ಹಿಂದುತ್ವವಲ್ಲ ದ್ವಂದ್ವತ್ವದತ್ತ ಕಾಂಗ್ರೆಸ್ ರಾಗಾ!

ನಟ ಪ್ರಕಾಶ್ ರೈ ಮುಂದಿಡುತ್ತಿರುವ ವಾದಗಳ ಕುರಿತು ತದನಂತರದಲ್ಲಿ ಚರ್ಚೆ ಮಾಡೋಣ. ಅದಕ್ಕೂ ಮೊದಲು ಗಮನಿಸಲೇಬೇಕಾದ ಕೆಲ ಸಂಗತಿಗಳಿವೆ.

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಗ್ರಪ್ರಾಶಸ್ತ್ಯ ಇರುವುದು ನಿಜ. ಆದರೆ ಅದರ ಅರ್ಥ ಯಾರು ಬೇಕಾದರೂ, ಯಾರ ವಿರುದ್ಧ ಬೇಕಾದರೂ ಏನು ಬೇಕಾದರೂ ಮಾತನಾಡಬಹುದು ಅಂತಲ್ಲ. ಬಾಯಿಗೆ ಬಂದಂತೆ ಮಾತನಾಡಿದರೆ ಟಿವಿ ಚಾನೆಲ್​ಗಳಿಗೆ ಆಹಾರ ಆಗಬಹುದೇ ಹೊರತು ಆಡಿದವನ ವ್ಯಕ್ತಿತ್ವವೇನೂ ಅರೆಕ್ಷಣದಲ್ಲಿ ಹಿಮಾಲಯದ ಎತ್ತರಕ್ಕೆ ಏರುವುದಿಲ್ಲ. ಇತಿಹಾಸ, ಪರಂಪರೆ ಬದಲಾಗಿಹೋಗುವುದಿಲ್ಲ. ಜನರು ನಂಬಿ ಅನುಸರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಲವೊಂದು ಘಟನೆಗಳನ್ನು ಮೆಲುಕು ಹಾಕುವುದು ಉತ್ತಮ.

ಕಳೆದ ಅನೇಕ ವರ್ಷಗಳಿಂದ ಆರೆಸ್ಸೆಸ್ ಕುರಿತು ಒಂದು ಮಿಥ್ಯೆ ಪದೇಪದೆ ಚರ್ಚೆಯ ಮುನ್ನೆಲೆಗೆ ಬರುತ್ತಿದೆ. ಅದರಲ್ಲೂ ಭಾಜಪ ಭಾರತದ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದನಂತರ ಅದು ಮತ್ತಷ್ಟು ಹೆಚ್ಚಾಗಿದೆ. ಆ ಪೈಕಿ ತೀರಾ ಇತ್ತೀಚಿನ ಉದಾಹರಣೆ ಎಂದರೆ ಕರ್ನಾಟಕದಲ್ಲಿ ಮತೀಯ ಹಿಂಸಾಚಾರದಲ್ಲಿ ತೊಡಗಿರುವ ಕೆಲ ಸಂಘಟನೆಗಳನ್ನು ನಿಷೇಧಿಸಬೇಕು ಎಂಬ ಆಗ್ರಹ ಕೇಳಿಬಂದಾಗ ಹಿಂದೆಮುಂದೆ ನೋಡದೆ ಆರೆಸ್ಸೆಸ್ ಮತ್ತು ಬಿಜೆಪಿ ಸಂಘಟನೆಗಳನ್ನೂ ನಿಷೇಧಿಸಬೇಕು ಎಂಬ ತರ್ಕವಿಲ್ಲದ ವಾದವನ್ನು ಸ್ವತಃ ಮುಖ್ಯಮಂತ್ರಿಯೇ ಮುಂದಿಟ್ಟರು. ಕೊನೆಗೆ ಹಾಗೆ ಹೇಳಿದ್ದು ತಪ್ಪಾಯಿತು ಎಂದು ಅನ್ನಿಸುತ್ತಿದ್ದಂತೆ ‘ನಾನು ಹೇಳಿದ್ದು ಹಾಗಲ್ಲ ಹೀಗೆ’ ಎಂದು ಹೇಳಿ ಪಾರಾಗುವ ಯತ್ನ ಮಾಡಿದರು, ಆ ಮಾತು ಬೇರೆ.

