ಚೀನಾದ ಜೊತೆ ಮಾತುಕತೆ ಭಾರತ ಸ್ನೇಹಕ್ಕೆ ಬದ್ಧ, ಸಮರಕ್ಕೂ ಸಿದ್ಧ

ಚೀನಾದ ಜೊತೆಗೆ ಲಡಾಕ್‌ ಗಡಿಭಾಗದಲ್ಲಿ ತಲೆದೋರಿದ ಬಿಕ್ಕಟ್ಟನ್ನು ದ್ವಿಪಕ್ಷೀಯ ಮಾತಕತೆ ಮೂಲಕ ಶಾಂತಿಯುತ ರೀತಿಯಲ್ಲಿ ಇತ್ಯರ್ಥಪಡಿಸಿಕೊಳ್ಳಲು ಉಭಯ ದೇಶಗಳ ಮಿಲಿಟರಿ ಮಟ್ಟದ ಸಂಧಾನ ಸಭೆ ತೀರ್ಮಾನಿಸಿದೆ. ಒಂದು ತಿಂಗಳಿಂದ ಎರಡು ರಾಷ್ಟ್ರಗಳ ನಡುವೆ ಉದ್ಭವಿಸಿರುವ ಸಂಘರ್ಷ ಸ್ಥಿತಿ ಶಮನಕ್ಕಾಗಿ ಶನಿವಾರ ಎರಡೂ ದೇಶಗಳ ಉನ್ನತ ಸೇನಾಧಿಕಾರಿಗಳ ಸಭೆ ನಡೆದಿದ್ದು, ಅದರಲ್ಲಿ ಈ ನಿರ್ಧಾರವಾಗಿದೆ. ಇದೇ ವೇಳೆಗೆ ‘‘ಸಂಘರ್ಷದಿಂದ ಸಮಸ್ಯೆ ಇತ್ಯರ್ಥಗೊಳ್ಳುವುದಿಲ್ಲ. ಇದನ್ನು ಚೀನಾ ಅರ್ಥ ಮಾಡಿಕೊಳ್ಳಬೇಕು. ಅನಗತ್ಯ ಹಸ್ತಕ್ಷೇಪ ಹಾಗೂ ಶಕ್ತಿಪ್ರದರ್ಶನಕ್ಕೆ ಮುಂದಾದರೆ ನಾವು ಕೈಕಟ್ಟಿ ಕೂಡುವುದಿಲ್ಲ,’’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ‘ಸ್ನೇಹಕ್ಕೆ ಬದ್ಧ, ಸಮರಕ್ಕೂ ಸಿದ್ಧ’ ಎಂಬ ಈ ನೀತಿ ಚೀನಾದಂಥ ತಂಟೆಕೋರ ನೆರೆದೇಶಕ್ಕೆ ತಕ್ಕಂತೆಯೇ ಇದೆ.
ಚೀನಾ ಜೊತೆಗಿನ ನಮ್ಮ ಗಡಿ ತಕರಾರು ತುಂಬಾ ಹಳೆಯದು. ಚೀನಾದ ಸೈನಿಕರೇ ಕಾಲು ಕೆರೆದು ಜಗಳಕ್ಕೆ ಬಂದದ್ದೇ ಹೆಚ್ಚು. ಭಾರತ ಇದುವರೆಗೂ ಇಂಥ ಉದ್ವಿಗ್ನತೆಗೆ ಶಮನಕಾರಿ ಕ್ರಮಗಳನ್ನೇ ಕೈಗೊಳ್ಳುತ್ತ ಬಂದಿದೆ. 1914ರಲ್ಲಿ ಬ್ರಿಟಿಷ್‌ ಅಧಿಕಾರಿ, ಭಾರತದಲ್ಲಿ ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮೆಕ್‌ಮೋಹನ್‌ ಎಂಬಾತ ಭಾರತ ಮತ್ತು ಚೀನಾದ ಗಡಿಯನ್ನು ರೂಪಿಸಲು ರಚಿಸಿದ ರೇಖೆಯೇ ಇಂದಿಗೂ ವಾಸ್ತವಕ್ಕೆ ಸಮೀಪವಾದ ನಿಯಂತ್ರಣ ರೇಖೆಯೆನಿಸಿದೆ. ಭಾರತ ಈ ರೇಖೆಯನ್ನು ಒಪ್ಪಿದರೆ, ಚೀನಾ ಪೂರ್ತಿಯಾಗಿ ಒಪ್ಪಿಲ್ಲ. ಉಭಯ ದೇಶಗಳ ನಡುವಿನ ವಾಸ್ತವಿಕ ಗಡಿ ನಿಯಂತ್ರಣ ಮೆಕ್‌ಮೋಹನ್‌ ಲೈನ್‌ಗೆ ಸಮೀಪವಾಗಿದ್ದು, ವ್ಯತ್ಯಾಸವಿರುವ ಕಡೆಯಲ್ಲೆಲ್ಲ ತಕರಾರು ಭುಗಿಲೇಳುತ್ತಲೇ ಇರುತ್ತದೆ. 1962ರಲ್ಲಿ ನಡೆದ ಭಾರತ- ಚೀನಾ ಯುದ್ಧದ ವೇಳೆ ಚೀನಾದ ಸೈನಿಕರು ಸಿಯಾಚಿನ್‌, ಅಕ್ಸಾಯ್‌ ಚಿನ್‌ ಹಾಗೂ ಅರುಣಾಚಲ ಪ್ರದೇಶಗಳಲ್ಲಿ ಗಡಿಭಾಗವನ್ನು ಪೂರ್ತಿಯಾಗಿ ಅತಿಕ್ರಮಿಸಿದ್ದರು. ಸಂಧಾನದ ಫಲವಾಗಿ ಅರುಣಾಚಲ ನಮಗೆ ಉಳಿಯಿತಾದರೂ, ಅಕ್ಸಾಯ್‌ ಚಿನ್‌ ಉಳಿಸಿಕೊಳ್ಳಲಾಗಲಿಲ್ಲ. ಈಗ ಚೀನಾ ಕಿರುಕುಳ ನೀಡುತ್ತಿರುವ ಗ್ಯಾಲ್ವನ್‌ ಭಾಗದಲ್ಲಿಯೇ 33 ಭಾರತೀಯ ಯೋಧರನ್ನು ಅಂದು ಹತ್ಯೆಗೈದಿತ್ತು. 2017ರಲ್ಲಿ ಸಿಕ್ಕಿಂ-ಭೂತಾನ್‌ ಗಡಿಯಾದ ಡೋಕ್ಲಾಮ್‌ನಲ್ಲಿ ಇಂಥದ್ದೇ ತಗಾದೆ ತೆಗೆದಿತ್ತು ಚೀನಾ. ಅದು ಮಾತುಕತೆಯ ಮೂಲಕ ಬಗೆಹರಿದಿತ್ತು.
