ಆಗ ಚೀನಾದೆದುರು ಸೋತ ಭಾರತ ಈಗ ಗೆದ್ದಿದ್ದು ಹೇಗೆ? (02.09.2017)

ತನ್ನ ಸಾಮ್ರಾಜ್ಯವಾದ ವಿಸ್ತರಣೆಗೆ ಭಾರತವೇ ದೊಡ್ಡ ಅಡ್ಡಿ ಎಂಬುದು ಚೀನಾದ ಅಸಮಾಧಾನ. ಹೀಗಾಗಿ ಲಭ್ಯ ವೇದಿಕೆಗಳನ್ನೆಲ್ಲ ಬಳಸಿಕೊಂಡು ಭಾರತಕ್ಕೆ ತಲೆನೋವು ತರುವುದು ಅದರ ಕಾರ್ಯತಂತ್ರ. ಆದರೆ ಭಾರತ ಬದಲಾಗಿದೆ ಎಂಬ ಸ್ಪಷ್ಟ ಸಂದೇಶ ಡೋಕ್ಲಂ ಬಿಕ್ಕಟ್ಟಿನ ಸಂದರ್ಭದಲ್ಲಿ ರವಾನೆಯಾಗಿದೆ.

ಇನ್ನೇನು ಭಾರತದ ಮೇಲೆ ಚೀನಾ ಯುದ್ಧ ನಡೆಸಿಯೇಬಿಟ್ಟಿತು ಎಂಬ ಸ್ಥಿತಿ ನಿರ್ಮಾಣ ಆದಾಗಲೂ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನ ಮುರಿಯಲಿಲ್ಲ? ಚೀನಾದ ಸತತ ತರ್ಲೆಗಳಿಗೆ ಬಹಿರಂಗ ಉತ್ತರ ಕೊಡುವುದಕ್ಕೆ ಅವರೇಕೆ ಮುಂದಾಗಲಿಲ್ಲ ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಆದರೆ ಅದೇ ವೇಳೆ, ಅದರಲ್ಲೂ ಭಾರತ ಮತ್ತು ಚೀನಾದ ನಡುವೆ ಯುದ್ಧೋನ್ಮಾದದ ವಿಷಮ ಪರಿಸ್ಥಿತಿ ಇರುವಾಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗೌಪ್ಯವಾಗಿ ದೆಹಲಿಯ ಚೀನಾ ದೂತಾವಾಸ ಕಚೇರಿಯಲ್ಲಿ ಆ ದೇಶದ ರಾಜತಾಂತ್ರಿಕರನ್ನು ಏಕೆ ಭೇಟಿ ಮಾಡಿದರು, ಏನು ಮಾತುಕತೆ ನಡೆಸಿದರು ಎಂಬ ಪ್ರಶ್ನೆಗೆ ಇನ್ನೂ ಕೂಡ ಉತ್ತರ ಸಿಕ್ಕಿಲ್ಲ.

ಭೂತಾನಿನ ಡೋಕ್ಲಂನಲ್ಲಿ ಚೀನಾ ಸತತವಾಗಿ ತೆಗೆದ ತಗಾದೆ ಕುರಿತು ನೋಡೋಣ. ತಾನಾಗಿಯೇ ಮುಂದೆ ಬಂದು ಭಾರತದ ತಾಳ್ಮೆಯನ್ನು ಕೆಣಕುತ್ತಲೇ ಹೋದ ಚೀನಾ ಕೊನೆಗೆ ‘1962ರಲ್ಲಿ ಆದ ಗತಿಯನ್ನೊಮ್ಮೆ ನೆನಪಿಸಿಕೊಳ್ಳಿ’ ಎಂಬ ಎಚ್ಚರಿಕೆಯನ್ನು ನೀಡಿದ್ದು, ಅದಕ್ಕೆ ಪ್ರತಿಯಾಗಿ ‘ಈಗ ಇರುವುದು 1962ರ ಭಾರತವಲ್ಲ, 2017ರ ಭಾರತ’ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಚೀನಾ 1962ರ ಯುದ್ಧವನ್ನು ನೆನಪಿಸಿಕೊಟ್ಟ ಮೇಲೂ ನಾವು ಒಮ್ಮೆ ಆಗಿನ ಸನ್ನಿವೇಶವನ್ನು ಮೆಲುಕು ಹಾಕದಿದ್ದರೆ, ಆಗ ಮತ್ತು ಈಗ ಚೀನಾ ಹಾಗೂ ಭಾರತದ ಪರಿಸ್ಥಿತಿಯನ್ನು ತುಲನೆ ಮಾಡದಿದ್ದರೆ ಹೇಗೆ?

