-ಮಿಗ್ ವಿಮಾನ, ಸುಖೋಯಿ ಜೆಟ್ ಸೇರಿ 39,800 ಕೋಟಿ ರೂ. ವೆಚ್ಚದ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಿಗೆ.
ಭಾರತ ಎಂದಿಗೂ ತಾನಾಗೇ ಯುದ್ಧ ಮಾಡುವುದಿಲ್ಲ. ಆದರೆ, ದಾಳಿ ಮಾಡಿದರೆ ಸುಮ್ಮನೆ ಇರುವುದಿಲ್ಲ ಎಂಬ ನೀತಿಯನ್ನು ದಶಕಗಳಿಂದ ಅನುಸರಿಸಿಕೊಂಡು ಬಂದಿದೆ. ಕಳೆದ ಆರು ವರ್ಷದಲ್ಲಿ ಈ ನೀತಿಗೇನೂ ಭಂಗ ಬಂದಿಲ್ಲ. ಆದರೆ, ಸೇನೆಯ ಆಕ್ರಮಣಶೀಲತೆ ಮಾತ್ರ ಎದ್ದು ಕಾಣುತ್ತಿದೆ. ಭಾರತದ ಮುಟ್ಟಿದರೆ ತಟ್ಟೇ ಬಿಟ್ಟೇನು ಎಂಬ ನೀತಿ ಪಾಕಿಸ್ತಾನ ಮತ್ತು ಚೀನಾಗಳ ಗಡಿ ವಿಷಯದಲ್ಲಿ ನಿಜವಾಗುತ್ತಿದೆ. ಈ ಹಂತದಲ್ಲಿ ಸೇನೆ ಮತ್ತಷ್ಟು ಆಧುನಿಕವಾಗುತ್ತಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಲಡಾಖ್‌ನ ವಾಸ್ತವಿಕ ಗಡಿ ರೇಖೆಯಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗುತ್ತಿದೆ. ಉಭಯ ರಾಷ್ಟ್ರಗಳು ಗಡಿಯಲ್ಲಿ ಯೋಧರ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ಯುದ್ಧದ ಕಾರ್ಮೋಡಗಳು ದಟ್ಟೈಸಿದ್ದರೂ ಅಧಿಕಾರಿಗಳ ಮಟ್ಟದ ಮಾತುಕತೆಗಳ ಮೂಲಕ ಸಂಘರ್ಷವನ್ನು ತಪ್ಪಿಸುವ ಪ್ರಯತ್ನ ಜಾರಿಯಲ್ಲಿದೆ. ಇದರ ಮಧ್ಯೆಯೇ ಭಾರತವು ತನ್ನ ಶಸ್ತ್ರಾಸ್ತ್ರಗಳ ಬಲವನ್ನು ಹೆಚ್ಚಿಸುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದೆ.
ಹೌದು, ಭಾರತದ ರಕ್ಷಣಾ ಸ್ವಾಧೀನ ಮಂಡಳಿ (ಡಿಸಿಎ)ಯು 21 ಮಿಗ್-29 ಮತ್ತು 12 ಸು-30 ಎಂಕೆಐ ಯುದ್ಧ ವಿಮಾನಗಳ ಖರೀದಿಗೆ ಒಪ್ಪಿಗೆ ನೀಡಿದ್ದಲ್ಲದೇ, 59 ಮಿಗ್-29 ವಿಮಾನಗಳನ್ನು ಅಪ್ಡೇಟ್ ಮಾಡಲೂ ಮುಂದಾಗಿದೆ. ಶಸ್ತ್ರಾಸ್ತ್ರಗಳ ಖರೀದಿಯ ನಡೆಯು ಈಗಿನ ಸಂದರ್ಭದಲ್ಲಿ ಮಾತ್ರ ಬೇರೆಯದ್ದೇ ಸಂದೇಶವನ್ನು ಸಾರುತ್ತಿದೆ!
21 ಮಿಗ್-29, 59 ಮಿಗ್-29 ಖರೀದಿ ಮತ್ತು ಮೇಲ್ದರ್ಜೆಗೇರಿಸುವುದಕ್ಕೆ ಭಾರತ ಅಂದಾಜು 7418 ಕೋಟಿ ವೆಚ್ಚ ಮಾಡಲಿದೆ. ಈ ವಿಮಾನಗಳನ್ನು ರಷ್ಯಾದಿಂದ ಭಾರತದ ಖರೀದಿಸಲಿದ್ದರೆ, 12 ಸು-30 ಎಂಕೆಐ ಯುದ್ಧ ವಿಮಾನಗಳನ್ನು ಎಚ್ಎಎಲ್‌ನಿಂದ ಖರೀದಿಸಲಿದೆ. ಇದಕ್ಕಾಗಿ 10,730 ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ರಕ್ಷ ಣಾ ಇಲಾಖೆ ಹೇಳಿದೆ.
