ಕೋವಿಡ್ ಲಸಿಕೆ ಮನುಷ್ಯನ ಮೇಲೆ ಪ್ರಯೋಗಕ್ಕೆ ಓಕೆ

ಜಗತ್ತನ್ನೇ ಪೀಡಿಸುತ್ತಿರುವ ಕೊರೊನಾ ವೈರಸ್‌ಗೆ ಬ್ರಹ್ಮಾಸ್ತ್ರವಾಗಬಲ್ಲ ಲಸಿಕೆ ಸಂಶೋಧನೆಗೆ ವೇಗ ಬಂದಿದೆ. ಈ ವಾರ ಲಸಿಕೆ ಸಂಶೋಧನೆ ಮಾನವ ಪ್ರಯೋಗ ಹಂತ ತಲುಪಿದೆ. ಇದರ ಬಗ್ಗೆ ಒಂದಿಷ್ಟು ನೋಟ ಇಲ್ಲಿದೆ.

ಯಾವುದೇ ರೋಗಕ್ಕೆ ಲಸಿಕೆ ಕಂಡುಹಿಡಿಯುವ ಪ್ರಕ್ರಿಯೆಯಲ್ಲಿ ಎರಡು ಮುಖ್ಯವಾದ ಹಂತಗಳು.
1. ಪ್ರಾಣಿಗಳ ಮೇಲಿನ ಪ್ರಯೋಗ.
2. ಮನುಷ್ಯರ ಮೇಲಿನ ಪ್ರಯೋಗ.
ಸದ್ಯ ನೊವೆಲ್ ಕೊರೊನಾ ವೈರಸ್ ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನ ಎರಡನೇ ಹಂತ ತಲುಪಿದೆ. ಮೊದಲ ಹಂತದಲ್ಲಿ ಕೋವಿಡ್-19ನ ದುರ್ಬಲ ವೈರಾಣುಗಳನ್ನು ಸಂಸ್ಕರಿಸಿ ಅದನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಲಾಯಿತು. ಇದು ಯಶಸ್ವಿಯಾದ ಬಳಿಕ, ಹಲವು ಕಂಪನಿಗಳು ಎರಡನೇ ಹಂತ ತಲುಪಿದ್ದು, ಮನುಷ್ಯರ ಮೇಲೆ ಲಸಿಕೆ ಪ್ರಯೋಗ ಮಾಡಲು ಮುಂದಾಗಿವೆ. ಅಮೆರಿಕ, ಚೀನಾ, ಬ್ರಿಟನ್, ಜರ್ಮನಿ, ಅಸ್ಪ್ರೇಲಿಯ ಮುಂತಾದ ದೇಶಗಳು ಮಾನವ ಪ್ರಯೋಗ ಹಂತ ತಲುಪಿವೆ.
ಲಸಿಕೆಯ ಮೊದಲ ಪ್ರಯತ್ನ: ಯಾವ ಚೀನಾ ಕೊರೊನಾ ವೈರಸ್‌ನ್ನು ಹುಟ್ಟು ಹಾಕಿತೋ, ಅಲ್ಲಿಯೇ ಅದರ ವ್ಯಾಕ್ಸೀನ್ ಸಂಶೋಧನೆಗೆ ಮೊದಲ ಪ್ರಯತ್ನ ಆರಂಭವಾಯಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತು. ಜನವರಿ ಆರಂಭದ ವಾರದಲ್ಲಿ ಈ ವೈರಾಣುವನ್ನು ಚೀನಾ ಸಂಗ್ರಹಿಸಿತಲ್ಲದೆ, ಇತರ ಅಂತಾರಾಷ್ಟ್ರೀಯ ಲ್ಯಾಬ್‌ಗಳಿಗೂ ಮಾದರಿಗಳನ್ನು ಕಳಿಸಿಕೊಟ್ಟಿತು. ಮುಂದಿನ ಸಾಂಕ್ರಾಮಿಕ ರೋಗ ಕೊರೊನಾ ವೈರಸ್‌ನಿಂದ ಬರುತ್ತದೆ ಎಂದು ಯಾರೂ ಊಹಿಸಿರದಿದ್ದರೂ, ಇದಕ್ಕೆ ಲಸಿಕೆ ತಯಾರಿಸುವ ಪ್ರಯತ್ನ ಮೊದಲೇ ಜಾರಿಯಲ್ಲಿತ್ತು. ಯಾಕೆಂದರೆ ಇದಕ್ಕೂ ಮೊದಲು ಬಂದ ಎರಡು ಸಾಂಕ್ರಾಮಿಕಗಳಿಗೆ ಕಾರಣವಾದದ್ದು ಈ ವೈರಸ್ಸೇ. 