ಕಾರ್ಗಿಲ್ ವಿಜಯಪತಾಕೆಗೆ ಭರ್ತಿ ಹದಿನೈದು ವರ್ಷ

ನಮ್ಮದೇ ರಕ್ತಮಾಂಸಗಳನ್ನು ಹಂಚಿಕೊಂಡು ಹುಟ್ಟಿದ ಪಾಕಿಸ್ತಾನ ಇಂಥ ದೈನೇಸಿ ಸ್ಥಿತಿ ತಲುಪಲು ಆ ದೇಶ ಅನುಸರಿಸುತ್ತ ಬಂದ ವಕ್ರಬುದ್ಧಿ ಕಾರಣವಲ್ಲದೆ ಬೇರೇನು? ಅದೊಂದನ್ನು ಅರಿತುಕೊಂಡಿದ್ದರೆ ಪಾಕಿಸ್ತಾನವೂ ನಮ್ಮಂತೆಯೇ ನೆಮ್ಮದಿಯಿಂದ, ಸುಖವಾಗಿ ಬಾಳಿ ಬದುಕಬಹುದಿತ್ತು. ಸದ್ಯಕ್ಕಂತೂ ಅಂಥ ಭರವಸೆ ಕಾಣಿಸುತ್ತಿಲ್ಲ.

B_Id_303693_Indian_Army_soldiers

ದಿನಗಳು ಎಷ್ಟುಬೇಗ ಉರುಳಿಹೋಗುತ್ತವೆ ನೋಡಿ. ಕಾರ್ಗಿಲ್ ಯುದ್ಧವೆಂಬ ದುಃಸ್ವಪ್ನದಿಂದ ದೇಶ ಮೈಕೊಡವಿಕೊಂಡು ಮೇಲೆದ್ದು ಹದಿನೈದು ವರ್ಷಗಳೇ ಕಳೆದುಹೋದವು. ಆದರೇನಂತೆ 1999ರ ಜುಲೈ 26ರ ಆ ದಿನದ ರೋಮಾಂಚನ ನಮ್ಮ ಕಣ್ಣಲ್ಲಿ, ಮನದಲ್ಲಿ, ಹೃದಯದಲ್ಲಿ ಅಷ್ಟೇ ಏಕೆ ನಮ್ಮ ಉಸಿರಲ್ಲೂ ಸದಾ ಹಚ್ಚಹಸಿರು. ಕಾರ್ಗಿಲ್ ಪ್ರದೇಶದ ದ್ರಾಸ್, ಬಟಾಲಿಕ್, ಟೋಲೋಲಿಂಗ್ ಹೀಗೆ ಒಂದೊಂದೇ ಹಿಮಶಿಖರಗಳನ್ನು ಅತಿಕ್ರಮಿಸಿ ಅಡಗಿ ಕುಳಿತಿದ್ದ ಪಾಕಿಗಳನ್ನು ಹುಡುಕಿ ಹುಡುಕಿ ಹೊಡೆದು ಹೊರಗಟ್ಟುತ್ತ ಸಾಗಿದ ನಮ್ಮ ವೀರಯೋಧರು, ಅಂತಿಮವಾಗಿ ಪಾಖಂಡಿಗಳಿಗೆ ಮಣ್ಣುಮುಕ್ಕಿಸಿ ವಿಜಯಪತಾಕೆ ಹಾರಿಸಿದ ದಿನ ನಮ್ಮ ಪಾಲಿಗೆ ಹೆಮ್ಮೆಯ ಕ್ಷಣವಲ್ಲದೇ ಮತ್ತೇನು.

