ಕಣ್ಣಿಗೆ ಕಾಣದ ಶತ್ರುವಿನ ಮುಂದೆ ಸಂಘಟಿತ ಭಾರತೀಯ

ಕಣ್ಣಿಗೆ ಕಾಣದ ಶತ್ರುವಿನ ಮುಂದೆ ಸಂಘಟಿತ ಭಾರತೀಯ
ಎಲ್ಲರಿಗಿಂತ ಮೊದಲು ಎಚ್ಚೆತ್ತುಕೊಂಡ ಭಾರತದ ಲಾಕ್‌ಡೌನ್‌ ನಿರ್ಧಾರ ಮೆಚ್ಚುಗೆ ಪಡೆದಿದೆ

ಕೊರೊನಾ ಎಂಬ ಮಾರಕ ಸೋಂಕು ಜನರ ಜೀವವನ್ನೇ ಹಿಂಡಿ ಹಿಪ್ಪೆ ಮಾಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ನಾವು ಪಾಲಿಸುತ್ತಿರುವ ಸಾಮಾಜಿಕ ಅಂತರ, ಸ್ವಚ್ಛತೆಯ ಶಿಸ್ತು, ಅನಿವಾರ್ಯ ಮನೆವಾಸ, ಏಕಾಂಗಿತನ (ಕ್ವಾರಂಟೈನ್‌)- ಈ ಎಲ್ಲವೂ ನಿಶ್ಚಿತವಾಗಿ ನಮಗೊಂದು ದೊಡ್ಡ ಪಾಠವಾಗಲಿದೆ. ಇದು ನಮ್ಮ ಜೀವನ ಕ್ರಮ ಮತ್ತು ಆಲೋಚನಾ ವಿಧಾನದಲ್ಲಿ ಅಗಾಧ ಬದಲಾವಣೆ ತರಬೇಕಿದೆ. ಆಗ ಮಾತ್ರ ಕೊರೊನಾ ಕಾರಣದಿಂದ ನಾವು ಅನುಭವಿಸುತ್ತಿರುವ ಕಷ್ಟ ನಷ್ಟಕ್ಕೆ ಕಿಂಚಿತ್‌ ಆದರೂ ಪರಿಹಾರ ದೊರಕಿಸಿಕೊಂಡಂತಾಗುತ್ತದೆ. ಮಾತ್ರವಲ್ಲ, ಈಗ ನಾವು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಅನುಭವಿಸಿರುವ ಹಿನ್ನಡೆಯ ವಿರುದ್ಧ ಮತ್ತೆ ಪುಟಿದೇಳಲು ಅನುಕೂಲವೂ ಆಗುತ್ತದೆ. ಕೊರೊನಾದ ವಿರುದ್ಧದ ಹೋರಾಟ ಇನ್ನೂ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ನಮ್ಮ ದೇಶ, ಜನ, ಸಮಾಜ, ಸಮುದಾಯದ ವರ್ತನೆ-ಹೋರಾಟ ಹೇಗಿದೆ ಎಂಬುದನ್ನು ವಿಶ್ಲೇಷಿಸೋಣ.
ದೇಶಕ್ಕೆ ದೇಶವೇ ಸಂಕಟದಲ್ಲಿ ಮುಳುಗಿರುವಾಗ ನಮ್ಮ ರಾಜಕೀಯ ಪಕ್ಷ ಗಳು ಈ ಸವಾಲನ್ನು ಎದುರಿಸುವುದು ಹೇಗೆ? ಮುಂದೆ ಪ್ರಸ್ತಾಪಿಸಿರುವ, ಕವಿಯೊಬ್ಬರ ಸಾಲುಗಳು ಆಳುವ ಪಕ್ಷ ಮತ್ತು ಪ್ರತಿಪಕ್ಷ ಗಳಿಗೆ ಸಾರ್ವಕಾಲಿಕ ಮೌಲ್ಯದಂತಿವೆ.
