ಭಾರತದ ಮನೋಭೂಮಿಕೆ ಬದಲಿಸುವ ಚೆಲುವ ತರು

– ಅಜ್ಜಂಪುರ ಮಂಜುನಾಥ್‌.

ಇತ್ತೀಚಿನ ದಶಕಗಳಲ್ಲಿ ಲಭ್ಯವಾಗಿರುವ ದಾಖಲೆಗಳು ಹಾಗೂ ಕೆಲವು ಮಹತ್ತ್ವದ ಸಾಕ್ಷ್ಯಾಧಾರಗಳು ನಮ್ಮ ಗ್ರಹಿಕೆಗಳನ್ನು ಬದಲಿಸುವಂತಿವೆ. ಅದರಲ್ಲೊಂದು ನಮ್ಮ ಭಾರತೀಯ ಶಿಕ್ಷಣ ಕ್ಷೇತ್ರ ಕುರಿತಾದುದು. ನಾವೆಲ್ಲಾ ನಿಬ್ಬೆರಗಾಗುವಂತಹ ಉಳಿದ ಕ್ಷೇತ್ರಗಳ ಬಗೆಗೆ, ನನ್ನ ಮುಂದಿನ ಅಂಕಣ ಬರೆಹಗಳಲ್ಲಿ ಪ್ರಸ್ತುತ ಪಡಿಸುತ್ತೇನೆ.
ಕನಿಷ್ಠ ಕಳೆದ ಐವತ್ತು ವರ್ಷಗಳಿಂದ ಕೆಲವು ಪದ, ಪದಗುಚ್ಛ, ವಾಕ್ಯಗಳನ್ನು ಮತ್ತೆ ಮತ್ತೆ ಕೇಳುತ್ತಿದ್ದೇವೆ. ವಿಶೇಷತಃ ಕಮ್ಯೂನಿಸ್ಟರು- ಸಮಾಜವಾದಿಗಳು ಪ್ರಾರಂಭಿಸಿದ ಈ ‘ಕ್ರುಸೇಡಿಗೆ’ ಎಲ್ಲ ಹುಸಿ-ಸೆಕ್ಯುಲರ್‌ ಪಕ್ಷಗಳೂ ಕೈಜೋಡಿಸಿವೆ. ‘‘ಇಂಡಿಯಾದಲ್ಲಿ ಇಡೀ ಜನಸಮುದಾಯವನ್ನು ಶಿಕ್ಷಣವಿಲ್ಲದಂತೆ ಮಾಡಿದರು, ತಳ ಸಮುದಾಯದವರು ಅಕ್ಷರವಂಚಿತರಾದರು, ಹೆಣ್ಣು ಮಕ್ಕಳನ್ನು ಶಾಲೆಯಿಂದ ದೂರವಿಟ್ಟರು, ಐದು ಸಾವಿರ ವರ್ಷಗಳಿಂದ ಅಂಧಕಾರದಲ್ಲಿಟ್ಟರು,’’ ಇತ್ಯಾದಿ ಕೇಳುತ್ತಲೇ ಇದ್ದೇವೆ. ‘ಬ್ರಿಟಿಷರು ಬಂದು ನಮ್ಮನ್ನು ಆಳದಿದ್ದರೆ, ನಮಗೆ ವಿಜ್ಞಾನ, ತಂತ್ರಜ್ಞಾನಗಳ ಪರಿಚಯವೇ ಇರುತ್ತಿರಲಿಲ್ಲ. ಜ್ಞಾನದ ಬೆಳಕು ಬಂದುದೇ ಬ್ರಿಟಿಷರಿಂದ,’’ ಇತ್ಯಾದಿ, ಇತ್ಯಾದಿ. ಐರೋಪ್ಯರು, ಕಮ್ಯೂನಿಸ್ಟರು ಎಲ್ಲ ಸೇರಿ ಬರೆದ ಪುಸ್ತಕಗಳನ್ನು, ಪಠ್ಯಗಳನ್ನು ಏನೊಂದೂ ಪ್ರಶ್ನಿಸದೇ ಸಾರಾಸಗಟಾಗಿ ಒಪ್ಪಿ ಈಗಲೂ ಮುಂದುವರಿಯುತ್ತಿರುವುದು, ನಮ್ಮ ದೇಶದ ಬಹುದೊಡ್ಡ ದುರಂತ.