ಕೆಲ ತಿಂಗಳ ಹಿಂದೆ ರಾಹುಲ್ ಗಾಂಧಿ ಕೂಡ ಹೀಗೇ ಹೇಳಿದ್ದರು. ಆರೆಸ್ಸೆಸ್ ಕುರಿತು ಇಲ್ಲಸಲ್ಲದ ಮಾತನಾಡಿ ಕೊನೆಗೆ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಬೇಕಾಗಿ ಬಂತು. ಇಲ್ಲಿ ಹೇಳಬೇಕಿರುವ ಅಂಶ ಇಷ್ಟೆ, 125 ವರ್ಷ ಹಳೆಯ ಕಾಂಗ್ರೆಸ್ ಪಕ್ಷದ ವಾರಸುದಾರನಾಗಲು ಹೊರಟಿರುವ, ಮುಂದೆ ಈ ದೇಶದ ಪ್ರಧಾನಿ ಆಗಬೇಕೆಂಬ ಕನಸು ಕಾಣುವ ವ್ಯಕ್ತಿ ಅಥವಾ 45 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಇದ್ದೇನೆಂದು ಹೇಳಿಕೊಳ್ಳುವ ವ್ಯಕ್ತಿ ದೇಶದ ಇತಿಹಾಸ, ಸಂಸ್ಕೃತಿ, ಸಾಮಾಜಿಕ-ರಾಜಕೀಯ ಜನಜೀವನದ ಕುರಿತು ಕನಿಷ್ಠತಮ ಅಧ್ಯಯನವನ್ನಾದರೂ ಮಾಡಿರಬೇಕು, ಅರಿವನ್ನು ಹೊಂದಬೇಕು ಎಂದು.

ಹಾಗೆ ನೋಡಿದರೆ ಆರೆಸ್ಸೆಸ್​ಗೂ ಕಾಂಗ್ರೆಸ್ ಪಕ್ಷಕ್ಕೂ ಅವಿನಾಭಾವ ನಂಟಿದೆ. ಆರೆಸ್ಸೆಸ್ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಡ್ಗೇವಾರ್ ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾಗಿದ್ದವರು. ಗಾಂಧಿ ಜೊತೆಗೆ ಅನೇಕ ಕಾಂಗ್ರೆಸ್ ಅಧಿವೇಶನಗಳಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದ್ದರು. 1921ರ ಅಸಹಕಾರ ಚಳವಳಿಯಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡು ಜೈಲುವಾಸವನ್ನೂ ಅನುಭವಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತದಿಂದ ದೇಶವನ್ನು ಒಟ್ಟಾಗಿ, ಒಂದಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಕೆಲವೇ ಕಾಲದಲ್ಲಿ ಅವರಿಗೆ ಮನದಟ್ಟಾಗಿ, ಇಲ್ಲಿರುವ ಜಾತೀಯತೆ, ಪ್ರತ್ಯೇಕತೆ, ಮೇಲುಕೀಳು ಭಾವನೆಗೆ ಎಲ್ಲರನ್ನೂ ಒಂದುಗೂಡಿಸುವ ಹಿಂದುತ್ವದ ಆಧಾರದಲ್ಲಿ ಸಮಾಜವನ್ನು ಬೆಸೆಯುವುದೇ ಮದ್ದು ಎಂಬ ಗಟ್ಟಿ ತೀರ್ವನಕ್ಕೆ ಬಂದರು. ಕೇವಲ ತುಂಬಿ ತುಳುಕುವಷ್ಟು ಜನರು ಒಂದು ಸಂಘಟನೆ ಅಥವಾ ದೇಶದಲ್ಲಿ ಇದ್ದಾರೆ ಎಂದ ಮಾತ್ರಕ್ಕೆ ಆ ಸಂಘಟನೆ ಅಥವಾ ದೇಶ ಸುಭಿಕ್ಷವಾಗಿ, ಸಶಕ್ತವಾಗಿ ಇರಲು ಸಾಧ್ಯವಿಲ್ಲ ಎಂದು ಭಾವಿಸಿ ಸಂಸ್ಕಾರವಂತ ವ್ಯಕ್ತಿಗಳಿಂದ ಕೂಡಿದ ದೇಶಕಟ್ಟುವ ಕನಸು ಕಂಡು 1925ರಲ್ಲಿ ಆರೆಸ್ಸೆಸ್ ಸ್ಥಾಪನೆ ಮಾಡಿದರು. ಹೆಡ್ಗೇವಾರ್ ಆಲೋಚನೆ ಸರಿ ಎಂಬುದಕ್ಕೆ ಗಾಂಧಿಯಂತಹ ನಾಯಕ/ಲಕ್ಷಾಂತರ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಇದ್ದೂ ದೇಶ ವಿಭಜನೆ ತಡೆಯಲಾಗದ್ದು ಮತ್ತು ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು ಎಂದು ಸಾವಿರ ಬಾರಿ ಹೇಳಿದರೂ ಮೂಲಸತ್ವವನ್ನೇ ಕಳೆದುಕೊಂಡ ಕಾರಣ ಕಾಂಗ್ರೆಸ್ ಈಗಲೂ ಕುಸಿತದ ಹಾದಿಯಲ್ಲೇ ಸಾಗುತ್ತಿರುವ ಎರಡು ಉದಾಹರಣೆಗಳು ಸಾಕು.

