ಇವರು ಆಧುನಿಕ ಪೂತನಿಗಳು, ಹುಷಾರು!

ಮಾಧ್ಯಮಗಳು ಮತ್ತು ಪತ್ರಕರ್ತರು ಕ್ರಿಯಾತ್ಮಕವಾಗಿರಬೇಕೇ ಹೊರತು ಪ್ರತಿಕ್ರಿಯಾತ್ಮಕವಾಗಿರಬಾರದು ಎಂಬುದು ಬಲವಾದ ನಂಬಿಕೆ. ಆದರೆ ತೀರಾ ಮಾಧ್ಯಮ ಕ್ಷೇತ್ರ ಮಾರಾಟವಾಗಿದೆ, ಪತ್ರಕರ್ತರು ಗುಲಾಮರಾಗಿದ್ದಾರೆ ಎಂದು ಹೇಳಿದಾಗ ಇನ್ನು ಸುಮ್ಮನಿರಬಾರದು ಎನಿಸಿತು. ಹೇಳಲೇಬೇಕಾಯಿತು.

 ಬುದ್ಧಿಜೀವಿಯ ವರಸೆಯಲ್ಲಿ ಮಲಯಾಳಂ ಲೇಖಕ ಪೌಲ್ ಝುಕಾರಿಯಾ ದಿ| ಅನಂತಮೂರ್ತಿಯವರನ್ನೂ ಮೀರಿಸುವ ಹಾಗೆ ತೋರುತ್ತಿದೆ. 2014ರ ಲೋಕಸಭಾ ಚುನಾವಣೆಗೆ ಮುನ್ನ ಅನಂತಮೂರ್ತಿಯವರು ‘ಒಂದೊಮ್ಮೆ ಮೋದಿ ಈ ದೇಶದ ಪ್ರಧಾನಿಯಾದರೆ ನಾನು ದೇಶ ತೊರೆಯುತ್ತೇನೆ’ ಎಂದಿದ್ದರು. ಅದು ವ್ಯಾಪಕ ಚರ್ಚೆಗೆ ಗ್ರಾಸವಾದಾಗ ತಮ್ಮ ಮಾತಿಗೆ ವಿವರಣೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದರು.

ಆ ಪ್ರಸಂಗ ನಡೆದು ಮೂರೂವರೆ ವರ್ಷಗಳು ಕಳೆದಿವೆ. ಅಂದು ಅನಂತಮೂರ್ತಿಯವರಾಡಿದ ಮಾತನ್ನು ನೆನಪಿಸುವ ಹಾಗೆ ಪೌಲ್ ಝುಕಾರಿಯಾ ಮೊನ್ನೆ ಮೊನ್ನೆ ಬೆಂಗಳೂರು ಸಾಹಿತ್ಯ ಉತ್ಸವದ ಗೋಷ್ಠಿಯಲ್ಲಿ ತಮ್ಮ ಬೌದ್ಧಿಕ ನಂಜನ್ನು ಕಾರಿಕೊಂಡಿದ್ದಾರೆ.

ಅವರ ಮಾತಿನ ಧಾಟಿ ಹೀಗಿತ್ತು- ‘ದೇಶ ಆಳುತ್ತಿರುವ ಮೋದಿ ಸರ್ಕಾರಕ್ಕಿಂತ ತಮ್ಮನ್ನು ತಾವು ದುಡ್ಡಿಗೆ ಮಾರಿಕೊಂಡಿರುವ ಮಾಧ್ಯಮಗಳೇ ಹೆಚ್ಚು ಅಪಾಯಕಾರಿ, ಜನಪರ ನಿಲುವು ತಾಳಬೇಕಿದ್ದ ಮಾಧ್ಯಮಗಳು ರಾಜಕೀಯ ಹಿತಾಸಕ್ತಿ, ಕಾಪೋರೇಟ್ ಕಂಪನಿಗಳ ಹಿತಾಸಕ್ತಿ ಕಾಯುವ ಕೆಲಸ ಮಾಡುವ ಗುಲಾಮಗಿರಿಗೆ ತಿರುಗಿವೆ’. ಅವರ ಹಳಹಳಿಕೆ ಅಷ್ಟಕ್ಕೇ ನಿಲ್ಲುವುದಿಲ್ಲ, ಕೇರಳದಲ್ಲಿ ಮೊದಲು ನಿಜವಾದ ಎಡಪಂಥೀಯ ಕಮ್ಯುನಿಸ್ಟ್ ಮತ್ತು ಸಮಾಜವಾದಿ ಶಕ್ತಿ ಬಹಳ ಪ್ರಭಾವಶಾಲಿಯಾಗಿದ್ದವು. ಆದರೆ ಅಲ್ಲೂ ಬರಬರುತ್ತ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳು ಅವನ್ನು ಸಂಪೂರ್ಣ ಹಾಳುಮಾಡುತ್ತಿವೆ ಎಂದರು. ಅಂದರೆ ಅಳಿದುಳಿದಿರುವ ಕೇರಳದಲ್ಲೂ ಎಡಪಂಥ, ಸಮಾಜವಾದ, ಜಾತ್ಯತೀತವಾದದ ಮುಖವಾಡ ಕಳಚಿಬೀಳುತ್ತಿದೆ ಎಂಬುದನ್ನು ಅವರ ಮಾತಿನಲ್ಲೇ ಅರ್ಥ ಮಾಡಿಕೊಳ್ಳಬಹುದು!

