ಈಶ್ವರಪ್ಪ ರಾ.ಬ್ರಿ.ಯಿಂದ ಬಿಜೆಪಿಗೇಕೆ ಗಾಬರಿ?

 
ಮಾಯಾವತಿ, ಮಹಂತ, ಕೇಜ್ರಿವಾಲ್ ಮುಂತಾದವರ ಮಾತು ಹಾಗಿರಲಿ, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದ ನೆಲೆಗಟ್ಟಿನಲ್ಲಿ ಬಲಾಢ್ಯ ಆಗಿರುವ ಮೋದಿಗೇ ಕೇವಲ ಸಿದ್ಧಾಂತದಿಂದ, ಜಾತಿಯಿಂದ, ಭಾವನಾತ್ಮಕ ಅಂಶಗಳಿಂದ ಜನರನ್ನು ಬಹಳ ಕಾಲ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾದಂತಿದೆ.

Konemane - rabreeಅಜಮಾಸು ನಾಲ್ಕು ವರ್ಷಗಳ ಹಿಂದಿನ ಮಾತು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಈಗ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಜನಜಾತಿಗಳ ಸಮಾವೇಶ ನಡೆಯುತ್ತಿತ್ತು. ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪನೆಗೊಳಿಸಲೇಬೇಕೆಂಬ ಹಂಬಲ ಬಲವಾಗಿದ್ದ ಕಾರಣಕ್ಕೆ ಆ ಸಮಾವೇಶದಲ್ಲಿ ಕುರುಬ ಸಮುದಾಯವರ ಸಂಖ್ಯೆ ಸಹಜವಾಗಿಯೇ ಹೆಚ್ಚಿತ್ತು. ವಿಶೇಷ ಎಂದರೆ ಆ ಸಮಾವೇಶದಲ್ಲಿ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರೂ ಪಾಲ್ಗೊಂಡಿದ್ದರು. ಆಗ ಅವರು ಮಂತ್ರಿ ಬೇರೆ. ಅವರ ಅಮೋಘ ಭಾಷಣವೂ ನಡೆಯಿತು. ಆದರೆ ಅಲ್ಲಿ ಸೇರಿದ್ದವರು ಸಿದ್ದರಾಮಯ್ಯ ಹೊರತಾಗಿ ಬೇರೆ ಯಾರ ಭಾಷಣಕ್ಕೂ ಅಪ್ಪಿತಪ್ಪಿಯೂ ಚಪ್ಪಾಳೆ ತಟ್ಟಲಿಲ್ಲ. ಶಿಳ್ಳೆ, ಕೇಕೆ ಹೀಗೆ ಯಾವುದೇ ತೆರನಾದ ಉತ್ಸಾಹಪೂರ್ವಕ ಪ್ರತಿಕ್ರಿಯೆ ಇರಲಿಲ್ಲ. ಮಾರನೇ ದಿನ ಈ ಅಂಶ ಮಾಧ್ಯಮಗಳಲ್ಲಿ ವರದಿ ಆಗಿತ್ತು ಕೂಡ. ಕಾರ್ಯ, ಕಾರಣ, ಕಾಲ, ವ್ಯಕ್ತಿಗಳ ಪ್ರಸ್ತುತತೆ ಇತ್ಯಾದಿಗಳಿಗೆ ಸಂಬಂಧಿಸಿ ಜನಸ್ಪಂದನೆ ಇರುತ್ತದೆ ಎಂದು ಹೇಳುವುದಕ್ಕಾಗಿ ಆ ಪ್ರಸಂಗವನ್ನು ಇಲ್ಲಿ ಪ್ರಸ್ತಾಪಿಸಿದ್ದು.

ವಿಚಿತ್ರ ಹೇಗಿರುತ್ತದೆ ನೋಡಿ. ಧಿಮಂತ ನಾಯಕ ದೇವರಾಜ ಅರಸು ಅವರನ್ನು ಹಿಂದುಳಿದ ವರ್ಗಗಳ ನಾಯಕ ಅಂತ ಎಲ್ಲರೂ ಸಾರ್ವಕಾಲಿಕವಾಗಿ ಒಪ್ಪಿಕೊಂಡುಬಿಟ್ಟಿದ್ದೇವೆ. ಹಾಗಂತ ಅರಸು ಯಾವುದೇ ಹಿಂದುಳಿದ ವರ್ಗಕ್ಕೆ ಅಥವಾ ಬಲಾಢ್ಯ ಜನಜಾತಿ ಸಮುದಾಯಕ್ಕೆ ಸೇರಿದವರಲ್ಲ. ‘ಅರಸು’ ಸಮುದಾಯದವರ ಜನಸಂಖ್ಯೆ 50 ಸಾವಿರ ದಾಟಿರದಿದ್ದರೂ ಅರಸು ಹಿಂದುಳಿದವರು ಮತ್ತು ಬಡಬಗ್ಗರ ಪರ ತೋರಿದ ಕಾಳಜಿ, ಭೂಸುಧಾರಣೆಯಂತಹ ವಿಧಾಯಕ ಕಾರ್ಯಕ್ರಮಗಳು ದುರ್ಬಲ ವರ್ಗದವರು ಅವರನ್ನು ತಮ್ಮ ಹೃದಯದಲ್ಲಿ ಶಾಶ್ವತವಾಗಿ ಅಚ್ಚೊತ್ತಿಕೊಳ್ಳಲು ಕಾರಣ. ಅಂಥ ಅರಸು ಕೂಡ ಶಾಶ್ವತವಾಗಿ ಅಧಿಕಾರಕ್ಕೆ ಅಂಟಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಕೆಲವರು ಹೇಳುತ್ತಾರೆ- ಸಿದ್ದರಾಮಯ್ಯ ಅಭಿನವ ಅರಸು, ಹಿಂದುಳಿದ ವರ್ಗಗಳ ಕಣ್ಮಣಿ ಇತ್ಯಾದಿ ಇತ್ಯಾದಿ. ಹಾಗಂದಮಾತ್ರಕ್ಕೆ ಸಿದ್ದರಾಮಯ್ಯ ಅರಸು ಆಗಲು ಸಾಧ್ಯವೇ? ಏಕೆಂದರೆ ಅರಸು ಅರಸುವೇ, ಸಿದ್ದರಾಮಯ್ಯ ಸಿದ್ದರಾಮಯ್ಯರೇ. ಪ್ರತಿಯೊಬ್ಬರ ವ್ಯಕ್ತಿತ್ವಕ್ಕೂ ಅವರದ್ದೇ ಆದ ಭಿನ್ನತೆ, ವಿಶೇಷತೆ ಇರುತ್ತದೆ ತಾನೆ.

ಚೇತರಿಸಿಕೊಳ್ಳದ ಹೆಗಡೆ: ದಿವಂಗತ ರಾಮಕೃಷ್ಣ ಹೆಗಡೆ ಅವರದ್ದು ಇನ್ನೂ ವಿಭಿನ್ನ ವ್ಯಕ್ತಿತ್ವ. ಅವರು ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅತ್ಯಂತ ಸಣ್ಣದಾದ ಬ್ರಾಹ್ಮಣ ಸಮುದಾಯದ ಕುಟುಂಬದಲ್ಲಿ. ಹೆಗಡೆ ದೇಶ-ವಿದೇಶದಲ್ಲಿ ದೊಡ್ಡ ಹೆಸರು ಮಾಡಿದರು. ಆದರೆ ಜಿಲ್ಲೆಯ ಜನರೇ ಅವರ ಕೈ ಹಿಡಿಯಲಿಲ್ಲ. ಅದೇ ಹೆಗಡೆ ಉತ್ತರ ಕರ್ನಾಟಕ ಭಾಗದಲ್ಲಿ, ಅದರಲ್ಲೂ ಬಹುಸಂಖ್ಯಾತ ಲಿಂಗಾಯತ ಸಮುದಾಯವರ ಪ್ರೀತಿ ವಿಶ್ವಾಸವನ್ನು ಅಪಾರವಾಗಿ ಸಂಪಾದಿಸಿದ್ದರು; ಉ.ಕ.ಭಾಗದ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದರು. ಆ ಜನಪ್ರಿಯತೆಯೇ ಅವರ ರಾಜಕೀಯ ಶಕ್ತಿಯಾಯಿತು. ಆ ಭಾಗದ ಜನರು ಹೆಗಡೆ ಅವರನ್ನು ಪ್ರೀತಿಸಲು ಮುಖ್ಯ ಕಾರಣ ಎಂದರೆ ಅಧಿಕಾರ ಸಿಕ್ಕ ಸಂದರ್ಭದಲ್ಲಿ ಅವರು ಕರ್ನಾಟಕದ ಉದ್ದಗಲಕ್ಕೂ ನೂರಾರು ಸಂಖ್ಯೆಯಲ್ಲಿ ಎರಡನೇ ತಲೆಮಾರಿನ ನಾಯಕರನ್ನು ರೂಪಿಸಿದ್ದು. ಪ್ರಭಾವಿ ಮತ್ತು ಯುವ ನಾಯಕರ ಪಡೆಯನ್ನೇ ಕಟ್ಟಿದ್ದರು ಅವರು. ಆ ಪೈಕಿ ದಿವಂಗತ ಎಂ.ಪಿ.ಪ್ರಕಾಶ, ಹಾಲಿ ಸಚಿವ ಬಸವರಾಜ ರಾಯರೆಡ್ಡಿ ಪ್ರಮುಖರು. ಅದರ ಒಟ್ಟು ಪರಿಣಾಮ ಎಂದರೆ ಈಗಿನವರ ಹಾಗೆ ಚುನಾವಣೆ ಗೆಲ್ಲಲು ಹೆಗಡೆಗೆ ಹುಟ್ಟೂರನ್ನು ಆಶ್ರಯಿಸುವ ಪ್ರಮೇಯ ಬರಲಿಲ್ಲ. ಎಲ್ಲಿ ಬೇಕಾದರೂ ಸ್ಪಧಿಸಿ ಚುನಾವಣೆ ಗೆಲ್ಲಬಹುದು ಎಂಬ ಆತ್ಮವಿಶ್ವಾಸವನ್ನು ಅವರು ಹೊಂದಿದ್ದರು. ಆದರೆ ಕಾಲ ಬದಲಾಯಿತು.

