– ಲೈಸೆನ್ಸ್ ಸಿಗುವ ಮೊದಲೇ ಉದ್ಯಮ ಸ್ಥಾಪನೆಗೆ ಸುಗ್ರೀವಾಜ್ಞೆ.
ಕೊರೊನಾ ಸಂಕಷ್ಟ ಕಾಲ ಕರ್ನಾಟಕದ ಪಾಲಿಗೆ ವರವಾಗಲಿದೆ. ಕೈಗಾರಿಕೆಗಳ ಪುನಶ್ಚೇತನಕ್ಕೆ ಸರ್ವ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಹೊಸ ಕೈಗಾರಿಕೆಗಳ ಸ್ಥಾಪನೆಗೂ ಹಲವು ಹೊಸ ಸುಧಾರಣೆಗಳನ್ನು ಜಾರಿಗೆ ತರಲು ಮುಂದಾಗಿದೆ. ಕರ್ನಾಟಕವನ್ನು ದೇಶದಲ್ಲೇ ಮುಂಚೂಣಿ ಕೈಗಾರಿಕಾ ರಾಜ್ಯವಾಗಿ ರೂಪಿಸುವ ಪ್ರಯತ್ನದ ಭಾಗವಿದು ಎಂಬ ಅಭಿಪ್ರಾಯ ಕರುನಾಡ ಕಟ್ಟೋಣ ಬನ್ನಿ ಸಂವಾದದಲ್ಲಿ ಕೇಳಿಬಂತು.
ವಿಕ ಸುದ್ದಿಲೋಕ ಬೆಂಗಳೂರು
ಕೈಗಾರಿಕೆಗಳ ಪುನಶ್ಚೇತನ ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆಯಲ್ಲಿ ಕರ್ನಾಟಕವನ್ನು ದೇಶದಲ್ಲೇ ಮುಂಚೂಣಿ ಸ್ಥಾನಕ್ಕೆ ತಂದು ನಿಲ್ಲಿಸುವ ಆಶಯವನ್ನು ರಾಜ್ಯ ಸರಕಾರ ಹೊಂದಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ವಿಜಯ ಕರ್ನಾಟಕದ ‘ಕರುನಾಡ ಕಟ್ಟೋಣ ಬನ್ನಿ’ ಅಭಿಯಾನದ ಭಾಗವಾಗಿ, ‘ಕೈಗಾರಿಕಾ ಪುನಶ್ಚೇತನ: ಚಿಂತನ ಮಂಥನ’ದಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಷ್ಟ ಕಾಲವನ್ನೂ ಅವಕಾಶವಾಗಿ ಬಳಸಿಕೊಳ್ಳುವ ಮೂಲಕ ಕರ್ನಾಟಕದ ಭವಿಷ್ಯ ಉಜ್ವಲವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಅಭಿವೃದ್ಧಿ ಇಲಾಖೆಯ ಆಯುಕ್ತರಾಗಿರುವ ಗುಂಜನ್ ಕೃಷ್ಣ, ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ಧನ್, ಕಾಸಿಯಾ ಅಧ್ಯಕ್ಷ ಕೆ. ರಾಜು ಮತ್ತು ಪೀಣ್ಯ ಕೈಗಾರಿಕೆ ಸಂಘದ ಅಧ್ಯಕ್ಷರಾಗಿರುವ ಶ್ರೀನಿವಾಸ ಆಸ್ರಣ್ಣ ಅವರು ಕಚೇರಿಯಲ್ಲಿ ಉಪಸ್ಥಿತರಿದ್ದರೆ ರಾಜ್ಯದ ನಾನಾ ಭಾಗಗಳಿಂದ 11 ಮಂದಿ ಕೈಗಾರಿಕೋದ್ಯಮಿಗಳು, ತಜ್ಞರು ವಿಡಿಯೊ ಸಂವಾದದಲ್ಲಿ ಭಾಗವಹಿಸಿದ್ದರು. ಕಾರ್ಮಿಕರ ಸಮಸ್ಯೆ, ವಿದ್ಯುತ್ ಬಿಲ್ ಸೇರಿದಂತೆ ಹಲವು ತೊಂದರೆಗಳ ಜತೆಗೆ ಕೈಗಾರಿಕಾ ಪುನಶ್ಚೇತನಕ್ಕೆ ಹಲವು ಸಲಹೆಗಳು ಹರಿದುಬಂದವು.
