ಭಾರತದಲ್ಲಿ ಹೂಡಿಕೆ ಸಾಧ್ಯತೆ – ಸೂಕ್ತ ಯೋಜನೆ, ಇಚ್ಛಾಶಕ್ತಿ ಬೇಕು

ಕೊರೊನಾ ಸೋಂಕಿನ ಕಾರಣವಾಗಿ ಚೀನಾದಿಂದ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಸ್ಥಳಾಂತರವಾಗುವ ನಿರೀಕ್ಷೆ ಇದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತೆ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ರಾಜ್ಯಗಳಿಗೆ ಇವುಗಳ ಹೂಡಿಕೆಯನ್ನು ಆಕರ್ಷಿಸಲು ಸಮಗ್ರ ಯೋಜನೆಯನ್ನು ರೂಪಿಸಬೇಕು ಎಂದು ಮೋದಿಯವರು ತಿಳಿಸಿದ್ದಾರೆ. ಇದು ಒಂದು ಪೂರ್ವ ಸೂಚನೆ ಅಷ್ಟೇ. ಹೀಗಾಗುವ ಸಾಧ್ಯತೆ ನಿಚ್ಚಳವಾಗಿ ಕಾಣಿಸುತ್ತಿದೆ. ಯಾಕೆಂದರೆ ಇತ್ತೀಚೆಗೆ ಅಮೆರಿಕ, ಜಪಾನ್ ಮತ್ತಿತರ ರಾಷ್ಟ್ರಗಳು ಚೀನಾದ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲು ನಿರ್ಧರಿಸಿವೆ. ಜಪಾನ್ ಈಗಾಗಲೇ ಇದಕ್ಕಾಗಿ ಪ್ರತ್ಯೇಕ ಯೋಜನೆಯನ್ನು ಸಿದ್ಧಪಡಿಸಿದೆ. ಅಮೆರಿಕದ ಅನೇಕ ಕಂಪನಿಗಳು, ಕಳೆದ ಸಾಲಿನಲ್ಲಿಆರ್ಥಿಕ ಸಂಘರ್ಷ ತೀವ್ರತರವಾಗಿದ್ದಾಗ ಚೀನಾದಿಂದ ನಿರ್ಗಮಿಸಲು ಆರಂಭಿಸಿದ್ದವು. ಕೊರೊನಾ ಸೋಂಕನ್ನು ಚೀನಾ ನಿರ್ವಹಿಸಿದ ಕ್ರಮ, ಸಾವಿರಾರು ಮಂದಿ ಸಾಯುವವರೆಗೂ ಅದನ್ನು ಗುಟ್ಟಾಗಿಟ್ಟ ರೀತಿ, ವಿಶ್ವ ಆರೋಗ್ಯ ಸಂಸ್ಥೆಗೆ ಸರಿಯಾದ ಕಾಲದಲ್ಲಿ ಮಾಹಿತಿ ನೀಡದೆ ಎಲ್ಲ ದೇಶಗಳಿಗೂ ಅದು ಹರಡಲು ಬಿಟ್ಟು ಆರ್ಥಿಕ ಕುಸಿತಕ್ಕೆ ಕಾರಣವಾದ ಅದರ ವರ್ತನೆಗಳು ಎಲ್ಲ ದೇಶಗಳಿಂದ ಟೀಕೆಗೆ ತುತ್ತಾಗಿವೆ. ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧಗಳಿಂದ ಥಟ್ಟನೆ ಹೊರಗೆ ಬರುವುದು ಅಷ್ಟೊಂದು ಸುಲಭವಲ್ಲವಾದರೂ, ಮುಂದಿನ ದಿನಗಳಲ್ಲಿ ಚೀನಾ ಮಾತ್ರ ಹೂಡಿಕೆದಾರರ ಡಾರ್ಲಿಂಗ್ ಆಗಿ ಉಳಿಯಲಾರದು. ಸಹಜವಾಗಿಯೇ ಕಂಪನಿಗಳಿಗೆ ಒದಗುವ ಆಯ್ಕೆ ಎಂದರೆ ಭಾರತ. ಅತಿ ದೊಡ್ಡ ಪ್ರಜಾಪ್ರಭುತ್ವ, ಅತಿ ಹೆಚ್ಚು ಗ್ರಾಹಕವರ್ಗ, ಪಾರದರ್ಶಕ ಆಡಳಿತ ವ್ಯವಸ್ಥೆ, ಸಾಕಷ್ಟು ಮೂಲಸೌಕರ್ಯ ಗಳನ್ನು ಹೊಂದಿರುವ ಭಾರತ ಹೂಡಿಕೆದಾರರಿಗೆ ಬಂಡವಾಳದಾರರಿಗೆ ಮೆಚ್ಚಿನ ತಾಣವಾಗಲಿದೆ.
