ಹೊಗಳಿಕೆ-ತೆಗಳಿಕೆಗಿಂತ ಆಚರಣೆಯ ಬದ್ಧತೆ ಮುಖ್ಯ

ಘೋಷಣೆ ಮುಖ್ಯವೋ, ಆಚರಣೆ ಮುಖ್ಯವೋ ಎಂಬುದರ ಚಿಂತನ-ಮಂಥನ ನಡೆಸುವುದಾದರೆ ಆಮ್ ಆದ್ಮಿ ಪಕ್ಷದ ಪ್ರಣಾಳಿಕೆ ಮತ್ತು ಸುರೇಶ್ ಪ್ರಭು ಮಂಡಿಸಿರುವ ರೈಲ್ವೆ ಮುಂಗಡಪತ್ರ ಇವೆರಡೂ ಉತ್ತಮ ಸರಕಾಗುವುದರಲ್ಲಿ ಯಾವ ಅನುಮಾನವೂ ಇಲ್ಲ, ಅಲ್ಲವೇ?

ಸಚಿವ ಸುರೇಶ್ ಪ್ರಭು ರೈಲ್ವೆ ಬಜೆಟ್ ಮಂಡಿಸಲು ಆಗಮಿಸಿದ ಕ್ಷಣ
ಸಚಿವ ಸುರೇಶ್ ಪ್ರಭು ರೈಲ್ವೆ ಬಜೆಟ್ ಮಂಡಿಸಲು ಆಗಮಿಸಿದ ಕ್ಷಣ

ರೈಲ್ವೆ ಮುಂಗಡಪತ್ರವೆಂಬ ನಿರೀಕ್ಷೆಗಳ ಗಂಟು ಈಗಷ್ಟೇ ಬಿಚ್ಚಿಕೊಂಡಿದೆ. ಇಂದು ಮಧ್ಯಾಹ್ನ ಕಳೆಯುವ ಹೊತ್ತಿಗೆ ಮೋದಿ ಸರ್ಕಾರದ ಪೂರ್ಣಪ್ರಮಾಣದ ಮೊದಲ ಸಾಮಾನ್ಯ ಬಜೆಟ್ ಕೂಡ ನಮ್ಮೆದುರು ಅನಾವರಣಗೊಳ್ಳುತ್ತದೆ. ಈ ಎರಡು ಬಜೆಟ್‍ಗಳೆಂಬ ವಾರ್ಷಿಕ ವಿಧಿವಿಧಾನಗಳ ಸಂದರ್ಭವನ್ನು ಬಳಸಿಕೊಂಡು `ರಾಜಕೀಯ ಪಕ್ಷಗಳ ಘೋಷಣೆಗಳು ಮತ್ತು ಆಚರಣೆಗಳ’ ಕುರಿತಾದ ಹೋದ ವಾರದ ನನ್ನ ಲೇಖನವನ್ನು ಮುಂದುವರಿಸುತ್ತಿದ್ದೇನೆ.

ಅಂದಹಾಗೆ ಭಾರತೀಯ ರೈಲ್ವೆ ಇತಿಹಾಸ ಮತ್ತು ಬೆಳವಣಿಗೆ ಕುರಿತು ಹೇಳುವ ಮೂಲಕವೇ ವಿಷಯ ಪ್ರವೇಶ ಮಾಡುವುದು ಒಳಿತು. ನೋಡಿ, ಭಾರತೀಯ ರೈಲ್ವೆಗೆ ಈಗ ಅರವತ್ತೆಂಟರ ಪ್ರಾಯ. ಕಾರಣ ಇಷ್ಟೆ, ಬ್ರಿಟಿಷರ ನಿರ್ಗಮನದೊಂದಿಗೆ ಸ್ವತಂತ್ರ ಭಾರತದ ಇತಿಹಾಸ ಶುರುವಾಗುತ್ತದೆಂದು ನಾವು ಒಪ್ಪುವುದಾದರೆ, ಭಾರತೀಯ ರೈಲ್ವೆ ಇತಿಹಾಸವನ್ನೂ ನಾವು 1947ರ ನಂತರದ ಕಾಲಘಟ್ಟದಿಂದಲೇ ಲೆಕ್ಕಹಾಕುವುದು ಅನಿವಾರ್ಯ. ಮುಖ್ಯವಾಗಿ ಸ್ವಾತಂತ್ರೃಪೂರ್ವದಲ್ಲಿ, ಭಾರತದಲ್ಲಿ ಆಗಿದ್ದ ರೈಲ್ವೆ ಜಾಲದ ಅಭಿವೃದ್ಧಿಯ ಶ್ರೇಯಸ್ಸನ್ನು ನಾವು ನಿರ್ವಿವಾದವಾಗಿ ಬ್ರಿಟಿಷ್ ಸರ್ಕಾರಕ್ಕೇ ಕೊಡಬೇಕಾಗುತ್ತದೆ. ಹೀಗೆ ಖಚಿತ ಅಭಿಪ್ರಾಯಪಡುವುದಕ್ಕೊಂದು ಬಲವಾದ ಕಾರಣವಿದೆ. ಪ್ರಸ್ತುತ ಭಾರತದಲ್ಲಿರುವುದು ಸುಮಾರು 65 ಸಾವಿರ ಕಿ.ಮೀ. ವಿಸ್ತಾರದ ರೈಲ್ವೆ ಸಂಪರ್ಕ ಜಾಲ. ವಿಶೇಷ ಏನಪ್ಪಾ ಅಂದರೆ ಅದರಲ್ಲಿ 53 ಸಾವಿರ ಕಿ.ಮೀ.ಗಳಷ್ಟನ್ನು ಬ್ರಿಟಿಷ್ ಸರ್ಕಾರವೇ ನಿರ್ಮಿಸಿದ್ದು. ಅಂದರೆ ಸ್ವಾತಂತ್ರಾೃನಂತರದ 68 ವರ್ಷಗಳ ಕಾಲಘಟ್ಟದಲ್ಲಿ ಭಾರತವನ್ನು ಆಳಿದ ವಿವಿಧ ಸರ್ಕಾರಗಳು ವಿಸ್ತರಿಸಿದ ರೈಲ್ವೆ ಜಾಲದ ಪ್ರಮಾಣ ಉಳಕಿ 12 ಸಾವಿರ ಕಿ.ಮೀ.ನಷ್ಟು ಮಾತ್ರ. ಈ ಆಮೆಗತಿ ರೈಲ್ವೆ ಪ್ರಗತಿಯ ಹೊಣೆ ಹೊರುವವರು ಯಾರು? ಯಾರೊಬ್ಬರೂ ಮುಂದೆ ಬರುವ ಧೈರ್ಯ ಮಾಡಲಿಕ್ಕಿಲ್ಲ.

ಅದಕ್ಕಿಂತಲೂ ದುರಂತದ ಸಂಗತಿ ಮತ್ತೊಂದಿದೆ. ನಮ್ಮ ರಾಷ್ಟ್ರಗೀತೆಯಲ್ಲಿ ಅನುದಿನವೂ `ಅಧಿನಾಯಕ ಜಯ ಹೇ’ ಎಂದು ಹಾಡುವುದರ ಗಾಢ ಪರಿಣಾಮ ಅದಕ್ಕೆ ಕಾರಣವಿರಬಹುದೇ…? ಗೊತ್ತಿಲ್ಲ. ಇರಲಿ.

