ಬ್ಯಾಂಕ್‌ಗಳಲ್ಲಿ ನಿಮ್ಮ ಹಣ ಎಷ್ಟು ಸುರಕ್ಷಿತ?

– ವಿವಾದಾತ್ಮಕ ವಿಧೇಯಕ ಮಂಡನೆಗೆ ಸರಕಾರ ಸಿದ್ಧತೆ?
– ಎಫ್‌ಆರ್‌ಡಿಐ ಬದಲಿಗೆ ಎಫ್‌ಎಸ್‌ಡಿಆರ್‌ ವಿಧೇಯಕ ಸಂಭವ.

ಭವಿಷ್ಯದ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ನೀವು ಇಡುವ ಹಣ ಎಷ್ಟು ಸುರಕ್ಷಿತ?
ಬ್ಯಾಂಕ್‌ಗಳಲ್ಲಿ ನೀವು ಇಡುವ ಉಳಿತಾಯದ ಡಿಪಾಸಿಟ್‌ ಅಥವಾ ಹಣಕ್ಕೆ ನೇರವಾಗಿ ಸಂಬಂಧಿಸಿದ, ಮೂರು ವರ್ಷಗಳ ಹಿಂದೆ ಕೋಲಾಹಲ ಸೃಷ್ಟಿಸಿ ಕಣ್ಮರೆಯಾಗಿದ್ದ, ಎಫ್‌ಆರ್‌ಡಿಐ ಎಂಬ ವಿಧೇಯಕದ ಬದಲಿಗೆ, ಮತ್ತೊಂದು ಪರಿಷ್ಕೃತ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲು ಸರಕಾರ ಯತ್ನಿಸುತ್ತಿದೆ. ಆದರೆ ಇದೂ ಕೂಡ ವಿವಾದಕ್ಕೀಡಾಗಿರುವುದೇ ಈ ಪ್ರಶ್ನೆಗೆ ಕಾರಣ.
‘‘ಹಳೆಯ ಫೈನಾನ್ಷಿಯಲ್‌ ರೆಸೆಲ್ಯೂಷನ್‌ ಆ್ಯಂಡ್‌ ಡಿಪಾಸಿಟ್‌ ಇನ್ಷೂರೆನ್ಸ್‌- ಎಫ್‌ಆರ್‌ಡಿಐ ವಿಧೇಯಕದ ಬದಲಿಗೆ, ‘ಹಣಕಾಸು ವಲಯ ಅಭಿವೃದ್ಧಿ ಮತ್ತು ನಿಯಂತ್ರಣ ವಿಧೇಯಕ- 2019’ವನ್ನು (ಫೈನಾನ್ಷಿಯಲ್‌ ಸೆಕ್ಟರ್‌ ಡೆವಲಪ್‌ಮೆಂಟ್‌ ಆ್ಯಂಡ್‌ ರೆಗ್ಯುಲೇಷನ್‌ (ರೆಸೆಲ್ಯೂಷನ್‌) ಬಿಲ್‌, ಚುಟುಕಾಗಿ-ಎಫ್‌ಎಸ್‌ಡಿಆರ್‌) ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆದು ಸಂಸತ್ತಿನಲ್ಲಿ ಮಂಡಿಸಲು ಸಿದ್ಧತೆ ನಡೆದಿದೆ.