ನಮ್ಮ ಗಡಿಗಳನ್ನು ಸಂರಕ್ಷಿಸುವ ಅಗತ್ಯಕ್ಕೆ ಅನುಗುಣವಾಗಿ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಸಶಸ್ತ್ರ ಪಡೆಗಳನ್ನು ಬಲಗೊಳಿಸುವ ಅಗತ್ಯವಿದೆ. ಪ್ರಧಾನಿ ಅವರ ಆತ್ಮ ನಿರ್ಭರ ಕರೆಯ ಅನುಗುಣವಾಗಿಯೇ ರಕ್ಷಣಾ ಸ್ವಾಧೀನ ಮಂಡಳಿಯು ಜುಲೈ 2ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸಭೆ ನಡೆಸಿ, ಭಾರತೀಯ ಪಡೆಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ ಎಂದು ರಕ್ಷಣಾ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಂದಾಜು 38,900 ಕೋಟಿ ರೂ. ಖರೀದಿಯ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಗಿದ್ದು, ದೇಶಿಯ ವಿನ್ಯಾಸ ಮತ್ತು ಅಭಿವೃದ್ಧಿ ಪಡಿಸಲಾದ ಶಸ್ತ್ರಾಸ್ತ್ರಗಳ ಖರೀದಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸುಮಾರು 31,130 ಕೋಟಿ ರೂ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಭಾರತೀಯ ತಯಾರಕರಿಂದಲೇ ಖರೀದಿಸಲಾಗುವುದು. ಹೀಗೆ ಖರೀದಿಸಲಾಗುವ ಎಲ್ಲ ಅಸ್ತ್ರಗಳು ಭಾರತದಲ್ಲೇ ತಯಾರಾಗಿರಬೇಕು. ಡಿಆರ್‌ಡಿಒ ತನ್ನ ತಂತ್ರಜ್ಞಾನವನ್ನು ದೇಶಿ ಉದ್ದಿಮೆಗಳಿಗೆ ವರ್ಗಾಯಿಸಿದ್ದರಿಂದ ದೇಶಿಯವಾಗಿ ಉತ್ಪಾದಿಸಲು ಸಾಧ್ಯವಾಗುತ್ತಿದೆ. ಈ ಪೈಕಿ ಪಿನಾಕಾ ಮದ್ದುಗುಂಡುಗಳು, ಬಿಎಂಪಿ ಶಸ್ತ್ರಾಸ್ತ್ರಗಳ ಅಪ್ಡೇಟ್, ಸೇನೆಗೆ ಅಗತ್ಯವಿರುವ ಸಾಫ್ಟ್ ವೇರ್ ಡಿಫೈನ್ಡ್ ರೆಡಿಯೋಸ್, ಲಾಂಗ್ ರೇಂಜ್ ಲ್ಯಾಂಡ್ ಅಟ್ಯಾಕ್ ಕ್ರೂಸ್ ಮಿಸೈಲ್ ಸಿಸ್ಟಮ್ಸ್ ಮತ್ತು ನೌಕಾ ಮತ್ತು ವಾಯು ಪಡೆಗೆ ಅಗತ್ಯವಿರುವ ಅಸ್ತ್ರ ಕ್ಷಿಪಣಿಗಳನ್ನು ದೇಶಿಯಾಗಿ ತಯಾರಿಸಲಾಗುತ್ತಿದೆ. ಇವುಗಳ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ 20,400 ಕೋಟಿ ರೂ. ಪ್ರಸ್ತಾಪನೆ ಸಲ್ಲಿಸಲಾಗಿದೆ ಎನ್ನುತ್ತದೆ ರಕ್ಷ ಣಾ ಇಲಾಖೆ.
