ಬುದ್ಧಿಗೇಡಿ ಜನರನ್ನು ಯಾವ ದೇವರು ರಕ್ಷಿಸಲು ಸಾಧ್ಯ?

ಬುದ್ಧಿಗೇಡಿ ಜನರನ್ನು ಯಾವ ದೇವರು ರಕ್ಷಿಸಲು ಸಾಧ್ಯ?

– ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆ.

ಎಲ್ಲಧರ್ಮಗಳಲ್ಲಿಯೂ ದೇವರು ಕರುಣಾಮಯಿ, ದಯಾಮಯಿ, ಅನಾಥರಕ್ಷಕ, ದೀನಬಂಧು ಎಂದೆಲ್ಲಾ ಬಣ್ಣಿಸಲಾಗಿದೆ. ಸದ್ಯದ ಕೊರೊನಾ ಸಂಕಟದ ಸಮಯದಲ್ಲಿ ಜಗತ್ತಿನಾದ್ಯಂತ ಅದೆಷ್ಟು ಜನರು, ‘‘ದೇವರೇ ಕೊರೊನಾ ಮಹಾಮಾರಿಯನ್ನು ತೊಲಗಿಸು, ನಮ್ಮನ್ನು ಕಾಪಾಡು,’’ ಎಂದು ದೈನ್ಯದಿಂದ ಬೇಡುತ್ತಿದ್ದಾರೆ. ವಿವಿಧ ಧರ್ಮದವರು ತಂತಮ್ಮ ಧರ್ಮಗಳ ರೀತಿಯಲ್ಲಿ ಪ್ರಾರ್ಥನೆ, ಪೂಜೆ, ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ಮಠ-ಮಂದಿರಗಳು, ಚರ್ಚು, ಮಸೀದಿ, ಗುರುದ್ವಾರಗಳು ಮುಚ್ಚಿದ್ದರೂ ಆಸ್ತಿಕರು ತಂತಮ್ಮ ಮನೆಗಳಲ್ಲಿರುವ ಪೂಜಾಗೃಹಗಳಲ್ಲಿ ದೇವರ ಪೂಜೆ ಮಾಡುವುದನ್ನು ಬಿಟ್ಟಿಲ್ಲ. ಆದರೂ ಕೊರೊನಾ ತೊಲಗುತ್ತಿಲ್ಲ; ಬದಲಾಗಿ ಮಕ್ಕಳನ್ನು, ಬಸಿರು ಬಾಣಂತಿಯರನ್ನು, ವೃದ್ಧರನ್ನು ಗುರಿಯಾಗಿಸಿ ಎರಗಿ ಯಮಪಾಶ ಬೀಸಿ ಸೆಳೆಯುತ್ತಿದೆ. ಭಕ್ತರ ಪೂಜೆ ಪುನಸ್ಕಾರಗಳೆಲ್ಲವೂ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ವ್ಯರ್ಥವಾಗುತ್ತಿವೆಯೇ? ಅವರದು ಕೇವಲ ಅರಣ್ಯರೋದನವಾಗುತ್ತಿದೆಯೇ? ಇಂತಹ ಸಂದರ್ಭದಲ್ಲೂ ದೇವರೇಕೆ ಸುಮ್ಮನಿದ್ದಾನೆ! ಜನರ ಶ್ರದ್ಧಾಭಕ್ತಿಗಳಿಗೆ ದೇವರು ಕೊಡುವ ಕಿಮ್ಮತ್ತು ಇಷ್ಟೇನೆ! ದೇವರು ಸರ್ವಶಕ್ತನಲ್ಲವೆ? ‘ಅಣೋರಣೀಯಾನ್ ಮಹತೋ ಮಹೀಯಾನ್’ ಎಂಬಂತೆ ಅಷ್ಟಸಿದ್ಧಿ ಪುರುಷನಾದ ಅವನು ಮನಸ್ಸು ಮಾಡಿದರೆ ಕೊರೊನಾ ಎಂಬ ಪುಟಗೋಸಿ ವೈರಾಣು ಯಾವ ಲೆಕ್ಕ! ನಿತ್ಯವೂ ಜಗತ್ತಿನಾದ್ಯಂತ ಕೊರೊನಾ ಕಪಿ-ಮುಷ್ಟಿಯಲ್ಲಿ ನಲುಗುತ್ತಿರುವ ಲಕ್ಷಾಂತರ ನಿಷ್ಪಾಪಿ ಜನರ ಪ್ರಾಣ ಹರಣವಾಗುತ್ತಿದ್ದರೂ ದೇವರೇಕೆ ಸುಮ್ಮನಿದ್ದಾನೆ; ತನ್ನ ತ್ರಿಶೂಲ, ಸುದರ್ಶನ ಚಕ್ರ, ಗದೆಗಳಿಗೆ ಏಕೆ ಕೆಲಸ ಕೊಡುತ್ತಿಲ್ಲ? ಭಕ್ತರ ಕಷ್ಟದ ಸಂದರ್ಭದಲ್ಲಿ ರಕ್ಷಣೆಗೆ ಧಾವಿಸದ ದೇವರು ಅವನೆಂಥಾ ದೇವರು? ಅವನನ್ನೇಕೆ ಕರುಣಾಮಯಿ, ಸರ್ವಶಕ್ತ ಎಂದು ನಂಬಬೇಕು? ‘ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ, ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್’ (ಗೀತಾ 4.7) ಅಂದರೆ ಧರ್ಮದ ಗ್ಲಾನಿ ಉಂಟಾದಾಗ ಅವತಾರವೆತ್ತಿ ಬರುತ್ತೇನೆ ಎನ್ನುವ ಭಗವದ್ಗೀತೆಯಲ್ಲಿ ದೇವರು ಕೊಟ್ಟ ಭರವಸೆ ಎಲ್ಲಿ ಹೋಯಿತು? ಇವೆಲ್ಲ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿವೆಯಲ್ಲವೆ!
ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ದೇವರನ್ನೇಕೆ ನಿಂದಿಸಬೇಕು? ತನ್ನಲ್ಲಿ ತಪ್ಪು ಇಟ್ಟುಕೊಂಡು ಇನ್ನೊಬ್ಬರನ್ನು ದೂಷಿಸುವುದು ಮನುಷ್ಯನ ಹುಟ್ಟು ಸ್ವಭಾವ. ‘ಉದ್ಧರೇದಾತ್ಮನಾತ್ಮಾನಂ ನಾತ್ಮಾನ ಮವಸಾದಯೇತ್ | ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ ’ (ಗೀತಾ 6.5) ಅಂದರೆ ‘ನಿನಗೆ ನೀನೇ ಶತ್ರು, ನಿನಗೆ ನೀನೇ ಬಂಧು. ನಿನ್ನ ಪ್ರಯತ್ನವನ್ನು ನೀನು ಮಾಡದೆ ಬೇರೊಬ್ಬರು ಬಂದು ನಿನ್ನನ್ನು ಉದ್ಧರಿಸುತ್ತಾರೆಂದು ಕಾಯುತ್ತಾ ಕುಳಿತುಕೊಳ್ಳಬೇಡ. ನಿನ್ನ ಉದ್ಧಾರ ನಿನ್ನ ಕೈಯಲ್ಲೇ ಇದೆ’ ಎಂದು ಅದೇ ಗೀತೆ ಮುಂದಿನ 6ನೆಯ ಅಧ್ಯಾಯದಲ್ಲಿ ಎಚ್ಚರಿಸುತ್ತದೆ. ‘‘ದೇವರನ್ನು ನಂಬಿ ಇದುವರೆಗೆ ಯಾರೂ ಕೆಟ್ಟಿಲ್ಲ. ನಂಬಿದವರನ್ನು ಸಾಮಾನ್ಯ ಮನುಷ್ಯರೂ ಮರೆಯುವುದಿಲ್ಲ. ಜಗದಾತ್ಮನು ಮರೆಯುತ್ತಾನೆಂದರೆ ಕುಹಕದ ಮಾತಲ್ಲವೇ? ವಿಪತ್ತು