– ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಸಿರಿಗೆರೆ.
History repeats itself (ಇತಿಹಾಸ ಮರುಕಳಿಸುತ್ತದೆ) ಎಂಬ ಮಾತೊಂದು ಆಂಗ್ಲಭಾಷೆಯಲ್ಲಿದೆ. ಯಾವುದೇ ಘಟನೆ ವಿಶಿಷ್ಟವಾದುದಲ್ಲ. ಅದು ಮೇಲ್ನೋಟಕ್ಕೆ ವಿಶಿಷ್ಟವಾದ ಘಟನೆ ಎಂದು ಕಂಡುಬಂದರೂ ಅಂಥದೊಂದು ಘಟನೆ ಹಿಂದೆ ಆಗಿರುತ್ತದೆ. ಈಗ ನಡೆದದ್ದು ವಿಶೇಷವೇನಲ್ಲ. ಹಿಂದೆ ಒಮ್ಮೆಯಲ್ಲ ಅನೇಕ ಬಾರಿ ನಡೆದಿರುವುದರ ಪುನರಾವರ್ತನೆ ಮಾತ್ರ ಎಂದು 19 ನೆಯ ಶತಮಾನದ ಪಾಶ್ಚಾತ್ಯ ತತ್ವಜ್ಞಾನಿಗಳು ಹೇಳುತ್ತಾರೆ. ಇದನ್ನು ‘ನಿರಂತರ ಪುನರಾವರ್ತನಾ ಸಿದ್ಧಾಂತ’ (Doctrine of Eternal Recurrence) ಎಂದು ಕರೆಯುತ್ತಾರೆ. ಆದರೆ ಹಿಂದೆ ಆಗಿ ಹೋದ ಒಳ್ಳೆಯ ಘಟನಾವಳಿಗಳು ಮತ್ತೆ ಪುನರಾವರ್ತನೆಗೊಳ್ಳುತ್ತವೆ ಎಂಬ ಸಕಾರಾತ್ಮಕ ಅರ್ಥದಲ್ಲಿ ಈ ಸಿದ್ಧಾಂತ ರೂಪುಗೊಂಡಂತೆ ಕಾಣುವುದಿಲ್ಲ. ಮನುಷ್ಯನ ಮನೋಧರ್ಮ ಬದಲಾಗುವುದಿಲ್ಲ, ಹಿಂದಿನ ಘಟನಾವಳಿಗಳಿಂದ ಅವನು ಪಾಠ ಕಲಿಯುವುದಿಲ್ಲ ಎಂಬ ನಕಾರಾತ್ಮಕ ಧ್ವನಿ ಈ ಸಿದ್ಧಾಂತದಲ್ಲಿ ಅಡಗಿದೆ. ಒಟ್ಟಾರೆ ಮನುಷ್ಯನ ಸ್ವಭಾವ ಬದಲಾವಣೆಯಾಗದೇ ಇರುವುದರಿಂದ ಒಂದೇ ತೆರನಾದ ಘಟನಾವಳಿಗಳು ಎಲ್ಲ ಕಾಲದಲ್ಲಿಯೂ ಮತ್ತೆ ಮತ್ತೆ ನಡೆಯುತ್ತವೆ ಎಂಬುದು ಈ ಮಾತಿನ ಹಿಂದಿನ ಆಶಯ.
