– ಬೆಳಗಾವಿಯಲ್ಲಿ ತರಬೇತಿ ಪಡೆದ ಯೋಧರು
ಹೊಸದಿಲ್ಲಿ: ಭಾರತೀಯ ಯೋಧರೊಂದಿಗೆ ನಿಶ್ಯಸ್ತ್ರವಾಗಿ ಹೋರಾಟ ನಡೆಸಲು ಚೀನಾ ತನ್ನ ಸೈನಿಕರಿಗೆ ಸಮರ ಕಲೆ ಪರಿಣತರಿಂದ ತರಬೇತಿ ಕೊಡಿಸುತ್ತಿರುವ ಸಂಗತಿ ಬೆಳಕಿಗೆ ಬರುತ್ತಿದ್ದಂತೆಯೇ ಭಾರತವು ತನ ಶಕ್ತಿಶಾಲಿ ‘ಘಾತಕ್ ಕಮಾಂಡೊ’ಗಳನ್ನು ಗಡಿಯಲ್ಲಿ ನಿಯೋಜಿಸಿದೆ. ಗಡಿ ಪ್ರದೇಶಕ್ಕೆ ತೆರಳುವ ಮುನ್ನ ಈ ಕಮಾಂಡೊಗಳಿಗೆ ಬೆಳಗಾವಿಯಲ್ಲಿ 43 ದಿನಗಳ ಕಠಿಣ ತರಬೇತಿ ನೀಡಲಾಗಿದೆ.
ಬೆಳಗಾವಿ ಸೇನಾ ತರಬೇತಿ ಕೇಂದ್ರವು ದೈಹಿಕ ಕಾದಾಟ ಕೌಶಲ ನೀಡುವ ವಿಷಯದಲ್ಲಿ ಅತ್ಯಂತ ಪರಿಣಿತ ಸಂಸ್ಥೆ ಎನಿಸಿದೆ. ಬೆನ್ನಿಗೆ 35 ಕೇಜಿ ಭಾರ ಹಾಕಿಕೊಂಡು 40 ಕಿ.ಮೀ ನಿರಂತರ ಓಡುವುದು ಮತ್ತು ದುರ್ಗಮ ಬೆಟ್ಟತಾಣಗಳನ್ನು ನಿರಾಯಸವಾಗಿ ಏರಿ ಹೋಗುವುದು ಈ ತಂಡಕ್ಕೆ ನೀಡಿದ ಪ್ರಮುಖ ತರಬೇತಿಯಾಗಿದೆ. ಈ ಬಾರಿ ಸಂಘರ್ಷ ನಡೆದರೆ ಘಾತಕ್ ಎದುರಾಳಿಗಳ ಪಾಲಿಗೆ ಘಾತುಕ ಪೆಟ್ಟು ನೀಡಲಿದೆ ಎಂದು ಪರಿಣಿತರು ವಿಶ್ಲೇಷಿಸಿದ್ದಾರೆ.
ಅತ್ಯಂತ ಸದೃಢ ಯೋಧರನ್ನು ಪ್ರತ್ಯೇಕಿಸಿ ಈ ಘಾತಕ್ ಪಡೆಯನ್ನು ರಚಿಸಲಾಗುತ್ತದೆ. ಇವರ ತರಬೇತಿ ಸಂಪೂರ್ಣ ಭಿನ್ನವಾಗಿರುತ್ತದೆ. ವಿಶೇಷವಾಗಿ ದೈಹಿಕ ಕೌಶಲದ ಮೂಲಕವೇ ಎದುರಾಳಿಯನ್ನು ಬಗ್ಗುಬಡಿಯುವ ಸಮರ ಕಲೆಯನ್ನು ಇವರಿಗೆ ನೀಡಲಾಗುತ್ತದೆ. ದುರ್ಗಮ ತಾಣಗಳಲ್ಲಿ ಇವರು ಇತರೆ ಯಾವುದೇ ಸೇನಾ ಪಡೆಗಳ ನೆರವು ಬಯಸದೇ ಕಾದಾಡಬಲ್ಲರು. ದೈಹಿಕ ಸಾಮರ್ಥ್ಯದಷ್ಟೇ ಇವರ ಮನೋಬಲವೂ ಅಸದಳವಾಗಿರುತ್ತದೆ. ಒಂದು ಘಾತಕ್ ತುಕಡಿಯಲ್ಲಿ ಒಬ್ಬ ಕಮಾಂಡಿಂಗ್ ಕ್ಯಾಪ್ಟನ್ ಮತ್ತು 20 ಸಮರ್ಥ ಯೋಧರು ಇರುತ್ತಾರೆ. ಇಬ್ಬರು ನಾನ್ ಕಮಿಷನ್ಡ್ ಅಧಿಕಾರಿಗಳು, ಸ್ಥಳ ಗುರುತಿಸುವ ಸಿಬ್ಬಂದಿ, ಸ್ಪಾಟರ್‌ಗಳು, ಲೈಟ್ ಮಷಿನ್ ಗನ್, ವೈದ್ಯಕೀಯ ಮತ್ತು ರೇಡಿಯೊ ಆಪರೇಟರ್‌ಗಳು ಈ ತುಕಡಿಯಲ್ಲಿ ಇರುತ್ತಾರೆ.