ಮೊದಲ ಬಾರಿ ಚೀನಾ ಭಾರತದ ಮೇಲೆ ದಂಡೆತ್ತಿ ಬಂದಾಗ ಪ್ರಧಾನಿಯಾಗಿದ್ದ ನೆಹರು ದೇಶದಲ್ಲಿ ಪ್ರಶ್ನಾತೀತ ನಾಯಕರಾಗಿದ್ದರು ಮತ್ತು ಅವರಿಗೆ ಸಲಹೆ ಸೂಚನೆ ಕೊಡಲು ಸರ್ದಾರ್ ಪಟೇಲರಂತಹ ಘಟಾನುಘಟಿ ನಾಯಕರಿದ್ದರು. ಈಗ ಹಾಗಲ್ಲ. ಪ್ರಧಾನಿ ಮೋದಿ ಹೇಗೆ ಪರಿಸ್ಥಿತಿ ನಿಭಾಯಿಸುತ್ತಾರೆ ಎಂದು ನೋಡೇಬಿಡೋಣ, ಅಂತೂ ಮೋದಿ ಆಟವನ್ನು ಕಟ್ಟಿಹಾಕಲು ಒಂದು ಕಾರಣ ಸಿಕ್ಕಿತು ಎಂದು ಒಳಗೊಳಗೇ ಖುಷಿಪಟ್ಟವರು, ಮುಸಿಮುಸಿ ನಕ್ಕವರು, ವ್ಯಕ್ತಿಗತವಾಗಿ ಒಂದು ಹಿನ್ನಡೆಗಾಗಿ ಕಾದು ಕುಳಿತವರೇ ಹೆಚ್ಚಿದ್ದರು. ಆದರೂ ಆಗ ಭಾರತ ಚೀನಾದೆದುರು ಸೋತಿತು, ಈಗ ಜಗತ್ತಿನೆದುರು ಭಾರತ ಎದೆ ಸೆಟೆದು ನಿಂತು ಚೀನಾದ ಅಹಮನ್ನು ಮುರಿಯಿತು. ಉದ್ಧಟತನಕ್ಕೆ ಉದಾಸೀನದ ಪಾಠ ಕಲಿಸಿತು. ಇದಕ್ಕೆ ಮೋದಿ ನಸೀಬು ಮಾತ್ರವಲ್ಲ, ದೇಶದ ನಸೀಬು ಸಹ ಚೆನ್ನಾಗಿತ್ತು ಎನ್ನೋಣವೇ…

