ವೈರಸ್‌ ತಡೆಯುವಲ್ಲಿ ತಂತ್ರಜ್ಞಾನ ಶಕ್ತ ರಾಷ್ಟ್ರಗಳಿಗಿಂತಲೂ ನಾವೇ ಬಲಿಷ್ಠ

– ಸುಧೀಂದ್ರ ಹಾಲ್ದೊಡ್ಡೇರಿ

ವೈರಸ್‌ಗಳಿಗೆ ಯಾವುದೇ ಜಾತಿ, ಮತ, ಪಂಥ, ದೇಶ, ಭಾಷೆಗಳ ಹಂಗಿರುವುದಿಲ್ಲ. ಅಂತೆಯೇ ಬಡವ, ಧನಿಕನೆಂಬ ಭೇದ-ಭಾವವೂ ಇಲ್ಲ. ತಾವು ಹೊಕ್ಕ ಜೀವಿ ಗಂಡೋ ಹೆಣ್ಣೋ ಎಂದು ಗುರುತಿಸುವ ಶಕ್ತಿ ಇಲ್ಲ. ಹಾಗಿದ್ದ ಮೇಲೆ ನಮ್ಮ ದೇಶಕ್ಕಿಂತಲೂ ಹೆಚ್ಚಿನ ಸುಶಿಕ್ಷಿತ ಮಂದಿ ಇರುವ, ನಮಗಿಂತಲೂ (ಬಹುಶಃ) ಪೌಷ್ಟಿಕ ಆಹಾರ ಸೇವಿಸುವ, ಒಳ್ಳೆಯ ಆರೋಗ್ಯ ವ್ಯವಸ್ಥೆ ಇರುವ ದೇಶಗಳೇಕೆ ಕೊರೋನಾ ವೈರಸ್‌ಗಳ ಹೊಡೆತಕ್ಕೆ ನಮಗಿಂತಲೂ ಹೆಚ್ಚು ನಲುಗುತ್ತಿವೆ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುವುದು ಸಹಜ.

ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸೋಂಕಿತರ ಸಂಖ್ಯೆ ತೀರಾ ಕಡಿಮೆ. ಆಯಾ ದೇಶಗಳ ಒಟ್ಟಾರೆ ಜನಸಂಖ್ಯೆಯೊಂದಿಗೆ ತುಲನೆ ಮಾಡಲು ಹೊರಟರೆ ಭಾರತದಲ್ಲಿ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಅತ್ಯಲ್ಪ. ಇಟಲಿ ಹಾಗೂ ಸ್ಪೇನ್‌ ದೇಶಗಳು ಅಷ್ಟು ಶ್ರೀಮಂತ ದೇಶಗಳಲ್ಲದಿದ್ದರೂ, ಅಮೆರಿಕ, ಜರ್ಮನಿ, ಫ್ರಾನ್ಸ್‌ ಹಾಗೂ ಸ್ವಿಜರ್ಲೆಂಡ್‌ಗಳು ಸಾಕಷ್ಟು ಶ್ರೀಮಂತವಾಗಿವೆ. ಈ ಎಲ್ಲ ದೇಶಗಳೂ ಅನೇಕ ಮುಂಚೂಣಿ ಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಿಗೆ ತವರುಮನೆ. ನೂತನ ವಿಜ್ಞಾನ ಆಷ್ಕಾರಗಳಿಗೆಂದು ಪಡೆದ ಪೇಟೆಂಟ್‌ ಹಾಗೂ ನೊಬೆಲ್‌ ಪುರಸ್ಕಾರಗಳ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿವೆ.