ಹೆಗಡೆ ಬಾಗಲಕೋಟೆಯಿಂದ ಲೋಕಸಭೆ ಚುನಾವಣೆಗೆ ಸ್ಪಧಿಸಿ ಸರಿಸಾಟಿಯೇ ಅಲ್ಲದ ಸಿದ್ದು ನ್ಯಾಮಗೌಡರ ಎದುರು ಹೀನಾಯವಾಗಿ ಸೋತರು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಅಕಾಲಿಕ ಮರಣ ಆ ಸೋಲಿಗೆ ಮುಖ್ಯ ಕಾರಣ ಎಂಬ ಅಭಿಪ್ರಾಯ ಇದೆಯಾದರೂ, ಕಾಲಾಂತರದಲ್ಲಿ ಹೆಗಡೆ ಜನಪ್ರಿಯತೆ ಕುಸಿಯುತ್ತ ಬಂದಿದ್ದೂ ಕಾರಣ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಬುದ್ಧಿವಂತ ಹೆಗಡೆ ಬಾಗಲಕೋಟೆಯಿಂದ ಸ್ಪಧಿಸುವ ವಿಚಾರದಲ್ಲಿ ಲೆಕ್ಕಾಚಾರ ತಪ್ಪಿದ್ದರು. ಆ ಸೋಲು ಎಂಥ ಹೊಡೆತ ನೀಡಿತ್ತೆಂದರೆ, ಹೆಗಡೆ ಮುಂದೆಂದೂ ರಾಜಕೀಯವಾಗಿ ಚೇತರಿಸಿಕೊಳ್ಳಲಾಗಲಿಲ್ಲ.

ಮಾಜಿ ಪ್ರಧಾನಿ ದೇವೇಗೌಡರದ್ದು ಮತ್ತೊಂದು ಇತಿಹಾಸ. ರಾಜ್ಯದಲ್ಲಿ ಮುಖ್ಯಮಂತ್ರಿ ಆದದ್ದು, ದೇಶದ ಪ್ರಧಾನಿ ಆಗಿದ್ದು ಎಲ್ಲದರ ಹಿಂದೆ ಅವರಿಗೆ ಬೆನ್ನೆಲುಬಾಗಿ ನಿಂತದ್ದು ತವರು ಜಿಲ್ಲೆ ಹಾಸನ ಮತ್ತು ದಕ್ಷಿಣ ಕರ್ನಾಟಕದ ಒಕ್ಕಲಿಗ ಜನ ಸಮುದಾಯ. ಒಕ್ಕಲಿಗರ ಬಾಹುಳ್ಯದ ಪ್ರದೇಶದಲ್ಲಿ ಗೌಡರು ಪ್ರಶ್ನಾತೀತ ನಾಯಕ. ಆದರೆ ಗೌಡರ ಮೇಲೆ ಅವರ ಸಮುದಾಯ ಹೊಂದಿರುವ ನಿಷ್ಠೆ, ಗೌರವ, ಪ್ರೀತಿ ಗೌಡರ ಕುಟುಂಬದ ಎರಡನೇ ತಲೆಮಾರಿಗೆ ವರ್ಗಾವಣೆ ಆಗುತ್ತದೆ ಎನ್ನಲಾಗದು.

