ಕೊರಿಯಾದಲ್ಲಿ ಮುಖಭಂಗ

– ನಿರಂಜನ
ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ

ಸ್ವಾ ತಂತ್ರ್ಯಾನಂತರ ಮೂರುವರೆ ವರ್ಷಗಳಿಂದ ನಡೆಯುತ್ತಲಿದ್ದ ರಾಜ್ಯಾಂಗ ರಚನೆಯ ಕಾರ್ಯ ಪೂರ್ತಿಗೊಂಡು 1950ರ ಜನವರಿ 26ರಂದು ಭಾರತ ಗಣರಾಜ್ಯವಾಯಿತು. ಅದಕ್ಕೆ ಕೆಲವು ತಿಂಗಳುಗಳ ಹಿಂದೆ 1949ರ ಅಕ್ಟೋಬರ್ 1ರಂದು ಚೀನೀ ಜನತಾ ಗಣರಾಜ್ಯ ಸ್ಥಾಪನೆಯಾಗಿತ್ತು. ಸ್ವತಂತ್ರ ಚೀನಾಕ್ಕೆ ಮೊದಲು ಮನ್ನಣೆ ನೀಡಿದ್ದು ಬರ್ಮಾ. ಚೀನಾಗೆ ಮನ್ನಣೆ ನೀಡುವುದರ ಜತೆಗೆ ರಾಯಭಾರಿಯನ್ನು ಸಹಾ ಕಳುಹಿಕೊಟ್ಟಿದ್ದು ಭಾರತ (1949ರ ಡಿಸೆಂಬರ್ 29). ನಂತರದ ದಿನಗಳಲ್ಲಿ ರಷ್ಯಾ, ಬ್ರಿಟನ್ ಮತ್ತಿತರ ರಾಷ್ಟ್ರಗಳಿಂದಲೂ ಚೀನಕ್ಕೆ ಮನ್ನಣೆ ದೊರೆಯಿತು.
ಚೀನಾದಲ್ಲಿ ಗೊಂದಲಮಯ ಪರಿಸ್ಥಿತಿ ಮಾಯವಾಗಿ ಸುಭದ್ರ ಸರಕಾರವು ಸ್ಥಾಪನೆಯಾದುದರಿಂದ ಭಾರತಕ್ಕೆ ಸಂತೋಷವೇ ಆಯಿತು. ಭಾರತದ ವಿಷಯದಲ್ಲಿ ಚೀನಾದ ಪ್ರಮುಖರಾಗಿದ್ದ ಚಿಯಾಂಗ್ ಕೈ ಷೇಕ್ರಿಗೆ ಸಹಾನುಭೂತಿ ಇತ್ತು. ಹಿಂದೆ ವಿಶ್ವ ಮಹಾಯುದ್ಧ ಕಾಲದಲ್ಲಿ ಬ್ರಿಟಿಷರ ಅತಿಥಿಗಳಾಗಿ ಭಾರತಕ್ಕೆ ಬಂದಿದ್ದ ಚಿಯಾಂಗ್ ಕೈ ಷೇಕ್ ದಂಪತಿಗಳು ಇಲ್ಲಿನ ರಾಷ್ಟ್ರೀಯ ಹೋರಾಟಕ್ಕೆ ತಮ್ಮ ನೈತಿಕ ಬೆಂಬಲವನ್ನು ತೋರಿದ್ದರು. ಭಾರತ ಸ್ವತಂತ್ರವಾಗುವುದು ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಭಾರತ ಸ್ವಾತಂತ್ರ್ಯ ಗಳಿಸಿದ ಒಂದೆರಡು ವರ್ಷಗಳಲ್ಲೇ ಚೀನಾದಲ್ಲಿ ಚಿಯಾಂಗ್ ಕೈಷೇಕ್‌ರ ಸರಕಾರ ಪತನವಾಯಿತು.