ಝುಕಾರಿಯಾ ಇರಲಿ ಅಥವಾ ಅವರ ಆಲೋಚನಾಧಾಟಿಗೆ ಸೇರಿದ ಯಾರೇ ಇರಲಿ, ಒಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಎಡಪಂಥದ ಇತಿಹಾಸಕಾರರು, ಸಾಹಿತಿಗಳು ಮತ್ತು ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು, ರಾಜಕೀಯ ನೇತಾರರು, ಸಾಮಾಜಿಕ ಮುಖಂಡರು ಮಾತ್ರ ಪ್ರಾಮಾಣಿಕರೇ? ಸತ್ಯಹರಿಶ್ಚಂದ್ರರೇ? ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಐವತ್ತು ವರ್ಷಗಳ ಕಾಲ ಮಾಧ್ಯಮಗಳು ಎಡಪಂಥದ ಕಪಿಮುಷ್ಟಿಯಲ್ಲೇ ಇದ್ದಾಗ ಇನ್ನೊಂದು ವಿಚಾರದ ಅನುಯಾಯಿಗಳು ಎಂತಹ ಚಡಪಡಿಕೆಯನ್ನು ಅನುಭವಿಸಿರಬೇಕು! ಝುಕಾರಿಯ ಆ ಕಡೆಗೆ ಯಾಕೆ ಗಮನ ಹರಿಸುವುದಿಲ್ಲ? ಈಗ ಕಾಡುವ ಕ್ರೌರ್ಯ, ಅಪ್ರಾಮಾಣಿಕತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹನನ ಆಗ ಏಕೆ ನೆನಪಾಗಲಿಲ್ಲ? ಅಂದು ಝುಕಾರಿಯ ಸಂತತಿಯವರು ಮಾಡಿದ ಪ್ರಮಾದಗಳು, ಅನಾಚಾರಗಳು ಒಂದೇ ಎರಡೇ? ಅದರ ಪರಿಣಾಮ ಏನಾಗಿದೆ? ಅಷ್ಟಕ್ಕೂ ಇತಿಹಾಸಕ್ಕೆ, ಸಾಹಿತಿಗಳಿಗೆ, ಪತ್ರಕರ್ತರಿಗೆ ಇಸಂಗಳ ಗೊಡವೆ ಯಾಕೆ ಬೇಕು. ಸತ್ಯದ, ಸಮಂಜಸತೆಯ ಅರಿವಿದ್ದರೆ, ಆತ್ಮಸಾಕ್ಷಿಯೊಂದಿದ್ದರೆ ಸಾಕಲ್ಲವೇ?

ಝುಕಾರಿಯಾ ಸಂಯಮದ ಎಲ್ಲ ಎಲ್ಲೆಗಳನ್ನೂ ಮೀರಿದ್ದರಿಂದ ಇತಿಹಾಸವನ್ನು ಒಮ್ಮೆ ಮೆಲುಕು ಹಾಕುವ ಪ್ರಯತ್ನ ಮಾಡುವ.

ಭಾರತದ ಇತಿಹಾಸವನ್ನು ಮರೆಮಾಚಬೇಕು, ಇಲ್ಲಿನ ಸಂಸ್ಕೃತಿಯನ್ನು ನಾಶ ಮಾಡಬೇಕು, ಆಗ ಮಾತ್ರ ಈ ದೇಶವನ್ನು ಬರಡು ಮಾಡಲು, ಅಧಿಕಾರದ ಗದ್ದುಗೆಯನ್ನು ಗಟ್ಟಿಗೊಳಿಸಿಕೊಳ್ಳಲು ಸಾಧ್ಯ ಎಂಬುದು ಬ್ರಿಟಿಷರ ದುರಾಲೋಚನೆಯಾಗಿತ್ತು.

ಈ ದೇಶದ ಸತ್ವವನ್ನು ಕೊಲ್ಲಲು, ಆಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಬ್ರಿಟಿಷರು, ಮತ್ತು ಅವರಿಂದ ಪ್ರಭಾವಿತರಾದ ವ್ಯಕ್ತಿಗಳು ಮೊದಲು ಆಯ್ಕೆ ಮಾಡಿಕೊಂಡದ್ದು ಇಲ್ಲಿನ ಶಿಕ್ಷಣ ವ್ಯವಸ್ಥೆಯನ್ನು (ಬ್ರಿಟಿಷ್ ಪಾರ್ಲಿಮೆಂಟ್​ನಲ್ಲಿ ಲಾರ್ಡ್ ಮೆಕಾಲೆ ಮಾಡಿದ ಭಾಷಣವನ್ನು ಓದಿ ತಿಳಿಯಬಹುದು). ಪಶ್ಚಿಮ ದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ ನೆಹರು ಮತ್ತು ಅವರ ಅನುಯಾಯಿಗಳನ್ನೇ ಆ ಕೆಲಸಕ್ಕೆ ಬ್ರಿಟಿಷರು ವ್ಯವಸ್ಥಿತವಾಗಿ ಬಳಸಿಕೊಂಡರು. ಉನ್ನತ ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಮಾಧ್ಯಮಗಳು, ಮಾಧ್ಯಮದಲ್ಲಿ ಕೆಲಸ ಮಾಡುವವವರನ್ನು, ಇತಿಹಾಸ ರಚನಾಕಾರರ ಮನಸ್ಸುಗಳನ್ನು ನೆಹರು ಮತ್ತು ಅವರ ಅನುಯಾಯಿಗಳು ಅತಿಕ್ರಮಿಸಿಕೊಂಡರು.

ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗುವ ಕಾಲಘಟ್ಟದಲ್ಲಿ ಅಮೆರಿಕದ ಬಂಡವಾಳಶಾಹಿ ಮತ್ತು ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಚಿಂತನೆಯ ಹಿನ್ನೆಲೆಯಲ್ಲಿ ಜಗತ್ತು ಎರಡು ಭಾಗವಾಗಿ ವಿಭಜನೆಗೊಂಡಿತು. ಆ ವೇಳೆ ಗಾಂಧೀ ವಿಚಾರದ ಪ್ರತಿಪಾದಕರಂತೆ ಬಿಂಬಿಸಿಕೊಳ್ಳುತ್ತಲೇ ನೆಹರು ಮತ್ತು ಅವರ ಅನುಯಾಯಿಗಳು ಸೋವಿಯತ್ ರಷ್ಯಾದ ಕಮ್ಯುನಿಸಂನತ್ತ ವಾಲಿದರು. ಆ ಹಿನ್ನೆಲೆಯಲ್ಲಿ ಭಾರತದ ಕಮ್ಯುನಿಸ್ಟ್ ಪಕ್ಷ ಮತ್ತು ಮಾರ್ಕ್ಸ್​ವಾದಿಗಳು ಭಾರತದ ಬೌದ್ಧಿಕ ಪ್ರಪಂಚವನ್ನು ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡರು. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಎಡಪಂಥದ ಇತಿಹಾಸಕಾರರು-ಸಂಸ್ಕೃತಿ ಚಿಂತಕರನ್ನು ತಯಾರು ಮಾಡುವ ಕಾರ್ಖಾನೆಗಳಂತಾದವು. ಅದರ ಪರಿಣಾಮ ಈ ದೇಶದ ಇತಿಹಾಸ ತಿರುಚುವು ದರಿಂದ ಆರಂಭವಾದ ಷಡ್ಯಂತ್ರ ಈಗ ಸಾಂವಿಧಾನಿಕವಾಗಿ ಚುನಾಯಿತವಾದ ಕೇಂದ್ರ ಸರ್ಕಾರದ ಅಡಿತಪ್ಪಿಸುವ ಹುನ್ನಾರದವರೆಗೆ ಬಂದು ನಿಂತಿದೆ.