ಮಹಾತ್ಮಾ ಗಾಂಧೀಜಿ ತಮ್ಮ ಭಾರತೀಯ ರಾಜಕಾರಣ ಪ್ರವೇಶದ ಮೊದಲೇ ಇಡೀ ದೇಶ ಸುತ್ತಿ, ಸಮಾಜದ ಸ್ಥಿತಿ-ಗತಿ ಪರಾಮರ್ಶೆ ಮಾಡಿಕೊಂಡಿದ್ದರು. 1931ರ ಅಕ್ಟೋಬರ್‌ನಲ್ಲಿ ಲಂಡನ್ನಿನ ತಮ್ಮ ಭೇಟಿಯಲ್ಲಿ ಬ್ರಿಟಿಷರನ್ನು ತರಾಟೆಗೆ ತೆಗೆದುಕೊಂಡರು: ‘‘ಭಾರತ ಸುಂದರ ವೃಕ್ಷವಾಗಿತ್ತು. ಬ್ರಿಟಿಷರು ಆ ವೃಕ್ಷವನ್ನು ಬುಡಮೇಲು ಮಾಡಿದರು, ಬೇರುಗಳನ್ನು ನೆಲದಿಂದ ಕಿತ್ತು ತೆಗೆದರು. ಇಂದು ಭಾರತವು ಅತ್ಯಂತ ಅನಕ್ಷರಸ್ಥ ದೇಶವಾಗಿದೆ. ಬರ್ಮಾ (ಬ್ರಹ್ಮದೇಶ-ಮ್ಯಾನ್ಮಾರ್‌) ಕೂಡ ಅಂತೆಯೇ ಆಗಿದೆ. (ಮುಂದೆ ಬರುವ) ನಮ್ಮ (ಸ್ವತಂತ್ರ) ಸರ್ಕಾರವು ಗಂಡು ಮಕ್ಕಳಿಗೆ, ಹೆಣ್ಣು ಮಕ್ಕಳಿಗೆ ಹಿಂದಿನ ಗುರುಕುಲಗಳನ್ನು ಪುನರ್‌ ಸ್ಥಾಪಿಸಲಿದೆ’’. ನಿಜ. ಭಾರತವು ಸುಂದರವಾದ ವೃಕ್ಷವೇ ಆಗಿತ್ತು. ಗುರುಕುಲಗಳನ್ನು ನಾಶ ಮಾಡುವ ಮೂಲಕ, ಬ್ರಿಟಿಷರು ಈ ವೃಕ್ಷವನ್ನು ನಾಶಮಾಡಿದರು. ಇಂದಿಗೂ ಭಾರತ ಈ ಒಂದು ಕಾರಣಕ್ಕೆ ತುಂಬ ಬೆಲೆ ತೆರುತ್ತಿದೆ. ಅಪರೂಪದ ಗಾಂಧೀವಾದಿ ಧರ್ಮಪಾಲರು (1922-2006) ಗಾಂಧೀಜಿಯವರ ಈ ಒಂದು ಮಾತಿನ ಕೊಂಡಿಯನ್ನೇ ಹಿಡಿದು, ಅಪಾರ ಪರಿಶ್ರಮದಿಂದ, ಸಾಕ್ಷ್ಯಾಧಾರಗಳ ನೆರವಿನಿಂದ ಮಹತ್ತ್ವದ ‘ಬ್ಯೂಟಿಫುಲ್‌ ಟ್ರೀ’ ಕೃತಿ ರಚಿಸಿದರು. ತಮ್ಮ ಕೃತಿಗಳಿಗೆ ಧರ್ಮಪಾಲರು ಭಾರತದಲ್ಲಿನ ದಾಖಲೆಗಳ ಜೊತೆಗೆ, ಲಂಡನ್ನಿನಲ್ಲಿರುವ ಮೂಲ ಬ್ರಿಟಿಷ್‌ ಆಕರಗಳನ್ನೂ ಅಧ್ಯಯನ ಮಾಡಿದರು. ಜಗತ್ತೇ ಬೆಚ್ಚಿ ಬೀಳುವಂತಹ ಸಾಮಗ್ರಿ ಈ ಕೃತಿಯಲ್ಲಿತ್ತು. ಪ್ರಚಲಿತ ಅಕಾಡೆಮಿಷಿಯನ್ನರ ವಿದ್ವಲ್ಲೋಕದ ಮನೋಭೂಮಿಕೆ, ಅಭಿಪ್ರಾಯ, ಧೋರಣೆಗಳನ್ನೇ ನುಚ್ಚುನೂರು ಮಾಡುವಂತಹ ಸ್ಫೋಟಕ ಸಂಗತಿಗಳನ್ನು ಒಳಗೊಂಡಿತ್ತು. ಹಾಗೆಂದೇ, ಈ ಗ್ರಂಥದ ಪ್ರಕಟಣೆಗೆ ಯಾರೂ ಮುಂದೆ ಬರಲಿಲ್ಲ. ನಿಜ-ಇತಿಹಾಸದ ಹರಿಕಾರರಾದ ಸೀತಾರಾಮ ಗೋಯಲ್‌ ಅವರೇ ಅಪಾರ ಪರಿಶ್ರಮದಿಂದ 1983ರಲ್ಲಿ ಇದನ್ನು ಪ್ರಕಟಿಸಬೇಕಾಯಿತು.
ಏನಿದೆ ಈ ಕೃತಿಯೊಳಗೆ? ಯಾವೆಲ್ಲಾ ದಾಖಲೆಗಳು ದೇಶವನ್ನೇ ಅಲ್ಲಾಡಿಸಬಲ್ಲವು? ಇಂತಹ ಎಲ್ಲ ಪ್ರಶ್ನೆಗಳಿಗೆ ಧರ್ಮಪಾಲರ ಸಂಶೋಧನಾ-ಪ್ರಬಂಧಗಳು, ಕೋಷ್ಟಕಧಿಗಳು ಸಾಕ್ಷ್ಯಾಧಾರಸಹಿತ ಉತ್ತರಿಸುತ್ತವೆ. ಭಾರತದಲ್ಲಿರುವ ಇಂದಿನ ಶಿಕ್ಷ ಣ ಪದ್ಧತಿಯು ಮೆಕಾಲೆ-ಪ್ರಣೀತವಾದುದು. ಸ್ವದೇಶಾಭಿಮಾನ, ಸಂಸ್ಕೃತಿ-ಧರ್ಮ-ಪರಂಪರೆ ಕುರಿತ ಶ್ರದ್ಧೆಯನ್ನು ನಾಶ ಮಾಡಿ ಭಾರತೀಯರು ಬರಿಯ ಕಾರಕೂನರಾಗುವುದೇ ಮೆಕಾಲೆಯ ದುಷ್ಟ ಉದ್ದೇಶವಾಗಿತ್ತು. ಇಂದಿಗೂ ಈ ಪದ್ಧತಿಯ ಸಂಕೋಲೆಗಳಿಂದ ನಾವು ಬಿಡಿಸಿಕೊಳ್ಳಲಾಗಿಲ್ಲ. ಮೆಕಾಲೆಯ ಶಿಕ್ಷ ಣ ಪದ್ಧತಿ ಅನುಷ್ಠಾನಕ್ಕೆ ತುಂಬ ಮೊದಲೇ, ಅಂದಿನ ಬ್ರಿಟಿಷ್‌ ಅಧಿಕಾರಿಗಳು 1822-25, 1835-38 ಅವಧಿಗಳಲ್ಲಿ ಭಾರತದ ಶಾಲೆಗಳ, ವಿದ್ಯಾರ್ಥಿಗಳ, ಅಧ್ಯಾಪಕರ ಜಾತಿವಾರು, ಕೋಮುವಾರು, ಲಿಂಗವಾರು ವರದಿಗಳನ್ನು ತರಿಸಿಕೊಂಡಿದ್ದರು. ಬ್ರಾಹ್ಮಣರಿಗೆ ಮಾತ್ರ ವಿದ್ಯಾಭ್ಯಾಸಕ್ಕೆ ಅವಕಾಶವಿತ್ತು, ಸ್ತ್ರೀಯರಿಗೆ, ಶೂದ್ರರಿಗೆ ಇರಲಿಲ್ಲ ಎಂಬ ಸುಳ್ಳನ್ನೇ ಈವರೆಗೆ ಹೇಳಿಕೊಂಡು ಬರಲಾಗಿದೆ. ಆದರೆ, ಧರ್ಮಪಾಲರು ಪ್ರಸ್ತುತ ಪಡಿಸಿರುವ ದಾಖಲೆಗಳನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. 