ಆದರೆ ಹೀಗೆ ಕಂಪನಿಗಳನ್ನು ನಮ್ಮಲ್ಲಿಗೆ ಆಹ್ವಾನಿಸುವ ಮುನ್ನ ನಮ್ಮಲ್ಲಿ ಆಗಬೇಕಾದ ಕೆಲಸಗಳು ಅನೇಕ ಇವೆ. ಹೂಡಿಕೆದಾರರನ್ನು ನಮಗೆ ಬೇಕಾದಂತೆ, ನಿರ್ದೇಶಿತ ಪ್ರದೇಶದಲ್ಲಿ ಸುಸ್ಥಿರ ಹೂಡಿಕೆ ಮಾಡುವಂತೆ ಮನವೊಲಿಸುವ ಕಾರ್ಯ ಆಗಬೇಕು. ಕೆಲವೊಮ್ಮೆ ಕೇಂದ್ರ ಹಾಗೂ ರಾಜ್ಯಗಳಲ್ಲಿ ವಿಭಿನ್ನ ಪಕ್ಷಗಳ ಸರಕಾರಗಳೂ ಅಸ್ತಿತ್ವದಲ್ಲಿದ್ದಾಗ, ಹಿತಾಸಕ್ತಿ ಸಂಘರ್ಷವೇರ್ಪಟ್ಟು ಹೂಡಿಕೆ ಅನ್ಯರ ಪಾಲಾಗಬಹುದು. ಇದನ್ನು ತಡೆಯಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯ ಹಾಗೂ ಅದಕ್ಕೊಂದು ಸ್ಪಷ್ಟ ನೀತಿ ಇರಬೇಕು. ನಾವೀಗ ಕಾಣುವಂತೆ ಕೆಲವೇ ಬೆಳೆದ ಮಹಾನಗರಗಳಲ್ಲಿ ಮತ್ತೆ ಮತ್ತೆ ಹೂಡಿಕೆ ಮಾಡಲು ಸಂಸ್ಥೆಗಳು ಮುಂದಾಗುತ್ತವೆ. ಆದರೆ ಇದರಿಂದ ಅಭಿವೃದ್ಧಿಯ ಅಸಮತೋಲನ ಮತ್ತೆ ಮುಂದುವರಿಯುತ್ತದೆ. ಹೀಗಾಗಿ ಎರಡನೇ ಹಾಗೂ ಮೂರನೇ ಸ್ತರದ ನಗರಗಳತ್ತ ಹೂಡಿಕೆ ಚಾಚುವಂತೆ ಕ್ರಿಯಾಯೋಜನೆ ರೂಪಿಸಬೇಕು. ಯಾವ ಬಗೆಯ ಕಂಪನಿಗಳು ನಮ್ಮಲ್ಲಿಗೆ ಬರಬಹುದು, ಅವುಗಳಿಗೆ ನೆಲೆ ನೀಡುವುದು ಭವಿಷ್ಯದಲ್ಲಿ ದೇಶಕ್ಕೆ ಎಷ್ಟು ನೆರವಾಗಬಹುದು, ಇದರಿಂದ ನಮ್ಮ ನೆಲ ಜಲ ವಾತಾವರಣಕ್ಕೆ ಯಾವ ಬಗೆಯಲ್ಲಿ ಲಾಭ ಅಥವಾ ನಷ್ಟ ಸಂಭವಿಸಬಹುದು, ಯಾವ ನಗರಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ, ಸ್ಥಳೀಯ ಉದ್ಯೋಗಾವಕಾಶಗಳಿಗೆ ಇದರಲ್ಲಿರುವ ಸಾಧ್ಯತೆ ಎಷ್ಟು ಇವುಗಳನ್ನೆಲ್ಲ ಅಧ್ಯಯನ ಮಾಡಬೇಕಿದೆ. ಅವಸರದಿಂದ ಇಲ್ಲಿನ ನೆಲ ಜಲಗಳನ್ನು ಅಗ್ಗವಾಗಿ ಗುತ್ತಿಗೆಗೆ ನೀಡಿ, ತೆರಿಗೆ ವಿನಾಯಿತಿಯನ್ನೂ ನೀಡಿ ಕಂಪನಿಗಳನ್ನು ಶ್ರೀಮಂತಗೊಳಿಸುವುದರಿಂದ ದೇಶಕ್ಕೆ ಏನೂ ಲಾಭವಿಲ್ಲ. ದೂರದೃಷ್ಟಿಯ ಯೋಜನೆಗಳನ್ನು ಇಲ್ಲಿ ನೆಲೆಗೊಳಿಸುವುದರ ಮೂಲಕ ಸ್ಥಳೀಯರ ಉದ್ಯೋಗ, ಕೌಶಲ ಹಾಗೂ ಸಂಪನ್ಮೂಲ ಅಭಿವೃದ್ಧಿಗೆ ನೆರವಾಗುವ ಹೂಡಿಕೆಗಳನ್ನು ಸ್ವಾಗತಿಸಬೇಕು. ಈಗಾಗಲೇ ಅಗ್ಗದ ಸಾಮಗ್ರಿಗಳ ಮೂಲಕ ಚೀನಾ ಜಗತ್ತನ್ನು ಮರುಳುಗೊಳಿಸಿದೆ. ಅಲ್ಲಿನ ಸಂಪನ್ಮೂಲ ಹಾಗೂ ಕಾರ್ಮಿಕ ಬಲದಿಂದ ಅದು ಸಾಧ್ಯವಾಗಿದೆ. ನಮ್ಮಲ್ಲೂಅದು ಸಾಕಷ್ಟಿದೆ. ಆದರೆ ಅದರ ಸದ್ಬಳಕೆಗೆ ಇಚ್ಛಾಶಕ್ತಿ, ಯೋಜನೆ ಸಿದ್ಧವಾಗಬೇಕಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top