ಪ್ರಸ್ತುತ ಆರ್ಥಿಕ ಸನ್ನಿವೇಶ, ಕೊರೊನಾ ಇತ್ಯಾದಿ ಕಾರಣಗಳಿಂದ ಉಂಟಾಗಿರುವ ಜಾಗತಿಕ ಬಿಕ್ಕಟ್ಟಿನ ಸನ್ನಿವೇಶದಿಂದ ಚೀನಾದ ಈ ಆಕ್ರಮಣಕಾರಿ ವರ್ತನೆ ಹುಟ್ಟಿಕೊಂಡಿರಬಹುದು. ಅಂತಾರಾಷ್ಟ್ರೀಯ ವಲಯದಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವ ಚೀನಾದ ಕಣ್ಣನ್ನು ಕೆಂಪಾಗಿಸಿರಬಹುದು. ಚೀನಾದ ಈ ವರ್ತನೆಯನ್ನು ಯಾವ ದೇಶವೂ ಸಮರ್ಥಿಸಲಾರದು. ಅಮೆರಿಕದಂಥ ಬಲಿಷ್ಠ ರಾಷ್ಟ್ರಗಳ ನೆರವು ಭಾರತಕ್ಕಿದ್ದರೂ, ನಾವು ನಮ್ಮ ನೆರೆಯವರನ್ನು ಬದಲಿಸಲಾರೆವಾದ್ದರಿಂದ, ಉಭಯ ದೇಶಗಳ ದ್ವಿಪಕ್ಷೀಯ ಒಪ್ಪಂದಗಳ ಚೌಕಟ್ಟಿನಲ್ಲಿ ಎಲ್ಲ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಬೇಕಾದ್ದು ಅಗತ್ಯ. ಹಾಗೆಯೇ ಉಭಯ ದೇಶಗಳ ನಡುವಿನ ಗಡಿಯನ್ನು ಖಚಿತವಾಗಿ ಗುರುತಿಸಿ ಅಂತಿಮಗೊಳಿಸುವ ಉಪಕ್ರಮ ನಡೆಯದೆ ಹೋದರೆ, ಭವಿಷ್ಯದಲ್ಲಿ ಇಂಥ ಸಂಕಷ್ಟಗಳು ಮತ್ತೆ ಮತ್ತೆ ಎದುರಾಗುತ್ತ ಹೋಗಬಹುದು.
ಚೀನಾ ಎಷ್ಟೇ ತಂಟೆ ತೆಗೆದರೂ ನಾವು ಚೀನಾದ ಅಗ್ಗದ ವಸ್ತುಗಳನ್ನು ಬಳಸುತ್ತ ಬರುತ್ತಿರುವುದು ಒಂದು ವಿಪರ್ಯಾಸ. ಚೀನಾ ಭಾರತದ ಹಿತಕ್ಕೆ ಧಕ್ಕೆ ತರುವಂತೆ ವರ್ತಿಸಿದಾಗ ನಾವು ಎಚ್ಚೆತ್ತುಕೊಂಡು ‘ಚೀನಾದ ವಸ್ತುಗಳನ್ನು ಬಹಿಷ್ಕರಿಸೋಣ, ಚೀನಾದ ಆ್ಯಪ್‌ಗಳನ್ನು ತಿರಸ್ಕರಿಸೋಣ’ ಎನ್ನುತ್ತೇವೆ. ಆದರೆ ಅದು ಒಂದು ದೃಢಚಿತ್ತದ ನಿರಂತರ ಸೈದ್ಧಾಂತಿಕ ಕ್ರಿಯೆಯಾಗಿ, ಅಭಿಯಾನವಾಗಿ ಮುಂದುವರಿಯುವುದೇ ಇಲ್ಲ. ಇಂಥ ಬೃಹತ್‌ ಪ್ರಮಾಣದ ಅಭಿಯಾನಗಳು ನಡೆಯುವುದು ಅಂತಾರಾಷ್ಟ್ರೀಯ ವಲಯದಲ್ಲಿ ಆ ದೇಶದ ಮೇಲೆ ಒತ್ತಡ ಹೇರುವಷ್ಟೇ ಪರಿಣಾಮಕಾರಿ. ದೃಢತೆ ಸ್ವಭಿಮಾನಗಳು ನಮ್ಮ ಪ್ರತಿಯೊಂದು ನಡೆಯಲ್ಲಿ ಪ್ರತಿಫಲಿಸಿದಾಗ ಮಾತ್ರ ಚೀನಾ ಪಾಠ ಕಲಿಯಬಹುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top