‘ಪಂಚಶೀಲ’ ಚೌ ಎನ್‌-ಲೇಗೆ ತಮಾಷೆಯೆನಿಸಿತ್ತು

– ನಿರಂಜನ

ಸಂಗ್ರಹ ನಿರೂಪಣೆ: ಸುಧೀಂದ್ರ ನಿರೂಪಣೆ
1949ರ ಅಕ್ಟೋಬರ್‌ ತಿಂಗಳಲ್ಲಿ ಮೊದಲ ಬಾರಿ ಅಮೆರಿಕದ ಸಂಯುಕ್ತ ಸಂಸ್ಥಾನಗಳಿಗೆ ಭೇಟಿ ಕೊಟ್ಟಾಗ ಭಾರತ ಪ್ರಧಾನಿ ಜವಾಹರಲಾಲ ನೆಹರೂ ಅವರು ಆಡಿದ ಮಾತು.  ‘‘ನಮಗೆ ಇಷ್ಟವಿರಲಿ, ಇಲ್ಲದೇ ಹೋಗಲಿ, ಪ್ರತ್ಯೇಕತೆಯಲ್ಲಿ ಬದುಕುವುದು ಸಾಧ್ಯವೇ ಇಲ್ಲವೆಂಬುದನ್ನು ನಾವು ಮನಗಂಡಿದ್ದೇವೆ. ಯಾವ ರಾಷ್ಟ್ರವೂ ಹಾಗಿರುವಂತಿಲ್ಲ. ನನಗಂತೂ ಅದು ಶಕ್ಯವೇ ಇಲ್ಲ. ನಮ್ಮ ಭೂಗೋಲ, ನಮ್ಮ ಇತಿಹಾಸ, ಈಗಿನ ಘಟನೆಗಳು ಎಲ್ಲವೂ ಹೆಚ್ಚು ವಿಸ್ತೃತ ಚಿತ್ರದೆಡೆಗೇ ನಮ್ಮನ್ನು ಎಳೆದೊಯ್ಯುತ್ತಿವೆ.’’ ಈ ಮಾತಿನ ಹಿಂದೆ ಜವಾಹರಲಾಲ ನೆಹರೂ ಅವರಿಗಿದ್ದ ಹೃದಯ ವೈಶಾಲ್ಯವನ್ನು ನಾವು ಗಮನಿಸಬಹುದು.  ಆದರೆ ತಮ್ಮ ಬಾಲ್ಯದಲ್ಲಿ, ವಿದ್ಯಾರ್ಥಿ ದೆಸೆಯಲ್ಲಿ, ಚೌ ಎನ್‌-ಲೇ ಅವರು ಹೆಸರಾಂತ ನಟರಾಗಿದ್ದರಂತೆ. ಭಾರತದಿಂದ ಬಂದ ಕಲಾವಿದರೊಡನೆ ಕಮ್ಯೂನಿಸ್ಟ್‌ ಹಿತೈಷಿಗಳೊಡನೆ ಗಾಂಧೀವಾದಿಗಳೊಡನೆ ಕೈಕುಲುಕುವಾಗಲೂ ಕುಶಲ ಸಂಭಾಷಣೆ ಮಾಡುವಾಗಲೂ ಜೊತೆಯಲ್ಲಿ ನಿಂತು ಭಾವಚಿತ್ರಗಳನ್ನು ತೆಗೆಸಿಕೊಳ್ಳುವಾಗಲೂ ಅದ್ಭುತ ಅಭಿನಯವನ್ನೇ ಚೌ ಎನ್‌-ಲೇ ಮಾಡುತ್ತಿದ್ದರೆನಿಸುತ್ತಿತ್ತು. ಆಡುವ ಮಾತೊಂದು, ಮಾಡುವ ಕೃತಿಯೊಂದು ಎಂಬ ನೀತಿಯ ಚೀನಿ ಕಮ್ಯುನಿಸ್ಟ್‌ ನಾಯಕ ಚೌ ಎನ್‌-ಲೇ, ನಿಯೋಗಗಳ ಸಂದರ್ಶನ ಕಾಲದಲ್ಲಿ ತಮ್ಮ ಪ್ರಚಾರಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು.ಸ್ವಾತಂತ್ರ್ಯದ ಬಿರುಗಾಳಿಯ ಎದುರು ಸಾಮ್ರಾಜ್ಯವಾದಿಗಳಿಗೆ ಉಳಿಗಾಲವಿಲ್ಲ ಎಂಬುದನ್ನು ನಂಬದಿದ್ದ ಡಚ್ಚರು, ಇಂಡೋನೇಷ್ಯದಲ್ಲಿ ಸ್ವತಂತ್ರ ಶಕ್ತಿಗಳಿಗಿದುರು ಪೋಲೀಸ್‌ ಕಾರ್ಯಾಚರಣೆಯನ್ನು ನಡೆಸಿದರು.  ಅದನ್ನು ಚರ್ಚಿಸಲೆಂದು ಏಷ್ಯಾ ರಾಷ್ಟ್ರಗಳ ದ್ವಿತೀಯ ಸಮ್ಮೇಳನ 1948ರ ಜನವರಿಯಲ್ಲಿ ದಿಲ್ಲಿಯಲ್ಲಿ ಜರುಗಿತು. ಅದರ ಕಾರ್ಯಕಲಾಪಗಳ ಪರಿಣಾಮವಾಗಿಯೇ ಡಚ್ಚರು, ಇಂಡೊನೇಷ್ಯಕ್ಕೆ ಸ್ವಾತಂತ್ರ್ಯವಿತ್ತು ಅಲ್ಲಿಂದ ಕಾಲ್ತೆಗೆದರು. ಮುಂದೆ ಇಂಡೋಚೀನಾದಲ್ಲಿ (ಇಂದಿನ ವಿಯಟ್ನಾಂ, ಲಾವೋಸ್‌ ಮತ್ತು ಕಾಂಬೋಡಿಯಾಗಳು ಕೂಡಿಕೊಂಡಿದ್ದ ಒಂದು ಫ್ರೆಂಚ್‌ ಕಾಲನಿ) ಬಿಕ್ಕಟ್ಟು ಉಂಟಾಯಿತು. ಫ್ರಾನ್ಸ್‌ ದೇಶದ ಹಿಡಿತದಿಂದ ತಪ್ಪಿಸಿಕೊಳ್ಳಲು ವಿಯಟ್ನಾಂನಲ್ಲಿ ದಂಗೆಯೆದ್ದಿತು. ಹೋ ಚಿ-ಮಿನ್‌ ಅವರ ನೇತೃತ್ವದಲ್ಲಿ ವಿಯಟ್ನಾಂ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿತು. ಆದರೆ ಇದರ ಸ್ಥಿತಿಯೂ ಕೊರಿಯಾದಂತೆ ಆಗಿತ್ತು.  ಉತ್ತರ ಭಾಗದಲ್ಲಿ ಕಮ್ಯುನಿಸ್ಟ್‌ ಹಿಡಿತ. ದಕ್ಷಿಣ ಭಾಗದಲ್ಲಿ ಅಮೆರಿಕ ಪ್ರೇರಿತ ಪ್ರಜಾಪ್ರಭುತ್ವವಾದಿಗಳ ಆಡಳಿತ. ಏತನ್ಮಧ್ಯೆ ಯುದ್ಧಕ್ಕೆ ಪೂರ್ವದಲ್ಲಿ ತಮಗಿದ್ದ ಅಧಿಕಾರವನ್ನು ಪುನಃ ಸ್ಥಾಪಿಸಲು ಫ್ರೆಂಚ್‌ ಸಾಮ್ರಾಜ್ಯವಾದಿಗಳು ಪ್ರಯತ್ನಿಸಿದರು. ಇಂಡೋಚೀನಾದಲ್ಲಿ ಉಂಟಾದ ಯುದ್ಧ ಪರಿಸ್ಥಿತಿಯನ್ನು ಚರ್ಚಿಸಲು ಏಷ್ಯಾದ ರಾಷ್ಟ್ರಗಳ ಮತ್ತೊಂದು ಸಮ್ಮೇಳನ 1954ರ ಏಪ್ರಿಲ್‌ನಲ್ಲಿ ಕೊಲಂಬೋ ನಗರದಲ್ಲಿ ನಡೆಯಿತು. ಜವಾಹರಲಾಲ ನೆಹರೂ ಅವರ ಪ್ರಯತ್ನದ ಫಲವಾಗಿ ಇಂಡೋಚೀನಾದಲ್ಲಿ ಕದನವಿರಾಮ ಏರ್ಪಟ್ಟಿತು. ಆ ಅವಧಿಯಲ್ಲಿ, ಏಷ್ಯಾ ಮತ್ತು ಆಫ್ರಿಕಾಗಳ ಪ್ರಮುಖ ರಾಷ್ಟ್ರಗಳ ನಡುವೆ ಸ್ನೇಹಸಂಬಂಧಗಳು ಹೊಸೆಯಲ್ಪಟ್ಟವು.ಅದೇ ಸಮಯದಲ್ಲಿ ಇಂಡೋಚೀನಾದ ಭವಿತವ್ಯದ ಇತ್ಯರ್ಥಕ್ಕಾಗಿ ಸ್ವಿಝಲೆಂರ್‍ಡಿನ ಜಿನೀವಾದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಜರುಗಿತು. ರಷ್ಯಾದ ಒತ್ತಾಸೆಯಿಂದ ಚೀನಾಕ್ಕೂ ಆಮಂತ್ರಣ ಕಳುಹಿಸಲಾಗಿತ್ತು.  ಅಂತಾರಾಷ್ಟ್ರೀಯ ರಂಗದಲ್ಲಿ ಚೀನಾ ಪ್ರವೇಶಿಸಿದ್ದು ಅದೇ ಮೊದಲ ಬಾರಿ. ಚೌ ಎನ್‌-ಲೇ ಚೀನೀ ನಿಯೋಗದ ನಾಯಕರಾಗಿ ತಮ್ಮ ರಾಜತಾಂತ್ರಿಕ ಚಾಕಚಕ್ಯತೆಯನ್ನು ತೋರಿದರು. ಜಿನೀವಾ ಸಮ್ಮೇಳನದ ಫಲವಾಗಿ, ಇಂಡೋಚೀನಾದ ಸ್ಥಿತಿ ಮೂರಾಬಟ್ಟೆಯಾಯಿತು. ಚೀನೀ ಕಮ್ಯೂನಿಸ್ಟರ ನೆರವಿನಿಂದ ತಮ್ಮದೊಂದು ಸರಕಾರವನ್ನು ಸ್ಥಾಪಿಸಿದ್ದ ಹೋ ಚಿ-ಮಿನ್‌ ಅವರ ಅಧಿಕಾರವ್ಯಾಪ್ತಿ ಉತ್ತರ ವಿಯೆಟ್ನಾಮಿಗೆ ಮಾತ್ರ ಸೀಮಿತವಾಯಿತು. ಕಾಂಬೋಡಿಯಾ ಅಮೆರಿಕದ ಪ್ರಭಾವ ಕ್ಷೇತ್ರಕ್ಕೆ ಒಳಗಾಯಿತು. ಲಾವೋಸ್‌ ಎರಡೂ ಬಣಗಳ ಘರ್ಷಣೆಯ ಬೆಂಕಿಯನ್ನು ಹೊತ್ತು ಪ್ರತ್ಯೇಕವಾದ ಒಂದು ಘಟಕವಾಯಿತು.ಜಿನೀವಾದಿಂದ ಸ್ವದೇಶಕ್ಕೆ ಮರಳುವ ದಾರಿಯಲ್ಲಿ ಚೌ ಎನ್‌-ಲೇ ಭಾರತಕ್ಕೆ ಭೇಟಿ ಕೊಟ್ಟರು. ಅವರಿಗೆ ಇಲ್ಲಿ ಹಾರ್ದಿಕ ಸ್ವಾಗತ ದೊರೆಯಿತು. ಎರಡು ಸಾವಿರ ವರ್ಷಗಳಿಂದಲೂ ಭಾರತ-ಚೀನಾಗಳ ನಡುವೆ ಇದ್ದ (ಇದ್ದಿತೆಂದು ಹೇಳಲಾದ) ಸ್ನೇಹದ ಪ್ರಸ್ತಾಪವನ್ನು ಎರಡೂ ರಾಷ್ಟ್ರಗಳ ಪ್ರಮುಖರೂ ಮಾಡಿದರು. ನಿರೀಕ್ಷಿಸಿದಂತೆ ಅವರ ಮಾತುಕತೆಗಳಲ್ಲಿ ಟಿಬೆಟ್‌ ಒಂದು ಪ್ರಮುಖ ಸ್ಥಾನವನ್ನು ಪಡೆಯಿತು. ಟಿಬೆಟ್ಟಿನಲ್ಲಿ ಭಾರತೀಯರು ನಡೆಸುವ ವ್ಯಾಪಾರಕ್ಕೆ ಸಂಬಂಧಿಸಿದಂತೆ ಚೀನಾ-ಭಾರತಗಳ ನಡುವೆ ಒಂದು ವಾಣಿಜ್ಯ ಒಪ್ಪಂದವೇರ್ಪಟ್ಟಿತು. ಟಿಬೆಟಿನ ಮೇಲೆ ಚೀನಾಕ್ಕೆ ಸಾರ್ವಭೌಮತ್ವವಿದೆಯೆಂದು ಈ ಹಿಂದೆ ಬ್ರಿಟಿಷ್‌ ಸರಕಾರ ಅಭಿಪ್ರಾಯಪಟ್ಟಿತ್ತು. ಬ್ರಿಟಿಷರ ನಿರ್ಗಮನದ ಬಳಿಕ ಸ್ವತಂತ್ರ ಭಾರತವೂ ಅದೇ ನಿಲುವನ್ನೇ ಸ್ವೀಕರಿಸಿತ್ತು. ಚೌ ಎನ್‌-ಲೇ ಭೇಟಿಯ ಫಲವಾಗಿ, ಈ ಹಿಂದೆ ಟಿಬೆಟ್ಟಿನಲ್ಲಿ ಬ್ರಿಟಿಷ್‌ ಭಾರತಕ್ಕಿದ್ದ ಹಿತಾಸಕ್ತಿಗಳನ್ನೆಲ್ಲವನ್ನೂ ಸ್ವತಂತ್ರ ಭಾರತವು ಚೀನಾಕ್ಕೆ ಬಿಟ್ಟುಕೊಟ್ಟಿತು. ಟಿಬೆಟ್‌ ಚೀನಾದ ಒಂದು ಪ್ರದೇಶ; ಸ್ವಾಯತ್ತೆಯನ್ನನುಭವಿಸುವ ಪ್ರಾಂತ- ಎಂಬುದನ್ನು ಭಾರತವೂ ಒಪ್ಪಿತು. ಟಿಬೆಟ್‌ನಲ್ಲಿ ವ್ಯಾಪಾರ ಮಾಡುವ ಭಾರತೀಯರ ರಕ್ಷ ಣೆಗಾಗಿ ಯಾಟುಂಗ್‌ ಮತ್ತು ಸಿಯಾಂಟ್ಸೆಗಳಲ್ಲಿ ಇರಿಸಲಾಗಿದ್ದ ಪಡೆಗಳನ್ನು ಹಿಂತೆಗೆಯಲು ಭಾರತ ಸರಕಾರ ನಿರ್ಧರಿಸಿತು. ಅಷ್ಟೇ ಅಲ್ಲ, ಟಿಬೆಟ್‌ನಲ್ಲಿದ್ದ ಭಾರತೀಯ ತಂತಿ, ಅಂಚೆ ಹಾಗೂ ಟೆಲಿಫೋನ್‌ ವ್ಯವಸ್ಥೆಯನ್ನೂ ವಿಶ್ರಾಂತಿ ಗೃಹಗಳನ್ನೂ ಭಾರತ ಸರಕಾರ ಚೀನಾಕ್ಕೆ ಉದಾರವಾಗಿ ಕೊಟ್ಟಿತು.