ಎಲ್ಲ ಸರಾಗವಾಗಿ ನಡೆದುಕೊಂಡು ಹೋಗುತ್ತಿರುವಾಗ ದಿಢೀರ್ ಎದುರಾಗುವ ಸವಾಲುಗಳು ನಮ್ಮ ಮನೋಬಲವನ್ನು ಕುಂದಿಸಿ, ನಾವು ಋಣಾತ್ಮಕವಾಗಿ ಚಿಂತಿಸುವಂತೆ ಮಾಡುವುದು ಸಹಜ. ಕೊರೊನಾ ಸೃಷ್ಟಿಸಿರುವ ಆವಾಂತರವೂ ಇದಕ್ಕೆ ಹೊರತಲ್ಲ. ಈ ಆರೋಗ್ಯ ಸಂಬಂಧಿ ತುರ್ತು ಪರಿಸ್ಥಿತಿಯಿಂದಾಗಿ ನಾವು ಎಲ್ಲವನ್ನು ಕಳೆದುಕೊಂಡು ಬಿಟ್ಟೆವು; ಎಲ್ಲವೂ ಮುಗಿದೇ ಹೋಯಿತು; ಬದುಕು ಹಾಳಾಯಿತು ಎಂದು ಭಾವಿಸಲು ಕಾರಣವಿಲ್ಲ. ನಮ್ಮನ್ನು ನಾವು ಮತ್ತು ನಮ್ಮ ಶಕ್ತಿಯನ್ನು ಮರುಪೂರಣಗೊಳಿಸಿಕೊಳ್ಳಲು ಸೃಷ್ಟಿಯಾಗಿರುವ ಅವಕಾಶ ಎಂದು ಏಕೆ ತಿಳಿಯಬಾರದು. ಸಕಾರಾತ್ಮಕ ದೃಷ್ಟಿಕೋನದಿಂದ ಈಗಿನ ಪರಿಸ್ಥಿತಿಯನ್ನು ನೋಡಿದರೆ, ಮುಂಬರುವ ದಿನಗಳು ಆಶಾದಾಯಕವಾಗಿಸುವುದು ಸುಲಭ. ಇಂಥದೊಂದು ಭರವಸೆ ಖಂಡಿತವಾಗಿಯೂ ನಮ್ಮ ಮುಂದಿದೆ. ನಾವು ಅದನ್ನು ಸಂಯಮದಿಂದ ನೋಡಬೇಕಷ್ಟೇ.
ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಕುಸಿದಿದೆ, ನಿರುದ್ಯೋಗದ ಪ್ರಮಾಣ ಹೆಚ್ಚಿದೆ ಎಂಬುದು ಸತ್ಯವೇ ಆದರೂ ಮಗದೊಂದು ಆಯಾಮದಿಂದ ನೋಡಿದರೆ, ಹೊಸ ಹೊಸ ಕ್ಷೇತ್ರಗಳಲ್ಲಿ ವಹಿವಾಟು ಹೆಚ್ಚಾಗುತ್ತಿರುವುದು ಕಾಣಸಿಗುತ್ತದೆ. ಭವಿಷ್ಯದಲ್ಲಿ ಕೆಲವು ಕ್ಷೇತ್ರಗಳು ಆಶ್ಚರ್ಯಕರ ರೀತಿಯಲ್ಲಿ ಎನ್ನುವಂತೆ ಚಿಗಿತುಕೊಳ್ಳುವ ಎಲ್ಲ ಲಕ್ಷಣಗಳು ಈಗಲೇ ಗೋಚರವಾಗುತ್ತಿದೆ. ಕೊರೊನಾಘಾತದ ನಡುವೆಯೂ ಆಶಾಕಿರಣ ಪ್ರತಿಲಿಸುತ್ತಿದ್ದು, ನಾನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ದಿನ ಬಳಕೆಯ ವಸ್ತು ತಯಾರಿ ಕಂಪನಿಗಳ ಷೇರು ವೌಲ್ಯ ವೃದ್ಧಿಘಿಯಾಗುತ್ತಿದೆ. ಔಷಧ ರಫ್ತಿನಿಂದ ದೇಶಕ್ಕೆ ಭಾರಿ ಲಾಭವಾಗಲಿದೆ. ಆಹಾರೋತ್ಪನ್ನಗಳ ವಹಿವಾಟು ಮಂದಗತಿಯಲ್ಲಿದೆಯಾದರೂ ಸಂಪೂರ್ಣ ಕುಸಿದಿಲ್ಲ. ಗೋಧಿ ಹುಡಿ, ಖಾದ್ಯ ತೈಲ, ಅಕ್ಕಿಘಿ, ತೊಗರಿ ಇತ್ಯಾದಿಗಳ ಮಾರಾಟ ಮತ್ತು ಉತ್ಪಾದನೆ ವಹಿವಾಟು ಮತ್ತೆ ಚುರುಕಾಗಿದೆ. ಬಿಗ್ ಬಾಸ್ಕೆಟ್, ಫ್ಲಿಪ್ ಕಾರ್ಟ್ ಸೇರಿದಂತೆ ಇ-ಕಾಮರ್ಸ್ ಕಂಪನಿ ಗಳಲ್ಲಿ ನೇಮಕಾತಿ ಸಾವಿರಾರು ಸಂಖ್ಯೆಯಲ್ಲಿ ವೃದ್ಧಿ ಸಿದೆ. ಆನ್‌ಲೈನ್ ಫಾರ್ಮಸಿ ಕಂಪನಿಗಳೂ ನೇಮ ಕಾತಿ ಹೆಚ್ಚಿಸಲು ಪ್ಲ್ಯಾನ್ ಮಾಡಿವೆ. ಚಿಲ್ಲರೆ ದಿನಸಿ ಮಾರಾಟ ಮಾಡುವ ಕಿರಾಣಾ ಅಂಗಡಿಗಳ ವಹಿ ವಾಟು ಈಗ ದಿಢೀರ್ ವೃದ್ಧಿಸಿದೆ. ಇನ್ನೇನು ಚಿಲ್ಲರೆ ಅಂಗಡಿಗಳ ಭವಿಷ್ಯ ಮುಗಿದೇ ಹೋಯಿತು ಎಂದು ಭಾವಿಸುವ ಹೊತ್ತಲ್ಲಿ ಎಲ್ಲವೂ ತಿರುವು ಮುರುವು. ಹ್ಯಾಂಡ್‌ವಾಶ್ ಮತ್ತು ಇತರ ನೈರ್ಮಲ್ಯ ಕುರಿತ ಉತ್ಪನ್ನಗಳಿಗೆ ದಿಢೀರ್ ಬೇಡಿಕೆ ಸುಧಾರಿಸಿದ್ದುಘಿ, ಎಫ್‌ಎಂಸಿಜಿ ಕಂಪನಿಗಳು ಇದರ ತಯಾರಿಕೆ ಮತ್ತು ವಿತರಣೆ ಜಾಲವನ್ನು ಬಲಪಡಿಸುತ್ತಿವೆ. ಇದಿಷ್ಟು ಸಂಭಾವ್ಯ ವ್ಯವಾಹಾರಿಕ ಮತ್ತು ಉದ್ಯೋಗದ ದೃಷ್ಟಿಯ ತಕ್ಷಣಕ್ಕೆ ಕಾಣಿಸುವ ಸಕಾರಾತ್ಮಕ ಲೆಕ್ಕಾಚಾರಗಳು. ಆದರೆ, ನಮ್ಮ ಬದುಕಿನ ಹೋರಾಟಕ್ಕೂ ಈ ಕೊರೊನಾ ಬಿಕ್ಕಟ್ಟು ಮುಂದೆ ಒದಗಿಬರಬಹುದಾದ ವಿಪತ್ತು, ಭಾರಿ ಸವಾಲುಗಳನ್ನು ಎದುರಿಸಲು ನಮ್ಮನ್ನೆಲ್ಲರನ್ನು ಮಾನಸಿಕವಾಗಿ ಸಿದ್ಧ ಮಾಡಿರುವುದು ಎಲ್ಲದಕ್ಕಿಂತ ದೊಡ್ಡ ಲಾಭವೆಂದೇ ಪರಿಗಣಿಸಬೇಕಿದೆ. ವೈಯಕ್ತಿಕ ನೆಲೆಯಲ್ಲಿ ಹಾಗೂ ಸಾಮೂದಾಯಿಕ ನೆಲೆಯಲ್ಲೂ ಈ ಮನಃಸ್ಥಿತಿ ನಮ್ಮಲ್ಲಿ ಬೆಳೆಯುತ್ತಿದೆ. ಇದೊಂದು ಮುಂದಿನ ದಿನಗಳ ಎದುರಿಸಲು ಮಾಡಿದ ರಿಹರ್ಸಲ್ ಇದ್ದ ಹಾಗೆ.
