ಗಿಲ್ಗಿಟ್-ಬಾಲ್ಟಿಸ್ತಾನ್ ಪಾಕ್ ಆಟಕ್ಕೆ, ಭಾರತ ಪಾಠ

ಗಿಲ್ಗಿಟ್- ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಲು ಮುಂದಾಗಿರುವ ಪಾಕಿಸ್ತಾನದ ಕ್ರಮಕ್ಕೆ ಭಾರತ ತೀವ್ರ ವಿರೋಧ ಒಡ್ಡಿದೆ. ಆಕ್ರಮಿತ ಪ್ರದೇಶವನ್ನು ತಕ್ಷಣವೇ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ಭಾರತ ಇಷ್ಟು ನೇರ ಸಂದೇಶ ನೀಡಿರುವುದು ಇದೇ ಮೊದಲು.
ಇತ್ತೀಚೆಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಒಂದು ತೀರ್ಪು ನೀಡಿ, ಗಿಲ್ಗಿಟ್- ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಬಹುದು ಎಂದು 2018ರಲ್ಲಿ ಸರಕಾರ ಮಾಡಿದ್ದ ಸಂವಿಧಾನ ತಿದ್ದುಪಡಿಯನ್ನು ಅನುಮೋದಿಸಿದೆ. ಇದಕ್ಕೆ ಭಾರತದ ವಿದೇಶಾಂಗ ಇಲಾಖೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಗಿಲ್ಗಿಟ್ ಬಾಲ್ಟಿಸ್ತಾನವು ಭಾರತದ ಲಡಾಖ್ ಕೇಂದ್ರಾಡಳಿತ ಪ್ರದೇಶದ ಅವಿಭಾಜ್ಯ ಅಂಗವಾಗಿದ್ದು, ಇಲ್ಲಿ ಯಾವುದೇ ಬದಲಾವಣೆ ಮಾಡುವ ಪ್ರಯತ್ನಗಳನ್ನು ಕಟುವಾಗಿ ವಿರೋಧಿಸುತ್ತೇವೆ. ಇದರ ಬದಲಾಗಿ, ಅಕ್ರಮವಾಗಿ ವಶಪಡಿಸಿಕೊಂಡಿರುವ ಭಾಗಗಳನ್ನು ಪಾಕಿಸ್ತಾನ ಕೂಡಲೇ ಖಾಲಿ ಮಾಡಬೇಕು ಎಂದು ಭಾರತ ತಾಕೀತು ಮಾಡಿದೆ.

ಹೊಸ ನಕ್ಷೆಯಲ್ಲಿ ಭಾರತದ ಭಾಗ
ಕಳೆದ ವರ್ಷ ಜಮ್ಮು- ಕಾಶ್ಮೀರ ರಾಜ್ಯವನ್ನು ಎರಡಾಗಿ ವಿಭಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ ನಂತರ, ನವಂಬರ್‌ನಲ್ಲಿ ಹೊಸ ರಾಜಕೀಯ ನಕ್ಷೆಯನ್ನು ಭಾರತ ಬಿಡುಗಡೆ ಮಾಡಿತ್ತು. ಅದರಲ್ಲಿ ಗಿಲ್ಗಿಟ್- ಬಾಲ್ಟಿಸ್ತಾನವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಭಾಗವಾಗಿ, ಉಳಿದ ಪಾಕ್ ಆಕ್ರಮಿತ ಪ್ರದೇಶ(ಪಿಒಕೆ)ವನ್ನು ಕಾಶ್ಮೀರದ ಭಾಗವಾಗಿ ತೋರಿಸಿತ್ತು. ಅದೇ ಸಂದರ್ಭದಲ್ಲಿ, ಪಾಕಿಸ್ತಾನದ ಜೊತೆ ಮುಂದಿನ ಮಾತುಕತೆ ಏನಿದ್ದರೂ ಅದು ಪಿಒಕೆ ಬಗ್ಗೆ ಮಾತ್ರ ಎಂದು ಹೇಳುವ ಮೂಲಕ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕಿಸ್ತಾನದಲ್ಲಿ ನಡುಕ ಹುಟ್ಟಿಸಿದ್ದರು.