2002ರಲ್ಲಿ ಚೀನಾದಲ್ಲಿ ಹುಟ್ಟಿಕೊಂಡು ಜಗತ್ತಿನಾದ್ಯಂತ ವ್ಯಾಪಿಸಿದ್ದ, 2004ರವರೆಗೆ ಹಾವಳಿ ಎಬ್ಬಿಸಿದ ತೀವ್ರ ಉಸಿರಾಟದ ಸಮಸ್ಯೆಯ ಕಾಯಿಲೆ(ಸಾರ್ಸ್), ಮತ್ತು 2012ರಲ್ಲಿ ಸೌದಿ ಅರೇಬಿಯಾದಲ್ಲಿ ಪ್ರಾರಂಭವಾದ ಮಧ್ಯಪ್ರಾಚ್ಯ ಉಸಿರಾಟದ ಕಾಯಿಲೆ(ಮೆರ್ಸ್). ಕೋವಿಡ್ ವೈರಸ್ ಸಾರ್ಸ್ ವೈರಸ್‌ನ  ಗುಣಾಣು ಅಂಶವನ್ನು 79%ದಷ್ಟು ಹಾಗೂ ಮೆರ್ಸ್ ವೈರಸ್‌ನ ಶೇ.50ರಷ್ಟು ಅಂಶವನ್ನು ಹೊಂದಿದೆ. ಎರಡೂ ಸಂದರ್ಭಗಳಲ್ಲಿ ಆರಂಭವಾಗಿದ್ದ ಲಸಿಕೆ ಶೋಧನೆ, ಈ ಕಾಯಿಲೆಗಳು ವಿರಳವಾದ ಬಳಿಕ ನಿಂತಿತ್ತು. ಈಗ ವೇಗ ಪಡೆದುಕೊಂಡಿದೆ.

ಮೊದಲ ಹಂತ
ಮಾನವ ಜೀವಕೋಶಗಳಿಗೆ ಪ್ರವೇಶಿಸಲು ವೈರಸ್ ಕೀಲಿಕೈಯಂತೆ ಬಳಸುವುದು ಪ್ರೊಟೀನನ್ನು. ವಿಜ್ಞಾನಿಗಳು ಈ ಪ್ರೊಟೀನ್‌ನ ಜೆನೆಟಿಕ್ ಕೋಡ್ ಅಥವಾ ಆನುವಂಶಿಕ ಸಂಕೇತವನ್ನು ಅಧ್ಯಯನ ಮಾಡುತ್ತಾರೆ. ಸೂಕ್ಷ್ಮಾಣುಜೀವಿಗಳನ್ನು ಜೀವಂತವಾಗಿ ಪಡೆದು, ಅದನ್ನು ದುರ್ಬಲಗೊಳಿಸುತ್ತಾರೆ. ಇಲಿ ಅಥವಾ ಗಿನಿಪಿಗ್‌ಗಳ ಜೀವಕೋಶಗಳಲ್ಲಿ ಈ ಜೀವಂತ ವೈರಸ್ ಅಥವಾ ಬ್ಯಾಕ್ಟೀರಿಯಾವನ್ನು ಪದೇ ಪದೆ ಬೆಳೆಸುವ ಮೂಲಕ, ವಿಜ್ಞಾನಿಗಳು ಮೂಲಭೂತವಾಗಿ ರೂಪಾಂತರಗೊಂಡ ಈ ವೈರಾಣು ಗುಂಪನ್ನು ರಚಿಸುತ್ತಾರೆ. ಕೆಲವೊಮ್ಮೆ ರಾಸಾಯನಿಕಗಳಿಂದ ನಿಷ್ಕ್ರಿಯಗೊಳಿಸಿದ ವೈರಸ್ ಅಥವಾ ಬ್ಯಾಕ್ಟೀರಿಯಾದ ಆವೃತ್ತಿಗಳಿಂದಲೂ ಲಸಿಕೆ ತಯಾರಿಸಲಾಗುತ್ತದೆ. ಬಲಿಪ್ರಾಣಿಗಳ ಮೇಲೆ ಈ ಲಸಿಕೆಯನ್ನು ಮತ್ತೆ ಮತ್ತೆ ಪ್ರಯೋಗಿಸಿ ಫಲಿತಾಂಶ ಪಡೆಯಲಾಗುತ್ತದೆ.