ಸೂಪರ್ ಸುಖೋಯಿ
ರಷ್ಯಾ ಸುಖೋಯಿ ವಿಮಾನಗಳನ್ನು ಕೂಡ ನೀಡುತ್ತಿದೆ. ಭಾರತ 1996 ನವೆಂಬರ್ 30ರಂದು ಸು-30ಎಂಕೆಐ ಜೆಟ್‌ಗಳನ್ನು ಖರೀದಿಸುವ ಸಂಬಂಧ ರಷ್ಯಾ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ರಷ್ಯಾದ ರೋಸ್ವೂರುಝೇನಿ ಸ್ಟೇಟ್ ಮತ್ತು ಭಾರತೀಯ ರಕ್ಷಣಾ ಇಲಾಖೆಯ ಮಧ್ಯೆ ಈ ಬಗ್ಗೆ ಮಾತುಕತೆಯಾಗಿತ್ತು. ಅದರಂತೆ, ಎಲ್ಲ32 ಸು-30 ಎಕೆಐ ಜೆಟ್‌ಗಳು ವಿತರಣೆಗೆ ಸಿದ್ಧವಾಗಿದ್ದು, ಅವೆಲ್ಲವೂ 2002ರಿಂದ 2004ರ ಅವಧಿಯ ನಡುವೆ ತಯಾರಿಸಲ್ಪಟ್ಟದ್ದಾಗಿವೆ. ಯುದ್ಧವಿಮಾನಗಳ ಕಾರ್ಯಕ್ಷ ಮತೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದ ಭಾರತದ ರಕ್ಷಣಾ ಸಚಿವಾಲಯವು ಹೆಚ್ಚುವರಿ ಖರೀದಿಗೆ ಆಸಕ್ತಿ ತೋರಿಸಿತ್ತು. 2000ರ ಡಿಸೆಂಬರ್‌ನಲ್ಲಿ ಉಭಯ ರಾಷ್ಟ್ರಗಳು ನಡುವೆ ಒಪ್ಪಂದವೊಂದು ಏರ್ಪಟ್ಟಿತ್ತು. ಅದರನ್ವಯ ಸು-30 ಎಂಕೆಐ ಜೆಟ್‌ಗಳನ್ನು ಭಾರತದ ಹಿಂದೂಸ್ಥಾನ ಏರೋನಾಟಿಕ್ಸ್ ಕಂಪನಿ(ಎಚ್ಎಎಲ್)ಯಲ್ಲಿ ತಯಾರಿಸಬೇಕು. ಮತ್ತೆ ಮುಂದೆ 2012ರಲ್ಲಿ ಉಭಯ ರಾಷ್ಟ್ರಗಳು ಮತ್ತೊಂದು ಒಪ್ಪಂದ ಮಾಡಿಕೊಂಡು, ತಾಂತ್ರಿಕ ಕಿಟ್ ಒದಗಿಸಲು ಒಪ್ಪಿಕೊಂಡಿದ್ದವು.
ನೆರವಿಗೆ ನಿಂತ ಹಳೇ ಮಿತ್ರ
ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತಕ್ಕೆ ಬೇಕಾಗಿರುವ ಯುದ್ಧವಿಮಾನಗಳನ್ನು ಒದಗಿಸಲು ರಷ್ಯಾ ಸಿದ್ಧವಾಗಿತ್ತು. ಸುಖೋಯಿ ಸು-30 ಎಂಕೆಐ ಮತ್ತು ಮಿಕೋಯಾನ್- ಗುರೆವಿಚ್ ಮಿಗ್-29 ವಿಮಾನಗಳನ್ನು ಭಾರತ ಪಡೆಯಲಿದೆ ಎಂದು ಹೇಳಲಾಗಿತ್ತು. ಚೀನಾ ಮತ್ತು ಭಾರತ ನಡುವಿನ ಸಂಘರ್ಷದ ಸಂದರ್ಭದಲ್ಲೇ ಸರಕಾರದಿಂದ ಸರಕಾರ ಮಟ್ಟದ ನಡುವೆ ಒಪ್ಪಂದ ನಡೆದು, ಭಾರತದ ಏರ್ ಫೋರ್ಸ್(ಐಎಎಫ್) 12 ಸುಖೋಯಿ ಸು-20 ಎಂಕೆಐ ಮತ್ತು 21 ಮಿಗ್-29 ಸೇರಿ 33 ಯುದ್ಧವಿಮಾನಗಳನ್ನು ಖರೀದಿಸುವ ಯೋಜನೆ ಹಾಕಿಕೊಂಡಿತ್ತು. ಈಗಾಗಲೇ ಮಿಗ್-29 ವಿಮಾನಗಳನ್ನು ಅತ್ಯಾಧುನಿಕಗೊಳಿಸುವಲ್ಲಿ ನೆರವು ನೀಡುತ್ತಿರುವ ರಷ್ಯಾ ಎಷ್ಟು ಸಾಧ್ಯವೋ ಅಷ್ಟು ಬೇಗನೇ ಈ ಯುದ್ಧವಿಮಾನಗಳನ್ನು ಒದಗಿಸಲು ಸಿದ್ಧವಿದೆ. ಭಾರತೀಯ ಸೇನೆ ರಷ್ಯಾ 1985ರಲ್ಲಿ ಮಿಗ್ 29 ವಿಮಾನಗಳನ್ನು ಪೂರೈಸಿತ್ತು. ಮಿಗ್ ವಿಮಾನಗಳನ್ನು ಅತ್ಯಾಧುನಿಕಗೊಳಿಸುವುದರಿಂದ ಅವುಗಳ ಬಾಳಿಕೆ ಅವಧಿ ಸುಮಾರು 40 ವರ್ಷಗಳವರೆಗೂ ಹೆಚ್ಚಾಗಲಿದೆ. ಅಲ್ಲದೇ ದಕ್ಷತೆ ಕೂಡ ಹೆಚ್ಚಲಿದೆ.
