ಆರ್ಥಿಕತೆ ಚೇತರಿಕೆಗೆ ಸಾಕ್ಷಿ – ಗೂಗಲ್‌ನಿಂದ 75 ಸಾವಿರ ಕೋಟಿ ರೂ. ಹೂಡಿಕೆ

ಗಡಿಯಲ್ಲಿ ಚೀನಾ ಬೆದರಿಕೆ, ಗಡಿಯೊಳಕ್ಕೆ ಕೊರೊನಾ ವೈರಸ್ ಹಾವಳಿ ಉಂಟು ಮಾಡಿರುವ ನಕಾರಾತ್ಮಕ ಪರಿಣಾಮಗಳ ನಡುವೆಯೇ ಭಾರತದ ಆರ್ಥಿಕತೆಗೆ ಹೊಸ ಹುಮ್ಮಸ್ಸು ತರುವ ಬೆಳವಣಿಗೆ ಕಂಡು ಬಂದಿದೆ. ಜಗತ್ತಿನ ಅತಿದೊಡ್ಡ ಟೆಕ್ ಕಂಪನಿ ಗೂಗಲ್ ಮುಂಬರುವ 5ರಿಂದ 7 ವರ್ಷಗಳಲ್ಲಿ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವ ಘೋಷಣೆ ಮಾಡಿದೆ. ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮೂಲದವರೇ ಆದ ಗೂಗಲ್ ಸಿಇಒ ಸುಂದರ್ ಪಿಚೈ ಜೊತೆ ನಡೆಸಿದ ಮಾತುಕತೆಯ ಬೆನ್ನೆಲ್ಲೇ ಆ ಕಂಪನಿ ಈ ಮಹತ್ವದ ಘೋಷಣೆ ಮಾಡಿದೆ. ಮತ್ತೊಂದು ಪೂರಕ ಬೆಳವಣಿಗೆಯಲ್ಲಿ ಭಾರತದ ಪ್ರತಿಷ್ಠಿತ ಸಾಪ್ಟ್‌ವೇರ್‌ ಕಂಪನಿ ಟಿಸಿಎಸ್(ಟಾಟಾ ಕನ್ಸಲ್ಟನ್ಸಿ ಸರ್ವಿಸ್) ಸತತ ಎರಡನೇ ವರ್ಷವೂ 40 ಸಾವಿರ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಕಟಣೆ ಹೊರಡಿಸಿದೆ. ಈ ಎರಡೂ ಬೆಳವಣಿಗೆಗಳು ಮುಂಬರುವ ದಿನಗಳಲ್ಲಿ ಭಾರತದ ಆರ್ಥಿಕತೆಯ ಚೇತರಿಕೆಯ ಸ್ಪಷ್ಟ ಸೂಚನೆಗಳನ್ನು ನೀಡಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಬೆದರಿಕೆ ಒಡ್ಡಿದ್ದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಕರೆ ನೀಡಿದ್ದ ‘ಆತ್ಮ ನಿರ್ಭರ ಭಾರತ’ ಮತ್ತು ‘ಚೀನಾ ಉತ್ಪನ್ನ’ಗಳ ಬಹಿಷ್ಕಾರದ ಮುಂದುವರೆದ ಭಾಗಗಳಾಗಿಯೂ ಈ ಎರಡೂ ಬೆಳವಣಿಗೆಗಳನ್ನು ವಿಶ್ಲೇಷಣೆ ಮಾಡಲಾಗುತ್ತಿದೆ. ಗೂಗಲ್, ಫೇಸ್‌ಬುಕ್‌, ಟ್ವಿಟರ್ ಸೇರಿದಂತೆ ಜಗತ್ತಿನ ಬಹುಜನಪ್ರಿಯ ಟೆಕ್ ವೇದಿಕೆಗಳಿಗೆ ಚೀನಾದಲ್ಲಿ ಅವಕಾಶವಿಲ್ಲ. ಆ ಎಲ್ಲ ವಿಭಾಗಗಳಲ್ಲಿ ಸ್ವಂತ ನೆಲೆ ಹೊಂದಿರುವ ಚೀನಾ ತಂತ್ರಜ್ಞಾನದಲ್ಲಿ ದೈತ್ಯ ಎನಿಸಿಕೊಂಡಿರುವ ಅಮೆರಿಕ ಕಂಪನಿಗಳಿಗೆ ಸಡ್ಡು ಹೊಡೆದಿತ್ತು. ದೈತ್ಯ ಹಾಗಾಗಿ, ಚೀನಾದಷ್ಟೇ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಭಾರತದಲ್ಲಿ ಟೆಕ್ ದಿಗ್ಗಜ ಕಂಪನಿಗಳು ಬೃಹತ್ ಹೂಡಿಕೆಗೆ ಮುಂದಾಗುತ್ತಿರುವುದು ಗೂಗಲ್ ಮತ್ತು ಭಾರತ ಎರಡಕ್ಕೂ ಲಾಭದಾಯಕ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಮುಖ್ಯವಾಗಿ ಭಾರತದ ಡಿಜಿಟಲ್ ಎಕಾನಮಿ ವಲಯದಲ್ಲಿ ಗೂಗಲ್ ವಿಶೇಷ ಆದ್ಯತೆಯ ಮೇಲೆ ಹೂಡಿಕೆ ಮಾಡಲಿದೆ. ದೊಡ್ಡ ಕಂಪನಿಗಳ ಷೇರು ಖರೀದಿಸಲಿದೆ. ಡಿಜಿಟಲ್ ಸೇವೆಗಳನ್ನು ನೀಡುವ ಕಂಪನಿಗಳಲ್ಲೂ ಹಣ ಹೂಡಲಿದೆ. ಡೇಟಾ ಸೆಂಟರ್‌ಗಳನ್ನೂ ನಿರ್ಮಿಸಲಿದೆ. ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಗೂಗಲ್ ಡಿಜಿಟಲೀಕರಣವನ್ನು ಹೆಚ್ಚಿಸಲಿದೆ. ಭಾರತಕ್ಕೇ ವಿಶಿಷ್ಟವಾದ ಡಿಜಿಟಲ್ ಉತ್ಪನ್ನಗಳನ್ನು ಹೊರತರಲಿದೆ. ಆರೋಗ್ಯ, ಶಿಕ್ಷಣ, ಕೃಷಿ ಇತ್ಯಾದಿ ಕ್ಷೇತ್ರಗಳಲ್ಲಿ ತಂತ್ರಜ್ಞಾನ ನೆರವು ವಿಸ್ತರಿಸಲಿದೆ. ಗೂಗಲ್‌ನ ಈ ಎಲ್ಲ ಉಪಕ್ರಮಗಳಿಂದಾಗಿ ಖಂಡಿತವಾಗಿಯೂ ಭಾರತದ ಆರ್ಥಿಕತೆಗೆ ಹೆಚ್ಚಿನ ಇಂಬು ದೊರೆಯವುದು ಖಚಿತವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಸ್ವದೇಶಿ ಸ್ವಾವಲಂಬನೆ ಮಂತ್ರದೊಂದಿಗೆ ಚೀನಾಗೆ ಪ್ರತಿಸವಾಲು ಹಾಕಿ, ಜಗತ್ತಿನ ರಾಷ್ಟ್ರಗಳ ಬೆಂಬಲ ಪಡೆದು, ಚೀನಾವನ್ನು ಏಕಾಂಗಿಗೊಳಿಸಿ ಸೈ ಎನಿಸಿಕೊಂಡಿದ್ದ ಪ್ರಧಾನಿ ಮೋದಿ ಗೂಗಲ್ ಕಂಪನಿ ಮುಖ್ಯಸ್ಥರೊಂದಿಗೆ ಸೋಮವಾರ ನಡೆಸಿದ ಮಾತುಕತೆ ಭಾರತೀಯರಲ್ಲಿ ಭರವಸೆ ಮೂಡಿಸಿ, ಚೀನಾಕ್ಕೆ ಮತ್ತೊಂದು ಮರ್ಮಾಘಾತವನ್ನೇ ನೀಡಿದ್ದಾರೆ.
ಹಲವು ಕಾರಣಗಳಿಂದ ಕಳೆದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಮಂಕಾಗಿದ್ದ ದೇಶದ ಆರ್ಥಿಕತೆ, ಚೇತರಿಕೆ ಹಾಗೂ ಉತ್ಸಾಹದ ಎಲ್ಲ ಸೂಚನೆಗಳನ್ನು ಈಗಷ್ಟೇ ನೀಡುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ದೇಶದಲ್ಲಿ ಜೂನ್ ಮೊದಲ ವಾರದಲ್ಲಿ 22,000 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಮೇ ತಿಂಗಳ ಮೊದಲ ವಾರದಲ್ಲಿ 21 ದಶಲಕ್ಷ ಉದ್ಯೋಗಗಳು ಕಾಣಿಸಿಕೊಂಡಿವೆ. ಪ್ರಸಕ್ತ ಸಾಲಿನಲ್ಲಿ ಜಿಡಿಪಿ ಕುಸಿತಕ್ಕೀಡಾದರೂ 2021-22ರಲ್ಲಿ, ದೇಶದ ಆರ್ಥಿಕತಕೆ ನಿರೀಕ್ಷೆ ಮೀರಿ ಚೇತರಿಕೆ ಕಾಣಲಿದೆ ಎಂಬ ಲೆಕ್ಕಾಚಾರಗಳಿವೆ. ಇವೆಲ್ಲವೂ ಭಾರತೀಯರು ಹಾಗೂ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವ ಅಂಶಗಳಾಗಿವೆ. ಕಳೆದ ಕೆಲ ತಿಂಗಳುಗಳಿಂದ ಕೇವಲ ಋಣಾತ್ಮಕವಾದ ಸುದ್ದಿಗಳನ್ನು ನೋಡಿ, ಕೇಳಿ ನಿರಾಸೆಗೊಳಗಾದವರಿಗೆ ಹೊಸ ಉತ್ಸಾಹ ತುಂಬಬಲ್ಲ ವರ್ತಮಾನಗಳಾಗಿವೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top