ಗಣರಾಜ್ಯ ಸ್ಥಾಪನೆಯ ಮುಂಚಿನ ಎರಡು ದಶಕಗಳಿಗೂ ಹೆಚ್ಚು ಕಾಲ ಸತತ ಹೋರಾಟದಲ್ಲಿ ನಿರತವಾಗಿದ್ದ ಚೀನೀ ಕೆಂಪು ಸೇನೆಗೆ ವಿರಾಮ ಪಡೆಯುವುದು ಸಾಧ್ಯವೇ ಇರಲಿಲ್ಲ. ಇತರ ಜನರು ನಿತ್ಯಕರ್ಮಗಳಲ್ಲಿ ನಿರತರಾಗಿರುವಂತೆ ಸೈನಿಕರು ಸಹಾ ತಮ್ಮ ಕೆಲಸವಾದ ಹೋರಾಟವನ್ನು ನಡೆಸುತ್ತಲೇ ಇರಬೇಕು. ಹಾಗೆಯೇ ಬಹುತೇಕ ರಾಷ್ಟ್ರಗಳು ತಮ್ಮ ಆಂತರಿಕ ದುಃಸ್ಥಿತಿಯ ಕಡೆಗೆ ಜನರ ಗಮನ ಹರಿಯದಂತೆ ಮಾಡಲು ಸೇನೆಯನ್ನು ಬಳಸುತ್ತವೆ. ಬಾಹ್ಯ ವೈರಿಯೊಂದನ್ನು ಸೃಷ್ಟಿಸಿ ರಾಷ್ಟ್ರರಕ್ಷಣೆಯ ನಿರಂತರ ಕೂಗನ್ನು ಮೊಳಗಿಸುವುದು ಇದರ ಭಾಗ. ಇಂಥ ಒಂದು ಸಂದರ್ಭವನ್ನು ಕೊರಿಯಾ ದೇಶವು ಚೀನಾಕ್ಕೆ ಅನಾಯಾಸವಾಗಿ ಒದಗಿಸಿಕೊಟ್ಟಿತು.
ಹಿಂದೊಂದು ಕಾಲದಲ್ಲಿ ಕೊರಿಯಾ ದೇಶವು ಚೀನೀ ಸಾಮ್ರಾಜ್ಯದ ಅಂಗವಾಗಿತ್ತು. ಜಪಾನೀಯರು ಅದನ್ನು ಆಕ್ರಮಿಸಿದ್ದರು. ಜಪಾನಿನ ಪರಾಭವದೊಡನೆ ಮಿತ್ರರಾಷ್ಟ್ರಗಳಲ್ಲಿ ನಡೆದ ಶಾಂತಿ ಒಪ್ಪಂದದ ಪ್ರಕಾರ, 38ನೇ ಅಕ್ಷಾಂಶದ ಉತ್ತರ ಭಾಗದ ಮೇಲೆ ರಷ್ಯವೂ ದಕ್ಷಿಣ ಭಾಗದ ಮೇಲೆ ಅಮೆರಿಕವೂ ಉಸ್ತುವಾರಿ ನಡೆಸಿದವು. ಮುಂದೆ ಕೊರಿಯಾಕ್ಕೊಂದು ಸ್ವತಂತ್ರ ಸರಕಾರವನ್ನು ರೂಪಿಸುವುದಕ್ಕೆ ಪೂರ್ವಭಾವಿಯಾಗಿ ಈ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲಾಗಿತ್ತು. ರಾಷ್ಟ್ರಗಳನ್ನು ವಿಭಜಿಸುವ ವಿಷಯದಲ್ಲಿ ಕಮ್ಯೂನಿಸ್ಟರಿಗೆಂದೂ ಮನಸ್ಸಾಕ್ಷಿ ಕುಟುಕುವುದಿಲ್ಲ. ಸಾಮ್ರಾಜ್ಯವಾದಿಗಳಿಗೂ ಅದು ಖೇದವೆನಿಸುವುದಿಲ್ಲ. ತಮ್ಮ ಪ್ರಭಾವಲಯವನ್ನು ವಿಸ್ತರಿಸುವುದೇ ಈ ಇಬ್ಬರ ಆಕಾಂಕ್ಷೆ. ಅದಕ್ಕೆ ಅನುಗುಣವಾಗಿ ರಷ್ಯಾ, ಉತ್ತರ ಕೊರಿಯಾದಲ್ಲಿ ಕಮ್ಯೂನಿಸ್ಟ್ ನಾಯಕ ಕಿಮ್-ಇಲ್-ಸುಂಗರ ನೇತೃತ್ವದಲ್ಲಿ ಸರಕಾರವೊಂದನ್ನು ರಚಿಸಿತು. ಶಸ್ತ್ರಸಜ್ಜಿತ ಸೇನೆಯಿಂದ ಅದನ್ನು ಬಲಪಡಿಸಿತು. ಇನ್ನು ತನ್ನ ಕೆಲಸವಾಯಿತೆಂದು ನಟನನ್ನು ರಂಗದ ಮೇಲೆ ಬಿಟ್ಟು ತೆರೆಮರೆಗೆ ತೆರಳುವ ನಿರ್ದೇಶಕನಂತೆ ಹಿಂದೆ ಸರಿಯಿತು. ರಷ್ಯನ್ ಅಧಿಕಾರಿಗಳೂ ಪಡೆಗಳೂ ತಮ್ಮ ದೇಶಕ್ಕೆ ಮರಳಿದರು. ಏಕೀಕೃತವಾದ ಕೊರಿಯಾದ ಸ್ಥಾಪನೆ ದುಸ್ಸಾಧ್ಯವೆಂದು ಮನಗಂಡ ಅಮೆರಿಕ, ದಕ್ಷಿಣ ಕೊರಿಯಾದಲ್ಲಿ ಚುನಾವಣೆಯೊಂದನ್ನು ನಡೆಸಿ, ಡಾ.ಸಿಂಗ್ಮನ್ ರೀ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟಿ ತಾನೂ ಹಿಂತೆಗೆಯಿತು.
ಆದರೆ 1950ರ ಮಧ್ಯಭಾಗದಲ್ಲಿ ಕೊರಿಯಾದಲ್ಲಿ ಒಂದು ಅಂತರ್ಯುದ್ಧ ಆರಂಭವಾಯಿತು. ಈ ಕದನದಲ್ಲಿ ಮೊದಲ ಗುಂಡನ್ನು ಹಾರಿಸಿದವರು ಯಾರು? ಗೊತ್ತಿಲ್ಲ. ಉತ್ತರದವರು ಕೆಳಕ್ಕೆ ಬಂದರೆಂದು ದಕ್ಷಿಣದವರೂ, ದಕ್ಷಿಣದವರು ಮೇಲಕ್ಕೆ ಬಂದರೆಂದು ಉತ್ತರದವರೂ ಪರಸ್ಪರ ಆರೋಪಿಸಿದರು. ಇಬ್ಬರ ಇಚ್ಛೆಯೂ ಬಲಪ್ರಯೋಗಿಸಿ ಕೊರಿಯಾದ ಏಕೀಕರಣವನ್ನು ಸಾಧಿಸುವುದೇ ಆಗಿತ್ತೆಂಬುದು ಸ್ಪಷ್ಟ. ಉತ್ತರ ಕೊರಿಯಾದ ಪಡೆಗಳು ವಿದ್ಯುತ್ ವೇಗದಿಂದ ದಕ್ಷಿಣ ಕೊರಿಯಾವನ್ನು ಆಕ್ರಮಿಸತೊಡಗಿದುವು. ಸಂಯುಕ್ತ ರಾಷ್ಟ್ರ ಸಂಸ್ಥೆ ಅಲ್ಲಿ ಶಾಂತಿ ಸ್ಥಾಪಿಸಲು ಮುಂದಾಯಿತು, ಜನರಲ್ ಮೆಕಾರ್ಥರ್‌ರ ನೇತೃತ್ವದಲ್ಲಿ ಸಂಯುಕ್ತ ರಾಷ್ಟ್ರದ ಪಡೆಗಳು ದಕ್ಷಿಣ ಕೊರಿಯಾವನ್ನು ಪ್ರವೇಶಿಸಿ ಉತ್ತರ ಕೊರಿಯಾದ ಸೇನೆಗಳನ್ನು ಹಿಮ್ಮೆಟ್ಟಿಸತೊಡಗಿದುವು.
ಇತ್ತ ಉತ್ತರ ಕೊರಿಯಾದ ಮೇಲ್ವಿಚಾರಣೆಯ ಭಾರವನ್ನು ರಷ್ಯಾದಿಂದ ತಾನೇ ವಹಿಸಿಕೊಂಡಿದ್ದ ಚೀನಾ, ಕೊರಿಯಾ ಅಂತರ್ಯುದ್ಧ ಆರಂಭವಾದೊಡನೆಯೇ ಲಕ್ಷ ಗಟ್ಟಲೆಯಲ್ಲಿ ತನ್ನ ಶಸ್ತ್ರಸಜ್ಜಿತ ನುರಿತ ಸೈನಿಕರನ್ನು ಅಲ್ಲಿಗೆ ಕಳುಹಿಸಿಕೊಟ್ಟಿತು. ಇದರ ವಿರುದ್ಧ ಚೀನಾದಲ್ಲಿಯೇ ಸಾಮ್ರಾಜ್ಯಶಾಹಿ ವಿರೋಧಿ ಆಕ್ರೋಶ ಪ್ರತಿಧ್ವನಿಸಿತು. ಆಗ ಭಾರತವು ಕೊರಿಯಾ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸುವ ಅಗತ್ಯವನ್ನು ಚೀನಾಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿತು. ಇತ್ತ ಮೆಕಾರ್ಥರ್‌ರ ಸೇನೆಗಳು ಉತ್ತರ ದಿಕ್ಕಿಗೆ ನುಗ್ಗಿದವು. ಮಂಚೂರಿಯದ ಗಡಿಯವರೆಗೂ ಸಾಗುವುದು ಮೆಕಾರ್ಥರ್‌ರ ಉದ್ದೇಶವಾಗಿತ್ತು. ಸಂಯುಕ್ತ ರಾಷ್ಟ್ರ ಸಂಘದ ಸೇನೆಗಳು 38ನೆಯ ಅಕ್ಷಾಂಶವನ್ನು ದಾಟಲು ಬಿಡಲಾರೆವೆಂದು ಘೋಷಿಸಿ ಚೀನೀ ಪಡೆಗಳು ಅಲ್ಲಿ ಅಡ್ಡ ಹಾಕಿದವು. ಪ್ರಬಲ ಘರ್ಷಣೆಗಳು ನಡೆದವು. ಈ ನಡುವೆ ಮೆಕಾರ್ಥರ್ ಅವರನ್ನು ವಿಶ್ವಸಂಸ್ಥೆ ಹಿಂದೆ ಕರೆಸಿಕೊಂಡಿತು. ಅವರ ಬದಲಿಗೆ ಜನರಲ್ ರಿಜ್ವೇ ಅವರು ಸೇನಾಪಡೆಗಳ ನಾಯಕರಾಗಿ ಬಂದರು.
