್ಗೆ ಕಾಳಜಿ
ಉಡುಪಿಯ ರಾಮಚಂದ್ರ ಅವರು ಗ್ರಹಣದ ನಂತರ ಭಾರತಕ್ಕೆ ಒಳ್ಳೆಯದಾಗುವುದೇ ಎಂದು ಪ್ರಶ್ನೆ ಕೇಳಿ ದೇಶದ ಕಾಳಜಿಯನ್ನು ಮೆರೆದರು. ಇದಕ್ಕೆ ಉತ್ತರಿದ ಸೋಮಯಾಜಿ ಅವರು, ಗ್ರಹಣದ ನಂತರ ಕೊರೊನಾ ಸ್ಥಿತಿಗತಿಯೂ ಸ್ವಲ್ಪಮಟ್ಟಿಗೆ ತಹಬಂದಿಗೆ ಬರಲಿದೆ ಮತ್ತು ಚೈನಾ ಗಡಿಯಲ್ಲಿನ ಉದ್ವಿಗ್ನ ಸ್ಥಿತಿಯೂ ನಿಯಂತ್ರಣಕ್ಕೆ ಬರಲಿದೆ ಎಂದರು.
ನಾನೇನು ಮಾಡಬೇಕೆಂದು ಪ್ರಶ್ನಿಸಿದ ಬಾಲಕಿ ಬೆಂಗಳೂರಿನ 10 ವರ್ಷದ ಬಾಲಕಿ ವಿದ್ಯಾಶ್ರೀ ಕರೆ ಮಾಡಿ, ಗ್ರಹಣದ ಸಮಯದಲ್ಲಿ ಮಕ್ಕಳು ಹೊರಗೆ ಹೋಗಬಾರದು ಎನ್ನುತ್ತಾರೆ, ಮನೆಯಲ್ಲಿಯೇ ನಾನೇನು ಮಾಡಲಿ ಎಂದು ಕೇಳಿತು. ಅದಕ್ಕೆ ಗುರೂಜಿ ಧ್ಯಾನ ಮಾಡು, ಶ್ಲೋಕ ಹೇಳಿಕೋ ಇಲ್ಲವೇ ಪುಸ್ತಕಗಳನ್ನು ಓದು ಎಂದು ಸಲಹೆ ನೀಡಿದರು.

ನಾನಾ ಕಡೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ
ರಾಜ್ಯದ ನಾನಾ ಕಡೆಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ರಾಜ್ಯ ವಿಜ್ಞಾನ ಪರಿಷತ್ತು, ಖಗೋಳ ಆಸಕ್ತರು ಸುರಕ್ಷಿತ ವೀಕ್ಷಣೆಗೆ ಟೆಲಿಸ್ಕೋಪ್, ಬಾಲ್ಮೌಂಟ್, ಪಿನ್ಹೋಲ್ ಕ್ಯಾಮೆರಾ ಮತ್ತು ಸೋಲಾರ್ ಕನ್ನಡಕಗಳ ವ್ಯವಸ್ಥೆ ಮಾಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸೂಕ್ತ ಅಂತರ ಕಾಪಾಡಿಕೊಂಡು ಗ್ರಹಣ ವೀಕ್ಷಿಸಬೇಕು ಎಂಬ ಸೂಚನೆ ನೀಡಲಾಗಿದೆ. ಕಲಬುರಗಿಯ ಜಿಲ್ಲಾ ವಿಜ್ಞಾನ ಕೇಂದ್ರ ಭಾನುವಾರ ಬೆಳಗ್ಗೆ 11.30ರಿಂದ ಮಧ್ಯಾಹ್ನದ 12.30ರವರೆಗೆ ಟೆಲಿಸ್ಕೋಪ್ ಮೂಲಕ ವೀಕ್ಷ ಣೆಗೆ ಅವಕಾಶ ಕಲ್ಪಿಸಿದೆ. ಇದಲ್ಲದೆ ಫೇಸ್ ಬುಕ್ ಲೈವ್ ಆಯೋಜಿಸಿದೆ. ಆಸಕ್ತರು http://meet.google.com/fgp.qpei.ozJ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು.

