ಹೊಸ ಸರ್ಕಾರ ಮತ್ತು ಆ ಹದಿನೈದು ಪ್ರಶ್ನೆಗಳು

ಹೌದು… ರಾಜಕೀಯವೇ ಹೊಲಸು ಅನ್ನುತ್ತಾರೆ, ಅದು ಈಗ ಮತ್ತಷ್ಟು ಕದಡಿದಂತೆ ಭಾಸವಾಗುತ್ತಿದೆ. ಅದಕ್ಕೆ ಕಾರಣಗಳು ಹಲವು! ಆದರೆ ಇಲ್ಲೊಂದು ಪ್ರಶ್ನೆಯನ್ನು ನಾವು ಸಹಜವಾಗಿ ಕೇಳಿಕೊಳ್ಳಲೇಬೇಕಿದೆ. ಅದೇನೆಂದರೆ ನಾವೆಷ್ಟೇ ಬೈದರೂ, ಬೇಡವೆಂದರೂ ರಾಜಕೀಯವನ್ನು ಬಿಟ್ಟು ನಾವು ಬದುಕಬಹುದೇ? ಖಂಡಿತವಾಗಿ ಹೌದು ಎಂಬ ಉತ್ತರವನ್ನು ಕೊಡಲು ಸಾಧ್ಯವೇ ಇಲ್ಲ. ಕಾರಣ ಇಷ್ಟೆ, ರಾಜಕೀಯ ನಮ್ಮ ದೇಶದ ವ್ಯವಸ್ಥೆಯ ಅವಿಭಾಜ್ಯ ಅಂಗ. ನಾವೂ ಕೂಡ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಆ ವ್ಯವಸ್ಥೆಯ ಭಾಗವೇ ಆಗಿದ್ದೇವೆ. ಆದ್ದರಿಂದ ಈಗಲೂ ನಾವು ಧನಾತ್ಮಕವಾಗಿ ಆಲೋಚನೆ ಮಾಡಬೇಕೇ ಹೊರತು ಹತಾಶರಾಗಿ ಲೊಚಗುಟ್ಟುವುದರಿಂದ ಪ್ರಯೋಜನವಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ನಂತರ ಆಗಿರುವ, ಮುಂದೆ ಆಗಲಿರುವ ರಾಜಕೀಯ ಬೆಳವಣಿಗೆಗಳನ್ನು ಅವಲೋಕಿಸಬೇಕಿದೆ. ಕಾನೂನಾತ್ಮಕವಾಗಿ/ಸಂಸದೀಯ ಸಂಪ್ರದಾಯದ ಹಿನ್ನೆಲೆಯಲ್ಲಿ/ಜನಾಭಿಪ್ರಾಯದ ಹಿನ್ನೆಲೆಯಲ್ಲಿ/ಇರುವುದರಲ್ಲೇ ಉತ್ತಮ ಆಯ್ಕೆಯ ಹಿನ್ನೆಲೆಯಲ್ಲಿ ಈ ಚರ್ಚೆಯನ್ನು ಮಾಡಬೇಕಾಗುತ್ತದೆ.

ಒಂದೊಂದೇ ಅಂಶಗಳನ್ನು ನೋಡೋಣ…

1 ರಾಜ್ಯಪಾಲರು ತಪ್ಪು ಮಾಡಿದರೇ?: ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಯಡಿಯೂರಪ್ಪನವರನ್ನು ಸರ್ಕಾರ ರಚನೆಗೆ ಆಹ್ವಾನಿಸುವ ಮೂಲಕ ರಾಜ್ಯಪಾಲ ವಜೂಭಾಯಿ ವಾಲಾ ಪ್ರಮಾದ ಮಾಡಿದರೇ? ಇದು ಎಲ್ಲರೂ ಕೇಳಿಕೊಳ್ಳುತ್ತಿರುವ ಮೂಲಭೂತವಾದ ಪ್ರಶ್ನೆ. ಸಾಂವಿಧಾನಿಕ ಅವಕಾಶಗಳ ಹಿನ್ನೆಲೆಯಲ್ಲಿ, ಸಂಪ್ರದಾಯದ ಪ್ರಕಾರವಾಗಿ ಅಥವಾ ವ್ಯಾವಹಾರಿಕವಾಗಿ ನೋಡಿದರೆ ಬಿಎಸ್​ವೈಗೆ ಆಹ್ವಾನ ನೀಡುವ ಮೂಲಕ ರಾಜ್ಯಪಾಲರು ತಪ್ಪೆಸಗಿಲ್ಲ ಎಂದೇ ಹೇಳಬೇಕಾಗುತ್ತದೆ. ಅದಕ್ಕೆ ಹಲವು ಕಾರಣಗಳು ಸಿಗುತ್ತವೆ.

