ಸವಾಲಿನ ನಡುವೆ ಉತ್ಪಾದನೆಗೆ ಕೈಗಾರಿಕೆಗಳು ರೆಡಿ

ಲಾಕ್‌ಡೌನ್‌ ಎರಡು ವಾರಗಳ ತನಕ ಮುಂದುವರಿದಿದ್ದರೂ, ಹಸಿರು ಮತ್ತು ಕೇಸರಿ ವಲಯಗಳಲ್ಲಿ ಗಣನೀಯ ಸಡಿಲವಾಗಿರುವುದರಿಂದ ರಾಜ್ಯದಲ್ಲಿ ಉದ್ದಿಮೆಗಳ ಚಟುವಟಿಕೆಗಳನ್ನು ಪುನರಾರಂಭಿಸಲು ನಾನಾ ಇಂಡಸ್ಟ್ರಿಗಳು ಪೂರ್ವ ಸಿದ್ಧತೆ ನಡೆಸುತ್ತಿವೆ. ಹಾಗಿದ್ದೂ, ರಾಜ್ಯವೂ ಸೇರಿದಂತೆ ದೇಶದ ಹಲವು ಉದ್ದಿಮೆಗಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದೂ ಸುಳ್ಳಲ್ಲ.
ವಾಣಿಜ್ಯ ಪರ ಸಂಘಟನೆಗಳು ಶೀಘ್ರದಲ್ಲೇ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದರೂ, ಉದ್ಯಮಿಗಳು ಹಿಂದೆಂದೂ ಕಂಡರಿಯದ ಸವಾಲುಗಳು ಮತ್ತು ಅನಿಶ್ಚಿತತೆಯ ನಿರೀಕ್ಷೆಯಲ್ಲಿದ್ದಾರೆ. ಕೋವಿಡ್-19 ಬಿಕ್ಕಟ್ಟು ಮತ್ತು ಅನಿಶ್ಚಿತತೆಯ ಪರಿಣಾಮ ಗ್ರಾಹಕರ ಬೇಡಿಕೆ ಮತ್ತು ಜೀವನಶೈಲಿಯಲ್ಲಿ ಭಾರಿ ಬದಲಾವಣೆಯಾಗಿರುವುದು ಇದಕ್ಕೆ ಕಾರಣ. ‘‘ಕಾರ್ಖಾನೆಗಳನ್ನು ಪುನರಾರಂಭಿಸಲು ಸಿದ್ಧರಾಗಿ ಎಂಬ ಸುಳಿವನ್ನು ಸರಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಯಂತ್ರೋಪಕರಣಗಳನ್ನು ಧೂಳು ಕೊಡವಿ ಸಜ್ಜುಗೊಳಿಸಬೇಕಿದೆ. ಕಾರ್ಮಿಕರನ್ನು ವಾಪಸ್ ಆಗಲು ಸೂಚಿಸಬೇಕಾಗಿದೆ. ಗ್ರಾಹಕರಿಗೂ ತಿಳಿಸಬೇಕಿದೆ. ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವುದು ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಿದ್ದು, ಒಂದು ವಾರ ಬೇಕಾಗಬಹುದು’’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್ ಜನಾರ್ದನ ತಿಳಿಸಿದ್ದಾರೆ.
ರಾಜ್ಯದ ಉದ್ಯಮಿಗಳಿಗೆ ಉತ್ಪನ್ನಗಳ ರಫ್ತಿಗೆ ಸಂಬಂಧಿಸಿ ‘ಸರ್ಟಿಫಿಕೇಟ್ ಆಫ್ ಒರಿಜಿನ್’ ಅನ್ನು ವಿತರಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಬೆಂಗಳೂರಿನಲ್ಲಿ ಚಟುವಟಿಕೆಗಳು ಶುರುವಾದ ಬಳಿಕ ಅನುಕೂಲವಾಗಲಿದೆ ಎಂದು ಎಫ್‌ಕೆಸಿಸಿಐ ತಿಳಿಸಿದೆ.
‘‘ಕೋವಿಡ್-19 ಇಡೀ ಗ್ರಾಹಕರ ಬೇಡಿಕೆಗಳನ್ನು ಬದಲಿಸಿದೆ. ಇದು ಬಹುತೇಕ ಎಲ್ಲ ವಲಯಗಳ ಮೇಲೆ ಪ್ರಭಾವ ಬೀರಲಿದೆ. ಗ್ರಾಹಕರ ಬೇಕು-ಬೇಡಗಳನ್ನು ಪರಿಗಣಿಸದೆ ಉತ್ಪಾದನೆ ಮಾಡಿದರೆ ತೊಂದರೆ ಕಟ್ಟಿಟ್ಟ ಬುತ್ತಿ’’ ಎನ್ನುತ್ತಾರೆ ಅಸೊಚೆಮ್‌ನ ಮಾಜಿ ಅಧ್ಯಕ್ಷ ಸಂಪತ್ ರಾಮನ್. ‘‘ರಾಜಧಾನಿಯ ಬಹುತೇಕ ಕಂಪನಿಗಳಲ್ಲಿ ಆಪರೇಟರ್‌ಗಳು ಬೆಂಗಳೂರನ್ನು ತೊರೆದಿರುವುದರಿಂದ ಸವಾಲಾಗಿ ಪರಿಣಮಿಸಲಿದೆ’’ ಎನ್ನುತ್ತಾರೆ ಸಿಟಡೆಲ್ ಇಂಟಲಿಜೆಂಟ್ ಸಿಸ್ಟಮ್‌ನ ನಿರ್ದೇಶಕ ದಿವಾಕರ್ ಬೆಳವಾಡಿ.