‘‘ದೇಶ್‌ ಆಜ್‌ ಸಂಕಟೋಂಸೆ ಗಿರಾ ಹೈ. ಔರ್‌ ಯೇ ಸಂಕಟ್‌ ಹಮನೇ ಪೈದಾ ನಹಿ ಕಿಯೆ ಹೈ. ಜಬ್‌ ಜಬ್‌ ಆವಶ್ಯಕತಾ ಪಡಿ, ಸಂಕಟೋಂಕೆ ನಿರಾಕರಣ್‌ ಮೇ ಹಮನೇ ಉಸ್‌ ಸರಕಾರ್‌ ಕಿ ಮದದ್‌ ಕಿಯೆ. ಉಸ್‌ ಸಮಯ್‌ ಕೆ ಪ್ರಧಾನ್‌ ಮಂತ್ರಿ ನರಸಿಂಹ ರಾವ್‌ ಜಿ ನೇ ಭಾರತ್‌ ಕಾ ಪಕ್ಷ ರಖ್‌ ನೇ ಕೆ ಲಿಯೆ ಮುಝೆ ವಿರೋಧಿ ದಲ್‌ ಕೆ ನೇತಾ ಕೆ ನಾತೆ, ಜಿನಿವಾ ಬೇಜಾ ಥಾ. ಔರ್‌ ಪಾಕಿಸ್ತಾನಿ ಉಸೇ ದೇಖ್‌ ಕರ್‌ ಚಮತ್ಕೃತ್‌ ರಹ್‌ ಗಯಿ. ಉನ್‌ ಹೋನೆ ಕಹಾ ಕಿ, ಯೇ ಕಹಾಂಸೇ ಆಯೆ??! ಕಿ ಉನ್‌ ಯಹಾ ವಿರೋಧಿ ದಲ್‌ ಕಿ ನೇತಾ ಏಸೆ ರಾಷ್ಟ್ರ ಕಾರ್ಯ ಮೇ ಭೀ ಸಹಯೋಗ್‌ ದೇನೆ ಕೆ ಲಿ ಯೇ ತಯ್ಯಾರ್‌ ನಹಿ ಹೋತಾ!. ವೋ ಹರ್‌ ಜಗೆ ಅಪನೇ ಸರಕಾರ್‌ ಕೋ ಕಿಲಾನೇಕಿ ಕಾಮ್‌ ಮೇ ಲಗಾ ರಹತಾ ಹೈ. ಯೇ ಹಮಾರಾ ಪರಂಪರಾ ನಹೀ ಹೈ, ಪ್ರಕೃತೀ ನಹೀ ಹೈ. ಮೈ ಯಹೀ ಚಾಹತಾ ಹೂಂಕಿ ಪರಂಪರಾ ಬನೀ ರಹೇ, ಪ್ರಕೃತಿಬನೀ ರಹೇ. ಸತ್ತಾ ಕಾ ಖೇಲ್‌ ತೋ ಚಲೇಗಾ. ಸರಕಾರ್‌ ಆಯೇಗಿ, ಜಾಯೇಗಿ. ಪಾರ್ಟಿಯಾ ಬನೇಗಿ, ಬಿಗಡೇಗಿ. ಮಗರ್‌ ಯೇ ರಹನಾ ಚಾಹಿಯೇ. ಇಸ್‌ ದೇಶ್‌ ಕಾ ಲೋಕತಂತ್ರ ರಹನಾ ಚಾಹಿಯೇ!’’
-ರಾಜಕೀಯ ಪಕ್ಷ ಗಳು ಹುಟ್ಟುತ್ತವೆ, ಸಾಯುತ್ತವೆ, ಸರಕಾರಗಳು ಬರುತ್ತವೆ, ಹೋಗುತ್ತವೆ. ಆದರೆ, ಜನತಂತ್ರ ಶಾಶ್ವತ.. ಎಂಬ ರಾಜನೀತಿಯ ಶ್ರೇಷ್ಠವಾದ ಈ ಮಾತುಗಳನ್ನು ಹೇಳಿದವರು ಕವಿ ಹೃದಯದ ರಾಜಕಾರಣಿಯಾಗಿದ್ದ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ. ಈ ಮಾತು, ಕಿಂಗ್‌ ಈಸ್‌ ಡೆಡ್‌, ಲಾಂಗ್‌ ಲಿವ್‌ ದಿ ಕಿಂಗ್‌ (ರಾಜ ನಶ್ವರ, ರಾಜತ್ವ ಶಾಶ್ವತ) ಎಂಬ ಫ್ರೆಂಚ್‌ನ ಪುರಾತನ ನಾಣ್ಣುಡಿಯ ಆಶಯಕ್ಕೆ ಪೂರಕವಾಗಿವೆ.
ದೇಶಹಿತದ ವಿಷಯ ಬಂದಾಗ ಆಡಳಿತ ಮತ್ತು ಪ್ರತಿಪಕ್ಷ ಗಳು ಹೇಗೆ ಆಲೋಚನೆ ಮತ್ತು ಕೆಲಸ ಮಾಡಬೇಕು ಎಂಬ ರಾಜ್ಯಧರ್ಮದ ನೀತಿಯನ್ನು ವಾಜಪೇಯಿ ನಮಗೆಲ್ಲರಿಗೂ ಹೇಳಿಕೊಟ್ಟಿದ್ದಾರೆ. ಹಿಂದೊಮ್ಮೆ ಕಾಶ್ಮೀರದ ವಿಷಯದಲ್ಲಿ ಭಾರತ ರಾಜನೀತಿಯ ಸಂಕಷ್ಟಕ್ಕೆ ಗುರಿಯಾಗಿದ್ದಾಗ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಉತ್ತರ ನೀಡಲು ಸಿದ್ಧವಾದ ತಂಡವನ್ನು ಮುನ್ನಡೆಸಿದ್ದು ಆ ಹೊತ್ತಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅಲ್ಲ. ಬದಲಿಗೆ, ಪ್ರತಿಪಕ್ಷ ದಲ್ಲಿದ್ದ ವಾಜಪೇಯಿ. ದೇಶಕ್ಕೆ ಸಂಕಷ್ಟ ಬಂದಾಗ ಪ್ರತಿಪಕ್ಷದ ನಾಯಕನೂ ಆಡಳಿತ ಪಕ್ಷದ ನಾಯಕನಂತೆ ವ್ಯವಹರಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ!
‘‘ಭಾರತದ ಪ್ರಜಾತಂತ್ರ ವಿಶ್ವಕ್ಕೆ ಮಾದರಿ. ಅದರ ಮಹತ್ವ ಪಾಕಿಸ್ತಾನದಂತಹ ದೇಶಕ್ಕೆ ಅರ್ಥವಾಗುವುದಿಲ್ಲ. ಅಲ್ಲಿನ ಪಕ್ಷ ಗಳು ಹಾಗೂ ನಾಯಕರು, ಸಂಕಷ್ಟ-ಸವಾಲಿನ ಸನ್ನಿವೇಶವನ್ನು ಸರಕಾರದ ಕಾಲೆಳೆಯುವುದಕ್ಕೇ ಬಳಸಿಕೊಳ್ಳುತ್ತಾರೆ. ಆದರೆ ಅದು ಭಾರತದ ಸಂಪ್ರದಾಯ ಅಥವಾ ಸಂಸ್ಕೃತಿ ಅಲ್ಲ,’’ ಎಂದಿದ್ದರು ಅಟಲ್‌.