2000ನೇ ಇಸವಿಗೂ ಪೂರ್ವದಲ್ಲಿ ಪ್ರತಿ ವರ್ಷದ ಕೇಂದ್ರ ಮುಂಗಡಪತ್ರಗಳನ್ನು- ರೈಲ್ವೆ ಇರಲಿ ಅಥವಾ ಸಾಮಾನ್ಯ ಬಜೆಟ್ಟೇ ಇರಲಿ- ಸಾಯಂಕಾಲ ಐದು ಗಂಟೆಗೆ ಸಂಸತ್ತಿನಲ್ಲಿ ಮಂಡಿಸುವ ಪರಿಪಾಠವನ್ನು ಅನುಸರಿಸಿಕೊಂಡು ಬರುತ್ತಿದ್ದುದು ಹಲವರಿಗೆ ನೆನಪಿರಬಹುದು. ಅದರ ಹಿನ್ನೆಲೆ ಗೊತ್ತೇ? ಬಹಳ ಸರಳ. ಬ್ರಿಟಿಷರು ಆಳುತ್ತಿದ್ದ ವೇಳೆ ಭಾರತದ ಮುಂಗಡಪತ್ರಕ್ಕೆ ಬ್ರಿಟಿಷ್ ಅರಸೊತ್ತಿಗೆಯ ಅನುಮೋದನೆ ಪಡೆದುಕೊಳ್ಳುವುದು ಅನಿವಾರ್ಯ ನಿಯಮವಾಗಿತ್ತು. ಇಂಗ್ಲೆಂಡ್‍ನ ಕಾಲಮಾನದ ಪ್ರಕಾರ ಅಪರಾಹ್ನ ಭಾರತದ ಮುಂಗಡಪತ್ರಕ್ಕೆ ಬ್ರಿಟನ್ ರಾಣಿ ಮತ್ತು ಅಲ್ಲಿನ ಸಂಸತ್ತು ಅನುಮೋದನೆ ಕೊಡುತ್ತಿತ್ತು. ಆ ಪ್ರಕಾರ, ನಂತರ ದೆಹಲಿಯಲ್ಲಿ ಸಾಯಂಕಾಲ ಐದು ಗಂಟೆಗೆ ಸರಿಯಾಗಿ ಬಜೆಟ್ ಮಂಡನೆ ಮಾಡಲಾಗುತ್ತಿತ್ತು. ಅದೇ ಪದ್ಧತಿಯನ್ನು ಸ್ವಾತಂತ್ರಾೃನಂತರದಲ್ಲಿ ಭಾರತದಲ್ಲಿ ಆಳ್ವಿಕೆ ನಡೆಸಿದ ಎಲ್ಲ ಸರ್ಕಾರಗಳು ಸುಮಾರು 53 ವರ್ಷಗಳ ಕಾಲ ಅನೂಚಾನವಾಗಿ ಮುನ್ನಡೆಸಿಕೊಂಡು ಬಂದವಲ್ಲ, ಇದಕ್ಕೇನೆನ್ನೋಣ? ಇದು ಸುದೀರ್ಘ ದಾಸ್ಯದ ಪರಿಣಾಮ ಮತ್ತು ಪರಿಪಾಠ ಎಂದು ಅರಿಯಲು ವಾಜಪೇಯಿ ಅವರಂಥ ಮಹಾನುಭಾವರೇ ಮುಂದೆ ಬರಬೇಕಾಯಿತು. 2001ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ ಸಿನ್ಹಾ ಆ ಪದ್ಧತಿಯನ್ನು ಅಂತ್ಯಗೊಳಿಸಿದರು. ದಾಸ್ಯದ ಮಾನಸಿಕತೆಗೆ ಮುಕ್ತಿ ನೀಡಿ ಭಾರತೀಯ ಕಾಲಮಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಮೊದಲ ಬಾರಿ ಕೇಂದ್ರ ಮುಂಗಡಪತ್ರ ಮಂಡಿಸಿ ಹೊಸ ಇತಿಹಾಸ ನಿರ್ಮಿಸಿದರು. ಈಗ ಅದೇ ಸಂಪ್ರದಾಯ ಮುಂದುವರಿದುಕೊಂಡು ಬರುತ್ತಿದೆ.

ಈಗ ಸುರೇಶ ಪ್ರಭು ಅವರ ಸರದಿ. ಚೊಚ್ಚಲ ಬಜೆಟ್ ಮಂಡಿಸಿದ ಅವರು ರೈಲ್ವೆ ನಿರ್ವಹಣೆ ಕುರಿತು ಅನುಭವ, ದೂರದೃಷ್ಟಿಯುಳ್ಳ ಪರಿಣತರಿಂದ ಮತ್ತು ರಾಜಕೀಯಕ್ಕೆ ಹೊರತಾಗಿ ನೈಜ ಅಭಿವೃದ್ಧಿ ಕಾಳಜಿಯುಳ್ಳವರಿಂದ ಭೇಷ್ ಅನ್ನಿಸಿಕೊಂಡಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಬಜೆಟ್ ಭಾಷಣದ ಆರಂಭದಲ್ಲಿ ಅವರು ಪ್ರಸ್ತಾಪಿಸಿದ ಮೂರು ಸಂಗತಿಗಳನ್ನು ಇಲ್ಲಿ ಉಲ್ಲೇಖಿಸುವುದು ಹೆಚ್ಚು ಸೂಕ್ತ.
