ಇದು ಪ್ರಾಣಾರ್ಪಣೆಯೇ? ನೀವೇ ಹೇಳಿ…

ರಾಜೀವ್ ಹತ್ಯೆಯಾಗಿ ಇಪ್ಪತ್ಮೂರು ವರ್ಷ ಕಳೆದರೂ ಸೋನಿಯಾ ಮತ್ತು ಅವರ ಮಕ್ಕಳು ದೇಶಕ್ಕಾಗಿ ಇಂದಿರಾ ಹಾಗೂ ರಾಜೀವ್ ಪ್ರಾಣತ್ಯಾಗ ಮಾಡಿದರು ಎಂದು ಪ್ರಲಾಪಿಸುವುದು ಎಷ್ಟು ಸರಿ? ಇದು ಪ್ರಾಣಾರ್ಪಣೆಯೋ, ಅನ್ಯಾಯವಾಗಿ ತೆಗೆದುಕೊಂಡ ಬಲಿಯೋ? ಆಲೋಚಿಸಬೇಡವೇ?

rajiv-indira-gandhi (1) 2

ಮೊದಮೊದಲು ಪ್ರಧಾನಿ ಮನಮೋಹನ್ ಸಿಂಗ್ ಮೌನದ ಕುರಿತು ವ್ಯಾಪಕ ಟೀಕೆಯನ್ನು ಕೇಳುತ್ತಿದ್ದೆವು. ಆದರೆ ಕ್ರಮೇಣ ಅದೊಂದು ದೊಡ್ಡ ತಮಾಷೆಯ ವಸ್ತುವಾಯಿತು. ಆದರೆ ಅದೇ ಮನಮೋಹನ ಸಿಂಗ್‍ರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಎಂ.ಕೆ. ನಾರಾಯಣನ್ ಮಹಾ ನಿಷ್ಕ್ರಿಯರಾಗಿದ್ದರು. ಅದು ಅನೇಕ ಜನರಿಗೆ ಗೊತ್ತಿರಲಿಕ್ಕಿಲ್ಲ. ಹತ್ತು ವರ್ಷಗಳ ಕಾಲ ಈ ದೇಶದ ಪ್ರಧಾನಿಯಾಗಿದ್ದ ಸಿಂಗ್ ಮೌನದ ಕುರಿತು ಯಾರಾದರೂ ಟೀಕಿಸಿದರೆ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಕನಿಷ್ಠ ಪತ್ರಿಕಾ ಹೇಳಿಕೆಯನ್ನಾದರೂ ಬಿಡುಗಡೆ ಮಾಡುತ್ತಾರೆ. ತಗಂಡು ಓದಿಕೊಳ್ಳಿ…ನಮ್ಮ ಪ್ರಧಾನಿ ಹತ್ತು ವರ್ಷದಲ್ಲಿ ಇಂತಿಷ್ಟು ಬಾರಿ ಮಾತನಾಡಿದ್ದಾರೆ ಅಂತ ಲೆಕ್ಕ ಕೊಡುತ್ತಾರೆ. ಅದೇ ನಾರಾಯಣನ್ ವಿಚಾರಕ್ಕೆ ಬಂದರೆ ಹಾಗೆ ಲೆಕ್ಕ ಕೊಡುವವರು, ಸಬೂಬು ಹೇಳುವವರೂ ಸಿಗುವುದಿಲ್ಲ. ಮುಖ್ಯ ವಿಷ್ಯ ಏನೆಂದರೆ ಸಿಂಗ್ ಮತ್ತು ನಾರಾಯಣನ್ ಮೌನದ ಹಿಂದಿನ ಕಾರಣ ಮಾತ್ರ ಒಂದೇ ಆಗಿತ್ತು.

