ಅತಿಥಿ ಉಪನ್ಯಾಸಕರು ಅತಂತ್ರ

ಪ್ರಮೋದ ಹರಿಕಾಂತ ಬೆಳಗಾವಿ/ಎನ್‌.ಡಿ.ತಿಪ್ಪೇಸ್ವಾಮಿ ಬಳ್ಳಾರಿ.

ಹಲವು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ಕಡಿಮೆ ವೇತನಕ್ಕೆ ದುಡಿಸಿಕೊಂಡಿದ್ದ ಅತಿಥಿ ಉಪನ್ಯಾಸಕರನ್ನು ರಾಜ್ಯ ಸರಕಾರ ಕೊರೊನಾ ಕಾರಣಕ್ಕೆ ಕೈ ಬಿಟ್ಟಿದ್ದರಿಂದ ಸಾವಿರಾರು ಅತಿಥಿ ಉಪನ್ಯಾಸಕರು ಅತಂತ್ರರಾಗಿದ್ದಾರೆ.

ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡದಿಂದ ಸುಮಾರು ಎಂಟು ಅತಿಥಿ ಉಪನ್ಯಾಸಕರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವರು ಕೂಲಿ ಕೆಲಸಕ್ಕೆ ಇಳಿದಿದ್ದಾರೆ. ಹೀಗಿರುವಾಗಲೇ ಈ ವರ್ಷ ಅತಿಥಿ ಉಪನ್ಯಾಸಕರ ಸೇವೆಯನ್ನೇ ಕಡಿತ ಮಾಡುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ಅತಿಥಿ ಉಪನ್ಯಾಸಕರನ್ನು ಇನ್ನಷ್ಟು ಚಿಂತೆಗೀಡು ಮಾಡಿದೆ.

ಅತಿಥಿ ಉಪನ್ಯಾಸಕರಿಗೆ ವರ್ಷದ ಎಲ್ಲ ತಿಂಗಳಲ್ಲಿ ಸಂಬಳ ಕೊಡಲಾಗುವುದಿಲ್ಲ. ಕಾಲೇಜು ಅವಧಿವರೆಗೆ ಮಾತ್ರ ವೇತನ. ಪ್ರತಿ ವರ್ಷ ಏಪ್ರಿಲ್‌ವರೆಗೆ ನಡೆಯುತ್ತಿದ್ದ ಕಾಲೇಜುಗಳ ಕೆಲಸದ ಅವಧಿಯನ್ನು ಕೊರೊನಾ ಕಾರಣಕ್ಕೆ ಮಾರ್ಚ್‌ನಲ್ಲೇ ಮೊಟಕುಗೊಳಿಸಲಾಗಿದೆ. ರಾಜ್ಯದ ಅತಿಥಿ ಉಪನ್ಯಾಸಕರಿಗೆ ಮಾರ್ಚ್‌ 23ರ ನಂತರ ವೇತನವನ್ನೇ ಕೊಟ್ಟಿಲ್ಲ. ಇದರಿಂದ ಸಾವಿರಾರು ಉಪನ್ಯಾಸಕರು ಮೂರು ತಿಂಗಳಿಂದ ಸಂಬಳ ಇಲ್ಲದೆ, ಬೇರೆ ದುಡಿಮೆಯೂ ಇಲ್ಲದೆ ಕಂಗಾಲಾಗಿದ್ದಾರೆ.

ಇನ್ನೊಂದೆಡೆ ಪರೀಕ್ಷೆ, ಮೌಲ್ಯಮಾಪನ ಪ್ರಕ್ರಿಯೆಯೂ ಇಲ್ಲದೆ ಮೇನಲ್ಲಿ ಸಿಗುತ್ತಿದ್ದ ಅಲ್ಪ ಆದಾಯಕ್ಕೂ ಕೊಕ್ಕೆ ಬಿದ್ದಿದೆ. ಈಗ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದ ಬಗ್ಗೆಯೂ ನಿಶ್ಚಿತತೆ ಇಲ್ಲವಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಸ್ಥಿತಿಯೂ ಇದೇ ರೀತಿ ಆಗಿದೆ.

