ನೇಪಾಳ ದೊರೆ ಜತೆ ಸ್ನೇಹ ನಟನೆ

– ನಿರಂಜನ
– ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ.
ಭಾರತದ ಮೇಲೆ ಆಕ್ರಮಣ ಮಾಡುವುದಕ್ಕೆ ಮುನ್ನಒಂದು ಸುಸಜ್ಜಿತ ರಂಗಭೂಮಿಯನ್ನು ಚೀನಾ ಸಿದ್ಧಪಡಿಸಬೇಕಿತ್ತು. ಅದಕ್ಕಾಗಿ ನೆರೆಹೊರೆಯ ರಾಷ್ಟ್ರಗಳನ್ನು ಭಾರತದಿಂದ ಬೇರ್ಪಡಿಸಲು ಅದು ಮುಂದಾಯಿತು. ಮೊದಲನೆಯದಾಗಿ, ಜವಾಹರಲಾಲರ ಮಿತ್ರರಾಗಿದ್ದ ಉ-ನೂ ಅವರ ನಾಯಕತ್ವದಲ್ಲಿದ್ದ ಬರ್ಮಾ, ಚೀನಾ ಗಣರಾಜ್ಯಕ್ಕೆ ಮನ್ನಣೆಕೊಟ್ಟ ಮೊದಲ ರಾಷ್ಟ್ರ. ಆದರೂ ಬರ್ಮಾ ದೇಶದೊಳಗಿನ ಕಮ್ಯೂನಿಸ್ಟ್‌ರ ಮೂಲಕ ಒಂದು ಅಂತರ್ಯುದ್ಧವನ್ನು ಚೀನಾ ಅಲ್ಲಿ ಆರಂಭಿಸಿತು. ಅದು ಅತಿ ಶೀಘ್ರದಲ್ಲಿಯೇ ವಿಫಲವೂ ಆಯಿತು. ತನ್ನ ದೇಶವನ್ನು 1925ರಿಂದ 1947ರವರೆಗೆ ಆಳುತ್ತಿದ್ದ ಕೂವ್ಮಿಂಟಾಂಗ್ ಪಕ್ಷದ ಸೇನೆಯ ಹೋರಾಟಗಳ ಸಮಯದಲ್ಲಿನ ಅವಶೇಷಗಳನ್ನು ಹುಡುಕುವ ಸಬೂಬಿನಲ್ಲಿ ಚೀನಾ ಪಡೆಗಳು ಬರ್ಮಾವನ್ನು ಪ್ರವೇಶಿಸಿದುವು. ಆಗ ಬರ್ಮಾ ಸೇನೆಯೊಡನೆ ಸಣ್ಣ ಪುಟ್ಟ ಘರ್ಷಣೆಗಳೂ ಆದವು. ಪೀಕಿಂಗಿನೊಡನೆ ಸೆಣಸಾಡುವುದಕ್ಕಿಂತಲೂ ಸ್ನೇಹವೇ ವಾಸಿ ಎಂದು ಯೋಚಿಸಿದ ಶಾಂತಿಪ್ರಿಯರಾಗಿದ್ದ ಊ-ನೂ ಸಂಧಾನಕ್ಕೆ ಸಿದ್ಧರಾದರು. ಆ ಘಳಿಗೆಯಲ್ಲಿ ಚೀನಾಕ್ಕೆ ಬೇಕಾಗಿದ್ದುದು ಭಾರತ ಮತ್ತು ಬರ್ಮಾವನ್ನು ಪ್ರತ್ಯೇಕಿಸುವುದು. ಈ ಸಂಚನ್ನು ಯಶಸ್ವಿಗೊಳಿಸಲು ಬರ್ಮಾದೊಂದಿಗೆ ಸಣ್ಣ ಪುಟ್ಟ ಗಡಿ ಹೊಂದಾಣಿಕೆಗಳನ್ನು ಚೀನಾ ಮಾಡಿಕೊಂಡಿತು. ಬ್ರಿಟಿಷರ ಆಳ್ವಿಕೆಯಲ್ಲಿ ಗುರುತಿಸಲಾಗಿದ್ದ ಮೆಕ್‌ಮಹೋನ್ ರೇಖೆಯ ಗಡಿಯನ್ನೂ ಚೀನಾ ಒಪ್ಪಿಕೊಂಡಿತು. 1960ರ ಜನವರಿಯಲ್ಲಿ ಬರ್ಮಾ -ಚೀನಾ ಮೈತ್ರಿ ಒಡಂಬಡಿಕೆಯೊಂದಕ್ಕೆ ಸಹಿ ಬಿದ್ದಿತು.