ಮೊದಲು ಉದ್ಯಮ
‘‘ರಾಜ್ಯದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಸರಕಾರ ಹಲವು ಸುಧಾರಣೆಗಳನ್ನು ತರಲಾಗುತ್ತಿದೆ. ಮೊದಲು ಕೈಗಾರಿಕೆ ಸ್ಥಾಪನೆ ಮಾಡಿ ನಂತರ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಲು ಅನುಕೂಲ ಆಗುವಂತೆ ಕೈಗಾರಿಕೆ ಕಾನೂನಿಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲಾಗುವುದು,’’ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಕರ್ನಾಟಕ ಕೈಗಾರಿಕೆ (ಸೌಲಭ್ಯಗಳ) ಕಾನೂನು 2002ಕ್ಕೆ ತಿದ್ದುಪಡಿ ತರುವ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು. ನಂತರ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲಾಗುವುದು. ಇನ್ನೊಂದು ತಿಂಗಳಲ್ಲಿ ತಿದ್ದುಪಡಿ ಕಾಯಿದೆ ಜಾರಿಗೆ ಬರಲಿದೆ. ಇದರಿಂದ ಲೈಸೆನ್ಸ್ ಸಿಗುವ ಮೊದಲೇ ಕೈಗಾರಿಕೆ ಸ್ಥಾಪನೆಗೆ ಬೇಕಾದ ಎಲ್ಲ ಚಟುವಟಿಕೆಯನ್ನು ನಡೆಸಬಹುದು. ಇದರಲ್ಲಿ ಭೂಮಿ ಪರಿವರ್ತನೆ ಮಾಡಿಸದೆ ಹಾಗೂ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಸಿಗುವ ಮುನ್ನವೇ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಈಗಿರುವ ಕಾನೂನಿನಿಂದ ಅನುಮತಿ ಸಿಗುವುದು ವಿಳಂಬವಾಗುತ್ತಿದೆ. ಭೂಪರಿವರ್ತನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಎಲ್ಲ ಅನುಮತಿ ಸಿಗುವುದು 2-3 ವರ್ಷ ಆಗುತ್ತಿತ್ತು. ಈ ವಿಳಂಬ ತಪ್ಪಿಸಲು ಕಾನೂನಿಗೆ ತಿದ್ದುಪಡಿ ತರಲಾಗುತ್ತಿದೆ ಎಂದು ವಿವರಿಸಿದರು.
ಟಾಸ್ಕ್ ಫೋರ್ಸ್ ಕೆಲಸ ಶುರು
ಚೀನಾದಿಂದ ಹೊರಹೋಗುವ ಕೈಗಾರಿಕೆಗಳನ್ನು ರಾಜ್ಯಕ್ಕೆ ಸೆಳೆಯಲು ರೂಪಿಸಲಾಗಿರುವ ಟಾಸ್ಕ್ ಫೋರ್ಸ್ ತನ್ನ ಕೆಲಸವನ್ನು ಆರಂಭಿಸಿದೆ. ಈಗಾಗಲೇ ವಿಡಿಯೊ ಕಾನ್ಫರೆನ್ಸ್, ಸಂವಹನಗಳು ನಡೆಯುತ್ತಿವೆ. ಇದರ ಜತೆಗೆ ಸರಕಾರದ ಸುಧಾರಣಾ ನೀತಿಗಳಿಂದ ಬೇರೆ ಬೇರೆ ರಾಜ್ಯ ಮತ್ತು ಹೊರ ದೇಶಗಳಿಂದಲೂ ಹೂಡಿಕೆಗಳು ಹರಿದುಬರಲಿವೆ ಎಂದು ಶೆಟ್ಟರ್ ತಿಳಿಸಿದರು.
ಕಾರ್ಮಿಕರು ಬರುತ್ತಾರೆ
ಲಾಕ್‌ಡೌನ್ ಹಿನ್ನೆಲೆಯಲ್ಲಿ ಊರಿಗೆ ಹೋಗಿರುವ ವಲಸೆ ಕಾರ್ಮಿಕರು ಪರಿಸ್ಥಿತಿ ಸ್ವಲ್ಪ ತಿಳಿಯಾದ ಬಳಿಕ ಎರಡು ತಿಂಗಳಲ್ಲಿ ಮರಳಿ ಬರುತ್ತಾರೆ. ಆಗ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ ಎಂದರು ಶೆಟ್ಟರ್.
ವಿದ್ಯುತ್, ಸಾಲ, ಕಾರ್ಮಿಕರದ್ದೇ ತುಮುಲ
ಕೇಂದ್ರ ಸರಕಾರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ 3 ಲಕ್ಷ ಕೋಟಿ ರೂ. ಸಾಲವನ್ನು ಖಾತ್ರಿರಹಿತವಾಗಿ ನೀಡಲು ಮುಂದಾಗಿದ್ದರೂ ಬ್ಯಾಂಕ್‌ಗಳು ಸಹಕರಿಸುತ್ತಿಲ್ಲ ಎನ್ನುವುದು ಸಂವಾದದಲ್ಲಿ ಕೇಳಿಬಂದ ಪ್ರಮುಖ ದೂರು. ಹೆಚ್ಚಿನ ಬ್ಯಾಂಕ್‌ಗಳು ಸಾಲ ನೀಡಲು ಉತ್ಸಾಹ ತೋರುತ್ತಿಲ್ಲ, ಸಂಕಷ್ಟ ಕಾಲದಲ್ಲಿ ನೆರವಿಗೆ ನಿಲ್ಲಬೇಕಾದರೂ ನಿರುತ್ಸಾಹ ತೋರುತ್ತಿದ್ದಾರೆ. ರಿಸ್ಕ್ ಬೇಡ ಎಂಬ ಕಾರಣ ಮುಂದಿಡುತ್ತಿದ್ದಾರೆ ಎಂಬ ಮಾತು ಕೇಳಿಬಂತು. ಕೇಂದ್ರದ ಈ ನೆರವನ್ನು ಗ್ರಾಹಕರಿಗೆ ಹಸ್ತಾಂತರಿಸುವುದು ಬ್ಯಾಂಕ್‌ಗಳ ಕರ್ತವ್ಯ ಎಂದ ಸಚಿವ ಶೆಟ್ಟರ್ ಅವರು ಈ ಬಗ್ಗೆ ಸಿಎಂ ಅವರ ಜತೆ ಚರ್ಚಿಸಿ ಬ್ಯಾಂಕರ್‌ಗಳ ಸಭೆ ನಡೆಸಲಾಗುವುದು, ಕೇಂದ್ರ ಹಣಕಾಸು ಸಚಿವರ ಜತೆಗೂ ಚರ್ಚಿಸಲಾಗುವುದು ಎಂದರು. ವಿದ್ಯುತ್ ಬಿಲ್‌ನಲ್ಲಿರುವ ನಿಗದಿತ ಶುಲ್ಕವನ್ನು ಈಗಾಗಲೇ ಎರಡು ತಿಂಗಳ ಮಟ್ಟಿಗೆ ರದ್ದುಪಡಿಸಲಾಗಿದೆ. ಇದನ್ನು ಇನ್ನೂ ಮೂರು ತಿಂಗಳ ಕಾಲ ಮುಂದುವರಿಸಬೇಕು ಎನ್ನುವ ಮತ್ತೊಂದು ಬೇಡಿಕೆಯನ್ನು ಪರಿಶೀಲಿಸುವ ಭರವಸೆ ನೀಡಿದರು ಸಚಿವರು. ಜೂನ್ ಅಂತ್ಯದಲ್ಲಿ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಿ ಎಂದು ಪ್ರತಿನಿಧಿಗಳು ಮನವಿ ಮಾಡಿದರು. ಉತ್ತರ ಭಾರತ ಮತ್ತು ರಾಜ್ಯದ ಇತರ ಜಿಲ್ಲೆಗಳಿಗೆ ವಲಸೆ ಹೋಗಿರುವ ಕಾರ್ಮಿಕರನ್ನು ಮರಳಿ ಕರೆತರುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಲಿ ಎಂಬ ಬೇಡಿಕೆಯೂ ಬಲವಾಗಿತ್ತು.
ಮೇಕ್ ಇನ್ ಕರ್ನಾಟಕ
ಚೀನಾದಿಂದ ಹೊರಬರುವ ಕಂಪನಿಗಳನ್ನು ಸೆಳೆಯಲು ಯತ್ನಿಸುತ್ತಿರುವ ಸರಕಾರ, ಕಾಂಪಿಟ್ ವಿಥ್ ಚೀನಾ ಯೋಜನೆಯ ಭಾಗವಾಗಿ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನೂ ಪರಿಗಣಿಸಿ ಇವುಗಳಿಗೆ ಬಲ ತುಂಬಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ಮರಳಿರುವ ಕಾರ್ಮಿಕರನ್ನು ಬೇಗ ಕರೆತರಬೇಕು. ಇದೇ ವೇಳೆ ರಾಜ್ಯದಲ್ಲಿ ಕಾರ್ಮಿಕರ ಕೊರತೆಯ ಅವಕಾಶಗಳನ್ನು ಸ್ಥಳೀಯರು ಬಳಸಿಕೊಳ್ಳುವಂತೆ ಅನುವಾಗಲು ಸರಕಾರ ಯೋಜನೆ ರೂಪಿಸಬೇಕು. ಕೇಂದ್ರ ಅನುದಾನದ ಕೊರತೆಯಿಂದಾಗಿ ಕೆಎಸ್‌ಎಫ್‌ಸಿ ನೀಡುತ್ತಿದ್ದ ಶೇ.4ರ ಬಡ್ಡಿದರದ ಸಾಲ ಯೋಜನೆ ನಿಂತು ಹೋಗಿದೆ. ಅದನ್ನು ಮುಂದುವರಿಸಬೇಕು. ವಿದ್ಯುತ್ ಕಂಪನಿಗಳು ಯಾವುದೇ ಮಾಹಿತಿ ನೀಡದೆ ದಿಢೀರನೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿವೆ. ಇದು ಎಸ್ಎಂಇಗಳ ಉತ್ಪಾದನಾ ಸಾಮರ್ಥ್ಯವನ್ನು ಕುಗ್ಗಿಸುವುದರಿಂದ ವಿದ್ಯುತ್ ಸಂಪರ್ಕ ಕಡಿತ ಮಾಡದಂತೆ ಸಂಬಂಧಿಸಿದವರಿಗೆ ಸೂಚನೆ ನೀಡಬೇಕು. ಎಸ್ಎಂಇಗಳಿಗೆ ಅನುಕೂಲವಾಗುವಂತೆ ಸರಕಾರವೇ ಭೂಮಿ ಮತ್ತು ಕಟ್ಟಡ ಒದಗಿಸಬೇಕು. ದಶಕಗಳಿಂದ ಕನಸಾಗಿಯೇ ಉಳಿದಿದ್ದ ಮಹತ್ವದ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿಗೆ ನಿರ್ಧರಿಸಿರುವುದು ಸ್ವಾಗತಾರ್ಹ. ಮೇಕ್ ಇನ್ ಇಂಡಿಯಾ ಮಾದರಿಯಲ್ಲಿಯೇ ಮೇಕ್ ಇನ್ ಕರ್ನಾಟಕ ಎಂಬ ಅಭಿಯಾನವನ್ನು ಸರಕಾರ ಆರಂಭಿಸಿ ರಾಜ್ಯದಲ್ಲಿ ಉತ್ಪಾದನೆಗೆ ಉತ್ತೇಜನ ನೀಡಬೇಕು.