ಎಚ್ಚರಿಕೆ ಕಡೆಗಣಿಸಿದ್ದ ನೆಹರು: ಅಂದು ನೆಹರು ಸುತ್ತ ಮೂವರು ಶತ್ರುಗಳಿದ್ದರು. ಚೀನಾ ಬಾಹ್ಯ ಶತ್ರು. ಇನ್ನಿಬ್ಬರು ಆಂತರಿಕ ಶತ್ರುಗಳು. ಒಬ್ಬರು ವಿ.ಕೆ.ಕೃಷ್ಣ ಮೆನನ್. ಅವರು ನೆಹರು ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದರು. ಅಂದು ಭಾರತ ಚೀನಾದೆದುರು ಸೋತು ಸುಣ್ಣವಾಗಲು ಇವರು ಪ್ರಮುಖ ಕಾರಣೀಕರ್ತ. ಎರಡನೆಯವರು ಕೆ.ಎಂ.ಫಣಿಕ್ಕರ್. ಇವರು ಬೀಜಿಂಗ್​ನಲ್ಲಿ ಭಾರತದ ರಾಯಭಾರಿಯಾಗಿದ್ದರು. ಕೃಷ್ಣ ಮೆನನ್ ಮತ್ತು ಫಣಿಕ್ಕರ್ ಇಬ್ಬರೂ ಕಟ್ಟಾ ಕಮ್ಯುನಿಸ್ಟ್ ಚಿಂತನೆಯವರಾಗಿದ್ದರು. ಚಿಂತನೆ ಯಾವುದೇ ಇದ್ದರೂ ತೊಂದರೆ ಇರಲಿಲ್ಲ, ಆದರೆ ಅವರು ನೆಚ್ಚಿಕೊಂಡಿದ್ದ ವಿಚಾರದ ಕಾರಣಕ್ಕೆ ಚೀನಾದ ಪರ ನಿಂತುಕೊಂಡಿದ್ದುದು ಮಾತ್ರ ಬೇಸರ ತರಿಸುವ ಸಂಗತಿ.

ಚೀನಾ ವಿಷಯದಲ್ಲಿ ಈ ಇಬ್ಬರು ಖಳನಾಯಕರ ನಿಲುವಿನ ಕುರಿತು ಸರ್ದಾರ್ ಪಟೇಲರಿಗೆ ಸ್ಪಷ್ಟ ಅರಿವಿತ್ತು. ಅವರು ತಡ ಮಾಡಲಿಲ್ಲ. ನೆಹರುಗೆ ಒಂದು ಪತ್ರ ಬರೆದರು. ಆ ಪತ್ರದ ಒಕ್ಕಣೆ ಮತ್ತು ಅದರ ತಾತ್ಪರ್ಯ ಆಗಲೂ ಈಗಲೂ ಮುಂದೆಯೂ ಭಾರತ ಚೀನಾದ ವಿಷಯದಲ್ಲಿ ಯಾವ ನಿಲುವನ್ನು ತಾಳಬೇಕು ಎಂಬುದನ್ನು ಯಥಾರ್ಥ ಅನ್ವಯಿಸಿಕೊಳ್ಳುವಂತಿದೆ. ಆ ಪತ್ರದ ಆಶಯ ಜಾರಿಯಾಗಿದ್ದರೆ ಚೀನಾ ವಿಷಯದಲ್ಲಿ ಭಾರತ ಹಾದಿ ತಪ್ಪಲು ಮತ್ತು ತಲೆ ತಗ್ಗಿಸಿ ನಿಲ್ಲುವಂತಾಗಲು ಆಸ್ಪದವೇ ಇರುತ್ತಿರಲಿಲ್ಲ. ‘ಮಿಸ್ಟರ್ ನೆಹರು ನೀವು ನೇಮಿಸಿದ ಚೀನಾ ರಾಯಭಾರಿ ಫಣಿಕ್ಕರ್ ಭಾರತದ ಪ್ರತಿನಿಧಿಯಲ್ಲ, ಅವರು ಟಿಬೆಟ್ ವಿಚಾರದಲ್ಲಿ ಚೀನಾದ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ನಿಮಗೆ ಗೊತ್ತೇ? ಭಾರತ ಮತ್ತು ಟಿಬೆಟ್ ವಿಚಾರದಲ್ಲಿ ಚೀನದ ನೀತಿ ನಿಲುವುಗಳ ಕುರಿತು ವಾಸ್ತವಿಕ ವಿಷಯವನ್ನು ನಿಮ್ಮ ಗಮನಕ್ಕೆ ತರಲು ಅವರು ಬಹಳ ಕಷ್ಟಪಡುತ್ತಿದ್ದಾರೆ. ಅದರ ಪರಿಣಾಮವಾಗಿ ಟಿಬೆಟ್ ಸ್ವಾತಂತ್ರ್ಯ ರಕ್ಷಣೆ ಕುರಿತು ನೇರಾನೇರವಾಗಿ ಮಾತನಾಡಲು ಫಣಿಕ್ಕರ್ ಹಿಂದೇಟು ಹಾಕುತ್ತಿದ್ದಾರೆ.

