ರಾಜ್ಯದ ಆಡಳಿತ ಪಕ್ಷ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ಅಸಹನೆಯ ಒಂದು ಚಲನೆ ಈಗ ಕುತೂಹಲದ ಕೇಂದ್ರವಾಗಿದೆ. ಉತ್ತರ ಕರ್ನಾಟಕದ ಒಬ್ಬರು ಹಿರಿಯ ಶಾಸಕರು, ಇನ್ನೊಂದಷ್ಟು ಶಾಸಕರನ್ನು ಸೇರಿಸಿಕೊಂಡು ಔತಣಕೂಟ ನಡೆಸಿದ್ದು, ಪಕ್ಷದೊಳಗಿನ ಬಂಡಾಯವನ್ನು ಕಾಣಿಸುವಂತೆ ಮಾಡಿದೆ. ಔತಣ ನೀಡಿದವರು ಹಾಗೂ ಅದರಲ್ಲಿ ಭಾಗವಹಿಸಿದವರಿಗೆ ಈ ಸರಕಾರದ ಬಗ್ಗೆ, ಅದರಲ್ಲಿ ತಮಗೆ ಸಿಕ್ಕಿಲ್ಲದ ಪ್ರಾತಿನಿಧ್ಯದ ಬಗ್ಗೆ ಅಸಹನೆ, ಅತೃಪ್ತಿ ಇರುವುದು ಎಲ್ಲರಿಗೂ ಗೊತ್ತಿದ್ದದ್ದೇ. ಹಾಗೊಂದು ವೇಳೆ ಈ ಬಂಡಾಯ ಸಾಕಷ್ಟು ಶಾಸಕ ಬಲವನ್ನು ಪಡೆದು ಬಲಿಷ್ಠವಾದರೆ, ಒಂದೇ ಅವಧಿಯಲ್ಲಿ ಎರಡನೇ ಬಾರಿಗೆ ಸರಕಾರ ಅಲ್ಲಾಡಲಿದೆ. ಸರಕಾರ ಬೀಳುತ್ತದೋ ಇಲ್ಲವೋ ಬೇರೆ ಮಾತು; ಆದರೆ ಬಂಡಾಯದಿಂದ ಆಗುವ ಕಂಪನಗಳು ಹಾಗೂ ಸೃಷ್ಟಿಯಾಗುವ ಸಮಸ್ಯೆಗಳು ಹಲವು.
ಈ ಹಿಂದಿನ ಸರಕಾರದಲ್ಲಿ ನಡೆದ ಬಂಡಾಯವೇ ಈಗಿನ ಬಿಜೆಪಿ ಸರಕಾರದ ರಚನೆಗೆ ಕಾರಣವಾಗಿರುವುದು ಎಲ್ಲರಿಗೂ ಗೊತ್ತಿರುವುದೇ. ಆ ಬಂಡಾಯ, ತಿಂಗಳುಗಳ ಕಾಲ ರಾಜ್ಯದ ಆಡಳಿತಕ್ಕೆ ಲಕ್ವ ಹೊಡೆಸಿತ್ತು. ಆಡಳಿತ ಹಳ್ಳ ಹಿಡಿದಿತ್ತು. ನೆರೆ ಪರಿಹಾರ ಕಾರ್ಯಗಳು ನನೆಗುದಿಗೆ ಬಿದ್ದಿದ್ದವು. ‘ಅನರ್ಹರು’ ಎಂಬ ಪದಕ್ಕೆ ಹೊಸ ಅರ್ಥವೇ ಸೃಷ್ಟಿಯಾಗಿತ್ತು. ಯಾವ ಜನಪ್ರತಿನಿಧಿಯೂ ಜನರಿಗೆ ಮುಖ ಕೊಟ್ಟು ಮಾತನಾಡಲು ಸಾಧ್ಯವಾಗದ, ನೈತಿಕ ಮೌಲ್ಯಗಳನ್ನು ಕಳೆದುಕೊಂಡ ಕೇವಲ ರಾಜಕಾರಣಿಗಳಾಗಿದ್ದರು. ಮತ್ತೊಮ್ಮೆ ಅಂಥ ಸನ್ನಿವೇಶ ಸೃಷ್ಟಿಯಾಗಬೇಕೇ ಎಂಬುದನ್ನು ನಾವು ಕೇಳಿಕೊಳ್ಳಬೇಕು. ಸಂಪುಟದಲ್ಲಿ ನೀಡದ ಸ್ಥಾನ, ಎದುರಾಳಿಗೆ ಮಹತ್ವದ ಸ್ಥಾನ, ಕಡೆಗಣನೆ, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದು- ಹೀಗೆ ಬಂಡಾಯಕ್ಕೆ ಅತೃಪ್ತರಲ್ಲಿ ನೂರೆಂಟು ಕಾರಣ ಇರಬಹುದು. ಆದರೆ ಪ್ರಸ್ತುತ ಸನ್ನಿವೇಶ ಅದಕ್ಕೆ ತಕ್ಕುದಲ್ಲ.
