ಕೈಗಾರಿಕೆಗಳನ್ನು ಆರಂಭಿಸುವುದಕ್ಕೆ ಉತ್ತೇಜನ ನೀಡಲು ಕ್ರಾಂತಿಕಾರಕವಾದ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಉದ್ಯಮಿಗಳು ಮೊದಲು ಕೈಗಾರಿಕೆ ಆರಂಭಿಸಿ ಬಳಿಕ ಸಂಬಂಧಿತ ಅನುಮೋದನೆ ಪಡೆಯುವ ಪ್ರಕ್ರಿಯೆಗೆ ಮುಂದಾಗಬಹುದು. ಈ ಸಂಬಂಧ ಕರ್ನಾಟಕ ಇಂಡಸ್ಟ್ರಿಯಲ್ ಫೆಸಿಲಿಟೇಷನ್ ಕಾಯಿದೆ- 2002ಕ್ಕೆ ತಿದ್ದುಪಡಿ ತರುವ ತೀರ್ಮಾನವನ್ನು ಸಂಪುಟ ಸಭೆ ಕೈಗೊಂಡಿದೆ. ರಾಜ್ಯದ ಉನ್ನತಾಧಿಕಾರ ಸಮಿತಿ ಅನುಮೋದನೆ ಪಡೆದ ಉದ್ಯಮಿಗಳು ಗುರುತಿಸಲಾದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಚಟುವಟಿಕೆ ಆರಂಭಿಸಬಹುದು. ನಂತರದ 3 ವರ್ಷಗಳಲ್ಲಿ ಕಟ್ಟಡ ನಿರ್ಮಾಣ, ಪರಿಸರ ಮಂಡಳಿ ನಿರಾಕ್ಷೇಪಣ ಪತ್ರ ಸೇರಿ ಸಂಬಂಧಿಸಿದ ನಾನಾ ಪರವಾನಗಿ ಪಡೆಯಬಹುದು. ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ಮಾತ್ರ ಸಣ್ಣ ಕೈಗಾರಿಕೆಗಳಿಗೆ ಸೀಮಿತವಾಗಿ ಈ ವ್ಯವಸ್ಥೆ ಇದ್ದು, ದೇಶದಲ್ಲೇ ಮೊದಲ ಬಾರಿಗೆ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳಿಗೆ ಇಂಥದೊಂದು ಸೌಲಭ್ಯವನ್ನು ಕರ್ನಾಟಕ ಕಲ್ಪಿಸುತ್ತಿದೆ.
ಪ್ರಸ್ತುತ ಉದ್ಯಮ, ಕೈಗಾರಿಕೆಗಳಿಗೆ ರತ್ನಗಂಬಳಿ ಹಾಸುವುದರಲ್ಲಿ ನಮ್ಮ ರಾಜ್ಯ ಮುಂದಿದೆ. ನಮ್ಮ ದೇಶವೇ ವಿಶ್ವಬ್ಯಾಂಕ್ ನೀಡುವ ‘ಉದ್ಯಮಶೀಲತಾ ಸೂಚ್ಯಂಕ’ದಲ್ಲಿ ಕಳೆದ ವರ್ಷ ಉನ್ನತ ರಾರಯಂಕಿಂಗ್ ಸಾಧಿಸಿತ್ತು. ಒಂದೇ ವರ್ಷದಲ್ಲಿ 142ರಿಂದ 79 ಮೆಟ್ಟಿಲುಗಳಷ್ಟು ಮೇಲೇರಿ 63ನೇ ರಾರಯಂಕಿಂಗ್ ಪಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹೂಡಿಕೆ ಮಾಡುವವರಿಗೆ ಎಲ್ಲ ಬಗೆಯ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದಾಗಿ ಹೇಳಿದ್ದರು. ಕಳೆದ ಬಜೆಟ್‌ನಲ್ಲಿ ಕಿರು, ಮಧ್ಯಮ ಉದ್ಯಮಗಳಿಗೆ ತೆರಿಗೆ ವಿನಾಯಿತಿ ಹಾಗೂ ಕೋವಿಡ್ ಪ್ಯಾಕೇಜ್‌ನಲ್ಲಿ ದೊಡ್ಡ ಮೊತ್ತ ಘೋಷಿಸಲಾಗಿದೆ. ಆದರೆ, ‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ನಲ್ಲಿ ಮಹತ್ವದ್ದನ್ನು ದೇಶ ಸಾಧಿಸಿದ್ದರೂ ‘ಈಸ್ ಆಫ್ ಸ್ಟಾರ್ಟಿಂಗ್ ಬ್ಯುಸಿನೆಸ್’ ಅಥವಾ ‘ಉದ್ಯಮ ಆರಂಭಿಸುವಿಕೆ’ಯಲ್ಲಿ ದೇಶದಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ವಿಶ್ವಬ್ಯಾಂಕ್‌ನ ಪ್ರಕಾರ ಈ ಮಾನದಂಡದಲ್ಲಿ ಭಾರತದ ಸ್ಥಾನ 136. ಉದ್ಯಮ ಆರಂಭಿಸಲು ಮುಂದಾಗುವ ಉತ್ಸಾಹಿಗಳು ಅಧಿಕಾರಶಾಹಿ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯ ಜಟಿಲತೆಗಳಿಂದಾಗಿ ಭ್ರಮನಿರಸನಗೊಳ್ಳುವುದೇ ಹೆಚ್ಚು. ‘‘ಬೆಂಗಳೂರಿನಲ್ಲಿ ಒಂದು ರೆಸ್ಟೋರೆಂಟ್ ಆರಂಭಿಸಬೇಕಿದ್ದರೆ 36 ಲೈಸೆನ್ಸ್‌ಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಸಿಂಗಾಪುರ ಅಥವಾ ಚೀನಾದಲ್ಲಿ ಕೇವಲ ನಾಲ್ಕು ಪರವಾನಗಿ ಸಾಕು,’’ ಎಂದು ಕೇಂದ್ರ ಸರಕಾರ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಕಳೆದ ವರ್ಷ ಹೇಳಿದ್ದರು. ಇಂಥ ಸನ್ನಿವೇಶ ಬದಲಾಗದೆ ಉದ್ಯಮ ವಲಯ ಬೆಳೆಯದು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸರಿಯಾದ ಕ್ರಮವನ್ನೇ ಕೈಗೊಂಡಿದೆ.