ಅದನ್ನೇ ಆಧರಿಸಿ ನೀವು ‘ಹಿಂದಿ ಚೀನಿ ಭಾಯಿ ಭಾಯಿ’ ಎಂಬ ಜಪ ಮಾಡುತ್ತಿದ್ದೀರಿ. ಸ್ವಾಮಿ…ನೆಹರು ಅವರೇ ಮಾವೋ ಬಾಯಲ್ಲಿ ಯಾಕೆ ‘ಅದೇ ಹಿಂದಿ ಚೀನಿ ಭಾಯಿ ಭಾಯಿ’ ಎಂಬ ಘೊಷವಾಕ್ಯ ಹೊರಡುತ್ತಿಲ್ಲ ಎಂದು ಆಲೋಚನೆ ಮಾಡಿದ್ದೀರಾ? ಮಾವೋ ದುರ್ಬಲ ನಾಯಕನನ್ನು ಎಂದೂ ಮೆಚ್ಚುವುದಿಲ್ಲ, ತನಗೆ ಎದುರು ನಿಲ್ಲುವವರನ್ನು ಮಾತ್ರ ಅವರು ನೋಡುತ್ತಾರೆ, ವಶೀಲಿಬಾಜಿ ಹಚ್ಚಿ ಶರಣಾಗತಿ ಬೇಡುವ ಹೇಡಿಗಳನ್ನು ಅವರು ಕಾಲಕಸದಂತೆ ಕಾಣುತ್ತಾರೆ’ ಎಂದು ಪಟೇಲ್ ಪತ್ರದಲ್ಲಿ ನೇರವಾಗಿ ವಿವರಿಸಿದ್ದರು. ‘ಟಿಬೆಟ್ ವಿಷಯದಲ್ಲಿ ಚೀನಾದ ನಿಲುವನ್ನು ಈಗಲೂ ನಾವು ಅರಿಯದೇ ಹೋದರೆ, ಟಿಬೆಟ್ ತನ್ನ ಸ್ವಾತಂತ್ರ್ಯ ಕಳೆದುಕೊಂಡು ಚೀನದ ಕೈವಶವಾದರೆ ರಕ್ಷಣೆ ವಿಚಾರದಲ್ಲಿ ಭಾರತ ಶಾಶ್ವತವಾಗಿ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಸಹ ಪಟೇಲರು ಮುನ್ನೆಚ್ಚರಿಕೆ ನೀಡಿದ್ದರು.