ಪಾಕ್ ವಶಪಡಿಸಿಕೊಂಡದ್ದು ಹೇಗೆ?
1947ರಲ್ಲಿ ಭಾರತ ಸ್ವತಂತ್ರವಾದ ಸಂದರ್ಭ, ಭಾರತ ಅಥವಾ ಪಾಕಿಸ್ತಾನ- ಈ ಎರಡರಲ್ಲೊಂದು ದೇಶಕ್ಕೆ ಸೇರುವ ಅವಕಾಶವನ್ನು ಕಾಶ್ಮೀರದ ರಾಜ ಹರಿಸಿಂಗ್‌ಗೆ ನೀಡಲಾಯಿತು. ಅವರು ಅದನ್ನು ಸ್ವತಂತ್ರ ರಾಜ್ಯವಾಗೇ ಇರಿಸಿಕೊಳ್ಳಲು ಇಚ್ಛಿಸಿದರು. ಆದರೆ, ಪಾಕಿಸ್ತಾನದ ಚಿತಾವಣೆಯಿಂದ, ಪಶ್ಚಿಮ ಕಾಶ್ಮೀರ ಪ್ರಾಂತ್ಯದಲ್ಲಿದ್ದ ಪಶ್ತೂನ್ ಬುಡಕಟ್ಟಿನ ಜನತೆ ಹಾಗೂ ಪಾಕಿಸ್ತಾನದ ಸೇನೆ ಸೇರಿ ಕಾಶ್ಮೀರದ ಬಹುಭಾಗವನ್ನು ಆಕ್ರಮಿಸಿದವು. ಇದನ್ನು ಎದುರಿಸಲು ಸಾಧ್ಯವಾಗದ ರಾಜ ಹರಿಸಿಂಗ್, ಆಗಿನ ಭಾರತೀಯ ಗವರ್ನರ್ ಮೌಂಟ್ ಬ್ಯಾಟನ್ ಮೊರೆ ಹೋದರು. ‘‘ಜಮ್ಮು- ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಮರುಸ್ಥಾಪಿತಗೊಂಡ ಬಳಿಕ, ರಾಜ್ಯದಲ್ಲಿ ಜನತೆಯ ಅಭಿಪ್ರಾಯವನ್ನು ಆಧರಿಸಿ ಅದು ಎಲ್ಲಿ ವಿಲೀನವಾಗಬೇಕು ಎಂಬುದು ನಿರ್ಣಯವಾಗಬೇಕು,’’ ಎಂದರು. ಭಾರತ ಸರಕಾರ ಜನಮತಗಣನೆಯ ಮೂಲಕ ವಿಲೀನಕ್ಕೆ ಒಪ್ಪಿತು. ಆದರೆ, ಜನಮತಗಣನೆಯಿಂದ ತನ್ನ ವಿರೋಧ ನಿರ್ಣಯ ಬರಬಹುದು ಎಂದು ಅಂಜಿದ ಪಾಕಿಸ್ತಾನ, ಆಕ್ರಮಿಸಿದ ಪ್ರದೇಶದಿಂದ ಸೈನ್ಯವನ್ನು ಹಿಂದೆಗೆದುಕೊಳ್ಳಲಾಗಲೀ, ಜನಮತಗಣನೆಗಾಗಲೀ ಒಪ್ಪಲಿಲ್ಲ. ಹೀಗಾಗಿ, ಪಾಕ್ ಆಕ್ರಮಿತ ಪ್ರದೇಶವನ್ನುಳಿದು, ತನ್ನ ಹಿಡಿತದಲ್ಲಿದ್ದ ಇತರೆಲ್ಲ ಪ್ರದೇಶಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಲು ರಾಜ ಹರಿಸಿಂಗ್ ಒಪ್ಪಿದರು. 1947 ಅಕ್ಟೋಬರ್ 27ರಂದು ಒಪ್ಪಂದಕ್ಕೆ ಸಹಿ ಹಾಕಿದರು. ಇದಾದ ಮರುದಿನ ಮುಂಜಾನೆ, ಭಾರತದ ಸಿಖ್ ಬೆಟಾಲಿಯನ್ ಯೋಧರನ್ನು ಏರ್‌ಫೋರ್ಸ್‌ ಮೂಲಕ ಕರೆದೊಯ್ದು ಗಡಿಯಲ್ಲಿ ನಿಯೋಜಿಸಲಾಯ್ತು. ಇದರಿಂದ, ಇನ್ನೂ ಮುಂದೆ ಗಡಿಯೊಳಕ್ಕೆ ಪಠಾಣ್ ಯೋಧರನ್ನು ನುಗ್ಗಿಸಿ ಆಕ್ರಮಿಸಲಿದ್ದ ಪಾಕಿಸ್ತಾನದ ಸಂಚು ವಿಫಲವಾಯಿತು. ಅಂದು ಪಾಕ್ ವಶದಲ್ಲಿದ್ದ ಪ್ರದೇಶ ಈಗಲೂ ಹಾಗೆಯೇ ಇದೆ.