ಹೇಗೆ ಅಂತ ಹೇಳ್ತೀನಿ ಕೇಳಿ… ಜಾಫ್ನಾದಿಂದ ಸ್ಫೋಟಕ ಹೊತ್ತು ತಂದ `ಸನ್ ಬರ್ಡ್’ ಹಡಗು ತಮಿಳುನಾಡು ಸೇರಿದ ಖಚಿತ ಮಾಹಿತಿ ಸಿಕ್ಕಿದರೂ ನಾರಾಯಣನ್ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದನ್ನು ಈ ಹಿಂದಿನ ಕಂತಿನಲ್ಲಿ ಓದಿದ್ದೀರಿ. ಹಾಗೇ ಮತ್ತೊಂದು ಲಂಕಾ ಹಡಗು `ಸನ್ ಗೋಲ್ಡ್’ ತಮಿಳುನಾಡು ಕರಾವಳಿ ಪ್ರವೇಶ ಮಾಡಿತು. ಅದರಲ್ಲಿ ತಮಿಳು ಉಗ್ರರನ್ನು ಸಾಕಲು, ರಾಜೀವ್ ಹತ್ಯೆ ಸಿದ್ಧತೆಯ ಖರ್ಚುವೆಚ್ಚ ನಿಭಾಯಿಸಲು ಬೇಕಾಗುವಷ್ಟು ಬಂಗಾರವನ್ನು ಸಾಗಿಸಲಾಗಿದೆ ಎಂದು `ರಾ’ (R&AW) ಹಾಗೂ ತಮಿಳುನಾಡು ಗುಪ್ತಚರದಳ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನಿಸಿದರೆ ಅದಕ್ಕೆ ಯಾರೊಬ್ಬರೂ ಕ್ಯಾರೇ ಅನ್ನುವುದಿಲ್ಲ. ಗೊತ್ತಿರಲಿ, ಭಾರತದಲ್ಲಿ ಎಲ್‍ಟಿಟಿ ಉಗ್ರರ ಖರ್ಚುವೆಚ್ಚಗಳಿಗಾಗಿ ಪ್ರಭಾಕರನ್ ಅಥವಾ ಅವನ ಬಂಟರು ಒಂದೇ ಒಂದು ರೂಪಾಯಿ ಕ್ಯಾಷ್ ಕಳಿಸುವುದಿಲ್ಲ. ಏನಿದ್ದರೂ ಹಳದಿ ಲೋಹದ ಮೂಲಕವೇ ವ್ಯವಹಾರ. ಅದನ್ನು ತಮಿಳುನಾಡಿನಲ್ಲಿ ಮಾರಿ ಕ್ಯಾಷ್ ಮಾಡಿಕೊಳ್ಳಬೇಕು. ಅವರ ಕಾರ್ಯಾಚರಣೆ ಎಷ್ಟು ಕರಾರುವಾಕ್ಕು ಅಂದರೆ ಪೊಲೀಸರಿಂದ ಬಚಾವಾಗಲು ರಾಜಕಾರಣಿಗಳು, ಬಂಗಾರ ಮಾರಿ ಕ್ಯಾಷ್ ಮಾಡಿಕೊಳ್ಳಲು ಅಕ್ಕಸಾಲಿಗರು, ಹುಷಾರು ತಪ್ಪಿದರೆ ನೋಡಿಕೊಳ್ಳಲು ವೈದ್ಯರು, ಬೇಕಾದಲ್ಲಿ ಮನೆ ಮಾಡಿಕೊಂಡು ಉಳಿಯಲು ರಿಯಲ್ ಎಸ್ಟೇಟ್ ಏಜೆಂಟರು…ಹೀಗೆ ಎಲ್ಲದಕ್ಕೂ ಪಕ್ಕಾ ವ್ಯವಸ್ಥೆ ಇತ್ತು. ಈ ಎಲ್ಲ ಮಾಹಿತಿಗಳನ್ನು ಗುಪ್ತಚರ ದಳದ ವರದಿಯಲ್ಲಿ ಸ್ಪಷ್ಟವಾಗಿ ನೀಡಲಾಗಿತ್ತು.