ಹಿಂದಿನವರು ಒಳ್ಳೆಯದನ್ನೂ ಮಾಡಿದ್ದಾರೆ, ಬದುಕಿನಲ್ಲಿ ಎಡವಿಯೂ ಇದ್ದಾರೆ. ಹಿಂದಿನವರು ಒಳ್ಳೆಯದನ್ನು ಮಾಡಿದಂತೆ ಈಗಲೂ ಒಳ್ಳೆಯದನ್ನೇ ಮಾಡುವವರು ಸಿಗುವುದಿಲ್ಲವೆಂದಲ್ಲ; ಸಿಕ್ಕೇ ಸಿಗುತ್ತಾರೆ. ಆ ಅರ್ಥದಲ್ಲಿ ಇತಿಹಾಸ ಮರುಕಳಿಸುತ್ತದೆ ಎಂಬುದನ್ನು ಈ ನುಡಿಗಟ್ಟು ಧ್ವನಿಸುವುದಿಲ್ಲ. ಬದಲಾಗಿ ಹಿಂದಿನವರ ದೋಷಪೂರ್ಣ ಕ್ರಮಗಳಿಂದ ಬಂದೊದಗಿದ ವಿಪತ್ತುಗಳಿಂದ ಮನುಷ್ಯ ಪಾಠ ಕಲಿಯದೇ ಅವರು ಎಡವಿದ ಹಾಗೆಯೇ ತಾನೂ ಎಡವುತ್ತಾ ಸಾಗುತ್ತಾನೆ ಎಂಬ ಅವನ ನೇತ್ಯಾತ್ಮಕ ಮನೋಭಾವವನ್ನು ಬೆರಳು ಮಾಡಿ ತೋರುತ್ತದೆ. ಇತಿಹಾಸದ ಸತ್ಕಾರ್ಯಗಳು ಮರುಕಳಿಸುತ್ತವೆ ಎಂಬುದನ್ನು ಹೇಳದೆ ಮನುಷ್ಯನ ಅವಿವೇಕದಿಂದ ಇತಿಹಾಸದಲ್ಲಿ ಘಟಿಸಿದ ಅನರ್ಥಗಳು ಪದೇ ಪದೆ ಸಂಭವಿಸುತ್ತವೆ ಎಂಬುದನ್ನು ಇದು ಸೂಚಿಸುತ್ತದೆ. ಈಗಲೂ ಅಧಿಕಾರ ಗದ್ದುಗೆಗಾಗಿ ಪೈಪೋಟಿ, ಸಂಚು, ಕುಟಿಲ ಕಾರಸ್ಥಾನಗಳು ನಡೆಯುತ್ತಿವೆ. ಇತಿಹಾಸದಲ್ಲಿ ರಾಜ ಮಹಾರಾಜರುಗಳು ರಾಜ್ಯ ವಿಸ್ತರಣೆಗಾಗಿ ಮಾಡಿದ ಯುದ್ಧಗಳು, ವ್ಯಕ್ತ ಮತ್ತು ಅವ್ಯಕ್ತ ವೈರಿಗಳನ್ನು ಸದೆಬಡಿಯಲು ಮಾಡಿದ ದುಷ್ಟ ಕೃತ್ಯಗಳು, ಸಮಕಾಲೀನರ ರಾಜಕೀಯ ಹಿಕ್ಮತ್ತುಗಳು ಭಿನ್ನ ಭಿನ್ನ ರೂಪದಲ್ಲಿ ಕಂಡುಬಂದರೂ ಅವುಗಳ ಹಿಂದಿರುವ ಮನೋಭೂಮಿಕೆ ಒಂದೇ. ಕೇವಲ ವ್ಯಕ್ತಿಗಳಷ್ಟೇ ಬದಲಾಗುತ್ತಾರೆ, ಘಟನಾವಳಿಗಳು ಮಾತ್ರ ಅವೇ ಆಗಿರುತ್ತವೆ. ಹೀಗೆ ಮನುಷ್ಯನ ಮನಸ್ಸಿನ ದೌರ್ಬಲ್ಯಗಳು ತಲೆಮಾರಿನಿಂದ ತಲೆಮಾರಿಗೆ ಅನೂಚಾನವಾಗಿ ಮುಂದುವರಿದುಕೊಂಡು ಬಂದಿವೆ.