ಅಷ್ಟು ಮಾತ್ರವಲ್ಲ, ಅಗತ್ಯಬಿದ್ದರೆ ಟಿಬೆಟ್ ಸ್ವಾತಂತ್ರ್ಯ ರಕ್ಷಣೆಯ ವಿಷಯದಲ್ಲಿ ಭಾರತ ಮಿಲಿಟರಿ ಕಾರ್ಯಾಚರಣೆಗೂ ಹಿಂದೇಟು ಹಾಕಬಾರದು ಎಂದು ಪಟೇಲರು ಸ್ಪಷ್ಟವಾಗಿ ಹೇಳಿದ್ದರು. ಆ ಪತ್ರದಲ್ಲಿ ಒಂದು ಕಡೆ, ‘ಅಹಿಂಸೆಗೆ ಅಹಿಂಸೆಯಿಂದಲೇ ಉತ್ತರ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಕಲಿಯುಗದಲ್ಲಿ ಶಕ್ತಿಯನ್ನು ಶಕ್ತಿಯಿಂದಲೇ ಎದುರಿಸುವುದು ನಿಜವಾದ ರಾಜಧರ್ಮ, ನ್ಯಾಯಮಾರ್ಗ’ ಎಂದು ಪಟೇಲರು ಕಿವಿಮಾತು ಹೇಳಿದ್ದರು. ಆದರೆ ನೆಹರು ಪಟೇಲರ ಈ ಪತ್ರವನ್ನು ತಣ್ಣಗೆ ಕಸದಬುಟ್ಟಿಗೆ ಹಾಕಿ ಕುಳಿತುಕೊಂಡರು. ಚೀನಾವನ್ನು ಸಂತುಷ್ಟಗೊಳಿಸಿ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿಬಿಟ್ಟಿದ್ದ ನೆಹರು ಟಿಬೆಟ್ ಸ್ವಾತಂತ್ರ್ಯ ರಕ್ಷಣೆ ಕುರಿತು ಚಕಾರ ಎತ್ತಲಿಲ್ಲ. ಚೀನಾ ಅನಾಯಾಸವಾಗಿ ಟಿಬೆಟ್ಟನ್ನು ಕಬಳಿಸಿ ಕುಳಿತುಕೊಂಡಿತು. ಇಂದಿನ ಎಲ್ಲ ಅವಾಂತರಗಳಿಗೆ ಅದೇ ಮೂಲವೂ ಹೌದು.

ಅಂದು ಪಟೇಲ್ ಇನ್ನೂ ಒಂದು ಮಾತನ್ನು ನೆಹರುಗೆ ಹೇಳುವ ಯತ್ನ ಮಾಡುತ್ತಾರೆ. ಚೀನಾ ಒಂದು ಕಡೆ ಟಿಬೆಟ್ ಮೇಲೆ ಕಣ್ಣು ಹಾಕಿದೆ. ಮತ್ತೊಂದೆಡೆ ಕೊರಿಯಾ ಯುದ್ಧದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಈ ಸಂದರ್ಭದಲ್ಲಿ ಚೀನಾಕ್ಕೆ ಕೊರಿಯಾ ಯುದ್ಧದ ಮೇಲೆ ಪೂರ್ಣ ಗಮನವಿದೆ. ನಾವು ಟಿಬೆಟ್ ಪರ ಗಟ್ಟಿಯಾಗಿ ನಿಂತುಕೊಳ್ಳಲು ಇದು ಉತ್ತಮ ಅವಕಾಶ. ಆ ಮೂಲಕ ಕೊರಿಯಾದಲ್ಲಿ ಎದುರಾಳಿ ಆಗಿರುವ ಅಮೆರಿಕ ಒಲವನ್ನು ಗಳಿಸಿಕೊಳ್ಳಲೂ ಸಾಧ್ಯವಿದೆ ಎಂಬ ಉಪಾಯವನ್ನೂ ಪಟೇಲರು ಸೂಚಿಸುತ್ತಾರೆ.

ಊಹೂಂ.. ನೆಹರೂ ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಅಂದು ಭಾರತ ಹಾಗೆ ಮಾಡುವ ಮೂಲಕ ಅಮೆರಿಕದ ಅಧ್ಯಕ್ಷ ಟ್ರೂಮನ್ ವಿಶ್ವಾಸ ಗಳಿಸಿದ್ದರೆ ಇಂದು ಅದೇ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತದೊಂದಿಗೆ ಮತ್ತುಷ್ಟು ಗಟ್ಟಿಯಾಗಿ ನಿಂತುಕೊಳ್ಳುತ್ತಿದ್ದರೋ ಏನೋ? ಇತಿಹಾಸದಲ್ಲಿ ಏನೇ ಪ್ರಮಾದ ಆಗಿದ್ದರೂ ಇಂದು ಚೀನಾದ ಉಪಟಳಕ್ಕೆ ಕಡಿವಾಣ ಹಾಕಿ ಭಾರತ ಸ್ವಾಭಿಮಾನ ಮೆರೆಯುವಲ್ಲಿ ಅಮೆರಿಕದ ನೆರವು ನಗಣ್ಯವೇನಲ್ಲ.