ಬರ್ಮಾವನ್ನು ತನ್ನತ್ತ ಸೆಳೆದುಕೊಂಡ ನಂತರ ಚೀನಾ ತನ್ನ ಗಾಳವನ್ನು ನೇಪಾಳದತ್ತ ಎಸೆಯಿತು. 18ನೇ ಶತಮಾನದಲ್ಲಿ ನೇಪಾಳ ರಾಜ್ಯವು ಚೀನಾಕ್ಕೆ ಅಧೀನವಾಗಿತ್ತು. ಮುಂದೆ ಚೀನಾದಲ್ಲಿ ಮಂಚೂಗಳ ಪತನದ ವೇಳೆ, 1911ರಲ್ಲಿ ನೇಪಾಳವು ತನ್ನ ಸ್ವಾತಂತ್ರ್ಯವನ್ನು ಸಾರಿತ್ತು. ಅಲ್ಲಿಯ ತನಕ ಪ್ರತಿ ಐದು ವರ್ಷಗಳಿಗೊಮ್ಮೆ ನೇಪಾಳವು ಚೀನಾಕ್ಕೆ ಕಪ್ಪ ಕೊಡುತ್ತಿತ್ತು. 19ನೆಯ ಶತಮಾನದ ಮಧ್ಯದಲ್ಲಿ ಒಮ್ಮೆ ಟಿಬೆಟ್ಟಿಯನ್ನರನ್ನು ಸೋಲಿಸಿದ್ದ ನೇಪಾಳಿಗಳು, ಆ ದೇಶದಲ್ಲಿ ತಮಗಾಗಿ ಕೆಲವು ವಿಶಿಷ್ಟ ಹಕ್ಕುಗಳನ್ನು ಪಡೆದುಕೊಂಡಿದ್ದರು. ಆದರೆ, ಕಮ್ಯೂನಿಸ್ಟರು ಚೀನದಲ್ಲಿ ಅಧಿಕಾರಕ್ಕೆ ಬಂದು ಟಿಬೆಟನ್ನು ಆಕ್ರಮಿಸಿದೊಡನೆಯೇ, ನೇಪಾಳಕ್ಕೆ ಅದರ ಮೇಲಿದ್ದ ವಿಶಿಷ್ಟ ಹಕ್ಕುಗಳನ್ನು ತೊಡೆದು ಹಾಕಿದರು. ಇತ್ತ ಚೀನಾ ಚಿತಾವಣೆಯಿಂದಾಗಿ ನೇಪಾಳಿ ಕಮ್ಯೂನಿಸ್ಟರು ತಮ್ಮ ಅರಸೊತ್ತಿಗೆಯ ವಿರುದ್ಧ ಬಂಡಾಯವೆದ್ದರು. ಅಂಥದೊಂದು ಅಂತರ್ಯುದ್ಧ ನೇಪಾಳದಲ್ಲಿ ನಡೆಯುತ್ತಿದ್ದಾಗ ಚೀನಿ ಕಮ್ಯೂನಿಸ್ಟ್ ಪಕ್ಷದ ಕೇಂದ್ರ ಕಚೇರಿಯು ಸಂದೇಶವೊಂದನ್ನು ಕಳುಹಿತು: ಟಿಬೆಟಿನ ಬಂಧ ವಿಮೋಚನೆಯ ಬಳಿಕ ಚೀನಿ ಜನತೆಯೂ ನೇಪಾಳಿ ಜನತೆಯೂ ಏಷ್ಯಾವನ್ನು ರಕ್ಷಿಸುವ ಹಾಗೂ ವಿಶ್ವಶಾಂತಿಯನ್ನು ಕಾಪಾಡುವ ಸಮಾನ ಹೋರಾಟದಲ್ಲಿ ಒಂದಾಗುವರು. ಇದರ ಉದ್ದಿಶ್ಯ ನೇಪಾಳವು ಚೀನಾದ ಹಿಂಬಾಲಕನೆಂದು ಬಿಂಬಿಸುವುದು. ನಂತರದ ದಿನಗಳಲ್ಲಿ ಲ್ಹಾಸಾದಿಂದ ನೇಪಾಳದ ಗಡಿಯವರೆಗೂ ಚೀನಾ ಹೆದ್ದಾರಿಯನ್ನು ನಿರ್ಮಿಸಿತು. ಆ ಸಂದರ್ಭದಲ್ಲಿ ನೇಪಾಳದ ಗಡಿರಕ್ಷಕರ ಮೇಲೆ ಚೀನೀ ಸೈನಿಕರು ಗುಂಡು ಹಾರಿಸಿದರು. ನೇಪಾಳಿ ಸೈನಿಕನೊಬ್ಬ ಸತ್ತಾಗ, ಚೀನಾ ಭಾರಿ ಮೊತ್ತದ ಪರಿಹಾರ ದ್ರವ್ಯವನ್ನೂ ಕೊಟ್ಟಿತು.
ನೇಪಾಳದಲ್ಲಿ ಕಮ್ಯೂನಿಸ್ಟ್ ಬಂಡಾಯ ವಿಫಲವಾಯಿತು. ಒಡನೆಯೇ ಚೀನಿ ಕಮ್ಯೂನಿಸ್ಟರು ನೇಪಾಳದ ದೊರೆ ಮಹೇಂದ್ರರೊಡನೆ ಸ್ನೇಹ ನಟಿಸಿದರು. ನೇಪಾಳ ಭಾರತಗಳ ನಡುವಿನ ಮಧುರ ಬಾಂಧವ್ಯಕ್ಕೆ ಹುಳಿ ಹಿಂಡಿದರು. ನೇಪಾಳ ರಾಜಧಾನಿಯಾದ ಕಠಮಂಡುವಿನಲ್ಲಿ ನವಿರು ರಾಜಕೀಯದ ಸಿಹಿಮಾತು, ಗಡಿಯಾಚೆಗೆ ಮಿಲಿಟರಿ ಬಲ ಪ್ರದರ್ಶನ. ಇದೆಲ್ಲದರ ಪರಿಣಾಮದಿಂದಾಗಿ ನೇಪಾಳಕ್ಕೆ ಭಾರತದ ಮೇಲಿನ ಅಭಿಪ್ರಾಯವೇ ಬದಲಾಯಿತು. ಚೀನಾ ಸಲಹೆಗಾರರು ದೊರೆ ಮಹೇಂದ್ರರ ಮನಕೆಡಿಸಿ ಭಾರತದೊಂದಿಗಿನ ಮೈತ್ರಿಯನ್ನು ಹಾಳುಗೆಡವಿದರು. ಪ್ರಜಾಪ್ರಭುತ್ವದಾಡಳಿತದ ಭಾರತ ಮತ್ತು ನೇಪಾಳಗಳ ನಡುವೆ ವೈಮನಸ್ಯವುಂಟಾಯಿತು. ಇತ್ತ, ನೇಪಾಳ ಚೀನಾ ನಡುವಿನ ಗಡಿ ವಿವಾದವೂ ಅಂತ್ಯಗೊಂಡಿತು. ಚೀನಾದ ಎಂಜಿನಿಯರುಗಳು ಭಾರತದ ಗಡಿಯವರೆಗೂ ಬರುವಂಥ ಹೆದ್ದಾರಿಗಳನ್ನು ನೇಪಾಳದೊಳಗೆ ನಿರ್ಮಿಸಿದರು. ಬರ್ಮಾದೊಡನೆ ಒಪ್ಪಂದ ಮಾಡಿಕೊಂಡ ಮೂರೇ ತಿಂಗಳಲ್ಲಿ ನೇಪಾಳದೊಡನೆಯೂ ಅಂಥದೇಒಂದು ಮೈತ್ರಿ ಒಡಂಬಡಿಕೆಯನ್ನು ಚೀನಾ ಏರ್ಪಡಿಸಿತು. ಚೀನಿ ನಾಯಕರು ತಮ್ಮ ಭಾಷಣಗಳಲ್ಲಿ ನೇಪಾಳಿಗಳು ತಮ್ಮ ರಕ್ತಸಂಬಂಧಿಗಳು ಎಂದರು. ಚೀನಾದ ವಿದೇಶಾಂಗ ಮಂತ್ರಿಚೆನ್ಯಿ: ನೇಪಾಳದ ಮೇಲೆ ಯಾವುದೇ ದುರಾಕ್ರಮಣ ನಡೆದುದಾದರೆ ನಾವು ಅದನ್ನು ರಕ್ಷಿಸುವೆವು, ಎಂದು ಸಾರಿದರು.
