ಗೋವು, ನಾವು ಮತ್ತು ರಾಜಕೀಯದ ಕಾವು!

ನಕಲಿ ಮತ್ತು ಅಸಲಿ ವಿವಾದವನ್ನು ಬದಿಗಿಟ್ಟು ನೋಡುವುದಾದರೆ, ಕೃಷಿ ಪ್ರಧಾನ ಭಾರತದಲ್ಲಿ ಗೋರಕ್ಷಣೆಯ ವಿಷಯ ಮಾತನಾಡುವುದು ತಪ್ಪು ಅನ್ನುವುದು ಹೇಗೆ? ಒಂದು ಕ್ಷಣ ದೇವರು, ಧರ್ಮ, ಪಾಪ ಪುಣ್ಯದ ಮಾತನ್ನು ಬದಿಗಿಡೋಣ. ವ್ಯಾವಹಾರಿಕವಾಗಿ ನೋಡಿದರೂ ಗೋ ಸಂತತಿಯ ನಾಶ ಈ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತವೇ ಸರಿ.

MODIಮೋಡಿಗಾರ ಪ್ರಧಾನಿ ನರೇಂದ್ರ ಮೋದಿ ಬರುಬರುತ್ತ ಗೊಂದಲಕ್ಕೆ ಸಿಲುಕುತ್ತಿದ್ದಾರಾ? ಹತಾಶೆಗೆ ಒಳಗಾಗುತ್ತಿದ್ದಾರಾ? ಮುಂಬರುವ ಚುನಾವಣಾ ಸೋಲಿನ ಸಾಧ್ಯತೆಯಿಂದ ಅಧೀರರಾಗಿ ಹೆಜ್ಜೆ ತಪ್ಪುತ್ತಿದ್ದಾರಾ? ಇಂಥ ಪ್ರಶ್ನೆಗಳು ಇತ್ತೀಚೆಗೆ ಮತ್ತೆ ಮತ್ತೆ ಕಾಡುತ್ತಿರುವುದು ಸುಳ್ಳಲ್ಲ.

ಈ ಮಾತಿಗೆ ಪೂರಕವಾಗಿ ಇತ್ತೀಚಿನ ಎರಡು ಪ್ರಮುಖ ಸಂದರ್ಭಗಳು ಕಣ್ಣಿಗೆ ಕಟ್ಟುತ್ತವೆ. ಮೊದಲನೆಯದ್ದು ‘ನಕಲಿ ಗೋರಕ್ಷಕರ’ ವಿರುದ್ಧದ ಮೋದಿ ಗುಡುಗು. ಗುಜರಾತದ ಉನಾದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಕೆಲವರ ಮೇಲೆ ಗೋರಕ್ಷಕರು ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆಂಬ ಘಟನೆ ನಿಜಕ್ಕೂ ಕಳವಳಕಾರಿಯೇ ಹೌದೆನ್ನಿ. ನಾಗರಿಕ ಸಮಾಜದಲ್ಲಿ ಇಂಥ ಪ್ರಕರಣಗಳು ಜರುಗಲೇ ಬಾರದು. ಆದರೆ ಈ ವಿಚಾರದಲ್ಲಿ ಅತೃಪ್ತಿ ಹೊರಹಾಕಲು ಹೋದ ಮೋದಿ ತುಸು ಲಯ ಕಳೆದುಕೊಂಡಂತೆ ತೋರಿತು. ಮೋದಿ ಮಾತನ್ನೊಮ್ಮೆ ಮೆಲುಕು ಹಾಕುವ. ‘ಗೋ ರಕ್ಷಣೆ ಮಾಡುವ ಬದಲು ನಿಮ್ಮ ಬೀದಿಯಲ್ಲಿ ಕಸ ಗುಡಿಸುವಂಥ ಉತ್ತಮ ಕೆಲಸ ಮಾಡಿ. ಇವರು ಗೋರಕ್ಷಕರಲ್ಲ, ನಕಲಿ ಗೋ ಸಂರಕ್ಷಕರು’ ಎಂದು ಆವೇಶದಿಂದ ಹೇಳಿದ್ದರು. ದಲಿತರ ಮೇಲೆ ನಡೆದ ಹಲ್ಲೆಯಿಂದ ಮನನೊಂದು ತಾಳ್ಮೆ ಕಳೆದುಕೊಂಡು ಮೋದಿ ಹಾಗೆ ಮಾತನಾಡಿದರಾ ಅಥವಾ ಉತ್ತರಪ್ರದೇಶ, ಪಂಜಾಬ್ ಚುನಾವಣೆಯ ಭವಿತವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಗೆ ಹೇಳಿದರಾ… ಗೊತ್ತಿಲ್ಲ. ಕಸ ಗುಡಿಸುವುದೂ ಒಳ್ಳೆಯ ಕೆಲಸವೇ. ಹಾಗೆಯೇ ಗೋ ಸಂರಕ್ಷಣೆ ಕೂಡ. ಗೋ ರಕ್ಷಣೆಯ ನೆಪದಲ್ಲಿ ದಲಿತರ ಮೇಲೆ ನಡೆದ ಹಲ್ಲೆಯ ಘಟನೆಗೆ ಮತ್ತೊಂದು ಆಯಾಮವೂ ಇರಬಹುದಲ್ಲ! ಅದನ್ನೇಕೆ ಮೋದಿ ಆಲೋಚಿಸಲಿಲ್ಲ? ಕಾರಣ ಏನೇ ಇರಲಿ, ಒಟ್ಟಾರೆ ಹೇಳುವುದಾದರೆ ಗೋ ಸಂರಕ್ಷಕರ ವಿಷಯದಲ್ಲಿ ಮೋದಿ ಆಡಿದ ಮಾತು ಸುತಾರಾಂ ಸರಿಯಲ್ಲ.

ಇಲ್ಲಿ ಒಂದು ಸಂಗತಿಯನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಗೋರಕ್ಷಕರು ಮಾತ್ರವಲ್ಲ, ಯಾವುದೇ ವ್ಯಕ್ತಿ ಅಥವಾ ಸಂಘಟನೆ ಕಾನೂನನ್ನು ಕೈಗೆ ತೆಗೆದುಕೊಳ್ಳುವುದನ್ನು ಯಾವುದೇ ಸರ್ಕಾರ ಸಹಿಸಿಕೊಳ್ಳಕೂಡದು. ತಪ್ಪಿತಸ್ಥರನ್ನು ಹುಡುಕಿ ದಂಡಿಸುವಲ್ಲಿ ಒಂದಿಷ್ಟೂ ರಾಜಿ ಮಾಡಿಕೊಳ್ಳಬಾರದು. ಅದರ ಜೊತೆಗೇ ಅದೇ ಸರ್ಕಾರಗಳು ಒಂದು ಘಟನೆಯನ್ನು ಒಂದು ವಿಚಾರ, ಆಚಾರ, ಸಂಘಟನೆ, ಮತ್ಯಾವುದೋ ಚಳವಳಿಗಳ ಪರಿಣಾಮ ಎಂಬಂತೆ ಬಿಂಬಿಸಲು ಹೋಗಬಾರದು. ಒಂದನ್ನು ಮತ್ತೊಂದಕ್ಕೆ ಸಾರಾಸಗಟಾಗಿ ತಳಕು ಹಾಕಬಾರದು. ಕಾರಣ ಏನೆಂದರೆ ಎಲ್ಲ ಕಾಲದಲ್ಲಿ ಎಲ್ಲ ವಿಚಾರಗಳ ಸಂದರ್ಭಗಳಲ್ಲಿ ಅಪವಾದ ಎಂಬುದು ಇದ್ದೇ ಇರುತ್ತದೆ. ಹಿಂದು ಸಂಘಟನೆ, ಮುಸ್ಲಿಂ ಸಂಘಟನೆ, ಕ್ರೖೆಸ್ತ ಸಂಘಟನೆ, ಗೋರಕ್ಷಾ ಸಂಘಟನೆ ಹೀಗೆ ಎಲ್ಲ ವಿಷಯಗಳಿಗೂ ಈ ಮಾತು ಅನ್ವಯ. ಈ ಅಪವಾದಕ್ಕೆ ಬಿಜೆಪಿ, ಕಾಂಗ್ರೆಸ್ನಂತಹ ರಾಜಕೀಯ ಪಕ್ಷಗಳೂ ಹೊರತಲ್ಲ. ಈ ಪಕ್ಷಗಳು ಮಾಡುವ ಅಧ್ವಾನ, ಅಪಚಾರ, ಅವಿವೇಕದ ವರ್ತನೆಗಳು ಯಾವ ಸಂಘಟನೆಗೆ ಕಡಿಮೆಯಿರುತ್ತವೆಯಾ? ಹೀಗಾಗಿ ಒಂದು ಘಟನೆಯನ್ನು ಮತ್ತಿನ್ನಾವುದೋ ಸಂಘಟನೆಗೆ, ಸಿದ್ಧಾಂತದೊಂದಿಗೆ ಸರ್ವಥಾ ಸಾರ್ವತ್ರಿಕ ಸಮೀಕರಣಕ್ಕೆ ಒಳಪಡಿಸಬಾರದು. ಅದು ಜವಾಬ್ದಾರಿ ಮತ್ತು ವಿವೇಕದ ಲಕ್ಷಣ ಅನ್ನಿಸಿಕೊಳ್ಳುವುದಿಲ್ಲ.