ಎರಡನೇ ಹಂತ
ಎರಡನೇ ಹಂತದಲ್ಲಿ ಮನುಷ್ಯರ ಮೇಲೆ ಲಸಿಕೆಯನ್ನು ಪ್ರಯೋಗಿಸಬೇಕು. ಇದರಲ್ಲಿ ಮತ್ತೆ ಮೂರು ಹಂತಗಳಿವೆ. 1. ಇಬ್ಬರು ಅಥವಾ ಮೂವರ ಮೇಲೆ ಲಸಿಕೆ ಪ್ರಯೋಗ. ಈ ಲಸಿಕೆ ಮಾನವರಿಗೆ ಸುರಕ್ಷಿತವೇ ಎಂದು ಕಂಡುಹಿಡಿಯಲು. 2. ಕೆಲವು ನೂರು ಮಂದಿಯ ಮೇಲೆ ಪ್ರಯೋಗ. ಸೋಂಕಿನ ವಿರುದ್ಧ ಇದು ಕೆಲಸ ಮಾಡುತ್ತದೆಯೇ ಎಂದು ತಿಳಿಯಲು. 3. ಕೆಲವು ಸಾವಿರ ಮಂದಿಯ ಮೇಲೆ ಪ್ರಯೋಗ. ಇದು ವಯೋಮಾನ- ಸಮುದಾಯ- ವೈವಿಧ್ಯಗಳನ್ನು ಪರಿಗಣಿಸಿ ಹೆಚ್ಚಿನ ಕಾಲಾವಧಿಯನ್ನೂ ಪಡೆದುಕೊಂಡು ನಡೆಸುವ ಪ್ರಯೋಗ. ಲಸಿಕೆಯ ದೊಡ್ಡ ಪ್ರಮಾಣದ ಬಳಕೆ ಬಳಿಕವೂ ಅದರ ಪ್ರಯೋಗ ಫಲಿತಾಂಶಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಯಾಕೆಂದರೆ ಇದು ಪ್ರದೇಶದಿಂದ ಪ್ರದೇಶಕ್ಕೆ, ಸಮುದಾಯದಿಂದ ಸಮುದಾಯಕ್ಕೆ ಫಲಿತಾಂಶ ಬದಲಿಸಬಹುದು. ವೈರಸ್‌ನ ಹಲವು ಸ್ಪ್ರೇನ್(ಆವೃತ್ತಿ)ಗಳು ಚಾಲ್ತಿಯಲ್ಲಿರುತ್ತವೆ; ಕೆಲವು ಸ್ಪ್ರೇನ್‌ಗಳಿಗೆ ಇದು ಕೆಲಸ ಮಾಡಬಹುದು, ಇನ್ನು ಕೆಲವಕ್ಕೆ ಉಪಯೋಗವಾಗದೆ ಹೋಗಬಹುದು.