ಕವಿ ಹೃದಯದ ಶ್ರೇಷ್ಠ ಆಡಳಿತಗಾರ ಅಟಲ್‌ ಅವರ ನಡೆ-ನುಡಿಯನ್ನು ನೆನಪಿಸಿಕೊಳ್ಳುವ ಸಂದರ್ಭ ಬಂದಿದೆ. ರಾಜನೀತಿಯ ಸಂಕಷ್ಟಕ್ಕಿಂತ ದೊಡ್ಡದಾದ ಸನ್ನಿವೇಶವಿದು. ಭಾರತವಲ್ಲ, ನೂರಾರು ದೇಶಗಳೇ ಕೊರೊನಾ ಎಂಬ ವೈರಾಣುವೊಂದರ ವಿರುದ್ಧ ಒಗ್ಗಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಕೇಡುಗಾಲವಿದು. ಇದನ್ನು ಭಾರತ ಎದುರಿಸುತ್ತಿರುವುದು ಹೇಗೆ? ಸದ್ಯ ವಿವಿಧ ದೇಶಗಳು ಇದೇ ಸವಾಲನ್ನು ಎದುರಿಸುತ್ತಿರುವ ರೀತಿ-ನೀತಿಯನ್ನು ಮುಂದಿಟ್ಟುಕೊಂಡು ನೋಡಿದರೆ, ರಾಜಕೀಯವಾಗಿ, ಆಡಳಿತಾತ್ಮಕವಾಗಿ ಭಾರತ ಎದುರಿಸುತ್ತಿರುವ ರೀತಿಯನ್ನು ಮೆಚ್ಚಲೇಬೇಕು. ದೇಶವಾಸಿಗಳ ಈ ಮಟ್ಟದ ಒಗ್ಗಟ್ಟನ್ನು ಸ್ವತಂತ್ರ ಭಾರತದ ಇತಿಹಾಸದಲ್ಲಿ ಹಿಂದೆಂದೂ ಕಂಡಿರಲಿಲ್ಲ ಅಥವಾ ಕೇಳಿರಲಿಲ್ಲ. ಬಹುತೇಕ ಎಲ್ಲ ಪಕ್ಷಗಳು ಏಕತೆಯನ್ನು ಪ್ರದರ್ಶಿಸಿವೆ. ಆದರೂ ಭಾರತ ಸರಕಾರ ಕೈಗೊಂಡ ನಿರ್ಧಾರಗಳ ಕುರಿತು ಅಲ್ಲಿ ಇಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಯಾಕೆ ಹೀಗೆ ಎಂಬುದನ್ನು ತುಸು ಆಲೋಚಿಸೋಣ.
ಜನವರಿ 9ರಂದು ಭಾರತದಲ್ಲಿ ಮೊದಲ ಕೊರೊನಾ ಪಾಸಿಟಿವ್‌ ಪ್ರಕರಣ ವರದಿ ಆಯಿತು. ಆಗಲೇ ಸರಕಾರ ಎಚ್ಚೆತ್ತುಕೊಂಡಿದ್ದರೆ ಈಗಿನ ಲಾಕ್‌ ಡೌನ್‌ ಅವಶ್ಯಕತೆ ಬರುತ್ತಿರಲಿಲ್ಲ. ಜನವರಿ ಕೊನೆಯಲ್ಲಿ ಅಥವಾ ಫೆಬ್ರವರಿ ಮಧ್ಯಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಬಂದ್‌ ಮಾಡಿದ್ದರೆ ಕೊರೊನಾ ವೈರಸ್‌ ಭಾರತದ ಒಳಗಡೆ ಪ್ರವೇಶ ಮಾಡುತ್ತಿರಲಿಲ್ಲ. ಏಕಾಏಕಿ ಲಾಕ್‌ಡೌನ್‌ ಜಾರಿ ಮಾಡಿದ್ದು ಸರಿಯಲ್ಲ, ಲಾಕ್‌ಡೌನ್‌ ಘೋಷಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂತಾದವರು ಆಕ್ಷೇಪ ಎತ್ತಿದ್ದಾರೆ. ಇದನ್ನು ಎಚ್ಚರಿಕೆಯ ಕಿವಿಮಾತು ಎಂದೇ ಭಾವಿಸೋಣ. ಸರಕಾರಗಳು ಆತ್ಮಾವಲೋಕನ ಮಾಡಿಕೊಳ್ಳಲು ಪ್ರತಿಪಕ್ಷ ಗಳ ಅಭಿಪ್ರಾಯ ಕಾರಣ ಆಗುವುದಾದರೆ ಅಂತಹ ಟೀಕೆ ಸ್ವಾಗತಾರ್ಹವೆ.