ಮುಖ್ಯವಾಗಿ ರಾಜೀವ್ ಗಾಂಧಿಯವರನ್ನು ಹತ್ಯೆಮಾಡಲು ತಮಿಳು ಉಗ್ರರು ಅಸಾಂಪ್ರದಾಯಿಕ ಮಾದರಿಯನ್ನು ಅನುಸರಿಸುತ್ತಾರೆಂಬ ಸ್ಪಷ್ಟ ಮಾಹಿತಿ ಸಿಕ್ಕಿತ್ತು. ರಾಜೀವ್ ಹತ್ಯೆಗೆ ಲೇಡಿ ಮಾನವ ಬಾಂಬ್ ತಮಿಳುನಾಡಿಗೆ ಎಂಟ್ರಿ ಕೊಟ್ಟಿದ್ದಾಳೆ ಎಂಬುದು ನಿಖರವಾಗಿ ಗೊತ್ತಿತ್ತು. ರಾಜೀವ್ ಹತ್ಯೆ ಮಾಡಿದ `ಬ್ಲಾೃಕ್ ಟೈಗರ್’ ಧನು ಬಳಸಿದ್ದು ಬೆಲ್ಟ್ ಬಾಂಬ್. ಅದಕ್ಕೆ ಪ್ರೇರಣೆ `ಡೆಲ್ಟಾ ಫೋರ್ಸ್’ಎಂಬ ಹಾಲಿವುಡ್ ಸಿನಿಮಾ. ಹಾಲಿವುಡ್ ಥ್ರಿಲ್ಲರ್ ಸಿನಿಮಾ ನೋಡುವ ಖಯಾಲಿ ಇದ್ದ ಪ್ರಭಾಕರನ್ `ಡೆಲ್ಟಾ ಫೋರ್ಸ್’ ಸಿನಿಮಾ ನೋಡಿದ ನಂತರ ರಾಜೀವ್ ಗಾಂಧಿಯನ್ನು ಹೀಗೇ ಮುಗಿಸಬೇಕೆಂದು ತೀರ್ಮಾನಿಸಿಬಿಟ್ಟಿದ್ದಾನೆ. ಆ ಸಿನಿಮಾದಲ್ಲಿ ಲೇಡಿ ಕಿಲ್ಲರ್ ವೇದಿಕೆ ಏರಿ ಗಣ್ಯ ವ್ಯಕ್ತಿಗೆ ಹೂಗುಚ್ಛ ಕೊಡುತ್ತಾಳೆ. ದೂರದಲ್ಲಿದ್ದ ವ್ಯಕ್ತಿ ರಿಮೋಟ್ ಕಂಟ್ರೋಲ್ ಗುಂಡಿ ಒತ್ತುತ್ತಾನೆ. ಆಕೆಯ ಸೊಂಟದಲ್ಲಿದ್ದ ಬೆಲ್ಟ್ ಬಾಂಬ್ ಸಿಡಿಯುತ್ತದೆ. ಶ್ರೀಪೆರಂಬುದೂರು ಸ್ಫೋಟದಲ್ಲಿ ಷಡ್ಯಂತ್ರ ಇನ್ನೂ ಪಕ್ಕಾ. ಹಂತಕಿ ನೆಲಕ್ಕೆಬಿದ್ದ ಹಾರ ಮೇಲೆತ್ತುವ ನೆಪದಲ್ಲಿ ಸೊಂಟ ಬಗ್ಗಿಸಿದಾಗ ಬಾಂಬ್ ಸಿಡಿಯುತ್ತದೆ. ಪ್ರಭಾಕರನ್ ಕ್ರಿಮಿನಲ್ ಐಡಿಯಾ ಹಾಲಿವುಡ್ ಸಿನಿಮಾಕ್ಕಿಂತ ಒಂದು ಹೆಜ್ಜೆ ಮುಂದೆಯೇ ಇರುತ್ತದೆ. ಕಾರಣ ಇಷ್ಟೆ, ಯಾವುದೇ ಕುರುಹು ಮುಂದೆ ಬದುಕುಳಿಯಬಾರದು ಎಂಬುದಕ್ಕಾಗಿ ಸ್ವತಃ ಪ್ರಭಾಕರನ್ ಮಾಡಿದ ವ್ಯವಸ್ಥಿತ ಸಂಚು. ಹೀಗೇ ಮಾಡುತ್ತಾರೆಂಬುದು ನಮ್ಮ ಗುಪ್ತಚರ ವಿಭಾಗಕ್ಕೆ ಮೊದಲೇ ಗೊತ್ತಿತ್ತು. ಅದಕ್ಕಿಂತ ಶ್ರೀಲಂಕಾ ತಮಿಳು ಪ್ರಜೆ, ಕೆಮಿಕಲ್ ಇಂಜಿನಿಯರ್ ಜಯ ಬಾಲನ್ ಸುಮಾರು ಎಂಟು ತಿಂಗಳಿಂದ `ಬೆಲ್ಟ್ ಬಾಂಬ್’ ಸಿದ್ಧತೆಯಲ್ಲಿ ತೊಡಗಿದ್ದ. ಅದಕ್ಕಾಗಿ ಆತ ಫ್ರಾಂಕ್‍ಫರ್ಟ್‍ಗೆ ಹತ್ತಾರು ಬಾರಿ ಹೋಗಿ ಬಂದಿದ್ದ. ಎಲ್ಲ ತಯಾರಿ ಆದ ಬಳಿಕ ರಾಜೀವ್ ಹತ್ಯೆಗೆ ಒಂದು ತಿಂಗಳು ಮುಂಚೆ ಜಯ ಬಾಲನ್ ಮದ್ರಾಸ್‍ಗೆ ಬಂದು ತಲೆಮರೆಸಿಕೊಂಡ. ಈ ಮಾಹಿತಿಯೂ ಇತ್ತು. ಇದೆಲ್ಲವೂ ಕಾಲಕಾಲಕ್ಕೆ ಕೇಂದ್ರ ಮತ್ತು ರಾಜ್ಯಸರ್ಕಾರಕ್ಕೆ ರವಾನೆಯಾಗಿತ್ತು.