ವಿಕಲಚೇತನರನ್ನು ಹೂಳಿದರೆ ಜೈಲು
ಕಲಬುರಗಿ: ಭಾನುವಾರ ಸಂಭವಿಸುವ ಸೂರ್ಯಗ್ರಹಣ ಸಮಯದಲ್ಲಿ ಮೌಢ್ಯಕ್ಕೆ ಒತ್ತುಕೊಟ್ಟು ವಿಶೇಷಚೇತನ ಮಕ್ಕಳನ್ನು ಜಿಲ್ಲೆಯಾದ್ಯಂತ ಭೂಮಿಯಲ್ಲಿ ಕುತ್ತಿಗೆ ಮಟ್ಟದವರೆಗೆ ಹೂತಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶರತ್ ಬಿ. ಎಚ್ಚರಿಕೆ ನೀಡಿದರು. ಕಳೆದ ಡಿಸೆಂಬರ್‌ನಲ್ಲಿ ಕಲಬುರಗಿ ಹೊರವಲಯದ ತಾಜ್ ಸುಲ್ತಾಬ್‌ಪುರದಲ್ಲಿ ಈ ರೀತಿಯ ಆಚರಣೆ ನಡೆದಿತ್ತು. ಇಂತಹ ಪ್ರಕರಣ ಬೆಳಕಿಗೆ ಬಂದಿತ್ತು. ಒಂದುವೇಳೆ, ಭಾನುವಾರ ಸೂರ್ಯಗ್ರಹಣದ ಪ್ರಯುಕ್ತ ಈ ನಮೂನೆಯ ಪ್ರಯತ್ನಕ್ಕೆ ಯಾರಾದರೂ ಕೈ ಹಾಕಿದರೆ ಜೈಲು ಗ್ಯಾರಂಟಿ ಎಂದಿದ್ದಾರೆ ಜಿಲ್ಲಾಧಿಕಾರಿ.

ಕೆಲವೆಡೆ ದೇವರ ದರ್ಶನ ಇಲ್ಲ
ನಾಡಿನ ಕೆಲವು ಪ್ರಮುಖ ದೇವಾಲಯಗಳಲ್ಲಿ ಗ್ರಹಣದ ಅವಧಿಯಲ್ಲಿ ದೇವರ ದರ್ಶನಕ್ಕೆ ಅವಕಾಶವಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ, ಶಿರಸಿ ಮಾರಿಕಾಂಬಾ ದೇವಳದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ದರ್ಶನವಿಲ್ಲ. ಗೋಕರ್ಣ ಮಹಾಬಲೇಶ್ವರ ದೇಗುಲದಲ್ಲಿ ಬೆಳಗ್ಗೆ 9ರಿಂದ 1 ಗಂಟೆವರೆಗೆ ದೇವರ ದರ್ಶನ ಮಾಡಬಹುದು. ಗ್ರಹಣ ಕಾಲದಲ್ಲಿ ಸ್ಥಳೀಯರಿಗೆ ನಂದಿ ಮಂಟಪದವರೆಗೆ ಮಾತ್ರ ಪ್ರವೇಶ. ದೇವಾಲಯಗಳಲ್ಲಿ ರುದ್ರಯಾಗ, ನವ ಗ್ರಹ ಯಾಗಗಳನ್ನು ಆಯೋಜಿಸಲಾಗಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ದೇವರ ದರ್ಶನದಲ್ಲಿ ಯಾವುದೇ ವ್ಯತ್ಯಯವಿಲ್ಲ.

ಬರಿಗಣ್ಣಿಂದ ನೋಡುವ ದುಸ್ಸಾಹಸ ಮಾಡಬೇಡಿ
– ಸೋಲಾರ್ ಕನ್ನಡಕ ಬಳಸಿ ಗ್ರಹಣ ವೀಕ್ಷಿಸಿ
ಭಾನುವಾರ ಬೆಳಗ್ಗೆ 10.06ಕ್ಕೆ ಆರಂಭಗೊಂಡು ಮಧ್ಯಾಹ್ನ 1.27ಕ್ಕೆ ಕೊನೆಗೊಳ್ಳುವ ಶತಮಾನದ ಮೊದಲ ಸೂರ್ಯಗ್ರಹಣ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಗೋಚರಿಸಲಿದೆ. ಆದರೆ, ಯಾವ ಕಾರಣಕ್ಕೂ ಬರಿಗಣ್ಣಿನಿಂದ ನೋಡುವ ಸಾಹಸ ಮಾಡಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ. ಕರ್ನಾಟಕದಲ್ಲಿ ಶೇ.40-45ರಷ್ಟು ಮಾತ್ರ ಗೋಚರವಾಗುತ್ತದೆ. ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಕಡಿಮೆ ಪ್ರಮಾಣದಲ್ಲಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ. ಬೀದರ್, ಬೆಳಗಾವಿ ಮತ್ತಿತರ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋಚರಿಸಲಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಖಜಾಂಚಿ ಇ. ಬಸವರಾಜು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕಂಕಣ ಕಾಣಲ್ಲ
ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು, ಸೂರ್ಯ ಒಂದು ಬಳೆಯಂತೆ ಕಾಣುವ ಕುತೂಹಲಕಾರಿ ಸೌರ ವಿದ್ಯಮಾನ ಈ ಕಂಕಣ ಸೂರ್ಯ ಗ್ರಹಣ. ಉತ್ತರ ಭಾರತದ ರಾಜಸ್ಥಾನ, ಹರಿಯಾಣ, ಉತ್ತರಾಖಂಡ ಕೆಲವು ಭಾಗಗಳಷ್ಟೇ ಪೂರ್ಣ ಪ್ರಮಾಣದ ಕಂಕಣ ಸೂರ್ಯ ಗ್ರಹಣ ಗೋಚರಿಸಲಿದೆ. ದಕ್ಷಿಣ ಭಾರತದಲ್ಲಿ ಪಾಶ್ರ್ವ ಸೂರ್ಯಗ್ರಹಣ ಕಾಣಿಸಲಿದೆ.