ಶುರುವಾಗಿದ್ದು ಇತಿಹಾಸ ತಿರುಚುವುದರಿಂದ: ಇರ್ಫಾನ್ ಹಬೀಬ್, ಡಿ.ಎನ್.ಝಾ, ಫಣಿಕ್ಕರ್, ಬಿಪಿನ್​ಚಂದ್ರ, ರೋಮಿಲಾ ಥಾಪರ್, ಮುಜಫರ್ ಅಲಂ, ಆರ್.ಎಸ್ ಶರ್ಮಾ ಮುಂತಾದ ಜೆಎನ್​ಯುು ಮತ್ತು ಇತ್ಯಾದಿ ಕಮ್ಯುನಿಸ್ಟ್ ವಿಚಾರಧಾರೆಯ ನೆರಳಲ್ಲಿ ತಯಾರಾದ ಇತಿಹಾಸಕಾರರು ಮತ್ತು ಬರಹಗಾರರು ತಮ್ಮ ಪೂರ್ವನಿರ್ದೇಶಿತ ಅಜೆಂಡಾವನ್ನು ಜಾರಿ ಮಾಡಲು ಹೊರಟಿದ್ದು ಭಾರತದ ಇತಿಹಾಸವನ್ನು ತಿರುಚುವುದರಿಂದ ಮತ್ತು ಇಲ್ಲಿನ ಸಂಸ್ಕೃತಿಯನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುವುದರಿಂದ. ಭಾರತಕ್ಕೆ ಒಂದು ಸಂಸ್ಕೃತಿ ಇಲ್ಲ, ಆರ್ಯರು ಕ್ರಿ.ಪೂ.2ನೇ ಶತಮಾನದಲ್ಲಿ ಮಧ್ಯ ಏಷ್ಯಾದಿಂದ ವಲಸೆ ಬಂದವರು ಎಂಬ ವಾದವನ್ನು ಮುಂದಿಟ್ಟು ಭಾರತದ ಅಡಿಪಾಯವನ್ನೇ ತಪ್ಪಿಸಲು ಸಂಚು ರೂಪಿಸಿದರು. ವಾಸ್ತವದಲ್ಲಿ ಆರ್ಯ ಎಂಬುದು ‘ಸುಸಂಸ್ಕೃತ’ ಎಂಬ ಗುಣವಾಚಕವೇ ಹೊರತು ಜನಾಂಗ,ದೇಹಾಕೃತಿ, ಬಣ್ಣದ ಸೂಚಕವಲ್ಲ. ಅದಕ್ಕೆ ಉದಾಹರಣೆ ಬೇಕೆಂದರೆ ‘ಕೃಣ್ವಂತೋ ವಿಶ್ವಮಾರ್ಯಂ’-ಜಗತ್ತಿನ ಜನರನ್ನೆಲ್ಲ ಸುಸಂಸ್ಕೃತರನ್ನಾಗಿ ಮಾಡುವೆ-ಎಂಬ ವಾಕ್ಯವೇ ಸಾಕು. ಎಡಪಂಥೀಯರು ಹೇಳುವ ಆರ್ಯ-ದ್ರವಿಡ ಸಿದ್ಧಾಂತದ ದ್ರವಿಡರು ತಮಿಳುನಾಡಿನ ಭೌಗೋಳಿಕ ಗಡಿಗಷ್ಟೇ ಸೀಮಿತವಾದವರು. ಇಡೀ ದಕ್ಷಿಣ ಭಾರತಕ್ಕೂ ಅವರು ವ್ಯಾಪಿಸಿರಲಿಲ್ಲ. ಹಾಗಾದರೆ ಉಳಿದ ಭಾರತ ನಿವಾಸಿಗಳು ಯಾರು? ಉತ್ತರ ಕೊಡುವವರು ಯಾರು?

ಎರಡನೆಯ ಆಕ್ರಮಣ ವೇದ, ವೇದಾಂತ, ಉಪನಿಷತ್ತು, ಪುರಾಣಗಳು, ಮನು, ಮನುಸ್ಮೃತಿ ಇತ್ಯಾದಿಗಳ ಮೇಲೆ. ಭಾರತದ ಅಂತಸ್ಸತ್ವವೇ ವೇದ ಮತ್ತು ವೇದಾಂತಗಳು, ಅದನ್ನೇ ಬತ್ತಿಸಿದರೆ ಮುಂದೆ ತಮ್ಮ ಆಟ ಸುಗಮ ಎಂಬುದು ಇವರ ಆಲೋಚನೆ. ವೇದಗಳಲ್ಲಿ ಜಾತೀಯತೆ ಇದೆ, ಕರ್ಮಠತೆ ಇದೆ, ರಾಮಾಯಣದಂತಹ ಕಾವ್ಯ ಕಟ್ಟುಕತೆ, ಮಹಾಭಾರತ ಬರೀ ಸುಳ್ಳು, ಮನುಸ್ಮೃತಿಯಲ್ಲಿ ಸ್ತ್ರೀ ಶೋಷಣೆ ಇದೆ ಎನ್ನುತ್ತಾರೆ. ಆದರೆ ಇದೇ ಇತಿಹಾಸಕಾರರು, ಬುದ್ಧಿಜೀವಿಗಳು ಏಳನೇ ಶತಮಾನದಲ್ಲಿ ಚೀನಿ ಇತಿಹಾಸಕಾರ ಹೂಯೆನ್​ತ್ಸಾಂಗ್ ಭಾರತದ ಸಾಮಾಜಿಕ/ಧಾರ್ವಿುಕ/ಆಡಳಿತ ವ್ಯವಸ್ಥೆ ಕುರಿತು ಏನು ಹೇಳಿದ ಎಂಬುದನ್ನು ಏಕೆ ನೋಡುವುದಿಲ್ಲ? ರಾಮ ರಾಜನಾಗಿದ್ದೇ ಹೌದಾದರೆ ಆತನಿಗೆ ದೇವಾಲಯ ಕಟ್ಟುವುದು ಸಲ್ಲ, ಅಲ್ಲಾಹ, ಯೇಹೋವನಂತೆ ಆತನಿಗೂ ನಿರ್ದಿಷ್ಟ ಸ್ಥಳ, ಸ್ಥಾನ ಇರಬಾರದು ಎಂಬ ವಿಚಾರವಾದಿ ಕಂಚ ಇಲಯ್ಯ ಹೇಳಿಕೆ ಗಮನಿಸಿದರೆ ತಿಳಿಯುತ್ತದೆ. ಮುಖ್ಯವಾಗಿ ಸನಾತನ ಹಿಂದುಧರ್ಮವನ್ನು ಕ್ರೖೆಸ್ತ, ಇಸ್ಲಾಂ ಮುಂತಾದ ರಿಲಿಜನ್​ಗಳೊಂದಿಗೆ ಸಮೀಕರಿಸಿದ್ದೇ ಇವರು ದಿಕ್ಕುತಪ್ಪಲು ಮೂಲ ಕಾರಣವಾದದ್ದು.