ಪಟೇಲ್ ಮಾತನ್ನು ನೆಹರೂ ಕೇಳಿಸಿಕೊಳ್ಳದ್ದರಿಂದ ಮುಂದೆ ಆಗಿದ್ದೆಲ್ಲ ಗೊತ್ತೇ ಇದೆ. ಅಂದು ಚೀನದ ಬಳಿ ಅಣು ಬಾಂಬ್ ಇರಲಿಲ್ಲ; ಇಂದು ಎಲ್ಲ ವಿನಾಶಕಾರಿ ಶಸ್ತ್ರಾಸ್ತ್ರಗಳೂ ಇವೆ. ಆದರೂ ಅದೆಲ್ಲವನ್ನು ಎದುರಿಸಿ ನಿಂತು ಭಾರತ ಚೀನಾದ ಸೊಕ್ಕನ್ನು ಅಡಗಿಸಿದ್ದು ಹೇಗೆ? ಅಚ್ಚರಿ ಆಗುತ್ತದೆ ತಾನೆ. ಆದರೂ ಈಗ ಭಾರತದ ಚೀನಾ ನೀತಿಯನ್ನು ರಾಹುಲ್ ಗಾಂಧಿ ಆದಿಯಾಗಿ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚುವುದನ್ನು ಬೊಟ್ಟು ಮಾಡಿ ತೋರುತ್ತಾರೆ. ಆದರೆ ಅದೇ ವೇಳೆ ಇಂದು ಚೀನಾದ ಉಪಟಳಕ್ಕೆ, ಕಾಶ್ಮೀರದಲ್ಲಿ ಭಯೋತ್ಪಾದಕರ/ಪ್ರತ್ಯೇಕತಾವಾದಿಗಳ ಆಟಾಟೋಪಕ್ಕೆ ಬೀಜಾಂಕುರ ಮಾಡಿದವರು, ಶಾಶ್ವತ ತಳಪಾಯ ಹಾಕಿದವರು ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರು, ಅದಕ್ಕಾಗಿ ದೇಶ ಈಗಲೂ ಬೆಲೆ ತೆರಬೇಕಾಗಿ ಬಂದಿದೆ ಎಂಬುದನ್ನು ಏಕೆ ನೆನಪಿಸಿಕೊಳ್ಳುವುದಿಲ್ಲ?