1950ರ ಜುಲೈಯಲ್ಲಿ ಕೊರಿಯಾ ಯುದ್ಧ ನಡೆಯುತ್ತಿದ್ದಾಗ, ಚೀನಾದ ಪ್ರಧಾನಿ ಚೌ ಎನ್-ಲೇ ಅವರು, ‘‘ನಾವು ಎಲ್ಲವನ್ನೂ ಎಣಿಕೆ ಹಾಕಿದ್ದೇವೆ. ನಮ್ಮ ಮೇಲೆ ಅವರು ಅಣುಬಾಂಬುಗಳನ್ನು ಹಾಕಬಹುದು. ಕೆಲವು ಲಕ್ಷ ಜನರನ್ನು ಅವರು ಕೊಲ್ಲಬಹುದು. ತ್ಯಾಗವಿಲ್ಲದೆ ರಾಷ್ಟ್ರೀಯ ಸ್ವಾತಂತ್ರ್ಯವನ್ನು ರಕ್ಷಿಸಲಾಗುವುದಿಲ್ಲ,’’ ಎಂಬ ಬಡಿವಾರದ ಮಾತುಗಳನ್ನಾಡಿದರು. ಆದರೆ ಭಾರತವು ರಾಯಭಾರದ ಮೂಲಕ ಮತ್ತೊಮ್ಮೆ ತನ್ನ ಶಾಂತಿಸ್ಥಾಪನಾ ಯತ್ನವನ್ನು ಮುಂದುವರಿಸಿತು. ಈ ಸತತ ಪ್ರಯತ್ನಗಳ ಫಲವಾಗಿ ಕದನವು ನಿಂತಿತು. ಆ ಭೀಕರ ಯುದ್ಧ ಮತ್ತೂ ಮುಂದುವರಿದಿದ್ದರೆ ಚೀನಾಕ್ಕೇ ಅಪಾರ ಹಾನಿಯಾಗುತ್ತಿತ್ತು. ಅದನ್ನು ಭಾರತ ತಪ್ಪಿಸಿತು. ಇತ್ತ ಉತ್ತರ ಕೊರಿಯಕ್ಕೆ ನೆರವು ನೀಡಿದುದರಿಂದ ಚೀನಾಕ್ಕೆ ಬಹಳ ಲಾಭವಾಗಲಿಲ್ಲ. ಕಿಮ್-ಇಲ್-ಸುಂಗರ ಮೇಲೆ ತನ್ನ ಹಿರಿತನವನ್ನೇನೋ ಅದು ಸಾಧಿಸಿತು. ಕದನ ವಿರಾಮದ ವೇಳೆಯಲ್ಲಿಜನರಲ್ ಬ್ರಿಗೇಡಿಯರ್ ತಿಮ್ಮಯ್ಯನವರ ನಾಯಕತ್ವದಲ್ಲಿ ಭಾರತೀಯ ಪಡೆಗಳು ಶಾಂತಿಯ ಉಸ್ತುವಾರಿ ನಡೆಸಿದವು. ಆಗ ಶಾಂತಿಪಡೆಗೆ ಸೆರೆ ಸಿಕ್ಕಿದ್ದ 20,440 ಜನ ಚೀನೀ ಸೈನಿಕರಲ್ಲಿ14,209 ಜನ ತಮ್ಮ ದೇಶಕ್ಕೆ ವಾಪಸಾಗಲು ನಿರಾಕರಿಸಿದ್ದರೆಂಬುದು ಗಮನಾರ್ಹ ಸಂಗತಿ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾಕ್ಕಾದ ಒಂದು ದೊಡ್ಡ ಮುಖಭಂಗ.

(ನಾಳೆ: ಪಂಚಶೀಲ ಚೌ ಎನ್-ಲೇಗೆ ತಮಾಷೆಯೆನಿಸಿತ್ತು.)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top