ಯಾವುದಕ್ಕೂ ಪ್ರತಿಕ್ರಿಯೆ ನೀಡದ ವ್ಯಕ್ತಿಯಿಂದ ಮೊದಲ ಮಾತು ಹೊರಟಿದ್ದು 1991ರ ಮೇ 21ರ ಮಧ್ಯರಾತ್ರಿ! ರಾಜೀವ್ ಹತ್ಯೆಯ ಕೆಲವೇ ಕ್ಷಣಗಳಲ್ಲಿ ತಮಿಳುನಾಡು ಪ್ರಾದೇಶಿಕ ಗುಪ್ತಚರ ದಳದ ಉಸ್ತುವಾರಿ, ಜಂಟಿ ನಿರ್ದೇಕ ಎನ್.ವಿ. ವ್ಯಾಟ್ಸನ್‍ಗೆ ಫೋನ್ ಮಾಡಿದ ನಾರಾಯಣನ್ ಕೇಳುತ್ತಾರೆ `  Are you sure that Rajiv Gandhi is dead? or has he been only hurt?’. ಮಾತಿನ ಮರ್ಮ ಏನು? ರಾಜೀವ್ ಹತ್ಯೆಗೆ ಕೆಲವೇ ಹೊತ್ತು ಮೊದಲು ಕೊಲಂಬೋದ ಭಾರತೀಯ ದೂತಾವಾಸದ ಕಚೇರಿಯ ಗ್ರಂಥಪಾಲಕಿ ಲಕ್ಷ್ಮೀ ಎಂಬಾಕೆಗೆ ಅನಾಮಧೇಯ ಫೋನ್ ಕರೆಯೊಂದು ಬಂದು, `Is Rajiv Gandhi dead?’ ಅಂತ ಕೇಳುತ್ತದೆ. ಆಕೆ ಆ ಕರೆಯನ್ನು ಅಲಕ್ಷಿಸುತ್ತಾಳೆ. ಮತ್ತೆ ಕೆಲವೇ ಹೊತ್ತಿನಲ್ಲಿ ರಾಜೀವ್ ಹತ್ಯೆಯ ಸುದ್ದಿ ತಿಳಿದು ಆಕೆ ದಿಗಿಲಾಗುತ್ತಾಳೆ. ಅಂದು ಯಾವುದೇ ರೀತಿಯಲ್ಲಿ ರಾಜೀವ್ ಬಚಾವಾಗಲು ಸಾಧ್ಯವೇ ಇರಲಿಲ್ಲ.

ರಾಜೀವ್ ಹತ್ಯೆಯ ಮರುದಿನದಿಂದಲೇ ಘಟನೆಯ ತನಿಖೆ ಆರಂಭಿಸಿದ ಕಾರ್ತಿಕೇಯನ್ ನೇತೃತ್ವದ ವಿಶೇಷ ತನಿಖಾ ತಂಡ ವ್ಯಾಟ್ಸನ್ ಮತ್ತು ಲಕ್ಷ್ಮಿ ಇಬ್ಬರ ಹೇಳಿಕೆಯನ್ನೂ ದಾಖಲಿಸಿಕೊಂಡಿದೆ.