ರಾಜಕೀಯವಾಗಿ ಛಿದ್ರಛಿದ್ರ
ಜಮ್ಮು- ಕಾಶ್ಮೀರ ವಿಭಾಗವು ಭಾರತಕ್ಕೆ ಸೇರಿದ ಪರಿಣಾಮ ಪ್ರಜಾಪ್ರಭುತ್ವದ ಹಾದಿಯನ್ನು ತುಳಿಯಿತು. ಆರ್ಟಿಕಲ್ 370ನ್ನು ಕೇಂದ್ರದ ನಾಯಕರು ವಿಧಿಸಿದ ಪರಿಣಾಮ ಇಲ್ಲಿನ ಕಾಯಂ ನಿವಾಸಿಗಳು ಎಲ್ಲ ಬಗೆಯ ಸುಖ, ನೆಮ್ಮದಿ, ಆತಂಕವಿಲ್ಲದ ನೆಮ್ಮದಿಯನ್ನು ಅನುಭವಿಸುವಂತಾಯಿತು. ಆದರೆ ದೊಡ್ಡ ಪ್ರಾಂತ್ಯವಾದ ಪಿಒಕೆಯನ್ನು ಆಳಲಾಗದೆ ಪಾಕಿಸ್ತಾನ ಅದನ್ನು ಎರಡಾಗಿ ಒಡೆಯಿತು. ಒಂದು, ಆಜಾದ್ ಜಮ್ಮು ಕಾಶ್ಮೀರ್(ಎಜೆಕೆ). ಭಾರತದ ಕಾಶ್ಮೀರದ ಪಶ್ಚಿಮ ಭಾಗಕ್ಕೆ ಅಂಟಿಕೊಂಡಿರುವ ಇದನ್ನು ‘ಸ್ವತಂತ್ರ ಜಮ್ಮು ಕಾಶ್ಮೀರ’ ಅಥವಾ ‘ಸ್ವತಂತ್ರ ಕಾಶ್ಮೀರ’ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತದೆ. ಇನ್ನೊಂದು, ಗಿಲ್ಗಿಟ್- ಬಾಲ್ಟಿಸ್ತಾನ್. 2009ರವರೆಗೂ ಇದನ್ನು ಉತ್ತರ ಪಿಒಕೆ ಎಂದು ಕರೆಯಲಾಗುತ್ತಿತ್ತು. ಇದು ಭಾರತದ ಲಡಾಖ್ ಪ್ರಾಂತ್ಯಕ್ಕೆ ನಿಕಟವಾಗಿದೆ. 1974ರಲ್ಲಿ ಮಧ್ಯಂತರ ಸಂವಿಧಾನ ಕಾಯಿದೆಯೊಂದನ್ನು ರೂಪಿಸಿ, ಅದರಡಿಯಲ್ಲಿ ‘ಆಜಾದ್ ಕಾಶ್ಮೀರ’ದ ಆಡಳಿತ ನಡೆಯುತ್ತಿದೆ. ಎಜೆಕೆಗೆ ಪ್ರತ್ಯೇಕ ಅಧ್ಯಕ್ಷ, ಪ್ರಧಾನ ಮಂತ್ರಿ, ಆಡಳಿತ ಮಂಡಳಿ, ಹೈಕೋರ್ಟ್, ಸುಪ್ರೀಂ ಕೋರ್ಟ್ ಎಲ್ಲ ಇವೆ. ಆದರೆ ಯಾವುದಕ್ಕೂ ಸ್ವಂತ ಅಧಿಕಾರವಿಲ್ಲ. ಪ್ರತಿಯೊಂದು ಸಣ್ಣ ವಿಚಾರಕ್ಕೂ ಪಾಕಿಸ್ತಾನ ಸರಕಾರದ ಅಧೀನ. ಇದಕ್ಕೊಂದು ಪ್ರತ್ಯೇಕ ಧ್ವಜವೂ ಇದೆ. ಎಜೆಕೆ ಆಡಳಿತಕ್ಕೊಳಪಟ್ಟಿದ್ದ ಗಿಲ್ಗಿಟ್- ಬಾಲ್ಟಿಸ್ತಾನ್ ಪ್ರದೇಶವನ್ನು 1949ರಲ್ಲಿ‘ಕರಾಚಿ ಒಪ್ಪಂದ’ದ ಮೂಲಕ ಪಾಕಿಸ್ತಾನಕ್ಕೆ ಕೊಟ್ಟುಬಿಟ್ಟಿತು ಎಜೆಕೆ ಆಡಳಿತ. ಕರಾಚಿ ಒಪ್ಪಂದ ಎಂದರೆ ಎಜೆಕೆ ಅಧ್ಯಕ್ಷ ಹಾಗೂ ಪಾಕಿಸ್ತಾನದ ಖಾತೆಯೇ ಇಲ್ಲದ ಒಬ್ಬ ಸಚಿವರ ನಡುವೆ ನಡೆದ ಒಂದು ಒಪ್ಪಂದ.

ಪಿಒಕೆ ಮರಳಿ ಪಡೆಯಬಹುದೆ?
‘ಪಿಒಕೆಯನ್ನು ತಕ್ಷಣ ಬಿಟ್ಟುಕೊಡಿ’ ಎಂದು ಕೇಂದ್ರ ಹೇಳಿದೆಯಾದರೂ, ಅದನ್ನು ಮರಳಿ ಪಡೆಯುವುದೇನೂ ಸುಲಭವಲ್ಲ. ಕಾರಕೋರಂ ಹೆದ್ದಾರಿಯಿಂದಾಗಿ, ಈ ಪ್ರಾಂತ್ಯದಲ್ಲಿ ಚೀನಾದ ಪ್ರಭಾವ ಹೆಚ್ಚಿದೆ. ಚೀನಾ- ಪಾಕಿಸ್ತಾನ ಮಧ್ಯೆ ವ್ಯಾಪಾರ ವಹಿವಾಟು ಅಗಾಧವಾಗಿ ಬೆಳೆದಿದೆ. ಪಾಕ್, ಚೀನಾದಿಂದ ಶಸ್ತ್ರಾಸ್ತ್ರಗಳು ಹಾಗೂ ಅಣ್ವಸ್ತ್ರಗಳನ್ನು ಪಡೆದಿರುವುದು ಈ ಹಾದಿಯ ಮೂಲಕವೇ. ಇದನ್ನು ಕಳೆದುಕೊಳ್ಳಲು ಆ ಎರಡೂ ದೇಶಗಳು ಸಿದ್ಧವಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಿಂಧೂ ಹಾಗೂ ಅದರ ಉಪನದಿಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಈ ಪ್ರಾಂತ್ಯ ಜಲಮೂಲದ ವಿಷಯದಲ್ಲೂ ಶ್ರೀಮಂತ. ಇಲ್ಲಿ ಅಣೆಕಟ್ಟುಗಳನ್ನು ಕಟ್ಟಲು ಚೀನಾದ ಸಹಕಾರದಿಂದ ಪಾಕ್ ಮುಂದಾಗಿದೆ. ಆದರೆ, ಈ ಪ್ರಾಂತ್ಯ ತನ್ನದು ಎಂದು ಭಾರತ ಸಾಧಿಸುವುದಕ್ಕೆ ಬೇಕಾದ ಚಾರಿತ್ರಿಕ ದಾಖಲೆಗಳು ಸಾಕಷ್ಟಿವೆ. 