ಮನುಷ್ಯ ಎಲ್ಲದನ್ನೂ ಅನುಭವಿಸಿಯೇ ಸತ್ಯಾಸತ್ಯತೆಯನ್ನು ತಿಳಿಯುತ್ತೇನೆಂದು ಹೊರಟರೆ ಅದಕ್ಕೆ ಒಂದು ಜೀವಮಾನ ಸಾಕಾಗುವುದಿಲ್ಲ. ಏಕೆಂದರೆ ವ್ಯಕ್ತಿಯ ಆಯಸ್ಸು ಸೀಮಿತ. ಹಿಂದಿನವರ ಅನುಭವಗಳನ್ನು ತನ್ನ ಅನುಭವಗಳನ್ನಾಗಿ ಸ್ವೀಕರಿಸಿ ಮುಂದುವರಿದರೆ ಅವನು ದೀರ್ಘಾಯುಷಿಯಾಗುತ್ತಾನೆ. ಕಾಲ ಅಖಂಡವಾದುದು. ಅದಕ್ಕೆ ಹೋಲಿಸಿದರೆ ಮನುಷ್ಯನ ಜೀವತಾವಧಿ ನಗಣ್ಯವೆನಿಸುವಷ್ಟು ಅತಿ ಕಿರಿದು! ಹಿಂದಿನವರು ತುಳಿದ ಹಾದಿ ಒಳ್ಳೆಯದೂ ಇರಬಹುದು, ಕೆಟ್ಟದ್ದೂ ಇರಬಹುದು. ಅವರು ಅನುಸರಿಸಿದ ಒಳ್ಳೆಯ ಮಾರ್ಗದಿಂದ ದೊರೆತ ಸತ್ಫಲಗಳೂ ಇತಿಹಾಸದಲ್ಲಿರುತ್ತವೆ. ಅವರ ದೋಷಯುಕ್ತ ಕ್ರಮಗಳಿಂದ ಆದ ಅನಾಹುತಗಳೂ ಸಹ ಅಲ್ಲಿ ಕಾಣಸಿಗುತ್ತವೆ. ಅವರ ಅನುಭವಗಳನ್ನು ಮನುಷ್ಯ ತನ್ನದನ್ನಾಗಿಸಿಕೊಂಡರೆ ಅವರು ನಡೆದ ಉತ್ತಮ ದಾರಿಯಲ್ಲಿ ನಡೆಯಲೂ, ಅವರು ಹಿಡಿದ ತಪ್ಪು ಹಾದಿಯನ್ನು ವರ್ಜಿಸಲೂ ಶಕ್ತನಾಗುತ್ತಾನೆ. ಅವರ ಅನುಭವಗಳನ್ನು ದಕ್ಕಿಸಿಕೊಂಡರೆ ಅವುಗಳನ್ನು ಅನುಭವಿಸಿಯೇ ಪಡೆಯಲು ಬೇಕಾದಷ್ಟು ಆಯಸ್ಸು ಅವನಿಗೆ ಉಳಿಯುತ್ತದೆ. ಅವರ ಅನುಭವಗಳಿಂದ ಮುಂದುವರಿದ ಭಾಗವನ್ನು ಕಂಡುಕೊಳ್ಳಲು ಅವನಿಗೆ ತನ್ನ ಜೀವಮಾನದ ಸೀಮಿತ ಅವಧಿಯಲ್ಲಿ ಸಾಧ್ಯವಾಗುತ್ತದೆ.
ನಿಸರ್ಗದಲ್ಲೂ ಸಹ ಅನಾದಿಕಾಲದಿಂದಲೂ ಈ ಪುನರಾವರ್ತನೆಯ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಾ ಬಂದಿದೆ. ಹಿಂದೆ ನಡೆದ ಪ್ರಕೃತಿ ವಿಕೋಪಗಳು ಮತ್ತು ವಿಪತ್ತುಗಳು ಪುನಃ ಪುನಃ ಸಂಭವಿಸುತ್ತಲೇ ಇವೆ. ಒಂದು ಕಡೆ ಮನುಷ್ಯ ಮತ್ತೊಂದು ಕಡೆ ಪ್ರಕೃತಿ ಈ ಎರಡೂ ಆಯಾಮಗಳಲ್ಲಿ ಇತಿಹಾಸ ಮರುಕಳಿಸುತ್ತಾ ಹೋಗುತ್ತದೆ. ಕಳೆದ ವರ್ಷ ಬೆಳಗಾಂ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಲು ಹೋದಾಗ ಅಲ್ಲಿಯ ಹಳ್ಳಿಯ ಜನ, ‘‘ಇಂತಹ ಭೀಕರ ಪ್ರವಾಹ ನೂರು ವರ್ಷಗಳ ಹಿಂದೆ ಬಂದಿತ್ತು!’’ ಎಂದು ಅವರ ಹಿರಿಯರಿಂದ ಕೇಳಿದ ದಾರುಣ ಸಂಗತಿಗಳನ್ನು ವಿವರಿಸಿದರು. ನೈಸರ್ಗಿಕ ಅನಾಹುತಗಳಾದ ದುರ್ಭಿಕ್ಷೆ, ಭೀಕರ ಭೂಕಂಪ, ಚಂಡಮಾರುತ, ಬರಗಾಲ, ಪ್ರವಾಹ – ಇವೆಲ್ಲಾ ಯಾವುದೋ ಒಂದು ಅನೂಹ್ಯ ಸೂತ್ರಕ್ಕೆ ಒಳಪಟ್ಟಂತೆ ನಿಯಮಿತವಾಗಿ ಪುನರಪಿ ಪುನರಪಿ ಸಂಭವಿಸುತ್ತವೆ. ಸಾಂಕ್ರಾಮಿಕ ರೋಗ ರುಜಿನಗಳೂ ಸಹ ಪುನರಾವರ್ತನೆಗೊಳ್ಳುತ್ತಾ ಹೋಗುತ್ತವೆ.
ನೂರು ವರ್ಷಗಳ ಹಿಂದೆ ಇಡೀ ಪ್ರಪಂಚವನ್ನು ಹಿಂಡಿ ಹಿಪ್ಪೆ ಮಾಡಿದ Spanish Flu ಈಗಿನ ಕೊರೊನಾದಂತೆಯೇ ತುಂಬಾ ಕಠೋರವಾದುದು. ಅದನ್ನು ಹಳ್ಳಿಭಾಷೆಯಲ್ಲಿ ಇನ್ ಫ್ಲೂಯೆಂಜಾ, ಬೊಂಬಾಯಿ ಜ್ವರ ಎಂದು ಕರೆಯುತ್ತಿದ್ದರು. ಇದು ಭಾರತಕ್ಕೆ ಮೊಟ್ಟಮೊದಲು ಕಾಲಿಟ್ಟದ್ದು 1918ರ ಜೂನ್ ತಿಂಗಳಂದು ಮುಂಬಯಿ ನಗರಕ್ಕೆ. ಮೊದಲನೇ ಮಹಾಯುದ್ಧ ಮುಗಿದ ಮೇಲೆ ಯೋಧರು ಯೂರೋಪಿನಿಂದ ಹಡಗುಗಳ ಮೂಲಕ ಮುಂಬಯಿಗೆ ಬಂದಿಳಿದಾಗ. ಮುಂಬಯಿಯಿಂದ 1918-1920ರ ಕಾಲಾವಧಿಯಲ್ಲಿ ನಮ್ಮ ದೇಶದಲ್ಲಿ ಮದ್ರಾಸು, ಕೋಲ್ಕತ್ತಾ ನಗರಗಳಿಗೆ ಹಬ್ಬಿದ ಆ ಮಹಾಮಾರಿ ಅತ್ಯಂತ ಮಾರಣಾಂತಿಕ ಕಾಯಿಲೆಯಾಗಿತ್ತು. ಆಗಿನ ಬೆಂಗಳೂರಿನ ಸಿಟಿ ಮುನಿಸಿಪಲ್ ಕೌನ್ಸಿಲ್ನಿಂದ ವೈದ್ಯಾಧಿಕಾರಿಗಳು ಹೊರಡಿಸಿದ ಒಂದು ಪ್ರಕಟಣೆಯಲ್ಲಿ ನೀಡಿರುವ ಈ ಮುಂದಿನ ಕೆಲವು ಎಚ್ಚರಿಕೆಯ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ: ‘‘ಕೆಲವು ದಿನಗಳಿಂದ ಈಚೆಗೆ ಜನರು ಜ್ವರ, ನೆಗಡಿ, ಕೆಮ್ಮು ಇವುಗಳಿಂದ ನರಳುತ್ತಿರುವಂತೆ ಕಾಣುತ್ತದೆ. 1) ಜನರು ಗುಂಪಾಗಿ ಸೇರತಕ್ಕ ಸ್ಥಳಗಳು ಅಂದರೆ ಸಿನಿಮಾ, ನಾಟಕ ಇವುಗಳಿಗೆ ಹೋಗಬಾರದು. 2) ಕೆಮ್ಮುತ್ತಿರುವವರ ಸಮೀಪದಲ್ಲಿ ಸೇರಬಾರದು. 3) ರಾತ್ರಿ ಹಗಲು ಒಳ್ಳೆ ಗಾಳಿ ಬೀಸುವ ಜಾಗದಲ್ಲಿ ಇರಬೇಕು. 4) ಶುದ್ಧವಾದ ಗಾಳಿ ಬೆಳಕು ಇದ್ದಷ್ಟೂ ಸೋಂಕು ಕಡಿಮೆಯಾಗುತ್ತದೆ. 5) ದೇಹಕ್ಕೂ ಮನಸ್ಸಿಗೂ ಆಲಸ್ಯವಾಗುವಂತೆ ದುಡಿದು ಕೆಲಸ ಮಾಡಬಾರದು.’’