ಒಲವು ಗಳಿಸಲು ಕಸರತ್ತು: ದೇಶದ ಇತರ ರಾಜ್ಯಗಳ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಅತಿದೊಡ್ಡ ರಾಜ್ಯ ಉತ್ತರಪ್ರದೇಶವನ್ನೇ ತೆಗೆದುಕೊಳ್ಳಿ. ಆ ರಾಜ್ಯ ಜಾತಿ ರಾಜಕಾರಣದ ಪ್ರಯೋಗಶಾಲೆಯೂ ಹೌದು. ದಲಿತರಿಗೆ ರಾಜಕೀಯ ಅಧಿಕಾರ ಸಿಗಬೇಕೆಂಬ ಬಯಕೆಯಿಂದ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಕಟ್ಟಿದ ಕಾನ್ಶಿರಾಮ್ ಗುರಿ ತಲುಪುವಲ್ಲಿ ಯಶಸ್ವಿಯೂ ಆದರು. ಕಾನ್ಶಿರಾಮ್ ಶ್ರಮದ ನಿಜವಾದ -ಲಾನುಭವಿ ದಲಿತ ನಾಯಕಿ ಮಾಯಾವತಿ. ನಾಲ್ಕು ಬಾರಿ ಅವರು ಮುಖ್ಯಮಂತ್ರಿಯಾದರು. ಹಾಗಿದ್ದರೂ ಬಿಎಸ್‌ಪಿ ಸ್ಥಾಪನೆಯ ನಿಜವಾದ ಆಶಯ ಈಡೇರಿತೇ ಎಂಬ ಪ್ರಶ್ನೆಗೆ ಬಹುಶಃ ಮಾಯಾವತಿ ಬಳಿಯೂ ಉತ್ತರವಿರಲಿಕ್ಕಿಲ್ಲ. ಅವರು ಅಧಿಕಾರದುದ್ದಕ್ಕೂ ವಿಧಾಯಕ ಕಾರ್ಯಕ್ರಮಗಳಿಗಿಂತ ವಿವಾದಗಳ ಮೂಲಕ ಸದ್ದು ಮಾಡಿದ್ದೇ ಹೆಚ್ಚು. ಕ್ರಮೇಣ ದಲಿತ ಸಮುದಾಯದ ಬೆಂಬಲ ಕರಗತೊಡಗಿತು. ಆಗ ದಲಿತ-ಬ್ರಾಹ್ಮಣ ಜಾತಿ ಸಮೀಕರಣ ಪ್ರಯೋಗ ಮಾಡಿ ಯಶಸ್ಸು ಕಂಡರು. ಈಗ ಉತ್ತರಪ್ರದೇಶದಲ್ಲಿ ಮಾಯಾವತಿ ವರ್ಚಸ್ಸು ಇನ್ನೂ ಕೆಳಕ್ಕೆ ಹೋಗಿದೆ ಎಂಬ ಅಭಿಪ್ರಾಯವಿದೆ. ಅಲ್ಲೀಗ ದಲಿತ ಮತದಾರರ ಒಲವು ಗಳಿಸಲು ಎಲ್ಲ ಪಕ್ಷಗಳೂ ತರಹೇವಾರಿ ಕಸರತ್ತನ್ನು ಶುರು ಮಾಡಿವೆ.

ಗಟ್ಟಿತನ ಇಲ್ಲದಿದ್ದರೆ ಯಾವ ಜನಪ್ರಿಯತೆಯೂ ಶಾಶ್ವತವಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆ ಅಸ್ಸಾಂ ಗಣಪರಿಷತ್ ಮತ್ತು ಪ್ರ-ಲ್ಲಕುಮಾರ್ ಮಹಂತ. ಇವರು ವಿದ್ಯಾರ್ಥಿ ಹೋರಾಟದ ಮೂಲಕ ಬೆಳೆದು ಪಕ್ಷ ಹುಟ್ಟುಹಾಕಿ ಅಸ್ಸಾಂನಲ್ಲಿ ರಾಜಕೀಯ ಕ್ರಾಂತಿ ಮಾಡಿದ್ದು ಇತಿಹಾಸ. ಅದೇ ಗಣಪರಿಷತ್ ಸರ್ಕಾರ ಮಾಡಬಾರದ ಭ್ರಷ್ಟಾಚಾರದಲ್ಲಿ ಮುಳುಗಿ ಈಗ ಜನರಿಂದ ದೂರವಾಗಿರುವುದೂ ಅದರ ಕರಾಳ ಇತಿಹಾಸ.

ಎಡಪಂಥೀಯರು ಬಂಗಾಳ ಮತ್ತು ಕೇರಳದಲ್ಲಿ ಮಾಡಿದ ರಾಜಕೀಯ ಕ್ರಾಂತಿಯೇನು ಕಡಿಮೆಯಲ್ಲ. ಅದೇ ಬಂಗಾಳದಲ್ಲಿ ಕಮ್ಯುನಿಸ್ಟರು ಮಮತಾ ಬ್ಯಾನರ್ಜಿ ಎದುರು ಈಗ ಕಡಿಮೆ ಬೆವರು ಹರಿಸುತ್ತಿದ್ದಾರೆಯೇ? ಆದರೆ ಮಮತಾ ಸಾಗುತ್ತಿರುವ ದಾರಿ ನೋಡಿದರೆ ಅವರೂ ಕಮ್ಯುನಿಸ್ಟ್ ಸರ್ಕಾರ ಮಾಡಿದ ಪ್ರಮಾದದಿಂದ ಪಾಠ ಕಲಿತ ಕುರುಹು ಕಾಣಿಸುತ್ತಿಲ್ಲ.

ಅಣ್ಣಾ ಹಜಾರೆ ಆರಂಭಿಸಿದ ಭ್ರಷ್ಟಾಚಾರ ವಿರೋಧಿ ಚಳವಳಿ ದೇಶದಲ್ಲಿ ಸೃಷ್ಟಿಸಿದ ಸಂಚಲನ ಅಂತಿಂಥದ್ದಲ್ಲ. ಆ ಚಳವಳಿಯನ್ನು ಅರವಿಂದ ಕೇಜ್ರಿವಾಲ್ ರಾಜಕೀಯವಾಗಿ ಹೈಜಾಕ್ ಮಾಡಿಬಿಟ್ಟರು. ಅದರ ಪರಿಣಾಮ ಹಜಾರೆ ಸಂಪೂರ್ಣವಾಗಿ ತೆರೆಮರೆಗೆ ಸರಿದರು. ಅಷ್ಟು ಮಾತ್ರವಲ್ಲ, ಹಜಾರೆ ಇನ್ನೆಂದೂ ಇಂಥ ಮತ್ತೊಂದು ಚಳವಳಿಯನ್ನು ಹುಟ್ಟುಹಾಕಲು ಸಾಧ್ಯವಿಲ್ಲ. ಚಳವಳಿ ಆರಂಭಿಸಿದರೂ ಮೊದಲಿನ ಜನಸ್ಪಂದನೆ ಸಿಗುವುದೂ ಅಸಾಧ್ಯದ ಮಾತು.

ಹಾಗೆ ನೋಡಿದರೆ ರಾಜಕೀಯವಾಗಿ ಕೇಜ್ರಿವಾಲ್ ಸಾಧನೆ ಅಸಾಮಾನ್ಯ. ಆದರೆ ಮೂಲದಲ್ಲೇ ದುರುದ್ದೇಶ, ಉದಾತ್ತತೆ ಅಭಾವ ಇರುವುದರಿಂದ, ಸ್ವಾರ್ಥ ಮತ್ತು ಅಹಂಕಾರ ತುಂಬಿಕೊಂಡಿರುವುದರಿಂದ ಭವಿಷ್ಯದಲ್ಲಿ ಕೇಜ್ರಿವಾಲ್ ಇದಕ್ಕಿಂತ ಹೆಚ್ಚಿನದನ್ನು ಸಾಧಿಸುವುದು ಕಷ್ಟ ಅಂತ ತೋರುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ದೂರಗಾಮಿ ರಚನಾತ್ಮಕ ರಾಜಕೀಯ ತಳಹದಿ, ಸಿದ್ಧಾಂತ ಯಾವುದೂ ಇಲ್ಲದಿರುವುದರಿಂದ ಆಮ್ ಆದ್ಮಿ ಪಕ್ಷ ಬಹಳ ದಿನ ಏಗುವುದು ಕಷ್ಟವಾದೀತು.