1947ರವರೆಗೂ ಈ ಎಲ್ಲ ಪ್ರಾಂತ್ಯಕ್ಕೂ ರಾಜ ಹರಿಸಿಂಗ್‌ನೇ ಅಧಿಪತಿಯಾಗಿದ್ದ. ವಿಲೀನ ಒಪ್ಪಂದದ ವೇಳೆ, ಈಗಿನ ಪಿಒಕೆ ಕೂಡ ಆತನ ಅಧಿಪತ್ಯದೊಳಗೆ ಇದ್ದಿದ್ದರೆ ಆ ಪ್ರಾಂತ್ಯವೂ ಭಾರತದೊಳಗೇ ಸೇರುತ್ತಿತ್ತು. ಆದರೆ, ಪಾಕಿಸ್ತಾನದ ದಾಳಿಯಿಂದಾಗಿ ಅಷ್ಟೂ ಪ್ರದೇಶ ಅದಕ್ಕೆ ಸೇರಿತು. ಆದರೆ ಅದು ತನ್ನದೇ ಎಂದು ಸಾಧಿಸಲು ಸೂಕ್ತ ದಾಖಲೆಗಳು ಪಾಕ್ ಬಳಿ ಇಲ್ಲ.

ಗಿಲ್ಗಿಟ್-ಬಾಲ್ಟಿಸ್ತಾನ್‌ನ ದುರಂತ
ಗಿಲ್ಗಿಟ್- ಬಾಲ್ಟಿಸ್ತಾನ್ ಪ್ರಾಂತ್ಯದ್ದೊಂದು ದುರಂತ ಕತೆ. ಇಲ್ಲಿ ಶಿಯಾ ಮುಸ್ಲಿಮರು ಹಾಗೂ ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು. ಇವರ ಪ್ರಾಬಲ್ಯವನ್ನು ಮುರಿಯುವುದಕ್ಕಾಗಿ, ರಾಜಾ ಹರಿಸಿಂಗ್‌ನ ಕಾಲದ ಕಾನೂನುಗಳನ್ನು ತಿದ್ದುಪಡಿ ಮಾಡಿದ ಪಾಕಿಸ್ತಾನ, ಇಲ್ಲಿ ಸುನ್ನಿ ಮುಸ್ಲಿಮರು ದೊಡ್ಡ ಪ್ರಮಾಣದಲ್ಲಿ ವಲಸೆ ಬಂದು ನೆಲೆಸುವಂತೆ ಮಾಡಿತು. ಹೀಗೆ ಬಂದ ವಲಸಿಗರಿಗೆ ಸಕಲ ಸೌಲಭ್ಯಗಳನ್ನೂ ಒದಗಿಸಿಕೊಟ್ಟು, ಅವರ ಪ್ರಾಬಲ್ಯ ಹೆಚ್ಚುವಂತೆ ಮಾಡಿ, ಶಿಯಾ ಮುಸ್ಲಿಮರು ಹಾಗೂ ಹಿಂದೂಗಳು ಅನಾಥರಾಗುವಂತೆ ಮಾಡಿತು. ಇದರಿಂದ ಕಣಿವೆಯಲ್ಲಿ ಮತೀಯ ಕಲಹಗಳು ಹೆಚ್ಚಿದವು. ಇಲ್ಲೂ ಹಿಂದೂಗಳಿಗೆ ಸೇರಿದಂತೆ ಹೊರಗಿನವರಿಗೆ ಅಸ್ತಿ ಹಕ್ಕುಗಳಿಲ್ಲ. ಹೀಗಾಗಿ ಇಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಇನ್ನು ಹಂಝಾ- ಗಿಲ್ಗಿಟ್ ಭಾಗದ ಶಕ್ಸ್‌ಘಂ ಕಣಿವೆಯನ್ನು 1963ರಲ್ಲಿ ಚೀನಾಕ್ಕೇ ಬಿಟ್ಟುಕೊಟ್ಟುಬಿಟ್ಟಿತು! ಇದು