ಆಗಿನ ವರದಿಗಳ ಪ್ರಕಾರ ವಾರಕ್ಕೆ 200 ಜನರು ಸಾಯುತ್ತಿದ್ದರು. ವಿಶ್ವದಾದ್ಯಂತ ಈ ಸೋಂಕಿಗೆ ಒಳಗಾದವರು 50 ಕೋಟಿಗೂ ಹೆಚ್ಚು. ಪ್ರಪಂಚದ ಮೂರನೇ ಒಂದು ಭಾಗದಷ್ಟು ಜನರಿಗೆ ಸೋಂಕು ತಗುಲಿ 10 ಕೋಟಿ ಜನರು ವಿಧಿವಶರಾದರು. ಭಾರತದಲ್ಲಿ ಅದಕ್ಕೆ ಬಲಿಯಾದವರ ಸಂಖ್ಯೆ 1.7 ಕೋಟಿ! ಮೊದಲ ಮಹಾಯುದ್ಧದಲ್ಲಿ ಮಡಿದವರಿಗಿಂತ ಹೆಚ್ಚು ಜನರು ಭಾರತದಲ್ಲಿ ಬಲಿಯಾದರು. ಅಂದರೆ ದೇಶದ ಪ್ರತಿಶತ 6ರಷ್ಟು ಜನಸಂಖ್ಯೆ ಆ ರೋಗದ ಪಾಶಕ್ಕೆ ಸಿಲುಕಿತು. ಸತ್ತವರನ್ನು ಸುಡಲು ಕಟ್ಟಿಗೆಗೂ ಅಭಾವ. ಗಂಗೆಯೂ ಸೇರಿದಂತೆ ದೇಶದ ನದಿಗಳಲ್ಲಿ ಸತ್ತ ಹೆಣಗಳು ತೇಲತೊಡಗಿದವು. ಗಾಯದ ಮೇಲೆ ಬರೆ ಎಳೆದಂತೆ ನಂತರ ಬಂದ ಭೀಕರ ಬರಗಾಲ ಜನಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿತು. ಈಗ ಪಟ್ಟಣಗಳಿಂದ ಜನರು ಹಳ್ಳಿಗಳಿಗೆ ಧಾವಿಸಿದರೆ ಆಗ ಹಳ್ಳಿಗಳಿಂದ ಪಟ್ಟಣಗಳಿಗೆ ಜನ ಗುಳೆ ಹೋದರು, ರೋಗ ಮತ್ತಷ್ಟು ವೇಗವಾಗಿ ಹಬ್ಬಿತು. ಗುಜರಾತಿನ ಸಾಬರಮತಿ ಆಶ್ರಮಕ್ಕೂ ಅದು ಹಬ್ಬಿತು. ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ವಾಪಾಸು ಬಂದು 4 ವರ್ಷಗಳಾಗಿತ್ತು. ಅವರಿಗೂ ಅದು ತಗುಲಿತು. ಬಾಪೂಜಿಯವರು ದ್ರವಾಹಾರ ಮಾತ್ರ ಸೇವಿಸಿ ವಿಶ್ರಾಂತಿ ಪಡೆದರು. ಈ ಸುದ್ದಿ ಹಬ್ಬಿದಾಗ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತು: ‘‘ಗಾಂಧೀಜಿಯವರ ಪ್ರಾಣ ಕೇವಲ ಅವರೊಬ್ಬರಿಗೇ ಸೇರಿದ್ದಲ್ಲ; ಅದು ಇಡೀ ದೇಶಕ್ಕೆ ಸೇರಿದ್ದು!’’ ಆಗ ಉಂಟಾದ ಸಾವು-ನೋವು ಮತ್ತು ಆರ್ಥಿಕ ಸಂಕಷ್ಟದಿಂದ ರೋಸಿ ಹೋದ ಜನರು ಬ್ರಿಟಿಷ್ ಆಡಳಿತದ ವಿರುದ್ಧ ಸೆಟೆದು ನಿಂತರು. ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ದೊರೆಯಿತು.