ಸರಿಯಾಗಿ ಪಾಠ ಮಾಡೋದು ಇವರೇ
ರಾಜ್ಯದ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 6,232 ಜನ ಕಾಯಂ ಪ್ರಾಧ್ಯಾಪಕರಿದ್ದಾರೆ. ಆದರೆ, ಇಷ್ಟೇ ಜನರಿಂದ ಪಾಠ ಪ್ರವಚನ ಸಾಧ್ಯವಿಲ್ಲ. ಹೀಗಾಗಿ ಹೆಚ್ಚುವರಿಯಾಗಿ 14,516 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ನಿಜವಾದ ಪಾಠ ಪ್ರವಚನಗಳು ನಡೆಯುವುದು 70% ನಷ್ಟಿರುವ ಅತಿಥಿಗಳಿಂದಲೇ. 2,514 ಖಾಸಗಿ ಅನುಧಿದಾನಿತ, ಅನುದಾನ ರಹಿತ ಪದವಿ ಕಾಲೇಜುಗಳಲ್ಲೂ ಅತಿಥಿ ಉಪನ್ಯಾಸಕರ ಕಾರ್ಯಭಾರ ಹೆಚ್ಚಿದೆ. 100 ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ 1,320 ಅತಿಥಿ ಉಪನ್ಯಾಸಕರಿದ್ದಾರೆ.

ಕುಟುಂಬ ನಿರ್ವಹಣೆಯೇ ಸವಾಲು
ರಾಜ್ಯದಲ್ಲಿ ಪ್ರಥಮ ದರ್ಜೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಕಾಲೇಜುಗಳು ಸೇರಿ ಸುಮಾರು 20 ಸಾವಿರ ಅತಿಥಿ ಉಪನ್ಯಾಸಕರಿದ್ದಾರೆ. ಅದರಲ್ಲಿ ಬಹುಪಾಲು ಉಪನ್ಯಾಸಕರು 30ರಿಂದ 40 ವರ್ಷ ವಯಸ್ಸಿನವರು. ಸುಮಾರು 5 ಸಾವಿರ ಉಪನ್ಯಾಸಕಿಯರಿದ್ದಾರೆ. ಅವರೆಲ್ಲರೂ 8-10 ವರ್ಷಗಳಿಂದ ಉಪನ್ಯಾಸಕ ವೃತ್ತಿಯನ್ನೇ ನಂಬಿದ್ದಾರೆ. ಅಲ್ಲದೆ, ಅತಿಥಿ ಉಪನ್ಯಾಸಕ ವೃತ್ತಿಗೆ ಉದ್ಯೋಗ ಭದ್ರತೆ, ಭವಿಷ್ಯ ನಿಧಿ, ಇಎಸ್‌ಐ ಸೌಲಭ್ಯ ಕೂಡ ಇಲ್ಲ. ಈಗಂತೂ ಕೆಲವರು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೂ ಚಿಕಿತ್ಸೆಗೂ ಹಣ ಇಲ್ಲದೆ ಪರದಾಡುತ್ತಿದ್ದಾರೆ. ಅವರಿಗೀಗ ಕುಟುಂಬ ನಿರ್ವಹಣೆಯೇ ಸವಾಲಾಗಿ ಪರಿಣಮಿಸಿದೆ.