ಆರೆಸ್ಸೆಸ್ ವಿಷಯದಲ್ಲಿ ಗಾಂಧಿ/ನೆಹರು/ಅಂಬೇಡ್ಕರ್ ಮುಂತಾದವರು ಏನು ಹೇಳಿದ್ದರು ಎಂಬುದನ್ನು ಗಮನಿಸುವುದು ಉತ್ತಮ. 1932ರಲ್ಲಿ ಗಾಂಧಿ ಅವರು ಮಹದೇವ್ ದೇಸಾಯಿ ಮತ್ತು ಮೀರಾ ಬೆನ್ ಅವರೊಂದಿಗೆ ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆಯುತ್ತಿದ್ದ ಆರೆಸ್ಸೆಸ್ ಶಿಬಿರಕ್ಕೆ ಭೇಟಿ ನೀಡಿದ್ದರು. ಆ ವೇಳೆ ಗಾಂಧಿ ಶಿಬಿರದಲ್ಲಿನ ಒಟ್ಟು ಚಟುವಟಿಕೆಯನ್ನು ನಿಕಟವಾಗಿ ಗಮನಿಸಿ, ಒಟ್ಟಿಗೆ ಉಳಿದುಕೊಂಡರೂ ಪರಸ್ಪರ ಜಾತಿಯಿಂದ ಗುರುತಿಸದ ಬಲು ಅಪರೂಪದ ಸಂಸ್ಕೃತಿಯನ್ನು ಆರೆಸ್ಸೆಸ್​ನಲ್ಲಿ ಕಂಡೆ ಎಂದು ಹೇಳಿದ್ದರು.

ಆರೆಸ್ಸೆಸ್ ವಿಚಾರದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ವಿಚಾರ ಇನ್ನಷ್ಟು ಸ್ಪಷ್ಟವಾಗಿತ್ತು. 1939ರಲ್ಲಿ ಅವರು ಆರೆಸ್ಸೆಸ್ ಶಿಬಿರಕ್ಕೆ ಭೇಟಿ ನೀಡಿದ್ದರು. ‘ಆರೆಸ್ಸೆಸ್​ನಲ್ಲಿ ಅಪ್ರತಿಮ ಸಮಾನತೆ ಕಂಡು ಆನಂದಪಟ್ಟೆ. ಕಾರ್ಯಕರ್ತರ ನಡುವೆ ಮೇಲ್ಜಾತಿ, ಕೆಳಜಾತಿ ಎಂಬ ಗಂಧವೂ ಕಾಣಲು ಸಿಗುವುದಿಲ್ಲ’ಎಂದಿದ್ದರು ಅಂಬೇಡ್ಕರ್.

