ಎಚ್‌ಸಿಕ್ಯೂ ಬಾಪ್‌ರೇ! – ಬಿಸಿಪಿಎಲ್‌ ದೇಶದ ಮೊದಲ ಫಾರ್ಮಾಸ್ಯುಟಿಕಲ್‌ ಕಂಪನಿ

ಹೈಡ್ರಾಕ್ಸಿಕ್ಲೋರೋಕ್ವಿನ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕ ವಲಯದ ದೇಶದ ಏಕೈಕ ಡ್ರಗ್ಸ್‌ ಕಂಪನಿ ‘ಬೆಂಗಾಲ್‌ ಕೆಮಿಕಲ್ಸ್‌ ಆ್ಯಂಡ್‌ ಫಾರ್ಮಾಸ್ಯುಟಿಕಲ್ಸ್‌ ಲಿ.(ಬಿಸಿಪಿಎಲ್‌) ಹಾಗೂ ಅದರ ಸ್ಥಾಪಕ ಆಚಾರ್ಯ ಪ್ರಫುಲ್ಲಚಂದ್ರ ರೇ ಅವರು ಮುನ್ನಲೆಗೆ ಬಂದಿದ್ದಾರೆ. ಈ ಕಂಪನಿಯು ಆ್ಯಂಟಿ ಮಲೇರಿಯಾ ಔಷಧ, ಆ್ಯಂಟಿ ಸ್ನೇಕ್‌ ವೆನಮ್‌ ಸೀರಮ್‌ ಉತ್ಪಾದಿಸುತ್ತಿದೆ. ಸಂಸ್ಥಾಪಕ ರೇ ಅವರ ಬಗ್ಗೆ ಇಲ್ಲಿದೆ ಮಾಹಿತಿ.

ಇಡೀ ಜಗತ್ತಿಗೆ ಕಂಟವಾಗಿರುವ ಕೊರೊನಾ ವೈರಸ್‌ಗೆ ಭಾರತ ಸಮೃದ್ಧವಾಗಿ ಉತ್ಪಾದಿಸುವ ಆ್ಯಂಟಿ ಮಲೇರಿಯಾ ಡ್ರಗ್ಸ್‌ ರಾಮಬಾಣ ಎಂದು ಗೊತ್ತಾಗುತ್ತಿದ್ದಂತೆ ಎಲ್ಲದೇಶಗಳು ಭಾರತಕ್ಕೆ ಬೇಡಿಕೆಯನ್ನು ಸಲ್ಲಿಸುತ್ತಿವೆ. ಜೊತೆಗೆ, ಆ್ಯಂಟಿ ಮಲೇರಿಯಾ ಔಷಧವಾಗಿರುವ ಹೈಡ್ರಾಕ್ಸಿಕ್ಲೋರೋಕ್ವಿನ್‌ ಉತ್ಪಾದಿಸುವ ಕಂಪನಿಗಳು ಕೂಡ ಹೆಚ್ಚೆಚ್ಚು ಸುದ್ದಿ ಬೆಳಕಿಗೆ ಒಳಗಾಗುತ್ತಿವೆ. ಆ ಪೈಕಿ ಬೆಂಗಾಲ್‌ ಕೆಮಿಕಲ್ಸ್‌ ಆ್ಯಂಡ್‌ ಫಾರ್ಮಾಟಿಕಲ್ಸ್‌ ಲಿ. ಕೂಡ ಒಂದು. ಆ್ಯಂಟಿ ಮಲೇರಿಯಾ ಡ್ರಗ್ಸ್‌ ಉತ್ಪಾದಿಸುತ್ತಿರುವ ದೇಶದ ಪ್ರಮುಖ, ಸಾರ್ವಜನಿಕ ವಲಯದ ಏಕೈಕ ಹಾಗೂ ಅತ್ಯಂತ ಹಳೆಯ ಕಂಪನಿ ಇದು.