2 ಜನಾಭಿಪ್ರಾಯ ಎತ್ತ ವಾಲಿದೆ?: ಈ ಹಿಂದಿನ ಅವಧಿಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕ ಬಲ 122, ಜೆಡಿಎಸ್ ಪಕ್ಷದ ಎಂಟು ಶಾಸಕರು ಸೇರಿಕೊಂಡ ನಂತರ ಅದು 130 ಆಗಿತ್ತು. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದುಕೊಂಡ ಶಾಸಕ ಸ್ಥಾನಗಳು 75. ಇದನ್ನು ಜನರ ತಿರಸ್ಕಾರ ಎನ್ನೋಣವೇ? ಪುರಸ್ಕಾರ ಎನ್ನೋಣವೇ? ಇನ್ನು ಜೆಡಿಎಸ್ ವಿಚಾರ. ಹಿಂದಿನ ಚುನಾವಣೆಗೆ ಹೋಲಿಸಿದರೆ ಆ ಪಕ್ಷದ ಶಾಸಕ ಸಂಖ್ಯಾಬಲವೂ ಕುಸಿತವಾಗಿದೆ. ಇದರ ನಡುವೆಯೂ ಇಲ್ಲೊಂದು ತರ್ಕವನ್ನು ಮುಂದಿಡಲಾಗುತ್ತಿದೆ. ಅದೇನೆಂದರೆ ಕಾಂಗ್ರೆಸ್+ಜೆಡಿಎಸ್ ಪಡೆದ ಮತಪ್ರಮಾಣ ಒಟ್ಟು ಸೇರಿಸಿದರೆ ಬಿಜೆಪಿ ಪಡೆದ ಮತಗಳ ಪ್ರಮಾಣಕ್ಕಿಂತ ಅದೆಷ್ಟೋ ಹೆಚ್ಚಾಗುತ್ತದೆ ಎಂದು. ಇದು ಪ್ರಯೋಜನಕ್ಕೆ ಬರುವ ವಿಷಯ ಅಲ್ಲ. ಉದಾಹರಣೆಗೆ ಬಹುತೇಕ ಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಿಂತ ಸೋತ ಇತರ ಒಟ್ಟು ಅಭ್ಯರ್ಥಿಗಳು ಪಡೆದ ಒಟ್ಟು ಮತಗಳ ಸಂಖ್ಯೆ ಜಾಸ್ತಿ ಇರುತ್ತದೆ. ಹಾಗಂತ ಅದನ್ನು ಜನಮತ ಎಂದು ಪರಿಗಣಿಸಲು ಸಾಧ್ಯವಿಲ್ಲ. ಕಾರಣ ಇಷ್ಟೆ, ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಗರಿಷ್ಠ ಮತ(ಅದು ಒಂದೇ ಮತದ ಅಂತರವೂ ಇರಬಹುದು) ಪಡೆದ ಅಭ್ಯರ್ಥಿಯೇ ವಿಜಯಿ ಎಂದು ಪರಿಗಣಿಸಲಾಗುತ್ತದೆ. ಹಾಗೆ ವಿಜಯಿಗಳಾದ ಶಾಸಕರ ತಲೆ ಲೆಕ್ಕ ಮಾತ್ರವೇ ಶಾಸನಸಭೆಯ ಒಳಗಡೆ ಪರಿಗಣನೆಗೆ ಬರುವಂಥದ್ದು. ಇದನ್ನು ಬಿಟ್ಟು ಬೇರೆ ಲೆಕ್ಕಾಚಾರಗಳು ಪರಿಗಣನೆಗೆ ಬರುವುದಿಲ್ಲ.