ಸ್ವಾತಂತ್ರಾ್ಯ ನಂತರ ಪಂಡಿತ್ ನೆಹರು ತಮ್ಮ ಮೊದಲ ಕ್ಯಾಬಿನೆಟ್​ನಲ್ಲಿ ಆರೆಸ್ಸೆಸ್ ಹಿನ್ನೆಲೆಯವರೂ ಸೇರಿ ವಿವಿಧ ವಿಚಾರಧಾರೆ ಮೂಲದಿಂದ ಬಂದ ಹಲವಾರು ನಾಯಕರನ್ನು ಮಂತ್ರಿಗಳನ್ನಾಗಿ ನೇಮಿಸಿದ್ದರು. ಅದೇ ನೆಹರು 1962ರ ಚೀನಾ ಯುದ್ಧದ ನಂತರ 1963ರಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್​ನಲ್ಲಿ ಗಣವೇಷಧಾರಿ ಸ್ವಯಂಸೇವಕರು ಬ್ಯಾಂಡ್ ಸಮೇತ ಭಾಗವಹಿಸಲು ಆಹ್ವಾನ ನೀಡಿದ್ದರು. ರಾಹುಲ್ ಗಾಂಧಿ/ಸಿದ್ದರಾಮಯ್ಯನಂಥವರಿಗೆ ಈ ಸಂಗತಿ ಗೊತ್ತಿರಬೇಕಲ್ಲವೇ?

ಇನ್ನು ಸದಾ ಚರ್ಚೆಯಾಗುವ ಗಾಂಧಿ ಹತ್ಯೆ ಆರೋಪದ ವಿಚಾರ. ಗಾಂಧಿ ಕೊಲೆ ನಡೆದ 1948ರ ಜನವರಿ 30ರ ಸಾಯಂಕಾಲ ಆರೆಸ್ಸೆಸ್​ನ ದ್ವಿತೀಯ ಸರಸಂಘಚಾಲಕ(ಮುಖ್ಯಸ್ಥರು)ಗುರೂಜಿ ಗೋಳವಲ್ಕರ್ ಮದ್ರಾಸ್​ನಲ್ಲಿ ಸಂಘದ ಪ್ರಮುಖರ ಮೀಟಿಂಗ್​ನಲ್ಲಿದ್ದರು. ಕೈಯಲ್ಲಿ ಚಹಾ ಕಪ್ಪನ್ನು ಹಿಡಿದು ಇನ್ನೇನು ಮೊದಲ ಸಿಪ್ಪನ್ನು ಹೀರಬೇಕು, ಅಷ್ಟರಲ್ಲಿ ದೆಹಲಿಯ ಬಿರ್ಲಾ ಭವನದಲ್ಲಿ ನಡೆಯುತ್ತಿದ್ದ ಪ್ರಾರ್ಥನಾ ಸಭೆಯಲ್ಲಿ ಗಾಂಧಿ ಹತ್ಯೆಯಾಯಿತೆಂಬ ಸುದ್ದಿ ಬಂದೆರಗಿತು. ಆಗ ಗುರೂಜಿ ಹೇಳಿದ್ದು- ‘ದೇಶಕ್ಕೆ ಎಂತಹ ದುರಂತ ಬಂದೆರಗಿತು!’. ತಕ್ಷಣ ನಾಗಪುರಕ್ಕೆ ಹೊರಟುನಿಂತ ಗುರೂಜಿ, ಮದ್ರಾಸಿನಿಂದಲೇ ಪ್ರಧಾನಿ ನೆಹರು, ಗೃಹಸಚಿವ ಪಟೇಲ್, ಗಾಂಧಿ ಪುತ್ರ ದೇವದಾಸ್ ಗಾಂಧಿ ಅವರಿಗೆ ಶೋಕಸಂದೇಶ ಕಳುಹಿಸಿದರು. ಅಷ್ಟೇ ಅಲ್ಲ, ಶೋಕಾಚರಣೆ ನಿಮಿತ್ತವಾಗಿ ಹದಿಮೂರು ದಿನಗಳ ಕಾಲ ದೇಶಾದ್ಯಂತ ಸಂಘದ ಶಾಖೆಗಳನ್ನು ಸ್ಥಗಿತಗೊಳಿಸಲು ಸೂಚಿಸಿ ಸ್ವಯಂಸೇವಕರಿಗೆ ಪತ್ರ ಬರೆದರು. ನೆಹರು ಮತ್ತು ಸರ್ದಾರ್ ಪಟೇಲರಿಗೆ ಬರೆದ ಪತ್ರದಲ್ಲಿ ‘ಸರ್ಕಾರ ಹಂತಕರನ್ನು ಹಿಡಿದು ನಿರ್ದಾಕ್ಷಿಣ್ಯವಾಗಿ ದಂಡಿಸುವ ಸಂಪೂರ್ಣ ವಿಶ್ವಾಸವಿದೆ. ನಮ್ಮೆಲ್ಲರಿಗೆ ಇದೊಂದು ಅಗ್ನಪರೀಕ್ಷೆಯ ಕಾಲ, ನಾವೆಲ್ಲ ಸೇರಿ ದೇಶದ ದೋಣಿಗೆ ಹುಟ್ಟುಹಾಕುವ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದಿದ್ದರು. ವಾಸ್ತವ ಇದಾದರೂ ಗೋಡ್ಸೆ ಆರೆಸ್ಸೆಸ್ ಸ್ವಯಂಸೇವಕ, ಗಾಂಧಿ ಹತ್ಯೆಯ ಹಿಂದೆ ಆರೆಸ್ಸೆಸ್ ಕೈವಾಡ ಇದೆಯೆಂದು ಇಂದಿಗೂ ರಾಹುಲ್ ಗಾಂಧಿ/ಸಿದ್ದರಾಮಯ್ಯ ಅಂಥವರಿಂದ ಹಿಡಿದು ಕಂಡಕಂಡವರೆಲ್ಲ ಆರೋಪ ಮಾಡುವುದನ್ನು ಕಾಣುತ್ತೇವೆ.