ಗೊಂದಲಕ್ಕೆ ಸಿಲುಕಿರುವ ಮೋದಿ: ಮಾಯಾವತಿ, ಮಹಂತ, ಕೇಜ್ರಿವಾಲ್ ಮುಂತಾದವರ ಮಾತು ಹಾಗಿರಲಿ, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದ ನೆಲೆಗಟ್ಟಿನಲ್ಲಿ ಬಲಾಢ್ಯ ಆಗಿರುವ ಮೋದಿಗೇ ಕೇವಲ ಸಿದ್ಧಾಂತದಿಂದ, ಜಾತಿಯಿಂದ, ಭಾವಾವೇಶದಿಂದ, ಭಾವನಾತ್ಮಕ ಅಂಶಗಳಿಂದ ಜನರನ್ನು ಬಹಳ ಕಾಲ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾದಂತಿದೆ. ಆ ವಿಚಾರವಾಗಿ ಅವರು ಕೆಲವೊಮ್ಮೆ ಗೊಂದಲಕ್ಕೆ ಸಿಲುಕಿದಂತೆಯೂ ಭಾಸವಾಗುತ್ತದೆ. ಒಮ್ಮೆ ಅಭಿವೃದ್ಧಿ, ಮತ್ತೊಮ್ಮೆ ಜಾತಿ ಹಿನ್ನೆಲೆ, ಮಗದೊಮ್ಮೆ ಸಾಂಸ್ಕೃತಿಕ ರಾಜಕಾರಣದ ಮಾತನ್ನು ಅವರು ಆಡುತ್ತಾರೆ. ಒಟ್ಟು ಹೇಳುವುದಾದರೆ ಬಲಾಢ್ಯ ಮೋದಿಗೂ ಸಹ ತಾನೆಲ್ಲೋ ಅಪ್ರಸ್ತುತ ಆಗಿಬಿಡುತ್ತೇನಾ, ಗಳಿಸಿದ ಜನಪ್ರಿಯತೆ ಉಳಿಸಿಕೊಳ್ಳುತ್ತೇನಾ ಎಂಬ ಆತಂಕ ಕಾಡುತ್ತಿರುವಂತೆ ತೋರುತ್ತದೆ.

ಹಾಗೆ ನೋಡಿದರೆ ತೊಂಭತ್ತರ ದಶಕದವರೆಗೂ ಬಿಜೆಪಿ ಸಿದ್ಧಾಂತ ಆಧರಿತ ಪಕ್ಷವೇ ಆಗಿತ್ತು. ಅದೇ ಕಾರಣಕ್ಕೆ ತಮ್ಮದು ವಿಭಿನ್ನ ಪಕ್ಷ ಎಂದು ಬಿಜೆಪಿಗರು ಹೇಳುತ್ತಿದ್ದರು. ಜಾತಿ ಆಧಾರದಲ್ಲಿ ಯಾರಿಗೂ ಮಣೆ ಹಾಕುತ್ತಿರಲಿಲ್ಲ. ಒಮ್ಮೆ ಅಧಿಕಾರ ರಾಜಕಾರಣಕ್ಕೆ ಒಗ್ಗಿಕೊಳ್ಳಲು ಶುರು ಮಾಡಿದ ನಂತರ ಈಗ ಬೇರೆಲ್ಲರನ್ನೂ ಮೀರಿಸುವ ರೀತಿಯಲ್ಲಿ ಬಿಜೆಪಿ ಬದಲಾಗಿದೆ ಎಂಬುದು ಆ ಪಕ್ಷದ ಒಳಹೊರಗನ್ನು ಬಲ್ಲವರು ಹೇಳುವ ಮಾತು. ಹೀಗಾಗಿಯೇ ಮಂದಿರ ಚಳವಳಿಯಿಂದ ಹಿಡಿದು ಸ್ವದೇಶಿ ಆಂದೋಲನದವರೆಗೆ ಆ ಪಕ್ಷಕ್ಕೆ ಒಮ್ಮೆ ಸಿದ್ಧಾಂತ ಬೇಕು. ಮತ್ತೊಮ್ಮೆ ಬೇಡ. ಸಿದ್ಧಾಂತ ಎಂಬುದು ಆ ಪಕ್ಷಕ್ಕೆ ಈಗ ಕೇವಲ ಒಂದು ಅನುಕೂಲಸಿಂಧು ಸಲಕರಣೆ ಅಷ್ಟೆ. ಹೀಗಾಗಿಯೇ ಬಿಜೆಪಿಯವರನ್ನು ಮಾತನಾಡಿಸಿದರೆ, ‘ಜಾತಿ ರಾಜಕಾರಣ ಇದ್ದದ್ದೇ. ಭ್ರಷ್ಟಾಚಾರ ರಾಜಕಾರಣದಲ್ಲಿ ಸಹಜ. ಅಧಿಕಾರಕ್ಕೆ ಹಾತೊರೆಯುವುದು ಏನು ತಪ್ಪು?’ ಎಂದು ಸಹಜವಾಗಿ ಕೇಳುತ್ತಾರೆ.