ಹಾಗಂತ ಕೇವಲ ಹೆಮ್ಮೆಯಿಂದ ಬೀಗಿದರೆ, ಅಭಿಮಾನದ ಮಾತುಗಳನ್ನಾಡಿದರೆ ಸಾಕೇನು? ಕಾರ್ಗಿಲ್ ಗೆಲುವಿನ ಜತೆಗೇ ಕಾಡುವ ನೆನಪುಗಳು, ನೋವು, ಬೇಸರದ ಆ ಘಳಿಗೆಗಳನ್ನೂ ಮೆಲುಕುಹಾಕದೆ ಇರೋದು ಹೇಗೆ. ವಿನಾಕಾರಣ ಕಾಲುಕೆರೆದು ಕ್ಯಾತೆ ತೆಗೆದು ಒಳನುಸುಳಿದ ಶತ್ರುಸಂತಾನವನ್ನು ಆಚೆಹಾಕುವ ಹೊತ್ತಿಗೆ ನಾವು ಅನುಭವಿಸಿದ ಸಾವುನೋವುಗಳೆಷ್ಟು… ಲೆಕ್ಕಹಾಕಿದರೆ ನಾವು ಗಳಿಸಿದ ಗೆಲುವಿನ ಸಂತಸಕ್ಕಿಂತ ಕಳೆದುಕೊಂಡಿದ್ದರ ನೋವಿನ ಪಾಲೇ ಹೆಚ್ಚು.

ಕಾರ್ಗಿಲ್‍ನಲ್ಲಿ ನಡೆದದ್ದು ಒಟ್ಟು ಎಪ್ಪತ್ನಾಲ್ಕು ದಿನಗಳ ಘನಘೋರ ಯುದ್ಧ. ದಿನಕ್ಕೆ ಸರಾಸರಿ ಹದಿನೈದು ಕೋಟಿ ರೂಪಾಯಿಗಳನ್ನು ನಮ್ಮ ಸೇನೆ ಖರ್ಚುಮಾಡಿತು. ಯುದ್ಧ ಮುಗಿದು ಗೆಲುವಿನ ನಗೆ ಬೀರುವ ಹೊತ್ತಿಗೆ ಆದ ಒಟ್ಟು ವೆಚ್ಚ ಸಾವಿರದ ನೂರು ಕೋಟಿ ರೂಪಾಯಿಯ ಗಡಿ ದಾಟಿದೆ. ಖರ್ಚಾದ ದುಡ್ಡಿನ ಲೆಕ್ಕ ಅಷ್ಟು ದೊಡ್ಡ ವಿಷಯವೇನಲ್ಲ. ಆದರೆ ಯುದ್ಧದ ವೇಳೆ ನಾವು ಕಳೆದುಕೊಂಡ ದೇವದುರ್ಲಭ ಯೋಧರ ಜೀವದ ಲೆಕ್ಕವಿದೆಯಲ್ಲ ಅದಕ್ಕೆ ಯಾರಿಂದಲೂ ಬೆಲೆಕಟ್ಟಲು ಅಸಾಧ್ಯ. ಭಾರತದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಯೋಧರು ಪ್ರಾಣದಹಂಗು ತೊರೆದು ಕಾದಾಡಿ ಯುದ್ಧವನ್ನೇನೋ ಗೆದ್ದರು. ಆದರೆ ಅಷ್ಟೊತ್ತಿಗೆ ನಮ್ಮ 527 ಮಂದಿ ಯೋಧರು ರಣರಂಗದಲ್ಲೇ ಪ್ರಾಣಚೆಲ್ಲಿ ವೀರಸ್ವರ್ಗ ಸೇರಿದ್ದರು. ಸಾವಿರದ ಮುನ್ನೂರಕ್ಕೂ ಹೆಚ್ಚು ಯೋಧರು ಗಾಯಾಳುಗಳಾದರು. ಅವರಲ್ಲಿ ಬಹಳಷ್ಟು ಮಂದಿ ಶಾಶ್ವತವಾಗಿ ಕಣ್ಣು-ಕೈ-ಕಾಲುಗಳನ್ನು ಕಳೆದುಕೊಂಡು ಪರಾವಲಂಬಿಗಳಾದರು. ಪಾಕಿಸ್ತಾನದೊಂದಿಗೆ ಯುದ್ಧದಲ್ಲಿ ಮುನ್ನುಗ್ಗಿದ ಆರು ಯೋಧರು ಈವರೆಗೂ ಪತ್ತೆಯಾಗಿಲ್ಲ. ಅವರೆಲ್ಲ ಬದುಕಿ ಬರುತ್ತಾರೆಂಬ ಆಸೆ ಇಟ್ಟುಕೊಳ್ಳುವುದಾದರೂ ಹೇಗೆ?