ಗಾಂಧಿ ಹತ್ಯೆ ಆರೋಪಕ್ಕೆ ಸಂಬಂಧಿಸಿ ಆರೆಸ್ಸೆಸ್​ನ ನಾಲ್ಕನೇ ಸರಸಂಘಚಾಲಕರ ವಾದವೇ ಬೇರೆ ಇತ್ತು. 1998ರಲ್ಲಿ ಔಟ್​ಲುಕ್ ಮ್ಯಾಗಜಿನ್​ಗೆ ನೀಡಿದ್ದ ಸಂದರ್ಶನದಲ್ಲಿ ಅವರು ಹೀಗೆ ಹೇಳಿದ್ದರು-‘ ಗೋಡ್ಸೆ ಆರೆಸ್ಸೆಸ್​ಗೆ ಸೇರುವ ಪೂರ್ವದಲ್ಲೇ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ. ಗಾಂಧಿ ಹತ್ಯೆ ನಡೆದದ್ದು 1948ರಲ್ಲಿ. ಆದರೆ ಗೋಡ್ಸೆ 1932ರಲ್ಲೇ ಆರೆಸ್ಸೆಸ್ ತೊರೆದು ಹಿಂದೂ ಮಹಾಸಭಾ ಸೇರಿದ್ದ. ಗೋಡ್ಸೆ ಸ್ವಯಂಸೇವಕ ಎಂಬುದಕ್ಕಾಗಿ ಗಾಂಧಿ ಹತ್ಯೆಯ ಹಿಂದೆ ಆರೆಸ್ಸೆಸ್ ಮಸಲತ್ತು ಇದೆ ಎನ್ನುವುದಾದರೆ ಅದೇ ಗೋಡ್ಸೆ ಕಾಂಗ್ರೆಸ್ ಕಾರ್ಯಕರ್ತ ಕೂಡ ಆಗಿದ್ದ. ಗೋಡ್ಸೆ ಸ್ವಯಂಸೇವಕನಾಗಿದ್ದ ಎಂಬುದಕ್ಕಾಗಿ ಆರೆಸ್ಸೆಸ್ ವಿರುದ್ಧ ತನಿಖೆ ನಡೆಯುವುದಾದರೆ ಕಾಂಗ್ರೆಸ್ ನಾಯಕರನ್ನೂ ವಿಚಾರಣೆಗೆ ಗುರಿಪಡಿಸಬೇಕಾಗುತ್ತದೆ. ಗಾಂಧಿ ಹತ್ಯೆಗೂ ಆರೆಸ್ಸೆಸ್​ಗೂ ಯಾವುದೇ ಸಂಬಂಧ ಕಾಣಿಸುವುದಿಲ್ಲ ಎಂದು ಮೊದಲ ಬಾರಿ ಪ್ರಕರಣದ ವಿಚಾರಣೆ ನಡೆಸಿದ ಜಸ್ಟಿಸ್ ಆತ್ಮಾಚರಣ್ ಹೇಳಿದ್ದಾರೆ. ನ್ಯಾ.ಖೋಸ್ಲೆ, ನ್ಯಾ.ಕಪೂರ್ ತನಿಖಾ ಸಮಿತಿ ಕೂಡ ಅದೇ ಅಭಿಪ್ರಾಯ ವ್ಯತಕ್ತಪಡಿಸಿವೆ. ಪ್ರಧಾನಿ ನೆಹರು ಆದೇಶದಂತೆ ನಡೆದ ತನಿಖೆಯಲ್ಲೂ ಆ ಆರೋಪ ಸಾಬೀತಾಗಿಲ್ಲ.’ ಕಾಂಗ್ರೆಸ್ ಸರ್ಕಾರ ಆರೆಸ್ಸೆಸ್ಸನ್ನು ನಿಷೇಧಿಸಿದಾಗಲೂ ಕೋರ್ಟ್​ಗಳಲ್ಲಿ ಯಾವ ಆರೋಪವನ್ನೂ ಸಾಬೀತು ಮಾಡಲಾಗಲಿಲ್ಲ. ಪರಿಣಾಮವಾಗಿ ನಿರ್ಬಂಧ ತೆಗೆಯಬೇಕಾಯಿತು. ಇಷ್ಟಾದರೂ ರಾಹುಲ್, ಸಿದ್ದರಾಮಯ್ಯ ನಿಷೇಧದ ಮಾತನಾಡುತ್ತಾರೆಂದರೆ ಏನು ಹೇಳೋಣ?

