ಪೊಲೀಸ್ ಇಲಾಖೆಗೆ ಕಳಂಕ – ಪ್ರತಿಷ್ಠಿತ ತಪ್ಪಿತಸ್ಥರ ತನಿಖೆಯಾಗಲಿ

ಪೊಲೀಸರ ವಿಶ್ವಾಸಾರ್ಹತೆಗೆ ಧಕ್ಕೆ ತರುವಂಥ ಘಟನೆ ಕಲಬುರಗಿಯಲ್ಲಿ ನಡೆದಿದೆ. ಪ್ರತಿಷ್ಠಿತರು ಜೂಜಾಡಿ ಸಿಕ್ಕಿಬಿದ್ದರೂ ಅವರ ವಿರುದ್ಧ ಕೇಸು ದಾಖಲಿಸದೆ ಹಣವನ್ನು ಮಾತ್ರ ವಶಪಡಿಸಿಕೊಂಡು ಹೋಗಿರುವುದು, ಡಿವಿಆರ್ ಸಾಕ್ಷಿ ನಾಶ ಮಾಡಿರುವುದು, ಇಬ್ಬರು ಸಿಪಿಐಗಳು ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡಿರುವುದು ಗೊತ್ತಾಗಿದೆ. ಲಾಕ್‌ಡೌನ್‌ ಉಲ್ಲಂಘನೆ, ಜೂಜಾಟಗಳು ಅಪರಾಧಗಳಾದರೆ, ಪ್ರತಿಷ್ಠಿತರು ಎಂಬ ಹೆಸರಿನಲ್ಲಿ ಅದನ್ನು ಮುಚ್ಚಿಹಾಕಿರುವುದು ಮತ್ತಷ್ಟು ದೊಡ್ಡ ಅಪರಾಧ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಡ ಬಂದಿದೆ. ಕೆಲವು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಸಿಆರ್‌ಪಿಎಫ್‌ ಯೋಧನೊಬ್ಬನಿಗೆ ಪೊಲೀಸರು ತಾರಾಮಾರಾ ಹೊಡೆದಿರುವುದು ಕೂಡ ಒಂದು ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಕೋಳ ಹಾಕಿ ಕೂರಿಸಿದ್ದ ಯೋಧನನ್ನು ನಂತರ ಬಿಟ್ಟು ಕಳುಹಿಸಲಾಗಿತ್ತು. ಪ್ರಕರಣದಲ್ಲಿ ಸಿಆರ್‌ಪಿಎಫ್‌ ಮುಖ್ಯಸ್ಥರು ಗರಂ ಆಗಿದ್ದು, ಪೊಲೀಸರ ಮುಖಭಂಗವಾಗಿತ್ತು.
ಈ ಪ್ರಕರಣಗಳು, ತಾವು ಕಾನೂನು ಪಾಲಕರು ಎಂಬ ವಾಸ್ತವವನ್ನು ಪೊಲೀಸರು ಹೇಗೆ ಗ್ರಹಿಸಿದ್ದಾರೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವಂತೆ ಮಾಡುತ್ತವೆ. ಕಾನೂನು ಪಾಲನೆ ಎಂದರೇನು? ಅದು ಸಾಮಾನ್ಯ ನಾಗರಿಕರಿಗೆ ಬೇರೆ, ಪ್ರತಿಷ್ಠಿತರಿಗೆ ಬೇರೆಯೋ? ಲಾಕ್‌ಡೌನ್‌ನ ಆರಂಭದ ದಿನಗಳಲ್ಲಿ ಕೆಲವೆಡೆ ಪೊಲೀಸರು ವರ್ತಿಸಿದ ರೀತಿ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಅಗತ್ಯ ಕೆಲಸಕ್ಕಾಗಿ ಬೀದಿಗೆ ಬಂದವರನ್ನು, ತಳ್ಳುಗಾಡಿ ವ್ಯಾಪಾರಸ್ಥರನ್ನೂ ದಾರುಣವಾಗಿ ಥಳಿಸಿದ ಕುಖ್ಯಾತಿ ಅವರಿಗೆ ಬಂದಿತ್ತು. ಇದು ಕಾನೂನಿನ ಪಾಲನೆಯೋ ದುರ್ಬಳಕೆಯೋ? ಕಾನೂನು ಪಾಲಕರು ಸ್ವತಃ ಕಾನೂನಿಗೆ ಅತೀತರೋ? ಯಾರ ಮೇಲೆ ಕೇಸು ದಾಖಲಿಸಬಹುದು, ಯಾರನ್ನು ಥಳಿಸಬಹುದು, ಯಾರನ್ನು ಬಿಡಬಹುದು ಎಂಬುದನ್ನೆಲ್ಲ ಸ್ವತಃ ತಮ್ಮಿಷ್ಟದಂತೆ ನಿರ್ಧರಿಸಬಹುದೇ? ಹಾಗಿದ್ದರೆ ದಂಡಪ್ರಕ್ರಿಯಾ ಸಂಹಿತೆ, ಸಂವಿಧಾನಗಳೆಲ್ಲ ಇರುವುದು ಯಾಕೆ?
