ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ಪರಿಸ್ಥಿತಿ ಗೋಜಲಾಗಿದೆ. ಕೆಲವು ಕಡೆ ಶವಸಂಸ್ಕಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಕೆಲವು ಕಡೆ ಅಮಾನವೀಯವಾಗಿ ನಾಲ್ಕಾರು ಹೆಣಗಳನ್ನು ಒಟ್ಟಿಗೇ ಗುಂಡಿಗೆಸೆದಿರುವುದು ವಿಡಿಯೋ ಚಿತ್ರೀಕೃತಗೊಂಡು ವೈರಲ್ ಆದ ಬಳಿಕ, ಜನರಲ್ಲಿ ಭೀತಿಯೂ ತಲೆದೋರಿದೆ. ಕೋವಿಡ್ ಪೀಡಿತರನ್ನು ದೂರವಿಟ್ಟು ನಡೆಸಿಕೊಳ್ಳುವುದು ಸಹಜ, ಯಾಕೆಂದರೆ ಸೋಂಕು ಹರಡುವ ಭಯವಿದೆ. ಆದರೆ ಶವಸಂಸ್ಕಾರ ಕನಿಷ್ಠ ಗೌರವಯುತವಾಗಿ ನಡೆಸಬೇಕು ಎಂಬುದು ಮಾನವೀಯ ಸಮಾಜದಲ್ಲಿ ನಂಬಿಕೆಯಿಟ್ಟಿರುವ ಎಲ್ಲರ ಕಳಕಳಿ. ಸತ್ತವರನ್ನು ಸರಿಯಾಗಿ ಕಳಿಸಿಕೊಡಲಿಲ್ಲವಲ್ಲ ಎಂಬುದು ಬಂಧುಗಳಿಗೆ ನಿರಂತರ ಶೋಕವಾಗಬಾರದು. ಕೋವಿಡ್‌ನಿಂದ ಮೃತರಾದವರನ್ನು ಮಣ್ಣು ಮಾಡುತ್ತಿರುವ ಪೌರ ಸಿಬ್ಬಂದಿಯ ಪ್ರಾಮಾಣಿಕತೆ ಪರಿಶ್ರಮಗಳಿಗೆ ವಂದಿಸುತ್ತಲೇ ಈ ಮಾತುಗಳನ್ನು ಹೇಳಬೇಕಿದೆ.
ಸರಿಯಾದ ಶವಸಂಸ್ಕಾರಕ್ಕೆ ಅಡ್ಡಿಯಾಗಿರುವುದು ಸೋಂಕಿನ ಭೀತಿ. ಮೊದಲ ಹಂತದ ಲಾಕ್‌ಡೌನ್ ಸಂದರ್ಭದಲ್ಲೆ ಕೇಂದ್ರ ಸರಕಾರ ಈ ಸಂಬಂಧ ಮಾರ್ಗಸೂಚಿ ಹೊರಡಿಸಿದ್ದು, ರಾಜ್ಯ ಸರಕಾರವೂ ಸೂಚನೆ ನೀಡಿದೆ. ಅಂತಿಮ ವಿಧಿ ಕೈಗೊಳ್ಳುವಾಗ 20ಕ್ಕಿಂತ ಹೆಚ್ಚು ಜನರು ಸೇರಕೂಡದು. ಸಂಸ್ಕಾರವನ್ನು ಅವರ ಕುಟುಂಬದ ಸಂಪ್ರದಾಯದ ಪ್ರಕಾರ ನಡೆಸಬಹುದು. ಮೃತ ದೇಹವನ್ನು ದಹಿಸಲು ಮತ್ತು ಹೂಳಲು ಅವಕಾಶವಿದೆ. ಚಿತಾಭಸ್ಮದಿಂದ ಸೋಂಕು ಹರಡುವ ಅಪಾಯವಿಲ್ಲದ ಕಾರಣ ಚಿತಾಭಸ್ಮ ಸಂಗ್ರಹಿಸಬಹುದು. ಕುಟುಂಬ ಸದಸ್ಯರು ಮೃತ ದೇಹ ಸ್ಪರ್ಶಿಸಲು ಅವಕಾಶವಿಲ್ಲ. ಶ್ವಾಸಕೋಶದ ಸಮಸ್ಯೆ ಇನ್ನಿತರ ಗಂಭೀರ ಕಾಯಿಲೆ ಇರುವವರು ಭಾಗಿಯಾಗಬಾರದು. ಶವಸಂಸ್ಕಾರ ಮಾಡುವವರು ಮಾಸ್ಕ್, ಕೈಗವಸು ಧರಿಸಿರಬೇಕು. ಮೃತದೇಹವನ್ನು ಮುಟ್ಟದೆ ನಡೆಸುವ ಯಾವುದೇ ಧಾರ್ಮಿಕ ವಿಧಿಯನ್ನೂ ನಡೆಸಲು ಅವಕಾಶವಿದೆ. ಸಂಬಂಧಿಕರು ಅಂತರ ಕಾಯ್ದುಕೊಳ್ಳುವುದು ಮುಖ್ಯ. ಇಷ್ಟೆಲ್ಲ ಸುರಕ್ಷತಾ ಕ್ರಮಗಳಿರುವಾಗ ಯಾರೂ ಸಂಸ್ಕಾರಕ್ಕೆ ಭಯಪಡಬೇಕಾಗಿಲ್ಲ. ಆದರೆ ಈ ಬಗ್ಗೆ ಜನಜಾಗೃತಿ ಇಲ್ಲದಿರುವುದರಿಂದ ಅಂತ್ಯ ಸಂಸ್ಕಾರದ ವೇಳೆ ಹಲವೆಡೆ ಪ್ರತಿಭಟನೆಗಳಾಗುತ್ತಿವೆ. ಇದು ತಪ್ಪು ಕಲ್ಪನೆಯಿಂದ ಆಗುತ್ತಿದೆ ಹಾಗೂ ಹಾಗೆ ಮಾಡುವುದು ಅಪರಾಧ ಕೂಡ. ಇತರರಂತೆ ಕೋವಿಡ್ ರೋಗಿಗಳಿಗೂ ಘನತೆಯ ಅಂತ್ಯಸಂಸ್ಕಾರ ಸಿಗಬೇಕು.