ಹೈಪರ್ ಲೋಕಲ್ ಟ್ರೆಂಡ್
‘‘ಭಾಗಶಃ ಲಾಕ್‌ಡೌನ್‌ ತೆರವಿನಿಂದಾಗಿ ಗ್ರಾಮಾಂತರ ಪ್ರದೇಶದ ಜನತೆ ಭವಿಷ್ಯದಲ್ಲಿ ನಗರಗಳಲ್ಲಿ ಖರೀದಿಗೆ ಆಸಕ್ತಿ ತೋರಿಸುವ ಸಾಧ್ಯತೆ ಕಡಿಮೆ. ಇದು ಸ್ಥಳೀಯ ಮಾರುಕಟ್ಟೆಗೆ ಬೇಡಿಕೆ ಸೃಷ್ಟಿಸಲಿದೆ,’’ ಎನ್ನುತ್ತಾರೆ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ. ‘‘ಕಚ್ಚಾ ವಸ್ತುಗಳ ಪೂರೈಕೆ, ತಯಾರಾದ ವಸ್ತುಗಳ ಸಾಗಣಿಕೆ ಸವಾಲಾಗಿ ಪರಿಣಮಿಸಲಿದೆ. ಉದಾಹರಣೆಗೆ ಸೈಕಲ್ ಅಗರಬತ್ತಿಯಲ್ಲಿ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿ, ಮನೆಯಲ್ಲಿರುವ ಕಾರ್ಮಿಕರಿಗೆ ಕೊಟ್ಟು, ಅಗರಬತ್ತಿಯನ್ನು ಸಂಗ್ರಹಿಸುವುದು ಸವಾಲಾಗಲಿದೆ. ಲಾಜಿಸ್ಟಿಕ್ಸ್ ಸಮಸ್ಯೆ ಇದಕ್ಕೆ ಕಾರಣ’’ ಎನ್ನುತ್ತಾರೆ ಅವರು.
‘‘ಉದ್ದಿಮೆಗಳಲ್ಲಿ ಸಿಬ್ಬಂದಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಸಂಚಾರಕ್ಕೆ ಖಾಸಗಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವೇರ್ ಹೌಸ್, ಸರಕುಗಳ ಸಾಗಣೆ ವಲಯದಲ್ಲಿ ಕಾರ್ಮಿಕರ ಅಭಾವ ಕಂಡು ಬರುತ್ತಿದೆ’’ ಎನ್ನುತ್ತಾರೆ ಫೋರ್ಟಿಗೊ ನೆಟ್‌ವರ್ಕ್‌ ಸಿಇಒ ಅಂಜನಿ ಮಂಡಲ್.
‘‘ಅನೇಕ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಬಲ್ಲ ಉದ್ಯೋಗಿಗಳಿಗೆ ಪೂರಕವಾದ ವ್ಯವಸ್ಥೆಗಳನ್ನು ಹೊಂದಿಲ್ಲ. ಚಾಲಕರ ಕೊರತೆಯಿಂದ ಸರಕು ಸಾಗಣೆಯೂ ಕ್ಲಿಷ್ಟಕರವಾಗಿದೆ’’ ಎನ್ನುತ್ತಾರೆ ವಯನಾ ನೆಟ್‌ವರ್ಕ್‌ನ‌ ಸ್ಥಾಪಕ ರಾಮ್ ಐಯ್ಯರ್. ‘‘ಕೋವಿಡ್-19 ಬಿಕ್ಕಟ್ಟಿನ ನಂತರ ವಿಶ್ವಾದ್ಯಂತ ಜನತೆಯ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ಆದ್ಯತೆ ಉಂಟಾಗಿದೆ. ಬೇಡಿಕೆ, ಪೂರೈಕೆ, ಮಾರುಕಟ್ಟೆ ಕುಸಿತ, ನಗದು ಕೊರತೆ ಇತ್ಯಾದಿ ಅನೇಕ ಸವಾಲುಗಳು ಸೃಷ್ಟಿಯಾಗಿವೆ. ಉದ್ಯೋಗಿಗಳ ಮತ್ತು ಅವರ ಕುಟುಂಬಗಳ ಸುರಕ್ಷತೆ ಕೈಗಾರಿಕೆಗಳಲ್ಲಿ ಬಹು ಮುಖ್ಯ. ನಾವಂತೂ ಸುರಕ್ಷತೆ ಮತ್ತು ಆರೋಗ್ಯಕ್ಕೆ ಆದ್ಯತೆ ಕೊಡುತ್ತೇವೆ. ಅದರ ಜತೆಯಲ್ಲಿಯೇ ಚಟುವಟಿಕೆಗಳನ್ನು ಮುಂದುವರಿಸಲು ಕಾರ್ಯಪ್ರವೃತ್ತರಾಗಿದ್ದೇವೆ ’’ ಎನ್ನುತ್ತಾರೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌‌ನ ವ್ಯವಸ್ಥಾಪಕ ನಿರ್ದೇಶಕ ಮಸಾಕಾಜು ಯೊಶಿಮುರಾ.