ಚು/ಸಮಾಜಸುಧಾರಕರನ್ನೂ ಬಿಡಲಿಲ್ಲ: ಈ ಸುಳ್ಳು ಇತಿಹಾಸಕೋರರು ಛತ್ರಪತಿ ಶಿವಾಜಿ, ರಾಣಾಪ್ರತಾಪ್, ಗುರುಗೋವಿಂದ ಸಿಂಹ ಮುಂತಾದವರೆಲ್ಲ ವೈಯಕ್ತಿಕ ಸ್ವಾರ್ಥಕ್ಕೆ ಕಾದಾಡಿದವರು ಎಂದು ಚಿತ್ರಿಸಿದರು. ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಚಂದ್ರಶೇಖರ ಆಜಾದರನ್ನು ಉಗ್ರಗಾಮಿಗಳೆಂದು ಕರೆದರು. ಅಧ್ಯಾತ್ಮ, ಧರ್ಮ, ಆ ಹಿನ್ನೆಲೆಯ ಸಾಹಿತಿ-ಸಾಹಿತ್ಯ, ಸಂತರು, ಭಕ್ತಿಪಂಥದವರನ್ನು ಮೂಢರು, ಮೌಢ್ಯಗಳ ಪ್ರಸಾರಕರು, ಪುರೋಹಿತಶಾಹಿಗಳೆಂದು ಜರಿದರು. ಸಮಾಜವಾದಿ, ಮಾರ್ಕ್ಸ್ ವಾದಿ ಅಲ್ಲದವ ಸಾಹಿತಿ, ಪತ್ರಕರ್ತರೇ ಅಲ್ಲ ಎಂದರು. ಇದನ್ನು ಒಪ್ಪೋಣವೇ?

ಮುಖವಾಡ ಕಳಚುವ ಹೊತ್ತು: ಸ್ವಾತಂತ್ರ್ಯ ಪೂರ್ವದಿಂದ ಆರಂಭವಾದ ಕಮ್ಯುನಿಸ್ಟ್ ತಪ್ಪು ಚಿಂತನೆಯ ಮುಖವಾಡ ಕಳಚಲು ಸುಮಾರು ನಲ್ವತ್ತು-ಐವತ್ತು ವರ್ಷಗಳೇ ಹಿಡಿದವು. ಸೋಮನಾಥ ದೇವಾಲಯದ ಪುನರುತ್ಥಾನ ಮಾಡುವುದರಿಂದ ಆರಂಭವಾದ ರಾಷ್ಟ್ರೀಯ ಚಿಂತನೆ ಎಂಭತ್ತು ತೊಂಭತ್ತರ ದಶಕದಲ್ಲಿ ಶುರುವಾದ ರಾಮಮಂದಿರ ಆಂದೋಳನದ ಹೊತ್ತಿಗೆ ಒಂದು ನಿರ್ದಿಷ್ಟ ಸ್ವರೂಪವನ್ನು ಪಡೆದುಕೊಂಡಿತು. ಆಗ ಜೀವತಳೆದದ್ದು ಸೆಕ್ಯುಲರ್​ವಾದ ಮತ್ತು ಕೋಮುವಾದವೆಂದು ಹಳಿಯುವ ವರಸೆ.

ಅಲ್ಪಸಂಖ್ಯಾತವಾದದಿಂದ ಆರಂಭ: ಇದರ ಇತಿಹಾಸವನ್ನು ಹುಡುಕಿದರೆ ನಾವು 1888ರಷ್ಟು ಹಿಂದಕ್ಕೆ ಹೋಗಬೇಕಾಗುತ್ತದೆ. ಸರ್ ಸಯ್ಯದ್ ಅಹಮದ್ ಖಾನರು ಆಗ ‘ಹಿಂದು ಮತ್ತು ಮುಸ್ಲಿಮರು ಭಾರತದಲ್ಲಿ ಒಟ್ಟಿಗೆ ಬಾಳುವುದು ಅಸಾಧ್ಯದ ಮಾತು’ ಎಂದಿದ್ದರು. ಪಾಕಿಸ್ತಾನದ ಉದಯಕ್ಕೂ ಅದೇ ಚಿಂತನೆ ಕಾರಣ. ಆನಂತರ ಅದು ಅಲ್ಪಸಂಖ್ಯಾತ,ಬಹುಸಂಖ್ಯಾತ ಎಂಬ ವಿಭಜನೆಗೆ ಕಾರಣವಾಯಿತು.