ಕೈಗಾರಿಕೆಗಳು ನಮ್ಮ ಆರ್ಥಿಕತೆಯ ಸ್ತಂಭಗಳಲ್ಲಿ ಒಂದು ಹಾಗೂ ದೊಡ್ಡ ಸಂಖ್ಯೆಯ ಕಾರ್ಮಿಕರಿಗೆ ನೌಕರಿ ಕಲ್ಪಿಸುವ ನೆಲೆಗಳಾಗಿರುವುದರಿಂದ ಮುಂದಿನ ದಿನಗಳಲ್ಲಿ ಆರ್ಥಿಕತೆ ಪುನಶ್ಚೇತನಗೊಳ್ಳಬೇಕಿದ್ದರೆ ಇವುಗಳು ಜೀವಂತಿಕೆಯಿಂದ ನಳನಳಿಸುವ ಅಗತ್ಯವಂತೂ ಖಂಡಿತ ಇದೆ. ಈಗ ಸಂಪುಟ ಕೈಗೊಂಡಿರುವ ನಿರ್ಧಾರದಂತೆ ಉದ್ಯಮ ಆರಂಭಕ್ಕೆ ಉನ್ನತಾಧಿಕಾರ ಸಮಿತಿಯ ಅನುಮೋದನೆ ಸಾಕು. ಇದರಿಂದ, ಆರಂಭಕ್ಕೂ ಮುನ್ನವೇ ಪರವಾನಗಿಗಾಗಿ ಓಡಾಡಬೇಕಾದ ಸಮಯದ ಉಳಿತಾಯವಾಗುತ್ತದೆ. ಪರವಾನಗಿ ಪ್ರಕ್ರಿಯೆಗಳೆಲ್ಲ ಮುಗಿಯುವ ಹೊತ್ತಿಗೆ ಔದ್ಯಮಿಕ ಉತ್ಪಾದನೆ ನಡೆಯುವ ಸ್ಥಿತಿಗೆ ತಲುಪಿಸಬಹುದು. ಕೇವಲ ಪರವಾನಗಿ ಪಡೆಯುವ ಯಾಂತ್ರಿಕ ಕೆಲಸಕ್ಕಾಗಿ ಅಮೂಲ್ಯ ಉತ್ಪಾದಕ ಸಮಯ ವ್ಯಯವಾಗುವುದು ತಪ್ಪುತ್ತದೆ. ಔದ್ಯಮಿಕ ಚಟುವಟಿಕೆ ಮುನ್ನಡೆಸಲಾಗದ ಪರಿಸ್ಥಿತಿ ಉಂಟಾದಲ್ಲಿ, ಪರವಾನಗಿ ಪಡೆಯುವ ನಿರರ್ಥಕ ಉಪಕ್ರಮವನ್ನೂ ನಡೆಸಬೇಕಿಲ್ಲ. ಕೊರೊನಾ ಆತಂಕದಿಂದ ನಲುಗಿರುವ ಔದ್ಯಮಿಕ ವಲಯವನ್ನು ಮೇಲೆತ್ತಬೇಕಾದರೆ ಇಂಥ ಇನ್ನಷ್ಟು ಉಪಕ್ರಮಗಳು ಅಗತ್ಯವಾಗಿವೆ. ಹಾಗೆಯೇ ಪರರಾಜ್ಯದ, ಪರದೇಶದ ಪಾಲಾಗಬಹುದಾದ ಉದ್ಯಮಗಳನ್ನು ನಮ್ಮತ್ತ ಆಕರ್ಷಿಸುವುದು, ಕೊರೊನಾ ಕಾರಣದಿಂದ ಚೀನಾದಿಂದ ಕಾಲ್ತೆಗೆಯಬಹುದಾದ ಕೈಗಾರಿಕೆಗಳನ್ನು ಇಲ್ಲಿಗೆ ತರಿಸಿಕೊಳ್ಳುವುದು ಕೂಡ ಇದರಿಂದ ಸಾಧ್ಯ ಆಗಬಹುದು. ಹೀಗಾಗಿ ಇದನ್ನು ಧನಾತ್ಮಕ ದೃಷ್ಟಿಯಿಂದ ನಾವು ನೋಡಬೇಕಿದೆ.