ಈ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ನನ್ನ ಹಾಗೂ ನನ್ನ ಮಕ್ಕಳ ಮಿತ್ರರು, ಸಹಪಾಠಿಗಳು-ಸಹೋದ್ಯೋಗಿಗಳು ಹಾಗೂ ನಮ್ಮ ಬಂಧುಗಳನ್ನು ವಿಡಿಯೋ ಕಾಲ್‌ ಮೂಲಕ ಮಾತನಾಡಿಸಿದಾಗ ಅನೇಕ ಅಚ್ಚರಿಯ ಅಂಶಗಳು ಗೋಚರವಾದವು. ಇಬ್ಬರಿಗಿಂತ ಹೆಚ್ಚಾಗಿ ಜನ ಸೇರಬಾರದೆಂಬ ಆಜ್ಞೆಯಿದ್ದರೂ ಜರ್ಮನಿಯಲ್ಲಿ ಜನ ಗುಂಪಾಗಿ ಸೇರುವ ಪರಿಪಾಠವನ್ನು ತೀರಾ ಇತ್ತೀಚಿನವರೆಗೆ ನಿಲ್ಲಿಸಿರಲಿಲ್ಲ. ವಾರಾಂತ್ಯದ ಪಾರ್ಟಿಗೆ ಅಂತ್ಯ ಹಾಡಿರಲಿಲ್ಲ. ಚಳಿಗಾಲ ಕಳೆದು ವಸಂತದ ಎಳೆಬಿಸಿಲಿಗೆ ಮೈಯ್ಯೊಡ್ಡುವ ಸಂಭ್ರಮಕ್ಕೆ ತಡೆ ಹಾಕಿಕೊಂಡಿರಲಿಲ್ಲ. ಅಮೆರಿಕದಲ್ಲಿನ ನನ್ನ ಮಿತ್ರರ ಮಾತನ್ನೇ ಉದ್ಧರಿಸುವುದಾದರೆ ಜಿಗಿಜಿಗಿ ಜನಸಂದಣಿಯ ನ್ಯೂಯಾರ್ಕ್ ನಗರದಲ್ಲಿ ಜನರು ಇನ್ನೂ ಮೆಟ್ರೊ ರೈಲನ್ನು ಬಳಸುತ್ತಿದ್ದಾರೆ. ಮತ್ತೊಂದು ತೀರದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಬಹುಬೇಗನೆ ಕಟ್ಟಳೆಗಳನ್ನು ವಿಧಿಸಲಾಯಿತು. ಅಲ್ಲಿನ ಲಾಸ್‌ ಏಂಜಲ್ಸ್‌ ನಗರದ ಬಡಾವಣೆಗಳಲ್ಲಿಯೂ ಸಹಾ ನ್ಯೂಯಾರ್ಕ್‌ನಂತೆ ಹೆಚ್ಚಿನ ಜನಸಾಂದ್ರತೆಯಿದೆ. ಆದರೆ, ಅಲ್ಲಿನ ಜನ ಮೆಟ್ರೊ ರೈಲನ್ನು ಬಳಸುತ್ತಿಲ್ಲ. ಬಿಸಿಲಿಗೆ ಹಾತೊರೆಯುತ್ತಿದ್ದ ಅಲ್ಲಿನ ಜನರು ಸರಕಾರಗಳು ಕೊಟ್ಟ ಮುನ್ನೆಚ್ಚರಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆಯೇ ಅವುಗಳನ್ನು ಪರಿಪಾಲಿಸಲು ತಡ ಮಾಡಿದರು. ಈ ನಿಟ್ಟಿನಲ್ಲಿಅಮೆರಿಕದ ರಾಜಕಾರಣವೂ ತನ್ನ ಒಂದಷ್ಟು ಕೊಡುಗೆಗಳನ್ನು ನೀಡಿತು. ರಾಷ್ಟ್ರದ ಅಧ್ಯಕ್ಷರ ಚಿಂತನೆಯೊಂದಾದರೆ, ಅಲ್ಲಿನ ರಾಜ್ಯಗಳ ಗವರ್ನರ್‌ಗಳ ಆಲೋಚನೆ ಮತ್ತೊಂದು, ಇನ್ನು ಕೆಲ ರಾಜ್ಯಗಳ ಮಹಾನಗರಗಳ ಮೇಯರ್‌ಗಳ ದೃಷ್ಟಿಕೋನ ಇವೆರಡರಲ್ಲಿ ಒಂದು ಅಥವಾ ಪೂರ್ಣ ಭಿನ್ನ. ಇಡೀ ದೇಶಕ್ಕೆ ಒಂದು ಕಾನೂನು, ಒಂದು ಕಟ್ಟಲೆಯನ್ನು ಹೇರಲಾಗದ ಪರಿಸ್ಥಿತಿಯಲ್ಲಿ ಯಾವುದೇ ಪೂರ್ವ ತಯಾರಿಗೆ ಅವಕಾಶ ಕೊಡದೆಯೇ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡಿತು. ಮನುಷ್ಯ-ಮನುಷ್ಯರ ನಡುವೆ ಈ ವೈರಸ್‌ ಹರಡುವುದಿಲ್ಲವೆಂಬ ಚೀನಾದ ಮೊದಲ ಹೇಳಿಕೆಯನ್ನು, ವಿಶ್ವ ಆರೋಗ್ಯ ಸಂಸ್ಥೆಯೂ ದೃಢೀಕರಿಸಿದ ಕಾರಣ, ಚೀನಾ-ಅಮೆರಿಕ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿಮಾನ ಪ್ರಯಾಣ ಮಾಡಿದರು. ವಿಮಾನ ಪಯಣಿಗರನ್ನು ತಪಾಸಣೆ ಮಾಡುವ ಯೋಚನೆಯೇ ಅಮೆರಿಕಕ್ಕೆ ಬರಲಿಲ್ಲ. ಈ ಮಾತು ಇಟಲಿ, ಸ್ಪೇನ್‌ ಹಾಗೂ ಫ್ರಾನ್ಸ್‌ಗೂ ಅನ್ವಯ.

ಸ್ವಿಜರ್ಲೆಂಡ್‌ನಲ್ಲಿ ಸೋಂಕಿತರ ಒಟ್ಟಾರೆ ಸಂಖ್ಯೆ ಜಾಗತಿಕ ಮಟ್ಟದಲ್ಲಿ ಗಮನಾರ್ಹವಲ್ಲದಿದ್ದರೂ, ಅಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ಅದು ಹೆಚ್ಚು. ಬರ್ನ್‌ ನಗರದ ಮಿತ್ರರೊಬ್ಬರು ಹೇಳುವಂತೆ, ಈಸ್ಟರ್‌ ಹಬ್ಬದ ಸಂಭ್ರಮದಲ್ಲೇ ಇರುವ ಇಲ್ಲಿನ ಜನರಿಗೆ ಗೃಹಬಂದಿ ಕಟ್ಟಳೆಗಳನ್ನು ಪಾಲಿಸುವುದು ಕಷ್ಟಕರ. ಕಳೆದ ತಿಂಗಳು ಚಳಿ ವಿಪರೀತವಾಗಿದ್ದ ಕಾರಣ, ಈಗ ಬಿಸಿಲಿಗೆ ಮೈಯೊಡ್ಡಲು ಹಾತೊರೆಯುವವರು ಹೆಚ್ಚು. ಎಲ್ಲಕ್ಕೂ ಮಿಗಿಲಾಗಿ ಸೋಂಕು ತರುತ್ತಿರುವ ಹೊಸ ಶಿಸ್ತು ಅವರ ಸ್ವಾತಂತ್ರ್ಯವನ್ನು ಕಸಿಯುತ್ತಿದೆಯೆಂಬ ಆತಂಕ. ಅಂತೆಯೇ ಕೆಲವೆಡೆ ರೈಲುಗಳು ಇನ್ನೂ ಓಡುತ್ತಿವೆ, ಜನರು ಸಾರ್ವಜನಿಕ ಸಾರಿಗೆಗಳನ್ನು