ಕಾಯಿದೆ ಪಾಲನೆಯಲ್ಲಿ ಪೊಲೀಸರ ಹೊಣೆ ಮಹತ್ವದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಅಂತೂ ಸರ್ವತ್ರ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅದನ್ನು ಕಾಪಾಡಿಕೊಳ್ಳುವಲ್ಲಿ ಪೊಲೀಸರು ಹೆಚ್ಚು ಮಗ್ನರಾಗಿರಬೇಕಿದೆ. ಅವರ ಹೊಣೆಯೂ ಹೆಚ್ಚು, ಅವರ ಕರ್ತವ್ಯ ನಿರ್ವಹಣೆಯ ಅವಧಿಯೂ ಹೆಚ್ಚಿರಬಹುದು. ಬಿಸಿಲು ಮಳೆಯೆನ್ನದೆ ಅವರು ಜನತೆಯ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುವುದೂ ನಿಜ. ಕೊರೊನಾ ಜಾಗೃತಿಗಾಗಿ ಹಲವು ಸೃಜನಶೀಲ ಉಪಕ್ರಮಗಳನ್ನು ಇಲಾಖೆ ಕೈಗೊಂಡಿದೆ. ಸಂತ್ರಸ್ತರಿಗೂ ನೆರವಾಗಿದೆ. ಇವೆಲ್ಲ ಶ್ಲಾಘನೀಯ. ಆದರೆ ಪೊಲೀಸ್ ವ್ಯವಸ್ಥೆ ಒಂದು ಬಗೆಯ ವಿಶ್ವಾಸವನ್ನೂ ಶ್ರೀಸಾಮಾನ್ಯರಿಂದ ಹೊಂದಿರುವುದು ಪ್ರಜಾಪ್ರಭುತ್ವದಲ್ಲಿ ಅಗತ್ಯ. ಪೊಲೀಸರೇ ಆಗಿದ್ದರೂ ಅವರು ನಿರಂಕುಶರಲ್ಲ. ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ಅವರ ಪ್ರಾಮಾಣಿಕತೆ, ಸ್ನೇಹಮಯತೆಗಳು ಮುಖ್ಯವಾಗುತ್ತವೆ. ಎಲ್ಲರನ್ನೂ ಕಳ್ಳರಂತೆ ನೋಡುವುದು ಹೇಗೆ ಸರಿಯಲ್ಲವೋ, ಕೆಲವರನ್ನು ಮಾತ್ರ ಕಾನೂನಿಗೆ ಅತೀತರಂತೆ ನೋಡಿಕೊಂಡು ಅಂಥವರು ಅಪರಾಧ ಮಾಡಿದಾಗ ಅವರನ್ನು ರಕ್ಷಿಸುವುದೂ ಸರಿಯಲ್ಲ. ಇವೆಲ್ಲ ಪೊಲೀಸ್ ಇಲಾಖೆಯ ಹೆಸರನ್ನು ಕೆಡಿಸುತ್ತವೆ. ಕರ್ನಾಟಕದ ಪೊಲೀಸರಿಗೆ ಉತ್ತಮ ಹೆಸರಿದೆ. ನಮ್ಮ ಪೊಲೀಸರು ಯಾವುದೇ ಕ್ಲಿಷ್ಟ ಅಪರಾಧವನ್ನಾದರೂ ಭೇದಿಸಬಲ್ಲರು; ಗಲಭೆಗಳನ್ನು ನಿಯಂತ್ರಿಸಬಲ್ಲರು. ಆದರೆ ಪ್ರಭಾವಿಗಳ ವಶೀಲಿಗೆ ಮಣಿಯುವುದು, ಇಲಾಖೆಯೊಳಗಿನ ಅಂತಃಕಲಹ, ಅಮಾಯಕರ ಮೇಲೆ ದರ್ಪ ಪ್ರಯೋಗ, ಅನುಚಿತ ಭಾಷಾ ಬಳಕೆ, ಲಾಠಿ ಪ್ರಯೋಗಕ್ಕೆ ಅನುಮತಿ ಸಿಕ್ಕರೆ ನಿರಂಕುಶತ್ವ ತೋರುವಿಕೆ ಇವುಗಳೆಲ್ಲ ಇಲಾಖೆಗೆ ಕಪ್ಪು ಚುಕ್ಕೆ.
ಪೊಲೀಸ್ ಇಲಾಖೆಯಲ್ಲಿ ಸುಧಾರಣೆಯಾಗಬೇಕಿದ್ದರೆ ಅದು ಸಮವಸ್ತ್ರದಲ್ಲಾಗಲೀ ಬಡ್ತಿಯಲ್ಲಾಗಲೀ ಅಲ್ಲ. ಬದಲಾಗಿ ಖಾಕಿ ಧರಿಸಿದವರ ವರ್ತನೆ, ಸಂತ್ರಸ್ತರನ್ನು ಅವರು ನೋಡುವ ಕ್ರಮ, ದೂರುಗಳನ್ನು ಅಟೆಂಡ್ ಮಾಡುವ ರೀತಿ ಮುಂತಾದವುಗಳಲ್ಲಿ ಗಣನೀಯ ಬದಲಾವಣೆ ತಂದು ಸಾರ್ವಜನಿಕರ ವಿಶ್ವಾಸ ಉಳಿಸಿಕೊಳ್ಳುವ ಮೂಲಕ ಆಗಬೇಕಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top