ಚಿಂತಕ ಮಂಜು ಸುಭಾಷ್ ಪ್ರಕಾರ ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಧಾರ್ವಿುಕ, ಭಾಷಿಕ ಅಥವಾ ಇನ್ನಾವುದೇ ನೆಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ವರ್ಗವನ್ನು ಅಲ್ಪಸಂಖ್ಯಾತರೆಂದು ಕರೆಯುತ್ತಾರೆ. ಹಾಗಾದರೆ ಇಂಡೋನೇಷಿಯಾ ಮತ್ತು ಪಾಕಿಸ್ತಾನ ಹೊರತುಪಡಿಸಿದರೆ ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಮುಸ್ಲಿಮರು ಮಾತ್ರ ಹೇಗೆ ಅಲ್ಪಸಂಖ್ಯಾತರಾಗುತ್ತಾರೆ? ಕಾಶ್ಮೀರದ ಪಂಡಿತರೇಕೆ ಅಲ್ಪಸಂಖ್ಯಾತರಾಗುವುದಿಲ್ಲ? ಹಿಂದು ಎಂಬುದಕ್ಕೆ ಒಂದು ಅರ್ಥವೇ ಇಲ್ಲ, ಇದು ಬಹುಸಂಸ್ಕೃತಿಯ ದೇಶ ಎಂದು ಒಂದು ಕಡೆ ವಾದಿಸಿ ಮತ್ತೊಂದೆಡೆ ಹಿಂದು ಎಂಬುದು ಬಹುಸಂಖ್ಯಾತ ಎಂದು ಹೇಳುವುದು ಎಷ್ಟು ಸರಿ? ಮುಸ್ಲಿಂ, ಕ್ರೖೆಸ್ತರ ಜೊತೆಗೆ, ಸಿಖ್ಖರು, ಬೌದ್ಧರು, ಜೈನರು ಅಲ್ಪಸಂಖ್ಯಾತರಾದರೆ ಹಿಂದುಗಳು ಬಹುಸಂಖ್ಯಾತರಾಗುವುದು ಹೇಗೆ? ಒಕ್ಕಲಿಗರು, ಬ್ರಾಹ್ಮಣರು, ವೈಶ್ಯರೆಲ್ಲ ಯಾರು. ಯಾಕೆ ಈ ಎಡಬಿಡಂಗಿತನ ಹಾಗಾದರೆ!

ಮುಂದಿನದ್ದು ಕೋಮುವಾದ?: ಈ ದೇಶದ ಹಲವು ವೈರುಧ್ಯಗಳಲ್ಲಿ ಇದೂ ಒಂದು. ಭಾರತದಲ್ಲಿರುವ ಎಲ್ಲ ಜನಜಾತಿ, ಭಾಷಿಕ ಜನರನ್ನು ಒಂದುಗೂಡಿಸುವ ‘ಹಿಂದು’ ಪದ ಕೋಮುವಾದವೆಂದೂ, ಕೇವಲ ಮುಸ್ಲಿಂ ಅಥವಾ ಕ್ರೖೆಸ್ತರ ಪರ ವಹಿಸುವುದು ಜಾತ್ಯತೀತವಾದವೆಂದೂ ಕರೆಸಿಕೊಳ್ಳುತ್ತದೆ!

ಇವರ ಸೆಕ್ಯುಲರ್ ವಾದದ ಟೊಳ್ಳುತನ ಎಂಥದ್ದು ಎಂಬುದಕ್ಕೆ ಕೆಲ ಉದಾಹರಣೆಗಳನ್ನು ಗಮನಿಸಬೇಕು.

1 ಸಮಾನ ನಾಗರಿಕ ಸಂಹಿತೆ ಸಾಂಸ್ಕೃತಿಕ ರಾಜಕಾರಣಕ್ಕೆ ಬುನಾದಿ, ಬಹುತ್ವದ ಮೇಲಿನ ದಬ್ಬಾಳಿಕೆ-ಅಮ್ನೆಸ್ಟಿ ಇಂಡಿಯಾದ ಕಾರ್ಯಕಾರಿ ನಿರ್ದೇಶಕ

2 ಮುಸ್ಲಿಂ ಸ್ತ್ರೀಯರು ಶೋಷಣೆಗೊಳಗಾಗಿದ್ದಾರೆಂಬುದು ಹಿಂದುತ್ವವಾದಿಗಳ ಕಟ್ಟುಕತೆ – ರಾಮ್ ಪುನ್ಯಾನಿ

3 ಮುಸ್ಲಿಂ ವೈಯಕ್ತಿಕ ಕಾನೂನಿಂದ ತೊಂದರೆಯಾಗುವುದು ಮುಸ್ಲಿಂ ಸ್ತ್ರೀಯರಿಗೆ ತಾನೆ ಹಿಂದುಗಳಿಗಲ್ಲವಲ್ಲ- ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್