ಇನ್ನೂ ಬಳಸುತ್ತಿದ್ದಾರೆ. ಇದೇ ಮಾತನ್ನು ಅನುಮೋದಿಸುವವರು ಬೆಲ್ಜಿಯಂ, ಸ್ಪೇಯ್‌್ನ ಹಾಗೂ ಇಟಲಿಯಲ್ಲಿ ನೆಲೆಸಿರುವ ನನ್ನ ಇತರ ಮಿತ್ರರು. ಲಂಡನ್‌ ಸುೕಪದಲ್ಲಿರುವ ನನ್ನ ಮತ್ತೊಬ್ಬ ಮಿತ್ರರ ಪ್ರಕಾರ ಬ್ರಿಟನ್ನಿನಲ್ಲಿಯೂ ಜನರು ವೈರಸ್‌ ಸೋಂಕನ್ನು ತೀರಾ ಲಘುವಾಗಿ ತೆಗೆದುಕೊಂಡರು. ಮಾನ ಪಯಣಗಳಿಗೆ, ವಿಶೇಷವಾಗಿ ಚೀನಾದಿಂದ ಹೋಗಿ ಬರುವ ಯಾತ್ರೆಗಳಿಗೆ ಅಲ್ಲಿ ಯಾವ ಅಡೆತಡೆಯೇ ಇರಲಿಲ್ಲ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರ ಕುರಿತು, ಯುರೋಪ್‌ ದೇಶಗಳಲ್ಲಿ ಕಟ್ಟಳೆಗಳನ್ನು ಹೇರುವುದು ಅಷ್ಟು ಸುಲಭವಲ್ಲ. ಭಾರತದಂತೆ ಪೊಲೀಸರಿಂದ ಜನ ಚದುರಿಸುವುದು, ಲಾಠಿ ಪ್ರಹಾರ ಇತ್ಯಾದಿ ಮಾಡಲಾಗದು. ನಾರ್ವೆ ಹಾಗೂ ಸ್ವೀಡನ್‌ಗಳಲ್ಲಿ ಸೋಂಕು ಅಷ್ಟಾಗಿ ಪ್ರಸರಿಸಿಲ್ಲ, ನನ್ನ ಕೆಲ ಮಿತ್ರರ ಪ್ರಕಾರ- ಅಲ್ಲಿಬ್ಯುಸಿನೆಸ್‌ (ಹಾಗೂ ಸಾಮಾಜಿಕ ಚಟುವಟಿಕೆಗಳು) ಎಂದಿನಂತೆ ನಡೆದಿದೆ.

ಹಾಂಗ್‌ಕಾಂಗ್‌ನಲ್ಲಿರುವ ನನ್ನ ಜಗತ್ಪ್ರವಾಸಿ ಮಿತ್ರರ ಪ್ರಕಾರ, ದಕ್ಷಿಣ ಕೊರಿಯ ಹಾಗೂ ಹಾಂಗ್‌ಕಾಂಗ್‌ ದೇಶಗಳು ಚೀನಾ ದೇಶಕ್ಕೆ ತೀರಾ ಸಮೀಪದ್ದು, ಓಡಾಟಗಳು ಹೆಚ್ಚಿಗಿದ್ದರೂ, ಅತಿ ಶೀಘ್ರದಲ್ಲಿ ಸಾಮಾಜಿಕ ಅಂತರಗಳನ್ನು ಕಾಪಾಡಿಕೊಳ್ಳುವ ಕಟ್ಟಳೆ ಹೇರಿದ್ದು ಆ ದೇಶಗಳಿಗೆ ಅನುಕೂಲವಾಯಿತು. ಇಂದಿಗೂ ಅಲ್ಲಿನ ಮೆಟ್ರೊ ರೈಲುಗಳೂ ಓಡಾಡುತ್ತಿವೆ, ರೆಸ್ಟೊರಾಗಳು ತೆರೆದಿವೆ. ಸೋಂಕಿನ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವ ಕಾರಣ, ಪ್ರಸರಣೆ ಎಲ್ಲಾಗುತ್ತಿದೆಯೆಂಬುದು ಪತ್ತೆಯಾಗುತ್ತಿದೆ. ನಿಯಂತ್ರಣಕ್ಕೆ ಬಂದಿದೆ.