ಪಾಕಿಸ್ತಾನ- ಚೀನಾವನ್ನು ಸಂಪರ್ಕಿಸುವ ಕಾರಕೋರಂ ಹೆದ್ದಾರಿ ಹಾದುಹೋಗುವ ಪ್ರದೇಶ. ಹೆದ್ದಾರಿಯನ್ನು ಅಭಿವೃದ್ಧಿಪಡಿಸಲೆಂದು ಚೀನಾಕ್ಕೆ ಈ ಪ್ರದೇಶವನ್ನು ಪಾಕ್ ಬಿಟ್ಟುಕೊಟ್ಟಿದೆ. ಇದು ಮೂಲತಃ ಲಡಾಖ್ ಪ್ರಾಂತ್ಯಕ್ಕೆ ಸೇರಿದ್ದು. ಇಲ್ಲಿ ಜನವಸತಿ ಕಷ್ಟ. ಪರ್ವತಗಳು ಅಧಿಕ. ಬ್ರಾಡ್‌ ಪೀಕ್‌, ಗಷರ್‌ ಬ್ರಮ್‌, ಮಾಷೇರ್‌ ಬ್ರಮ್‌ ಮುಂತಾದ ಎತ್ತರದ ಪರ್ವತಗಳೆಲ್ಲ ಇಲ್ಲಿವೆ.

ಯಾಕೆ ಪ್ರಮುಖ?
ಗಿಲ್ಗಿಟ್- ಬಾಲ್ಟಿಸ್ತಾನ್ ಆಯಕಟ್ಟಿನ ಜಾಗದಲ್ಲಿದ್ದು, ಹಲವಾರು ದೇಶಗಳ ಜತೆಗೆ ಸಂಪರ್ಕ ಸಾಧಿಸಲು ಅಗತ್ಯವಾದ ಗಡಿಗಳನ್ನ ಹೊಂದಿದೆ. ಪೂರ್ವದಲ್ಲಿ ಜಮ್ಮು- ಕಾಶ್ಮೀರ, ಪಶ್ಚಿಮಕ್ಕೆ ಪಾಕಿಸ್ತಾನದ ಪಂಜಾಬ್ ಹಾಗೂ ಖೈಬರ್ ಪಖ್ತೂಂಖ್ವಾ ಪ್ರಾಂತ್ಯ, ವಾಯವ್ಯಕ್ಕೆ ಅಫಘಾನಿಸ್ತಾನದ ವಖಾನ್ ಕಾರಿಡಾರ್, ಉತ್ತರಕ್ಕೆ ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯಗಳು ಇವೆ. ಈ ಭಾಗ ಕೈವಶವಾದರೆ ಭಾರತವು ಚೀನಾ ಹಾಗೂ ಅಫಘಾನಿಸ್ತಾನದೊಂದಿಗೆ ನೇರ ಸಂಪರ್ಕವನ್ನು ಹೊಂದುತ್ತದೆ. ವ್ಯೂಹಾತ್ಮಕ ದೃಷ್ಟಿಯಿಂದ ಪ್ರಮುಖ. ಜಗತ್ತಿನ ಅತ್ಯಂತ ಎತ್ತರದ ಯುದ್ಧರಂಗವೆನಿಸಿದ ಸಿಯಾಚಿನ್ ಗ್ಲೇಷಿಯರ್‌ನ ಪಕ್ಕದಲ್ಲಿದೆ ಇದು. ಚೀನಾದ ಸೇನಾಪಡೆ ಇಲ್ಲಿ ನಿಯೋಜನೆಗೊಂಡರೆ ಲಡಾಖನ್ನು ಆಕ್ರಮಿಸಲು ಅವರಿಗೆ ಅನುಕೂಲ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top