1822ರಲ್ಲಿ ಶ್ರೀರಂಗಪಟ್ಟಣದ 17 ಶಾಲೆಗಳಲ್ಲಿ, 38 ಬ್ರಾಹ್ಮಣರು, 20 ವೈಶ್ಯರು, 93 ಶೂದ್ರರು, ಉಳಿದ ಜಾತಿಗಳ 62 ಜನರು (ಒಟ್ಟು 213 ವಿದ್ಯಾರ್ಥಿಗಳು) ಕಲಿಯುತ್ತಿದ್ದರು. ಇಷ್ಟೇ ಅಲ್ಲ, ಇವರೊಂದಿಗೆ 32 ಜನ ಮುಸ್ಲಿಂ ವಿದ್ಯಾರ್ಥಿಗಳೂ ಇದ್ದರು (ಪುಟ 96-97).
ತಮಿಳುನಾಡಿನ ತಿರುನೆಲ್ವೇಲಿಯಲ್ಲಿ 607 ಶಾಲೆಗಳಲ್ಲಿ 2016 ಬ್ರಾಹ್ಮಣರು, 2889 ಶೂದ್ರರು, ಉಳಿದ ಜಾತಿಗಳ 3557 ವಿದ್ಯಾರ್ಥಿಗಳು, 796 ಮುಸ್ಲಿಮರು (ಒಟ್ಟು ವಿದ್ಯಾರ್ಥಿಗಳು 9258) ವಿದ್ಯಾಭ್ಯಾಸ ಮಾಡುತ್ತಿದ್ದರು. ವಿಶೇಷವೆಂದರೆ, ಉಳಿದ ಜಾತಿಗಳ 117 ವಿದ್ಯಾರ್ಥಿನಿಯರು ಹಾಗೂ ಇಬ್ಬರು ಮುಸ್ಲಿಂ ವಿದ್ಯಾರ್ಥಿನಿಯರೂ ಕಲಿಯುತ್ತಿದ್ದರು. ಬ್ರಾಹ್ಮಣರಿಗೆ ಮಾತ್ರ ಶಿಕ್ಷಣಾವಕಾಶವಿತ್ತು ಎಂಬಂತಹ (ಪುಟ 98-99) ಮಿಥ್ಯೆಗಳು ಈ ವರದಿಗಳಿಂದ ಬಯಲಾಗುತ್ತವೆ. ಅಂದಿನ ಬಂಗಾಳದ ಮುರ್ಷಿದಾಬಾದ್‌, ಬೀರ್‌ಭೂಮಿ, ಬುರ್‌ಡ್ವಾನ್‌, ತಿರ್‌ ಹೂಟ್‌, ಸೌತ್‌ ಬಿಹಾರ್‌ನ ಸಾವಿರಾರು ಶಾಲೆಗಳ ವಿದ್ಯಾರ್ಥಿಗಳ ಜಾತಿವಾರು ಅಂಕಿ ಅಂಶಗಳೇ ಇಲ್ಲಿವೆ (ಪುಟಗಳು 315-317). ಪರಿಶೀಲನೆಗಾಗಿ ಬುರ್‌ಡ್ವಾನ್‌ ವಿವರವನ್ನೇ ನೋಡೋಣ. 629 ಶಾಲೆಗಳಲ್ಲಿ ಒಟ್ಟು 13,190 ವಿದ್ಯಾರ್ಥಿಗಳಲ್ಲಿ 769 ಜನ ಮುಸ್ಲಿಮರೇ ಇದ್ದರು. ವಿದ್ಯಾರ್ಥಿಗಳ ಸರಾಸರಿ ವಯಸ್ಸು 9.9. ಇವರಲ್ಲಿ 3429 ಬ್ರಾಹ್ಮಣರು, 1846 ಕಾಯಸ್ಥರು, 371 ಜನ ಗಾಣಿಗರು (ತೇಲಿ), 262 ಜನ ಕಮ್ಮಾರರು, 192 ಜನ ಕ್ಷೌರಿಕರು, 61 ಜನ ಚಂಡಾಲರು, ಇತ್ಯಾದಿ ವಿವರಗಳಿವೆ. ಇಂದಿನ ಪರಿಭಾಷೆಯಲ್ಲಿ ಯಾರೆಲ್ಲಾ ಹಿಂದುಳಿದ ಜಾತಿಯವರು, ಯಾರೆಲ್ಲಾ ಪರಿಶಿಷ್ಟರು ಎನ್ನುವುದನ್ನು ನೀವೇ ಗಮನಿಸಿ.
ವಿದ್ಯಾರ್ಥಿಗಳಿಗಿಂತ ಅಧ್ಯಾಪಕರ ಜಾತಿವಾರು ಅಂಕಿ ಅಂಶಗಳು ಇನ್ನಷ್ಟು ಮಹತ್ತ್ವ ಪಡೆಯುತ್ತವೆ, ನಮ್ಮ ಇತಿಹಾಸದ ಮರುಮೌಲ್ಯಮಾಪನಕ್ಕೆ ಸಹಕಾರಿಯಾಗುತ್ತವೆ. ಇದೇ ಬುರ್‌ಡ್ವಾನಿನ 639 ಶಾಲೆಗಳಲ್ಲಿ (ಶಿಕ್ಷ ಕರ ಸರಾಸರಿ ವಯಸ್ಸು 39.05 ವರ್ಷ) 107 ಬ್ರಾಹ್ಮಣರಿದ್ದರೆ, 369 ಜನ ಕಾಯಸ್ಥರಿದ್ದಾರೆ, 10 ಜನ ಗಾಣಿಗರಿದ್ದಾರೆ, 4 ಜನ ಚಂಡಾಲರಿದ್ದಾರೆ, 3 ಜನ ಕ್ಷೌರಿಕರಿದ್ದಾರೆ, ಹಾಗೂ 9 ಜನ ಮುಸ್ಲಿಮರು, 3 ಜನ ಕ್ರೈಸ್ತರಿದ್ದಾರೆ. ಈ ಎಲ್ಲ ಮಹತ್ತ್ವದ ಅಂಕಿ-ಅಂಶಗಳನ್ನು ಬ್ರಿಟಿಷ್‌ ಆಡಳಿತವೇ ಕಲೆಹಾಕಿದ್ದು ‘ಆಡಮ್ಸ್‌ ರಿಪೋರ್ಟ್ಸ್’ (ಪುಟಗಳು 195 ರಿಂದ 200) ಎಂದೇ ಇವು ಖ್ಯಾತಿ ಪಡೆದಿವೆ. ಮಹತ್ತ್ವದ ಈ ‘ಬ್ಯೂಟಿಫುಲ್‌ ಟ್ರೀ’ ಕೃತಿಯನ್ನು ಡಾ|| ಮಾಧವ ಪೆರಾಜೆ ಅವರು ‘ಚೆಲುವ ತರು’ ಹೆಸರಿನಲ್ಲಿ ಕನ್ನಡಕ್ಕೆ ತಂದಿರುವುದು ಸ್ತುತ್ಯರ್ಹ. ಪ್ರಕಟಣೆಯ ಅನಂತರ, ಕನ್ನಡದಲ್ಲಿರುವ ಈ ಮಹತ್ತ್ವದ ಕೃತಿ ‘ಚೆಲುವ ತರು’ ಕುರಿತಂತೆ, ನಮ್ಮ ಅಕಾಡೆಮಿಷಿಯನ್ನರು – ಬುದ್ಧಿಜೀವಿಗಳು ಎಷ್ಟೆಷ್ಟು ವಿಚಾರ ಸಂಕಿರಣ ಹಮ್ಮಿಕೊಂಡಿದ್ದಾರೆ ಎಂಬುದನ್ನು ಗಮನಿಸಿದರೆ, ಕನ್ನಡ ಸಾರಸ್ವತ ಲೋಕದಲ್ಲಿ ಮಾಫಿಯಾ ಶಕ್ತಿ – ನಿಯಂತ್ರಣಗಳು ಹೇಗಿವೆ, ಎಂಬುದು ಓದುಗರಿಗೂ ತಿಳಿಯುತ್ತದೆ.