ಯುದ್ಧ ಅಂದಮೇಲೆ ಸಾವು-ನೋವು, ಕಷ್ಟನಷ್ಟಗಳೆಲ್ಲ ಇದ್ದz್ದÉೀ ಅಂತ ಹೇಳಬಹುದು. ಆದರೆ ಉಗ್ರರ ಪೆÇೀಷಾಕಿನಲ್ಲಿ ಕಾಶ್ಮೀರದೊಳಕ್ಕೆ ನುಸುಳಿದ್ದ ಪಾಕ್ ಸೈನಿಕರು ನಮ್ಮ ಯೋಧರ ಮೇಲೆ ನಡೆಸಿದ ಪೈಶಾಚಿಕ ಕೃತ್ಯವನ್ನು ಸಹಿಸಿಕೊಳ್ಳುವುದು ಹೇಗೆ? ಯುದ್ಧಕೈದಿಗಳನ್ನೂ ಗೌರವದಿಂದ ನಡೆಸಿಕೊಳ್ಳಬೇಕೆಂಬುದು ನಿಯಮ. ಪ್ರಪಂಚದ ಬೇರೆಲ್ಲಾ ದೇಶಗಳು ಈ ನಿಯಮವನ್ನು ಅನುಸರಿಸುತ್ತಿವೆ. ಆದರೆ ಮಾನವೀಯತೆಯ ಗಂಧವೇ ಇಲ್ಲದ ಪಾಕಿಗಳು ನಮ್ಮ ಸೈನಿಕರನ್ನು ನಡೆಸಿಕೊಂಡ ರೀತಿ ಇದೆಯಲ್ಲ, ಅದು ತೀರಾ ಅಮಾನವೀಯ. ಸಹಿಸಲು ಅಸಾಧ್ಯವಾದದ್ದು.

ಈ ಮಾತಿಗೆ ಒಂದು ಉದಾಹರಣೆ ಸಾಕು. ಪಾಕಿಗಳು ಭಾರತದ ಗಡಿಯೊಳಕ್ಕೆ ಮರಾಮೋಸದಿಂದ ಒಳನುಸುಳಿದ್ದಾರೆ ಎಂಬ ಮಾಹಿತಿ ದನಗಾಹಿಗಳಿಂದ ಭಾರತೀಯ ಸೇನೆಗೆ ಸಿಕ್ಕಿತ್ತು. ಈ ಮಾಹಿತಿಯ ಬೆನ್ನತ್ತಿ ಪರಿಶೀಲನೆಗೆಂದು ಹೊರಟೇಬಿಟ್ಟರು ಕ್ಯಾ. ಸೌರಭ್ ಕಾಲಿಯಾ ಮತ್ತು ಐವರು ಸೈನಿಕರು. ಆದರೆ, ದುರದೃಷ್ಟವಶಾತ್ ಕಾಲಿಯಾ ಮತ್ತು ಸಂಗಡಿಗರು ಪಾಕ್ ಸೈನಿಕರ ಕೈಗೆ ಸೆರೆಸಿಕ್ಕಿದರು. ಹಾಗೆ ಕೈಗೆ ಸಿಕ್ಕವರಿಗೆ ಪಾಕ್ ಸೈನಿಕರು ನಿರಂತರವಾಗಿ ಚಿತ್ರಹಿಂಸೆ ನೀಡಿದರು. ನೀಚತನದಿಂದ ಸೈನಿಕ ಗುಪ್ತಮಾಹಿತಿಯನ್ನು ಹೊರತೆಗೆಯುವ ಪ್ರಯತ್ನ ಮಾಡಿದರು. ಹಾಗೆ ಮಾಡುವ ವೇಳೆ ಅಕ್ಷರಶಃ ಸೌರಭ್ ಮತ್ತು ಇತರರ ದೇಹದ ಒಂದೊಂದೇ ಭಾಗವನ್ನು ಪಾಕ್ ಸೈನಿಕರು ಕತ್ತರಿಸುತ್ತಲೇ ಹೋದರು. ಕೊನೆಗೊಮ್ಮೆ ಇಪ್ಪತ್ತೆರಡು ದಿನಗಳ ಬಳಿಕ ಕಾಲಿಯಾ ಮತ್ತಿತರರ ದೇಹಗಳನ್ನು ಪಾಕ್ ಸೈನಿಕರು ಕಣ್ತೋರಿಕೆಗೆ ಭಾರತಕ್ಕೆ ಹಸ್ತಾಂತರಿಸಿದರು. ಆಮೇಲೆ ಗೊತ್ತಾಯಿತು, ಕಾಲಿಯಾರ ಹಾಗೂ ಇತರರ ಕಣ್ಣುಗಳನ್ನು ಕೀಳಲಾಗಿತ್ತು. ಕೈಕಾಲುಗಳನ್ನು ಕತ್ತರಿಸಲಾಗಿತ್ತು. ರುಂಡದ ಜತೆಗೆ ಮುಂಡವೇ ಇರಲಿಲ್ಲ. ಇದು ಪಾಕಿಗಳ ಕ್ರೌರ್ಯಕ್ಕೆ ಒಂದು ನಿದರ್ಶನವಷ್ಟೆ. ಸೌರಭ್ ಕಾಲಿಯಾ ಮಾತ್ರವಲ್ಲ, ಕ್ಯಾಪ್ಟನ್ ವಿಕ್ರಂ ಬಾತ್ರಾ, ವಿಜಯಕಾಂತ್ ಥಾಪರ್, ಸದು ಚೆರಿಯನ್, ಜೆರ್ರಿ ಪ್ರೇಮ್‍ರಾಜ್, ಮೇಜರ್ ಪದ್ಮಪಾಣಿ ಆಚಾರ್ಯ, ಸೋನಮ್ ವಾಂಗ್‍ಚುಕ್, ಲೆಫ್ಟಿನೆಂಟ್ ಕನಂದ್ ಭಟ್ಟಾಚಾರ್ಯ, ಬಲವಾನ್ ಸಿಂಗ್, ಕೀಸಿಂಗ್ ಕ್ಲಿಫರ್ಡ್ ನಿಂಗ್ರುಮ್, ಸಜು ಚೆರಿಯನ್, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಹೀಗೆ ನಮ್ಮ ಹತ್ತಾರು ಯೋಧರು ಪಾಕ್ ಸೈನಿಕರಿಂದ ಚಿತ್ರಹಿಂಸೆ ಅನುಭವಿಸುತ್ತಲೇ ಪ್ರಾಣಬಿಟ್ಟರು.

ಆದರೆ ಇದಕ್ಕೆಲ್ಲ ನಮ್ಮ ಯೋಧರು ಅಂಜಲಿಲ್ಲ, ಅಳುಕಲಿಲ್ಲ. ಹಿಡಿದ ಛಲವನ್ನು ಅರ್ಧದಲ್ಲೇ ಕೈಚೆಲ್ಲಲಿಲ್ಲ. ಗೆಲುವು ದಕ್ಕುವವರೆಗೆ ವಿರಮಿಸಲಿಲ್ಲ. ನಮ್ಮ ವೀರಯೋಧರ ಜೀವನ ಪರಂಪರೆಯೇ ಅಂಥದ್ದು. ಅದಕ್ಕೆ ಸುಬೇದಾರ್ ರವೈಲ್ ಸಿಂಗ್‍ನ ಜೀವನಗಾಥೆಯೇ ಒಂದು ಉತ್ತಮ ಉದಾಹರಣೆ. ಸೇನಾಪದಕ ವಿಜೇತರಾಗಿದ್ದ ಬಿಷ್ನಾಹುವಿನ ರವೈಲ್ ಸಿಂಗ್ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಟೈಗರ್ ಹಿಲ್ಲನ್ನು ಶತ್ರುಗಳ ವಶದಿಂದ ಮುಕ್ತಗೊಳಿಸುವ ಹೋರಾಟ ಮಾಡುತ್ತಲೇ ವೀರಸ್ವರ್ಗ ಕಂಡವರು. ರವೈಲ್ ಸಿಂಗ್ ಬೆನ್ನಿಗೆ ಪತ್ನಿ ಸುರಿಂದರ್ ಕೌರ್, ತಾಯಿ ಚರಣ್ ಕೌರ್, ಪುತ್ರರಾದ ದಿಲಾವರ್ ಸಿಂಗ್, ಭಕ್ತಾವರ್ ಸಿಂಗ್, ತೇವೇಂದ್ರ ಸಿಂಗ್ ಹೀಗೆ ದೊಡ್ಡ ಕುಟುಂಬವಿತ್ತು. ತನ್ನಂತೆ ಮಕ್ಕಳೂ ಸೇನೆ ಸೇರಿ ದೇಶಕಾಯುವ ಕೆಲಸ ಮಾಡಬೇಕೆಂಬ ಮಹದಾಸೆ ಅವರಿಗಿತ್ತು. ಹೀಗಾಗಿ ತಂದೆಯ ಸಾವಿನಿಂದ ಅವರ್ಯಾರೂ ಧೃತಿಗೆಡುವ ಪ್ರಶ್ನೆಯೇ ಇರಲಿಲ್ಲ. ಆಸೆ, ಸಂಕಲ್ಪ ಮಾತ್ರವಲ್ಲ, ರವೈಲ್ ಆಶಯ ಮುಂದೆ ಆಚರಣೆಗೂ ಬಂತು. ರವೈಲ್ ಸಿಂಗ್‍ರ ಎರಡನೇ ಮಗ ಭಕ್ತಾವರ್ ಸಿಂಗ್ 2009ರಲ್ಲಿ ಭಾರತೀಯ ಸೇನೆ ಸೇರಿ ಕಾರ್ಗಿಲ್ ಪ್ರದೇಶದಲ್ಲೇ ದೇಶಕಾಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾನೆ. ಹದಿನೇಳು ವರ್ಷ ವಯಸ್ಸಿನ ತೇವೇಂದ್ರ ಸಿಂಗ್ ಸೇನೆ ಸೇರಲು ಬೇಕಾಗುವ ಅಗತ್ಯ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾನೆ. ಇದೆಲ್ಲದಕ್ಕಿಂತ ಹೆಚ್ಚಾಗಿ ರವೈಲ್ ಸಿಂಗ್‍ರ ವಿಧವಾಪತ್ನಿ ಸುರಿಂದರ್ ಕೌರ್ ಎದೆಯಲ್ಲಿನ ಕೆಚ್ಚನ್ನು ಅವರ ಮಾತಲ್ಲೇ ಕೇಳಬೇಕು: “ದೇಶಕ್ಕಾಗಿ ಪ್ರಾಣ ಅರ್ಪಿಸುವುದು ನಮ್ಮ ಕುಟುಂಬದ ಪರಂಪರೆ. ಅದಕ್ಕಾಗಿ ನಮ್ಮೊಳಗೆ ದುಃಖ, ಬೇಸರ ಯಾವುದೂ ಇಲ್ಲ. ದೇಶಸೇವೆಯ ಕೆಚ್ಚಿನ ಸೆಲೆ ನಮ್ಮ ಕುಟುಂಬದ ರಕ್ತದಲ್ಲಿ ತಲತಲಾಂತರದಿಂದಲೂ ಹರಿದುಕೊಂಡು ಬಂದಿದೆ. ಅದಕ್ಕಾಗಿ ನನಗೆ ಹೆಮ್ಮೆಯಿದೆ”. ಅವರ ಮಾತು ನೂರಕ್ಕೆ ನೂರು ಸತ್ಯ. ರವೈಲ್ ಸಿಂಗ್‍ರ ತಂದೆ ಜೋಗಿಂದರ್ ಸಿಂಗ್ ಕೂಡ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಿ ನಿವೃತ್ತರಾದವರು. ಸೋದರಮಾವ (ಸುರಿಂದರ್ ಸಿಂಗ್ ತಂದೆ ) ವೀರ್ ಸಿಂಗ್ ಕೂಡ ಸೇನೆಯಲ್ಲಿ ಕೆಲಸ ಮಾಡಿದವರು. ರವೈಲ್ ಸಿಂಗ್ ಸಹೋದರ ಲಾಟ್ ಸಿಂಗ್ ಕಾರ್ಗಿಲ್‍ನಲ್ಲೇ ಗಡಿ ಕಾಯುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಟೈಗರ್ ಹಿಲ್ಲನ್ನು ಪಾಕಿಗಳಿಂದ ಮುಕ್ತ ಮಾಡುವುದಕ್ಕೋಸ್ಕರ ಇಬ್ಬರೂ ಒಟ್ಟಾಗಿಯೇ ಸೆಣೆಸಿದ್ದರು. ಸಹೋದರ ಲಾಟ್ ಸಿಂಗ್‍ನ ಕಣ್ಣೆದುರಲ್ಲೇ ಅಣ್ಣ ರವೈಲ್ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದು. ಇದು ಒಬ್ಬ ರವೈಲ್ ಸಿಂಗ್ ಕುಟುಂಬದ ಕತೆ. ಇಂಥ ಅದೆಷ್ಟು ಯೋಧರ ಜೀವನದ ರೋಚಕ ಕತೆಗಳು ಭಾರತಮಾತೆಯ ಗರ್ಭದಲ್ಲಿ ಹುದುಗಿದೆಯೋ?