– ಆರ್. ರಾಜು ಅಧ್ಯಕ್ಷ , ಕಾಸಿಯಾ, ಬೆಂಗಳೂರು
ಶೀಘ್ರ ಹೊಸ ಕೈಗಾರಿಕಾ ನೀತಿ
ಲಾಕ್‌ಡೌನ್ ಪರಿಣಾಮ ಸ್ಥಗಿತವಾಗಿದ್ದ ಉದ್ಯಮ ವಲಯದ ಚಟುವಟಿಕೆಗಳು ಪುನರಾರಂಭವಾಗಿವೆ. ಕೃಷಿ ಭೂಮಿಯ ಮುಕ್ತ ಖರೀದಿ ಮತ್ತು ಮಾರಾಟಕ್ಕೆ ಅನುಕೂಲವಾಗುವಂತೆ ಸರಕಾರ ಕೈಗೊಂಡಿರುವ ಭೂಸುಧಾರಣೆ ಕಾಯಿದೆ ತಿದ್ದುಪಡಿಗೆ ಉತ್ಪಮ ಸ್ಪಂದನೆ ಲಭಿಸಿದೆ. ಈ ಕ್ರಾಂತಿಕಾರಕ ಸುಧಾರಣೆಯಷ್ಟೇ ಅಲ್ಲ, ಇನ್ನೂ ಹಲವು ಮಹತ್ವದ ನಿರ್ಧಾರಗಳನ್ನು ಸರಕಾರ ಕೈಗೊಳ್ಳಲಿದೆ. ಚೀನಾ, ಜಪಾನ್ ಮತ್ತಿತರ ದೇಶಗಳ ಉದ್ಯಮಿಗಳು ರಾಜ್ಯದಲ್ಲಿ ಹೂಡಿಕೆಗೆ ಆಸಕ್ತರಾಗಿದ್ದಾರೆ. ಜತೆಗೆ ಸ್ಥಳೀಯ ಹೂಡಿಕೆದಾರರು, ಉದ್ಯಮಿಗಳಿಗೆ ಅನುಕೂಲ ಕಲ್ಪಿಸಬೇಕಾಗಿದೆ. ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ, ಉತ್ಪಾದಕತೆ ಹೆಚ್ಚಿಸಲು ಭೂ ಸುಧಾರಣೆ ಮಾತ್ರವಲ್ಲದೆ, ಕಾರ್ಮಿಕ ನೀತಿಯ ಸುಧಾರಣೆಗೂ ಸರಕಾರ ಸಜ್ಜಾಗಿದೆ. ಉದ್ಯಮಿಗಳು ಉದ್ದಿಮೆ ಸ್ಥಾಪನೆಗೆ ಪರವಾನಗಿ ಹಾಗೂ ಇತರ ಸವಲತ್ತುಗಳಿಗೆ ಅನುಮೋದನೆ ಪಡೆಯಲು ನಾನಾ ಕಚೇರಿಗಳಿಗೆ ಅಲೆಯುವಂತಾಗಬಾರದು. ಇದಕ್ಕಾಗಿ ಏಕ ಗವಾಕ್ಷಿ ಯೋಜನೆ ಬರಲಿದೆ. ಹೊಸ ಕೈಗಾರಿಕಾ ನೀತಿ ಅಂತಿಮ ಹಂತದಲ್ಲಿದ್ದು, ಮತ್ತಷ್ಟು ಸುಧಾರಣೆ ನಿಶ್ಚಿತ ಎಂದರು.
– ಗೌರವ್ ಗುಪ್ತಾ ಪ್ರಧಾನ ಕಾರ್ಯದರ್ಶಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು
ವಿದ್ಯುತ್ ಬಿಲ್ ವಿನಾಯ್ತಿ ಮುಂದುವರಿಸಿ
ಕೈಗಾರಿಕೆಗಳಿಗೆ ವಿದ್ಯುತ್ ಬಿಲ್ ಪಾವತಿಗೆ ಸರಕಾರ ಮೂರು ತಿಂಗಳು ವಿನಾಯಿತಿ ನೀಡಿದೆ. ಆದರೆ ಕೈಗಾರಿಗಳು ಇನ್ನೂ ಚೇತರಿಸಿಕೊಳ್ಳದ ಕಾರಣ ವಿನಾಯಿತಿಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಬೇಕು. ಅಲ್ಲದೆ, ಬಿಲ್ ಪಾವತಿಸದ ಕಾರಣ ಸಂಪರ್ಕ ಕಡಿತಗೊಳಿಸದಂತೆ ವಿದ್ಯುತ್ ಕಂಪನಿಗಳಿಗೆ ಸೂಚನೆ ನೀಡಬೇಕು. ಬಿಲ್‌ನ ಕನಿಷ್ಠ ಮೊತ್ತಕ್ಕೆ ವಿನಾಯಿತಿ ನೀಡಬೇಕು. ಯುವ ಜನರಿಗೆ ಕೌಶಲ್ಯ ತರಬೇತಿ ಕೊಟ್ಟು ಔದ್ಯೋಗಿಕ ಕ್ಷೇತ್ರಕ್ಕೆ ಕಳಿಸಲು ಹೆಚ್ಚು ಸಮಯ ಹಿಡಿಯುವುದರಿಂದ ಆನ್ ಜಾಬ್ ಟ್ರೈನಿಂಗ್ ಆಧಾರದಲ್ಲಿ ಯುವ ಜನರಿಗೆ ಕೆಲಸದಲ್ಲೇ ತರಬೇತಿ ಕೊಡಲು ಅವಕಾಶ ಕೊಟ್ಟು ತರಬೇತಿ ಅವಧಿಯಲ್ಲಿ ಇವರಿಗೆ ಸರಕಾರವೇ ಸ್ಟೈಪೆಂಡ್ ನೀಡಬೇಕು. ಕೆಎಸ್ಎಫ್‌ಸಿ ಸಣ್ಣ ಉದ್ದಿಮೆಗಳಿಗೆ ಶೇ.14ರ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು, ಇದು ಖಾಸಗಿ ಬ್ಯಾಂಕ್‌ಗಳ ಬಡ್ಡಿಗಿಂತ ಹೆಚ್ಚು. ಹೀಗಾಗಿ ಈ ಬಡ್ಡಿದರ ಕಡಿಮೆ ಮಾಡಬೇಕು. ಕೆಎಸ್ಎಫ್‌ಸಿಯಲ್ಲಿ ಕಚ್ಚಾ ವಸ್ತುಗಳ ಸರಬರಾಜು ವಿಭಾಗವಿದ್ದು, ಇದು ಸಮಪರ್ಕವಾಗಿ ಕೆಲಸ ಮಾಡಬೇಕು. ಜತೆಗೆ, ಸರಕಾರ ಅನುದಾನ ಕೊಟ್ಟು ಕಡಿಮೆ ದರದಲ್ಲಿ ಕಚ್ಚಾ ವಸ್ತುಗಳನ್ನು ಕಂಪನಿಗಳಿಗೆ ನೀಡಬೇಕು.