ಈ ಹಿಂದೆ 1908ರಲ್ಲಿಯೇ ಲ್ಹಾಸಾದಲ್ಲಿದ್ದ ಚೀನೀ ರೆಸಿಡೆಂಟನು ನೇಪಾಳ-ಭೂತಾನ್-ಸಿಕ್ಕಿಂಗಳ ಮೇಲೆ ಚೀನದ ಸಾರ್ವಭೌಮತ್ವವಿದೆ ಎಂದು ಹೇಳಿದ್ದ. ಆದರೆ ಈ ಬಾರಿ ಚೀನಾದೇಶವು ನೇಪಾಳದ ಮೇಲೆ ಸಾರ್ವಭೌಮತ್ವದ ಮಾತನ್ನು ಆಡಲಿಲ್ಲ. ಕಾರಣ, ತನ್ನ ಎಲ್ಲ ಶಕ್ತಿಯನ್ನೂ ಭಾರತವನ್ನು ಒಬ್ಬಂಟಿಯಾಗಿಸುವತ್ತ ಕೇಂದ್ರೀಕರಿಸುತ್ತಿತ್ತು. ಭಾರತದ ರಕ್ಷಣೆಯಲ್ಲಿದ್ದ ಭೂತಾನ್- ಸಿಕ್ಕಿಂಗಳತ್ತ ತನ್ನ ಗಮನಹರಿಸಿ, ಅವೆರಡೂ ಸ್ವತಂತ್ರವಾದ ರಾಷ್ಟ್ರಗಳು ಎಂದು ಘೋಷಿಸಿತು. ಇನ್ನು ಚೀನಾಕ್ಕೆ ಉಳಿದದ್ದು, ಪಾಕಿಸ್ತಾನ ಮಾತ್ರ. ಸೋವಿಯತ್ ರಷ್ಯಾದ ಅಧಿಪತಿಗಳು ಈ ಹಿಂದೆ ಭಾರತ ಪ್ರವಾಸಕ್ಕೆ ಬಂದಿದ್ದಾಗ, ಕಾಶ್ಮೀರವು ಭಾರತದ ಒಂದು ಪ್ರಾಂತ ಎಂದು ನಿಸ್ಸಂದಿಗ್ಧವಾಗಿ ನುಡಿದಿದ್ದರು. ಚೀನಾದ ಅಧಿಪತಿಗಳೂ ಹೀಗೆಯೇ ಹೇಳಬಹುದೆಂದು ಭಾರತ ನಿರೀಕ್ಷಿಸುತ್ತಿತ್ತು. ಆದರೆ ಭಾರತಕ್ಕೆ ಅನೇಕ ಬಾರಿ ಬಂದಿದ್ದ ಚೌ ಎನ್-ಲೇ ತಮ್ಮ ಮಾತುಕತೆಗಳಲ್ಲಿ ಕಾಶ್ಮೀರದ ಪ್ರಸ್ತಾಪವನ್ನು ಒಮ್ಮೆಯೂ ಎತ್ತಲಿಲ್ಲ. ಪಾಕಿಸ್ತಾನದೊಡನೆಯೂ ತನ್ನ ಸ್ನೇಹವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಅವರು ಹೀಗೆ ವರ್ತಿಸುತ್ತಿರಬಹುದು ಎಂದು ಜವಾಹರರು ಮೊದಲು ಭಾವಿಸಿದರು. ಚೀನಾದ ಈ ಮೌನದ ಹಿಂದಿನ ನಿಜವಾದ ಕಾರಣ ಮುಂದಿನ ದಿನಗಳಲ್ಲಿ ಬೆಳಕಿಗೆ ಬಂದಿತು. ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಚೀನಾದ ಸಿಂಕಿಯಾಂಗಿಗೂ ಮಧ್ಯೆಗಡಿ ಸಮಸ್ಯೆಯಿದೆ- ಅಲ್ಲಿ ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನಗಳಿಗೆ ಸೇರಿದ 4000ದಿಂದ 6000 ಚದರ ಮೈಲಿಗಳಷ್ಟು ವಿಸ್ತೀರ್ಣದ ಜಾಗವನ್ನು ಚೀನಾ ತನ್ನದೆನ್ನುತ್ತಿತ್ತು. ಆ ಜಾಗ ಕುರಿತು ಒಂದು ಶಾಂತಿಯುತ ಇತ್ಯರ್ಥವನ್ನು ಪಾಕಿಸ್ತಾನದೊಡನೆಯೇ ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ಚೌ ಎನ್-ಲೇ ಘೋಷಿಸಿದರು. ಕಾಶ್ಮೀರದ ಮೇಲೆ ಆಕ್ರಮಣ ನಡೆಸಿದ ಪಾಕಿಸ್ತಾನದ ಮಿಲಿಟರಿ ಸರ್ವಾಧಿಕಾರಿ ಹಾಗೂ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿದ ಚೀನದ ಸಾಮ್ಯವಾದಿ ಇಬ್ಬರೂ ಮಿತ್ರರಾದರು! ತನ್ನ ವೈರಿಯಾದ ಭಾರತದ ವೈರಿಯು ತನ್ನ ಸ್ನೇಹಿತ – ಎನ್ನುವುದು ಪಾಕಿಸ್ತಾನದ ಅಯೂಬ್‌ ಖಾನ್‌ರ ಲೆಕ್ಕಾಚಾರವಾಗಿತ್ತು. ಈ ಕಾರಣದಿಂದ ಚೀನಾ-ಪಾಕಿಸ್ತಾನಗಳು ಮಿತ್ರ ರಾಷ್ಟ್ರಗಳಾದವು. ಚೀನಿ ದೈತ್ಯ ಚೌ ಎನ್- ಲೈರೊಂದಿಗೆ ಪಾಕಿಸ್ತಾನದ ಅಯೂಬರ ಸರಸ-ಸಲ್ಲಾಪಗಳು ಆರಂಭವಾದವು.
ನಾಳೆ: ಲಡಾಕಿನಲ್ಲಿನಕಾಶೆ ನೂಕುವ ಯತ್ನ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top