ಗೋರಕ್ಷಣೆಗೆ ಕಾಯ್ದೆಬದ್ಧ ಕ್ರಮ: ಇನ್ನು ನಕಲಿ ಮತ್ತು ಅಸಲಿ ವಿವಾದವನ್ನು ಬದಿಗಿಟ್ಟು ನೋಡುವುದಾದರೆ, ಕೃಷಿ ಪ್ರಧಾನ ಭಾರತದಲ್ಲಿ ಗೋರಕ್ಷಣೆಯ ವಿಷಯ ಮಾತನಾಡುವುದು ತಪ್ಪು ಅನ್ನುವುದು ಹೇಗೆ? ಒಂದು ಕ್ಷಣ ದೇವರು, ಧರ್ಮ, ಪಾಪ ಪುಣ್ಯದ ಮಾತನ್ನು ಬದಿಗಿಡೋಣ. ವ್ಯಾವಹಾರಿಕವಾಗಿ ನೋಡಿದರೂ ಗೋ ಸಂತತಿಯ ನಾಶ ಈ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ. ಈ ಮಾತನ್ನು ನಿಷ್ಪಕ್ಷಪಾತ ಆರ್ಥಿಕ-ಕೃಷಿ ತಜ್ಞರು ಅಲ್ಲಗಳೆಯಲಿ ನೋಡೋಣ. ಹಾಗೆಯೇ ಪರೋಪಕಾರಿ ಗುಣ ಮತ್ತು ಬಹು ಉಪಯುಕ್ತತೆಯ ಕಾರಣದಿಂದ ಗೋವು ಇತರ ಮೂಕಪ್ರಾಣಿಗಳಿಗಿಂತಲೂ ಹೇಗೆ ಭಿನ್ನ, ಅದಕ್ಕೆ ಯಾಕಿಷ್ಟು ಮಹತ್ವ ಎಂಬ ಪ್ರಶ್ನೆಗೂ ಉತ್ತರ ಸರಳವಾಗಿ ಸಿಗುತ್ತದೆ. ಹೀಗಾಗಿ ವಾಸ್ತವದಲ್ಲಿ ಬಿಜೆಪಿ ಮಾತ್ರವಲ್ಲ ಎಲ್ಲ ಪಕ್ಷಗಳ ಸರ್ಕಾರಗಳೂ ಗೋರಕ್ಷಣೆಗೆ ಕಾಯ್ದೆಬದ್ಧ ಕ್ರಮ ತೆಗೆದುಕೊಳ್ಳಲೇಬೇಕು. ಇತ್ತೀಚೆಗೆ ಮಾತಿನ ಸಂದರ್ಭದಲ್ಲಿ ಆರ್ಥಿಕ ತಜ್ಞರೊಬ್ಬರು ನನ್ನೊಂದಿಗೆ ರ್ಚಚಿಸಿದ ಒಂದು ಸಂಗತಿಯನ್ನು ಇಲ್ಲಿ ಉಲ್ಲೇಖಿಸುವುದು ಉತ್ತಮ ಎನಿಸುತ್ತದೆ. ಅವರು ಹೇಳುತ್ತಿದ್ದರು, ‘ಕೇವಲ ದೊಡ್ಡ ದೊಡ್ಡ ಉದ್ಯಮಿಗಳಿಂದ, ಉದ್ಯಮಗಳಿಂದ, ವಿದೇಶಿ ಕಂಪನಿಗಳು ಹರಿಸುವ ಬಂಡವಾಳದಿಂದ ಈ ದೇಶ ಉದ್ಧಾರ ಆಗಲು ಸಾಧ್ಯವಿಲ್ಲ. ದೇಶದ ಭವಿಷ್ಯ ಹಳ್ಳಿಗಳ ವಿಕಾಸದಲ್ಲಿ, ಆರ್ಥಿಕ ಸಬಲೀಕರಣದಲ್ಲಿ ಅಡಗಿದೆ. ಸರ್ಕಾರಗಳು ಈಗ ಹಾಲಿನ ಉತ್ಪಾದನೆಗೆ ಸಬ್ಸಿಡಿ ನೀಡಲು ಶುರು ಮಾಡಿವೆ. ಆ ಕಾರಣದಿಂದ ಹಾಲಿನ ಉತ್ಪಾದನೆ ಹೆಚ್ಚುತ್ತಿದೆ. ಹಳ್ಳಿಯ ರೈತರಲ್ಲಿ ಆರ್ಥಿಕ ಸದೃಢತೆ ಬರುತ್ತಿದೆ. ಹಾಗೆಯೇ ಮುಂದೆ ಸರ್ಕಾರಗಳು ಪ್ರತಿ ಕೆಜಿ ಸೆಗಣಿಗೆ ಸಬ್ಸಿಡಿ ಕೊಡುವ ಹಾಗಾಗಬೇಕು. ಹಳ್ಳಿಗಳಿಗೆ ಹಾಲಿನ ಟ್ಯಾಂಕರುಗಳು ಬರುವಂತೆ ಸಗಣಿ ಟ್ಯಾಂಕರುಗಳು ಬಂದು ಸಗಣಿ ಸಂಗ್ರಹ ಮಾಡುವಂತೆ ಆಗಬೇಕು. ಆಗ ನೋಡಿ ಪರಿಣಾಮವನ್ನು. ರಾಸಾಯನಿಕ ಗೊಬ್ಬರದ ಉತ್ಪಾದನೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬಹುದು. ಅದರಿಂದ ರೈತ ಸದೃಢನಾಗುತ್ತಾನೆ. ಸಹಸ್ರಾರು ಕೋಟಿ ರೂಪಾಯಿ ತೆರಿಗೆ ಹಣ ಉಳಿತಾಯವಾಗುತ್ತದೆ. ರೈತನ ಭೂಮಿ ಹಸನಾಗುತ್ತದೆ. ನೈಸರ್ಗಿಕ ಗೊಬ್ಬರ, ಕೃಷಿಯಿಂದ ಬೆಳೆಯುವ ಆಹಾರದಿಂದ ಅನ್ನ ಉಣ್ಣುವ ಪ್ರತಿಯೊಬ್ಬ ಮನುಷ್ಯ ನಿರೋಗಿ ಆಗುತ್ತಾನೆ. ಬಲಿಷ್ಠನಾಗುತ್ತಾನೆ. ಇದರಿಂದ ಅದೆಷ್ಟು ಜನರಿಗೆ, ದೇಶಕ್ಕೆ ಲಾಭ, ಅನುಕೂಲ ಅಂತೀರಿ. ಊಹೆಗೂ ನಿಲುಕದ್ದು’ ಎಂದರು. ಯೋಚಿಸಿ ನೋಡಿ. ನೀವೂ ಹೌದೆನ್ನದಿದ್ದರೆ ಹೇಳಿ. ಮಾತಿನ ಮಲ್ಲ ಮೋದಿ ಮತ್ತು ನಮ್ಮ ‘ಭಾಗ್ಯವಿಧಾತ’ ಸಿದ್ದರಾಮಯ್ಯನವರು ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿದರೆ ಉತ್ತಮ, ಅಲ್ಲವೇ…