– ಶ್ರೀನಿವಾಸ ಆಸ್ರಣ್ಣ, ಪೀಣ್ಯ ಕೈಗಾರಿಕೆ ಸಂಘದ ಅಧ್ಯಕ್ಷ, ಬೆಂಗಳೂರು
ಸ್ಮಾರ್ಟ್ ಇಂಡಸ್ಟ್ರಿ ರೂಪಿಸಿ
ಕೃಷಿ ಭೂಮಿ ಖರೀದಿಸಲು ವಿಧಿಸಲಾಗಿದ್ದ ನಿರ್ಬಂಧವನ್ನು ರಾಜ್ಯ ಸರಕಾರ ತೆರವುಗೊಳಿಸಿರುವುದು ಸ್ವಾಗತಾರ್ಹ. ಇದರಿಂದ ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಇನ್ನಷ್ಟು ಪುಷ್ಟಿ ದೊರೆಯಲಿದೆ. ಲಾಕ್‌ಡೌನ್ ಮಧ್ಯೆಯೂ ಕೈಗಾರಿಕೆಗಳನ್ನು ದೇಶದಲ್ಲಿಯೇ ಮೊದಲು ಮರು ಆರಂಭಿಸಿದ್ದು ಕರ್ನಾಟಕ. ಈ ಮೂಲಕ ಇಡೀ ದೇಶಕ್ಕೆ ನಮ್ಮ ರಾಜ್ಯವು ಉತ್ತಮ ಸಂದೇಶವನ್ನು ರವಾನಿಸಿದೆ. ಜೀವದ ಹಂಗು ತೊರೆದು, ಕೈಗಾರಿಕೆಗಳನ್ನು ಆರಂಭಿಸಲಾಗಿದೆ. ಇತ್ತ, ಚೀನಾದಿಂದ ಬರುವ ಕೈಗಾರಿಕೆಗಳನ್ನು ಆಕರ್ಷಿಸಲು ಸ್ಮಾರ್ಟ್ ಇಂಡಸ್ಟ್ರಿಯಲ್ ಎಸ್ಟೇಟ್ ಅನ್ನು ಸರಕಾರ ರೂಪಿಸಬೇಕು. ಎಚ್ಎಂಟಿ ಇಂಡಸ್ಟ್ರಿಯಲ್ ಎಸ್ಟೇಟ್, ಐಟಿ ಇಂಡಸ್ಟ್ರಿಯಲ್ ಎಸ್ಟೇಟ್‌ಗಳನ್ನು ಸರಕಾರವು ಸದ್ಬಳಕೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಕೈಗಾರಿಕೆಗಳು ಇನ್ನೂ ಚೇತರಿಕೆ ಕಂಡಿಲ್ಲ. ಹೀಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ವಿದ್ಯುತ್ ಪ್ರಸರಣ ಕಂಪನಿಗಳಿಗೆ ಸರಕಾರವು ಸೂಚಿಸಬೇಕು.
– ಸಿ.ಆರ್.ಜನಾರ್ಧನ್, ಅಧ್ಯಕ್ಷ , ಎಫ್‌ಕೆಸಿಸಿಐ
ಸಣ್ಣ ಉದ್ದಿಮೆಗೆ ‘ಸಾರ್ಥಕ’ ಸೇವೆ
ಕೋವಿಡ್-19 ಬಿಕ್ಕಟ್ಟಿನ ಪರಿಣಾಮ ಸಂಕಷ್ಟದಲ್ಲಿರುವ ಸಣ್ಣ ಮತ್ತು ಮಧ್ಯಮ ಉದ್ದಿಮೆಗೆ ಸರಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಣ್ಣ ಉದ್ದಿಮೆಗೆ ಪೂರೈಕೆಯ ವಿಭಾಗದಲ್ಲಿ ಸಾಕಷ್ಟು ತೊಡಕುಗಳು ಉಂಟಾಗಿದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಸರಕಾರ ಎಂಎಸ್ಎಂಇ ಸಾರ್ಥಕ್ ಯೋಜನೆಯನ್ನು ಜಾರಿಗೊಳಿಸಿದೆ. ಉದ್ದಿಮೆಯ ಪುನಶ್ಚೇತನಕ್ಕೆ ಬೇಕಾದ ನೆರವನ್ನು ಇದರ ಮೂಲಕ ಪಡೆಯಬಹುದು. ಉದ್ಯಮಸ್ನೇಹಿ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ವಿಶ್ವಬ್ಯಾಂಕ್ ನಿರ್ದೇಶಿಸಿರುವ ಮಾರ್ಗದರ್ಶಿಯನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಉದ್ಯಮಿಗಳೂ ಸಹಕರಿಸಬೇಕು.