ಈ ಎಫ್‌ಎಸ್‌ಡಿಆರ್‌ ವಿಧೇಯಕದ ಕರಡಿನಲ್ಲಿ ಏನೇನಿದೆ ಎಂಬ ವಿವರಗಳನ್ನು ಸರಕಾರ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಸಚಿವ ಸಂಪುಟಕ್ಕೆ ಸಲ್ಲಿಸಲು ಹಣಕಾಸು ಇಲಾಖೆ ಸಿದ್ಧಪಡಿಸಿರುವ ಟಿಪ್ಪಣಿ ಬಗ್ಗೆ ವರದಿಯಾಗಿದ್ದು, ಚಿಂತಕರ ಚಾವಡಿಯಲ್ಲಿ ಕಳವಳ ವ್ಯಕ್ತವಾಗಿದೆ. ಎಫ್‌ಆರ್‌ಡಿಎಗೂ ಎಫ್‌ಎಸ್‌ಡಿಆರ್‌ ವಿಧೇಯಕಕ್ಕೂ ಅಂಥ ವ್ಯತ್ಯಾಸವೇನೂ ಇಲ್ಲ, ‘ಅಳಿಯ ಅಲ್ಲ, ಮಗಳ ಗಂಡ’ ಎಂಬ ವಾಡಿಕೆಯ ಮಾತಿನಂತೆ ಹಳೆಯ ವಿವಾದಾತ್ಮಕ ಪ್ರಸ್ತಾಪಗಳನ್ನೇ ಮತ್ತೊಂದು ಹೆಸರಿನಲ್ಲಿ ಸೇರಿಸಲಾಗಿದೆ. ಇದರಿಂದ ಜನತೆ, ಮುಖ್ಯವಾಗಿ ಸಣ್ಣ ಉಳಿತಾಯಗಾರರು ಸಾರ್ವಜನಿಕ, ಖಾಸಗಿ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳಲ್ಲಿ ಇರುವ ಉಳಿತಾಯದ ಹಣ, ಠೇವಣಿಗಳಿಗೆ ಭವಿಷ್ಯದ ದಿನಗಳಲ್ಲಿ ಭದ್ರತೆ ಕಡಿಮೆಯಾಗಲಿದೆ. ಬ್ಯಾಂಕ್‌ಗಳ ಬಗ್ಗೆ ಜನತೆಯಲ್ಲಿ ವಿಶ್ವಾಸ ನಶಿಸಿಹೋಗುವ ಅಪಾಯ ಇದೆ ಎಂದು ಆರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಎಫ್‌ಎಸ್‌ಡಿಆರ್‌ ಉದ್ದೇಶವೇನು?
ಯಾವುದಾದರೂ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್‌ ತನ್ನ ವ್ಯವಹಾರದಲ್ಲಿ ಮುಗ್ಗರಿಸಿ ಪತನವಾದ ಸಂದರ್ಭ, ಬಿಕ್ಕಟ್ಟಿನ ಇತ್ಯರ್ಥಕ್ಕೆ, ಸಂಬಂಧಿಸಿದ ನಾನಾ ಕಾನೂನಾತ್ಮಕ ಮತ್ತು ನಿಯಂತ್ರಕ ಕ್ರಮಗಳನ್ನು ಸಂಯೋಜಿಸಿ, ಅಪೂರ್ಣವಾಗಿರುವ ನಿಯಮಾವಳಿಗಳನ್ನು ಸರಿಪಡಿಸಿ, ವ್ಯವಸ್ಥೆಗೊಳಿಸುವುದು ಎಫ್‌ಎಸ್‌ಡಿಆರ್‌ ವಿಧೇಯಕದ ಉದ್ದೇಶ ಎಂದು ಸರಕಾರ ಪ್ರತಿಪಾದಿಸಿದೆ. ಈ ವಿಧೇಯಕವು ಕಾಯಿದೆಯಾಗಿ ಜಾರಿಯಾದರೆ, ಅದರ ವ್ಯಾಪ್ತಿಗೆ ಎಲ್ಲ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ), ಸಹಕಾರ ಬ್ಯಾಂಕ್‌ಗಳು, ವಿಮೆ ಕಂಪನಿಗಳು, ಪೇಮೆಂಟ್‌ ಸಿಸ್ಟಮ್‌ಗಳು, ಇತರ ಹಣಕಾಸು ಸೇವೆಗಳು ಎಲ್ಲವೂ ಬರಲಿದೆ. ಷೇರು ವಿನಿಮಯ ಕೇಂದ್ರಗಳು, ಮ್ಯೂಚುವಲ್‌ ಫಂಡ್‌, ಕ್ಲಿಯರಿಂಗ್‌ ಹೌಸ್‌, ಕ್ಯಾಪಿಟಲ್‌ ಮಾರ್ಕೆಟ್‌ ಇಂಟರ್‌ ಮೀಡಿಯೇಟರೀಸ್‌ಗಳೂ ಇದರ ವ್ಯಾಪ್ತಿಗೆ ಒಳಪಡಲಿವೆ.
ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬ್ಯಾಂಕ್‌ಗಳು ರೋಗಗ್ರಸ್ತವಾದಾಗ ಪರಿಹಾರೋಪಾಯಗಳ ವಿಲೇವಾರಿ ಬಗ್ಗೆ ಗಟ್ಟಿಯಾದ ಕಾನೂನು ಮತ್ತು ನಿಯಂತ್ರಕ ವ್ಯವಸ್ಥೆಯನ್ನು ಹೊಂದಿಲ್ಲ. ಹೊಸ ಎಫ್‌ಎಸ್‌ಡಿಆರ್‌ ವಿಧೇಯಕದ ಪರಿಣಾಮ ಬ್ಯಾಂಕ್‌ಗಳಿಗೆ ‘ನಿರ್ಣಾಯಕ ಅಧಿಕಾರ’ಗಳು ಸಿಗಲಿವೆ. ಅಂದರೆ ಗ್ರಾಹಕರ ಜತೆಗೆ ಹೊಂದಿರುವ ಒಪ್ಪಂದವನ್ನು ಅಥವಾ ಬದ್ಧತೆಯನ್ನು ಅಂತ್ಯಗೊಳಿಸುವುದು, ಸಾಲವನ್ನು ಬ್ಯಾಲೆನ್ಸ್‌ ಶೀಟ್‌ನಿಂದ ಪ್ರತ್ಯೇಕಿಸಿ ರೈಟ್‌ ಆಫ್‌ ಮಾಡುವುದು, ಉತ್ತರದಾಯಿತ್ವವನ್ನು ಸುಧಾರಿಸುವುದು ಇತ್ಯಾದಿ ಹೊಸ ಅಧಿಕಾರಗಳು ಬ್ಯಾಂಕ್‌ಗಳ ಆಡಳಿತ ಮಂಡಳಿಗೆ ದೊರೆಯಲಿವೆ ಎಂಬುದು ಸರಕಾರದ ವಾದ.

ಒಂದೇ ವರ್ಷದೊಳಗೆ ಹಿಂತೆಗೆತಕ್ಕೀಡಾದ ಎಫ್‌ಆರ್‌ಡಿಐ
ಈ ಹಿಂದೆ 2017ರಲ್ಲಿ ಪ್ರಸ್ತಾಪವಾಗಿದ್ದ ಫೈನಾನ್ಷಿಯಲ್‌ ರೆಸೆಲ್ಯೂಷನ್‌ ಆ್ಯಂಡ್‌ ಡಿಪಾಸಿಟ್‌ ಇನ್ಷೂರೆನ್ಸ್‌ ಬಿಲ್‌ ಅನ್ನು 2018ರಲ್ಲಿ ಹಿಂತೆಗೆದುಕೊಳ್ಳಲಾಯಿತು. ಲೋಕಸಭೆಯಲ್ಲಿ ಮಂಡನೆಯಾಗಿದ್ದ ಈ ವಿಧೇಯಕದಲ್ಲಿದ್ದ ‘ಬೇಲ್‌ ಇನ್‌’ ಎಂಬ ಪ್ರಸ್ತಾಪಕ್ಕೆ ತೀವ್ರ ಪ್ರತಿರೋಧ ಎದುರಾಗಿತ್ತು. ಬೇಲ್‌ ಇನ್‌ ಪರಿಣಾಮ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳು ದಿವಾಳಿಯಾದ ವೇಳೆ, ಪರಿಹಾರ ಕ್ರಮಗಳಿಗೆ ಬ್ಯಾಂಕ್‌ನಲ್ಲಿರುವ ಠೇವಣಿದಾರರ ಹಣವನ್ನೂ ಬಳಸಿಕೊಳ್ಳಬಹುದು. ವಿಮೆ ಕವರೇಜ್‌ನಲ್ಲಿ ಇರುವಷ್ಟು ಮೊತ್ತ ಹೊರತುಪಡಿಸಿ ಮಿಕ್ಕ ಹಣವನ್ನು ಬ್ಯಾಂಕಿನ ಈಕ್ವಿಟಿಗಳಾಗಿಯೂ ಪರಿವರ್ತಿಸಬಹುದು! ಹೀಗಾಗಿ ಸಣ್ಣ ಉಳಿತಾಯಗಾರರ ವಿಶ್ವಾಸವನ್ನು ಈ ವಿಧೇಯಕ ಗಳಿಸಲಿಲ್ಲ. ಜನತೆಯ ಆಕ್ರೋಶಕ್ಕೆ ಮಣಿದ ಸರಕಾರ ವಿಧೇಯಕವನ್ನು ಹಿಂತೆಗೆದುಕೊಂಡಿತ್ತು.

ಬ್ಯಾಂಕ್‌ ದಿವಾಳಿಯಾದರೆ ಗ್ರಾಹಕರ ದುಡ್ಡು ಬಳಸುವುದೆಷ್ಟು ಸರಿ?