ಬಾರದೆ ಯಾವ ಪ್ರಾಣಿಯೂ ರಕ್ಷಕನನ್ನು ಅಪೇಕ್ಷಿಸುವುದಿಲ್ಲ. ಅವನ ಸ್ಮರಣೆಯನ್ನೂ ಸಹ ಮಾಡುವುದಿಲ್ಲ. ಪರಮಾತ್ಮನ್! ನೀನೇ ಜಗತ್ತಿನ ರಕ್ಷಕನು. ಜಗತ್ತಿನ ಜನರೆಲ್ಲಾ ನಿನ್ನನ್ನು ಸ್ಮರಿಸಬೇಕಾದರೆ ವಿಪತ್ತು ಬಾರದೆ ಸ್ಮರಿಸರು. ನೀನು ತಂದು ಹಾಕುವ ವಿಪತ್ತೇ ನಿನ್ನ ಭಕ್ತ ಜನರಿಗೆ ದಿವ್ಯಾನುಗ್ರಹ,’’ ಎಂದು ನಮ್ಮ ಗುರುವರ್ಯರು ತಮ್ಮ ದಿನಚರಿ ‘ಆತ್ಮನಿವೇದನೆ’ಯಲ್ಲಿ ಬರೆದಿರುತ್ತಾರೆ. ದೇವರ ಮೇಲೆ ಅಚಲವಾದ ನಿಷ್ಠೆಯುಳ್ಳ ಭಕ್ತರು ಜೀವನದಲ್ಲಿ ಮೇಲಿಂದ ಮೇಲೆ ಬಂದೆರಗುವ ವಿಪತ್ತುಗಳನ್ನು ನೋಡುವ ದೃಷ್ಟಿಯೇ ಬೇರೆ. ಅವು ತಮ್ಮ ನಂಬುಗೆಯನ್ನು ಪರೀಕ್ಷಿಸಲು ದೇವರು ಒಡ್ಡಿದ ಸವಾಲುಗಳೆಂದೇ ಭಾವಿಸುತ್ತಾರೆ. ಭಕ್ತನಿಗೆ ಭಗವಂತನ ಮೇಲಿರುವ ಅದಮ್ಯ ವಿಶ್ವಾಸವೇ ಭಕ್ತಿ. ಅದು ಬುದ್ಧಿಯ ಶುಷ್ಕ ತರ್ಕಕ್ಕೆ ನಿಲುಕುವ ವಸ್ತುವಲ್ಲ. ಅದೊಂದು ಹೃದಯಾಂತರಾಳದಿಂದ ಹೊರಹೊಮ್ಮುವ ಅಲೌಕಿಕ ಭಾವನೆಯ ತುಡಿತ. ಬದುಕಿನ ಎಲ್ಲ ಬಂಧನಗಳಿಂದ ಕಳಚಿಕೊಂಡು ನಿತ್ಯನಿರಂತರವಾದ ಆನಂದಾನುಭೂತಿಯನ್ನು ಪಡೆಯುವ ತವಕ. ಕೆಲವೊಮ್ಮೆ ದೇವರನ್ನು ನಂಬಿಯೂ ನಂಬಲಾರದಂತಹ ಸ್ಥಿತಿಗೆ ಜೀವನದ ವಿಷಮ ಸನ್ನಿವೇಶಗಳು ಎಳೆದೊಯ್ಯುತ್ತವೆ. ಆದರೆ ನಿಜವಾದ ಭಕ್ತನು ಎಂತಹ ವಿಷಮ ಸನ್ನಿವೇಶದಲ್ಲಿಯೂ ದೇವರ ಮೇಲಿನ ತನ್ನ ನಂಬುಗೆಯನ್ನು ಕಳೆದುಕೊಳ್ಳುವುದಿಲ್ಲ. ಹಾಗೆ ಬಂದೆರಗಿದ ವಿಪತ್ತುಗಳೆಲ್ಲಾ ದೇವರ ದಿವ್ಯಾನುಗ್ರಹವೆಂದೇ ಭಾವಿಸುತ್ತಾನೆ. ದೇವರ ದಾಸಿಮಯ್ಯನವರ ಮುಂದಿನ ವಚನ ಇಲ್ಲಿ ಗಮನಾರ್ಹ:
ಹರ ತನ್ನ ಭಕ್ತರ ತಿರಿವಂತೆ ಮಾಡುವ
ಒರೆದು ನೋಡುವ ಸುವರ್ಣದ ಚಿನ್ನದಂತೆ
ಅರೆದು ನೋಡುವ ಚಂದನದಂತೆ
ಅರಿದು ನೋಡುವ ಕಬ್ಬಿನ ಕೋಲಿನಂತೆ
ಬೆದರದೆ ಬೆಚ್ಚದೆ ಇದ್ದಡೆ
ಕರವಿಡಿದೆತ್ತಿಕೊಂಬ ನಮ್ಮ ರಾಮನಾಥ!
ಬಂಗಾರವನ್ನು ಒರೆಹಚ್ಚಿ ನೋಡಿ ಸುಂದರವಾದ ಆಭರಣವನ್ನು ಮಾಡುವಂತೆ, ಶ್ರೀಗಂಧವನ್ನು ಸಾಣೇಕಲ್ಲಿನ ಮೇಲೆ ಅರೆದು ಸುಗಂಧವನ್ನು ಮೈಗೆ ಲೇಪಿಸಿಕೊಂಡಂತೆ, ಕಬ್ಬನ್ನು ಗಾಣದಲ್ಲಿ ಹಾಕಿ ಅರೆದು ಸವಿಯಾದ ಬೆಲ್ಲವನ್ನು ಮಾಡಿದಂತೆ ದೇವರು ಭಕ್ತನಿಗೆ ಸಾಕಷ್ಟು ಕಷ್ಟಕೋಟಲೆಗಳನ್ನು ಕೊಟ್ಟು ಪರೀಕ್ಷಿಸಿ ಅವನ ವ್ಯಕ್ತಿತ್ವ ಹೊಳಪುಗೊಳ್ಳುವಂತೆ ಮಾಡುತ್ತಾನೆ. ಸತ್ಯ ಹರಿಶ್ಚಂದ್ರನ ಕಥೆಯನ್ನೇ ತೆಗೆದುಕೊಳ್ಳಿ. ‘ಸತ್ಯವೆಂಬುದೆ ಹರನು, ಹರನೆಂಬುದೆ ಸತ್ಯ ಎರಡಿಲ್ಲ’ ಎಂಬ ಜೀವನಾದರ್ಶದ ಹಿಂದೆ ಹರಿಶ್ಚಂದ್ರ ಪಟ್ಟ ಪಾಡೇನು ಸಾಮಾನ್ಯವೇ? ಶಾಲಾ ಮಕ್ಕಳಿಗೆ ಇದರ ನೀತಿಪಾಠ ಏನೆಂದು ಅಧ್ಯಾಪಕರೊಬ್ಬರು ಕೇಳಿದಾಗ ‘ಸತ್ಯ ಹೇಳುವವರಿಗೆ ಸ್ಮಶಾನ ಕಾಯುವ ಹೊತ್ತು ಬರುತ್ತದೆ’ ಎಂದು ಮಕ್ಕಳು ಪ್ರತಿಕ್ರಿಯಿಸಿದರಂತೆ! ಸತ್ಯಪಥ ತುಳಿಯುವವರಿಗೆ ಸಂಪತ್ತು ಸಿಗುತ್ತೋ ಇಲ್ಲವೋ, ಸತ್ಯವೇ ಅವರಿಗೆ ಸಂಪತ್ತು. ಲೌಕಿಕ ಸುಖೋಪಭೋಗಗಳಲ್ಲಿ, ಐಷಾರಾಮಿ ಜೀವನದಲ್ಲಿ ಮೈಮರೆತು ಧನಕನಕ ಸಂಪತ್ತಿನ ಸಂಗ್ರಹಣೆಯೇ ಸುಖ ಜೀವನಕ್ಕೆ ದಾರಿ ಎಂದು ಭ್ರಮಿಸಿದ್ದ ಜನರನ್ನು ಕೊರೊನಾ ಎಚ್ಚರಿಸಿದೆ. ಮನುಷ್ಯನು ಈ ಪ್ರಪಂಚದಲ್ಲಿ ಸುಖವಾಗಿ ಬಾಳಲು ಬೇಕಾದುದೆಲ್ಲವನ್ನೂ ದೇವರು ಧಾರಾಳವಾಗಿ ಕೊಟ್ಟಿದ್ದಾನೆ. ಅವನು ಕೊಡದೆ ತನಗೆಂದು ಬಚ್ಚಿಟ್ಟುಕೊಂಡಿರುವುದು ಏನೂ ಇಲ್ಲ. ‘ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಬೀಸುವ ಗಾಳಿ ನಿಮ್ಮ ದಾನ’ ಎನ್ನುವಂತೆ ಮನುಷ್ಯನಿಗೆ ಬದುಕಲು ಬೇಕಾದ ಗಾಳಿ, ಬೆಳಕು, ಬೆಳೆ, ಭೂಮಿ, ನೀರು ಇವೆಲ್ಲವೂ ಅವನಿತ್ತ ದಾನಗಳೇ ಆಗಿವೆ. ಇಡೀ ಪ್ರಾಣಿ ಸಂಕುಲದಲ್ಲಿಯೇ ಮನುಷ್ಯನದು ಕಿರೀಟಪ್ರಾಯವಾದ ಸ್ಥಾನ. ಬೇರೆ ಪ್ರಾಣಿಗಳಿಗೆ ನೀಡದೆ ಇರುವಷ್ಟು ಆಲೋಚನಾ ಶಕ್ತಿಯನ್ನು ದೇವರು ಮನುಷ್ಯನಿಗೆ ಕರುಣಿಸಿದ್ದಾನೆ. ಆದರೆ ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ತಾನೂ ಬದುಕಿ, ಅನ್ಯರನ್ನೂ ಬದುಕಲು ಬಿಡುವ ಬುದ್ಧಿಯು ಮನುಷ್ಯನಿಗೆ ಇಲ್ಲದೆ ಇರುವುದು ಮಾತ್ರ ದೊಡ್ಡ ದುರಂತ.