ಇವೆಲ್ಲದರ ಹಿನ್ನೆಲೆಯಲ್ಲಿ ಭಾರತದ ಪರಿಸ್ಥಿತಿಯನ್ನು ಅವಲೋಕಿಸುವುದಾದರೆ, ನಮ್ಮಲ್ಲಿ ಹೆಚ್ಚಿನ ಸಂಖ್ಯೆಯ ಯುವಜನರಿರುವುದು ವೈರಸ್‌ ಪ್ರಸರಣೆಯನ್ನು ತಡೆಗಟ್ಟುವಲ್ಲಿಅನುಕೂಲಕರವಾಗಿದೆ(ಇಟಲಿ, ಸ್ಪೇನ್‌ ಹಾಗೂ ಅಮೆರಿಕದಲ್ಲಿ ಸೋಂಕಿಗೆ ಬಲಿಯಾದವರಲ್ಲಿ ವಯೋವೃದ್ಧರ ಸಂಖ್ಯೆ ಹೆಚ್ಚು). ನಮ್ಮ ಜನರಲ್ಲಿಈ ಬಗೆಯ ಫ್ಲೂವನ್ನು ಎದುರಿಸಬಲ್ಲಂಥ ರೋಗನಿರೋಧಕ ಶಕ್ತಿ ಹೆಚ್ಚಿರಬಹುದು. ಹಾಗೆಯೇ ಕ್ಷಯರೋಗ ತಡೆಗಟ್ಟುವ ಬಿ.ಸಿ.ಜಿ ಲಸಿಕೆಯನ್ನು ನಮ್ಮ ದೇಶದಲ್ಲಿ ಬಹುತೇಕ ಜನರಿಗೆ ಬಾಲ್ಯದಲ್ಲಿಯೇ ಕಡ್ಡಾಯವಾಗಿ ಹಾಕಿರಲಾಗುತ್ತದೆ. ಇದೂ ಸಹ ಕೊರೋನಾ ಪ್ರಸರಣೆಯನ್ನು ತಡೆಗಟ್ಟಿರಬಹುದು. ಚೀನಾ ಹಾಗೂ ಭಾರತ ದೇಶಗಳ ನಡುವೆ ವ್ಯಾವಹಾರಿಕ ಸಂಬಂಧ ಉತ್ತಮವಾಗಿದ್ದರೂ, ಅಮೆರಿಕ ಹಾಗೂ ಯೂರೋಪ್‌ಗಳಂತೆ ಪಯಣಿಗರ ಸಂಖ್ಯೆ ಹೆಚ್ಚಿಲ್ಲ. ವೈರಸ್‌ ಪ್ರಸರಣೆಯಾಗುತ್ತಿರುವ ಸುದ್ದಿ ತಿಳಿದಂತೆ ಕೊಲ್ಲಿ, ಯೂರೋಪ್‌ ಹಾಗೂ ಅಮೆರಿಕ ದೇಶಗಳಿಂದ ಬರುವ ಮಾನ ಪಯಣಿಗರನ್ನು ತೀವ್ರ ತಪಾಸಣೆಗೆ ಒಳಪಡಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತು. ಹಾಗೆಯೇ ಸಾಮಾಜಿಕ ಅಂತರ ಪಾಲಿಸುವುದರ ಬಗೆಗಿನ ಆದೇಶ, ಲಾಕ್‌ಡೌನ್‌ ಘೋಷಣೆ, ಔಷಧಗಳ ಹಾಗೂ ತಪಾಸಣಾ ಸಲಕರಣೆಗಳ ತಯಾರಿಕೆಗೆ ಆದ್ಯತೆ, ತುರ್ತು ಐಸೋಲೇಶನ್‌ ವಾರ್ಡ್‌ಗಳ ನಿರ್ಮಾಣಗಳ ಕಡೆಗೆ ಗಮನ ಹರಿಸಿತು. ಎಲ್ಲಕ್ಕೂ ಮಿಗಿಲಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ಎಲ್ಲ ಪರೀಕ್ಷೆಗಳನ್ನೂ ಮುಂದೂಡಿತು. ಈ ಎಲ್ಲ ಕಾರಣಗಳಿಂದ ಆರಂಭಿಕವಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗಲಿಲ್ಲ, ಈಗಲೂ ಜಾಗತಿಕ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ವೈರಸ್‌ ಪ್ರಸರಣೆ ನಿಯಂತ್ರಣದಲ್ಲಿದೆ.