ಭಾರತೀಯ ಕಂಪನಿಗಳು: 6 ಭಾರತೀಯ ಕಂಪನಿಗಳು ಲಸಿಕೆ ಪ್ರಯೋಗದಲ್ಲಿ ತೊಡಗಿವೆ ಅಥವಾ ಇತರ ಕಂಪನಿಗಳ ಜೊತೆಗೆ ಕೈ ಜೋಡಿಸಿವೆ- ಝೈಡಸ್ ಕ್ಯಾಡಿಲಾ, ಸೇರಮ್ ಇನ್ಸ್ಟಿಟ್ಯೂಟ್, ಬಯಾಲಾಜಿಕಲ್ ಇ, ಭ್ರಾತ್ ಬಯೋಟೆಕ್, ಇಂಡಿಯನ್ ಇಮ್ಯುನೋಲಾಜಿಕಲ್ಸ್, ಮಿನ್ವ್ಯಾಕ್ಸ್. ಇವುಗಳು ಇನ್ನೂ ಮಾನವ ಪ್ರಯೋಗಕ್ಕೆ ಕಾಲಿಟ್ಟಿಲ್ಲ. ಮೊದಲ ಹಂತದಲ್ಲೇ ಇವೆ. ಇದರಲ್ಲಿ ನಾಲ್ಕು ಕಂಪನಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಸಂಭಾವ್ಯ ಲಸಿಕೆ ಪಟ್ಟಿಯಲ್ಲಿ ಸೇರಿಸಿದೆ.

ಅಮೆರಿಕದ ಪ್ರಯೋಗ
ಅಮೆರಿಕದ ಬಯೊಟೆಕ್ ಕಂಪನಿ ಇನೊವಿಯೊ ಫಾರ್ಮಾಸ್ಯುಟಿಕಲ್ಸ್, ಐಎನ್ಒ-4800 ಎಂಬ ಹೆಸರಿನ ಲಸಿಕೆ ಪ್ರಯೋಗ ನಡೆಸುತ್ತಿದೆ. ಅದನ್ನು ಭಾರತ, ಅಮೆರಿಕ ಹಾಗೂ ನಾರ್ವೆಗಳು ಒಟ್ಟುಗೂಡಿ ಹುಟ್ಟುಹಾಕಿರುವ ಸೋಂಕು ತಡೆ ವೇದಿಕೆ ಬೆಂಬಲಿಸುತ್ತಿದೆ ಹಾಗೂ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಕೂಡ ಹಣ ಹೂಡಿದೆ. ಇದು, ನೊವೆಲ್ ಕೊರೊನಾ ವೈರಸ್‌ನ ಡಿಎನ್ಎಯನ್ನು ದೇಹಕ್ಕೆ ಸೇರಿಸುವ ಮೂಲಕ ನಡೆಸುವ ಪ್ರಯೋಗ. ಈ ಡಿಎನ್ಎ ಕೋವಿಡ್ ವೈರಸ್‌ನ ಸ್ಪೈಕ್ ಪ್ರೊಟೀನ್ ಗುಣಾಣುಗಳನ್ನು ಹೊಂದಿದ್ದು, ಇವುಗಳನ್ನು ದೇಹ ಗುರುತಿಸಿ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಅಮೆರಿಕದ ಮಾಡೆರ್ನಾ ಎಂಬ ಇನ್ನೊಂದು ಬಯೋಟೆಕ್ ಸಂಸ್ಥೆಯೂ ಇದೇ ಮಾದರಿಯ ಎಂಆರ್‌ಎನ್‌ಎ-1273 ಎಂಬ ಹೆಸರಿನ ಲಸಿಕೆ ಪ್ರಯೋಗ ನಡೆಸುತ್ತಿದ್ದು, ಅದನ್ನು ಅಮೆರಿಕದ ಸರಕಾರದ ಆರೋಗ್ಯ ಸೇವಾ ವಿಭಾಗ ಬೆಂಬಲಿಸುತ್ತಿದೆ. ಬಹುಶಃ 2021ರ ಕೊನೆಯಲ್ಲಿ ಇವು ಬಳಕೆಗೆ ಸಿಗಬಹುದು.

