– 2019-20ನೇ ಸಾಲಿನಲ್ಲಿ 4.2% ದಾಖಲು | 11 ವರ್ಷದಲ್ಲೇ ಕನಿಷ್ಠ ಪ್ರಗತಿ
– ತ್ರೈಮಾಸಿಕ ಜಿಡಿಪಿ ದರ 3.1%ಗೆ ಇಳಿಕೆ | ಕೊರೊನಾ ಸವಾಲಿನ ಸ್ಯಾಂಪಲ್
ಹೊಸದಿಲ್ಲಿ: ಕೊರೊನಾದಿಂದಾಗಿ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿಯುವ ಆತಂಕದ ನಡುವೆಯೇ ಭಾರತದ ಜಿಡಿಪಿ ಪ್ರಗತಿ ಕಳೆದ 11 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 2019-20ನೇ ಸಾಲಿನ ಒಟ್ಟು ವಾರ್ಷಿಕ ಜಿಡಿಪಿ ಪ್ರಗತಿ ದರ ಶೇ. 4.2ಕ್ಕೆ ಇಳಿಕೆಯಾಗಿದೆ. ಕಳೆದ 2018-19ನೇ ಸಾಲಿನಲ್ಲಿ ವಾರ್ಷಿಕ ಜಿಡಿಪಿ ಶೇ 6.1ರಷ್ಟಿತ್ತು. ಈ ಮಧ್ಯೆ, ಜನವರಿ-ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 3.1ಕ್ಕೆ ಕುಸಿದಿದೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ(ಎನ್ಎಸ್ಒ) ಶುಕ್ರವಾರ ದೇಶದ ಆರ್ಥಿಕ ಬೆಳವಣಿಗೆಯ ವರದಿಯನ್ನು ಪ್ರಕಟಿಸಿದ್ದು, ಕೊರೊನೋತ್ತರ ಅವಧಿಯ ಆರ್ಥಿಕ ಸವಾಲುಗಳ ಸ್ಪಷ್ಟ ಮುನ್ಸೂಚನೆಯನ್ನು ಇದು ಒದಗಿಸಿದೆ. ಉತ್ಪಾದನಾ ವಲಯದ ಬೆಳವಣಿಗೆ 4ನೇ ತ್ರೈಮಾಸಿಕದಲ್ಲಿ ಶೇ.1.4ಕ್ಕೆ ಕುಸಿದಿರುವುದು ಜಿಡಿಪಿ ಕುಸಿತಕ್ಕೆ ಪ್ರಮುಖ ಕಾರಣ. ನಿರ್ಮಾಣ ವಲಯದ ಬೆಳವಣಿಗೆ ಶೇ.2.2ಕ್ಕೆ ಕುಸಿದಿದೆ.
5% – 2019-20ನೇ ಸಾಲಿನಲ್ಲಿ ಸರಕಾರ ಅಂದಾಜಿಸಿದ್ದ ವಾರ್ಷಿಕ ಜಿಡಿಪಿ
6.1%- 2018-19ನೇ ಸಾಲಿನಲ್ಲಿ ಭಾರತದ ಜಿಡಿಪಿ ಪ್ರಗತಿ
ಮುಂದಿದೆ ಅಗ್ನಿ ಪರೀಕ್ಷೆ
ಪ್ರಸ್ತುತ ಪ್ರಕಟವಾಗಿರುವ ವಾರ್ಷಿಕ ಜಿಡಿಪಿ ಮತ್ತು ತ್ರೈಮಾಸಿಕ ಜಿಡಿಪಿ ಅಂಶಗಳು ಕೊರೊನಾ ಮತ್ತು ಲಾಕ್‌ಡೌನ್ ಅವಧಿಗೆ ಮುನ್ನ ಇದ್ದ ಅಂಕಿ-ಅಂಶಗಳನ್ನು ಆಧರಿಸಿವೆ. ಮಾ.25ರಿಂದ ದೇಶಾದ್ಯಂತ ಲಾಕ್‌ಡೌನ್ ಜಾರಿಯಾಗಿದ್ದರಿಂದ ಏ.1ರಿಂದ ಆರಂಭವಾಗುವ ಮುಂದಿನ ತ್ರೈಮಾಸಿಕ ಫಲಿತಾಂಶಗಳಲ್ಲಿ ಲಾಕ್‌ಡೌನ್‌ನ ರಿಯಲ್ ಎಫೆಕ್ಟ್ ಗೊತ್ತಾಗಲಿದೆ. ಕೊರೊನಾ ಬಿಕ್ಕಟ್ಟಿನ ಅಡ್ಡ ಪರಿಣಾಮಗಳು ಮಾರ್ಚ್ ತ್ರೈಮಾಸಿಕಲ್ಲಿಯೇ ಅಲ್ಪ ಪ್ರಮಾಣದಲ್ಲಿ ವ್ಯಕ್ತವಾಗಿವೆಯಾದರೂ ಸಂಪೂರ್ಣ ಚಿತ್ರಣ ಮುಂದೆ ಗೋಚರಿಸಲಿದೆ.
ಕಾರಣ, ಪರಿಣಾಮ
ಲಾಕ್‌ಡೌನ್ ಪರಿಣಾಮ ಗ್ರಾಹಕರ ಅನುಭೋಗ ಕುಸಿದಿದೆ. ಖಾಸಗಿ ಹೂಡಿಕೆಯೂ ಇಳಿಮುಖವಾಗಿದೆ. ಜಿಡಿಪಿಯಲ್ಲಿ ಶೇ.55ರಷ್ಟಿರುವ ಸೇವಾ ವಲಯ ಮತ್ತು ಉತ್ಪಾದನಾ ವಲಯಕ್ಕೆ ಲಾಕ್‌ಡೌನ್‌ನಿಂದ ಅಪಾರ ನಷ್ಟವಾಗಿದೆ. ಇದರಿಂದಾಗಿ ಉದ್ಯೋಗ ನಷ್ಟ ಮತ್ತು ಆರ್ಥಿಕ ಬೆಳವಣಿಗೆ ಕುಸಿಯುತ್ತಿದೆ. ವಿತ್ತೀಯ ಕೊರತೆ ಹೆಚ್ಚಲಿದೆ. ಲಾಕ್‌ಡೌನ್ ಸಡಿಲವಾದರೂ, ಆರ್ಥಿಕತೆ ಕೋವಿಡ್‌ಗೆ ಮೊದಲಿನ ಸ್ಥಿತಿಗೆ ತಲುಪಲು ಹೆಚ್ಚಿನ ಸಮಯ ಅಗತ್ಯ. ಉತ್ಪಾದನೆ ವಲಯವನ್ನು ಸಕ್ರಿಯಗೊಳಿಸುವುದು ಸರಕಾರದ ಮುಂದಿರುವ ದೊಡ್ಡ ಸವಾಲಾಗಿದೆ ಎಂಬುದು ತಜ್ಞರ ಅಭಿಪ್ರಾಯ.
ನೆಲಕಚ್ಚಿದ ಕೋರ್ ಸೆಕ್ಟರ್ :
ಲಾಕ್‌ಡೌನ್‌ನಿಂದಾಗಿ 8 ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆಯು ಏಪ್ರಿಲ್‌ನಲ್ಲಿ ಶೇ.38.1ಕ್ಕೆ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.5.2ರಷ್ಟು ಬೆಳವಣಿಗೆ ದಾಖಲಾಗಿತ್ತು. ಈ 8 ವಲಯಧಿಗಳ ಪಾಲು ದೇಶದ ಒಟ್ಟು ಕೈಗಾರಿಕೆಯಲ್ಲಿ ಶೇ.40ರಷ್ಟಿದೆ. ಉಕ್ಕು ಮತ್ತು ಸಿಮೆಂಟ್ ವಲಯಗಳಂತೂ ಕ್ರಮವಾಗಿ ಶೇ.83.9 ಮತ್ತು ಶೇ.86.0ಕ್ಕೆ ಕುಸಿತ ಕಂಡಿವೆ.
ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್ ತೆರವಾದರೆ, ಆರ್ಥಿಕ ಚಟುವಟಿಕೆಗಳಿಗೆ ಗ್ರೀನ್ ಸಿಗ್ನಲ್ ಸಿಗಲಿದೆ. ಮುಂದಿನ ತ್ರೈಮಾಸಿಕಗಳಲ್ಲಿ ಕನಿಷ್ಠ ಶೇ.5ಕ್ಕೆ ಜಿಡಿಪಿ ಜಿಗಿಯಲಿದೆ.
-ಡಿ.ಸುಬ್ಬರಾವ್, ಆರ್‌ಬಿಐ ಮಾಜಿ ಗವರ್ನರ್.
ದೇಶದ ಆರ್ಥಿಕ ವ್ಯವಸ್ಥೆಯ ತಪ್ಪು ನಿರ್ವಹಣೆಗೆ ಈಗಿನ ಜಿಡಿಪಿ ಡೇಟಾ ರನ್ನಿಂಗ್ ಕಾಮೆಂಟರಿಯಂತಿದೆ.
-ಪಿ.ಚಿದಂಬರಂ , ಮಾಜಿ ಹಣಕಾಸು ಸಚಿವ.