ಮೊದಲನೆಯದ್ದು ಗಾಂಧೀಜಿಗೂ ಭಾರತೀಯ ರೈಲ್ವೆಗೂ ಇರುವ ಅವಿನಾಭಾವ ಸಂಬಂಧದ ಕುರಿತಾದ ಪ್ರಸ್ತಾಪ. ಬ್ಯಾರಿಸ್ಟರ್ ಪದವಿ ಪಡೆದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಅವರು, ಸ್ವಾತಂತ್ರೃ ಸಂಗ್ರಾಮಕ್ಕೆ ಧುಮುಕುವ ಪೂರ್ವದಲ್ಲಿ ಒಮ್ಮೆ ಇಡೀ ಭಾರತವನ್ನು ಅರಿಯುವ ತೀರ್ಮಾನ ಮಾಡುತ್ತಾರೆ. ಅದು ಗಾಂಧೀಜಿಯವರ `ಭಾರತ ದರ್ಶನ ಪರಿಕ್ರಮ’ ಅಂತಲೇ ಪ್ರಸಿದ್ಧಿಯಾಗಿದೆ. ಆ ಭಾರತ ಪರಿಕ್ರಮಕ್ಕೆ ಅವರು ಆಯ್ದುಕೊಂಡಿದ್ದು ರೈಲ್ವೆ ಪ್ರವಾಸವನ್ನು. ಅದರಲ್ಲೂ ಅವರು ರೈಲ್ವೆಯ ಮೂರನೇ ದರ್ಜೆಯ ಬೋಗಿಗಳಲ್ಲಿ ಸಂಚರಿಸಿ ಹೊಸ ಸಂಚಲನ ಉಂಟುಮಾಡುತ್ತಾರೆ. ಅದಕ್ಕೆ ಮುಖ್ಯ ಕಾರಣ ಜನಸಾಮಾನ್ಯರೊಂದಿಗೆ ಬೆರೆಯುವುದರಿಂದ ಜನಮಾನಸಕ್ಕೆ ಹೆಚ್ಚು ಹತ್ತಿರವಾಗಬಹುದೆಂಬುದು ಅವರ ಆಲೋಚನೆಯಾಗಿತ್ತು. ಭಾರತೀಯ ರೈಲ್ವೆ ಹೇಗೆ ಬಡಬಗ್ಗರೊಂದಿಗೆ, ಜನಸಾಮಾನ್ಯರೊಂದಿಗೆ ಗಾಢವಾದ ಸಂಬಂಧವನ್ನು ಬೆಸೆದುಕೊಂಡಿದೆ ಎಂಬುದೇ ಇದರ ಒಟ್ಟಾರೆ ಒಳಮರ್ಮ ಎಂಬುದನ್ನು ನಾವು ಅರಿಯಬೇಕು. ಗಾಂಧೀಜಿಯ ಅಂತರಾತ್ಮದ ಆಲೋಚನೆ 55 ವರ್ಷ ಕಾಲ ಈ ದೇಶವನ್ನಾಳಿದ ಕಾಂಗ್ರೆಸ್ ಪಕ್ಷಕ್ಕೆ ಕೇಳಿಸದೇ, ಅರ್ಥವಾಗದೇ ಹೋಯಿತಲ್ಲ. ಇದ್ಯಾವ ಪ್ರಾರಬ್ಧಕರ್ಮ ಹೇಳಿ. ಗೋಹತ್ಯೆ ನಿಷೇಧ, ಪಾನನಿಷೇಧದ ವಿಷಯದಲ್ಲಿ ಗಾಂಧೀಜಿ ನಿಲುವು ಅನಾದರಕ್ಕೊಳಗಾದಂತೆಯೇ ಭಾರತೀಯ ರೈಲ್ವೆ ವಿಷಯದಲ್ಲಿಯೂ ಆಯಿತೇ? ಚರ್ಚೆಗೆ ಅರ್ಹವಾದ ವಿಷಯವಿದು.