ಕೊರೋನಾ ಪೀಡಿತರಿಗೆ ಶುಶ್ರೂಷೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರ ಸುರಕ್ಷೆಗೆ ಅತ್ಯಗತ್ಯವಾದ ಪ್ರತಿರೋಧಕ ಔಷಧ ‘ಹೈಡ್ರಾಕ್ಸಿಕ್ಲೋರೋಕ್ವಿನ್‌’ ಉತ್ಪಾದನೆಯಲ್ಲಿ ಭಾರತ ಮುಂದಿದೆ. ಮಲೇರಿಯಾವನ್ನು ಗುಣಪಡಿಸಬಲ್ಲಈ ಮದ್ದನ್ನು ಬಹುತೇಕ ದೇಶಗಳಲ್ಲಿ ಸೂಕ್ತ ಸಹ-ಔಷಧಗಳೊಂದಿಗೆ ಕೊರೋನಾ ಪೀಡಿತರ ಚಿಕಿತ್ಸೆಗೆ ಬಳಸಲಾಗುತ್ತಿದೆ. ರಕ್ಷಣಾ ಸಂಶೋಧನಾಲಯಗಳೂ ಸೇರಿದಂತೆ ಅನೇಕ ರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳು ಸೋಂಕು ಪೀಡಿತರಿಗೆ ಅಗತ್ಯವಾದ ‘ವೆಂಟಿಲೇಟರ್‌ ಯಂತ್ರ’ ನಿರ್ಮಾಣದಲ್ಲಿ ತೊಡಗಿಕೊಂಡಿವೆ. ಇದೀಗ ಕಾರು ಕಂಪನಿ ‘ಮಾರುತಿ ಉದ್ಯೋಗ್‌’, ಎಲೆಕ್ಟ್ರಾನಿಕ್‌ ಉಪಕರಣಗಳ ಉತ್ಪಾದನಾ ಕಂಪನಿ ‘ಬಿ.ಇ.ಎಲ್‌.’ ಹಾಗೂ ಜಗನ್ಮಾನ್ಯ ವಿದ್ಯಾಸಂಸ್ಥೆ ‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌’ಗಳು ಸಹಾ ವೆಂಟಿಲೇಟರ್‌ಗಳ ಉತ್ಪಾದನೆಯಲ್ಲಿತೊಡಗಿಕೊಂಡಿವೆ.

ಸೋಂಕಿತರಲ್ಲಿ ಮರಣಕ್ಕೀಡಾದವರ ಶೇಕಡಾವಾರು ಅನುಪಾತದ ಅಂಕೆ-ಸಂಖ್ಯೆ ತೆಗೆದುಕೊಂಡರೆ ಇಟಲಿಯಲ್ಲಿ ಅದು 12.72%, ಬ್ರಿಟನ್ನಿನಲ್ಲಿ12%, ಸ್ಪೇನ್‌ನಲ್ಲಿ 9.73%, ಅಮೆರಿಕದಲ್ಲಿ 3.4%, ಜಾಗತಿಕವಾಗಿ ಸರಾಸರಿ 5.98% ಆಗಿದ್ದರೆ ಭಾರತದಲ್ಲಿಅದು ಕೇವಲ 3.1%. ಹಾಗೆಂದ ಮಾತ್ರಕ್ಕೆ ನಾವು ನಿರಾಳರಾಗಿ ಕುಳಿತುಕೊಳ್ಳಲಾಗುವುದಿಲ್ಲ. ಉಪಕರಣಗಳ ಕೊರತೆಯಿಂದಾಗಿ ನಮ್ಮಲ್ಲಿ ಸೋಂಕಿನ ಲಕ್ಷಣ ತೋರಿಸದ ಜನರನ್ನು ಯಾವುದೇ ಪರೀಕ್ಷೆಗಳಿಗೆ ಒಳಪಡಿಸುತ್ತಿಲ್ಲ. ಆರೋಗ್ಯ ಇಲಾಖೆಯ ಗಮನಕ್ಕೆ ಬರದಂತೆಯೇ ಸೋಂಕು ಪ್ರಸರಿಸುತ್ತಿರುವ ಸಾಧ್ಯತೆ ಅಲ್ಲ ಗಳೆಯಲಾಗದು. ಪರೀಕ್ಷೆಗೆ ಒಡ್ಡಿಕೊಳ್ಳುವ ಅವಕಾಶ ಲಭ್ಯವಾಗುವ ತನಕ ಸದ್ಯಕ್ಕೆ ನಮಗಿರುವ ದಾರಿಗಳು: ಓಡಾಟ ಕಡಿಮೆ, ಸಾಮಾಜಿಕ ಅಂತರ, ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top