ಸೋಲಾರ್ ಕನ್ನಡಕಗಳಲ್ಲಿ ವೀಕ್ಷಿಸಿ
ಗ್ರಹಣವನ್ನು ಬರಗಣ್ಣಿನಿಂದ ನೋಡುವುದು ಕಣ್ಣಿಗೆ ಅಪಾಯಕಾರಿ. ಬದಲಿಗೆ ಸೋಲಾರ್ ಕನ್ನಡಕ ಮತ್ತು ವೆಲ್ಡರ್ ಗ್ಲಾಸ್-14 ಗಳನ್ನು ಬಳಸಿ ನೋಡುವುದು ಕಣ್ಣಿಗೆ ಸುರಕ್ಷಿತ. ಸೋಲಾರ್ ಕನ್ನಡಕ ಬಳಸಿ ನೋಡುವುದರಿಂದ ಸೂರ್ಯನ ಪ್ರಖರತೆ ಕಡಿಮೆಯಿರುತ್ತದೆ. ಹೀಗಾಗಿ ಕಣ್ಣಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಖಗೋಳ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಟೆಲಿಸ್ಕೋಪ್, ಬೈನಾಕ್ಯುಲರ್‌ನಲ್ಲಿ ಬೇಡ
ಟೆಲಿಸ್ಕೋಪ್, ಬೈನಾಕ್ಯುಲರ್ ಉಪಕರಣಗಳಿಂದ ನೇರವಾಗಿ ಸೂರ್ಯನನ್ನು ನೋಡಿದರೆ ಕಣ್ಣಿಗೆ ಹಾನಿ ಸಂಭವಿಸುತ್ತದೆ. ಹೀಗಾಗಿ ಗ್ರಹಣವನ್ನು ಟೆಲಿಸ್ಕೋಪ್, ಬೈನಾಕ್ಯುಲರ್‌ನಲ್ಲಿ ದಾಖಲಾದ ಗ್ರಹಣವನ್ನು ಪ್ರೊಜೆಕ್ಟೆಡ್ ಇಮೇಜ್ ಮೂಲಕ ತೋರಿಸಲಾಗುವುದು ಎಂದು ಜವಾಹರಲಾಲ್ ನೆಹರು ತಾರಾಲಯದ ವೈಜ್ಞಾನಿಕ ಅಧಿಕಾರಿ ಬಿ.ಆರ್. ಲಕ್ಷ್ಮಿ ತಿಳಿಸಿದರು.

ಗ್ರಹಣದ ವೈಜ್ಞಾನಿಕ ಸತ್ಯ ಎಲ್ಲರಿಗೂ ತಿಳಿದಿದ್ದರೂ ಸಹ ಕೆಲವು ಜ್ಯೋತಿಷಿಗಳು ಈ ಗ್ರಹಣ ಅಪಾಯಕಾರಿ, ನೋಡಬಾರದು, ಗಂಡಾಂತರ ಕಾದಿದೆ ಎಂದು ಹೇಳುತ್ತಾ ಭಯ ಉಂಟು ಮಾಡುತ್ತಿರುವುದು ವಿಷಾದನೀಯ. ಇಂತಹ ಹೇಳಿಕೆಗಳಿಗೆ ಕಿವಿಗೊಡದೆ ಸುರಕ್ಷಿತ ವಿಧಾನಗಳ ಮೂಲಕ ಗ್ರಹಣ ನೋಡಬಹುದು.
– ಇ. ಬಸವರಾಜು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಖಜಾಂಚಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top