3 ಚುನಾವಣಾಪೂರ್ವ ಮೈತ್ರಿ ಆಗಿದ್ದರೆ…: ಯೆಸ್, ಇದೇ ಜೆಡಿಎಸ್ ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರೆ ರಾಜ್ಯಪಾಲರ ಮುಂದೆ ಬೇರೆ ಆಯ್ಕೆಯೇ ಇರಲು ಸಾಧ್ಯವಿರಲಿಲ್ಲ. ಇಷ್ಟೊತ್ತಿಗೆ ರಾಜ್ಯದಲ್ಲಿ ಜೆಡಿಎಸ್+ಕಾಂಗ್ರೆಸ್ ಸರ್ಕಾರ ಸ್ಥಾಪನೆ ಆಗಿರುತ್ತಿತ್ತು. ಯಾರೂ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದು ಸಾಂಪ್ರದಾಯಿಕವಾಗಿ, ಕಾನೂನಾತ್ಮಕವಾಗಿ ಮತ್ತು ವ್ಯಾವಹಾರಿಕವಾಗಿ ಸಹಜ ಆಯ್ಕೆ ಆಗಿರುತ್ತಿತ್ತು.

4 ಬಿಜೆಪಿಗೆ ಬಹುಮತ ಇಲ್ಲದಿರುವ ಸಂಗತಿ ರಾಜ್ಯಪಾಲರಿಗೆ ಅರಿವಿಲ್ಲವೇ?: ಹಾಗೆ ಹೇಳಲು ಸಾಧ್ಯವಿಲ್ಲ. ಸರಳ ಬಹುಮತಕ್ಕೆ ಬೇಕಾದಷ್ಟು ಸಂಖ್ಯಾಬಲ ಬಿಜೆಪಿ ಬಳಿ ಇಲ್ಲ ಎಂಬುದು ರಾಜ್ಯಪಾಲರಿಗೆ ಅರಿವಿದ್ದರೂ ಸಹ, ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಮತ್ತು ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವ ಪಕ್ಷಕ್ಕೇ ಸರ್ಕಾರ ರಚನೆಗೆ ಮೊದಲು ಆಹ್ವಾನ ನೀಡಬೇಕಾಗುತ್ತದೆ. ಈಗ ರಾಜ್ಯಪಾಲರು ಮಾಡಿರುವುದೂ ಅದನ್ನೇ. ಒಂದು ವೇಳೆ ಸರ್ಕಾರ ರಚನೆಗೆ ಬಿಜೆಪಿ ಹಕ್ಕು ಮಂಡಿಸದೇ ಹೋದಲ್ಲಿ ಕಾಂಗ್ರೆಸ್ ಪಕ್ಷವನ್ನೋ, ಇಲ್ಲ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಪಕ್ಷವನ್ನೋ ಸರ್ಕಾರ ರಚನೆಗೆ ಆಹ್ವಾನಿಸಬೇಕಾಗುತ್ತಿತ್ತು. ಅನ್ಯ ಆಯ್ಕೆ ಇರುತ್ತಿರಲಿಲ್ಲ.

