ರೈತರನ್ನು ಕಾಡದಿರಲಿ ಲಾಕ್‌ಡೌನ್: ಬೆಲೆ ರೈತನಿಗೆ, ಬೆಳೆ ಗ್ರಾಹಕನಿಗೆ ತಲುಪಲಿ
ದೇಶಾದ್ಯಂತ ಕೊರೊನಾ ಲಾಕ್‌ಡೌನ್‌ನಿಂದ ಕೃಷಿಕರು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಮಾರಲು ಪಟ್ಟಣಗಳನ್ನು, ಮಾರುಕಟ್ಟೆಗಳನ್ನು ಅವಲಂಬಿಸಿದ ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಹೆಚ್ಚಿನ ಸಂಕಟ ಅನುಭವಿಸುತ್ತಿರುವವರು ಹಣ್ಣುಗಳು ಹಾಗೂ ತರಕಾರಿಯಂಥ ಬೇಗನೆ ಹಾಳಾಗಬಲ್ಲ ಪದಾರ್ಥಗಳನ್ನು ಬೆಳೆದ ತೋಟಗಾರಿಕೆ ರೈತರು. ಕಲ್ಲಂಗಡಿ ಬೆಳೆಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು, ಕೆಲವು ರೈತರು ಕಲ್ಲಂಗಡಿ, ದ್ರಾಕ್ಷಿ , ಟೊಮೇಟೊ ಮುಂತಾದ ಬೆಳೆಗಳನ್ನು ರಸ್ತೆಯಲ್ಲಿ ಸುರಿದು ಹೋಗಿರುವುದು ಪರಿಸ್ಥಿತಿಯ ತೀವ್ರತೆಯನ್ನು ಪ್ರತಿಬಿಂಬಿಸುತ್ತದೆ. ಈ ಬೆಳೆಗಳು ಒಂದೆರಡು ದಿನಗಳಲ್ಲಿ ರೈತನಿಂದ ಗ್ರಾಹಕನವರೆಗೆ ತಲುಪುವ ಶೀಘ್ರ ಮಾರಾಟದ ಸರಣಿಯನ್ನು ಹೊಂದಿರಬೇಕು. ಮಧ್ಯೆ ಎಲ್ಲೋ ಒಂದು ಕಡೆ ಕೊಂಡಿ ತುಂಡಾದರೂ ಬೆಳೆ ಹಾಳಾಗುತ್ತದೆ; ಬೆಳೆಯಾಗಲೀ ಬೆಲೆಯಾಗಲೀ ರೈತನ ಕೈಗೆ ಸಿಗುವುದಿಲ್ಲ. ವಾರ್ಷಿಕ ಬೆಳೆ ಬೆಳೆಯುವವರು, ತರಕಾರಿ- ಹಣ್ಣು ಬೆಳೆಯುವವರು ಸಾಮಾನ್ಯವಾಗಿ ಸಾಲ ಮಾಡಿ ಬೆಳೆದಿರುತ್ತಾರೆ. ಆಯಾ ವರ್ಷದ ಬೆಳೆಗೆ ತಕ್ಷಣವೇ ಪ್ರತಿಫಲ ಸಿಗದೆ ಹೋದಾಗ ಕೃಷಿಕ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ.
ಸದ್ಯ ಲಾಕ್‌ಡೌನ್‌ನಿಂದ ಕೃಷಿ ಉತ್ಪನ್ನಗಳ ಮೇಲಾಗುವ ದುಷ್ಪರಿಣಾಮ ತಡೆಯುವುದಕ್ಕೆ ರಾಜ್ಯ ಸರಕಾರ ಮುಂದಾಗಿ, ಬಿಗಿ ಕ್ರಮಗಳಲ್ಲಿ ಕೆಲವು ರಿಯಾಯಿತಿ ಘೋಷಿಸಿರುವುದು ಸಮಾಧಾನಕರ. ಹಣ್ಣು, ತರಕಾರಿ ಹಾಗೂ ದಿನಸಿಗಳ ಸಾಗಣೆ ಹಾಗೂ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇದು ರೈತರು ಮತ್ತು ಬೆಲೆ ಏರಿಕೆಯಿಂದ ದಿಗಿಲಾಗಿದ್ದ ಗ್ರಾಹಕರಿಗೆ ಸಮಾಧಾನ ತರಬಹುದು. ಹಣ್ಣು, ತರಕಾರಿ, ದಿನಸಿ ಅಂಗಡಿ ದಿನವಿಡೀ ತೆರೆಯಲು ಸೂಚನೆ ಕೊಟ್ಟಿರುವುದು ರೈತರಿಗೆ ಭರವಸೆದಾಯಕ. ಹಾಪ್‌ಕಾಮ್ಸ್ ಮೂಲಕ ಮಾರಾಟಕ್ಕೆ ಅವಕಾಶವಿದೆ. ರೈಲುಗಳ ಮೂಲಕ ಹೊರ ರಾಜ್ಯಗಳಿಗೆ ಸಾಗಾಟಕ್ಕೆ ಅವಕಾಶ ಕೊಟ್ಟಿರುವುದು, ವೈನರಿಗಳ ಉತ್ಪಾದನೆ ಮುಂದುವರಿಕೆ, ದಿನಸಿ ಹಾಗೂ ತರಕಾರಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವ ಭರವಸೆಗಳು ಅಗತ್ಯವಾಗಿದ್ದವು. ಜೊತೆಗೇ ಬೆಳೆ ಕಟಾವು ಯಂತ್ರ ಮೊದಲಾದ ಕೃಷಿ ಉಪಕರಣಗಳು ಕೂಡ ಈ ಬೇಸಾಯ ಕಾಲದ ಅಗತ್ಯಗಳಾಗಿದ್ದು, ಅವುಗಳ ಸರಬರಾಜಿಗೆ ಅಡ್ಡಿಯಾಗದಂತೆ ಕ್ರಮ ಕೈಗೊಂಡಿರುವುದು ಸೂಕ್ತ. ಈ ನಡುವೆ ಏಜೆಂಟರು, ಮಧ್ಯವರ್ತಿಗಳು ಲಾಕ್‌ಡೌನ್ ಸಂದರ್ಭವನ್ನು ಉಪಯೋಗಿಸಿಕೊಂಡು ರೇಷ್ಮೆ ಸೇರಿದಂತೆ ಹಲವು ಬೆಳೆಗಳಿಗೆ ಬೆಲೆ ಇಳಿಸಲು ಯತ್ನಿಸಿದ್ದೂ ಸರಕಾರದ ಗಮನಕ್ಕೆ ಬಂದಿದೆ. ಇಂಥವರ ಮೇಲೆ ತುರ್ತು ಕಠಿಣ ಕ್ರಮ ಜರುಗಬೇಕಿದೆ.
ಇವೆಲ್ಲವೂ ಬರಿಯ ಘೋಷಣೆಗಳಾಗಿ ಅಷ್ಟೇ ಉಳಿದು ಅನುಷ್ಠಾನ ಸೊರಗಿದರೆ ಫಲವಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಈ ಭರವಸೆಗಳು ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಬೇಕು. ಲಾಕ್‌ಡೌನ್ ಸಂದರ್ಭದ ಸಾಮಾಜಿಕ ಅಂತರದ ಸೂಚಿಯನ್ನು ಕಾಯ್ದುಕೊಂಡೇ ಇದನ್ನೆಲ್ಲ ಅನುಷ್ಠಾನಿಸಬೇಕಿದೆ. ಈಗಾಗಲೇ ಬಿಕ್ಕಟ್ಟಿನಲ್ಲಿರುವ ಕೃಷಿ ಕ್ಷೇತ್ರ ಕೊರೊನಾ ವೈರಸ್‌ನಿಂದಾಗಿ ಮತ್ತಷ್ಟು ಏಟು ತಿನ್ನುವಂತೆ ಆಗಬಾರದು. ಕೃಷಿಕನಿಗೆ ಯಾವುದೇ ಲಾಬಿಯಿಲ್ಲ. ಹೀಗಾಗಿ ಸರಕಾರವೇ ಆತನ ನೆರವಿಗೆ ಧಾವಿಸುವುದು ಅವಶ್ಯ. ಇತರ ಕ್ಷೇತ್ರಗಳೂ ಮುಖ್ಯ; ಆದರೆ ಅನ್ನದಾತ ಸಂಕಷ್ಟದಲ್ಲಿದ್ದರೆ ದೇಶ ಸುಖವಾಗಿರಲು ಸಾಧ್ಯವಿಲ್ಲ. ಹಾಗೆಯೇ ಇದೊಂದು ವಿಷಮ ಸಂದರ್ಭ, ಎಲ್ಲ ವಲಯಗಳವರೂ ಸಂಕಷ್ಟದ ಮಡಿಲಿನಲ್ಲಿ ದಿನ ತಳ್ಳುತ್ತಿದ್ದಾರೆ ಎಂಬುದನ್ನು ರೈತರೂ ಅರ್ಥ ಮಾಡಿಕೊಳ್ಳಬೇಕಿದೆ. ಒಂದು ವರ್ಷದ ಬೆಳೆ ಹಾಳಾಗುವುದು, ಬೆಳೆಗೆ ತಕ್ಕ ಬೆಲೆ ಸಿಗದಿರುವುದು ಮುಂದಿನ ವರ್ಷ ಸರಿಹೋಗಬಹುದು; ಆದರೆ ಅದರಿಂದ ಉಂಟಾಗುವ ಮಾನಸಿಕ ವಿಪ್ಲವಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವಲ್ಲ. ಅದು ಕುಟುಂಬಕ್ಕೆ, ಸಮಾಜಕ್ಕೂ ಹಾನಿಕರ. ಈ ಒಂದು ಸಂಕಷ್ಟದ ಸಮಯವನ್ನು ದಾಟಿದರೆ ಎಲ್ಲ ಸಮಸ್ಯೆ ಪರಿಹಾರ ಆಗುವುದೆಂಬ ಭರವಸೆ ಇಟ್ಟುಕೊಳ್ಳುವುದು ನಮ್ಮೆಲ್ಲರನ್ನೂ ಕಾಪಾಡುವ ಮಾರ್ಗ ಆಗುವುದರಲ್ಲಿ ಅನುಮಾನ ಬೇಡ.