ಕಾರ್ಗಿಲ್ ಯುದ್ಧದ ನೆನಪನ್ನು ಮೆಲುಕು ಹಾಕುವಾಗ ಆಗ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರನ್ನು ನೆನೆಯದೇ ಇರಲಾದೀತೇ? ದೇಶಕ್ಕಾಗಿ ಪ್ರಾಣವನ್ನೇ ಒತ್ತೆಯಿಟ್ಟು ಹೋರಾಡುವ ಸೈನಿಕರಿಗೆ ದೂರದಿಂದ ಶುಭಾಶಯ ಹೇಳುವ ರಾಜಕೀಯ ನೇತಾರರು ಬೇಕಾದಷ್ಟು ಮಂದಿ ಸಿಗುತ್ತಾರೆ. ಆದರೆ ಸ್ವಯಂ ಯುದ್ಧರಂಗಕ್ಕೆ ಹೋಗಿ, ಅಲ್ಲಿನ ಸೈನಿಕರನ್ನು ಭೇಟಿ ಮಾಡಿ, ಹುರಿದುಂಬಿಸಿದ ಆದರ್ಶ ಮೆರೆದವರು ಎಷ್ಟು ಮಂದಿ ಸಿಗುತ್ತಾರೆ ಹೇಳಿ. ವಾಜಪೇಯಿ ಅಂತಹ ಸಾಹಸ ಮಾಡಿದ ಈ ದೇಶದ ಮೊದಲ ಪ್ರಧಾನಿ ಎನಿಸಿಕೊಂಡರು. ಭಾರತ-ಪಾಕಿಸ್ತಾನದ ಯೋಧರ ನಡುವೆ ಕಾರ್ಗಿಲ್‍ನಲ್ಲಿ ಭೀಕರ ಕಾಳಗ ನಡೆಯುತ್ತಿರುವಾಗ ಜೂನ್ 13ರಂದು ವಾಜಪೇಯಿ ಕಾರ್ಗಿಲ್ ವಲಯಕ್ಕೆ ಭೇಟಿ ಕೊಡುವ ಕಾರ್ಯಕ್ರಮ ನಿಗದಿ ಆಯಿತು. ಈ ಭೇಟಿಯನ್ನು ಪಾಕಿಸ್ತಾನ ಅತ್ಯಂತ ಗಂಭೀರವಾಗಿ ಪರಿಗಣಿಸಿತ್ತು. ಕಾಶ್ಮೀರದಲ್ಲಿ ಬಂದೂಕು ಹೆಗಲೇರಿಸಿಕೊಂಡು ನಿಂತಿದ್ದ ಉಗ್ರರು ವಾಜಪೇಯಿ ಭೇಟಿಯನ್ನು ಮತ್ತಷ್ಟು ಗಂಭೀರವಾಗಿ ತೆಗೆದುಕೊಂಡರು. ಭಾರತದ ಪ್ರಧಾನಿ ಅದ್ಹೇಗೆ ಇಲ್ಲಿಗೆ ಭೇಟಿ ನೀಡಿ ಜೀವಂತ ವಾಪಸ್ ಹೋಗುತ್ತಾರೆ ನೋಡುತ್ತೇವೆಂದು ಬಹಿರಂಗ ಸವಾಲು ಹಾಕಿದರು. ವಾಜಪೇಯಿ ಭೇಟಿ ನೀಡುವ ಕಾರ್ಯಕ್ರಮಕ್ಕೆ ಸರಿಯಾಗಿ ಪಾಕಿಸ್ತಾನದ ಕಡೆಯಿಂದ ಷೆಲ್ ದಾಳಿ ವೇಗ ಪಡೆದುಕೊಂಡಿತು. ಆದರೆ ಅದ್ಯಾವುದಕ್ಕೂ ಜಗ್ಗದ ವಾಜಪೇಯಿ ಕಾರ್ಗಿಲ್‍ನ ಮುಂಚೂಣಿ ಗ್ರಾಮ ಬರೂಗೆ ಬಂದಿಳಿದೇ ಬಿಟ್ಟರು. ಅವರು ಹೆಲಿಪ್ಯಾಡ್‍ನಲ್ಲಿ ಬಂದಿಳಿಯುವ ಹೊತ್ತಿಗೆ ಅನತಿ ದೂರದಲ್ಲೇ ಐದು ಶಕ್ತಿಯುವ ಷೆಲ್‍ಗಳು ಸಿಡಿದವು. ಸೈನಿಕರು ಹಾಗೂ ಸ್ಥಳೀಯ ನಿವಾಸಿಗಳನ್ನು ಉದ್ದೇಶಿಸಿ ವಾಜಪೇಯಿ ಭಾಷಣ ಮಾಡಬೇಕಿದ್ದ ವಿಭಾಗೀಯ ಸೈನಿಕ ಕಚೇರಿಯನ್ನು ಷೆಲ್ ದಾಳಿ ನಡೆಸಿ ಸಂಪೂರ್ಣವಾಗಿ ಧ್ವಂಸಗೊಳಿಸಲಾಯಿತು. ಆದರೂ ಉಗ್ರರ ಸವಾಲಿಗೆ ಪ್ರತಿಸವಾಲು ಹಾಕಿದ ವಾಜಪೇಯಿ ನಿಗದಿತ ಸಮಯಕ್ಕೆ ಬೇರೊಂದು ಸ್ಥಳದಲ್ಲಿ ಕೆಚ್ಚೆದೆಯ ಸೈನಿಕರನ್ನು ಉದ್ದೇಶಿಸಿ ಅಮೋಘ ಭಾಷಣ ಮಾಡಿದರು. “ಇಡೀ ದೇಶ ನಿಮ್ಮೊಂದಿಗಿದೆ, ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ, ಅಭಿಮಾನವಿದೆ. ಮುನ್ನುಗ್ಗಿ ಶತ್ರುಗಳನ್ನು ಸದೆಬಡಿಯಿರಿ ಬಿಡಬೇಡಿ” ಎಂದು ಅವರು ಸೈನಿಕರನ್ನು ಹುರಿದುಂಬಿಸಿದರು. ವಾಜಪೇಯಿ ದಿಟ್ಟತನವನ್ನು ಆಗಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಬಾಯ್ತುಂಬ ಕೊಂಡಾಡಿದರು. “ನಿಮ್ಮ ಜೀವವನ್ನೇ ಪಣಕ್ಕಿಟ್ಟು ಸೈನಿಕರ ನೈತಿಕಸ್ಥೈರ್ಯ ಹೆಚ್ಚಿಸಿದ್ದಕ್ಕಾಗಿ ನಿಮ್ಮ ಮೇಲಿನ ಅಭಿಮಾನ, ಪ್ರೀತಿ ನೂರ್ಮಡಿಯಾಗಿದೆ” ಎಂದು ನಾರಾಯಣನ್ ತಮಗಾದ ಸಂತಸವನ್ನು ಬಹಿರಂಗವಾಗಿ ಹಂಚಿಕೊಂಡಿದ್ದರು.