5 ವ್ಯಾವಹಾರಿಕ ಅವಕಾಶ ಮತ್ತು ಸಂಪ್ರದಾಯ ಏನು?: ಇದಕ್ಕೊಂದು ಉತ್ತಮ ಉದಾಹರಣೆ ಇದೆ. ಈ ಹಿಂದೆ 1990ರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಸರಳ ಬಹುಮತಕ್ಕೆ ಅಗತ್ಯ ಸಂಖ್ಯಾಬಲ ಇಲ್ಲದ ಕಾರಣಕ್ಕೆ ಆಗಿನ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ರಾಜೀವ್ ಗಾಂಧಿ ಸರ್ಕಾರ ರಚನೆಗೆ ನಿರಾಕರಿಸಿದ್ದರಿಂದ ಮತ್ತು ಆ ಪಕ್ಷ ಬೆಂಬಲಿಸಿದ್ದ ಕಾರಣಕ್ಕೆ ಕೇವಲ 50 ಲೋಕಸಭಾ ಸದಸ್ಯರನ್ನು ಹೊಂದಿದ್ದ ಸಮಾಜವಾದಿ ಜನತಾ ಪಕ್ಷದ ನಾಯಕ ಚಂದ್ರಶೇಖರ್ ಅವರನ್ನೇ ಸರ್ಕಾರ ರಚನೆಗೆ ರಾಷ್ಟ್ರಪತಿಗಳು ಆಹ್ವಾನಿಸಿದ್ದರು. ಆದರೆ, ರಾಜೀವ್ ಗಾಂಧಿ ಸರ್ಕಾರ ರಚಿಸಿದ್ದರೆ ಎಷ್ಟು ದಿನ ಬಾಳಬಹುದಿತ್ತೋ ಅಷ್ಟು ದಿನ ಚಂದ್ರಶೇಖರ್ ಸರ್ಕಾರ ಬಾಳಲಿಲ್ಲ. ಏಕೆಂದರೆ ಬಾಲವೇ ದೇಹವನ್ನು ಅಲ್ಲಾಡಿಸುತ್ತಿತ್ತು. ಈಗಲೂ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅದೇ ತೆರನಾಗಿರುವುದನ್ನು ಗಮನಿಸಬೇಕಿದೆ.

6 ರೆಸಾರ್ಟ್ ರಾಜಕಾರಣಕ್ಕೂ/ಕುದುರೆ,ಕತ್ತೆಗಳ ವ್ಯಾಪಾರಕ್ಕೂ ರಾಜ್ಯಪಾಲರಿಗೂ ಎಲ್ಲಿಯ ಸಂಬಂಧ?: ಈ ವಿಚಾರದಲ್ಲಿ ರಾಜ್ಯಪಾಲರ ಹೆಸರನ್ನು ತಳುಕು ಹಾಕುವುದು ಸರಿ ಕಾಣುವುದಿಲ್ಲ. ಏಕೆಂದರೆ ಈ ಬೆಳವಣಿಗೆ ಎಲ್ಲಾ ಪಕ್ಷಗಳೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯ. ತತ್ವ,ಸಿದ್ಧಾಂತ, ರಾಜಕೀಯ ಬದ್ಧತೆಗಳು ಎಷ್ಟು ಟೊಳ್ಳು ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ. ಈ ಅಪವಾದಕ್ಕೆ ಯಾವ ಪಕ್ಷವೂ ಹೊರತಲ್ಲ. ಇಂದು ಕಾಂಗ್ರೆಸ್, ಜೆಡಿಎಸ್ ಬೆಲೆ ತೆರುತ್ತಿದ್ದರೆ ಮುಂದೆ ಬಿಜೆಪಿ ಬೆಲೆ ತೆರಬೇಕಾಗುತ್ತದೆ ಅಷ್ಟೆ. ಮತ್ತೇನೂ ಇಲ್ಲ.