ಒಂದು ವೇಳೆ ಧನು ಅಂದೇನಾದರೂ ಬಾಂಬ್ ಸಿಡಿಸಲು ಹಿಂದೇಟು ಹಾಕಿದರೆ ಶತಾಯಗತಾಯ ರಾಜೀವ್ ಹತ್ಯೆ ಮಾಡಲು ಶಿವರಸನ್ ವೇದಿಕೆ ಬದಿಯಲ್ಲೇ ಅಣಿಯಾಗಿದ್ದ. ಆತನ ಸೊಂಟದಲ್ಲಿ ಸೈನೈಡ್ ಲೇಪಿತ ಗುಂಡುಗಳಿಂದ ಭರ್ತಿಯಾದ ಮೈಕ್ರೋಸ್ಕೋಪಿಕ್ ಪಿಸ್ತೂಲಿತ್ತು. ಆತ ಮೊದಲು ರಾಜೀವ್, ನಂತರ ಧನುವನ್ನು ಮುಗಿಸುವ ಲೆಕ್ಕ ಹಾಕಿಕೊಂಡಿದ್ದ. ಒಂದುವೇಳೆ ಬಾಂಬ್ ಸಿಡಿದ ಬಳಿಕ ಧನು ಅರೆಜೀವವಾಗಿ ಬದುಕುಳಿದ ಪಕ್ಷದಲ್ಲಿ ಆಕೆಯನ್ನು ಅಲ್ಲೇ ಮುಗಿಸಿ ಸಾಕ್ಷಿ ಸಮಾಧಿ ಮಾಡುವುದು ಆತನ ಯೋಜನೆಯಾಗಿತ್ತು. ಇಷ್ಟಾಗಿಯೂ ಒಂದುವೇಳೆ ಶ್ರೀಪೆರಂಬುದೂರು ಯೋಜನೆ ಕೈಕೊಟ್ಟರೆ ಪಾಂಡಿಚೇರಿಯ ಕೃಷ್ಣಗಿರಿ ಖೆಡ್ಡಾ ರೆಡಿಯಾಗಿತ್ತು. ದುರುಳ ಹೊಂಚು ಎಷ್ಟು ಪಕ್ಕಾ ಅಲ್ವೇ!? ಗುಪ್ತಚರ ದಳದ ಮುಖ್ಯಸ್ಥರಿಗೆ ಯಾವ ಲೆಕ್ಕ?

ರಾಜೀವ್ ಹತ್ಯೆಯಾಗಿ ಇಪ್ಪತ್ಮೂರು ವರ್ಷ ಕಳೆದರೂ ಸೋನಿಯಾ ಮತ್ತು ಅವರ ಮಕ್ಕಳು ದೇಶಕ್ಕಾಗಿ ಇಂದಿರಾ ಹಾಗೂ ರಾಜೀವ್ ಪ್ರಾಣತ್ಯಾಗ ಮಾಡಿದರು ಎಂದು ಪ್ರಲಾಪಿಸುತ್ತಿದ್ದಾರಲ್ಲ ಅದಕ್ಕಾಗಿ ಒಂದಿಷ್ಟು ವಿಚಾರವನ್ನು ಇಲ್ಲಿ ಪ್ರಸ್ತಾಪಿಸಬೇಕು ಅನ್ನಿಸಿದ್ದು. ಇಂದಿರಾ, ರಾಜೀವ್ ಇಬ್ಬರೂ ಮಹಾನ್ ನಾಯಕರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಒಂದು ಪ್ರಶ್ನೆ, ಇಂದಿರಾ ಮತ್ತು ರಾಜೀವ್ ಇಬ್ಬರೂ ಅವರಾಗಿ ಅವರು ಪ್ರಾಣತ್ಯಾಗ ಮಾಡಿದರೇ? ಅದೊಂದು ಕೊಲೆ ಅನ್ನುವುದಾದರೆ ಮಾಡಿದವರು ಯಾರು? ಹೊರಗಿನವರೇ? ಒಳಗಿನವರೇ? ಕನಿಷ್ಠಪಕ್ಷ ಪ್ರಿಯಾಂಕಾ, ರಾಹುಲ್ ಆದರೂ ಆಲೋಚನೆ ಮಾಡಬೇಕು.

