ಮುಂಬೈ ದಾಳಿಯ ಭಯೋತ್ಪಾದಕ ದಾವೂದ್ ಇಬ್ರಾಹಿಂ ಕೊರೊನಾ ಸೋಂಕಿಗೆ ಒಳಗಾಗಿದ್ದಾನೆ ಎಂದು ಸಂತೋಷದಿಂದ ಹೇಳುವ ಕೆಲವು ಟ್ವೀಟ್‌ಗಳು ಮತ್ತು ಸುದ್ದಿ ತುಣುಕುಗಳನ್ನು ನೋಡಿದೆ. ಅವನು ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿ. ಯಾಕೆಂದರೆ ನಮ್ಮ ಭದ್ರತಾ ಸಿಬ್ಬಂದಿಯ ಗುಂಡುಗಳಿಂದ ಸಾಯಲು ಅಥವಾ ಮುಂಬೈಗೆ ತಂದು ಗಲ್ಲಿಗೇರಿಸಲ್ಪಡಲು ಆತ ಅರ್ಹನಾಗಿದ್ದಾನೆ.
ನಾವು ಯಾವ ಬಗೆಯ ರಾಷ್ಟ್ರ ಅಂತ ಯೋಚಿಸೋಣ. ನಮ್ಮ ಜನರು ಮತ್ತು ಸೈನಿಕರ ಮೇಲೆ ದಾಳಿ ಮಾಡುವ, ನಮ್ಮ ಮಣ್ಣಿನ ಮೇಲೆ ಯುದ್ಧ ಸಾರುವ ದಾಳಿಕೋರರನ್ನು ಮುಕ್ತವಾಗಿ ತಿರುಗಾಡಲು ನಾವು ಬಿಡುತ್ತೇವೆ. ಬಹುತೇಕ ಪ್ರತಿದಿನ ನಮ್ಮ ಹುಡುಗರು ಮರಾಮೋಸದ ಯುದ್ಧಗಳಲ್ಲಿ ತಮ್ಮ ಪ್ರಾಣ ಬಿಡುತ್ತಾರೆ. ಅವರ ಹೆಸರನ್ನು ಮತ್ತು ಅವರ ತ್ಯಾಗಗಳನ್ನು ಮರೆತುಬಿಡಿ – ಸಾಮಾನ್ಯ ಜನರ ನಡುವೆ, ಗಣ್ಯರಲ್ಲಿ, ರಾಜಕೀಯ ಚರ್ಚೆಗಳಲ್ಲಿ ಅದೊಂದು ಚರ್ಚೆಯ ವಿಷಯವೇ ಆಗುವುದಿಲ್ಲ.
ಇಸ್ರೇಲ್‌ನ ‘ಉಕ್ಕಿನ ಮಹಿಳೆ’ ಎಂದೇ ಖ್ಯಾತರಾದ, ಪ್ರಧಾನ ಮಂತ್ರಿ ಗೋಲ್ಡಾ ಮೆಯರ್ ಇಸ್ರೇಲ್‌ನ ಮಿಲಿಟರಿ ಯಶಸ್ಸಿನ ಬಗ್ಗೆ ಹೇಳುವುದು ಹೀಗೆ: ‘ಬೇರೆ ಆಯ್ಕೆಯಿಲ್ಲ ಎನ್ನುವುದೇ ನಮ್ಮ ರಹಸ್ಯ ಆಯುಧ.’ ನಾವು ಭಾರತೀಯರು, ಖಾಸಿಮ್ ಮತ್ತು ಘಜನಿಗಳ ಕಾಲದಿಂದಲೂ ನಮ್ಮ ರಕ್ತ ಹೀರುತ್ತಿರುವ ಶತ್ರುಗಳನ್ನು ಶಿಕ್ಷಿಸದೆ ನಮಗೆ ಪರ್ಯಾಯ ಮಾರ್ಗವಿದೆಯೇ?