7 ರಾಜ್ಯಪಾಲರು ಪಕ್ಷಪಾತಿಯೇ?: ಇದು ನಿಜವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಉತ್ತರ ಕೊಡಬೇಕಾಗಿರುವ ಪ್ರಶ್ನೆ. ಅಥವಾ ಕಳೆದ ನಾಲ್ಕು ವರ್ಷಗಳಿಂದ ಅಂದರೆ ಸಿದ್ದರಾಮಯ್ಯ ಅಧಿಕಾರಾವಧಿಯುದ್ದಕ್ಕೂ ರಾಜ್ಯಪಾಲರಾಗಿ ಕೆಲಸ ಮಾಡಿರುವ ವಜೂಭಾಯ್ ವಾಲಾ ಜಾಗಾದಲ್ಲಿ ಈ ಹಿಂದೆ ಇದೇ ರಾಜಭವನದಲ್ಲಿ ವಿರಾಜಮಾನರಾಗಿದ್ದ ಹಂಸರಾಜ್ ಭಾರದ್ವಾಜ್ ಅವರನ್ನು ಕಲ್ಪಿಸಿಕೊಂಡರೆ ಎಂಥವನಿಗೂ ಉತ್ತರ ಸಿಕ್ಕಿಬಿಡುತ್ತದೆ. ಈ ರಾಜ್ಯಪಾಲರು ರಾಜಭವನದ ಘನತೆ/ಗೌರವಗಳನ್ನು ಕಾಪಾಡಿದ್ದಾರೋ? ಕಳೆದಿದ್ದಾರೋ? ಎಂಬುದು ಗೊತ್ತಾಗುತ್ತದೆ. ಈ ರಾಜ್ಯಪಾಲರು ಯಾವುದಾದರೂ ಸಂದರ್ಭದಲ್ಲಿ ಮಾಧ್ಯಮದ ಮುಂದೆ ಬಂದಿದ್ದರೇ? ಸಿದ್ದರಾಮಯ್ಯನವರ ವಿರುದ್ಧ ಸಲ್ಲಿಸಿದ ದೂರುಗಳಿಗೆಲ್ಲ ಪ್ರಾಸಿಕ್ಯೂಷನ್ನಿಗೆ ಅವಕಾಶ ನೀಡಿದರೇ? ಸಿದ್ದರಾಮಯ್ಯ ಸರ್ಕಾರದ ವಿರುದ್ಧ ದೂರು ತೆಗೆದುಕೊಂಡು ಹೋದ ಬಿಜೆಪಿ ನಾಯಕರನ್ನೆಲ್ಲರನ್ನೂ ರಾಜಭವನದ ಒಳಕ್ಕೆ ಬಿಟ್ಟುಕೊಂಡರೇ? ಎಲ್ಲ ರಾಜ್ಯಪಾಲರೂ ಇವರಂತೆಯೇ ಇದ್ದರೆ ನಮ್ಮ ಸಂವಿಧಾನದ ಆಶಯಕ್ಕೆ ಬೆಲೆ ಬರುವುದರಲ್ಲಿ ಅನುಮಾನವಿಲ್ಲ.

8 ರೆಸಾರ್ಟ್ ರಾಜಕಾರಣಕ್ಕೆ/ಕುದುರೆ ವ್ಯಾಪಾರಕ್ಕೆ ರಾಜ್ಯಪಾಲರು ಕಾರಣವೇ?: ಈ ಪ್ರಶ್ನೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸುಪ್ರೀಂಕೋರ್ಟ್ ಮುಂದಿಟ್ಟಿದ್ದವು ಕೂಡ. ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹೊರತಾಗಿಯೂ ಹೇಳುವುದಾದರೆ ರಾಜಕೀಯ ಪಕ್ಷಗಳು ಶಾಸಕರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡರೆ ಅಥವಾ ಶಾಸಕನಾಗುವವನಿಗೆ ಕನಿಷ್ಠ ತಿಳಿವಳಿಕೆ ಇರುವಂತಿದ್ದರೆ ಇವೆಲ್ಲ ಅಪಸವ್ಯಗಳಿಗೆ ಅವಕಾಶವೇ ಇರುವುದಿಲ್ಲ.

9 ರಾಜ್ಯಪಾಲರು ಮಾಡಿದ ತಪ್ಪು ಯಾವುದು?:ಹೇಳಬಹುದು ಎಂದರೆ ಬಹುಮತ ಸಾಬೀತು ಮಾಡಲು ಯಡಿಯೂರಪ್ಪನವರಿಗೆ ಹದಿನೈದು ದಿನ ಕಾಲಾವಕಾಶ ಕೊಟ್ಟದ್ದು. ಇಲ್ಲಿ ಇನ್ನೂ ಒಂದು ಸಂಗತಿ ಎಂದರೆ ರಾಜ್ಯಪಾಲರು ಹದಿನೈದು ದಿನದ ಒಳಗೆ ಎಂದಿದ್ದರು. ಅದು ಎರಡು ದಿನವೂ ಆಗಬಹುದು. ಹನ್ನೆರಡು ದಿನವೂ ಆಗಬಹುದು. ಆದರೆ ಇದೂ ಕೂಡ ಅವರ ವಿವೇಚನಾಧಿಕಾರದ ವ್ಯಾಪ್ತಿಗೇ ಬರುತ್ತದೆ.