ಆದರೆ ಇಂಥಾ ಟೀಕೆಯ ಪ್ರಮುಖ ಅಂಶಗಳನ್ನು, ಅಲ್ಲಿನ ಕಾರ್ಯಸಾಧ್ಯತೆ ಮತ್ತು ವ್ಯಾವಹಾರಿಕತೆಯ ಒರೆಗಲ್ಲಿಗೆ ಹಚ್ಚಿ ನೋಡುವುದು ಸೂಕ್ತ. ಕಾರ್ಯಸಾಧ್ಯತೆ ದೃಷ್ಟಿಯಿಂದ ನೋಡುವುದಾದರೆ, ಕೇಂದ್ರ ಸರಕಾರ ಕಾದು ನೋಡಿ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದ್ದು ಸಮಯೋಚಿತವಾಗಿಯೇ ಇದೆ. ಆ ವೇಳೆಗೆ, ಅದನ್ನು ಬಿಟ್ಟು ಅನ್ಯ ಆಯ್ಕೆ ಸರಕಾರದ ಮುಂದಿರಲಿಲ್ಲ. ಅರಬ್‌ ದೇಶಗಳಲ್ಲಿ ಮತ್ತು ಇಟಲಿಯಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರಿದ ನಂತರ ಅಲ್ಲಿ ಸಿಕ್ಕಿಹಾಕೊಂಡ ಭಾರತೀಯರನ್ನು ಸರಕಾರ ಸುರಕ್ಷಿತವಾಗಿ ಕರೆದುಕೊಂಡು ಬರಲೇಬೇಕಿತ್ತು. ವಿದೇಶಾಂಗ ನೀತಿಯ ನೆಲೆಯಲ್ಲಿ ಮಾತ್ರವಲ್ಲ, ಮಾನವೀಯತೆ ದೃಷ್ಟಿಯಿಂದ ನೋಡಿದರೂ, ಅವರನ್ನು ವಿಮಾನದ ಮೂಲಕ ಕರೆತರಬೇಕಿತ್ತು. ಬೇರೆ ಆಯ್ಕೆಯೇ ಸರಕಾರದ ಮುಂದೆ ಇರಲಿಲ್ಲ. ಅಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ಕರೆ ತಂದರೆ, ನಮ್ಮ ದೇಶಕ್ಕೆ ವೈರಸ್‌ ಹರಡುತ್ತದೆ, ಅವರು ಅಲ್ಲೇ ಸಾಯಲಿ ಬಿಡಿ ಎಂಬ ಕೆಲವರ ಅಮಾನವೀಯ ಸಲಹೆಗೆ, ಯಾವುದೇ ಜವಾಬ್ದಾರಿಯುತ ದೇಶ ಕಿವಿಗೊಡುವುದಿಲ್ಲ. ವಿವೇಕಿಗಳು ಈ ರೀತಿ ಹೇಳುವುದಿಲ್ಲ. ಸರಕಾರವೇನಾದರೂ ಇಂಥ ಮಾತುಗಳನ್ನು ಪಾಲಿಸುವುದಿರಲಿ, ಬರೀ ಓಗೊಟ್ಟಿದ್ದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತಿತ್ತು. ಅಷ್ಟು ಮಾತ್ರವಲ್ಲ, ಭಾರತದ ಒಳಗಿನಿಂದಲೂ ಆ ನಿಲುವಿನ ಕುರಿತು ಬೇರೆಯದೇ ಪ್ರತಿಕ್ರಿಯೆ ಹೊರಹೊಮ್ಮುತ್ತಿತ್ತು.
ಈ ಮಾತು ಸರಿಯಾಗಿ ಮನವರಿಕೆ ಆಗಬೇಕೆಂದರೆ 1999ರಲ್ಲಿ ದೆಹಲಿಯಿಂದ ಕಠ್ಮಂಡುವಿಗೆ ಹೊರಟ ಏರ್‌ ಇಂಡಿಯಾ ವಿಮಾನ ಹೈಜಾಕ್‌ ಪ್ರಕರಣ ನೆನಪಿಸಿಕೊಳ್ಳೋಣ. ಹೈಜಾಕ್‌ ಆದ ವಿಮಾನದಲ್ಲಿ ಸಿಕ್ಕಿಕೊಂಡಿದ್ದ ನೂರಾರು ಭಾರತೀಯರ ರಕ್ಷ ಣೆಗೋಸ್ಕರ ಮೌಲಾನಾ ಮಸೂದ್‌ ಅಜರ್‌ ಸೇರಿ ಮೂವರು ಮೋಸ್ಟ್‌ ವಾಂಟೆಡ್‌ ಕಾಶ್ಮೀರಿ ಉಗ್ರರನ್ನು ಬಿಡುಗಡೆ ಮಾಡಿದ್ದು ಸರಿಯೋ, ತಪ್ಪೋ ಎಂಬ ಚರ್ಚೆ ಈಗಲೂ ನಡೆಯುತ್ತಿದೆ. ಆ ಉಗ್ರರಿಂದ ಮುಂದೆ ಅಪಾಯವಾದದ್ದು ನಿಜ; ಆದರೆ ಆ ಕ್ಷಣದಲ್ಲಿ ಭಾರತೀಯರ ರಕ್ಷಣೆಗಾಗಿ ಉಗ್ರರನ್ನು ಬಿಡುಗಡೆ ಮಾಡಿದ್ದು ಸರಕಾರದ ಧೀರ ನಿಲುವೆಂದೇ ಹೇಳಬೇಕಾಗುತ್ತದೆ.