ಇದೆಲ್ಲವೂ ಈಗ ಬಂದು ನಿಂತಿರುವುದು ರಾ.ಬ್ರಿ.ಗೆ. ರಾಯಣ್ಣ ಬ್ರಿಗೇಡ್ ಅಂತ. ಸಂಗೊಳ್ಳಿ ರಾಯಣ್ಣ ಓರ್ವ ಮಹಾನ್ ಸ್ವಾತಂತ್ರ್ಯ ಹೋರಾಟಗಾರ. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಕಾದಾಡಿದ ವೀರ ಎಂದು ಇತಿಹಾಸ ಹೇಳುತ್ತದೆ. ಅಂಥ ಮಹಾಪುರುಷನನ್ನು ಒಂದು ಜಾತಿಗೆ ಸೀಮಿತ ಮಾಡುವುದು ಮೊದಲ ತಪ್ಪು. ಹೋಗಲಿ, ಅಭಿಮಾನಿಗಳು ರಾಯಣ್ಣ ಬ್ರಿಗೇಡ್ ಮಾಡಿದರೆ ಅದರಲ್ಲಿ ಈಶ್ವರಪ್ಪ ಯಾಕೆ ಕಾಣಿಸಿಕೊಳ್ಳಬೇಕು ಎಂಬುದು ಎರಡನೇ ಪ್ರಶ್ನೆ. ಆಯಿತು, ರಾಯಣ್ಣ ಕುರುಬ ಸಮುದಾಯಕ್ಕೆ ಸೇರಿದವ. ಈಶ್ವರಪ್ಪ ಕೂಡ ಅದೇ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಬೇಕಾದರೆ ಬ್ರಿಗೇಡ್‌ನಲ್ಲಿ ಕೆಲಸ ಮಾಡಲಿ. ಆದರೆ ಬಿಜೆಪಿ ಅಧಿಕಾರಕ್ಕೆ ತರಲು ರಾ.ಬ್ರಿ. ಮಾಡುತ್ತಿದ್ದೇವೆ ಎನ್ನುವುದು ಮೂರನೇ ತಪ್ಪು. ಇನ್ನು ಯಡಿಯೂರಪ್ಪ ಲಿಂಗಾಯತ ನಾಯಕರಾಗಿ ಹೊರಹೊಮ್ಮಿದ್ದಾರೆ, ಅವರಿಗೆ ಸೆಡ್ಡು ಹೊಡೆಯಲು ತಾನು ಕುರುಬ ಮತ್ತು ಹಿಂದುಳಿದವರ ನಾಯಕನಾಗಿ ಹೊರಹೊಮ್ಮಬೇಕು ಎಂದು ಈಶ್ವರಪ್ಪ ಭಾವಿಸಿದ್ದರೆ ಆ ಲೆಕ್ಕಾಚಾರ ತಲೆಕೆಳಗಾಗುವದರಲ್ಲಿ ಅನುಮಾನವಿಲ್ಲ. ಕಾರಣ ಇಷ್ಟೆ, ಯಡಿಯೂರಪ್ಪ ಮೊದಲು ರೈತ ನಾಯಕ, ಒಂದು ಹಂತದಲ್ಲಿ ಲಿಂಗಾಯತ ನಾಯಕ. ಮುಖ್ಯಮಂತ್ರಿ ಆದಮೇಲೆ ಸಣ್ಣ, ದೊಡ್ಡ ಎಲ್ಲ ಜನಜಾತಿಯನ್ನು ತಲುಪಿರುವುದೂ ಸತ್ಯ. ಮುಖ್ಯವಾಗಿ ಬಿಎಸ್‌ವೈಗಿಂತ ಉತ್ತಮ ಆಯ್ಕೆ ಬಿಜೆಪಿಗೆ ಬೇರಿಲ್ಲ. ಬಿಜೆಪಿ ದೆಹಲಿ ನಾಯಕರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಈ ವಿಷಯ ಚೆನ್ನಾಗಿಯೇ ಗೊತ್ತು. ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದ ಅಹಿಂದ ವರ್ಗ ಸದ್ಯಕ್ಕೆ ಸಿದ್ದರಾಮಯ್ಯನವರನ್ನು ಬಿಟ್ಟು ಬೇರೆಯವರನ್ನು ನೆಚ್ಚಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ. ಹೀಗಿರುವಾಗ ಮೂಲಭೂತ ಲೆಕ್ಕಾಚಾರ ಏನೆಂದರೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನೇ ತೆಗೆದುಕೊಂಡರೂ ಜಾತಿ ಸಮೀಕರಣ ತುಸು ವ್ಯತ್ಯಾಸವಾದರೂ ರಾ.ಬ್ರಿ. ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮಾತು ಹೇಗೂ ಇರಲಿ, ಸ್ವತಃ ಈಶ್ವರಪ್ಪನವರೇ ಮತ್ತೊಮ್ಮೆ ಸೋಲಿನ ದವಡೆಯಿಂದ ತಪ್ಪಿಸಿಕೊಳ್ಳುವುದು ಕಷ್ಟವಾದೀತು.