ಲಾಕ್‌ಡೌನ್‌ನಿಂದಾಗಿ ನಮಗರಿವಿಲ್ಲದಂತೆಯೇ ಹೊಸ ನಡವಳಿಕೆಯನ್ನು ಅನುಸರಿಸುತ್ತಿದ್ದೇವೆ. ಸ್ವಚ್ಛತೆಯ ಬಗೆಗಿನ ಅಸಡ್ಡೆ ದೂರವಾಗಿ ಶೃದ್ಧೆ ಬೆಳೆಯುತ್ತಿದೆ. ನಮ್ಮ ಸ್ವೆಚ್ಛಾಚಾರದ ಲೈಫಿಗೊಂದು ಬ್ರೇಕ್ ಬಿದ್ದು; ಬದುಕಿಕೊಂದು ಶಿಸ್ತು, ಸಂಯಮದ ರೂಪ ಸಿಗುತ್ತಿದೆ. ಕುಟುಂಬದ ಜೊತೆಗಿನ ಆನಂದ ಕ್ಷಣಗಳ ಅನುಭವವನ್ನು ನೀಡುತ್ತಿದೆ. ಜೊತೆಗೆ ಶುದ್ಧ ಪರಿಸರವು ಕಣ್ಣಿಗೆ, ಮನಸ್ಸಿಗೆ ಮುದ ನೀಡುತ್ತಿದೆ. ನಮಗೆ ಗೊತ್ತಿಲ್ಲದೆಯೇ ಪರಿಶುದ್ಧವಾದ ಗಾಳಿಗೆ ಮನಸ್ಸನ್ನು ತೆರೆದುಕೊಳ್ಳುತ್ತಿದ್ದೇವೆ. ನಾವೀಗ ಕಂಡುಕೊಳ್ಳುವ, ಪಡೆದುಕೊಳ್ಳುವ ಅನುಭವಗೆಳೆಲ್ಲವೂ ನಮ್ಮ ಭವಿಷ್ಯದ ಒಳತಿಗೆ ಎಂಬುದು ಸೂಚ್ಯವಾಗಿ ಗೋಚರವಾಗುತ್ತಿದೆ. ‘ರಾತ್ರಿ ಆಕಾಶದಲ್ಲಿ ಚಂದ್ರ ಕಾಣುತ್ತಿಲ್ಲ ಎಂದು ಅಳುತ್ತ ಕೂತರೆ ಅಸಂಖ್ಯೆ ನಕ್ಷತ್ರಗಳನ್ನು ನೋಡುವ ಭಾಗ್ಯ ಕಳೆದುಕೊಳ್ಳುತ್ತೇವೆ’. ಹಾಗೆಯೇ, ಪ್ರತಿಯೊಂದರಲ್ಲೂ ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಂಡರೆ ಭವಿಷ್ಯದೆಡೆಗಿನ ಅವ್ಯಕ್ತ ಭಯ ನಮ್ಮನ್ನ ಕಾಡದು. ಈಗ ಎದುರಾಗಿರುವ ಸಂದರ್ಭವನ್ನು ನಮ್ಮ ಮುಂದಿನ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳೋಣ. ಮಾನಸಿಕವಾಗಿ, ಭೌತಿಕವಾಗಿ, ಔದ್ಯೋಗಿಕವಾಗಿ ಮತ್ತು ಸಾಮಾಜಿಕವಾಗಿ ನಮ್ಮ ಹೊಸ ಪಯಣಕ್ಕೆ ಈಗಿನಿಂದಲೇ ಸನ್ನದ್ಧರಾಗೋಣ. ಹಾಗಾಗಿ, ಇಡೀ ಜಗತ್ತೇ ಈಗ ಸ್ತಬ್ಧವಾಗಿದೆ ಎಂದುಕೊಂಡರೇ ಶೀಘ್ರವೇ ಸಡಗರದ ಆರಂಭವೂ ಇದೇ ಎಂದೇ ಅರ್ಥ. ನಾವೆಲ್ಲ ಈ ದಿಸೆಯಲ್ಲಿ ಯೋಚಿಸಬೇಕಲ್ಲವೇ?!