ಈಗ ಕಾಲಚಕ್ರ ಉರುಳಿದೆ. ಅಂತಹದೇ ಮಹಾಮಾರಿ, ಕೋವಿಡ್-19 ಈಗ ವಿಶ್ವಕ್ಕೆ ವಕ್ಕರಿಸಿದೆ. ಆಗಿನ ಸಂದರ್ಭಕ್ಕೆ ಹೋಲಿಸಿದರೆ ಈಗಿನ ಚಿಕಿತ್ಸಾ ಪ್ರಕ್ರಿಯೆಯಲ್ಲಿ ಅಗಾಧವಾದ ಸುಧಾರಣೆಯಾಗಿದೆ. ಆಗ ವೈದ್ಯವಿಜ್ಞಾನ ಇನ್ನೂ ಅಂಬೆಗಾಲಿಡುತ್ತಿತ್ತು. ಆದರೆ ಈಗ ವಿಜ್ಞಾನಿಗಳು ವೈರಸ್ಸಿನ ವಂಶಾವಳಿಯನ್ನು ಜಾಲಾಡಿದ್ದಾರೆ. ಅದಕ್ಕೆ ಮದ್ದಿಲ್ಲವೆಂಬುದು ನಿಜವಾದರೂ ವೈರಸ್ ವಿರುದ್ಧದ ಮದ್ದುಗಳ ಲಭ್ಯತೆಯಂತೂ ಇದೆ. ಲಸಿಕೆಯ ಶೋಧವೂ ನಡೆದಿದೆ. ಆಗ ಚಿಕಿತ್ಸೆಗೆ ಯಾವ ಮದ್ದೂ ಇರಲಿಲ್ಲ. ರೋಗ ಬಂದರೆ ಸಾವು ತಲೆದಿಂಬಿನ ಬಳಿ ಕುಳಿತಿರುತ್ತಿತ್ತು. ಈಗ ಹಾಗಿಲ್ಲ. ವೈರಸ್ನಿಂದ ಗುಣಮುಖರಾಗಿ ಬಿಡುಗಡೆಯಾಗುವವರ ಸಂಖ್ಯೆ ಶೇ.50ಕ್ಕಿಂತ ಹೆಚ್ಚಿದೆ. ಈಗ ಆಧುನಿಕ ಉಪಕರಣಗಳ ಸಹಾಯದಿಂದ ಚಿಕಿತ್ಸೆ ಸುಲಭವಾಗಿದೆ, ಪರಿಣಾಮಕಾರಿಯಾಗಿದೆ. ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೂ ತೀವ್ರ ನಿಗಾ ಘಟಕಗಳಲ್ಲಿರಿಸಿ ಚಿಕಿತ್ಸೆ ನೀಡುವ ಸೌಲಭ್ಯಗಳಿವೆ. ಬಲಿಯಾಗುತ್ತಿರುವವರು ವೃದ್ಧರು ಹಾಗೂ ಬಿ.ಪಿ, ಸಕ್ಕರೆ ಕಾಯಿಲೆ, ಹೃದ್ರೋಗ ಮುಂತಾದ ರೋಗಗಳಿಂದ ಬಳಲುತ್ತಿರುವವರೇ ಹೆಚ್ಚು. ಯುವಕರನ್ನು ಅದು ಘಾಸಿಗೊಳಿಸುತ್ತಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಯುವಕರಲ್ಲಿ ರೋಗದ ಲಕ್ಷಣಗಳೇ ಕಾಣದೆ ತಂತಾವೇ ಗುಣಮುಖರಾಗುತ್ತಿದ್ದಾರೆ. ರೋಗ ಬಂದರೂ ಬಹಳಷ್ಟು ಜನರಿಗೆ ಸರ್ವೇಸಾಮಾನ್ಯವಾದ ನೆಗಡಿ ಕೆಮ್ಮಿನಂತೆ ಬಂದು ಹೋಗಿಬಿಡುತ್ತದೆ. ಆದರೆ ಅಂತಹವರಿಂದ ಸೋಂಕು ಹರಡುವುದು ಮಾತ್ರ ಆತಂಕಕಾರಿಯೇ ಸರಿ.