ನಿಸ್ವಾರ್ಥ ಕಾರ್ಯವನ್ನೂ ಗಮನಿಸಿ: ಇನ್ನು ಎರಡನೆಯ ವಿಚಾರ ಅಸಲಿ ಗೋರಕ್ಷಕರಿಗೆ ಸಂಬಂಧಿಸಿದ್ದು. ಯಾರೋ ಕೆಲವರು ಗೋರಕ್ಷಣೆಯ ಹೆಸರಲ್ಲಿ ಸಮಾಜವಿರೋಧಿ ಕೃತ್ಯದಲ್ಲಿ ತೊಡಗಿರಬಹುದು. ಇಲ್ಲ ಎನ್ನುವುದಿಲ್ಲ. ಆದರೆ ಅದನ್ನು ಸಾರ್ವತ್ರೀಕರಣಗೊಳಿಸಿದರೆ ಹೇಗೆ? ಅದಕ್ಕಿಂತ ಹೆಚ್ಚಾಗಿ ನಾವು ಗಮನಿಸಬೇಕಾದ್ದು ದೇಶದ ನಾನಾ ಭಾಗಗಳಲ್ಲಿ ನಿಸ್ವಾರ್ಥವಾಗಿ ಗೋಶಾಲೆ ನಡೆಸುತ್ತಿರುವವರ ಕಾಯಕವನ್ನು ತಾನೆ. ಗೋತಳಿ ಅಭಿವೃದ್ಧಿಗೆ, ಸಂರಕ್ಷಣೆಗೆ ಸ್ವಂತದ ಹಣ ಸುರಿದು, ಸಮಾಜದಿಂದ ಭಿಕ್ಷೆ ಎತ್ತಿ ಗೋ ಸೇವೆಯನ್ನು ಮಾಡುತ್ತಿರುವವರ ಕಾರ್ಯವನ್ನು ಸರ್ಕಾರ ಅದು ಹೇಗೆ ಕಡೆಗಣಿಸಲು ಸಾಧ್ಯ? ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೋದಿಯ ಗುಜರಾತಿನಲ್ಲಿ ಇಂತಹ ನೂರಾರು, ಸಾವಿರಾರು ಸಂಖ್ಯೆಯ ಗೋಸೇವಕರು ಸಿಗುತ್ತಾರೆ. ಪ್ರಧಾನಿ ಮಾತಿನಿಂದ ನಿಜವಾದ ಗೋಸೇವಕರು ಮನ ನೊಂದಿರಲಾರರು ಅಂತೀರಾ? ಅವರು ತಕ್ಷಣಕ್ಕೆ ಪ್ರತಿಕ್ರಿಯಿಸದಿರಬಹುದು ಅಷ್ಟೆ.

ರಾಜಕೀಯ ಛಾಯಾಯುದ್ಧ: ಇದೆಲ್ಲ ಒಂದು ಮುಖ. ಇಲ್ಲಿ ಇನ್ನೂ ಒಂದು ಸಂಗತಿಯಿದೆ. ಅದು ಮೋದಿಗೆ ಅರ್ಥವಾಗದ ವಿಚಾರವೂ ಅಲ್ಲ. ನೇರ ಯುದ್ಧದಲ್ಲಿ ಜಯಿಸಲಾಗದವರು ಇದೀಗ ರಾಜಕೀಯ ಛಾಯಾಯುದ್ಧಕ್ಕೆ ಇಳಿದಿದ್ದಾರೆ. ಅದಕ್ಕವರು ಆಯ್ದುಕೊಂಡಿರುವುದು ಮುಸ್ಲಿಂ ಮತ್ತು ದಲಿತ ಮತಗಳನ್ನು ಒಗ್ಗೂಡಿಸುವ ತಂತ್ರಗಾರಿಕೆ. ಹಿಂದೆ ಸ್ವಾತಂತ್ರ್ಯ ಚಳವಳಿಯನ್ನು ದುರ್ಬಲಗೊಳಿಸಲು ಬ್ರಿಟಿಷರಿಂದ ಪ್ರೇರಿತರಾಗಿ ಜಿನ್ನಾ ಪ್ರಯೋಗಿಸಿದ್ದು ಇದೇ ತಂತ್ರಗಾರಿಕೆಯನ್ನು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಕೋಮು ಹಿಂಸೆ ಉಲ್ಬಣಗೊಳ್ಳುತ್ತಿದೆ ಎಂಬ ಗುಲ್ಲು ಎಲ್ಲೆಡೆ ಕೇಳಿಬರಲಾರಂಭಿಸಿತು. ಅದಾಗದೇ ಹೋದಾಗ ಉತ್ತರಪ್ರದೇಶದ ಅಖ್ಲಾಕನ ಹತ್ಯೆಯಿಂದ ಆರಂಭವಾಗಿ, ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ರೋಹಿತ್ ವೇಮುಲನ ಸಾವಿನಿಂದ ಹಿಡಿದು ಜೆಎನ್ಯುು ಗದ್ದಲ, ಗುಜರಾತದ ಉನಾ ದಲಿತರ ಮೇಲಿನ ಹಲ್ಲೆ ಪ್ರಕರಣದವರೆಗೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಇಂಥ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗಿ ಒಂದು ರೀತಿಯ ಅಲ್ಲೋಲಕಲ್ಲೋಲವೇ ಸೃಷ್ಟಿಯಾಯಿತು. ಅದರ ಜೊತೆಗೆ ಗುಜರಾತದಲ್ಲಿ ನಡೆಯುತ್ತಿರುವ ಪಟೇಲ್ ಮೀಸಲಾತಿ ಚಳವಳಿ, ಹರಿಯಾಣದಲ್ಲಿ ಜಾಟ್ ಮೀಸಲಾತಿ ಚಳವಳಿ ವಿಕೋಪಕ್ಕೆ ಹೋಗಿದ್ದನ್ನು ಬೇಕಾದರೆ ಮೆಲುಕು ಹಾಕಬಹುದು. ಮೇಲ್ನೋಟಕ್ಕೇನೆ ಈ ಎಲ್ಲ ಸರಣಿ ಘಟನಾವಳಿಗಳ ಹಿಂದೆ ಒಂದು ಸಂಬಂಧದ ಕೊಂಡಿ ಇರುವುದನ್ನು ಯಾರು ಬೇಕಾದರೂ ಗಮನಿಸಬಹುದು.

ಸಂಬಂಧ-ಸೂತ್ರ ಏನೇ ಇರಲಿ ಯಾವುದೇ ಅಹಿತಕರ ಘಟನೆ ನಡೆದಾಗ ದೋಷಿಗಳನ್ನು ಹುಡುಕಿ ನಿರ್ದಾಕ್ಷಿಣ್ಯ ಕ್ರಮವನ್ನು ಸರ್ಕಾರ ಜರುಗಿಸಿದ್ದರೆ ದೇಶದ ಪ್ರಧಾನಿ ಆದವರು ಈ ರೀತಿ ಮಾತಿನ ಅಬ್ಬರವನ್ನು ಪ್ರದರ್ಶಿಸುವ ಅಗತ್ಯವೇ ಬೀಳುತ್ತಿರಲಿಲ್ಲ ಅಲ್ಲವೇ?