ಇತ್ತೀಚಿನ ಉದಾಹರಣೆಯೆಂದರೆ ಭಾರತೀಯತೆಯ ಬಗ್ಗೆ ಟ್ವಿಟರ್‌ನ ಭಾರತೀಯ ಶಾಖೆಯ ದ್ವೇಷ. ನಮ್ಮ ಸಮಾಜದ ಒಂದು ಸೈದ್ಧಾಂತಿಕ ವಿಭಾಗದ ಬಗೆಗ ಟ್ವಿಟರ್ ಅಸ್ವಸ್ಥತೆಯಿಂದ ಕುದಿಯುತ್ತಿದೆ. ಇತ್ತೀಚೆಗೆ ಎರಡು ಘಟನೆಗಳು ನಡೆದವು. ಭಾರತೀಯ ಇತಿಹಾಸ ಅಧ್ಯಯನ ಸಮಿತಿ ಪ್ರಕಟಿಸಿದ ಪುಸ್ತಕದಿಂದ ತೆಗೆದ ಒಂದು ಉಲ್ಲೇಖವನ್ನು ಅಪ್‌ಲೋಡ್ ಮಾಡಿದ ‘ಟ್ರೂ ಇಂಡಾಲಜಿ’ ಖಾತೆಯನ್ನು ಟ್ವಿಟರ್ ನಿರ್ಬಂಧಿಸಿತು. ಆ ಉಲ್ಲೇಖ, ಸಾವಿರಾರು ಹಿಂದೂಗಳನ್ನು ಕೊಲ್ಲುವಲ್ಲಿ ಅಕ್ಬರ್ ಹೊಂದಿದ್ದ ಸಂತೋಷವನ್ನು ತೋರಿಸಿದ್ದ ಟ್ವೀಟ್ ಆಗಿತ್ತು. ಅದಕ್ಕೆ ಟ್ವಿಟರ್ ‘ದಂಡನಾತ್ಮಕ ಕ್ರಮ’ ತೆಗೆದುಕೊಂಡಿತು. ಏಕೆ? ಯಾರೂ ಅದನ್ನು ಕೇಳಲಿಲ್ಲ.
ಎರಡನೆಯದು, ಸತತವಾಗಿ ಎರಡು ಸುಂದರವಾದ, ಸ್ಪಷ್ಟವಾದ ಚೀನೀ ಪ್ರತಿರೋಧ ನಿಲುವಿನ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ‘ಅಮುಲ್‌ಕೂಪ್’ ಖಾತೆಯನ್ನು ನಿರ್ಬಂಧಿಸಿತು. ಅದರಲ್ಲಿ ಅಮುಲ್‌ನ ಮುದ್ದಾದ ಹುಡುಗಿ, ‘ಚೀನಿ ಕಮ್’ ಎಂದು ಹೇಳಿದ್ದಳು. (ಕಡಿಮೆ ಉಪ್ಪು ಎಂದರ್ಥ, ಚೀನೀ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ ಎಂದು ಇನ್ನೊಂದು ಅರ್ಥ). ಎರಡನೆಯದರಲ್ಲಿ ಡ್ರ್ಯಾಗನ್ ಅನ್ನು ವಿರೋಧಿಸಿದ್ದಳು. ಶಕ್ತಿಯುತವಾದ ಆ ಎರಡು ಜಾಹೀರಾತುಗಳು, ಲಕ್ಷ ಭಾಷಣಗಳು ಮತ್ತು ಸಾವಿರಾರು ಲೇಖನಗಳು ಹೇಳಲಾಗದ ವಿಚಾರಗಳನ್ನು ಸರಳವಾಗಿ ಪ್ರತಿಪಾದಿಸಿದ್ದವು. ಅಮುಲ್ ಕೇವಲ ಹಾಲು, ಬೆಣ್ಣೆ ಮತ್ತು ಮೊಸರು ಮಾರುವ ಕಂಪನಿಯಲ್ಲ. ಇದು ಭಾರತೀಯ ಮಣ್ಣಿನ ಆತ್ಮ ಮತ್ತು ಸುಗಂಧವನ್ನು ಪ್ರತಿನಿಧಿಸುತ್ತದೆ. ಇದನ್ನು ನಿರ್ಬಂಧಿಸುವುದು, ಭಾರತೀಯ ಮನಸ್ಥಿತಿಯದ್ದೆಂದು ಖಂಡಿಸುವುದು, ಗಡಿಯಲ್ಲಿ ಶತ್ರುಗಳ ವಿರುದ್ಧ ಹೋರಾಡುವ ಸೈನಿಕರನ್ನು ಬೆಂಬಲಿಸುವ ದೇಶಭಕ್ತ ನಾಗರಿಕ ಗುಣವನ್ನು ದಂಡಿಸುವುದು ಪಾಪ, ಇದನ್ನು ಕ್ಷಮಿಸಲಾಗದು. ಇದಕ್ಕಾಗಿ ಟ್ವಿಟರ್ ಅನ್ನು ಶಿಕ್ಷಿಸಬೇಕು. ಅಮುಲ್ ವಿರುದ್ಧ ಟ್ವಿಟರ್ ತೆಗೆದುಕೊಂಡ ಕ್ರಮ ನಮ್ಮ ದೇಶಪ್ರೇಮವನ್ನು ಅವಮಾನಿಸುವ, ನಮ್ಮ ಸೈನಿಕರನ್ನು ಧಿಕ್ಕರಿಸುವ ನಡೆಯಾಗಿದೆ. ಇಲ್ಲಿಯವರೆಗೆ ಟ್ವಿಟರ್, ಅಮುಲ್ ಬಳಿ ಕ್ಷಮೆ ಯಾಚಿಸಿಲ್ಲ.
ಇದಕ್ಕೆ ಪ್ರತಿಯಾಗಿ ಸೆಕ್ಯುಲರ್ ಮಂದಿ ಹೇಳಬಹುದು- ಇಲ್ಲಿನ ಟ್ವಿಟರ್ ಅನ್ನು ಭಾರತೀಯರು ನಿರ್ವಹಿಸುವುದು ನಿಜ. ಆದರೆ ಅವರು ವಿದೇಶದ ಕಂಪನಿಗಾಗಿ ಕೆಲಸ ಮಾಡುವವರು. ಅವರ ಪ್ರಧಾನ ಕಚೇರಿ ಅಮೆರಿಕದಲ್ಲಿದೆ. ಇದಕ್ಕೆ ಭಾರತೀಯ ಸಂವೇದನೆ ಮತ್ತು ಭಾವನೆಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಅಂದರೆ, ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯ ಮತ್ತು ಮೊಗಲರ ಸಮಯದಲ್ಲಿ ಮುನ್ಷಿಗಳು, ಚೌಕಿದಾರ್‌ಗಳು, ದರ್ಬಾರಿಗಳು, ಮನ್ಸಬ್ದಾರ್ ಎಲ್ಲರೂ ಭಾರತೀಯರು, ಹಿಂದೂಗಳಾಗಿದ್ದರೂ ಅವರು ಭಾರತೀಯ ಆತ್ಮ ಮತ್ತು ಸಮಾಜದೊಂದಿಗೆ ಯಾವುದೇ ಸಂಬಂಧವಿಲ್ಲದ ವಿದೇಶಿ ಶಕ್ತಿಗಾಗಿ ಕೆಲಸ ಮಾಡಿದರು ಎಂದಂತೆ.