ಕಾರ್ಮಿಕರ ಸಮಸ್ಯೆ
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ನಿರ್ಮಾಣ, ರಿಯಾಲ್ಟಿ ಸೇರಿದಂತೆ ಮೂಲ ಸೌಕರ್ಯ ಯೋಜನೆಗಳು, ಉತ್ಪಾದನೆ, ರಿಟೇಲ್ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳಲ್ಲಿ ಕಾರ್ಮಿಕರ ಕೊರತೆ ತೀವ್ರ ಸಮಸ್ಯೆ ಸೃಷ್ಟಿಸುವ ನಿರೀಕ್ಷೆ ಇದೆ.

ಲಾಕ್‌ಡೌನ್ ಹೊಡೆತಕ್ಕೀಡಾದ ಕ್ಷೇತ್ರಗಳು
ಪ್ರವಾಸೋದ್ಯಮ, ವೈಮಾನಿಕ, ಆಟೊಮೊಬೈಲ್, ಬ್ಯಾಂಕೇತರ ಹಣಕಾಸು ಸಂಸ್ಥೆ, ತೈಲ ಮತ್ತು ಅನಿಲ, ಐಟಿ, ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ವಿಮೆ

ಅಲ್ಪ ತೊಂದರೆಗೀಡಾದ ಕ್ಷೇತ್ರಗಳು
ವಿಶೇಷ ರಾಸಾಯನಿಕ, ಔಷಧ, ಹೆಲ್ತ್ ಕೇರ್, ಟೆಲಿಕಾಂ,‌ ಎಫ್‌ಎಂಸಿಜಿ 