10 ಕಾಂಗ್ರೆಸ್/ಜೆಡಿಎಸ್ ನಾಯಕರು ಆತುರಪಟ್ಟರೇ?: ಮೇಲ್ನೋಟಕ್ಕೆ ಹಾಗೆ ಕಾಣುವುದು ನಿಜ. ರಾಜಕೀಯದಲ್ಲಿ ಮೌಲ್ಯಗಳಿಗಿಂತ ಅಧಿಕಾರವೇ ಮುಖ್ಯವಾಗಬಾರದು ಎನ್ನುವವರು ಈ ಮಾತನ್ನು ಒಪ್ಪುತ್ತಾರೆ. ಕಾಂಗ್ರೆಸ್/ಜೆಡಿಎಸ್ ನಾಯಕರು ಆತುರ ಮಾಡದೇ ಕಾದಿದ್ದರೆ ಅಧಿಕಾರವೂ ಸಿಗಬಹುದಿತ್ತು. ಕೊನೇ ಪಕ್ಷ ಘನತೆ/ಗೌರವಕ್ಕಾದರೂ ಚ್ಯುತಿ ಬರುತ್ತಿರಲಿಲ್ಲ.

11 ಮತದಾರರ ತಪ್ಪಿಲ್ಲವೇ?: ಈಗಿನ ರಾಜಕೀಯ ಪರಿಸ್ಥಿತಿ ನೋಡಿ ಲೊಚಗುಟ್ಟುವಾಗ ಇದರಲ್ಲಿ ರಾಜಕಾರಣಿಗಳದು ಮಾತ್ರವಲ್ಲ, ಮತದಾರರ ತಪ್ಪೂ ಇದೆ ಎಂಬುದನ್ನು ಅರಿಯಬೇಕು. ಸ್ಪಷ್ಟ ಜನಾದೇಶ ಕೊಡದ, ಜಾತಿ, ಧರ್ಮ, ಪ್ರದೇಶದ ಹೆಸರಲ್ಲಿ ಪ್ರಕಟವಾಗುವ ಜನಾದೇಶವೇ ಈಗ ಕಾಣುತ್ತಿರುವ ಅವಾಂತರಗಳಿಗೆ ಮುಖ್ಯವಾದ ಕಾರಣ.

12 ಇವರೆಲ್ಲ ಪಕ್ಷ ರಾಜಕೀಯದಿಂದ ಹೊರತಾಗಿರಬೇಕೆಂಬುದು ಆಶಯ: ರಾಜ್ಯಪಾಲರ ರಾಜಕೀಯ ಹಿನ್ನೆಲೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಯನ್ನು ಗಮನಿಸುತ್ತಿದ್ದೆ. ಈಗಿನ ರಾಜ್ಯಪಾಲರು ರಾಜಕೀಯ ಹಿನ್ನೆಲೆಯವರು ಎನ್ನುವುದಾದರೆ ಈ ಹಿಂದಿನ ರಾಜ್ಯಪಾಲರು ಲೋಕಸೇವಾ ಆಯೋಗದಿಂದ ನೇಮಕವಾಗುತ್ತಿದ್ದರೇ? ಎಂದು ಒಬ್ಬರು ಕಾಲೆಳೆದಿದ್ದರು. ಇಂತಹ ಚರ್ಚೆ ಕುತೂಹಲಕರ, ಚಿಂತನಾರ್ಹ.

13 ವಿವೇಚನಾಧಿಕಾರದ ಪ್ರಶ್ನೆ: ರಾಜ್ಯಪಾಲರು ಮಾತ್ರವಲ್ಲ, ನ್ಯಾಯಾಧೀಶರು, ಶಾಸನಸಭೆಗಳ ಸಭಾಧ್ಯಕ್ಷರು, ಸಭಾಪತಿಗಳು ಕೊಡುವ ತೀರ್ವನ, ಸೂಚನೆಗಳಿಗೆ ನಮ್ಮ ವ್ಯವಸ್ಥೆಯಲ್ಲಿ ಬಹಳ ಮಹತ್ವವಿದೆ. ಆ ಸ್ಥಾನದಲ್ಲಿ ಕುಳಿತವರು ತೆಗೆದುಕೊಳ್ಳುವ ತೀರ್ವನಗಳು ಸಂದರ್ಭಕ್ಕನುಸಾರವಾಗಿ ಹಲವು ಅರ್ಥವನ್ನು ಪಡೆದುಕೊಳ್ಳುತ್ತವೆ. ಕೆಲವೊಮ್ಮೆ ಅನರ್ಥಕ್ಕೂ ಎಡೆಮಾಡಿಕೊಡುತ್ತವೆ.