ಭಾರತವು ತನ್ನ ಪ್ರಜೆಗಳ ಮತ್ತು ಅವರಿಗಾಗಿ ಸಾಯುವವರ ಗೌರವವನ್ನು ರಕ್ಷಿಸದಿದ್ದರೆ, ತ್ರಿವರ್ಣ ಧ್ವಜವನ್ನು ಅವಮಾನಿಸುವವರ ಮೇಲೆ ಭಾರತೀಯ ಆಡಳಿತ ಕೋಪಗೊಳ್ಳದಿದ್ದರೆ, ದೇಶಭಕ್ತಿ ಹೊಂದಿದವರನ್ನು ಅವಮಾನಿಸುವವರನ್ನು ಧಿಕ್ಕರಿಸದಿದ್ದರೆ ನಾವು ಈ ಮಹಾನ್ ರಾಷ್ಟ್ರದ ಮೌಲ್ಯಗಳನ್ನು ವಿಫಲಗೊಳಿಸುತ್ತೇವೆ. ನಮ್ಮ ತಾಯಿನಾಡನ್ನು ತುಳಿಯುತ್ತೇವೆ.
ನಾವೆಲ್ಲರೂ ಇಂಟರ್ನೆಟ್ ವಸಾಹತುಶಾಹಿಯನ್ನು ತೊಡೆದುಹಾಕಬೇಕಾದ ಸಮಯವಿದು. ವಿದೇಶಿ ಆಧಾರಿತ ಅಂತರ್ಜಾಲ ವೇದಿಕೆಗಳು ಭಾರತೀಯರ ದತ್ತಾಂಶ ಸಂಪತ್ತನ್ನು ಕಿತ್ತುಕೊಳ್ಳುತ್ತಿದ್ದಾರೆ. ವಿವಿಧ ರಾಜಕೀಯ, ಮಿಲಿಟರಿ ಉದ್ದೇಶಗಳಿಗಾಗಿ ಭಾರತೀಯರ ಪ್ರೊಫೈಲಿಂಗ್ ಮಾಡಲು ವಿದೇಶಿ ಏಜೆನ್ಸಿಗಳಿಗೆ ಸಹಾಯ ಮಾಡುತ್ತಿದ್ದಾರೆ. ನಮ್ಮ ಭದ್ರತೆಗೆ ಹಾನಿ ಮಾಡುವುದರಲ್ಲಿ ಸಂಶಯವಿಲ್ಲ. ಡೋಕ್ಲಾಮ್ ಅಥವಾ ಲಡಾಕ್ ಅನ್ನು ಮರೆತುಬಿಡಿ. ಸೈಬರ್ ಭದ್ರತಾ ಸಮಸ್ಯೆಗಳು ಎಷ್ಟು ಮಾರಕವಾಗಿದೆಯೆಂದರೆ, ದೊಡ್ಡ ಹಾನಿ ನಮ್ಮಿಂದಲೇ ಆಗಲಿದೆ.
ಸಾಮ್ರಾಜ್ಯಶಾಹಿ ಗೂಗಲ್ ಮತ್ತು ಇತರ ವಿದೇಶಿ ದತ್ತಾಂಶ ಸಂಗ್ರಹಕಾರರನ್ನು ತೊಡೆದುಹಾಕಲು, ಟ್ವಿಟರ್, ಎಫ್‌ಬಿ, ವಾಟ್ಸ್ಯಾಪ್ ಮತ್ತು ಟಿಕ್‌ಟಾಕ್ ಅನ್ನು ಬದಲಿಸಿ ನಮ್ಮ ಸ್ವಂತ ಇಂಟರ್‌ನೆಟ್ ಸರ್ವರ್‌ಗಳು ಮತ್ತು ವೇದಿಕೆಗಳನ್ನು ಆರಂಭಿಸಲು ನಾನು ಬಹಳ ಹಿಂದಿನಿಂದಲೂ ಸಂಸತ್ತಿನಲ್ಲಿ ಒತ್ತಾಯಿಸುತ್ತಿದ್ದೇನೆ. ನಮ್ಮಲ್ಲಿ ಪರಿಣತಿ, ಮಾನವಶಕ್ತಿ ಮತ್ತು ಮೂಲಸೌಕರ್ಯವಿದೆ. ಕೊರತೆಯೆಂದರೆ ಇಚ್ಛಾಶಕ್ತಿ.
ನಮ್ಮ ರಾಷ್ಟ್ರೀಯ ಮಾಹಿತಿ ಕೇಂದ್ರ ಒಂದು ಅದ್ಭುತ ಸಂಸ್ಥೆ. ಇದು ಈಗಾಗಲೇ ಸರಕಾರಕ್ಕಾಗಿ ಬೃಹತ್ ಡಿಜಿಟಲ್ ಕಾಯಕ ನಡೆಸುತ್ತಿದೆ. ಪ್ರಧಾನ ಮಂತ್ರಿಯಿಂದ ಹಿಡಿದು ರಕ್ಷ ಣಾ ಸಚಿವರು ಮತ್ತು ಇತರ ಸಚಿವಾಲಯಗಳವರೆಗಿನ ಉನ್ನತ ನಾಯಕರ ಎಲ್ಲಾ ವಿಡಿಯೊ ಸಮ್ಮೇಳನಗಳನ್ನು ಅದೇ ನಿರ್ವಹಿಸುತ್ತದೆ. ಎಲ್ಲಾ ಸಂಸದರು, ಸರಕಾರಿ ಸಿಬ್ಬಂದಿ ಮತ್ತು ವಿವಿಧ ಇಲಾಖೆಗಳಿಗೆ ದೋಷವಿಲ್ಲದ ಸುರಕ್ಷಿತ ಇಮೇಲ್ ಸೇವೆಗಳನ್ನು ಒದಗಿಸುತ್ತಿದೆ. ಅದ್ಭುತವಾದ ಇದರ ವಿಡಿಯೊ ಅಪ್ಲಿಕೇಶನ್ ಸೇವೆ ಸಂಪೂರ್ಣವಾಗಿ ಎನ್‌ಕ್ರಿಪ್ಟ್ ಮಾಡಲ್ಪಟ್ಟಿದ್ದು, ಎಲ್ಲವನ್ನೂ ಭಾರತೀಯರೇ ನಿರ್ವಹಿಸುತ್ತಾರೆ. ಭಾರತೀಯ ವಿಜ್ಞಾನಿಗಳು ಮತ್ತು ಸಾಫ್ಟ್‌ವೇರ್ ಎಂಜಿನಿಯರ್‌ಗಳಿರುವ ನಂಬಲರ್ಹವಾದ ಸಂಸ್ಥೆಯನ್ನು ನಾವು ಹೊಂದಿದ್ದೇವೆ. ಟ್ವಿಟರ್ ಮತ್ತು ಗೂಗಲ್ ಸೇವೆಗಳಿಗೆ ಬದಲಿ ವೇದಿಕೆಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ನಾವು ಇದಕ್ಕೆ ಏಕೆ ವಹಿಸಬಾರದು?
ಜನರು ತಮ್ಮ ಎಲ್ಲ ಸಂವಹನಗಳಿಗೆ ಭಾರತೀಯ ಆ್ಯಪ್‌ಗಳನ್ನು ಬಳಸಲು ಪ್ರಾರಂಭಿಸಬೇಕಾದ ಸಮಯ ಇದು. ಇಂಟರ್ನೆಟ್ ವಸಾಹತುಶಾಹಿಯಿಂದ ಮುಕ್ತವಾಗುವ, ಭಾರತಕ್ಕೆ ನಿಜವಾದ ಇಂಟರ್ನೆಟ್ ಸ್ವಾತಂತ್ರ್ಯವನ್ನು ಘೋಷಿಸುವ ಹೊಸ ಡಿಜಿಟಲ್ ಯುಗ ಬರಲಿ ಎಂದು ಆಶಿಸೋಣ. ಗೋಲ್ಡಾ ಮೆಯರ್ ಉಲ್ಲೇಖಿಸಿದಂತೆ- ಇದಕ್ಕೆ ಯಾವುದೇ ಪರ್ಯಾಯವಿಲ್ಲ. ಭಾರತೀಯರಾಗಿ, ಭಾರತೀಯ ಆ್ಯಪ್‌ಗಳಿಗೆ ಧ್ವನಿ ನೀಡಿ.