ಮೊದಲ ಪ್ರಯೋಗಕ್ಕೊಳಗಾದವಳು ಸತ್ತಿಲ್ಲ
ಅಮೆರಿಕದ ಆಕ್ಸ್‌ಫರ್ಡ್‌ ಯೂನಿವರ್ಸಿಟಿಯಲ್ಲಿ ಕೆಲವರ ಮೇಲೆ ನೂತನ ಲಸಿಕೆಯ ಪ್ರಯೋಗ ಮಾಡಲಾಗಿದೆ. ಈ ಮೊದಲ ಹಂತದ ಪ್ರಯೋಗದಲ್ಲಿ ಮೊದಲನೆಯವಳಾಗಿ ಪಾಲ್ಗೊಂಡಿದ್ದ ಡಾ. ಎಲಿಸಾ ಗ್ರನಾಟೋ ಎಂಬ ವಿಜ್ಞಾನಿ ಸತ್ತಿದ್ದಾಳೆ ಎಂದು ಸುದ್ದಿ ಹಬ್ಬಿತ್ತು. ಆದರೆ ಆಕೆ ಆರೋಗ್ಯವಂತಳಾಗಿದ್ದು, ಪ್ರಯೋಗ ಮುನ್ನಡೆಯುತ್ತಿದೆ.

ಚೀನಾದಲ್ಲಿ ಮಾನವ ಪ್ರಯೋಗ
ಚೀನಾದ ಜೀವತಂತ್ರಜ್ಞಾನ ಸಂಸ್ಥೆ ಕ್ಯಾನ್ಸಿನೊ ಬಯಾಲಜಿಕ್ಸ್ ಹಾಗೂ ಪೀಪಲ್ಸ್ ಲಿಬರೇಶನ್ ಆರ್ಮಿ ಸೇರಿಕೊಂಡು, ಜಗತ್ತಿನ ಮೊತ್ತ ಮೊದಲ ಹ್ಯೂಮನ್ ಟ್ರಯಲ್ ಆರಂಭಿಸಿವೆ. ಇದನ್ನು ಎಡಿ5-ಎನ್‌ಸಿಒವಿ ಎಂದು ಕರೆಯಲಾಗಿದೆ. ಸದ್ಯಕ್ಕೆ ಇದೇ ತೀವ್ರ ವೇಗದಲ್ಲಿ, ಮುಂಚೂಣಿಯಲ್ಲಿರುವ ವ್ಯಾಕ್ಸೀನ್ ಸಂಶೋಧನೆ. ಇದು ಹಾನಿರಹಿತ ಅಡಿನೊವೈರಸ್ ಎಂಬ ವೈರಸ್ಸನ್ನು ಬಳಸಿ, ನೊವೆಲ್ ಕೊರೊನಾ ವೈರಸ್ ಮೇಲ್ಮೈಯಲ್ಲಿರುವ ಮುಳ್ಳಿನಂಥ ರಚನೆಗಳ (ಸ್ಪೈಕ್ಸ್) ಡಿಎನ್ಎಗಳನ್ನು ದೇಹಕ್ಕೆ ಸೇರಿಸುವ ಪ್ರಕ್ರಿಯೆ. ದೇಹದೊಳಗೆ ಇವು ಪ್ರತಿರೋಧ ಶಕ್ತಿಯನ್ನು ಪ್ರಚೋದಿಸಿ, ಕೊರೊನಾ ವೈರಸನ್ನು ಎದುರಿಸಬಲ್ಲ ಪ್ರತಿಕಾಯಗಳನ್ನು ಸೃಷ್ಟಿಸಬಹುದು ಎಂಬ ಥಿಯರಿ. ಬಹುಶಃ ಮುಂದಿನ ಆರು ತಿಂಗಳಲ್ಲಿ ಈ ಪ್ರಕ್ರಿಯೆ ತುದಿ ಮುಟ್ಟಬಹುದು. ಮುಂದಿನ ವರ್ಷದ ಆರಂಭದಲ್ಲಿ ಬಳಕೆಗೆ ದೊರೆಯಬಹುದು. ಹೀಗೇ ಇನ್ನೂ ಅನೇಕ ಚೀನಾ ಕಂಪನಿಗಳು ಪ್ರಯೋಗದಲ್ಲಿ ತುಂಬಾ ಮುಂದಿವೆ.