– ಖರೀದಿಗೆ ಎಷ್ಟು ವೆಚ್ಚ?: 38,900 ಕೋಟಿ ರೂ.
– ರಷ್ಯಾದಿಂದ ಮಿಗ್ ವಿಮಾನಗಳ ಖರೀದಿ ಮತ್ತು ಮೇಲ್ದರ್ಜೆಗೆ ಒಟ್ಟು 7,418 ಕೋಟಿ ರೂ. ವ್ಯಯ
– ಎಚ್ಎಎಲ್‌ನಿಂದ ಸು-30 ಎಂಕೆಐ ಜೆಟ್ ಖರೀದಿ. ಇದಕ್ಕಾಗಿ ಒಟ್ಟು 10,730 ಕೋಟಿ ರೂ. ವೆಚ್ಚ
ಏನೇನು ಖರೀದಿ?
– 21 ಮಿಗ್-29 ಫೈಟರ್ ಜೆಟ್
– 12 ಸು-30 ಎಂಕೆಐ ಜೆಟ್
– 59 ಮಿಗ್-29 ಫೈಟ್ ಜೆಟ್ ಮೇಲ್ದರ್ಜೆಗೆ
– 248 ಅಸ್ತ್ರ(ಬಿವಿಆರ್- ಬಿಯಾಂಡ್ ವಿಷ್ಯುವಲ್ ರೇಂಜ್ ಮಿಸೈಲ್ ಸಿಸ್ಟಮ್)
– ಪಿನಾಕಾ ಮಿಸೈಲ್ ಸಿಸ್ಟಮ್(100 ಕಿ.ಮೀ ವ್ಯಾಪ್ತಿ)
– ದೇಶದ ಸೇನಾ ಬಲ-
ಸಕ್ರಿಯ ಯೋಧರು- 21,40,000
ಮೀಸಲು ಪಡೆ- 11,55,000
ಅಣು ಸಿಡಿತಲೆಗಳು- 130-140
– ವಾಯು ಪಡೆ-
ಒಟ್ಟು ವಿಮಾನಗಳು- 2,216
ಯುದ್ಧ ವಿಮಾನಗಳು- 323
ಬಹುಉದ್ದೇಶ ಏರ್‌ಕ್ರಾಫ್ಟ್ – 329
ಅಟ್ಯಾಕ್ ಏರ್‌ಕ್ರಾಫ್ಟ್ – 220
ಹೆಲಿಕಾಪ್ಟರ್‌ಗಳು – 725
– ಭೂ ಸೇನೆ-
ಟ್ಯಾಂಕ್ಸ್ – 4,426
ಶಸ್ತ್ರಸಜ್ಜಿತ ವಾಹನಗಳು – 5,681
ಫಿರಂಗಿದಳ(ಆರ್ಟಿಲರಿ)- 5,067
ಸೆಲ್ಧಿ ಪ್ರೊಪೆಲ್ಡ್ ಆರ್ಟಿಲರಿ- 290
ರಾಕೆಟ್ ಆರ್ಟಿಲರಿ- 292
– ನೌಕಾ ಪಡೆ –
ಒಟ್ಟು ನೌಕಾಬಲ- 214
ವಿಮಾನಗಳನ್ನು ಹೊತ್ತೊಯ್ಯುವ ಹಡಗು- 02
ಡಿಸ್ಟ್ರಾಯರ್ಸ್- 11
ಫ್ರಿಗೆಟ್ಸ್ – 15
ಕಾರ್ವೆಟ್ – 24
ಸಬ್ಮೆರಿನ್ – 15