ಪಂಚಶೀಲ ಸೂತ್ರವು ಜನ್ಮ ತಳೆದದ್ದು ಇದೇ ಘಳಿಗೆಯಲ್ಲೇ. ತಮ್ಮ ಕುಟಿಲ ಕಾರ್ಯಸಾಧನೆಯ ಚುಟುಕು ಪ್ರವಾಸವನ್ನು ಮುಗಿಸಿ ಹೊರಡುವ ಹೊತ್ತಿಗೆ ಚೌ ಎನ್‌-ಲೇ ಎರಡೂ ದೇಶಗಳ ನಡುವೆ ‘‘ಒಂದು ಜಂಟಿ ಪ್ರಸ್ತಾವನೆ ಇರಲಿ,’’ ಎಂದರು. ಭಾರತ ಪ್ರಧಾನಿಯ ನಿರ್ದೆಶನದಂತೆ ಭಾರತೀಯ ವಿದೇಶಾಂಗ ಶಾಖೆಯು ಜಂಟಿ ಹೇಳಿಕೆಯ ಒಂದು ಕರಡನ್ನು ಸಿದ್ದಪಡಿಸಿತು. ಆ ಹೇಳಿಕೆಯಲ್ಲಿ ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಎರಡೂ ರಾಷ್ಟ್ರಗಳು ಅನುಸರಿಸಬೇಕಾದ ಐದು ಸೂತ್ರಗಳಿದ್ದುವು.

1. ಪರಸ್ಪರ ಆಕ್ರಮಣ ಮಾಡದಿರುವುದು; 2. ಒಬ್ಬರ ವಿಷಯದಲ್ಲಿ ಇನ್ನೊಬ್ಬರು ಕೈಹಾಕದಿರುವುದು; 3. ಪರಸ್ಪರರ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವುದು; 4. ಅನ್ಯೋನ್ಯ ಸಹಾಯ; ಮತ್ತು5. ಶಾಂತಿಯುತ ಸಹಜೀವನ ಇಂಗ್ಲಿಷಿನಲ್ಲಿದ್ದ ಆ ಕರಡನ್ನೋದಿದ ಚೌ ಎನ್‌-ಲೇ ಅಂದರು: ‘‘ನಾನು ಇಂಗ್ಲಿಷನ್ನು ಸ್ವಲ್ಪಸ್ವಲ್ಪ ಬಲ್ಲೆ, ಬಹಳವಲ್ಲ. ಇದರ ಚೀನೀ ಭಾಷಾಂತರವಿದ್ದರೆ ಚೆನ್ನಾಗಿತ್ತು.’’  ಆ ಭಾಷಾಂತರವೂ ಸಿದ್ಧವಾಯಿತು. ಅದನ್ನೋದಿದ ಚೌ ಎನ್‌-ಲೇ ನಗುತ್ತಾ ನುಡಿದರು: ‘‘ಚೀನೀ ಭಾಷೆಯಲ್ಲಿ ಈ ಸೂತ್ರಗಳು ನನಗೆ ತಮಾಷೆಯಾಗಿ ಕಾಣುತ್ತಿವೆ.’’  ಸಣ್ಣ ಪುಟ್ಟ ಅಮುಖ್ಯ ಪದಗಳ ಬದಲಾವಣೆಗಾಗಿ ಚರ್ಚೆ ನಡೆದು, ಪ್ರಸ್ತಾವನೆಗೆ ಇಬ್ಬರೂ ಪ್ರಧಾನಿಗಳು 28-04-1954ರಂದು ಸಹಿ ಹಾಕಿದರು. ಮುಂದಿನ ದಿನಗಳಲ್ಲಿ ಪಂಚಶೀಲ ಸೂತ್ರವನ್ನು ಚೌ ಎನ್‌-ಲೇ ಎಂದೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

 (ನಾಳೆ: ನೇಪಾಳ ದೊರೆಯೊಡನೆ ಸ್ನೇಹ ನಟನೆ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top