ಅಸಹಿಷ್ಣುತೆಯ ವಿಚಾರ: ನಿಜವಾಗಿ ಅಸಹಿಷ್ಣುತೆ ನೆನಪಾದದ್ದು 65 ವರ್ಷಗಳ ನಂತರ ಅಧಿಕಾರ ಕೈ ತಪ್ಪಿದಾಗ ಆದ ಚಡಪಡಿಕೆಯಿಂದ. ಅದು ಅಸಹನೀಯ. ಕಾಶ್ಮೀರದಲ್ಲಿ ಭಯೋತ್ಪಾದನೆ ಹತ್ತಿಕ್ಕಿದರೆ ಅದು ಮಾನವ ಹಕ್ಕು ಉಲ್ಲಂಘನೆ. ಕೇರಳದಲ್ಲಿ ಅಧ್ಯಾಪಕನ ಕೈಕಡಿದರೆ ಸಹನೀಯ. ಸಾಲುಸಾಲು ಹತ್ಯೆ ಸಹನೀಯ. ಸಿಖ್ ನರಮೇಧ, ನಿರಂತರ ಭಯೋತ್ಪಾದನೆ, ನಕ್ಸಲರು ರಕ್ತ ಹರಿಸಿದರೆ ಸಹನೀಯ. ಗೋಹತ್ಯೆ, ಬಲವಂತದ ಮತಾಂತರ ಸಹನೀಯ, ತುಟಿ ಬಿಚ್ಚಬಾರದು. ಕಾಶ್ಮೀರದಲ್ಲಿ ಹಿಂದುಗಳು ಗುಳೇ ಹೊರಟರೆ ಅದಕ್ಕೆ ಮತಾಂಧತೆ, ಭಯೋತ್ಪಾದನೆ ಒಂದೇ ಕಾರಣ ಎನ್ನಲಾಗದು ಎಂಬುದು ಆಕಾರ್ ಪಟೇಲ್ ವಾದ! ಸ್ವಾಮೀ ಕಳೆದ 3 ವರ್ಷದಲ್ಲಿ ಒಂದೂ ಕೋಮುದಂಗೆ ಇಲ್ಲದೆ, ಜಾತೀಯ ಹಿಂಸಾಚಾರದ ಘಟನೆ ನಡೆಯದೆ ನಿಮ್ಮಲ್ಲಿ ಅಸಹಿಷ್ಣುತೆ ಯಾತಕ್ಕೆ ಕೊತಕೊತ ಎನ್ನುತ್ತಿದೆ? ಖ್ಯಾತ ನಟ ಅನುಪಮ್ ಖೇರ್ ಹೇಳುವ ಹಾಗೆ ಇದು ಜನಾದೇಶದ ಮೂಲಕ ಆರಿಸಿ ಬಂದವರನ್ನು ಮೂರು ವರ್ಷವೂ ಸಹಿಸಲಾಗದ, ಅಧಿಕಾರ ಕೈತಪ್ಪಿದ ಅಸಹಿಷ್ಣುತೆಯೇ ಅಲ್ಲವೇ? ನಿಮ್ಮನ್ನು ನೀವೇ ಸಂತೈಸಿಕೊಳ್ಳಿ….

ಮುಂದೆ ಮತ್ತಷ್ಟು ಆಘಾತಗಳು ಬರಬಹುದು!

ಮೌಢ್ಯ ನಿಷೇಧದ ಪ್ರಸ್ತಾಪ: ತಪ್ಪುಗಳನ್ನು ತಿದ್ದಿಕೊಳ್ಳುವುದು ಭಾರತೀಯ ಚಿಂತನೆಯ ವಿಶೇಷ. ಹಾಗೆ ತಿದ್ದುವ ಪ್ರಸ್ತಾಪ ಅನುಮಾನಕ್ಕೆ ಆಸ್ಪದ ಕೊಡಬಾರದು. ಪಕ್ಷಪಾತಿ ಆಗಿರಬಾರದು. ವಿಮರ್ಶಕ ಸಿ.ಎನ್. ರಾಮಚಂದ್ರನ್​ರ ಒಂದು ಹೇಳಿಕೆ ನೆನಪಾಗುತ್ತದೆ. ಅವರ ಪ್ರಕಾರ ಹಿಂದು ಧರ್ಮದಂತೆ ಇತರ ಮತ-ಧರ್ಮಗಳಲ್ಲಿರುವ ಮೌಢ್ಯ ನಿಷೇಧಿಸುವುದು ತುರ್ತಿನ ಕೆಲಸ ಅಲ್ಲವಂತೆ, ನಮ್ಮ ಮನೆಯ ಮಾಡು ಸೋರುತ್ತಿದೆ ಎಂದರೆ ಇತರರ ಮನೆಯ ಮಾಡೂ ಸೋರುತ್ತಿದೆ ಎಂದು ಭಾವಿಸಲು ಕಾರಣ ಇಲ್ಲವಂತೆ. ಅರೇ, ವೈಚಾರಿಕತೆಯನ್ನು ಮತಧರ್ಮದೊಂದಿಗೆ ಏಕೆ ಸಮೀಕರಿಸುತ್ತೀರಿ ಅಂತಲೂ ಕೇಳಬಾರದೇ?