ಬ್ಯಾಂಕ್‌ಗಳು ವಿಫಲವಾಗುವುದು ಹೊಸತೇನಲ್ಲ. ಎಲ್ಲ ದೇಶಗಳಲ್ಲೂ, ಎಲ್ಲ ಕಾಲಗಳಲ್ಲೂ ಇದು ಸಾಮಾನ್ಯ. ಕೊಟ್ಟ ಸಾಲ ಮರು ವಸೂಲಿಯಾಗದೆ ಬ್ಯಾಂಕ್‌ಗಳು ಮುಳುಗುತ್ತವೆ. ನೀರವ್‌ ಮೋದಿ, ಮೆಹುಲ್‌ ಚೋಕ್ಸಿ, ವಿಜಯ್‌ ಮಲ್ಯ ಮೊದಲಾದ ವಿತ್ತಾಪರಾಧಿಗಳೂ ಬ್ಯಾಂಕ್‌ಗಳಲ್ಲಿ ವಸೂಲಾಗದಿರುವ ಸಾಲ ಹೆಚ್ಚಳಕ್ಕೆ ಕಾರಣರಾಗುತ್ತಾರೆ. ನಾನಾ ಮೂಲ ಸೌಕರ್ಯ ವಲಯಗಳ ಅಭಿವೃದ್ಧಿಗೆ ನೀಡಿದ ಸಾಲಗಳೂ ಅನುತ್ಪಾದಕ ಸಾಲಗಳಾಗಿ ಬ್ಯಾಂಕ್‌ಗಳಿಗೆ ಬಿಕ್ಕಟ್ಟು ಎದುರಾದೀತು.
ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕ್‌ಗಳು ಹೀಗೆ ಪತನವಾದಾಗ, ಅದರಲ್ಲಿ ಲಕ್ಷಾಂತರ ಠೇವಣಿದಾರರ ಹಿತಾಸಕ್ತಿಯನ್ನು ರಕ್ಷಿಸಲು, ಬ್ಯಾಂಕಿನ ಉದ್ಯೋಗಿಗಳ ಉದ್ಯೋಗ ಭದ್ರತೆ ಮತ್ತಿತರ ಕಾರಣಗಳಿಂದ ಸರಕಾರ ಮತ್ತು ಆರ್‌ಬಿಐ ಮಧ್ಯಪ್ರವೇಶಿಸುವುದು ಕೂಡ ಹೊಸತಲ್ಲ. ಹಣಕಾಸು ಇಲಾಖೆಯು ತೆರಿಗೆ ಹಣವನ್ನು ಬಳಸಿಕೊಂಡು ಸಂಕಷ್ಟದಲ್ಲಿರುವ ಬ್ಯಾಂಕ್‌ಗಳನ್ನು ರಕ್ಷಿಸುತ್ತದೆ. ಕೆಲವೊಮ್ಮೆ ಬಲಿಷ್ಠ ಬ್ಯಾಂಕ್‌ಗಳ ಜತೆ ವಿಲೀನಗೊಳಿಸುತ್ತದೆ. ಷೇರುಗಳನ್ನು ಖರೀದಿಸುತ್ತದೆ. ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲೆ ಸಾರ್ವಜನಿಕರ ವಿಶ್ವಾಸ ನಷ್ಟವಾಗಕೂಡದು ಎಂಬ ಉದ್ದೇಶದಿಂದ ಇಂಥ ಕ್ರಮಗಳನ್ನು ಕೈಗೊಳ್ಳುತ್ತದೆ. ಬ್ಯಾಂಕ್‌ಗಳೂ ಸುಸ್ತಿ ಸಾಲವನ್ನು ರೈಟ್‌ ಆಫ್‌ ಮಾಡಿ ಕೈತೊಳೆಯುತ್ತವೆ. ಉದಾಹರಣೆಗೆ ಎಸ್‌ಬಿಐ 2013 *2020ರ ಅವಧಿಯಲ್ಲಿ 1.23 ಲಕ್ಷ ಕೋಟಿ ರೂ.ಗಳನ್ನು ರೈಟ್‌ ಆಫ್‌ ಮಾಡಿ ಬ್ಯಾಲೆನ್ಸ್‌ ಶೀಟಿನಿಂದ ಪ್ರತ್ಯೇಕಿಸಿದೆ. ಆದರೆ ರೈಟ್‌ ಆಫ್‌ ಮಾಡಿರುವ ಸಾಲದಲ್ಲಿ ಮರು ವಸೂಲು ಮಾಡಿದ್ದು ಕೇವಲ 8,969 ಕೋಟಿ ರೂ.