ಹಾಗೇ ಕಾರ್ಗಿಲ್‍ನಲ್ಲಿ ಪಾಕ್ ಯೋಧರು ಒಳನುಸುಳಿದ್ದನ್ನು ಗಮನಿಸಿ, ತಕ್ಷಣ ಸೇನೆಗೆ ಮಾಹಿತಿ ನೀಡಿ ಮುಂದೆ ಆಗಬಹುದಾಗಿದ್ದ ಭಯಂಕರ ಅನಾಹುತವನ್ನು ತಡೆದ ದನಗಾಹಿಗಳನ್ನು ಈ ಹೊತ್ತಿನಲ್ಲಿ ನೆನೆಸಿಕೊಳ್ಳದೇ ಹೋದರೆ ಹೇಗೆ… ಶ್ರೀನಗರದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿರುವ ಕಾರ್ಗಿಲ್ ಜಿಲ್ಲೆ ಗಡಿ ನಿಯಂತ್ರಣ ರೇಖೆಯಿಂದ ಒಳಕ್ಕೆ ಪಾಕ್ ಸೈನಿಕರು ಒಳನುಸುಳಿದ್ದನ್ನು ಮೊದಲು ನೋಡಿದವರು ಅಲ್ಲಿನ ದನಗಾಹಿಗಳು. ಓದು-ಬರಹ ಗೊತ್ತಿರದ ದನಕಾಯುವ ಹಳ್ಳಿಹೈದರ ದೇಶಪ್ರೇಮವನ್ನು ಹೇಗೆಂದು ಬಣ್ಣಿಸುವುದು. ಆ ನಂತರದ ಬೆಳವಣಿಗೆಗಳೆಲ್ಲವೂ ಒಂದು ರೋಚಕ ಇತಿಹಾಸ. ಮೇ 2ರಂದು ಕಾರ್ಗಿಲ್ ಸೆಕ್ಟರಿನಲ್ಲಿ ಶುರುವಾದ ದೇಶರಕ್ಷಣೆಯ `ಆಪರೇಷನ್ ವಿಜಯ’ ಜುಲೈ 26ರಂದು ಟೋಲೋಲಿಂಗ್ ಪರ್ವತ ಶಿಖರದಿಂದ ಪಾಕ್ ಸೈನಿಕರನ್ನು ಸಂಪೂರ್ಣವಾಗಿ ತೆರವುಗೊಳಿಸಿ ತಿರಂಗಾ ಅರಳಿಸುವ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಅಷ್ಟೇ ಅಲ್ಲ, ತನ್ನ ಶಕ್ತಿ ಸಾಮಥ್ರ್ಯವನ್ನು ಅರಿಯದೇ ಭಾರತದ ಮೇಲೆ ಯುದ್ಧಸಾರುವ ಮೂರ್ಖ ಪಾಕಿಸ್ತಾನಕ್ಕೆ ಭಾರತ ನಾಲ್ಕನೇ ಬಾರಿಗೆ ತಕ್ಕ ಪಾಠ ಕಲಿಸಿತು.

ನಮ್ಮದೇ ರಕ್ತಮಾಂಸಗಳನ್ನು ಹಂಚಿಕೊಂಡು ಹುಟ್ಟಿದ ಪಾಕಿಸ್ತಾನ ಇಂಥ ದೈನೇಸಿ ಸ್ಥಿತಿ ತಲುಪಲು ಆ ದೇಶ ಅನುಸರಿಸುತ್ತ ಬಂದ ವಕ್ರಬುದ್ಧಿ ಕಾರಣವಲ್ಲದೆ ಬೇರೇನು? ಅದೊಂದನ್ನು ಅರಿತುಕೊಂಡಿದ್ದರೆ ಪಾಕಿಸ್ತಾನವೂ ನಮ್ಮಂತೆಯೇ ನೆಮ್ಮದಿಯಿಂದ, ಸುಖವಾಗಿ ಬಾಳಿ ಬದುಕಬಹುದಿತ್ತು. ಸದ್ಯಕ್ಕಂತೂ ಅಂಥ ಭರವಸೆ ಕಾಣಿಸುತ್ತಿಲ್ಲ. ಹೌದೋ ಅಲ್ಲವೋ…

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top