ಚೀನಾದ ಕಣ್ಣುರಿಗೆ ಕಾರಣವೇನು?: ಮೂಲ ಕಾರಣ 1962ರಲ್ಲಿದ್ದ ಭಾರತ ಈಗಿಲ್ಲ ಎಂಬುದು. ಎರಡನೇ ಕಾರಣ ಭಾರತ ಜಗತ್ತಿನಾದ್ಯಂತ ತನ್ನ ಪ್ರಭಾವವನ್ನು ಸ್ವ ಸಾಮರ್ಥ್ಯದಿಂದ ವಿಸ್ತರಿಸಿಕೊಳ್ಳುತ್ತಿದೆ ಎಂಬುದು. ಮೂರನೆಯ ಕಾರಣ ತನ್ನ ಸಾಮ್ರಾಜ್ಯ ವಿಸ್ತರಣೆ ಧೋರಣೆಗೆ ಭಾರತವೇ ತೊಡಕು, ಭಾರತ ದಕ್ಷಿಣ ಏಷ್ಯಾ ಪ್ರಾಂತದಲ್ಲಿ ತನ್ನ ನಿಲುವಿಗೆ ಸೊಪ್ಪು ಹಾಕುತ್ತಿಲ್ಲ ಎಂಬುದು. ಹಾಗಾದರೆ ತಪ್ಪು ಭಾರತದ್ದಾ? ಸರ್ವತಂತ್ರ ಸ್ವತಂತ್ರ ದೇಶ ಭಾರತ ಬೇರೆಯವರು ಕಾಲು ಕೆರೆದು ಯುದ್ಧಕ್ಕೆ ಬರುತ್ತೇವೆಂದರೂ ದೈನೇಸಿತನದಿಂದ ಮುದುಡಿಕೊಂಡು ಕೂರಬೇಕಾ? ಯಾವುದೋ ಕಾಲದ ಭ್ರಮೆಯಲ್ಲಿದ್ದ ಚೀನಾಕ್ಕೆ ನವಭಾರತದ ಅರಿವಾಗಿದೆ ಎಂದುಕೊಳ್ಳೋಣ.

ಚೀನಾದ ಹಿಂದಡಿಗೆ ಕಾರಣ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಹಿಡಿದು ಅರುಣಾಚಲದ ತವಾಂಗ್, ಡೋಕ್ಲಂವರೆಗೆ ಚೀನದ ಆಕ್ರಮಣಕಾರಿ ನೀತಿಗೆ ಪಾಕಿಸ್ತಾನ ಹೊರತುಪಡಿಸಿ ಜಗತ್ತಿನ ಬೇರಾವ ದೇಶದ ಬೆಂಬಲವೂ ಸಿಗಲಿಲ್ಲ. ಅಮೆರಿಕ, ರಷ್ಯದಂತಹ ದೇಶಗಳೂ ಚೀನಕ್ಕೆ ಎಚ್ಚರಿಕೆ ನೀಡಿದವು. ಚೀನಾ ಮತ್ತು ಪಾಕಿಸ್ತಾನ ಸೇರಿಕೊಂಡು ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಹೇಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡುತ್ತಿವೆ ಎಂಬುದನ್ನು ಪ್ರಪಂಚದ ಎಲ್ಲ ವೇದಿಕೆಗಳಲ್ಲಿ ಭಾರತ ವ್ಯವಸ್ಥಿತವಾಗಿ ಮನವರಿಕೆ ಮಾಡಿಕೊಟ್ಟಿತು. ಹೀಗಾಗಿ ಯುದ್ಧೋನ್ಮಾದದಲ್ಲಿದ್ದ ಚೀನಾದ ಸಾಮ್ರಾಜ್ಯ ವಿಸ್ತರಣೆ ಮಾಡುವ ಹವಣಿಕೆಗೆ ತಡೆ ಬಿತ್ತು.

ಚೀನದ ಆರ್ಥಿಕತೆಯೂ ಕಾರಣ: ಭಾರತದ ಮೇಲೆ ಒತ್ತಡ ಹೇರಿ ಬಗ್ಗಿಸಲು ಹೊರಟ ಚೀನಾ ಆಡಳಿತಗಾರರಿಗೆ ಆ ದೇಶದಲ್ಲೇ ಹಲವು ಒತ್ತಡಗಳು ಕಾಡತೊಡಗಿದವು. ಚೀನದ ಒಟ್ಟಾರೆ ಆರ್ಥಿಕತೆ ನಿರೀಕ್ಷಿತ ಬೆಳವಣಿಗೆ ಕಾಣಲಿಲ್ಲ. ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಬೆಳವಣಿಗೆ ಆಶಾದಾಯಕ ಆಗಿರಲಿಲ್ಲ. ಸಾಲದ ಹೊರೆ ಜಿಡಿಪಿಯ ಶೇ.300 ಗಡಿ ದಾಟಿತು. ಜಗತ್ತಿನಾದ್ಯಂತ ಸಾಮ್ರಾಜ್ಯ ವಿಸ್ತರಣೆಗೆ ಹಪಹಪಿಸಿದ ಚೀನಾ ಅಫ್ಘಾನಿಸ್ತಾನದಿಂದ ಆಫ್ರಿಕಾದವರೆಗೆ ನೀಡಿದ್ದ ಸಾಲದ ಮೊತ್ತ ದುಬಾರಿ ಹೊರೆ ಆಗತೊಡಗಿದೆ. ಶೇ.16ರ ಬಡ್ಡಿ ದರದಲ್ಲಿ ನೀಡಿದ್ದ ಸಾಲದ ಅಸಲೂ ಹಿಂದಿರುಗುವ ಭರವಸೆ ಇಲ್ಲ.