ಮೀಸಲಾತಿ ಚಳವಳಿ/ಧರ್ಮಸ್ಥಾಪನೆ ಹೋರಾಟ: ರಾಜಸ್ಥಾನದಲ್ಲಿ ಮೀನ, ಹರಿಯಾಣದಲ್ಲಿ ಜಾಟವ, ಗುಜರಾತದಲ್ಲಿ ಪಾಟೀದಾರ ಚಳವಳಿ, ಮಹಾರಾಷ್ಟ್ರದಲ್ಲಿ ರೈತ/ಮರಾಠಾ ಮೀಸಲಾತಿ ಚಳವಳಿ. ಕರ್ನಾಟಕ, ಮಹಾರಾಷ್ಟ್ರದಲ್ಲಿ ಹೊಸದೊಂದು ಧರ್ಮಸ್ಥಾಪನೆಯ ಚಳವಳಿ. ಗುಜರಾತ/ಕರ್ನಾಟಕದ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹೋರಾಟಗಳ ಬಣ್ಣ ಬಟಾಬಯಲಾಗುತ್ತಿದೆ. ಇಷ್ಟು ದಿನ ಜಾತೀಯತೆ ಬೇಡ, ಈಗ ಬೇಕು. ಇಷ್ಟು ದಿನ ಧರ್ಮನಿರಪೇಕ್ಷತೆಯ ಉಪದೇಶ; ಈಗ ಧರ್ಮಸ್ಥಾಪನೆಯ ಜಪ. ದೇಶದ್ರೋಹಿತನಕ್ಕೆ, ಲಜ್ಜೆಗೆಡುವುದಕ್ಕೆಲ್ಲ ಒಂದು ಮಿತಿ ಬೇಡವೇ?

  1. ಕಮ್ಯುನಿಸಂ ಕಥೆ ಕೇಳಿ….!: ಕಮ್ಯುನಿಸಂ, ಸಮಾಜವಾದ   ಜಗತ್ತಿನ ಶ್ರಮಿಕರೆಲ್ಲ ಒಂದು/ಜಗತ್ತಿನ ಕಮ್ಯುನಿಸ್ಟ್  ರಾಷ್ಟ್ರಗಳೆಲ್ಲ ಒಂದಾಗಬೇಕೆಂಬ ಕೂಗಿನೊಂದಿಗೆ. ಸೋವಿಯತ್ ರಷ್ಯಾ, ಕಮ್ಯುನಿಸ್ಟ್ ಚೀನಾಗಳು ಒಂದಾದವೇನು? ಎಂದಾದರೂ ಒಂದಾಗಬಲ್ಲವೇನು? ಹೋಗಲಿ ಕಮ್ಯುನಿಸಂ ಹುಟ್ಟಿದ ಆ ಎರಡೂ ದೇಶಗಳು ಬಂಡವಾಳಶಾಹಿಯನ್ನು ಹಾಸಿ ಹೊದ್ದುಕೊಂಡಿರುವುದು ಇವರಿಗೆ ಕಾಣಿಸದೇ? ಇಷ್ಟಾದರೂ ಬುದ್ಧಿ ಬರದೇ ಹೋದರೆ ‘ಅದು’ ಇಲ್ಲ ಅಂತಲೇ ಅಂದುಕೊಳ್ಳಬೇಕಾಗುತ್ತದೆ.

ಮಾಧ್ಯಮಗಳ ಪ್ರಾಮಾಣಿಕತೆ/ಸಾಮಾಜಿಕ ಕಾಳಜಿಯ ಗಟ್ಟಿತನವನ್ನೇ ಪ್ರಶ್ನೆ ಮಾಡಿದ್ದಕ್ಕೆ ಇಷ್ಟೆಲ್ಲ ಹೇಳಬೇಕಾಯಿತು. ಅದಿಲ್ಲ ಅಂದರೆ ಪ್ರತಿಕ್ರಿಯಿಸುವುದಕ್ಕೆ ತಕ್ಕವರು ಇವರಲ್ಲ ಎಂಬುದು ಯಾವಾಗಲೋ ಗೊತ್ತಾಗಿದೆ ಬಿಡಿ.

ಆಧುನಿಕ ಪೂತನಿಗಳು ಇತಿಹಾಸದುದ್ದಕ್ಕೂ ನಾನಾ ವೇಷಗಳಲ್ಲಿ ಹುಟ್ಟಿಬಂದಿದ್ದಾರೆ, ಬರುತ್ತಿದ್ದಾರೆ, ಮುಂದೆಯೂ ಬರುತ್ತಾರೆ, ಹುಷಾರು!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top