ಕೊರೊನಾ ಎದುರಿಸಲು ಲಾಕ್‌ಡೌನ್‌ ಅನಿವಾರ್ಯವಾಗಿತ್ತೇ ಎಂಬುದು ಕೆಲವರನ್ನು ಕಾಡುತ್ತಿರುವ ಮತ್ತೊಂದು ಪ್ರಶ್ನೆ. ಪ್ರಾಥಮಿಕ ಹಂತದಲ್ಲಿ ಈ ಸೋಂಕು ಎದುರಿಸಲು, ಜನರ ಓಡಾಟವನ್ನು ಕಡಿಮೆ ಮಾಡುವುದು, ಸಾಮುದಾಯಿಕ ಅಂತರ ಕಾಯ್ದುಕೊಳ್ಳುವುದು, ವೈಯಕ್ತಿಕ ಸ್ವಚ್ಛತೆ ಹಾಗೂ ಸೋಂಕಿಗೀಡಾದವರ ಕ್ವಾರಂಟೈನ್‌ (ಏಕಾಂತವಾಸ) ಅನಿವಾರ್ಯ ಎಂಬುದು ಇಡೀ ಜಗತ್ತೇ ಅರಗಿಸಿಕೊಂಡಿರುವ ವಾಸ್ತವ. ಈ ಎಲ್ಲವೂ ಕಟ್ಟುನಿಟ್ಟಾಗಿ ಜಾರಿಯಾಗಬೇಕೆಂದರೆ, ಭಾರತದಂಥ ಜನಸಂಖ್ಯಾ ಬಾಹುಳ್ಯ ದೇಶಕ್ಕೆ ಲಾಕ್‌ಡೌನ್‌ ಬಿಟ್ಟು ಬೇರಾವ ಮಾರ್ಗವೂ ಸದ್ಯಕ್ಕೆ ಕಣ್ಣಿಗೆ ಕಾಣುತ್ತಿಲ್ಲ.
ಸೋಂಕಿಗೆ ಗುರಿಯಾಗಿರುವ ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ಭಾರತ ಇಲ್ಲಿಯವರೆಗೆ ಈ ಪ್ರಕರಣವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದೆ. ಕಡಿಮೆ ಜನಸಂಖ್ಯೆ ಇರುವ, ವೈದ್ಯವಿಜ್ಞಾನ, ತಂತ್ರಜ್ಞಾನದ ದೃಷ್ಟಿಯಿಂದ ಅತ್ಯಂತ ಮುಂದುವರಿದ ದೇಶ ಎಂದು ಎದೆಯುಬ್ಬಿಸಿಕೊಂಡು ಹೇಳಿಕೊಳ್ಳುತ್ತಿದ್ದ ಅಮೆರಿಕದಂಥ ಅಮೆರಿಕವೇ ಸೋಲುತ್ತಿದೆ. ಕೊರೊನಾ ಸೃಷ್ಟಿಕರ್ತ ಚೀನಾಗಿಂತಲೂ ಅಧಿಕ ಗಂಡಾಂತರವನ್ನು ಟ್ರಂಪ್‌ ದೇಶ ಎದುರಿಸುತ್ತಿದೆ.
ಈ ಕಾರಣದಿಂದಲೋ ಏನೋ, ವಿಶ್ವ ಆರೋಗ್ಯ ಸಂಸ್ಥೆಯೇ ಭಾರತದ ಲಾಕ್‌ಡೌನ್‌ ಘೋಷಣೆಯ ಸಮಯ ಹಾಗೂ ನಿರ್ವಹಣೆ ರೀತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದೆ. ‘‘ಭಾರತ ಸರಕಾರ ಬಹಳ ಮುಂಚಿತವಾಗಿ ಲಾಕ್‌ಡೌನ್‌ ಜಾರಿ ಮಾಡಿತು ಮತ್ತು ಆ ನಿರ್ಧಾರ ಬಹಳ ದೂರದೃಷ್ಟಿಯಿಂದ ಕೂಡಿದೆ,’’ ಎಂದಿದ್ದಾರೆ ಡಬ್ಲ್ಯುಎಚ್‌ಒ ಪ್ರತಿನಿಧಿ ಡಾ.ಡೇವಿಡ್‌ ನೆಬ್ರೂ. ಮುಂದಿನ ಎರಡು ವಾರಗಳಲ್ಲಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸಮುದಾಯದ ನಡುವೆ ರೋಗ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯರು ನಡೆಸಲಿರುವ ಹೋರಾಟವೇ ನಿರ್ಣಾಯಕ. ಇದರಲ್ಲಿ ಕೊರೊನಾ ವಿರುದ್ಧದ ಭಾರತದ ಗೆಲುವು ಮತ್ತು ಸೋಲು ನಿರ್ಧಾರವಾಗಲಿದೆ!

ಗೆಲುವಿನ ಕಿರೀಟ ನೂರು ಕೋಟಿ ಭಾರತೀಯರಿಗೆ
ಡಬ್ಲ್ಯುಎಚ್‌ಓ ಹೇಳಿರುವ ಹಾಗೆ ಭಾರತದ ಲಾಕ್‌ಡೌನ್‌ ಪರಿಣಾಮ, ಫಲ ನೀಡಿದರೆ, ಅದರ ಸಂಪೂರ್ಣ ಶ್ರೇಯಸ್ಸು ನೂರು ಕೋಟಿ ಭಾರತೀಯರಿಗೇ ಸಲ್ಲಬೇಕು. 21 ದಿನ ಮನೆ ಹೊಸ್ತಿಲಿನಿಂದಾಚೆ ಬರದೇ ಮನೆಯಲ್ಲೇ ಬಂಧಿಯಾಗುವುದೆಂದರೆ ಸಣ್ಣ ಮಾತಲ್ಲ.
