ಬೇಡಿಕೆ ಹೆಚ್ಚಿಸುವುದೇ ಈಗ ಸರಕಾರದ ಮುಂದಿರುವ ಸವಾಲು. ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲವಾದರೆ ಎಲ್ಲ ಬಗೆಯ ಉದ್ಯಮಗಳೂ ಕುಸಿದುಬೀಳುತ್ತವೆ. ತಜ್ಞರ ಸಲಹೆಗಳು ಮತ್ತು ಸರಕಾರದ ಪ್ಯಾಕೇಜ್ ಕೂಡ ಈ ನಿಟ್ಟಿನಲ್ಲಿದೆ. ಬೇಡಿಕೆ ಸೃಷ್ಟಿ ಹೇಗೆ?
ಬೇಡಿಕೆ ಹೆಚ್ಚಳ ಅಗತ್ಯ. ಎಲ್ಲಬಗೆಯ ಮಾರುಕಟ್ಟೆಗಳೂ ಬೇಡಿಕೆಯ ಮೇಲೆ ನಿಂತಿವೆ. ಲಾಕ್‌ಡೌನ್ ಬಳಿಕ ಉತ್ಪಾದನೆ ನಡೆಸಲು ಎಲ್ಲ ಉದ್ಯಮಗಳೂ ಕಾತರವಾಗಿವೆ. ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರುವ ಕಂಪನಿಗಳು ದರಗಳಲ್ಲಿ ಕಡಿತ ಘೋಷಿಸಿವೆ. ಕೃಷಿ ಉತ್ಪನ್ನಗಳು, ಆಹಾರಧಾನ್ಯಗಳು ಸುಗ್ಗಿಯ ಬಳಿಕ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿವೆ. ಬೇಡಿಕೆ ಹೆಚ್ಚಿದ್ದಾಗ, ಪೂರೈಕೆ ಕಡಿಮೆ ಇದ್ದಾಗ ದರ ಏರುತ್ತದೆ. ಪೂರೈಕೆ ಹೆಚ್ಚಿದ್ದು ಬೇಡಿಕೆ ಕಡಿಮೆಯಿದ್ದಾಗ ದರ ಕುಸಿಯುತ್ತದೆ. ಸದ್ಯ ಮೆಡಿಕಲ್ ಸಾಮಗ್ರಿಗಳನ್ನು ಬಿಟ್ಟರೆ ಇನ್ಯಾವುದೇ ಉತ್ಪಾದನೆಗಳಿಗೂ ಮಾರುಕಟ್ಟೆಯಲ್ಲಿ ಸತತ ಬೇಡಿಕೆ ಇಲ್ಲ. ಔಷಧ ಕಂಪನಿಗಳ ಷೇರು ಬೆಲೆ ಸತತ ಎರಡು ತಿಂಗಳಿನಿಂದ ಮಾರುಕಟ್ಟೆಯಲ್ಲಿ ಏರುತ್ತಲೇ ಇದೆ. ಇತರ ಕಂಪನಿಗಳ ಷೇರು ಬೆಲೆ ಕುಸಿದಿದೆ ಅಥವಾ ಸ್ಥಿರವಾಗಿದೆ. ಬೇಡಿಕೆಯ ಕೊರತೆ ಕಂಡುಬಂದಿರುವುದರಿಂದ ಉತ್ಪಾದನೆಗೂ ಕಂಪನಿಗಳು ಹಿಂದೆಮುಂದೆ ನೋಡುತ್ತಿವೆ.
ಬೇಡಿಕೆ ಯಾಕಿಲ್ಲ?
ಎರಡು ತಿಂಗಳ ಸತತ ಲಾಕ್‌ಡೌನ್‌ನ ಪರಿಣಾಮ ಎಲ್ಲ ಬಗೆಯ ಉದ್ಯಮಗಳೂ ತಮ್ಮ ಕೆಲಸ ನಿಲ್ಲಿಸಿವೆ; ಹೆಚ್ಚಿನ ಕಂಪನಿಗಳು ತುಂಬಾ ಮಂದಿಯನ್ನು ಕೆಲಸದಿಂದ ತೆಗೆದಿವೆ. ಎಲ್ಲ ಉದ್ಯೋಗಿಗಳಿಗೆ ಶೇ.10ರಿಂದ ಶೇ.50ರಷ್ಟು ಸಂಬಳ ಕಡಿತ ಮಾಡಿವೆ. ಹೀಗಾಗಿ ಜನರ ಕೈಯಲ್ಲಿ ಕಾಸು ಓಡಾಡುತ್ತಿಲ್ಲ. ಮುಂದಿನ ಕಷ್ಟದ ದಿನಗಳಿಗಾಗಿ ಜನ ಕಾಸು ಶೇಖರಿಸಿಡಲು ಆರಂಭಿಸಿದ್ದಾರೆ. ಬ್ಯಾಂಕ್‌ಗಳಲ್ಲಿ ಡಿಪಾಸಿಟ್ ಮಾಡುವವರಿಗಿಂತ ಹಣ ತೆಗೆಯುವವರು ಹೆಚ್ಚಾಗಿದ್ದಾರೆ. ಚಿನ್ನದ ಬೆಲೆ ಏರಿಕೆಯಾಗಿದ್ದು, ಚಿನ್ನ ಖರೀದಿಸಿ ಇಡುವವರು ಹೆಚ್ಚಾಗಿದ್ದಾರೆ; ಆದರೆ ಅದೇ ಪ್ರಮಾಣದಲ್ಲಿ ಇತರ ಗ್ರಾಹಕ ಸಾಮಗ್ರಿಗಳ ಮೇಲೆ ವೆಚ್ಚ ಮಾಡುತ್ತಿಲ್ಲ. ಇದಕ್ಕೆ ಸೂಕ್ತ ಉದಾಹರಣೆ ಆಟೊಮೊಬೈಲ್ ಇಂಡಸ್ಟ್ರಿ. ಎರಡು ತಿಂಗಳ ಹಿಂದೆಯೇ ಜೀರೋ ಸೇಲ್ ದಾಖಲಿಸಿದ್ದ ಕೆಲವು ದೊಡ್ಡ ಆಟೋಮೊಬೈಲ್ ಕಂಪನಿಗಳಿಗೆ ಒಂದೇ ಒಂದು ಕಾರಿಗೆ ಕೂಡ ಡಿಮಾಂಡ್ ಕಂಡುಬಂದಿಲ್ಲ.
ಬಳಕೆ ಮತ್ತು ಹೂಡಿಕೆ
ನಮ್ಮ ದೇಶದ 60 ಶೇ. ಜಿಡಿಪಿ ಬರುವುದು ಖಾಸಗಿ ವೆಚ್ಚದಿಂದ. ಕೋವಿಡ್ ಬರುವುದಕ್ಕಿಂತಲೂ ಕೆಲವು ತಿಂಗಳಿಗೆ ಮೊದಲೇ ಆಂತರಿಕ ವೆಚ್ಚದಲ್ಲಿ ತುಂಬಾ ಬಳಲಿಕೆ ಕಂಡುಬಂದಿತ್ತು. ಅನುಭೋಗ ವ್ಯವಸ್ಥೆಯಲ್ಲೇ ಆದ ಕುಸಿತದ ಪರಿಣಾಮ ಕೋವಿಡ್-ಪೂರ್ವ ಆರ್ಥಿಕ ಕುಸಿತ ಉಂಟಾಗಿತ್ತು. ಕೊರೊನಾ ಆಗಮನ ಮಾರುಕಟ್ಟೆಯನ್ನು ಇನ್ನಷ್ಟು ಚಚ್ಚಿಹಾಕಿತು. ಇದು ಹೂಡಿಕೆಯನ್ನೂ ಅಪಾಯಕ್ಕೊಡ್ಡಿತು. ಯಾಕೆಂದರೆ ಬೇಡಿಕೆಯೇ ಇಲ್ಲದಲ್ಲಿ ಹೂಡಿಕೆ ಮಾಡಲು ಯಾರು ಮುಂದಾಗುತ್ತಾರೆ? ಕುಸಿದ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬೇಡಿಕೆ ಹುಟ್ಟಿಸುವ ಸಾಮರ್ಥ್ಯ ಇರುವ ಏಕೈಕ ಶಕ್ತಿ ಎಂದರೆ ಸರಕಾರ.