– ಗುಂಜನ್ ಕೃಷ್ಣ ಆಯುಕ್ತರು, ಕೈಗಾರಿಕೆ ಅಭಿವೃದ್ಧಿ
– ಉದ್ಯಮಿಗಳ ಬೇಡಿಕೆ, ಆಶಯ –
ಸಣ್ಣ ಕೈಗಾರಿಕೆಗಳು ಸರಕಾರದ ಕೆಲಸಗಳನ್ನು ಮಾಡಿಕೊಡುತ್ತಿವೆ. ಆದರೆ, ಸರಿಯಾದ ಸಮಯದಲ್ಲಿ ಸರಕಾರ ಹಣವನ್ನು ಪಾವತಿಸುತ್ತಿಲ್ಲ. ಕೆಲಸ ಪೂರ್ಣಗೊಂಡ 30 ದಿನದಲ್ಲಿ ಹಣ ಪಾವತಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಟೆಂಡರ್‌ಗಳಿಗೆ ಸಂಬಂಧಿಸಿದಂತೆ ಸಣ್ಣ ಕೈಗಾರಿಕೆಗಳು ಬಿಡ್ ಮಾಡುವಾಗ ಇಎಂಡಿ ರಿಯಾಯ್ತಿ ನೀಡಲಾಗಿದೆ. ಈ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಕೂಡ ಇದೆ. ಆದರೆ, ಪಾಲನೆಯಾಗುತ್ತಿಲ್ಲ. ಈ ಕ್ರಮವಹಿಸಬೇಕಿದೆ.
– ಕೆ ಎಲ್ ಎಚ್ ರಾಯ ಕಾರ್ಯದರ್ಶಿ, ಕೆಆರ್‌ಇಎಸ್ಎಂಎ, ಬೆಂಗಳೂರು
ಹಾವೇರಿ ಜಿಲ್ಲೆಯಲ್ಲಿ ಒಟ್ಟು 13203 ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿದ್ದು ಈ ಮೂಲಕ ಕೇವಲ 30 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದಂತಾಗಿದೆ. ಈಗ ದೇಶದಾದ್ಯಂತ ಎಕ್ಸಿಟ್ ಚೈನಾ ಮೂಮೆಂಟ್ ಸನ್ನಿವೇಶದಲ್ಲಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಇಂಡಸ್ಟ್ರಿಯಲ್ ಹಬ್ ಮಾಡಬೇಕು. ಕೋವಿಡ್ ಪರಿಸ್ಥಿತಿಯಲ್ಲಿ ಆಟೋಮೊಬೈಲ್ ಇಂಡಸ್ಟ್ರೀಸ್ ಆರ್ಥಿಕ ಸಂಕಷ್ಟ ಎದುರಿಸುತ್ತವೆ. ಇದೇ ವೇಳೆ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಗೂ ತಡೆ ನೀಡಲಾಗಿದೆ. ಈ ಸನ್ನಿವೇಶದಲ್ಲಿ ದ್ವಿಚಕ್ರ ವಾಹನ ಸೇರಿದಂತೆ ಮಾನವ ಸಂಚಾರಕ್ಕೆ ಬಳಸುವ ವಾಹನಗಳಿಗೆ ವಿಧಿಸಿರುವ ಶೇ.28 ಜಿಎಸ್‌ಟಿ ಪ್ರಮಾಣವನ್ನು ಶೇ.18 ಕ್ಕೆ ಇಳಿಸಬೇಕು.
– ಪವನ ಬಹದ್ದೂರ ದೇಸಾಯಿ ಕೈಗಾರಿಕಾ ತಜ್ಞ, ಹಾವೇರಿ
ಮೈಸೂರನ್ನು ಟೆಲಿ ಮೆಡಿಸಿನ್, ಶಿಕ್ಷ ಣ, ಆರೋಗ್ಯ ಹಬ್ ಆಗಿ ರೂಪಿಸಬಹುದು. ಮೈಸೂರಿನಲ್ಲಿ ಅಡ್ವಾನ್ಸ್ಡ್ ಟೆಸ್ಟಿಂಗ್ ಫೆಸಿಲಿಟಿ ಉದ್ಘಾಟನೆ ಹಂತಕ್ಕೆ ಬಂದಿದೆ. 12 ಸಾವಿರ ಎಕರೆ ಭೂಮಿಯನ್ನು ಕೈಗಾರಿಕೆಗಳಿಗೆ ನಿಗದಿಪಡಿಸಲಾಗಿದೆ. ಆದರೆ, ಸಮರ್ಪಕವಾಗಿ ಕೈಗಾರಿಕೋದ್ಯಮಿಗಳಿಗೆ ದೊರೆಯುತ್ತಿಲ್ಲ. ಈ ಬಗ್ಗೆ ಕ್ರಮವಹಿಸಬೇಕು.