ರಾಜ್ಯವೂ ಸೇರಿದಂತೆ ದೇಶ ಕೊರೊನಾ ಎಂಬ ವೈರಾಣುವಿನ ವಿರುದ್ಧ ಸೆಣಸುತ್ತಿದೆ. ಎಲ್ಲ ವಲಯಗಳು, ಉದ್ಯಮಗಳ ಆರ್ಥಿಕ ಸ್ಥಿತಿ ಪಾತಾಳ ಸೇರಿದೆ. ರಾಜ್ಯದ ಬೊಕ್ಕಸವೂ ಖಾಲಿಯಾಗಿದೆ. ಆರೋಗ್ಯ ಸೇವೆ ಹಾಗೂ ಗೃಹ ಇಲಾಖೆಗಳು ಮಾತ್ರವೇ ಜೀವಂತ ಇರುವಂತೆ ಕಾಣಿಸುತ್ತಿದೆ. ನಿತ್ಯ ಇನ್ನೂರರ ಆಸುಪಾಸು ಕೊರೊನಾ ಕೇಸುಗಳು ಪತ್ತೆಯಾಗುತ್ತಿದ್ದು, ಇನ್ನೂ ನಿಯಂತ್ರಣಕ್ಕೆ ಸಿಗುವ ಸೂಚನೆಗಳು ಕಾಣಿಸುತ್ತಿಲ್ಲ. ಇಂಥ ಹೊತ್ತಿನಲ್ಲಿ ಸಾರ್ವಜನಿಕ ಸೇವೆಯ ಮುಂಚೂಣಿಯಲ್ಲಿ ನಿಂತು, ಜನರ ಸುರಕ್ಷತೆಗಾಗಿ ದುಡಿಯಬೇಕಾದ ಜನಪ್ರತಿನಿಧಿಗಳು ತಮ್ಮ ಪದವಿಯ ಆಮಿಷ, ಅಧಿಕಾರದ ಹಪಹಪಿಗಳಲ್ಲಿ ಮುಳುಗುವುದು, ಅದಕ್ಕಾಗಿ ಸಂಚು ಮಾಡುವುದು ಬೇಜವಾಬ್ದಾರಿತನ ಮಾತ್ರವಲ್ಲ ಜನರ ಮೇಲೆ ಎಸಗುವ ಕ್ರೌರ‍್ಯವೂ ಹೌದು. ಇದರಿಂದ ಆಡಳಿತ ಯಂತ್ರ ನಿಷ್ಕ್ರಿಯವಾಗುತ್ತದೆ. ಅಧಿಕಾರದಲ್ಲಿ ಯಾರಿದ್ದಾರೆ ಎಂಬುದು ಅಸ್ಪಷ್ಟವಾಗುವುದರಿಂದ, ಚುರುಕಾಗಿರಬೇಕಾದ ಅಧಿಕಾರಿಗಳು ಜಡರಾಗುತ್ತಾರೆ ಇಲ್ಲವೇ ತಮ್ಮಿಷ್ಟದಂತೆ ವರ್ತಿಸತೊಡಗುತ್ತಾರೆ. ಕೋವಿಡ್ ತಡೆ ಉಪಕ್ರಮಗಳು, ಆರ್ಥಿಕತೆಯ ಪುನಶ್ಚೇತನಕ್ಕಾಗಿ ಕೈಗೊಳ್ಳಲಾದ ಪ್ಯಾಕೇಜ್‌ನ ಕಾರ್ಯಕ್ರಮಗಳು ಕುಂಟುತ್ತವೆ. ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಇದೆಲ್ಲ ಅನಪೇಕ್ಷಿತ.
ಆಡಳಿತದಲ್ಲಿದ್ದು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಬಿಜೆಪಿ ವರ್ತಿಸುತ್ತಿರುವ ರೀತಿ ಕೂಡ ಅಸಮರ್ಪಕವಾಗಿದೆ. ಬಿಜೆಪಿ ತನ್ನನ್ನು ‘ಪಾರ್ಟಿ ವಿದ್ ಡಿಫರೆನ್ಸ್’ ಎಂದು ಕರೆದುಕೊಳ್ಳುತ್ತ ಬಂದಿದೆ; ಈ ಬೆಳವಣಿಗೆಯನ್ನು ನೋಡಿದರೆ ಅದನ್ನು ‘ಪಾರ್ಟಿ ವಿದ್ ಡಿಫರೆನ್ಸಸ್’ ಎಂದು ಕರೆಯಬಹುದು. ಕಾಂಗ್ರೆಸ್- ಜೆಡಿಎಸ್ ಸರಕಾರವನ್ನು ಉರುಳಿಸಿದ್ದು ಅಧಿಕಾರಕ್ಕಲ್ಲ, ಜನಸೇವೆಗೆ ಎಂದು ಬಿಜೆಪಿ ಹೇಳಿಕೊಂಡಿದೆ; ಕನಿಷ್ಠ ಪಕ್ಷ ಆ ಮಾತಿಗೆ ಬದ್ಧವಾಗಿಯಾದರೂ ನಡೆಯಲಿ. ರಾಜ್ಯ ಸಂಕಷ್ಟದಲ್ಲಿರುವಾಗ ಭಿನ್ನಮತಗಳು ಸೂಕ್ತವಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸೂಕ್ತ ಪ್ರಾತಿನಿಧ್ಯ ನೀಡಿ ಅಲ್ಲಿನವರ ಅಸಮಾಧಾನ ತಣಿಸಬೇಕಾದದ್ದು ಅಧಿಕಾರದಲ್ಲಿರುವವರ ಹೊಣೆ. ಮತದಾರನ ನಿರ್ಣಯಕ್ಕೆ ಬದ್ಧರಾಗಿ ಆಡಳಿತವನ್ನು ಸುಸೂತ್ರಗೊಳಿಸುವುದು ಶಾಸಕರ ಕರ್ತವ್ಯ.