‘ಭಾರತೀಯ ಕೆಮಿಕಲ್‌ ಸೈನ್ಸ್‌ನ ಪಿತಾಮಹ’ ಎಂದು ಕರೆಯಿಸಿಕೊಳ್ಳುವ ಆಚಾರ್ಯ ಪ್ರಫುಲ್ಲಚಂದ್ರ ರೇ ಅವರು ಸ್ಥಾಪಿಸಿದ ಕಂಪನಿ ಇದು. ರಾಷ್ಟ್ರೀಯವಾದಿ ಚಿಂತನೆಗಳನ್ನು ಹೊಂದಿದ್ದ ಪ್ರಫುಲ್ಲಚಂದ್ರ ರೇ ಅವರು 1892ರಲ್ಲಿಕೇವಲ 700 ರೂಪಾಯಿ ಬಂಡವಾಳದೊಂದಿಗೆ ಬಾಡಿಗೆ ಕಟ್ಟಡದಲ್ಲಿಈ ಕಂಪನಿ ಆರಂಭಿಸಿದರು. ಕೆಮಿಸ್ಟ್‌, ಶಿಕ್ಷಣ ತಜ್ಞ, ಇತಿಹಾಸಕಾರ, ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿಯಾಗಿದ್ದ ಪ್ರಫುಲ್ಲಚಂದ್ರ ದೂರದೃಷ್ಟಿಯ ಫಲವೇ ಈ ಕಂಪನಿ.

1861ರ ಆಗಸ್ಟ್‌ 2ರಂದು ಬಂಗಾಳದ ರರೂಲಿ ಕತಿಪುರ (ಈಗ ಬಾಂಗ್ಲಾದೇಶದಲ್ಲಿದೆ) ಎಂಬಲ್ಲಿ ಜನಿಸಿದರು. ಇವರ ಮುತ್ತಜ್ಜ ಅವರು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿ ಆಡಳಿತದಲ್ಲಿದಿವಾನ್‌ ಆಗಿದ್ದರು. 1887ರಲ್ಲಿ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದಿಂದ ಡಿಎಸ್‌ ಪದವಿ ಪಡೆದ ಬಳಿಕ ಪ್ರೆಸಿಡೆನ್ಸಿ ಕಾಲೇಜ್‌ನಲ್ಲಿರಾಸಾಯನಶಾಸ್ತ್ರ ಅಧ್ಯಾಪಕ ವೃತ್ತಿ ಆರಂಭಿಸಿದರು. ಬಳಿಕ ಅವರು ಬೆಂಗಾಲಿ ಯುವಕರಲ್ಲಿಉದ್ಯಮಶೀಲತೆಯನ್ನು ಬೆಳೆಸುವುದ್ಕಕಾಗಿಯೇ ಅವರು ಈ ಡ್ರಗ್‌ ಕಂಪನಿಯನ್ನು ಸ್ಥಾಪಿಸಿದರು. 700 ರೂಪಾಯಿ ಬಂಡವಾಳದಲ್ಲಿ ಆರಂಭವಾದ ಈ ಕಂಪನಿ 1901ರ ಹೊತ್ತಿಗೆ 2 ಲಕ್ಷ ರೂ. ಬಂಡವಾಳವನ್ನು ಹೊಂದಿತ್ತು! ವಿಶೇಷ ಎಂದರೆ, ಪ್ರಫುಲ್ಲಚಂದ್ರ ರೇ ಅವರು ಈ ಕಂಪನಿಯಿಂದ ಒಂದು ರೂಪಾಯಿಷ್ಟು ಸಂಬಳವನ್ನು ತೆಗೆದುಕೊಳ್ಳಲಿಲ್ಲ. 1908ರ ಹೊತ್ತಿಗೆ ಈ ಕಂಪನಿ ಬಂಗಾಳ ಪ್ರಾಂತ್ಯದಲ್ಲಿತನ್ನದೇ ಆದ ಪ್ರಭುತ್ವವನ್ನು ಹೊಂದಿತ್ತು. ಜಾನ್‌ ಕಮ್ಮಿಂಗ್‌ ಅವರು ತಮ್ಮ ‘ಬಂಗಾಳದ ಕೈಗಾರಿಕಾ ಸ್ಥಾನ ಮತ್ತು ಭವಿಷ್ಯದ ವಿಮರ್ಶೆ’ಯಲ್ಲಿಈ ಕಂಪನಿಯ ಬಗ್ಗೆ ಬರೆದಿದ್ದು, ಈ ಉದ್ಯಮವು ಮರುಸಂಪನ್ಮೂಲ ಮತ್ತು ಬಿಸಿನೆಸ್‌ ಸಾಮರ್ಥ್ಯದ ಕುರುಹಗಳನ್ನು ತೋರಿದೆ. ಈ ಪ್ರಾಂತದ ಬಂಡವಾಳಷಾಹಿಗಳಿಗೆ ಇದು ಪಾಠವಾಗಬೇಕು ಎಂದಿದ್ದರು. ಇದು ಅಂದಿನ ಕಾಲದಲ್ಲಿಕಂಪನಿ ಹೊಂದಿದ್ದ ಪ್ರಭಾವವನ್ನು ತೋರಿಸುತ್ತದೆ.

ವೇಗದ ಬೆಳವಣಿಗೆ
ರೇ ಅವರ ನೇತೃತ್ವದಲ್ಲಿಬಹಳ ವೇಗವಾಗಿ ಈ ಡ್ರಗ್ಸ್‌ ಕಂಪನಿ ಬೆಳವಣಿಗೆಯನ್ನು ದಾಖಲಿಸಿತು. 1905ರಲ್ಲಿ ಕೋಲ್ಕತ್ತಾದ ಮಾಣಿಕ್ತಾಲ ಮತ್ತು 1920ರಲ್ಲಿ ಪನಿಹಾಟಿಯ ಉತ್ತರ ಸಬ್‌ಅರ್ಬ್‌ನಲ್ಲಿತನ್ನ ಮೊದಲನೆಯ ಹಾಗೂ ಎರಡನೆಯ ಕಾರ್ಖಾನೆಗಳನ್ನು ತೆರೆಯಿತು. ಮುಂದೆ 1938ರ ಹೊತ್ತಿಗೆ ಮುಂಬಯಿಯಲ್ಲೂ ಕಂಪನಿ ತನ್ನ ಮೂರನೇ ಕಾರ್ಖಾನೆಯನ್ನು ಆರಂಭಿಸಿತು.

ಸಮರ್ಥ ಬರಹಗಾರ
ಪ್ರಫುಲ್ಲಚಂದ್ರ ಅವರು ತಜ್ಞ ಕೆಮಿಸ್ಟ್‌ ಅಥವಾ ಕೈಗಾರಿಕೋದ್ಯಮಿ ಮಾತ್ರವೇ ಆಗಿರಲಿಲ್ಲ. ಅವರೊಬ್ಬ ಸಮರ್ಥ ಬರಹಗಾರರೂ ಆಗಿದ್ದರು. ಅವರು ಅನೇಕ ಕೃತಿಗಳನ್ನು ರಚಿಸಿದ್ದು, ಆ ಪೈಕಿ ‘ಹಿಸ್ಟರಿ ಆಫ್‌ ಹಿಂದೂ ಕೆಮಿಸ್ಟ್ರಿ ಫ್ರಮ್‌ ಅರ್ಲೀಯಸ್ಟ್‌ ಟೈಮ್ಸ್‌ ಟು ಮಿಡಲ್‌ ಆಫ್‌ ಸಿಕ್ಸ್‌ಟೀನಿಥ್‌ ಸೆಂಚುರಿ ಎಡಿ’ ಮಹತ್ವದ್ದಾಗಿದೆ. ಈ ಕೃತಿಯಲ್ಲಿ ಅವರು ವೇದಗಳ ಕಾಲದಿಂದಲೇ ದೇಶಿಯವಾಗಿ ರಾಸಾಯನಿಕಗಳ ಬಳಕೆ ಇದ್ದದನ್ನು ವಿವರಿಸಿದ್ದಾರೆ. 1896ರಲ್ಲಿಅವರು ಹೊಸ ಸ್ಥಿರ ರಾಸಾಯನಿಕ ಸಂಯುಕ್ತವನ್ನು ತಯಾರಿಸುವ ಕುರಿತಾದ ‘ಮಕ್ರ್ಯುರಸ್‌ ನೈಟ್ರೆಟ್‌’ ಪೇಪರ್‌ ಅನ್ನು ಪ್ರಕಟಿಸಿದರು. ಇದು ಮುಂದೆ ಅನೇಕ ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟಿತು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಒಂದು ಕಂಪನಿಯನ್ನು ಆರಂಭಿಸುವುದು ಮಾತ್ರವಲ್ಲದೇ ಅದನ್ನು ಯಶಸ್ವಿಯಾಗಿ ಮುನ್ನಡೆಸುವುದು ಸಾಮಾನ್ಯ ಕೆಲಸವಲ್ಲ. ಆದರೆ, ಪ್ರಫುಲ್ಲಚಂದ್ರ ರೇ ಅವರು ಎಲ್ಲ ಅಡ್ಡಿಗಳನ್ನು ಮೀರಿ ಯಶಸ್ವಿಯಾದರು. 