ಕೈಗಾರಿಕೆಗಳ ಉತ್ಪಾದನೆ ಹೆಚ್ಚಾದೀತೆ?
ಲಾಕ್‌ಡೌನ್ ಭಾಗಶಃ ತೆರವಿನಿಂದಾಗಿ ಕೈಗಾರಿಕೆಗಳ ಉತ್ಪಾದನೆಗೆ ಸಜ್ಜಾಗುತ್ತಿವೆ. ಆದರೆ, ದೇಶದ ಒಟ್ಟು ಆರ್ಥಿಕತೆಗೆ ಬಹುದೊಡ್ಡ ಕಾಣಿಕೆ ನೀಡುವ ಮುಂಬಯಿ, ದಿಲ್ಲಿ, ಕೋಲ್ಕೊತಾ, ಹೈದ್ರಾಬಾದ್, ಪುಣೆ, ಬೆಂಗಳೂರು, ಅ‌ಹ್ಮಾದಾಬಾದ್, ಚೈನೈನಂಥ ಮೆಟ್ರೋ ನಗರಗಳು ಕೆಂಪು ಪಟ್ಟಿಯಲ್ಲಿರುವುದರಿಂದ ಉತ್ಪಾದನೆ ಮತ್ತು ಮಾರಾಟ ಸೇರಿದಂತೆ ಇನ್ನಿತರ ವ್ಯಾಪಾರ ಚಟುವಟಿಕೆಗಳಿಗೆ ಅಷ್ಟೇನೂ ಇಂಬು ದೊರೆತಿಲ್ಲ. ವಿಮಾನ, ರೈಲು ಮತ್ತು ಬಸ್ ಸೇವೆ ಇನ್ನೂ ಶುರುವಾಗಿಲ್ಲ. ಇದರಿಂದಾಗಿ ಪೂರೈಕೆ ವೃತ್ತ ಸಂಪೂರ್ಣವಾಗಿ ಭಂಗವಾಗಿದ್ದು, ಆರ್ಥಿಕ ಚಟುವಟಿಕೆಗೆ ಹಿನ್ನಡೆಯಾಗಬಹುದು.

ಲಕ್ಸಂಬರ್ಗ್‌ನ ಎರಡು ಪಟ್ಟು ಬೃಹತ್ ಭೂಮಿ
ಚೀನಾದಿಂದ ಹೊರಹೋಗುತ್ತಿರುವ ಕಂಪನಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಭಾರತವು ಲಕ್ಸಂಬರ್ಗ್‌ನ ಎರಡುಪಟ್ಟು ದೊಡ್ಡದ ಜಾಗವನ್ನು ಗುರುತಿಸಿ, ಅಲ್ಲಿ ಕೈಗಾರಿಕೆಗಳ ಸ್ಥಾಪನಗೆ ಮುಂದಾಗಿದೆ ಎಂದು ಜಾಲತಾಣವೊಂದು ವರದಿ ಮಾಡಿದೆ. ಕೊರೊನೋತ್ತರ ಕೈಗಾರಿಕಾ ಅವಕಾಶಗಳನ್ನು ಎರಡೂ ಕೈಯಿಂದ ಬಾಚಿಕೊಳ್ಳುವ ಭಾರತದ ಪ್ರಯತ್ನ ಇದಾಗಿದೆ. ಹಾಗಿದ್ದೂ, ಸದ್ಯಕ್ಕಂತೂ ದೇಶ ಅನೇಕ ಸವಾಲುಗಳನ್ನು ಎದುರಿಸುತ್ತಿದೆ.

ಸ್ಥಳೀಯ ಕಾರ್ಮಿಕರಿಗೆ ಬೇಡಿಕೆ?
ಲಾಕ್‌ಡೌನ್‌ ಭಾಗಶಃ ತೆರವುಗೊಂಡ ಬೆನ್ನಲೇ ಉದ್ಯಮಿಗಳು ಮತ್ತು ರಪ್ತುದಾರರು ತಮ್ಮ ಕಾರ್ಯ ಚಟುವಟಿಕೆಗಳು ಆರಂಭಿಸುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಕಾರ್ಮಿಕರೆಲ್ಲರೂ ತಮ್ಮ ಊರುಗಳಿಗೆ ವಾಪಸ್ ಆಗಿರುವುದರಿಂದ ತೀವ್ರ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಇದೆ. ಕೈಗಾರಿಕೋದ್ಯಮದಲ್ಲಿ ತರಬೇತು ಕಾರ್ಮಿಕರ ಕೊರತೆ ಹೆಚ್ಚಾಗಲಿದೆ. ಸಾರಿಗೆ ಮತ್ತು ಸ್ಥಳೀಯ ಪ್ರಸರಣದ ವಲಯ ಮೇಲೂ ಹೆಚ್ಚಿನ ಒತ್ತಡ ಬೀಳಲಿದೆ. ‘‘ಒಟ್ಟಾರೆಯಾಗಿ ಕಾರ್ಮಿಕರ ಮೇಲಿನ ವೆಚ್ಚ ಹೆಚ್ಚಾಗಲಿದ್ದು, ಮಧ್ಯಮಾವಧಿಗೆ ಕಾರ್ಯಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ,’’ ಎಂದು ಬಿಸ್ಲೇರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾರ್ಜ್ ಏಂಜಿಲೋ ಅವರು ‘ಎಕನಾಮಿಕ್ ಟೈಮ್ಸ್’ಗೆ ತಿಳಿಸಿದ್ದಾರೆ. ವಲಸೆ ಕಾರ್ಮಿಕರ ಅಲಭ್ಯತೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಬೇಡಿಕೆ ಬರಬಹುದು. ‘‘ವಲಸೆ ಕಾರ್ಮಿಕರ ಅನುಪಸ್ಥಿತಿಯಲ್ಲಿ ಸ್ಥಳೀಯ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಬರಬಹುದು,’’ ಎನ್ನುತ್ತಾರೆ ಪಾರ್ಲೆ ಉತ್ಪಾದನಾ ಮುಖ್ಯಸ್ಥ ಮಾಯಾಂಕ ಶಾ ಹೇಳುತ್ತಾರೆ.