ಅಂದಿನ ರಾಜಮಹೇಂದ್ರವರದ (ರಾಜಮಂಡ್ರಿ) ಕಾಲೇಜುಗಳ ಪಠ್ಯದಲ್ಲಿ ವೇದಗಳ ಜೊತೆಗೆ ರಘುವಂಶ, ಕುಮಾರ ಸಂಭವ, ತರ್ಕಶಾಸ್ತ್ರ, ಕಾವ್ಯ, ಸಿದ್ಧಾಂತ-ಕೌಮುದಿಗಳ ಜೊತೆಗೆ ದ್ರಾವಿಡ ವೇದವನ್ನೂ (ಎಲ್ಲ) ವಿದ್ಯಾರ್ಥಿಗಳೂ (ಪುಟ 32) ಕಲಿಯುತ್ತಿದ್ದರು. ಕರ್ನಾಟಕದ ನಮ್ಮ ಬಳ್ಳಾರಿ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ (ಪುಟ 26) ವಿಶ್ವಕರ್ಮ ಪುರಾಣ, ಚನ್ನಬಸವೇಶ್ವರ ಪುರಾಣ, ಬೇತಾಳ ಪಂಚವಿಂಶತಿ, ಗಿರಿಜಾ ಕಲ್ಯಾಣ, ಪಂಚತಂತ್ರ, ಮೋಹನ ತರಂಗಿಣಿ (ಕನಕ ದಾಸರದು), ಶಬ್ದಮಣಿ ದರ್ಪಣ, ಗಣಿತ, ರಾಮಾಯಣ, ಭಾಗವತ, ಮಹಾಭಾರತ, ಇತ್ಯಾದಿ ಕಲಿಯುತ್ತಿದ್ದರು ಎನ್ನುವ ಈ ದಾಖಲೆಗಳು ಸಾವಿರಾರು ವರ್ಷಗಳ ಭಾರತ ದೇಶದ ನಮ್ಮ ಶಿಕ್ಷ ಣ ಪದ್ಧತಿಯನ್ನು ವಿಶದಪಡಿಸುತ್ತವೆ. ನಮ್ಮ ದೇಶದ ಪ್ರಸಕ್ತ ಕಲುಷಿತ ಇತಿಹಾಸವನ್ನು ಸ್ವಚ್ಛಗೊಳಿಸಲು, ಈ ‘ಬ್ಯೂಟಿಫುಲ್‌ ಟ್ರೀ’ ಗ್ರಂಥದ ದಾಖಲೆಗಳೇ ಸಾಕು. ಜಾತಿ-ರಾಜಕಾರಣದ ವಿಷಫಲಗಳನ್ನು ದೂರಸರಿಸಿ, ಸತ್ಯದ ಸಾಕ್ಷ್ಯಾಧಾರಗಳನ್ನು ಅರಿಯಲು ನಾವೆಲ್ಲರೂ ಓದಲೇಬೇಕಾದ ಕೃತಿಯಿದು.