ರೈಲ್ವೆ ಬಜೆಟ್ ಭಾಷಣದಲ್ಲಿ ಸಚಿವ ಸುರೇಶ ಪ್ರಭು ಮತ್ತೊಂದು ಪ್ರಮುಖ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಬಜೆಟ್ ಕರಡಿನ ಒಂದು ಪ್ಯಾರಾವನ್ನು ಇಲ್ಲಿ ಯಥಾವತ್ತಾಗಿ ಇಟ್ಟಿದ್ದೇನೆ: “The Prime Minister established the principle of governance when asked what government was for, if not for the welfare of the poor. He challenged us with an inspirational objective when he said what the age of poverty allevation was over and what the era of poverty elimination had begun. Indian Railways will pay its play its part in this historic mission”. ಬಡತನಕ್ಕೆ ಉಪಶಮನ ಮಾರ್ಗ ಕಂಡುಹಿಡಿಯುವುದರ ಕುರಿತೇ ಮಾತನಾಡುವ ಕಾಲ ಮುಗಿದುಹೋಗಿದೆ. ಈಗೇನಿದ್ದರೂ ಬಡತನವನ್ನು ಬುಡಸಮೇತ ಕಿತ್ತುಹಾಕುವ ಕೆಲಸ ಆರಂಭವಾಗಿದೆ. ಗಾಯಕ್ಕೆ ಮದ್ದು ಸವರುವ ಬದಲು ದೇಹಪೂರ್ತಿ ಹರಡಿಕೊಂಡಿರುವ ಕೆಟ್ಟರಕ್ತವನ್ನು ಶೋಧಿಸಿ ಶುದ್ಧೀಕರಿಸಬೇಕು ಎನ್ನುವ ಅರ್ಥದಲ್ಲಿ ಸುರೇಶ್ ಪ್ರಭು ಪ್ರಸ್ತಾಪಿಸಿದ ಮಾತನ್ನು ತೆಗೆದುಕೊಳ್ಳುವುದು ಉತ್ತಮ ಅಂತ ತೋರುತ್ತದೆ. 

ಹಾಗೇ, ಸಚಿವ ಸುರೇಶ್ ಪ್ರಭು ಪ್ರಸ್ತಾಪಿಸಿದ ಮೂರನೆಯ ಸಂಗತಿ. “Tighter control over costs, greater dicipline over project selection and execution and a significant boost to Railways Revenue generating capacity ” ಅಂತ. ಈ ಮಾತಿನ ಮರ್ಮವನ್ನು ನಾವು ಹೀಗೆ ಅರ್ಥೈಸಬಹುದು: ಸಾರ್ವಜನಿಕರು ಜೀವತೇಯ್ದು ಸರ್ಕಾರಕ್ಕೆ ಕಟ್ಟುವ ತೆರಿಗೆ ಹಣ ಅಮೂಲ್ಯವಾದದ್ದು. ಜನರು ತೆರಿಗೆ ರೂಪದಲ್ಲಿ ಕಟ್ಟುವ ಒಂದೊಂದು ಪೈಸೆಯೂ ಸದ್ವಿನಿಯೋಗ ಆಗಬೇಕು. ಹಾಗಾಗಲು ಸರ್ಕಾರಗಳು ಮಾಡುವ ವೆಚ್ಚದ ಮೇಲೆ ಬಿಗಿಹಿಡಿತವಿರಬೇಕು. ಯೋಜನೆಗಳ ಆಯ್ಕೆ ಮತ್ತು ಜಾರಿಯಲ್ಲಿ ಶಿಸ್ತು ಮತ್ತು ಕಳಕಳಿ ಇರಲೇಬೇಕು. ಅದಕ್ಕೆ ಹೊರತಾಗಿ ರೋಗಗ್ರಸ್ತ ಭಾರತೀಯ ರೈಲ್ವೆಯನ್ನು ಬಚಾವು ಮಾಡಿಕೊಳ್ಳಲು ಅನ್ಯಮಾರ್ಗವುಂಟೇನು?