– ವಿಶ್ವ ಪ್ರಸಾದ ಆಳ್ವ ಎಂಡಿ, ಸ್ಕಾನ್ರೇ ಟೆಕ್ನಾಲಜಿಸ್, ಮೈಸೂರು
3 ಲಕ್ಷ ರೂ. ಪ್ಯಾಕೇಜ್ ಅನುಷ್ಠಾನ ಆಗುತ್ತಿಲ್ಲ. ಬ್ಯಾಂಕುಗಳ ಸಾಲ ನೀಡಲು ಆಸಕ್ತಿ ಹೊಂದಿಲ್ಲ. ಅವು ಆರ್‌ಬಿಐ ನಲ್ಲಿ ಡಿಪಾಸಿಟ್ ಮಾಡುವುದರತ್ತ ಹೆಚ್ಚು ಗಮನ ಕೇಂದ್ರೀಕರಿಸಿವೆ. ಹೀಗಾದರೆ, ಉದ್ಯಮಗಳು ಬೆಳವಣಿಗೆ ಕಾಣವುದು ಹೇಗೆ? ಸರಕಾರ ಬ್ಯಾಂಕುಗಳ ಜೊತೆ ಮಾತುಕತೆ ನಡೆಸಿ ಪ್ಯಾಕೇಜ್ ಲಾಭ ದೊರೆಯುವಂತೆ ಮಾಡಬೇಕು.
-ಮಹೇಂದ್ರ ಲದ್ದಡ, ಅಧ್ಯಕ್ಷ , ಚೇಂಬರ್ ಆಫ್ ಕಾಮರ್ಸ್, ಹುಬ್ಬಳ್ಳಿ
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಕೈಗಾರಿಕೆಗಾ ಕಾರಿಡಾರ್ ರೂಪಿಸಿ. ನೆರೆಯ ತೆಲಂಗಾಣದಲ್ಲಿ ಸಾಕಷ್ಟು ಎಸ್ಇಜೆಡ್‌ಗಳಿವೆ. ಆದರೆ, ಈ ಭಾಗದಲ್ಲಿ ಒಂದೂ ಇಲ್ಲ. 2000 ಸಾವಿರದಷ್ಟು ಜಮೀನು ಇದ್ದು, ಚೀನಾದಿಂದ ಹೊರ ಬರುವ ಕೈಗಾರಿಕೆಗಳನ್ನು ಇದೇ ಭಾಗದಲ್ಲಿ ತಳವೂರುವಂತೆ ಮಾಡಬೇಕು.
– ಅಮರನಾಥ ಪಾಟೀಲ್, ಅಧ್ಯಕ್ಷ , ಹೈದರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ಕಲಬುರಗಿ
ಬೇರೆ ಬೇರೆ ರಾಜ್ಯಗಳಿಂದ ಬರುವ ಕಾರ್ಮಿಕರನ್ನು 14 ದಿನಗಳವರೆಗೆ ಕ್ವಾರಂಟೈನ್ ಮಾಡಬೇಕು ಎಂದು ಸರಕಾರ ಹೇಳುತ್ತದೆ. ಆದರೆ, ಕಾರ್ಮಿಕರ ಕ್ವಾರಂಟೈನ್ ವೆಚ್ಚವನ್ನು ಯಾರು ಭರಿಸಬೇಕು ಎಂಬುದರಲ್ಲಿ ಸ್ಪಷ್ಟತೆ ಇಲ್ಲ. ಈ ಬಗ್ಗೆ ಒಂದು ನಿರ್ಧಾರಕ್ಕೆ ಬಂದರೆ ಉದ್ದಿಮೆದಾರರಿಗೆ ಉಪಯೋಗವಾಗಲಿದೆ.
-ವಿನಯ್ ಜವಳಿ, ಉಪಾಧ್ಯಕ್ಷ , ಚೇಂಬರ್ ಆಫ್ ಕಾಮರ್ಸ್, ಹುಬ್ಬಳ್ಳಿ
ಬೆಳಗಾವಿಯ ಕೈಗಾರಿಕಾ ಕಾರಿಡಾರ್‌ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ. ಕೊರೊನಾದಿಂದಾಗಿ ಬೆಳಗಾವಿಯ ಫೌಂಡ್ರಿ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಲಾಕ್‌ಡೌನ್ ನಂತರವೂ ಸಹಜ ಸ್ಥಿತಿಗೆ ಮರಳಲು ಸಾಧ್ಯವಾಗಿಲ್ಲ. ಚೀನಾದಿಂದ ರಫ್ತಾಗುವ ವಸ್ತುಗಳನ್ನು ನಿಷೇಧಿಸಬೇಕು. ನಮಲ್ಲಿ ದೊರೆಯುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು.
-ರೋಹನ್ ಜುವಳಿ, ಅಧ್ಯಕ್ಷ , ಜಿಲ್ಲಾ ಸಣ್ಣ ಕೈಗಾರಿಕೆಗಳ ಒಕ್ಕೂಟ, ಬೆಳಗಾವಿ
ಯಾವ ಬ್ಯಾಂಕಿನವರೂ ಸಾಲು ನೀಡಲು ಆಸಕ್ತಿ ತೋರುತ್ತಿಲ್ಲ. ಸೇಫ್ ಗೇಮ್ ಮೊರೆ ಹೋಗಿವೆ. ಈ ವಿಷಯವನ್ನು ಆರ್‌ಬಿಐ, ಪ್ರಧಾನಿ ಗಮನಕ್ಕೆ ತನ್ನಿ. ಜೊತೆಗೆ, ಕೈಗಾರಿಕೆ ಪ್ರದೇಶಗಳ ಪಕ್ಕದಲ್ಲೇ ವಸತಿ ಪ್ರದೇಶಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆ. ಅದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆಯೇ ಸರಿ. ಈ ದಿಸೆಯಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು.