ಗಾಂಧಿ ಹತ್ಯೆ ಆರೋಪದ ನಂತರ ಅತಿ ಹೆಚ್ಚು ಚರ್ಚೆ, ಜಾತ್ಯತೀತವಾದಿಗಳ ಟೀಕೆಗೆ ಅಸ್ತ್ರವಾದದ್ದು ಹಿಂದುತ್ವ ಅಥವಾ ಕೋಮುವಾದ ಎಂಬ ಎರಡು ಪದಗಳು. ದೇಶದ ಎಲ್ಲ ಜನಜಾತಿಗಳನ್ನು ಒಂದೇ ಛತ್ರದಡಿ ತರುವ ಹಿಂದುತ್ವವಾದ ಬಹುತ್ವದ ಮೇಲಿನ ದಬ್ಬಾಳಿಕೆ ಎಂದು ಜರಿದವರೇ ಜಾತಿವಿನಾಶದ ಶಪಥವನ್ನೂ ಮಾಡಿದರು. ವೈಯಕ್ತಿಕ ನೆಲೆಯಲ್ಲಿ ಜಾತಿಗಳನ್ನೂ ಉಳಿಸಿಕೊಂಡು ಏಕತೆ ಸಾಧಿಸಬೇಕೆನ್ನುವ ಹಿಂದುತ್ವ ಕೋಮುವಾದ ಹೇಗಾಗುತ್ತದೆಯೋ ಆ ಭಗವಾನನೇ ಬಲ್ಲ! ಜಾತಿ ವಿನಾಶವೂ ಈ ದೇಶದ ಬಹುಸಂಸ್ಕೃತಿಯ ನಾಶದ ಕೆಲಸವೇ ಅಲ್ಲವೇ? ಮಾತೆತ್ತಿದರೆ ಜಾತಿ/ಧರ್ಮಗಳ ಹೆಸರಲ್ಲಿ ಸಮಾಜ ಒಡೆಯುತ್ತಿರುವವರ ಬಾಯಲ್ಲಿ ಜಾತ್ಯತೀತತೆ, ಏಕತೆ, ಸಮಾನತೆಗಳ ಉಪದೇಶ ಕೇಳಬೇಕಾಗಿ ಬಂದಿದೆ.