ನಮ್ಮ ಜನರ ನಡೆ ತುಂಬಾ ವಿಚಿತ್ರ! ಯಮನ ಬಿಸಿಯುಸಿರು ಬೆನ್ನಿಗೆ ತಾಗುತ್ತಿದ್ದರೂ ಜನರು ಬೇಕಾಬಿಟ್ಟಿ ತಿರುಗಾಡುತ್ತಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ‘ಕೊರೊನಾ ಸೋಂಕಿನ ತವರು’ ಎನಿಸಿದ ಮುಂಬೈ ಮೊದಲಾದ ನಗರಪ್ರದೇಶಗಳಿಂದ ಜನರು ಕಳ್ಳಮಾರ್ಗಗಳನ್ನು ಹುಡುಕಿಕೊಂಡು ಪೊಲೀಸರ ಕಣ್ತಪ್ಪಿಸಿ ತಮ್ಮ ಊರು, ಮನೆಗೆ ಸಪ್ಪುಳಾಗದಂತೆ ಸೇರಿಕೊಳ್ಳುತ್ತಿದ್ದಾರೆ. ಪೇಟೆ ಪಟ್ಟಣಗಳ ಮೋಹ ತೊಲಗಿ ತಂತಮ್ಮ ಹಳ್ಳಿಗಳಿಗೆ ನಗರನಿವಾಸಿಗಳು ಮರಳುತ್ತಿರುವುದು ಸಂತಸದ ಸಂಗತಿಯಾದರೂ ನಗರಗಳಲ್ಲಿರುವ ಸೋಂಕು ಹಳ್ಳಿಗಳಿಗೆ ಹರಡಿದರೆ ಗತಿ ಏನು ಎಂಬ ಆತಂಕ ಕಾಡಿಸುತ್ತಿದೆ. ಹಳ್ಳಿಯ ಜನರು ಮೌನಪ್ರೇಕ್ಷಕರಾಗಿ ಸುಮ್ಮನಿದ್ದರೆ ಕಲ್ಲು ಚಪ್ಪಡಿಯನ್ನು ತಮ್ಮ ಕಾಲ ಮೇಲೇ ತಾವೇ ಹಾಕಿಕೊಂಡಂತಾಗುತ್ತದೆ. ಆಗ ದೇವರಾದರೂ ಏನು ಮಾಡಲು ಸಾಧ್ಯ! ದೇವರು ಕೊಟ್ಟ ಬುದ್ಧಿಯನ್ನು ಬಳಸಿಕೊಂಡು ಹಳ್ಳಿಗಳಲ್ಲಿ ಕಾವಲು ಸಮಿತಿಗಳನ್ನು ರಚಿಸಿಕೊಂಡು ವಲಸೆ ಹೋದವರ ಮೇಲೆ ಕಣ್ಗಾವಲು ಇಡಬೇಕು. ಕಳ್ಳದಾರಿಯಲ್ಲಿ ಬರುವವರನ್ನು ಜನರೇ ಗುರುತಿಸಿ ಪೋಲೀಸರಿಗೆ ಮಾಹಿತಿ ನೀಡಬೇಕು. ಇದು ಹಳ್ಳಿಗಳ ಹಿತದೃಷ್ಟಿಯಿಂದ ಅತ್ಯಗತ್ಯ.