ಗಳನ್ನು ಮಾತ್ರ! ಇಂಥ ಅನುಮಾನಾಸ್ಪದ ನಡೆಗಳಿಂದ ಜನತೆ ಬ್ಯಾಂಕಿಂಗ್‌ ಮೇಲಿಟ್ಟಿರುವ ವಿಶ್ವಾಸ ನಶಿಸುತ್ತಾ ಹೋಗುತ್ತದೆ. ಕಳೆದ ಹಲವು ವರ್ಷಗಳಿಂದ ಸರಕಾರ, ಬಿಕ್ಕಟ್ಟಿನಲ್ಲಿರುವ ಬ್ಯಾಂಕ್‌ಗಳ ರಕ್ಷ ಣೆಗೆ ಜನರ ತೆರಿಗೆ ಹಣವನ್ನು ಬಳಸುತ್ತಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಅನುತ್ಪಾದಕ ಸಾಲದ ಮೊತ್ತ ಏರುತ್ತಿದೆ. ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇಂಥ ಸಂದರ್ಭದಲ್ಲಿ ವಿಫಲ ಬ್ಯಾಂಕ್‌ಗಳನ್ನು ರಕ್ಷಿಸಲು ಸಣ್ಣ ಉಳಿತಾಯಗಾರರ ಠೇವಣಿ ಹಣವನ್ನು ಯಾವುದೇ ಕಾನೂನಿನ ಅಡಿಯಲ್ಲೂ ಬಳಸಬಾರದು. ಅದನ್ನು ಅವರು ಕೇಳಿದಾಗ ಕೊಡುವಂತಿರಬೇಕು. ವಿವಾದಾತ್ಮಕ ‘ಬೇಲ್‌ ಇನ್‌’ ಅಂಶವನ್ನು ಎಫ್‌ಎಸ್‌ಡಿಆರ್‌ ಹೊಂದಿರದಿದ್ದರೂ, ಗ್ರಾಹಕರೊಡನೆ ಹೊಂದಿರುವ ಒಪ್ಪಂದ ಮತ್ತು ಬಾಧ್ಯತೆಯನ್ನು ಅಂತ್ಯಗೊಳಿಸುವ ಅಧಿಕಾರವನ್ನು ಬ್ಯಾಂಕ್‌ಗಳಿಗೆ ನೀಡುವ ಪ್ರಸ್ತಾಪವನ್ನು ಮುಂದಿಡಲಾಗಿದೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು, ಬೇಲ್‌ ಇನ್‌ ನ ಮತ್ತೊಂದು ರೂಪವಾಗಿದೆ ಎನ್ನುತ್ತಾರೆ ತಜ್ಞರು.

ಸಾರ್ವಜನಿಕ ಬ್ಯಾಂಕ್‌ಗಳಿಗೆ 3.15 ಲಕ್ಷ ಕೋಟಿ ರೂ.
*ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸರಕಾರ 2009-2019ರ ಅವಧಿಯಲ್ಲಿ 3.15 ಲಕ್ಷ ಕೋಟಿ ರೂ. ಹಣದ ನೆರವನ್ನು ನೀಡಿದೆ. ಹೀಗಾಗಿ ವಸೂಲಾಗದ ಸಾಲದ ಹೊರೆಯಿಂದ ಬಳಲುತ್ತಿದ್ದ ಬ್ಯಾಂಕ್‌ಗಳಿಗೆ ವಹಿವಾಟು ಮುಂದುವರಿಸಲು ನೆರವಾಗಿದೆ. ಕಳೆದ ಒಂದೇ ವರ್ಷದಲ್ಲಿ 70 ಸಾವಿರ ಕೋಟಿ ರೂ.ಗಳನ್ನು ಘೋಷಿಸಿತ್ತು. ಖಾಸಗಿ ವಲಯದ ಯಸ್‌ ಬ್ಯಾಂಕ್‌ ಕೆಲ ತಿಂಗಳಿನ ಹಿಂದೆ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದಾಗ ಸರಕಾರ ಮತ್ತು ಆರ್‌ಬಿಐ ಸೂಚನೆಯ ಮೇರೆಗೆ ಸಾರ್ವಜನಿಕ ವಲಯದ ಎಸ್‌ಬಿಐ ಮಧ್ಯಪ್ರವೇಶಿಸಿ, ಯಸ್‌ ಬ್ಯಾಂಕಿನ ಶೇ.49ರಷ್ಟು ಷೇರುಗಳನ್ನು 2,450 ಕೋಟಿ ರೂ. ಹೂಡಿಕೆಯೊಂದಿಗೆ ಖರೀದಿಸಿತ್ತು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top