ಕೆಲಸಕ್ಕೆ ಬೇಕಾಗಿದ್ದಾರೆ

– ಉದ್ಯೋಗ ನಷ್ಟದ ನಡುವೆಯೂ ಆಶಾಕಿರಣ | ಹಲವು ಕ್ಷೇತ್ರಗಳಲ್ಲಿ ಬೇಡಿಕೆ ಸೃಷ್ಟಿ – ಕಾರ್ಮಿಕರ ವಲಸೆಯಿಂದ ಸ್ಥಳೀಯರಿಗೆ ಭರವಸೆ | ದೇಶಾದ್ಯಂತ ಹೊಸ ಟ್ರೆಂಡ್.

ವಿಕ ಸುದ್ದಿಲೋಕ ಬೆಂಗಳೂರು:  ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಕೈಗಾರಿಕೆ ಮತ್ತು ವ್ಯವಹಾರೋದ್ಯಮಗಳು ನಿಧಾನವಾಗಿ ಚಿಗುರಿಕೊಳ್ಳುತ್ತಿವೆ. ಈ ನಡುವೆ, ಉದ್ಯೋಗಿಗಳಿಗೂ ಬೇಡಿಕೆ ಸೃಷ್ಟಿಯಾಗಿ ಆಶಾವಾದ ಮೂಡಿಸಿದೆ.ಲಾಕ್‌ಡೌನ್‌ನಿಂದಾಗಿ ಆರ್ಥಿಕ ಕ್ಷೇತ್ರ ತತ್ತರಿಸಿ ಹೋಗಿದ್ದು, ಕೈಗಾರಿಕೆ, ವ್ಯಾಪಾರೋದ್ಯಮಗಳು ಸಂಕಷ್ಟಕ್ಕೆ ಸಿಲುಕಿದ್ದವು. ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡು ಜಾಬ್‌ಲಾಸ್‌ನ ಹೊಡೆತವೂ ತೀವ್ರವಾಗಿತ್ತು. ಈ ನಡುವೆ, ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭಗೊಳ್ಳುತ್ತಿದ್ದಂತೆಯೇ ಉದ್ಯೋಗಿಗಳಿಗೆ ಬೇಡಿಕೆ ಹುಟ್ಟಿಕೊಂಡಿದೆ. ಬೆಂಗಳೂರಿನಲ್ಲೇ ಹಲವಾರು ಕೈಗಾರಿಕೆಗಳು, ಹೋಟೆಲ್‌ಗಳು, ಅಂಗಡಿ, ಮಾಲ್‌ಗಳಲ್ಲಿ  ‘ಕೆಲಸಕ್ಕೆ ಜನ ಬೇಕಾಗಿದ್ದಾರೆ’ ಎಂಬ ಬೋರ್ಡ್‌ಗಳು ಭಾರಿ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಕೈಗಾರಿಕೆಗಳಲ್ಲಿ ಕೌಶಲ ಹೊಂದಿದ ನೌಕರರಿಗೆ ಬೇಡಿಕೆ ಇದ್ದರೆ, ಶಾಪ್ ಮತ್ತು ಮಾಲ್‌ಗಳಲ್ಲಿ  ಕೌಶಲ್ಯರಹಿತರಿಗೂ ಅವಕಾಶದ ಬಾಗಿಲು ತೆರೆದಿದೆ. ದೇಶದೆಲ್ಲೆಡೆ ಇದೇ ಟ್ರೆಂಡ್ ಕಂಡುಬಂದಿದ್ದು, ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗಿಗಳಿಗೆ ಅವಕಾಶ ತೆರೆದುಕೊಂಡಿದೆ. ಕೊರೊನಾ ಕಾಲದಲ್ಲಿ ಎಲ್ಲ ಕಡೆ ಉದ್ಯೋಗದಿಂದ ಕಿತ್ತು ಹಾಕುವ ಪ್ರವೃತ್ತಿಯೇ ಹೆಚ್ಚಾಗಿದೆ. ಈ ಕಾಲದಲ್ಲಿ ಬೇರೆ ಉದ್ಯೋಗ ಹುಡುಕುವುದಾದರೂ ಹೇಗೆ ಎಂಬ ಆತಂಕದಲ್ಲಿರುವ ಮಂದಿಗೆ ಈ ಹೊಸ ಉದ್ಯೋಗಗಳು ಭರವಸೆ ಮೂಡಿಸಿವೆ.

ಸ್ಥಳೀಯರಿಗೆ ಅವಕಾಶ:  ಹೊರ ಜಿಲ್ಲೆ ಮತ್ತು ಹೊರ ರಾಜ್ಯದವರು ನಗರಗಳಿಂದ ವಲಸೆ ಹೋಗಿದ್ದರಿಂದ ಸ್ಥಳೀಯರಿಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ತಮ್ಮ ನೈಪುಣ್ಯತೆಗೆ ಪೂರಕವಾದ ಕೆಲಸವನ್ನು ಹುಡುಕುವ ತಾಳ್ಮೆ ಇರಬೇಕು.

ಯಾವ ಉದ್ಯೋಗಗಳಿವೆ?

– ಶಾಪ್‌ಗಳು ಮತ್ತು ಮಾಲ್‌ಗಳಲ್ಲಿ ಸೇಲ್ಸ್‌ಗರ್ಲ್‌ ಮತ್ತು ಬಾಯ್ಸ್

– ಹೋಟೆಲ್‌ಗಳಲ್ಲಿ ಸರ್ವರ್, ಬಾಣಸಿಗರು

– ಕೈಗಾರಿಕೆಗಳಲ್ಲಿ ಕೌಶಲ ಬಯಸುವ ಜಾಬ್‌ಗಳು

– ಉತ್ತರ ಭಾರತದವರು ಹೆಚ್ಚಾಗಿ ನಿರ್ವಹಿಸುತ್ತಿದ್ದ ಕುಶಲಕರ್ಮಿ ಕೆಲಸಗಳು

– ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮೇಸ್ತ್ರಿಗಳು, ಸಹಾಯಕರು

ಕೊರತೆ ಕಾಡಿದ್ದು ಯಾಕೆ?

ಬೆಂಗಳೂರಿನಿಂದ 6 ಲಕ್ಷಕ್ಕೂ ಹೆಚ್ಚಿನ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿರುವುದರಿಂದ ಪ್ರಮುಖವಾಗಿ ಸೇವಾ ಕ್ಷೇತ್ರಕ್ಕೆ ಕಾರ್ಮಿಕರ ಕೊರತೆ ಎದುರಾಗಿದೆ. ಕಟ್ಟಡ ಕೆಲಸ, ಪ್ಲಂಬಿಂಗ್, ಕಾರ್ಪೆಂಟರ್, ಎಲೆಕ್ಟ್ರಿಕ್, ಟೈಲ್ಸ್ ಸೇರಿದಂತೆ ಇತರೆ ಕೆಲಸಗಳಿಗೆ ಕಾರ್ಮಿಕರ ಕೊರತೆ ಹೆಚ್ಚಿದೆ. ಇದರ ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್, ಸೆಕ್ಯೂರಿಟಿ ಗಾರ್ಡ್‌ಗಳಿಗೆ ಅಗತ್ಯ ಸಂಖ್ಯೆಯ ಕೆಲಸಗಾರರು ಸಿಗುತ್ತಿಲ್ಲ.