ಹಿಂದಿರುಗಿ ಬರಲಾರರು
‘‘ಸರಕಾರ ಬಹಷ್ಟು ಕಲ್ಯಾಣಕಾರಿ ಕ್ರಮಗಳನ್ನು ಕೈಗೊಂಡಿರುವುದರಿಂದ ವಲಸೆ ಕಾರ್ಮಿಕರ ಮತ್ತೆ ನಗರಗಳತ್ತ ಶೀಘ್ರವೇ ಬರಲಾರರು’’ ಎನ್ನುತ್ತಾರೆ ಎಫ್‌ಐಎಂಎಸ್ಎಂಇ ಪ್ರಧಾನ ಕಾರ್ಯದರ್ಶಿ ಅನಿಲ್ ಭಾರದ್ವಾಜ್ ಅವರು. ಇದರಿಂದಾಗಿ ಸಹಜವಾಗಿಯೇ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಪರಿಣಾಮ ಬೀರಲಿದೆ. ಎಂಎಸ್ಎಂಇ ಚೇಂಬರ್‌ನ ಅಧ್ಯಕ್ಷ ಮುಕೇಶ್ ಮೋಹನ್ ಗುಪ್ತಾ ಅವರು ಭಿನ್ನ ಅಭಿಪ್ರಾಯ ಹೊಂದಿದ್ದು, ‘‘ನಗರಗಳಲ್ಲಿ ಈಗಲೂ ಕಾರ್ಮಿಕರಿದ್ದಾರೆ. ಆದರೆ, ಸಾರ್ವಜನಿಕ ಸಾರಿಗೆ ಅಲಭ್ಯತೆಯಿಂದಾಗಿ ಕಾರ್ಖಾನೆಗಳಿಗೆ ಬರಲು ಅವರಿಗೆ ಸಾಧ್ಯವಾಗುತ್ತಿಲ್ಲ’’ ಎನ್ನುತ್ತಾರೆ ಅವರು.
ಕಾರ್ಮಿಕ ಕೊರತೆಯು ಆಹಾರ ಸಂಸ್ಕರಣಾ ಮತ್ತು ಕೃಷಿ ಉತ್ಪನ್ನ ರಫ್ತು ವಲಯದ ಮೇಲೂ ಪರಿಣಾಮ ಬೀರಲಿದೆ.
‘‘ಕಾರ್ಮಿಕರ ಕೊರತೆ ಹಾಗೂ ಕಡಿಮೆ ಬಡ್ಡಿಗೆ ದುಡಿಯುವ ಬಂಡವಾಳ ಪಡೆಯಲು ಕಷ್ಟವಾಗುತ್ತಿರುವುದರಿಂದ ಈಗಾಗಲೇ ಜಾಮ್ಸ್‌, ಸಾಸ್, ಜ್ಯೂಸ್ ಸೇರಿದಂತೆ ಇನ್ನಿತರ ಆಹಾರ ಮತ್ತು ಕೃಷಿ ಉತ್ಪನ್ನಗಳ ಪೂರೈಕೆಯ ಮೇಲೆ ಹೊಡೆತ ಬಿದ್ದಿದೆ. ಉತ್ಪಾದಕರು ಮುಂದಿನ ಮೂರ್ನಾಲ್ಕು ವಾರಗಳಿಗೆ ಸಾಕಾಗುವಷ್ಟು ಮಾತ್ರ ದಾಸ್ತಾನು ಹೊಂದಿದ್ದು, ಆ ಬಳಿಕ ಚಿಲ್ಲರೆ ವ್ಯಾಪಾರ ಮೇಲೆ ಪರಿಣಾಮ ಬೀರಬಹುದು’’ ಎನ್ನುತ್ತಾರೆ ಅಖಿಲ ಭಾರತ ಆಹಾರ ಸಂಸ್ಕರಣಾ ಅಸೋಷಿಯೇಷನ್‌ನ  ಅಧ್ಯಕ್ಷ ಸುಬೋಧ ಜಿಂದಾಲ್ ಅವರು. ಬಂದರುಗಳಲ್ಲಿ ಕಾರ್ಮಿಕ ಕೊರತೆಯ ಪರಿಣಾಮ ಎದುರಾಗಿದ್ದು, ಕೃಷಿ ಸರಕು ಸಾಗಣೆಗೆ ತೀವ್ರ ತೊಂದರೆಯಾಗಿದೆ. ಮುಂಬಯಿನ ಬಂದರುಗಳಲ್ಲಿ ವಾರಕ್ಕೆ 200ರಿಂದ 2005 ಕಂಟೇನರ್ಗಳನ್ನು ರವಾನಿಸಲಾಗುತ್ತಿತ್ತು. ಇದೀಗ ಆ ಪ್ರಮಾಣ 30ರಿಂದ 40ಕ್ಕೆ ಇಳಿದಿದೆ.
ಈಗ ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗಿರುವ ಕಾರ್ಮಿಕರು ಮುಂದಿನ ಮೂರು ತಿಂಗಳವರೆಗೂ ಮತ್ತೆ ನಗರಗಳತ್ತ ಬರುವ ಯಾವುದೇ ಸಾಧ್ಯತೆಗಳಿಲ್ಲ ಎನ್ನುತ್ತಾರೆ ತಜ್ಞರು.