ಇಷ್ಟು ವರ್ಷಕಾಲ ಸಾವಿರಾರು ಯೋಜನೆಗಳಿಗೆ ಪ್ರಸಾದ ಹಂಚಿದಂತೆ ಒಂದೊಂದು ಹಿಡಿಯಷ್ಟು ಪುಡಿಗಾಸು ಹಣಕಾಸು ನೀಡಿ ಅರ್ಧಂಬರ್ಧಕ್ಕೆ ನಿಂತ, ಕುಂಟುತ್ತ, ತೆವಳುತ್ತ ಸಾಗಿರುವ ಯೋಜನೆಗಳಿಗೆ ಅದರದರ ಯೋಗ್ಯತಾನುಸಾರ ಹಣಕಾಸು ನೀಡುವ ಸಂಕಲ್ಪ ಮಾಡಿದ್ದು, ಅದಕ್ಕೋಸ್ಕರ ಅದೆಂಥ ಟೀಕೆ ಟಿಪ್ಪಣಿ ಬೇಕಾದರೂ ಬರಲಿ ಎದುರಿಸೋಣ ಅಂತ ತೀರ್ಮಾನಿಸಿದ್ದು ತಪ್ಪೆಂದು ಹೇಳಲು ಸಾಧ್ಯವೇ? ಒಮ್ಮೆ ಟೀಕೆಗೆ ಅಂಜಿ ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ಬದಲು ಮತ್ತದೇ ಹೊಸ ಘೋಷಣೆಯ ಕೆಟ್ಟ ಸಂಪ್ರದಾಯಕ್ಕೆ ಜೋತುಬಿದ್ದರೆ ಅರ್ಧಂಬರ್ಧ ಆದ ಯೋಜನೆಗಳಲ್ಲಿ ತೊಡಗಿಸಿರುವ ಜನರ ತೆರಿಗೆ ಹಣವನ್ನು ಮರುಪೂರಣ ಮಾಡುವವರು ಯಾರು? ಅಷ್ಟಕ್ಕೂ ಹೇಳಿಕೆ, ಹೊಗಳಿಕೆ ಇವ್ಯಾವುದರ ಗೋಜಿಗೆ ಹೋಗದೆ ಆಯಾ ಯೋಜನೆಯ ಯೋಗ್ಯತಾನುಸಾರ ಈ ಹಿಂದಿಗಿಂತಲೂ ಹೆಚ್ಚು ನಿಧಿಹಂಚಿಕೆಯನ್ನೂ ಸಚಿವ ಪ್ರಭು ಮಾಡಿದ್ದಾರೆಂಬುದನ್ನು ದಾಖಲೆಗಳು, ಅಂಕಿಅಂಶಗಳು ಹೇಳುತ್ತವೆ.

ಆಲೋಚನಾದಾರಿದ್ರ್ಯವಿದ್ದರೆ ಏನೆಲ್ಲಾ ಅನಾಹುತ ಆಗುತ್ತದೆ, ಸರಿಯಾಗಿ ಆಲೋಚನೆ ಮಾಡಿದರೆ ಹೇಗೆ ನಿಷ್ಠುರವಾಗಿ ವರ್ತಿಸಬೇಕಾಗುತ್ತದೆ ಎಂಬುದನ್ನು ಹೇಳುವುದಕ್ಕಾಗಿ ಮೇಲೆ ಹೇಳಿದ ಕೆಲ ಸಂಗತಿಗಳನ್ನು ಉಲ್ಲೇಖಿಸಿದೆನೇ ಹೊರತೂ ಬೇರಾವುದಕ್ಕೂ ಅಲ್ಲ ಬಿಡಿ.