ಆಗಲೂ ಮುಂಬಯಿಯಿಂದ ಸೋಂಕು ಆರಂಭವಾಗಿತ್ತು; ಹೆಚ್ಚು ಪ್ರಾಣಹಾನಿಯೂ ಅದೇ ನಗರದಲ್ಲೇ ಆಗಿದ್ದು. ಈಗಲೂ ಮುಂಬಯಿ ನಗರವೇ ಕೋವಿಡ್ 19ರ ರಾಜಧಾನಿಯಾಗಿದೆ. ಮಹಾರಾಷ್ಟ್ರ, ದಿಲ್ಲಿ, ಗುಜರಾತ್ಗಳಿಂದ ಬಂದವರಿಂದ ಕರ್ನಾಟಕದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಹೆಚ್ಚುತ್ತಿದೆ. ಈಗ ಬೆಂಗಳೂರು ನಿಯಂತ್ರಣಕ್ಕೆ ಸಿಗದಂತಾಗಿದೆ. ಬೆಂಗಳೂರಿನಿಂದ ಬರುವ ಜನರಿಂದ ಹಳ್ಳಿಗಳಿಗೆ ಸೋಂಕು ಹಬ್ಬುತ್ತಿದೆ. ಆಧುನಿಕತೆ ಎಂಬುದೇ ನಮ್ಮ ದೊಡ್ಡ ಶತ್ರು ಎಂದು ಗಾಂಧೀಜಿ ಹೇಳುತ್ತಿದ್ದರು. ಆಧುನಿಕ ಜೀವನಶೈಲಿ ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ದುರ್ಬಲಗೊಳಿಸುತ್ತಾ ಹೋಗುತ್ತದೆ ಎಂದವರು ಪ್ರತಿಪಾದಿಸುತ್ತಿದ್ದರು. ಸರಳ ಬದುಕು ಉನ್ನತ ಚಿಂತನೆ ಇದು ಗಾಂಧೀಪ್ರಣೀತ ಜೀವನಮಾರ್ಗ. ಈಗಲೂ ಆಧುನಿಕ ಜೀವನಶೈಲಿಯೇ ಜನರ ವೈರಿಯಾಗಿದೆ. ಇದರ ಜೊತೆಗೆ ನಮ್ಮ ದೃಶ್ಯ ಮಾಧ್ಯಮಗಳಲ್ಲಿ ಬರುವ ಅತಿರಂಜಿತ ವರದಿಗಳು ಜನರನ್ನು ಮನೋರೋಗಿಗಳನ್ನಾಗಿ ಮಾಡುತ್ತಿವೆ. ಕೊರೋನಾ ಸೋಂಕು ತಗುಲಿತೆಂದರೆ ರೋಗಿ ‘ಹರೋಹರ’ ಎಂಬಂತಹ ಭಯವನ್ನೇ ಜನಮನದಲ್ಲಿ ಬಿತ್ತಿ ಬೆಳೆಯುತ್ತಿವೆ! ಆದರೂ ಜನ ಎಚ್ಚೆತ್ತುಕೊಳ್ಳದಿರುವುದು ವಿಷಾದನೀಯ ಸಂಗತಿ.