ಬ್ರಿಟಿಷ್ ಪ್ರಯೋಗ
ಆಕ್ಸ್‌ಫರ್ಡ್‌ ಯೂನಿವರ್ಸಿಟಿಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಈ ಪ್ರಯೋಗ ಹೆಚ್ಚು ಕಡಿಮೆ ಚೀನಾದವರು ನಡೆಸುತ್ತಿರುವ ಎಡಿ5-ಎನ್‌ಸಿಒವಿ ಪ್ರಯೋಗವನ್ನೇ ಹೋಲುತ್ತದೆ. ನೊವೆಲ್ ಕೊರೊನಾ ವೈರಸ್‌ನ ಮೇಲ್ಮೈ ಮುಳ್ಳುಗಳನ್ನು ಬಳಸಿ ರೋಗಿಯಲ್ಲಿ ಪ್ರತಿರೋಧ ಶಕ್ತಿ ಬೆಳೆಸುವುದು ಇದರ ತಿರುಳು. ಇದು ಕೂಡ ಎರಡನೇ ಹಂತದ ಹ್ಯೂಮನ್ ಟ್ರಯಲ್ ಪ್ರವೇಶಿಸಿದೆ. ಈ ಪ್ರಯೋಗದಲ್ಲಿ ಭಾರತದ ಸೇರಮ್ ಇನ್ಸ್‌ಟಿಟ್ಯೂಟ್‌ ಕಂಪನಿ ಕೂಡ ಕೈಜೋಡಿಸಿದೆ. ಈ ಪ್ರಯೋಗದ ಆಯೋಜಕರಿಗೆ ಎಷ್ಟು ಆತ್ಮವಿಶ್ವಾಸವಿದೆ ಎಂದರೆ, ಈ ವರ್ಷ ಸೆಪ್ಟೆಂಬರ್ ಹೊತ್ತಿಗೆ ಹತ್ತು ಲಕ್ಷ ವ್ಯಾಕ್ಸೀನ್ ಡೋಸ್‌ಗಳನ್ನು ಉತ್ಪಾದಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ತೀರಾ ತುರ್ತು ಅಗತ್ಯ ಬಿದ್ದರೆ ಕ್ಲಿನಿಕಲ್ ಟ್ರಯಲ್‌ಗಳ ಫಲಿತಾಂಶ ಹೊರಬೀಳುವ ಮುನ್ನವೇ ಲಕ್ಷಾಂತರ ಮಂದಿಗೆ ಡೋಸ್ ನೀಡಲು ರೆಡಿಯಾಗುತ್ತಿದೆ.
ಮುಂದಿನ ತಿಂಗಳು ಭಾರತದಲ್ಲೂ ಮಾನವ ಪ್ರಯೋಗ: ಭಾರತದ ಸೇರಮ್ ಇನ್ಸ್‌ಟಿಟ್ಯೂಟ್‌ ಕಂಪನಿ, ಮುಂದಿನ ತಿಂಗಳಿನಲ್ಲಿ ಭಾರತದಲ್ಲಿ ಕೂಡ ಲಸಿಕೆಯ ಮಾನವ ಪ್ರಯೋಗ ನಡೆಸುವುದಾಗಿ ಹೇಳಿಕೊಂಡಿದೆ. ಅಮೆರಿಕ ಹಾಗೂ ಬ್ರಿಟನ್ ಕಂಪನಿಗಳ ಜೊತೆಗೆ ಕೈ ಜೋಡಿಸಿರುವ ಸೇರಮ್, ತನ್ನದೇ ಉತ್ಪಾದನೆಯಾದ ಬಿಸಿಜಿ ವ್ಯಾಕ್ಸೀನ್‌ಗಳನ್ನು ಕೂಡ ಸುಧಾರಿಸಿ ಹೊರತರುತ್ತಿದೆ. ಹೊಸ ಕೋವಿಡ್ ಲಸಿಕೆಯನ್ನು ರೂ.1000 ದರಕ್ಕೆ ನೀಡಬಹುದು ಎಂದು ಅದು ಹೇಳಿಕೊಂಡಿದೆ.

ಒಟ್ಟು ಲಸಿಕೆ ಪ್ರಯೋಗಗಳು – 78
ಲಸಿಕೆ ಸಂಶೋಧಿಸುತ್ತಿರುವ ಕಂಪನಿಗಳು – 35
ಮನುಷ್ಯರ ಮೇಲೆ ಪ್ರಯೋಗ – 07
ಭಾರತೀಯ ಕಂಪನಿಗಳು – 06

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top