ವೇತನ ವಿತರಣೆ ಹೇಗೆ?
‘‘ಏಪ್ರಿಲ್ ತಿಂಗಳಿನ ವೇತನ ವಿತರಣೆಯ ಬಗ್ಗೆ ಕಾರ್ಖಾನೆಗಳು ಮತ್ತು ನೌಕರರ ನಡುವೆ ಮಾತುಕತೆ ನಡೆದಿದೆ. 15 ದಿನಗಳ ವೇತನ ಸದ್ಯಕ್ಕೆ ನೀಡಲಾಗಿದ್ದು, ಉಳಿದ 15 ದಿನಗಳ ವೇತನವನ್ನು ನಂತರ ನೀಡಲಾಗುತ್ತಿದೆ’’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್ ಜನಾರ್ದನ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಕಾರ್ಮಿಕ ಬಲ

8 ಲಕ್ಷ – ಬೆಂಗಳೂರಿನಲ್ಲಿ ಇರುವ ವಲಸಿಗ ಕಾರ್ಮಿಕರು

2 ಲಕ್ಷ- ನಾನಾ ಶಿಬಿರಗಳಲ್ಲಿ ಇರುವವರು

4,800- ಮೆಟ್ರೊದಲ್ಲಿ ಕಾರ್ಯನಿರತ ಕಾರ್ಮಿಕರು

45%- 80,000 ಭದ್ರತಾ ಸಿಬ್ಬಂದಿಯಲ್ಲಿ ಇರುವ ವಲಸಿಗರ ಪ್ರಮಾಣ.

80%- ಮೂಲ ಸೌಕರ್ಯ ವಲಯದ ಕಾರ್ಮಿಕರಲ್ಲಿ ಇರುವ ವಲಸಿಗ ಕಾರ್ಮಿಕರ ಪ್ರಮಾಣ.

40%- ಆಹಾರ ವಲಯದ 1.4 ಲಕ್ಷ ಕಾರ್ಮಿಕರಲ್ಲಿ ಪೈಕಿ ಬೆಂಗಳೂರು ಹೊಟೇಲ್ ಉದ್ಯಮದಲ್ಲಿ ನಿರತರಾಗಿರುವ ಕಾರ್ಮಿಕರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top