ಪಾಪ! ಅವತ್ತು ವಿಶಾಖಪಟ್ಟಣಂನಲ್ಲಿ ತಮ್ಮ ನೆಚ್ಚಿನ ಅಭ್ಯರ್ಥಿ ಉಮಾ ಗಜಪತಿರಾಜು ಪರ ಸತತ ಪ್ರಚಾರ ಮಾಡಿ ದಣಿದಿದ್ದ ರಾಜೀವ್ ಮದ್ರಾಸ್‍ಗೆ ಬರಲು ತಯಾರಿರಲಿಲ್ಲ. ರಾತ್ರಿ ವಿಶಾಖಪಟ್ಟಣಂನಲ್ಲೇ ತಂಗಲು ಅವರು ನಿರ್ಧರಿಸಿದ್ದರು. ಆದರೆ ರಾಜೀವ್ ಮದ್ರಾಸ್ ಪ್ರಚಾರಸಭೆಗೆ ಹೋಗಲೇಬೇಕೆಂದು ಎಐಸಿಸಿ ಕಚೇರಿಯಿಂದ ಮೇಲಿಂದ ಮೇಲೆ ಫೋನ್ ಬರುತ್ತಿತ್ತು. ಪ್ರಚಾರ ಪ್ರವಾಸಕ್ಕೆ ಬಳಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಬೇರೆ ಕಾಣಿಸಿಕೊಂಡಿತ್ತು. ಅದೇ ನೆಪದಲ್ಲಿ ಮದ್ರಾಸ್ ಸಭೆ ತಪ್ಪಿಸಿಕೊಳ್ಳಲು ನೋಡಿದರು. ಅದಕ್ಕೂ ಬಿಡಲಿಲ್ಲ. ದೆಹಲಿ ಎಐಸಿಸಿ ಕಚೇರಿಯಿಂದ ಫೋನ್ ಮೂಲಕವೇ ವ್ಯವಸ್ಥೆ ಮಾಡಿ, ಕೆಲವೇ ಹೊತ್ತಿನಲ್ಲಿ ವಿಮಾನ ಅಣಿಗೊಳಿಸಲಾಯಿತು. ವಿಧಿಯಿಲ್ಲದೇ ರಾಜೀವ್ ಮದ್ರಾಸ್‍ಗೆ ಹಾರಿದರು. ಮದ್ರಾಸ್‍ನ ಮೀನಾಂಬಕಂ ವಿಮಾನ ನಿಲ್ದಾಣದಲ್ಲಿ ಇಳಿದ ರಾಜೀವ್ ರಸ್ತೆ ಮೂಲಕ ಶ್ರೀಪೆರಂಬುದೂರು ತಲುಪಿದರು. ವೇದಿಕೆಯಿಂದ ಅನತಿ ದೂರದಲ್ಲಿದ್ದ ಇಂದಿರಾ ಪ್ರತಿಮೆಗೆ ಹಾರ ಹಾಕಿದರು. ಅದು ಸ್ಥಳೀಯ ಅಭ್ಯರ್ಥಿ ಮಾಡಿದ ವ್ಯವಸ್ಥೆ. ಹಾರಹಾಕುತ್ತಿದ್ದಂತೆ ಸುಮಾರು ಐದು ನಿಮಿಷ ಕಿವಿ ಹರಿದುಹೋಗುವಷ್ಟು ಪಟಾಕಿ ಸಿಡಿಸಲಾಯಿತು. ಮುಂದಿನ ಕಾರ್ಯಕ್ರಮಕ್ಕೆ ಹಾಕಿದ ಪೀಠಿಕೆ ಅದು. ರಾಜೀವ್ ಸೀದಾ ಅಲ್ಲಿಂದ ವೇದಿಕೆಗೆ ಹೋದರು. ಸುಮ್ಮನೇ ಊಹಿಸಿಕೊಳ್ಳಿ, ಒಬ್ಬ ಮಾಮೂಲಿ ಮಂತ್ರಿಯೋ ಕೇಂದ್ರ ಮಂತ್ರಿಯೋ ಬಂದರೆ ಅವರ ಸುತ್ತ ಎಷ್ಟು ಮಂದಿ ಮರಿ ಪುಢಾರಿಗಳಿರುತ್ತಾರೆ? ಕನಿಷ್ಠ ಹತ್ತಿಪ್ಪತ್ತು, ಅದಕ್ಕಿಂತ ಹೆಚ್ಚು. ಆವತ್ತು ರಾಜೀವ್ ವೇದಿಕೆ ಏರಿದಾಗ ಜತೆಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ವಾಜಪ್ಪಾಡಿ ಕೆ. ರಾಮಮೂರ್ತಿ, ಜಿ.ಕೆ.ಮೂಪನಾರ್ ಮೊದಲಾದ ಯಾವ ಪ್ರಮುಖರೂ ಹಿಂಬಾಲಿಸುವುದಿಲ್ಲ. ಕನಿಷ್ಠಪಕ್ಷ ಸ್ಥಳೀಯ ಅಭ್ಯರ್ಥಿ, ತಮಿಳುನಾಡಿನ ಪ್ರಭಾವಿ ಕಾಂಗ್ರೆಸ್ ನಾಯಕಿ ಮರಗತಂ ಚಂದ್ರಶೇಖರ್ ಕೂಡ ರಾಜೀವ್ ಬದಿಯಲ್ಲಿ ಸುಳಿಯುವುದಿಲ್ಲ. ಯಾಕೆ? ವಾಸ್ತವದಲ್ಲಿ ರಾಜೀವ್ ಹತ್ಯೆಗೆ ಸಂಚಿಗೆ ಬೆನ್ನೆಲುಬಾಗಿ ಓರ್ವ ಶಾಸಕರಿದ್ದಾರೆಂದು ಗುಪ್ತಚರ ದಳ ವರ್ಷ ಮುಂಚಿತವಾಗಿ ಹೇಳಿತ್ತಲ್ಲ, ಅದು ಬೇರಾರೂ ಅಲ್ಲ, ಇದೇ ಮರಗತಂ ಚಂದ್ರಶೇಖರ್!