ಕೇಂದ್ರ ಹಾಗೂ ರಾಜ್ಯ ಸರಕಾರದ ಮಾರ್ಗಸೂಚಿಗಳನ್ನು ಸ್ಥಳೀಯಾಡಳಿತಗಳು ಕಟ್ಟುನಿಟ್ಟಾಗಿ ಪಾಲಿಸಬೇಕು; ಇದನ್ನು ಪಾಲಿಸದವರನ್ನು ಶಿಕ್ಷೆಗೊಳಪಡಿಸಬೇಕು. ಬಂಧುಗಳೂ ಬರಲು ಹಿಂಜರಿಯುತ್ತಿರುವ ಹತ್ತಿನಲ್ಲಿ ಶವದ ಹೊಣೆ ಹೊತ್ತು ಶಿಸ್ತು ಹಾಗೂ ಗೌರವಪೂರ್ವಕ ಸಂಸ್ಕಾರ ನಡೆಸುತ್ತಿರುವವರಿಗೆ ನಾವು ಗೌರವ ಸಲ್ಲಿಸಲೇಬೇಕು. ಹಾಗೆಯೇ ರೋಗಿಯು ಮನೆ, ವೃದ್ಧಾಶ್ರಮ ಸೇರಿದಂತೆ ಇನ್ನಿತರ ಯಾವುದೇ ಕಡೆ ಸಾವಿಗೊಳಗಾದಾಗ ಏನು ಮಾಡಬೇಕು ಎಂಬ ಬಗ್ಗೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿಲ್ಲ. ಇದೂ ಕೂಡ ಸಮಸ್ಯೆಯಾಗಿ ಪರಿಣಮಿಸಿದೆ. ಒಂದು ಶವವನ್ನು ಬಸ್‌ಸ್ಟಾಂಡ್‌ನಲ್ಲಿ ಬಿಟ್ಟುಹೋದ ಪ್ರಕರಣ ಕೂಡ ನಡೆದಿದೆ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾರ್ಗಸೂಚಿಯನ್ನು ಪಾಲಿಸಬೇಕು. ಒಟ್ಟಾರೆ ಕೋವಿಡ್ ರೋಗಿಗಳ ಅಂತ್ಯಕ್ರಿಯೆ ಬಗ್ಗೆ ರಾಜ್ಯ ಸರಕಾರ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಬೇಕು ಹಾಗೂ ಅದರ ಕಟ್ಟುನಿಟ್ಟಿನ ಅನುಷ್ಠಾನ ಆಗಬೇಕು. ಪ್ರಜ್ಞಾವಂತ ಜನತೆ, ಸಂಘಸಂಸ್ಥೆಗಳು ಈ ನಿಯಮಾವಳಿಗಳನ್ನು ಪರಿಪಾಲಿಸಲು ಸಹಕರಿಸಬೇಕು ಹಾಗೂ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು.
ಇದರ ಜೊತೆಗೆ ಇನ್ನೊಂದು ಸಮಸ್ಯೆಯೆಂದರೆ, ಕೊರೊನಾದಿಂದ ಮೃತರಾದವರ ದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಹೂಳುವುದರಿಂದ ಪರಿಸರಕ್ಕೆ ಆಗುವ ಅಪಾಯ. ಪ್ಲಾಸ್ಟಿಕ್ ಸಾವಿರಾರು ವರ್ಷ ಮಣ್ಣಿನಲ್ಲಿ ಕರಗುವುದಿಲ್ಲ. ಹಾಗಾಗಿ ಪ್ಲಾಸ್ಟಿಕ್ ಒಳಗಿರುವ ದೇಹ ಸರಿಯಾಗಿ ಕರಗದೆ ಸಮಸ್ಯೆಯಾಗಬಹುದು. ಪ್ಲಾಸ್ಟಿಕ್ ನೆಲಜಲಕ್ಕೆ ಸೇರುವುದೂ ಅಪಾಯ. ಪ್ಲಾಸ್ಟಿಕ್‌ನಿಂದ ಸುತ್ತಿ ಮಣ್ಣು ಮಾಡುವುದಕ್ಕಿಂತಲೂ ದಹನ ಹೆಚ್ಚು ಯೋಗ್ಯವಾದ ಸಾವಯವ ಕಳಕಳಿಯ ಕ್ರಮ ಎಂಬುದನ್ನೂ ಇಲ್ಲಿ ಗಮನಿಸಬೇಕು. ರೋಗಿಗಳಿಗೆ ಶೀಘ್ರ ಹಾಗೂ ಸಮಗ್ರ ಚಿಕಿತ್ಸೆ ಮತ್ತು ಶವಗಳಿಗೆ ಗೌರವಪೂರ್ವಕ ಅಂತ್ಯಸಂಸ್ಕಾರ- ಇದು ನಮ್ಮ ನೀತಿಯಾಗಲಿ.