ಮುಂದಿನ ವರ್ಷ ಚೀನಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿರುವುದರಿಂದ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ಸಮಸ್ಯೆ ಕಾಡುವುದು ಆ ದೇಶದ ಚುಕ್ಕಾಣಿ ಹಿಡಿದಿರುವರಿಗೆ ಬೇಕಿರಲಿಲ್ಲ. ಭಾರತದ ಮೇಕ್ ಇನ್ ಇಂಡಿಯಾದಂತಹ ಕಾರ್ಯಕ್ರಮಗಳು ಚೀನಾದ ಉತ್ಪಾದಕತೆಗೆ ಅಗತ್ಯವಿರುವ ಕಚ್ಚಾವಸ್ತು ಪೂರೈಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರತೊಡಗಿತ್ತು. ಈ ಎಲ್ಲ ಕಾರಣಗಳಿಗೆ ಭಾರತದೊಂದಿಗೆ ಸದ್ಯ ಹೊಂದಾಣಿಕೆ ಮಾಡಿಕೊಂಡು ಹೋಗುವುದೇ ಸೂಕ್ತ ಎಂಬ ತೀರ್ವನಕ್ಕೆ ಚೀನಾ ಬಂದಿರಲು ಸಾಕು ಎಂಬುದು ತಜ್ಞರ ಅಭಿಪ್ರಾಯ. ಮುಖ್ಯವಾಗಿ ಇದೇ ಮೊದಲ ಬಾರಿಗೆ ಬದಲಾಗುತ್ತಿರುವ ಭಾರತ ಸ್ಪಷ್ಟ ಚಿತ್ರಣ ಚೀನಾಕ್ಕೆ ಸಿಕ್ಕಿತು. ಒಟ್ಟಾರೆ ಹೇಳುವುದಾದರೆ ಯುದ್ಧದ ಬೆದರಿಕೆಯ ಮೂಲಕ ಮಣಿಸಲು ಹೊರಟ ಚೀನಾಕ್ಕೆ ಚತುರ ಸೇನಾನಡೆ, ರಾಜತಾಂತ್ರಿಕ, ಆರ್ಥಿಕ ಮತ್ತು ಔದ್ಯಮಿಕ ಮಾರ್ಗಗಳ ಮೂಲಕ ಚೀನಾವನ್ನು ಕಟ್ಟಿ ಹಾಕುವಲ್ಲಿ ಭಾರತ ಸಫಲವಾಯಿತು. ಇದು, ಮುಂದೆಯೂ ಚೀನಾ ಮತ್ತು ಪಾಕಿಸ್ತಾನಗಳನ್ನು ಸರಿದಾರಿಗೆ ತರಲು ಇರುವ ಮಾರ್ಗವೂ ಹೌದು ಎಂದರೆ ಅತಿಶಯೋಕ್ತಿಯಲ್ಲ.

(ಲೇಖಕರು ವಿಜಯವಾಣಿ – ದಿಗ್ವಿಜಯ ನ್ಯೂಸ್ ಪ್ರಧಾನ ಸಂಪಾದಕರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top