ಇದು ಪ್ರಾಣಾರ್ಪಣೆಯೋ? ಬರ್ಬರ ಹತ್ಯೆಯೋ? ಈಗಾದರೂ ಹೇಳಬಹುದೇ? ಇವಿಷ್ಟೇ ಅಲ್ಲ ಇನ್ನೂ ಬೇಕಾದಷ್ಟು ಇಂಥ ಉತ್ತರ ಸಿಗದ ಪ್ರಶ್ನೆಗಳು ಉಳಿದುಬಿಟ್ಟಿವೆ. ವಾಸ್ತವದಲ್ಲಿ ಶ್ರೀಪೆರಂಬುದೂರಿನಲ್ಲಿ ರ್ಯಾಲಿಗೆ ಒಪ್ಪಿಗೆ ನೀಡಲು ಚೆಂಗಲಪಟ್ಟಿ ಪಶ್ಚಿಮ ವಿಭಾಗದ ಎಸ್‍ಪಿ ಮೊಹಮ್ಮದ್ ಇಕ್ಬಾಲ್ ಬಿಲ್‍ಕುಲ್ ತಯಾರಿರಲಿಲ್ಲ. ಚೆಂಗಲಪಟ್ಟಿ ಶಾಲಾ ಮೈದಾನವೇ ಸೂಕ್ತ ಎಂದು ಇಕ್ಬಾಲ್ ಹೇಳುತ್ತಾರೆ. ಆದರೆ ಮರಗತಂ ಚಂದ್ರಶೇಖರ್ ಹಠವೇ ಮೇಲುಗೈ ಪಡೆಯುತ್ತದೆ. ರ್ಯಾಲಿ ಜಾಗದಲ್ಲಿ ಬ್ಯಾರಿಕೇಡ್ ಹಾಕಲು ಪೆÇಲೀಸ್ ಇಲಾಖೆಗೆ ಕಾಂಗ್ರೆಸ್ ನಾಯಕರು ಯಾವುದೇ ನೆರವು ಕೊಡುವುದಿಲ್ಲ. ರ್ಯಾಲಿ ಪ್ರವೇಶದ್ವಾರದಲ್ಲಿ ಲೋಹಶೋಧಕ ಅಳವಡಿಸಿರುವುದಿಲ್ಲ, ಕನಿಷ್ಠಪಕ್ಷ ವೇದಿಕೆ ಹತ್ತುವವರನ್ನೂ ತಪಾಸಣೆ ಮಾಡುವುದಿಲ್ಲ. ಹಾಗಂತ ತಮಿಳುನಾಡು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಅಲ್ಬರ್ಟ್ ಮತ್ತು ಪ್ರಧಾನ ಕಾರ್ಯದರ್ಶಿ ರಮಾದೇವಿ ವಿಶೇಷ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾರೆ.