ಈ ಹಿಂದೆ ಜಾಗತೀಕರಣಕ್ಕೆ ರತ್ನಗಂಬಳಿ ಹಾಸಿದವರೇ ಈಗ ವಿದೇಶಿ ಕಂಪನಿಗಳನ್ನು ತಂದು ಪ್ರಧಾನಿ ಮೋದಿ ದೇಶಿ ಕಂಪನಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಗುಲ್ಲೆಬ್ಬಿಸುತ್ತಿದ್ದಾರೆ. ಅಂದು ಆಧಾರ್ ವ್ಯವಸ್ಥೆ ಜಾರಿಗೆ ತಂದವರೇ ಇಂದು ಆಧಾರ್ ಕಡ್ಡಾಯದಿಂದ ವ್ಯಕ್ತಿಯ ಗೌಪ್ಯತಾ ಸ್ವಾತಂತ್ರ್ಯಹರಣವಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಅಂದು ಜಿಎಸ್​ಟಿ ಪ್ರಸ್ತಾಪ ಮಾಡಿ ಆಚರಣೆಗೆ ತರಲಾಗದೆ ಕೈಚೆಲ್ಲಿದವರೇ ಇಂದು ಜಿಎಸ್ಟಿಯಿಂದ ಬಡವರ ಸುಲಿಗೆ ಆಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಂದು ನಮ್ಮದು ಧರ್ಮನಿರಪೇಕ್ಷ ಸಂವಿಧಾನ, ಧರ್ಮ ಎಂಬುದು ಅಫೀಮು, ಧರ್ಮವೇ ಸಕಲ ಅವಾಂತರಗಳಿಗೆ ಕಾರಣ ಎಂದವರು ಇಂದು ಸಂವಿಧಾನಬದ್ಧವಾಗಿ ಪ್ರಮಾಣ ಮಾಡಿದ ಮಂತ್ರಿಗಳ ಮೂಲಕವೇ ಧರ್ಮಸ್ಥಾಪನೆಯ ಕೆಲಸ ಮಾಡಿಸುತ್ತಿದ್ದಾರೆ.

ಅಂದು ರಾಮ-ಸೀತೆ ಕೃಷ್ಣ ಎಲ್ಲ ಕಾಲ್ಪನಿಕ, ರಾಮಸೇತುವೆ ಸುಳ್ಳೇಸುಳ್ಳು ಎಂದ ಮಹಾನುಭಾವರೇ ಇಂದು ರಾಮ-ಸೀತೆ ಮಾಂಸಭಕ್ಷಣೆ ಮಾಡುತ್ತಿದ್ದರು ಎಂದು ಭಾಷಣ ಮಾಡುತ್ತ ಸಿಡಿಮಿಡಿಗೊಳ್ಳುತ್ತಿದ್ದಾರೆ. ಇಂಥ ಅದೆಷ್ಟೋ ಉದಾಹರಣೆಗಳಿವೆ.