ಇವೆಲ್ಲ ವೈಯಕ್ತಿಕ ಮತ್ತು ಕ್ಷುಲ್ಲಕ ರಾಜಕೀಯ ಲೆಕ್ಕಾಚಾರಗಳು. ಆದರೆ ಮುಖ್ಯವಾಗಿ ಯೋಚನೆ ಮಾಡಬೇಕಾದದ್ದು ಬಿಜೆಪಿಯಂಥ ರಾಷ್ಟ್ರೀಯ ಪಕ್ಷದಲ್ಲಿ ಆಗುತ್ತಿರುವ ಈ ಕೋಳಿಜಗಳವನ್ನು ನೋಡಿಕೊಂಡು ನಾಯಕರು ಯಾಕೆ ಮೌನವಾಗಿದ್ದಾರೆ ಎಂಬುದು. ಅದಿಲ್ಲ ಎನ್ನುವುದಾದರೆ ರಾ.ಬ್ರಿ. ಹಿಂದೆ ಒಂದು ವ್ಯವಸ್ಥಿತ ಯೋಜನೆ ಇದೆ ಎಂಬ ಧ್ವನಿ ಹೊರಹೊಮ್ಮುವ ಆಪಾಯವೂ ಇದೆ. ಆಗ ‘ಮಿಷನ್ 150’ರ ಮಾತು ಹಾಗಿರಲಿ, 115 ಕೂಡ ಕಷ್ಟವಾದೀತು. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷದ ಮತ ಗಳಿಕೆ ಪ್ರಮಾಣದ ಕಡೆ ಕಣ್ಣು ಹಾಯಿಸಿದರೆ ಈ ಮಾತಿಗೆ ಸಾಕ್ಷಿ ಪುರಾವೆ ಎಲ್ಲವೂ ಸಿಗುತ್ತದೆ. ಅಷ್ಟಕ್ಕೂ ಈಶ್ವರಪ್ಪನವರು ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುವುದು ಯಾವಾಗ ಅನ್ನುವುದೇ ಸದ್ಯದ ಪ್ರಶ್ನೆ. ಹೌದೋ  ಅಲ್ಲವೋ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top