ಹಾಗೆ ನೋಡಿದರೆ ಈ ಸನ್ನಿವೇಶ ಯುದ್ಧಕ್ಕಿಂತಲೂ ಭೀಕರ. ಸಮರದಲ್ಲಿ ಹೋರಾಡಲು ಕಣ್ಣಿಗೆ ಕಾಣುವ ಎದುರಾಳಿ ಇರುತ್ತಾನೆ. ಆತನನ್ನು ಸೋಲಿಸಬಹುದು. ಆದರೆ ವೈರಸ್‌ ಎಂಬ ಕಣ್ಣಿಗೆ ಕಾಣದ, ಮದ್ದೇ ಇಲ್ಲದ ಶತ್ರು ನಮ್ಮೊಳಗೆ ಬಂದು ಸೇರಿದರೆ, ಯಾರ ವಿರುದ್ಧ ಹೋರಾಟ ನಡೆಸುತ್ತೀರಿ? ಇದು ನಮ್ಮೊಳಗೆ ನಾವೇ ನಡೆಸಬೇಕಾದ ಸಮರ. ನಮ್ಮ ಕುಟುಂಬಕ್ಕೆ ನಾವೇ ದೊಡ್ಡ ಅಪಾಯವಾಗುವ, ಸಾವು-ನೋವು ಹಂಚುವ ವಿಚಿತ್ರ ಕದನವಿದು. ಸರಕಾರದ, ತಜ್ಞ ವೈದ್ಯರ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವ ಮೂಲಕವಷ್ಟೇ ಶತ್ರುವನ್ನು ಗೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಅನುಶಾಸನ ಪಾಲನೆಯ ಮೂಲಕವೇ ಹೋರಾಟ ನಡೆಸುತ್ತಿರುವ ಭಾರತೀಯ ಜನಸಮೂಹವನ್ನು ಗ್ರೇಟ್‌ ಎನ್ನಬೇಕು.
1975ರ ತುರ್ತು ಪರಿಸ್ಥಿತಿಯಲ್ಲಿ ಕೆಲವು ರಾಜಕೀಯ ನೇತಾರರು ಭೂಗತರಾಗಿದ್ದರು. ಆದರೆ ಈ ರೀತಿ ದೇಶಕ್ಕೆ ದೇಶವೇ ಭೂಗತವಾಗಿರುವುದು ಇದೇ ಮೊದಲು. ಅಂತಹ ಸವಾಲನ್ನು ನೂರು ಕೋಟಿ ಭಾರತೀಯರು ಸವಾಲಾಗಿ ಸ್ವೀಕರಿಸಿ ಇದುವರೆಗೂ ಗೆಲುವಿನ ಪಥದಲ್ಲಿಯೇ ಇದ್ದಾರೆ. ಗೆಲ್ಲುವ ವಿಶ್ವಾಸವೂ ಗೋಚರಿಸುತ್ತಿದೆ. ಗೆದ್ದರಂತೂ ಕೋಟ್ಯಂತರ ಭಾರತೀಯರೇ ಈ ಸಮರದ ಅನ್‌ಸಂಗ್‌ ಹೀರೋಸ್‌ !! ಮುಂದೆ ಈ ರೀತಿ ಎಂಥದ್ದೇ ಕಡುಕಷ್ಟದ ಸನ್ನಿವೇಶ ಎದುರಾದರೂ ನಾವದನ್ನು ಇದಕ್ಕಿಂತಲೂ ಯಶಸ್ವಿಯಾಗಿ ಎದುರಿಸುವುದರಲ್ಲಿ ಅನುಮಾನ ಬೇಡ.

ಮತೀಯವಾದಕ್ಕೆ ತುಪ್ಪ ಸುರಿದ ವೈರಸ್‌
ಇದೊಂದು ಅತ್ಯಂತ ಬೇಸರದ ಮತ್ತು ಆತಂಕಕಾರಿ ಬೆಳವಣಿಗೆ. ಹಾಗೆ ನೋಡಿದರೆ ಮತ-ಧರ್ಮಗಳಿಗೂ ಕೊರೊನಾ ವೈರಸ್‌ ಆತಂಕಕ್ಕೂ ಯಾವುದೇ ಸಂಬಂಧ ಇರಬಾರದು. ದೇಶಹಿತಕ್ಕಿಂತಲೂ ಮತ-ಧರ್ಮಗಳ ಹಿತ ಮುಖ್ಯವಾಗಬಾರದು. ಆದರೆ ದಿಲ್ಲಿಯ ನಿಜಾಮುದ್ದೀನ್‌ ಮರ್ಖಜ್‌ ದರ್ಗಾದ ತಬ್ಲಿಘ್‌ ಸಭೆಯಲ್ಲಿ ಪಾಲ್ಗೊಂಡ ಸಹಸ್ರಾರು ಜನರು ಸರಕಾರ/ಡಬ್ಲ್ಯುಎಚ್‌ಒ ಎಲ್ಲದರ ಆದೇಶ ಉಲ್ಲಂಘಿಸಿ ದೇಶಾದ್ಯಂತ ಸಂಚರಿಸಿ ಕೊರೊನಾ ವೈರಸ್‌ ಹರಡಲು ಕಾರಣ ಆಗಿದ್ದು ಒಂದು ಕರಾಳ ಕೃತ್ಯ ಎನ್ನದೆ ವಿಧಿಯಿಲ್ಲ. ತಬ್ಲಿಘ್‌ ಸಭೆ ಈ ವೇಳೆ ನಡೆಯದೇ ಇದ್ದರೆ ಅಥವಾ ಅದರಲ್ಲಿ ಪಾಲ್ಗೊಂಡವರೆಲ್ಲ ವೈದ್ಯಕೀಯ ಪರೀಕ್ಷೆಗೆ ಸಹಕರಿಸಿದ್ದರೆ ಭಾರತ ಸುಲಭದಲ್ಲಿ ಕೊರೊನಾ ಸವಾಲು ಎದುರಿಸುವ ಅವಕಾಶ ಇತ್ತೆಂಬುದು ಮನವರಿಕೆ ಆಗುತ್ತದೆ. ವಿಚಿತ್ರ ಎಂದರೆ ಸರಕಾರಗಳು ಹಲವು ಬಾರಿ ಮನವಿ ಮಾಡಿದ ಬಳಿಕವೂ ಸೋಂಕಿತರು ವೈದ್ಯಕೀಯ ಪರೀಕ್ಷೆಗೆ ಬಾರದೆ ಇದ್ದಾಗ ಆಶಾ ಕಾರ್ಯಕರ್ತರು ಅವರ ವಸತಿ ಪ್ರದೇಶಕ್ಕೆ ಹೋದಾಗ ಬೆಂಗಳೂರು, ಇಂದೋರ್‌,ಅಹಮದಾಬಾದ್‌ಗಳಲ್ಲಿ ಅವರ ಮೇಲೆ ದಾಳಿ ಮಾಡಿ, ಉಗುಳಿ ದೌರ್ಜನ್ಯ ಎಸಗಿದ್ದು ಅಕ್ಷ ಮ್ಯ. ಈ ಬೆಳವಣಿಗೆ ಸಂಘಟಿತ ಪ್ರಯತ್ನವೆಂಬ ಆರೋಪಗಳೂ ಕೇಳಿ ಬರುತ್ತಿವೆ. ಪರಿಸ್ಥಿತಿ ಕೈ ಮೀರುವ ಮುನ್ನ ಸಂಬಂಧಪಟ್ಟ ಸಮುದಾಯದ ಪ್ರಮುಖರು, ಧಾರ್ಮಿಕ ಮುಖಂಡರು ಜವಾಬ್ದಾರಿಯುತ ನೇತೃತ್ವ ವಹಿಸುವುದಕ್ಕೆ ಸಕಾಲ ಇದು.

ಸಂಕಷ್ಟದಲ್ಲೂ ಆಪದ್ಬಾಂಧವರು
ವೈದ್ಯರಿಗೆ ಮತ್ತು ಪೊಲೀಸರಿಗೆ ನಿಜಕ್ಕೂ ಇದು ಸತ್ವ ಪರೀಕ್ಷೆಯ ಕಾಲ. ತಮ್ಮ ಜೀವವನ್ನೇ ಇಷ್ಟು ಅಪಾಯಕ್ಕೆ ಒಡ್ಡಿಕೊಂಡು ಕೆಲಸ ಮಾಡಬೇಕಾದ ಇಂಥ ಸನ್ನಿವೇಶವನ್ನು ಈ ಹಿಂದೆ ವೈದ್ಯಲೋಕ ನೋಡಿರಲಿಕ್ಕಿಲ್ಲ. ಆದರೆ ಮೊದಲ ಬಾರಿಗೇ ಎದುರಾದ ಅಗ್ನಿಪರೀಕ್ಷೆಯನ್ನು ನಮ್ಮ ವೈದ್ಯ ಸಮುದಾಯ ಯಶಸ್ವಿಯಾಗಿ ಎದುರಿಸಿದೆ. ಹಾಗೆಯೇ ಇಡೀ ದೇಶವೇ ಸ್ತಬ್ಧವಾಗುವಂತೆ ನೋಡಿಕೊಳ್ಳುವ ಸವಾಲು ಪೊಲೀಸರಿಗೆ, ಸೇನಾಪಡೆಗಳಿಗೆ ಇದೇ ಮೊದಲು. ಈ ಇಬ್ಬರೂ ಮೊದಲ ಬಾರಿಗೇ ಅಗ್ನಿಪರೀಕ್ಷೆ ಗೆದ್ದಿದ್ದಾರೆ. ಅವರಿಗೊಂದು ಶಹಬ್ಭಾಸ್‌ ಹೇಳೋಣ.

ವ್ಯಕ್ತಿಗತವಾಗಿ ಗಳಿಸಿದ್ದೇನು?
ಈಗಿನ ಸನ್ನಿವೇಶದಲ್ಲಿ ಭಾರತೀಯರು, ಜಗತ್ತಿನ ಜನರು ವ್ಯಕ್ತಿಗತವಾಗಿ ಕಲಿತ ಪಾಠ ಅಗಾಧವಾದುದು. ಸ್ವಚ್ಛ ಭಾರತ ಎಂದರೆ ಬೀದಿಬದಿಯ ಕಸಗುಡಿಸುವುದಕ್ಕೆ ಸೀಮಿತ ಅಲ್ಲ ಎಂದು ಹಲವು ಸಂದರ್ಭಗಳಲ್ಲಿ ಹೇಳಿದ್ದಿದೆ. ಅದು ಸಾಂಕೇತಿಕ. ಸ್ವಚ್ಛಭಾರತ ಎಂದರೆ ಬೀದಿಯ ಜೊತೆಗೆ ಕೈ-ಕಾಲು, ಬಾಯಿ,ದೇಹ,ಮನಸ್ಸು ಸ್ವಚ್ಛವಾಗಬೇಕು ಎಂದು ಅರಿಯಬೇಕಿದೆ. ಕೊರೊನಾ ಆ ಪಾಠವನ್ನು ಇಡೀ ಜಗತ್ತಿಗೆ ಕಲಿಸಿದೆ. ನಾವದನ್ನು ಇನ್ನೆಂದೂ ಮರೆಯದಿರೋಣ.