ಕಂಗೆಡಿಸಿದ ಸರಣಿ ಆತ್ಮಹತ್ಯೆ
ಲಾಕ್‌ಡೌನ್‌ ಬಳಿಕ ಮೂರು ತಿಂಗಳಲ್ಲಿ ನಡೆದ ಅತಿಥಿ ಉಪನ್ಯಾಸಕರ ಆತ್ಮಹತ್ಯೆ ಪ್ರಕರಣ ಪರಿಸ್ಥಿತಿಯನ್ನು ಗಂಭೀರವಾಗಿಸಿದೆ. ಶಿವಮೊಗ್ಗದಲ್ಲಿ ನಾಲ್ವರು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಒಂದೇ ಕಾಲೇಜಿನ ಇಬ್ಬರು ಅತಿಥಿ ಉಪನ್ಯಾಸಕರು, ದೇವದುರ್ಗ ತಾಲೂಕಿನ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ಮನೆಗೆ ಯಾವ ಅಧಿಕಾರಿಗಳೂ, ಸಚಿವರೂ ಹೋಗಿ ಸಾಂತ್ವನ ಹೇಳಿಲ್ಲ.

ಬೇಡಿಕೆಗಳು ಏನು?

– ಲಾಕ್‌ಡೌನ್‌ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ ವೇತನ ಕೊಡಬೇಕು.

– ಉದ್ಯೋಗ ಭದ್ರತೆ, ಭವಿಷ್ಯ ನಿಧಿ, ಇಎಸ್‌ಐ ಸೌಲಭ್ಯ ಘೋಷಿಸಬೇಕು.

– ಅತಿಥಿ ಉಪನ್ಯಾಸಕರ ಸರಣಿ ಆತ್ಮಹತ್ಯೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು.

– ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು.

ಲಾಕ್‌ಡೌನ್‌ ಸಂದರ್ಭದಲ್ಲಿ ಯಾರನ್ನೂ ಕೆಲಸದಿಂದ ತೆಗೆಯಬಾರದು ಎಂದು ಸರಕಾರ ಹೇಳಿದ್ದರೂ ಕಾಲೇಜು ನಡೆದಿಲ್ಲ ಎಂದು ಅತಿಥಿ ಉಪನ್ಯಾಸಕರಿಗೆ ಮಾರ್ಚ್‌ ನಂತರ ವೇತನವನ್ನೇ ಕೊಟ್ಟಿಲ್ಲ.

– ಎಚ್‌. ಸೋಮಶೇಖರ್,‌ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ

ಉದ್ಯೋಗವಿಲ್ಲದೆ, ವೇತನವಿಲ್ಲದೆ ಮನೆಯಲ್ಲಿಗೌರವವೂ ಇಲ್ಲ, ಸಮಾಜದಲ್ಲಿತಲೆ ಎತ್ತಿ ಓಡಾಡದಂತಾಗಿ ಜಿಗುಪ್ಸೆಗೊಂಡು ಕೆಲವು ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದು, ಸರಕಾರ ಎಚ್ಚೆತ್ತುಕೊಳ್ಳಬೇಕು.

– ಡಾ. ಮಲ್ಲಿಕಾರ್ಜುನ ಮಾನ್ಪಡೆ, ಪ್ರ.ಕಾರ್ಯದರ್ಶಿ, ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ, ಬೆಂಗಳೂರು


ಬಹುಪಾಲು ಸರಕಾರಿ ನಡೆಯುತ್ತಿರುವುದು ಅತಿಥಿ ಉಪನ್ಯಾಸಕರಿಂದ ಎಂಬುದು ಕಟು ಸತ್ಯ. ಇವರ ಸಮಸ್ಯೆಯನ್ನು ಇಂದಿನವರೆಗೆ ಯಾವ ಸರಕಾರಗಳು ಕಾಯಂ ಆಗಿ ಪರಿಹರಿಸಲು ಮುಂದಾಗಲಿಲ್ಲ. ಗೌರವಧನವನ್ನೂ ಸರಿಯಾಗಿ ಕೊಡದಿದ್ದರೆ, ಇವರು ಬದುಕುವುದಾದರೂ ಹೇಗೆ?

-ಪ್ರೊ. ಬರಗೂರು ರಾಮಚಂದ್ರಪ್ಪ, ಗೌರವ ಸಲಹೆಗಾರರು, ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ, ಬೆಂಗಳೂರು

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top