-ಕಿಶೋರ್ ಕುಮಾರ್ ಹೆಗ್ಡೆ, ಲೈಫ್‌ಲೈನ್ ಫೀಡ್ಸ್ ಮಾಲೀಕರು, ಚಿಕ್ಕಮಗಳೂರು
ಕೊರೊನಾ ಹಿನ್ನೆಲೆಯಲ್ಲಿ ನಗರಗಳಿಂದ ಬಹುತೇಕ ಕಾರ್ಮಿಕರು ರಾಜ್ಯದ ತಮ್ಮ ತಮ್ಮ ಹಳ್ಳಿಗಳಿಗೆ ಹೋಗಿದ್ದಾರೆ. ಅಂಥವರನ್ನು ಮತ್ತೆ ವಾಪಸ್ ಕರೆ ತರುವ ಬದಲು ಹಳ್ಳಿ ಅಥವಾ ಸಣ್ಣ ಪುಟ್ಟ ಪಟ್ಟಣಗಳಲ್ಲಿ ಅವರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ. ಇದಕ್ಕಾಗಿ ಪ್ರಾದೇಶಿಕ ಹೆಗ್ಗುರುತುಗಳಾಗಿರುವ ವಸ್ತುಗಳ ತಯಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದರೆ ಬಹುತೇಕರಿಗೆ ಸ್ಥಳೀಯವಾಗಿಯೇ ಕೆಲಸ ದೊರೆಯುತ್ತಿದೆ. ಇದಕ್ಕೆ ಸರಕಾರ ಪ್ರೋತ್ಸಾಹ ನೀಡಬೇಕು.
-ಎಸ್. ಸಂಪತ್ ರಾಮನ್, ಅಧ್ಯಕ್ಷರು ಅಸೋಚಾಮ್, ಕರ್ನಾಟಕ ಘಟಕ
ಮುಳುಗಡೆ ಪ್ರದೇಶವಾಗಿರುವ ಬಾಗಲಕೋಟೆ ಸುತ್ತಮುತ್ತ ಕೈಗಾರಿಕೆಗಳನ್ನು ಸ್ಥಾಪಿಸಬೇಕಾದ ಅಗತ್ಯವಿದೆ. ಈ ಭಾಗದಲ್ಲಿ ಕೃಷಿ ಉತ್ಪನ್ನಗಳಿಗೆ ನೆರವಾಗುವಂಥ ಉದ್ಯಮಗಳಿಗೆ ಸ್ಥಾಪನೆಗೆ ಮುಂದಾಗಬೇಕು. ವಿಶೇಷವಾಗಿ ಹಣ್ಣುಗಳ ಸಂಸರಕ್ಷ ಣೆ, ಸಂಸ್ಕರಣಾ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಈ ಭಾಗದ ರೈತರಿಗೆ ನೆರವಾಗುವುದು ಮಾತ್ರವಲ್ಲದೇ ಸ್ಥಳೀಯರಿಗೆ ಉದ್ಯೋಗ ಕೂಡ ದೊರೆಯುತ್ತದೆ.
-ರವಿ ಕುಮಟಗಿ, ಉದ್ಯಮಿ, ಬಾಗಲಕೋಟೆ
ಲಾಕ್‌ಡೌನ್ ವೇಳೆ ಕಾರ್ಮಿಕರೆಲ್ಲರೂ ವಲಸೆ ಹೋಗಿದ್ದಾರೆ. ಕೈಗಾರಿಕೆಗಳು ತೀವ್ರ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸಲು ಸ್ಥಳೀಯ ಕಾರ್ಮಿಕರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ತಕ್ಷಣಕ್ಕೆ ಕಾರ್ಮಿಕ ತರಬೇತಿ ಕೇಂದ್ರಗಳನ್ನು ಆರಂಭಿಸಬೇಕು. ಕಾರ್ಮಿಕರ ಕೊರತೆಯಿಂದಾಗಿ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಶೇ.75ರಷ್ಟು ಕೈಗಾರಿಕೆಗಳು ಉತ್ಪಾದನೆ ಆರಂಭಿಸಲು ಸಾಧ್ಯವಾಗಿಲ್ಲ.
– ಶಿವಶಂಕರ್, ಅಧ್ಯಕ್ಷ , ನರಸಾಪುರ ಕೈಗಾರಿಕೆ ಸಂಘ, ತುಮಕೂರು
ವಲಸೆ ಕಾರ್ಮಿಕರನ್ನು ಮತ್ತೆ ವಾಪಸ್ ಕರೆತರಲು ರೈಲು ವ್ಯವಸ್ಥೆ ಕಲ್ಪಿಸಬೇಕು. ಬಳ್ಳಾರಿಯ ಕೈಗಾರಿಕಾ ಪ್ರದೇಶಕ್ಕೆ ಅಭಿವೃದ್ಧಿಗೆ 15 ಕೋಟಿ ರೂ. ಹಣ ಬಿಡುಗಡೆ ಯಾದರೂ ಈವರೆಗೂ ಕಾಮಗಾರಿ ಶುರುವಾಗಲಿಲ್ಲ. ರೈತರ ಕೃಷಿ ಉತ್ಪನ್ನಗಳ ಸಂರಕ್ಷ ಣೆಗೆ ಕೋಲ್ಡ್ ಸ್ಟೋರೇಜ್‌ಗಳ ಅಗತ್ಯವಿದೆ. ಉದ್ಯಮಿಗಳಿಗೆ ಬ್ಯಾಂಕುಗಳು ಸಾಲ ನೀಡಲು ಮುಂದಾಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನ ಬಗೆಹರಿಸಿದರೆ ಕೊರೊನೋತ್ತರ ಕಾಲದಲ್ಲೂ ಬೆಳವಣಿಗೆ ಸಾಧ್ಯವಾಗಲಿದೆ.
-ರವಿಕುಮಾರ್, ಅಧ್ಯಕ್ಷ , ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬಳ್ಳಾರಿ