ಹಣಕಾಸು ನೆರವು ಹಂಚಿಕೆ ಹೀಗೆ
ನೇರ ನಗದು ವರ್ಗಾವಣೆ
2 ಲಕ್ಷ ಕೋಟಿ ರೂ.ಗಳ ನೇರ ನಗದು ವರ್ಗಾವಣೆ + ಅಸಂಘಟಿತ ವಲಯದ ಕಾರ್ಮಿಕರಿಗೆ 1.5 ಲಕ್ಷ ಕೋಟಿ ರೂ.ಗಳ ವೇತನ ಬೆಂಬಲ = 3.5 ಲಕ್ಷ ಕೋಟಿ ರೂ
ಮೂಲಸೌಲಭ್ಯ ಹೂಡಿಕೆ
ಬಜೆಟ್ ಪ್ರಕಾರ 4 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆ + ಹೊಸದಾಗಿ 50,000 ಕೋಟಿ ರೂ.ಗಳ ಆರೋಗ್ಯಸೇವೆ ಸೌಲಭ್ಯಗಳು = 4.5 ಲಕ್ಷ ಕೋಟಿ ರೂ.
ಕಾರ್ಪೊರೇಟ್ ಈಕ್ವಿಟಿ ಖರೀದಿ
ಬ್ಯಾಂಕೇತರ ಹಣಕಾಸು ಸಂಸ್ಥೆಗಳ, ಬ್ಯಾಂಕ್ ಆಸ್ತಿ ಖರೀದಿಗೆ 2 ಲಕ್ಷ ಕೋಟಿ ರೂ. + ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಲಭ್ಯ ನಿಧಿಯಿಂದ 2 ಲಕ್ಷ ಕೋಟಿ ರೂ.ಗಳ ಈಕ್ವಿಟಿ ಖರೀದಿ = 4 ಲಕ್ಷ ಕೋಟಿ ರೂ. ವಸತಿ ನೆರವು ಅರ್ಧಕ್ಕೆ ನಿಂತ ಪ್ರಾಜೆಕ್ಟ್‌ಗಳನ್ನು ಪೂರ್ತಿಗೊಳಿಸಲು 25,000 ಕೋಟಿ ರೂ.ಗಳ ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮ ನೆರವು.
ಕಾರ್ಪೊರೇಟ್ ಬಾಂಡ್ ಖರೀದಿ
ಬಾಂಡ್‌ಗಳನ್ನು ಸೃಷ್ಟಿಸುವ ವಿಶೇಷ ಉದ್ದೇಶ ಕಾರ್ಯಕ್ರಮ(ಎಸ್ಪಿವಿ)ಗಳನ್ನು ಸರಕಾರ ರೂಪಿಸಿದೆ. ಈ ಬಾಂಡ್‌ಗಳನ್ನು ಆರ್‌ಬಿಐ ಕೊಳ್ಳುತ್ತದೆ. ಈ ಹಣದಿಂದ ಕಾರ್ಪೊರೇಟ್ ಬಾಂಡ್‌ಗಳನ್ನು ಖರೀದಿಸಬೇಕು.
ಬೇಡಿಕೆ ಸೃಷ್ಟಿ ಹೇಗೆ?