1936ರಲ್ಲಿಅಂದರೆ ತಮ್ಮ 75ನೇ ವಯಸ್ಸಿನಲ್ಲಿನಿವೃತ್ತಿ ಪಡೆದುಕೊಂಡರು ಮತ್ತು 1944ರ ಜೂನ್‌ 16ರಂದು ನಿಧನರಾದರು. ಆಗವರಿಗೆ 82 ವರ್ಷ ವಯ್ಸಸಾಗಿತ್ತು. 2011ರಲ್ಲಿ ಆಚಾರ್ಯ ಪ್ರಫುಲ್ಲಚಂದ್ರ ರೇ ಅವರ 150ನೇ ಜನ್ಮದಿನವನ್ನು ಆಚರಿಸಲಾಯಿತು. ಈ ವೇಳೆ, ಇಂಗ್ಲೆಂಡ್‌ನ ದಿ ರಾಯಲ್‌ ಸೊಸೈಟಿ ಆಫ್‌ ಕೆಮಿಸ್ಟ್ರಿ ಸಂಸ್ಥೆಯು ‘ಕೆಮಿಕಲ್‌ ಲ್ಯಾಂಡ್‌ಮಾರ್ಕ್ ಫಲಕ’ವನ್ನು ರೇ ಅವರಿಗೆ ಸಮರ್ಪಿಸಿತು. ಈ ರೀತಿಯ ಗೌರವ ಪಡೆದ ಮೊದಲ ಯುರೋಪಿಯನೇತರ ವ್ಯಕ್ತಿ ಇವರು.

ದಿನಕ್ಕೆ 10 ಲಕ್ಷ ಟ್ಯಾಬ್ಲೆಟ್‌ ಉತ್ಪಾದನೆ? –
118 ವರ್ಷಗಳ ಹಿಂದೆ ಆರಂಭವಾದ ಬೆಂಗಲ್‌ ಕೆಮಿಕಲ್ಸ್‌ ಆ್ಯಂಡ್‌ ಫಾರ್ಮಾಸ್ಯುಟಿಕಲ್ಸ್‌ ಹಲವು ದಶಕಗಳಿಂದ ಕ್ಲೋರೋಕ್ವಿನ್‌ ಫಾಸ್ಫೇಟ್‌ ಅನ್ನು ಉತ್ಪಾದಿಸುತ್ತಿದೆ. ಸಾಮಾನ್ಯರ್ಥದಲ್ಲಿ ಕ್ಲೋರೋಕ್ವಿನ್‌ ಫಾಸ್ಫೇಟ್‌ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್‌ ಸಲ್ಫೇಟ್‌ ಮಧ್ಯೆ ಅಂಥ ವ್ಯತ್ಯಾಸವಿಲ್ಲ. ಹೈಡ್ರಾಕ್ಸಿಕ್ಲೋರೋಕ್ವಿನ್‌ ಒಳಗೊಂಡಿರುವ ರಾಸಾಯನಿಕಗಳೇ ಕ್ಲೋರೋಕ್ವಿನ್‌ ಫಾಸ್ಫೇಟ್‌ನಲ್ಲೂ ಇವೆ ಎಂಬುದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ಚಂದ್ರಯ್ಯ ಅವರ ಅಭಿಪ್ರಾಯವಾಗಿದೆ. ಹೀಗಿದ್ದೂ, ಸರಕಾರದ ಕೆಲವು ಮಾರ್ಗದರ್ಶಿಗಳನ್ನು ಪಾಲಿಸುವ ದೃಷ್ಟಿಯಿಂದ ಹೈಡ್ರಾಕ್ಸಿಕ್ಲೋರೋಕ್ವಿನ್‌ ಉತ್ಪಾದನೆಗೆ ಅನುಮತಿ ನೀಡುವಂತೆ ಡ್ರಗ್‌ ಕಂಟ್ರೋಲರ್‌ ಜನರಲ್‌ಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಅವರು. ಅನುಮತಿ ಸಿಕ್ಕ ಕೂಡಲೇ ದಿನಕ್ಕೆ 10 ಲಕ್ಷ ಟ್ಯಾಬ್ಲೆಟ್‌ ಉತ್ಪಾದಿಸುವ ಸಾಮರ್ಥ್ಯ ತಮ್ಮ ಕಂಪನಿಗೆ ಎಂದು ಹೇಳಿಕೊಂಡಿದ್ದಾರೆ.