ಇದೇ ವಾದದ ಕೊನೇ ಅಸ್ತ್ರ ಮೃದು ಹಿಂದುತ್ವ ಎಂಬ ಹೊಸ ವರಸೆ ಅಂತ ತೋರುತ್ತದೆ. ನಮ್ಮದು ಹಿಂದುತ್ವದ ವಿರೋಧದ ನಿಲುವಲ್ಲ, ಮೋದಿ, ಅಮಿತ್ ಷಾ ವಿರುದ್ಧ ನಿಲುವು ಮಾತ್ರ ಎಂದು ಸಿದ್ದರಾಮಯ್ಯ ಅವರಿಂದ ಹಿಡಿದು ಪ್ರಕಾಶ್ ರೈವರೆಗೆ ಹೇಳುವ ಮಾತು. ಮೃದು ಹಿಂದುತ್ವದ ಪ್ರಯೋಗಾರ್ಥವಾಗಿ ಗುಜರಾತದಲ್ಲಿ ಶುರುವಾದ ರಾಹುಲ್ ದೇವಾಲಯ ಪ್ರದಕ್ಷಿಣೆ ಇಷ್ಟರಲ್ಲೇ ಕರ್ನಾಟಕದಲ್ಲಿ ಶುರುವಾಗಲಿದೆ. ಅಲ್ಲಾ ಸ್ವಾಮಿ ಮಂದಿರ-ಮಸೀದಿ ಚರ್ಚೆ ಶುರುವಾದಾಗ ದೇವಾಲಯಗಳನ್ನು ಚುನಾವಣಾ ಪ್ರಚಾರದ ವೇದಿಕೆ ಮಾಡಿಕೊಳ್ಳಬಾರದು, ಅದು ಕೋಮುವಾದ ಹರಡುವ ವೇದಿಕೆ ಎಂದು ಇಪ್ಪತ್ತೈದು ವರ್ಷಗಳ ಹಿಂದೆಯೇ ಚುನಾವಣಾ ಆಯೋಗಕ್ಕೆ ದೂರು ನೀಡಿ ನೀತಿಸಂಹಿತೆ ರೂಪಿಸಲು ಕಾರಣವಾದದ್ದು ಮರೆತೇ ಹೋಯಿತೇ ನಿಮಗೆ? ಒಟ್ಟಿನಲ್ಲಿ, ದೇಶ/ವ್ಯವಸ್ಥೆ ಏನಾದರಾಗಲಿ. ಸಮಾಜ ಛಿದ್ರವಾದರೆ ಆಗಲಿ ರಾಜಕೀಯ ಅಧಿಕಾರವೊಂದಿದ್ದರೆ ಸಾಕು ಎಂಬ ತೀರ್ವನಕ್ಕೆ ಬಂದಂತೆ ಕಾಣುತ್ತದೆ. ಇದರಿಂದ ಯಾರಿಗೇನು ಲಾಭ ಹೇಳಿ?

ಇದನ್ನೆಲ್ಲ ನೋಡುತ್ತಿದ್ದರೆ ಒಂದು ಅನುಮಾನ ಕಾಡುತ್ತದೆ. ಕೊನೆಗೂ ಹಿಂದುತ್ವದ ಕಡೆಗೆ ವಾಲುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರರ ಕನಸು ನನಸಾಗಿಸಲು ಶ್ರಮಿಸುತ್ತಿದ್ದಾರಾ?!

ಮುಖಕ್ಕೆ ಬಣ್ಣ ಹಚ್ಚುವವರು, ಹಚ್ಚದವರು ಎಲ್ಲ ಸೇರಿಕೊಂಡು ಎಂಥೆಂಥ ನಾಟಕ ಶುರುಮಾಡಿಕೊಂಡಿದ್ದಾರೆ ನೋಡಿ!

ನಿಜವಾದ ಹಿಂದುತ್ವ ಎಂದರೆ ಬರೀ ದೇವಾಲಯಗಳನ್ನು ಸುತ್ತುವುದಲ್ಲ. ಅಯೋಧ್ಯೆ ರಾಮಮಂದಿರ ನಿರ್ವಣ, ಸಮಾನ ನಾಗರಿಕ ಸಂಹಿತೆ, ತುಷ್ಟೀಕರಣದ ಅರ್ಥಾತ್ ಜಾತಿ ಆಧಾರಿತ ರಾಜಕಾರಣಕ್ಕೆ ತಿಲಾಂಜಲಿ ನೀಡುವುದು, ಹಜ್ ಸಬ್ಸಿಡಿ, ತ್ರಿವಳಿ ತಲಾಕ್ ಮುಂತಾದ ವಿಷಯಗಳಲ್ಲಿ ರಾಜಕೀಯ ನಾಯಕರು ಯಾವ ನಿಲುವು ತಳೆಯುತ್ತಾರೆ ಎಂಬುದಾಗಿದೆ.

ಕೊನೇ ಹನಿ: ಮೃದು ಹಿಂದುತ್ವವಾಗಲಿ ಗಟ್ಟಿ ಹಿಂದುತ್ವವೇ ಆಗಲಿ, ಒಟ್ಟಿನಲ್ಲಿ ಎಲ್ಲರೂ ಹಿಂದುತ್ವದ ಕಡೆಗೆ ವಾಲುತ್ತಿದ್ದಾರೆ ಎಂಬುದು ಸದ್ಯದ ಸಮಾಚಾರ!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top