ಹಳ್ಳಿಗಳಲ್ಲಿ ದನಕರುಗಳನ್ನು ಮೇಯಿಸಲು ಹೊಡೆದುಕೊಂಡು ಹೋಗುವ ದನಗಾಹಿಯು ಹೆಗಲ ಮೇಲೆ ಕೋಲನ್ನು ಇಟ್ಟುಕೊಂಡು ಸದಾ ಹಿಂಬಾಲಿಸುತ್ತಾನೆ. ಅವು ಮೇಯುವಾಗ, ನೀರು ಕುಡಿಯುವಾಗ ಹಿಂದೆಯೇ ಇದ್ದು ರಕ್ಷಣೆ ಮಾಡುತ್ತಾನೆ. ದನಗಳು ಬೆಟ್ಟದ ಬುಡಕ್ಕೆ ಹೋಗಿ ಹೆಬ್ಬುಲಿಯ ಬಾಯಿಗೆ ತುತ್ತಾಗದಂತೆ ಎಚ್ಚರಿಕೆ ವಹಿಸುತ್ತಾನೆ. ಆದರೆ ದೇವರು ಭಕ್ತರ ರಕ್ಷಣೆ ಮಾಡಲು ಹೀಗೆ ದನಗಾಹಿಯಂತೆ ಕೋಲನ್ನು ಹಿಡಿದುಕೊಂಡು ಬರುವುದಿಲ್ಲ. ಯಾರ ರಕ್ಷಣೆ ಮಾಡಬೇಕೆಂದು ಬಯಸುತ್ತಾನೋ ಅವರಿಗೆ ಒಳ್ಳೆಯ ಬುದ್ಧಿಯನ್ನು ಕೊಡುತ್ತಾನಂತೆ. ಆ ಬುದ್ಧಿಯ ಬಲದಿಂದ ಸವಾಲುಗಳನ್ನು ಎದುರಿಸಿ ಬದುಕನ್ನು ಸುಂದರಗೊಳಿಸಿಕೊಳ್ಳಬೇಕಾದುದು ಮನುಷ್ಯನ ಜವಾಬುದಾರಿ. ಈ ಅರ್ಥವಿರುವ ಒಂದು ಅಪರೂಪದ ಸಂಸ್ಕೃತ ಸುಭಾಷಿತವಿದೆ. ಅನೇಕ ವಿಷಮ ಪ್ರಸಂಗಗಳಲ್ಲಿನಮ್ಮ ಸ್ವಾನುಭವಕ್ಕೆ ಬಂದ ಆ ಸೂಕ್ತಿಯು ಇಂತಿದೆ.
ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್|
ಯಂ ತು ರಕ್ಷಿತುಮಿಚ್ಫಂತಿ ಸುಬುದ್ದ್ಯಾಜಯಂತಿ ತಮ್ ||
‘‘ದನಗಾಹಿಯು ಕೈಯಲ್ಲಿ ಕೋಲನ್ನು ಹಿಡಿದು ದನಕರುಗಳನ್ನು ಕಾಯುವಂತೆ ದೇವರು ಸ್ವತಃ ಬಂದು ತನ್ನ ಭಕ್ತರನ್ನು ರಕ್ಷಿಸುವುದಿಲ್ಲ. ಬದಲಾಗಿ ತಾನು ರಕ್ಷಣೆ ನೀಡಬೇಕಾದವರಿಗೆ ಸರಿಯಾದ ಬುದ್ಧಿಯನ್ನು ಕೊಟ್ಟು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವ ಸಾಮರ್ಥ್ಯವನ್ನು ಕರುಣಿಸುತ್ತಾನೆ.’’ ಈ ಸುಭಾಷಿತ ಎಷ್ಟೊಂದು ಅರ್ಥಗರ್ಭಿತ ಎಂದು ತಿಳಿಯುವುದು ಇಂತಹ ವಿಷಮ ಸನ್ನಿವೇಶಗಳನ್ನು ಎದುರಿಸಿದಾಗ ಮಾತ್ರ! ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ, ಕೈಗಳನ್ನು ಆಗಾಗ್ಗೆ ಸಾಬೂನು ಹಚ್ಚಿ ತೊಳೆದುಕೊಳ್ಳಿ ಎನ್ನುವ ಬುದ್ಧಿ ಮಾತನ್ನು ಕೇಳದ ಬುದ್ಧಿಗೇಡಿ ಜನರನ್ನು ಯಾವ ದೇವರು ರಕ್ಷಣೆ ಮಾಡಲು ಸಾಧ್ಯ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top