ಆರ್ಥಿಕ ಶಿಸ್ತು ಮರೆತುಬಿಡಿ ಸದ್ಯಕ್ಕೆ ಆಯವ್ಯಯ, ಆದಾಯ ಮತ್ತು ವ್ಯಯದ ಲೆಕ್ಕಾಚಾರವನ್ನು ಮರೆತುಬಿಡುವುದು ಒಳ್ಳೆಯದು. ಅಂದರೆ ಆರ್ಥಿಕ ಶಿಸ್ತು ಈ ಕಷ್ಟದ ದಿನಗಳಲ್ಲಿ ನಡೆಯಲಾರದು. ಜಿಡಿಪಿಯ ಶೇ.9 ಅಥವಾ ಹತ್ತರಷ್ಟು ಹೆಚ್ಚುವರಿ ವ್ಯಯ ಮಾಡಲು ಸರಕಾರ ಸಿದ್ಧವಾಗಬೇಕು. ಇದಕ್ಕಾಗಿ ಸಾಲ ಮಾಡುವುದು ಅಗತ್ಯವಿದೆ.
ದೊಡ್ಡ ವೆಚ್ಚಗಳು
ದೊಡ್ಡ ವೆಚ್ಚಗಳತ್ತ ಗಮನ ಕೊಡಬೇಕು. ನೇರ ನಗದು ವರ್ಗಾವಣೆ, ವೇತನ ಬೆಂಬಲ, ಮೂಲಸೌಲಭ್ಯದಲ್ಲಿ ಹೆಚ್ಚುವರಿ ಹೂಡಿಕೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಹಾಗೂ ಬ್ಯಾಂಕ್ ಆಸ್ತಿಗಳ ಖರೀದಿ, ಕಾರ್ಪೊರೇಟ್ ಬಾಂಡ್‌ಗಳ ಖರೀದಿಗೆ ಸರಕಾರ ಮುಂದಾಗಬೇಕು.
ತೆರಿಗೆ ಕಡಿತ
ಜಿಎಸ್‌ಟಿ ವ್ಯವಸ್ಥೆಯಲ್ಲಿ ಒಂದು ಪಲ್ಲಟ ಆಗಬೇಕು. ಉದಾಹರಣೆಗೆ ಆಟೋಮೊಬೈಲ್ ವಲಯ ಬಿದ್ದಿದೆ. ಈ ವಲಯಕ್ಕೆ ಜಿಎಸ್‌ಟಿ ಯಲ್ಲಿ ದೊಡ್ಡ ಮಟ್ಟಿನ ವಿನಾಯಿತಿ ನೀಡುವುದರಿಂದ ಆ ವಲಯ ಸುಧಾರಿಸಿಕೊಳ್ಳಬಹುದು. ತೆರಿಗೆದಾರರಿಗೆ ಯಾವುದೇ ಬಗೆಯ ತೆರಿಗೆ ವಿನಾಯಿತಿ ನೀಡಿದರೂ ಅವರು ಅದನ್ನು ಸ್ವಾಗತಿಸಲಿದ್ದಾರೆ.
ಅಪಾಯಗಳು ಇವೆಯೇ?
– ಆರ್ಥಿಕ ಕುಸಿತ ಈಗ ಕಣ್ಣ ಮುಂದಿನ ಸತ್ಯ. ಪರಿಸ್ಥಿತಿ ತುಂಬಾ ಕೆಟ್ಟಿದೆ. ಮುಂದಿನ ಆತಂಕ ಸರ್ವನಾಶದ್ದು.
-ಈಗ ಜಿಡಿಪಿ ಮತ್ತು ಸಾಲದ ಅನುಪಾತ ಹೆಚ್ಚಿಗೆ ಇದೆ. ವೆಚ್ಚವನ್ನು ಹೆಚ್ಚಿಸಿದಾಗ ಬೆಳವಣಿಗೆ ದರ ಕಡಿಮೆಯಾಗಿ, ಭವಿಷ್ಯದಲ್ಲಿ ಜಿಡಿಪಿ/ಸಾಲ ಅನುಪಾತಗಳು ಹತ್ತಿರ ಬರಬಹುದು.