ಲಸಿಕೆ ತಯಾರಿಸಲು ದೀರ್ಘ ಸಮಯವೇಕೆ? –
ಸಾಮಾನ್ಯವಾಗಿ ಲಸಿಕೆಗಳನ್ನು ತಯಾರಿಸಲು ಕನಿಷ್ಠ ಎರಡರಿಂದ 5 ವರ್ಷ ಬೇಕಾಗುತ್ತದೆ ಮತ್ತು ಸಾಮಾನ್ಯ ಬಳಕೆಗೂ ಮುಂಚೆ 6 ಹಂತಗಳನ್ನು ಅದು ದಾಟಿ ಬರಬೇಕಾಗುತ್ತದೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ(ಸಿಡಿಸಿ) ಪ್ರಕಾರ, ಪರಿಶೋಧನೆ(ವೈರಸ್‌ ಪತ್ತೆ), ಪ್ರಿ ಕ್ಲಿನಿಕಲ್‌(ಪ್ರಾಣಿಗಳಿಗೆ ಪರೀಕ್ಷೆ), ಕ್ಲಿನಿಕಲ್‌ ಡೆವಲಪ್‌ಮೆಂಟ್‌(ಪ್ರಾಣಿಗಳಲ್ಲಿಲಸಿಕೆ ಯಶಸ್ವಿಯಾದ ಬಳಿಕ ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು), ಮನುಷ್ಯರ ಮೇಲೆ ಪ್ರಯೋಗ(ಕನಿಷ್ಠ 100 ಜನರ ಮೇಲೆ ಪ್ರಯೋಗ. ಈ ಹಂತವೇ ಸಾಕಷ್ಟು ಅವಧಿಯನ್ನು ಕಬಳಿಸುತ್ತದೆ. ಇದು ತಿಂಗಳಿಂದ ಕೆಲವು ವರ್ಷಗಳವರೆಗೂ ಆಗಬಹುದು), ಬಳಕೆಗೆ ಅನುಮತಿ, ಲಸಿಕೆ ಉತ್ಪಾದನೆ ಮತ್ತು ಕ್ವಾಲಿಟಿ ಕಂಟ್ರೋಲ್‌… ಹೀಗೆ ಆರು ಹಂತಗಳನ್ನು ದಾಟಬೇಕಾಗುತ್ತದೆ. ಹಾಗಾಗಿ, ಯಾವುದೇ ಲಸಿಕೆಯೊಂದು ಸಾರ್ವಜನಿಕವಾಗಿ ಬಳಕೆಗೆ ಬರಬೇಕಾದರೆ ಸಾಕಷ್ಟು ಕಾಲಾವಕಶಾ ಬೇಕಾಗುತ್ತದೆ. ಅದೇ ರೀತಿ, ಕೋವಿಡ್‌ 19 ವಿರುದ್ಧದ ಲಸಿಕೆಗೆ ಸಂಬಂಧ ಅನೇಕ ಪ್ರಕ್ರಿಯೆಗಳು ನಡೆದಿವೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top