ವಾಸ್ತವ ಇದು. ಇಷ್ಟೆಲ್ಲ ಇದ್ದೂ ಹಾಲಿ ರೈಲ್ವೆ ಮುಂಗಡಪತ್ರದ ಕುರಿತು ಯಾರೆಲ್ಲ ಏನೆಲ್ಲ ಪ್ರತಿಕ್ರಿಯೆ ವ್ಯಕ್ತಮಾಡುತ್ತಿದ್ದಾರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಲೆಕ್ಕ ಹಾಕಿದರೆ ನಕಾರಾತ್ಮಕ ಅಭಿಪ್ರಾಯಗಳೇ ಜಾಸ್ತಿ. ಅದಕ್ಕೆಲ್ಲ ಇದುವರೆಗಿನ ಸರ್ಕಾರಗಳ ಕಾರ್ಯವೈಖರಿ ಮತ್ತು ಅದಕ್ಕೆ ಸರಿಯಾಗಿ ಒಗ್ಗಿಕೊಂಡಿರುವ ಈ ದೇಶದ ಜನರ ಮಾನಸಿಕತೆ ಕಾರಣ ಇದ್ದರೂ ಇರಬಹುದು, ಗೊತ್ತಿಲ್ಲ. ಇದುವರೆಗೆ ಬೇರೆ ಬೇರೆ ರೈಲ್ವೆ ಮಂತ್ರಿಗಳು ಮಾಡಿದ ಘೋಷಣೆಗಳೇನು ಕಡಿಮೆ ಇವೆಯೇ? ಅವುಗಳಲ್ಲಿ ಅರ್ಧ ಈಡೇರಿದ್ದರೂ ಭಾರತೀಯ ರೈಲ್ವೆ ವಿಶ್ವ ರ್ಯಾಂಕಿಂಗ್‍ನಲ್ಲಿ ಈಗಿನ ನಾಲ್ಕನೇ ರ್ಯಾಂಕಿಂಗ್‍ನಿಂದ ಮೊದಲ ಸ್ಥಾನಕ್ಕೆ ಏರಿಬಿಡುತ್ತಿತ್ತು. ಮುಂದಾದರೂ ಹಾಗಾಗಲಿ ಎಂದು ಆಶಿಸೋಣ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅದೆಲ್ಲ ಹೇಗೂ ಇರಲಿ. ದೆಹಲಿ ವಿದ್ಯಮಾನಗಳ ಕಡೆ ಒಮ್ಮೆ ಗಮನ ಹರಿಸೋಣ. ಸಾಮಾನ್ಯವಾಗಿ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಿದ ಘೋಷಣೆಗಳನ್ನು ಗೆಲುವಿನ ಖುಷಿಯ ನಡುವೆ ನೆನಪಿಟ್ಟುಕೊಳ್ಳುವುದಕ್ಕಿಂತ ಮರೆಯುವುದೇ ಜಾಸ್ತಿ. ಆದರೆ ಆ ವಿಷಯದಲ್ಲೂ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಹೊಸ ದಾಖಲೆ ಮಾಡಿದೆ. ಚುನಾವಣಾ ಪೂರ್ವದಲ್ಲಿ ತಾನು ಜನರಿಗೆ ನೀಡಿದ ವಾಗ್ದಾನಗಳನ್ನು ಈಡೇರಿಸುವ ಕಡೆ ಆ ಪಕ್ಷ ಆದ್ಯ ಗಮನ ನೀಡಿದೆ. ಅದೇ ಖುಷಿ ವಿಚಾರ. ದೆಹಲಿ ಸಿಎಂ ಕೇಜ್ರಿವಾಲ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನದಂತೆ ದೆಹಲಿಯ ಜನತೆಗೆ ಅರ್ಧ ಬೆಲೆಗೆ ವಿದ್ಯುತ್ ಮತ್ತು ಸಂಪೂರ್ಣ ಉಚಿತವಾಗಿ ಕುಡಿಯುವ ನೀರನ್ನು ನೀಡುವ ಯೋಜನೆಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಅಧಿಕಾರಿಗಳಿಗೆ ಫರ್ಮಾನು ಹೊರಡಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು ಜನತೆಗೆ ತಲುಪಿಸುವ ಹೊಣೆ ಅಧಿಕಾರಿಗಳ ಹೆಗಲೇರಿದೆ. ನಿಜಕ್ಕೂ ಇದೊಂದು ಕ್ರಾಂತಿಯೇ ಅಲ್ಲವೇ? ಹೌದು ಅಥವಾ ಅಲ್ಲ ಎನ್ನುವುದಕ್ಕೂ ಪೂರ್ವದಲ್ಲಿ 34 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ, ನಂತರ ಒಡಿಶಾದಲ್ಲಿ, ಪಕ್ಕದ ಆಂಧ್ರದಲ್ಲಿ, ಅಸ್ಸಾಂನಲ್ಲೆಲ್ಲ ಏನೇನಾಗಿತ್ತು, ಪರಿಣಾಮ ಏನಾಯಿತು ಎಂಬುದನ್ನು ಮುಂದಿನ ವಾರ ನೋಡೋಣ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top