14 ಬಿಜೆಪಿ ಮಾಡಿದ ಒಂದು ಒಳ್ಳೆಯ ಕೆಲಸ:ಕುದುರೆ ವ್ಯಾಪಾರದ ವಿಷಯದಲ್ಲಿ ಜೆಡಿಎಸ್/ಕಾಂಗ್ರೆಸ್ಸಿಗೆ ಎಷ್ಟು ಆತಂಕ ಇದೆಯೋ ಅಷ್ಟೇ ಆತಂಕ ಮತ್ತು ಒತ್ತಡ ಬಿಜೆಪಿ ಶಾಸಕರ ಮೇಲೂ ಇದ್ದೇ ಇತ್ತು. ಆದರೂ ಆ ಪಕ್ಷ ತನ್ನ ಶಾಸಕರನ್ನು ರೆಸಾರ್ಟ್​ನಲ್ಲಿ ಕೂಡಿಹಾಕಲು ಹೋಗಲಿಲ್ಲ. ವ್ಯವಸ್ಥೆಯ ಹಿತದೃಷ್ಟಿಯಿಂದ ಇದೊಂದು ಉತ್ತಮ ಬೆಳವಣಿಗೆ.

15 ಈಗ ನಡೆಯಬಾರದ್ದು ನಡೆಯುತ್ತಿದೆಯೇ?:ರಾಜಭವನದ ದುರ್ಬಳಕೆ, ಶಾಸಕರ ರೆಸಾರ್ಟ್ ವಾಸ, ಶಾಸಕರ ಖರೀದಿ ಇವೆಲ್ಲ ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೊಸದಲ್ಲ. ರಾತ್ರೋರಾತ್ರಿ ಈ ದೇಶದಲ್ಲಿ ಅನ್ಯಪಕ್ಷಗಳ ಹತ್ತಾರು ಸರ್ಕಾರಗಳನ್ನು ವಜಾಗೊಳಿಸಿದ ಉದಾಹರಣೆ ಇದೆ. ರಾಷ್ಟ್ರಪತಿ-ರಾಜ್ಯಪಾಲರನ್ನೆಲ್ಲ ರಬ್ಬರ್ ಸ್ಟಾಂಪ್ ಮಾಡಿಕೊಂಡ ಬೇಕಾದಷ್ಟು ನಿದರ್ಶನಗಳಿವೆ. ಬಾಕಿ ಎಲ್ಲ ಯಾತಕ್ಕೆ? ದೇಶದ ಮೇಲೆ ತುರ್ತಪರಿಸ್ಥಿತಿ ಹೇರಿದ ಉದಾಹರಣೆಯೇ ಇದೆಯಲ್ಲ! ಅದಕ್ಕೆ ಹೋಲಿಸಿದರೆ ಈಗ ಎಷ್ಟೋ ಪಾಲು ವಾಸಿ. ಇದಕ್ಕೆಲ್ಲ ಕಾರಣ ಯಾವುದನ್ನೂ ಮುಚ್ಚಿಡಲಾಗದ, ಎಲ್ಲರಿಗೂ ಚರ್ಚೆಯ ಅವಕಾಶ ಮಾಡಿಕೊಟ್ಟ ಮಾಧ್ಯಮ ಕ್ರಾಂತಿಗೆ ಭಲೇ ಎನ್ನಲೇಬೇಕು.

ಕೊನೇ ಹನಿ: ಗುಜರಾತಿನ ಮೂವರು ಸೇರಿಕೊಂಡು ವ್ಯಾಪಾರ ಮಾಡುತ್ತಿದ್ದಾರೆಂದು ಜರಿದು ಪ್ರತಿಭಟನೆಗೆ ಕುಳಿತಲ್ಲಿ ಎದುರಿಗಿದ್ದ ಮೂರ್ತಿಯೂ ಅದೇ ಗುಜರಾತಿನದ್ದೇ ಆಗಿತ್ತು… ಏನು ಮಾಡುವುದು ಪ್ರಾರಬ್ಧ!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top