ಮಲಬಾರ್‌ ಪ್ರಾಂತದ ವಿವರ (ಪುಟ 27) ನೋಡಿದರೆ ಖಗೋಳಶಾಸ್ತ್ರ ಕಲಿಯುತ್ತಿದ್ದ 808 ವಿದ್ಯಾರ್ಥಿಗಳಲ್ಲಿ ಬ್ರಾಹ್ಮಣರ ಸಂಖ್ಯೆ ಕೇವಲ 78. ವೈದ್ಯಕೀಯದ, ಔಷಧಶಾಸ್ತ್ರದ 194 ವಿದ್ಯಾರ್ಥಿಗಳಲ್ಲಿ 31 ಜನ ಮಾತ್ರ ಬ್ರಾಹ್ಮಣರು. ರಾಜಮಂಡ್ರಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಎಲ್ಲ ಐದು ವಿದ್ಯಾರ್ಥಿಗಳೂ ಶೂದ್ರರು. ಇದರಿಂದ, ಕಮ್ಯೂನಿಸ್ಟರು ಹೇಳಿಕೊಂಡು ಬಂದಿರುವ ‘ಸಾವಿರಾರು ವರ್ಷಗಳಿಂದ ಅಕ್ಷ ರ ವಂಚಿತರಾದ ಶೂದ್ರರು’ ಇತ್ಯಾದಿ ಸುಳ್ಳುಗಳ ಭ್ರಮೆಯ ತೆರೆ ಸರಿಯುತ್ತದೆ.
ಮಹತ್ತ್ವದ ಸಂಗತಿಯೆಂದರೆ, ಬಹುಪಾಲು ಗುರುಕುಲಗಳು ಸ್ವಯಂ-ಪರಿಪೂರ್ಣವಾಗಿದ್ದವು. ಗ್ರಾಮ, ಆ ಪಟ್ಟಣಗಳೇ ಅವುಗಳ ಖರ್ಚುವೆಚ್ಚ ನೋಡಿಕೊಳ್ಳುತ್ತಿದ್ದವು. ಆಳುವವರ ಸಹಾಯ-ಕೃಪೆಗಳೇ ಬೇಕಿರಲಿಲ್ಲ. ಹಾಗೆಂದೇ, ಅವು ಸಾವಿರಾರು ವರ್ಷ ಅನೂಚಾನವಾಗಿ ಭಾರತೀಯ ಸಮಾಜವನ್ನು ಮುನ್ನಡೆಸಿದವು. ಬ್ರಿಟಿಷರು ಇಂತಹ ಗುರುಕುಲಗಳನ್ನು ನಾಶ ಮಾಡಿದರು. ಇವುಗಳಿಂದ ಈವರೆಗೆ ಆದ ಹಾನಿ ಅಪಾರ. ನಮ್ಮ ವಿಶ್ವವಿದ್ಯಾಲಯಗಳು, ನಮ್ಮ ಪಠ್ಯಪುಸ್ತಕಗಳು ಎಂತಹ ಮಾನಸಿಕತೆಯನ್ನು ನಮ್ಮಲ್ಲಿ ತುಂಬಿವೆಯೆಂದರೆ, ಈವರೆಗೆ ನಮ್ಮ ತಲೆಯಲ್ಲಿ ನೆಲೆಸಿರುವ ಸುಳ್ಳುಗಳು ಅದೆಷ್ಟು ಗಟ್ಟಿ ಎಂದರೆ, ಈ ಕೃತಿ ನಮ್ಮೆದುರು ತೆರೆದಿಡುವ ದಾಖಲೆಗಳನ್ನು ನಂಬುವುದೇ ಕಷ್ಟವಾಗುತ್ತದೆ. ಆದರೆ ಎಂದಿಗಾದರೂ ಸತ್ಯದ ಬೆಳಕು ನಮ್ಮನ್ನು ಮುನ್ನಡೆಸಲೇಬೇಕಾಗುತ್ತದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top