-ಜಿಡಿಪಿ/ಸಾಲದ ಅನುಪಾತ ಕಡಿಮೆಯಾಗುವುದರಿಂದ ಮಧ್ಯಮ ಹಾಗೂ ದೀರ್ಘಾವಧಿಯಲ್ಲಿ ಬ್ಯಾಂಕ್ ಸಾಲಗಳ ನಿರ್ವಹಣೆ ಕಷ್ಟಕರವಾಗಲಿದೆ.
ಎಸ್‌ಬಿಐ ಹೇಳಿದ್ದೇನು?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಟ್ಟಾರೆ ಆರ್ಥಿಕ ಸ್ಥಿತಿಗತಿಯ ಅಧ್ಯಯನ ನಡೆಸಿದ್ದು, ಅದರ ಫಲಿತಾಂಶಗಳು ಹೀಗಿವೆ:
– ದೇಶದ 2020ರ ಮೊದಲ ತ್ರೈಮಾಸಿಕದ ಜಿಡಿಪಿ ಶೇ.40ರಷ್ಟು ಕುಸಿಯಲಿದೆ.
– ಆರ್ಥಿಕ ವರ್ಷ 2021ರ ಎರಡನೇ ತ್ರೈಮಾಸಿಕದಲ್ಲಿ 6.8%ರಷ್ಟು ಇಳಿಯಲಿದೆ. ಮುಂದಿನ ತ್ರೈಮಾಸಿಕಗಳಲ್ಲಿ ಸ್ವಲ್ಪ ಏರಿಕೆ ಆಗಬಹುದು.
– ದೇಶವನ್ನು ದಡ ಮುಟ್ಟಿಸಲು ಇನ್ನೊಂದು ಬೃಹತ್ ಪ್ಯಾಕೇಜ್‌ನ ಅಗತ್ಯವಿದೆ.
– ಲಾಕ್‌ಡೌನ್‌ನಿಂದ ದೇಶಕ್ಕೆ ಆಗಿರುವ ನಷ್ಟ ಸುಮಾರು 30 ಲಕ್ಷ ಕೋಟಿ ರೂ.
– ರೆಡ್ ಮತ್ತು ಆರೆಂಜ್ ಜೋನ್‌ಗಳು ಈ ನಷ್ಟದ ಶೇ.90ಕ್ಕೆ ಕಾರಣ.
ಕಿರು ಉದ್ಯಮಗಳಿಗೆ ಸಾಲ
ಸರಕಾರ ಸಣ್ಣ ಹಾಗೂ ಕಿರು ಉದ್ಯಮಗಳಿಗೆ ಸಾಲದ ವ್ಯವಸ್ಥೆಯನ್ನು ಸುಲಭ ಮಾಡಿದೆ. ಆದರೆ, ಕೊಳ್ಳುಗರು ಇಲ್ಲದೆ ಹೋದರೆ ಉದ್ಯಮಗಳು ಯಾರಿಗಾಗಿ ಉತ್ಪಾದನೆ ಮಾಡಬೇಕು? ಬೇಡಿಕೆ ಇಲ್ಲವಾದರೆ ಈ ಉದ್ಯಮಗಳು ಸಾಲ ಕೊಳ್ಳಲೂ ಮುಂದೆ ಬರುವುದಿಲ್ಲ. ಉದ್ಯಮಗಳಿಗೆ ಸರಕಾರದ ನೇರ ಸಹಾಯ ಬೇಕು. ಉದಾಹರಣೆಗೆ ಕಾರ್ಪೊರೇಟ್ ಬಾಂಡ್‌ಗಳ ಖರೀದಿ. ಇದರಿಂದ ಹೂಡಿಕೆ, ಉದ್ಯೋಗ, ಆದಾಯ ಸ್ಥಿತಿ ಸುಧಾರಿಸಬಹುದು.