ಚಿಲ್ಲರೆ ವ್ಯಾಪಾರ ಮಾಡುವ ಅಂಗಡಿ ಮಳಿಗೆಗಳಿಗೆ ಕಾರ್ಮಿಕರ ಕೊರತೆ ಬಾಧಿಸುತ್ತಿಲ್ಲ. ಸ್ಥಳೀಯ ಕಾರ್ಮಿಕರೇ ಇಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಾರೆ. ಬಟ್ಟೆ ಮಳಿಗೆ, ಎಲೆಕ್ಟ್ರಿಕ್ ಶಾಪ್, ಹಾರ್ಡ್‌ವೇರ್‌ ಮೊದಲಾದ ಅಂಗಡಿಗಳಲ್ಲಿ ಹುಡುಗರು 6 ತಿಂಗಳಿನಿಂದ ವರ್ಷಕ್ಕೊಮ್ಮೆ ಸಂಬಳ ಹೆಚ್ಚು ಕೊಡುವ ಕಡೆ ಹೋಗುತ್ತಾರೆ. ಇದು ಮಾಮೂಲಿಯಾಗಿ ನಡೆಯುತ್ತದೆ. ಹಾಗಾಗಿ, ಉದ್ಯೋಗವಕಾಶ ಇರುತ್ತದೆ.- ಪ್ರಕಾಶ್ ಮಂಡೋತ್, ಅಧ್ಯಕ್ಷರು, ಫೆಡರೇಷನ್ ಆಫ್ ಬೆಂಗಳೂರು ಟ್ರೇಡರ್ಸ್ ಅಸೋಸಿಯೇಷನ್

ಮಾದರಿಯಾದ ಬಳ್ಳಾರಿ :

ಉತ್ತರ ಭಾರತ ಮೂಲದ ಕಾರ್ಮಿಕರು ತಮ್ಮೂರಿಗೆ ಹೋಗಿದ್ದರಿಂದ ಬಳ್ಳಾರಿಯ ಹಲವು ಕೈಗಾರಿಕೆಗಳು ಮುಚ್ಚಿವೆ. ಈ ನಡುವೆ, ರಾಜ್ಯದ ನಾನಾ ಕಡೆಗಳಲ್ಲಿದ್ದ  ಬಳ್ಳಾರಿ ಮೂಲದವರು ಮರಳಿ ಊರಿಗೆ ಬಂದಿದ್ದಾರೆ. ಇದೀಗ ಜಿಲ್ಲಾಡಳಿತ ಕೈಗಾರಿಕೆಗಳಿಗೆ ಯಾವ ರೀತಿಯ ಉದ್ಯೋಗಿಗಳು ಬೇಕು ಮತ್ತು ಇತರ ಊರುಗಳಿಂದ ಮರಳಿದ ಸ್ಥಳೀಯರಲ್ಲಿ ಯಾವ ರೀತಿಯ ಕೌಶಲ್ಯವಿದೆ ಎಂಬ ಮಾಹಿತಿ ಸಂಗ್ರಹಿಸುತ್ತಿದೆ. ಅರ್ಹತೆಯ ಮೇರೆಗೆ ಸ್ಥಳೀಯರಿಗೇ ಈ ಉದ್ಯೋಗಗಳನ್ನು ನೀಡಲು ಸಿದ್ಧತೆ ನಡೆಸಿದೆ. ಈಗಾಗಲೇ 200 ಮಂದಿಗೆ ಉದ್ಯೋಗ ನೀಡಲಾಗಿದೆ.

ಜೂ. 8ರಿಂದ ಹೋಟೆಲ್ ವಹಿವಾಟು ಆರಂಭಗೊಳ್ಳಲಿದ್ದು, ಕಾರ್ಮಿಕರ ಕೊರತೆ ಸ್ವಲ್ಪಮಟ್ಟಿಗೆ ಹೊಡೆತ ಬೀಳಲಿದೆ. ಉತ್ತರ ಭಾರತೀಯ ತಿನಿಸು ತಯಾರಿಸುವ ಹೋಟೆಲ್‌ಗಳಿಗೆ ಉತ್ತರ ಭಾರತ ಮೂಲದ ಕಾರ್ಮಿಕರ ಕೊರತೆ ಇದೆ. ಮೊದಲಿನ ಹಾಗೆ ಹೆಚ್ಚಿನ ಕಾರ್ಮಿಕರನ್ನು ತುಂಬಿಕೊಳ್ಳಲು ಆಗುವುದಿಲ್ಲ.- ಪಿ.ಸಿ.ರಾವ್ ಅಧ್ಯಕ್ಷರು, ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top