ಸಿದ್ಧತೆ ಇನ್ನೂ ಹಿಂದಿನಿಂದಲೇ ನಡೆದಿತ್ತು. ಲತಾ ಕಣ್ಣನ್ ಬಹುಕಾಲದ ಡಿಎಂಕೆ ಕಾರ್ಯಕರ್ತೆ. ಆಕೆ 1989ರಲ್ಲಿ ಕಾಂಗ್ರೆಸ್ ಸೇರಿ ಮರಗತಂ ಚಂದ್ರಶೇಖರ್ ಪುತ್ರಿ ಲತಾಪ್ರಿಯಕುಮಾರ್ ಸ್ನೇಹ ಸಂಪಾದಿಸುತ್ತಾಳೆ. ಆ ದಿನ ಧನು ಮತ್ತು ನಳಿನಿಯನ್ನು ರಾಜೀವ್ ಇದ್ದ ವೇದಿಕೆಗೆ ಕರೆತಂದದ್ದು ಇದೇ ಲತಾ ಕಣ್ಣನ್ ಮತ್ತು ಲತಾಪ್ರಿಯಕುಮಾರ್. ಒಂದು ಷಡ್ಯಂತ್ರದಲ್ಲಿ ಯಾರೆಲ್ಲ ಶಾಮೀಲಾಗಿದ್ದರು ಎಂಬುದಕ್ಕೆ ಮತ್ತೊಂದು ಮಹತ್ವದ ಪುರಾವೆಯಿದೆ. ದೇಶದ ದೊಡ್ಡ ದುರಂತಕ್ಕೆ ವೆಲ್ಲೂರು ಕಾರಾಗೃಹವೇ ಕಾರಾಸ್ಥಾನ. 1991ರ ಜನವರಿ 19ಕ್ಕೆ 162 ಮಂದಿ ಕುಖ್ಯಾತ ತಮಿಳು ಉಗ್ರರನ್ನು ಬಂಧಿಸಿ ವೆಲ್ಲೂರು ಜೈಲಲ್ಲಿ ಇಡಲಾಗುತ್ತದೆ. ಅಲ್ಲಿಗೆ ಧನು ಮತ್ತು ನಳಿನಿ ಹತ್ತಾರು ಬಾರಿ ಎಡತಾಕಿರುತ್ತಾರೆ. ಆ ಕುರಿತು ತನಿಖಾ ದಳದವರು ಪರಿಶೀಲಿಸಲು ಹೋದರೆ, ಜೈಲು ಭೇಟಿ ದಾಖಲೆ ಪುಸ್ತಕವೇ ಕಳೆದುಹೋಗಿದೆ ಎಂದು ಹೇಳಲಾಗುತ್ತದೆ.

ಈ ಸಾಕ್ಷಿ ಪುರಾವೆಗಳಿಗೆ ಪೂರಕವಾಗಿ ಜೂನ್ 25ರಂದು ಆಗಿನ ಗೃಹ ಸಚಿವ ಎಸ್.ಬಿ.ಚೌಹಾಣ್ ಸಂಸತ್ತಿನಲ್ಲಿ, `LTTE could have been an ‘instrument or tool’ to execute the plot to kill Rajiv Gandhi, in other words there could be other set of pepole using LTTE’ ಅಂತ ಹೇಳಿಕೆ ಕೊಡುತ್ತಾರೆ. ಹಾಗಿದ್ದರೆ ಅವರೆಲ್ಲ ಯಾರು… ರಾಜೀವ್ ಹತ್ಯೆಗೆ ರಾಷ್ಟ್ರ ರಾಜಕಾರಣದಲ್ಲಿ ಎರಡು ತಂಡಗಳು ಕೆಲಸ ಮಾಡುತ್ತಿದ್ದವೇ? ಅದನ್ನೆಲ್ಲ ಮುಂದೆ ನೋಡುವಾ ..ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು ಎಂಬ ವರಾತವನ್ನು ಇನ್ನಾದರೂ ನಿಲ್ಲಿಸಬೇಡವೇ? ಒಂದು ಹತ್ಯೆಯ ಲಾಭವನ್ನು ಇನ್ನೆಷ್ಟು ದಿನ ಪಡೆದುಕೊಳ್ಳಬಹುದು?

ಎಲ್ಲಕ್ಕಿಂತ ಮುಖ್ಯವಾಗಿ ನಿಜಕ್ಕೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ನೂರಾರು ಮಹಾನುಭಾವರಿಗೆ ದಿನವೂ ಆಗುತ್ತಿರುವ ಅಪಮಾನ, ಅನ್ಯಾಯವನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳುವುದು?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top