ಮುಂದಿನ ಬದುಕು ಮುಖ್ಯ
ಕೊರೊನಾ ಸವಾಲಿನ ಪೂರ್ಣ ಯಶಸ್ಸು ಲಾಕ್‌ಡೌನ್‌ ಹೇಗೆ ಯಶಸ್ವಿಯಾಗಿ ಮಾಡಿದೆವು ಎಂಬುದರಲ್ಲಿ ಮಾತ್ರ ಇಲ್ಲ. ಒಟ್ಟಾಗಿ ನಾವು ಹೇಗೆ ಚಪ್ಪಾಳೆ ತಟ್ಟುತ್ತೇವೆ, ಕ್ಯಾಂಡಲ್‌ ಹಚ್ಚುತ್ತೇವೆ ಎಂಬುದನ್ನು ಆಧರಿಸಿಲ್ಲ. ಈ ಲಾಕ್‌ ಡೌನ್‌ ತೆರವಾದ ನಂತರ ನಾವು ಹೇಗೆ ಬದುಕು ಕಟ್ಟಿಕೊಳ್ಳುತ್ತೇವೆ ಎಂಬುದನ್ನು ಆಧರಿಸಿದೆ. ಅನೇಕ ಉದ್ಯಮಗಳು ಮುಚ್ಚಬಹುದು. ಸಣ್ಣ ಮತ್ತು ಮಧ್ಯಮ ಗಾತ್ರದ ಲಕ್ಷಾಂತರ ಉದ್ಯಮ ಘಟಕಗಳು ಲಾಕ್‌ಡೌನಿಂದ ಆಚೆ ಬರದೇ ಇರುವ ಅಪಾಯವಿದೆ. ಅದರಿಂದ ಲಕ್ಷಾಂತರ ದುಡಿಯುವ ಕೈಗಳಿಗೆ ಕೆಲಸವೇ ಕರಗಿ, ನಿರುದ್ಯೋಗ ಸವಾಲು ಸೃಷ್ಟಿಯಾಗಲಿದೆ. ಅನ್ನ ಬೆಳೆಯುವ ರೈತರು ಬೆಲೆ ಇಲ್ಲದೆ ಕಂಗಾಲಾಗಬಹುದು. ಆಗ ನಿಜವಾದ ಹಾಹಾಕಾರ ಶುರುವಾಗುತ್ತದೆ. ಆಗ ಸರಕಾರಕ್ಕೆ ನೈಜ ಸವಾಲು ಎದುರಾಗುತ್ತದೆ. ಅದಕ್ಕೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ಉದ್ಯಮ, ಉದ್ಯೋಗ ಕಾಯದೇ ಹೋದರೆ ಬೇರೆಲ್ಲ ವ್ಯರ್ಥ. ಈಗಿನ ಸನ್ನಿವೇಶವನ್ನು ನಾವು ಹೀಗೇ ಭಾವಿಸೋಣ. The world is closed down for renovation, Grand reopening soon.. ನಿರೀಕ್ಷೆ ನಿಜವಾಗಲಿ.

ಓದುಗರ ಒಡಲಾಳ
ಕೊರೊನಾ ಕಾರಣಕ್ಕೆ ಅನಿರೀಕ್ಷಿತವಾಗಿ ಮತ್ತು ಅನಿವಾರ್ಯವಾಗಿ ಗೃಹಬಂಧನಕ್ಕೆ ಸಿಲುಕಿದ್ದೇವೆ. ಈ ಕಾಲವನ್ನು ನಮ್ಮೆಲ್ಲರ ದೇಹಾರೋಗ್ಯ ಸಿಕ್ಕ ಸುವರ್ಣಾವಕಾಶ ಎಂದು ತಿಳಿದು ಹಿತಮಿತವಾಗಿ ತಿಂದುಂಡು, ವ್ಯಾಯಾಮಗಳನ್ನು ಅಭ್ಯಸಿಸೋಣ. ರಾಗಿ ಗಂಜಿಯೂ 21 ದಿನಗಳ ಕಫ್ರ್ಯೂ ವೇಳೆ ನಮ್ಮ ಆರೋಗ್ಯದ ಸಂಗಾತಿ ಆದೀತು. ಹಗಲೆಲ್ಲ ಅಂಗಡಿ, ಮಾಲ್‌ ಅಂತ ಓಡಾಡಿ ನೀವೂ ತೊಂದರೆ ತೆಗೆದುಕೊಂಡು ಮತ್ತೊಬ್ಬರಿಗೂ ತೊಂದರೆ ಕೊಡುವುದು ಬೇಡ.
– ಎಸ್‌.ಆರ್.ಗಾರವಾಡ, ನಿವೃತ್ತ ಮುನ್ಸಿಪಲ್‌ ಅಧಿಕಾರಿ-ದಾವಣಗೆರೆ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top