ಸಾಂಪ್ರದಾಯಿಕ ಭಾಷಣ: ಮೂರನೆಯದ್ದು ಪ್ರಧಾನಿಯ ಸ್ವಾತಂತ್ರ್ಯೊತ್ಸವ ಭಾಷಣ; ಮಾತಿಗೂ ಕೃತಿಗೂ ಹೇಗೆ ವ್ಯತ್ಯಾಸ ಆಗುತ್ತ ಹೋಗುತ್ತದೆ ಎಂಬುದಕ್ಕೆ ಅದೊಂದು ಉತ್ತಮ ಉದಾಹರಣೆ ಆದೀತು. ಸ್ವಾತಂತ್ರ್ಯೊತ್ಸವದ ದಿನ ಕೆಂಪುಕೋಟೆಯ ಮೇಲಿಂದ ದೇಶದ ಪ್ರಧಾನಿ ಮಾಡುವ ಭಾಷಣವೆಂದರೆ ಅದು ಅವರ ಸರ್ಕಾರದ ವಾರ್ಷಿಕ ಅಢಾವೆ ಪತ್ರಿಕೆಗಿಂತ ಭಿನ್ನವಲ್ಲ. ಅದನ್ನು ಬಿಟ್ಟರೆ ಪಿಂಚಣಿ ಹೆಚ್ಚಳ ಮತ್ತೊಂದು ಮಗದೊಂದು ಹೊಸ ಕಾರ್ಯಕ್ರಮ ಘೊಷಣೆಗೆ ಮಾತ್ರ ಸೀಮಿತ ಆಗಿರುತ್ತಿತ್ತು. ಇದು ಜವಾಹರಲಾಲ್ ನೆಹರುರಿಂದ ಹಿಡಿದು ಮನಮೋಹನ ಸಿಂಗ್ ಅವರವರೆಗೆ ಉದ್ದಕ್ಕೂ ನಡೆದುಕೊಂಡು ಬಂದ ಪರಿಪಾಠ. ಈ ವಿಷಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮಾತ್ರ ಭಿನ್ನವಾಗಿದ್ದರು. ವಾಜಪೇಯಿ ಒಟ್ಟು ಆರೋ ಏಳೋ ಸ್ವಾತಂತ್ರ್ಯೊತ್ಸವ ಭಾಷಣ ಮಾಡಿದ್ದರು. ಒಂದೊಂದು ಭಾಷಣವೂ ಉದ್ಭೋದಕವಾಗಿರುತ್ತಿತ್ತು. ಭಾವನಾತ್ಮಕವಾಗಿರುತ್ತಿತ್ತು. ಕಿವಿಯಲ್ಲಿ ಮತ್ತೆ ಮತ್ತೆ ಅವರದೇ ಮಾತು ರಿಂಗಣಿಸುವಂತಿರುತ್ತಿತ್ತು. ವಾಜಪೇಯಿ ಎಂದೂ ತಮ್ಮ ಸರ್ಕಾರವನ್ನು ಹೊಗಳುವುದಕ್ಕೆ, ಚುನಾವಣೆಯಲ್ಲಿ ಮತಗಳಿಕೆ ಲೆಕ್ಕಾಚಾರಕ್ಕೆ ಭಾಷಣವನ್ನು ಸೀಮಿತ ಮಾಡುತ್ತಿರಲಿಲ್ಲ. ಸ್ವಾತಂತ್ರ್ಯೊತ್ಸವದ ನೀರಸ ಭಾಷಣದ ವಿಷಯದಲ್ಲಿ, ಸರ್ಕಾರಿ ಕಾರ್ಯಕ್ರಮ ಪಟ್ಟಿ ನೀಡುವುದಕ್ಕಾಗಿ ಅತಿ ಹೆಚ್ಚು ಟೀಕೆಗೊಳಗಾದ ಪ್ರಧಾನಿ ಎಂದರೆ ಮನಮೋಹನ ಸಿಂಗ್. ಸ್ವತಃ ಮೋದಿಯವರಿಂದಲೂ ಸಿಂಗ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಆದರೆ ಐದು ದಿನದ ಹಿಂದೆ ಅದೇ ಕೆಂಪುಕೋಟೆಯ ಮೇಲಿಂದ ಪ್ರಧಾನಿ ಮೋದಿ ಮಾಡಿದ ಭಾಷಣ ಮತ್ತದೇ ಸಾಂಪ್ರದಾಯಿಕ ಭಾಷಣಕ್ಕಿಂತ ಹೆಚ್ಚು ಭಿನ್ನವಾಗೇನೂ ಕಾಣಿಸಲಿಲ್ಲ. ಬಲೂಚಿಸ್ತಾನ ವಿಷಯ ಪ್ರಸ್ತಾಪ ಮಾಡಿದ್ದನ್ನು ಬಿಟ್ಟರೆ ಬೇರೆಲ್ಲವೂ ರ್ಚವಿತಚರ್ವಣ ಸರ್ಕಾರಿ ಕಾರ್ಯಕ್ರಮಗಳ ಪಟ್ಟಿಯನ್ನೇ ಪ್ರಧಾನಿ ಬಿಡಿಸಿಟ್ಟರು. ಅದಕ್ಕೆ ಹೊರತೆಂದರೆ ಮತ್ತದೇ ಪಿಂಚಣಿ ಹೆಚ್ಚಳದ ಘೊಷಣೆ. ಮನಮೋಹನ ಸಿಂಗ್ ಮೆಲ್ಲಗೆ ಮೆದು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಮೋದಿ ಅದನ್ನೇ ತುಸು ಗಡಸು ಧ್ವನಿಯಲ್ಲಿ ಹೇಳಿದರು. ‘ಪಂಜಾಬ್ ಔರ್ ಉತ್ತರಪ್ರದೇಸ್ಕೇ ಮೇರೆ ಪ್ಯಾರೆ ಭಾಯಿಯೋ, ಬೆಹನೋ’ ಅಂತ ಸೇರಿಸಿಕೊಂಡರೆ ಮೋದಿಯ ಸ್ವಾತಂತ್ರ್ಯೊತ್ಸವದ ಭಾಷಣವನ್ನು ಆ ಎರಡೂ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಮತ್ತೆ ರೀ ಪ್ಲೇ ಮಾಡಬಹುದು. ಮುಂದಿನ ಚುನಾವಣೆಯಲ್ಲಿ ಗೆದ್ದು ಸಾಮ್ರಾಜ್ಯ ವಿಸ್ತರಣೆ ಮಾಡುವುದನ್ನಷ್ಟೆ ಬಯಸದ ವಾಜಪೇಯಿಯಂಥವರು ಮಾತ್ರ ಇದಕ್ಕಿಂತ ಭಿನ್ನವಾಗಿರಲು ಸಾಧ್ಯ. ಬಾಕಿ ಎಲ್ಲ ಒಂದೇ. ಇದು ನಾನು ಹೇಳುವುದಲ್ಲ, ಮೋದಿಯ ಸ್ವಾತಂತ್ರ್ಯೊತ್ಸವದ ಭಾಷಣದ ಬಳಿಕ ನೂರಾರು ಜನರ ಬಾಯಲ್ಲಿ ಕೇಳಿದ ಮಾತನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ ಅಷ್ಟೆ. ಮಾತಿನ ವಿಷಯ ಮಾತ್ರವಲ್ಲ, ಪಂಜಾಬ್ ಮತ್ತು ಗುಜರಾತ್ ಕೈತಪ್ಪುವ, ಉತ್ತರಪ್ರದೇಶದ ಕೋಟೆ ದಕ್ಕುವುದೋ ಇಲ್ಲವೋ ಎಂಬ ಆತಂಕದ ಗೆರೆ ಪ್ರಧಾನಿಯ ಮುಖದಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಇದರೊಂದಿಗೆ, ಸರ್ಕಾರದ ಕೆಲಸ ಕಾರ್ಯಗಳು ಕಣ್ಣಿಗೆ ಎದ್ದುಕಾಣುತ್ತಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿರುವುದು ಕೂಡ ಮೋದಿಯವರನ್ನು ಚಿಂತಿತರನ್ನಾಗಿ ಮಾಡಿದಂತಿತ್ತು. ಯಾವಾಗಲೂ ಹಾಗೇ. ಆಡುವುದು ಸುಲಭ, ಮಾಡುವುದು ಕಷ್ಟ. ರಾಮಮಂದಿರ, ಸಮಾನ ನಾಗರಿಕ ಸಂಹಿತೆ, ಕಪ್ಪುಹಣ ವಾಪಸಾತಿ, ಸ್ವದೇಶಿ ಆಂದೋಲನ, ಕಾಂಗ್ರೆಸ್ ಹೈಕಮಾಂಡ್ ಸಂಸ್ಕೃತಿ ವಿರುದ್ಧದ ಘರ್ಜನೆ ಇತ್ಯಾದಿ ಇತ್ಯಾದಿ… ಎಷ್ಟು ಅಂತ ಹೇಳುವುದು.

‘ಹೇಳುವುದು ಒಂದು ಮಾಡುವುದು ಮತ್ತೊಂದು. ನಂಬುವುದು ಹೇಗೋ ಕಾಣೆ…’ ಅಂತ ಯಾರೋ ಹೇಳಿದಂತೆ ಕೇಳಿಸಿತು…

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top