ಗಲ್ವಾನ್‌ ಸೇಡಿಗೆ ಭಾರತ ಬಲವಾನ್

ಈಗ ಎಲ್ಲರ ಮನದಲ್ಲಿ ಇರೋ ಪ್ರಶ್ನೆ ಎರಡೇ- ಮುಂದೇನು? ಈಗ ಯಾಕೆ ಈ ಸಂಘರ್ಷ ನಡೆಯಿತು?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ವಿದೇಶಾಂಗ ತಜ್ಞರು ಮಾಡುತ್ತಿದ್ದಾರೆ. ಅಣ್ವಸ್ತ್ರ ಹೊಂದಿರುವ ಎರಡು ಪ್ರಬಲ ರಾಷ್ಟ್ರಗಳು ಹೀಗೆ ಅನಪೇಕ್ಷಿತ ಸಂದರ್ಭದಲ್ಲಿ ಕಾದಾಟಕ್ಕಿಳಿದಿರುವುದು ದಿಗಿಲಿಗೆ ಕಾರಣವಾಗಿದೆ. ಆದರೆ, ಚೀನಾದಲ್ಲಿ ಕೋವಿಡ್‌ 19 ವೈರಸ್‌ ಪತ್ತೆಯಾದ ನಂತರ ಚೀನಾದ ನಡವಳಿಕೆಯನ್ನು ವಿಶ್ಲೇಷಿಸಿದರೆ ನಮ್ಮೆಲ್ಲ ಅನುಮಾನಗಳಿಗೆ ಪರಿಹಾರ ದೊರೆಯಬಹುದು.
ಕಳೆದ ಕೆಲವು ತಿಂಗಳಿಂದ ಅನೇಕ ಆಕ್ರಮಣಕಾರಿ ನಡೆಗಳನ್ನು ಚೀನಾ ಪ್ರದರ್ಶಿಸಿದೆ. ಹಾಂಕಾಂಗ್‌ನಲ್ಲಿ ಅಸ್ತಿತ್ವದಲ್ಲಿದ್ದ ಒಂದು ದೇಶ ಎರಡು ವ್ಯವಸ್ಥೆಯಾದ ಕಾನೂನಿಗೆ ಚೀನಾದ ರಬ್ಬರ್‌ಸ್ಟಾಂಪ್‌ ಸಂಸತ್ತು ಒಪ್ಪಿಗೆ ನೀಡಿದೆ. ಅದರರ್ಥ ಹಾಂಕಾಂಗ್‌ನ ಸ್ವಾಯತ್ತ ಸ್ಥಾನಮಾನವನ್ನು ಚೀನಾ ಅಮಾನ್ಯ ಮಾಡಿದೆ. ದಕ್ಷಿಣ ಚೀನಾ ಸಮುದ್ರದಲ್ಲೂ ತನ್ನ ಆಕ್ರಮಣಶೀಲತೆಯನ್ನು ಪ್ರದರ್ಶಿಸಿದೆ. ಇಲ್ಲಿರುವ ಬಹುತೇಕ ದ್ವೀಪಗಳಿಗೆ ಮೇಲೆ ಹಕ್ಕು ಸಾಧಿಸಿರುವ ಚೀನಾ ಅವುಗಳಿಗೆ ತನ್ನದೇ ಹೆಸರುಗಳನ್ನು ಇಟ್ಟಿದೆ. ಇಡೀ ದಕ್ಷಿಣ ಚೀನಾ ಸಮುದ್ರ ತನ್ನದೇ ಎನ್ನುವ ರೀತಿಯಲ್ಲಿ ವರ್ತಿಸಲಾರಂಭಿಸಿದೆ. ಇದು ಆಗ್ನೇಯ ಏಷ್ಯಾದ ಬಹುತೇಕ ರಾಷ್ಟ್ರಗಳಿಗೆ ಎಚ್ಚರಿಕೆ ಗಂಟೆಯಾಗಿದೆ.
ಚೀನಾ ಸರಕಾರ ಇದೇ ಅವಧಿಯಲ್ಲಿ ತೈವಾನ್‌ ಜೊತೆಗೂ ಕಿರಿಕ್‌ ಮಾಡಿಕೊಂಡಿದೆ. ಹಾಗೆಯೇ, ಕೊರೊನಾ ವೈರಸ್‌ ಹರಡಲು ಚೀನಾವೇ ಕಾರಣ ಎಂದ ಆಸ್ಪ್ರೇಲಿಯಾದ ಜೊತೆಗೆ ವಾಗ್ವಾದಕ್ಕಿಳಿದಿದೆ ಚೀನಾ. ಹಾಗಾಗಿ, ಚೀನಾದ ನೆರೆಯ ರಾಷ್ಟ್ರಗಳೊಂದಿಗಿನ ಕಿರಿಕಿರಿಯ ಭಾಗವಾಗಿಯೇ ಗಲ್ವಾನ್‌ ಕಣಿವೆಯ ಮೇಲಿನ ಕದನ ಎಂದು ಹೇಳಬಹುದು.
ಜಾಗತಿಕವಾಗಿ ತನ್ನ ಪ್ರಾಬಲ್ಯವನ್ನು ಪ್ರತಿಷ್ಠಾಪಿಸಲು 2020 ವರ್ಷವೇ ಸೂಕ್ತ ಎಂದು ಚೀನಾ ಸರಕಾರ ಭಾವಿಸಿದಂತಿದೆ. ಜಗತ್ತಿನಾದ್ಯಂತ ಕೊರೊನಾ ಸೃಷ್ಟಿಸಿರುವ ತಲ್ಲಣ ಹಾಗೂ ಭೀತಿಯೇ ತನ್ನ ವಿಸ್ತರಣಾ ಅಜೆಂಡಾವನ್ನು ಜಾರಿಗೊಳಿಸಲು, ಏಷ್ಯಾದಲ್ಲಿ ನಿರ್ವಿವಾದ ರಾಷ್ಟ್ರವಾಗಿ ಹೊರಹೊಮ್ಮಲು ತನಗೆ ಜೀವಮಾನದಲ್ಲಿ ಒಮ್ಮೆ ದೊರೆಯಬಹುದಾದ ಅವಕಾಶ ಎಂದು ತಿಳಿದುಕೊಂಡಿದೆ. ಇದರೊಂದಿಗೆ ಸೂಪರ್‌ ಪವರ್‌ ಅಮೆರಿಕಕ್ಕೆ ಪ್ರಬಲ ಸವಾಲು ಹಾಕುವ ಪ್ಲ್ಯಾನ್‌ ಮಾಡಿಕೊಂಡಿದೆ. 2012ರಲ್ಲಿ ಜಿನ್‌ ಪಿಂಗ್‌ ಚೀನಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ, ಅವರು ಎರಡು ಡೆಡ್‌ಲೈನ್‌ಗಳನ್ನು ಹಾಕಿಕೊಂಡಿದ್ದರು. ಈ ಪೈಕಿ ಎರಡನೆಯ ಡೆಡ್‌ಲೈನ್‌- 2049ರ ಹೊತ್ತಿಗೆ ಚೀನಾ ಪರಿಪೂರ್ಣ ಅಭಿವೃದ್ಧಿ, ಸಂಪತ್ಭರಿತ ಹಾಗೂ ಶಕ್ತಿಶಾಲಿ ರಾಷ್ಟ್ರವಾಗಿ ಉದಯಿಸಬೇಕು. ಚೀನಾ ಯಾವಾಗಲೂ ದಶಕಗಳಷ್ಟು ಮುಂದೆ ಯೋಚನೆ ಮಾಡುತ್ತದೆ ಮತ್ತು ಗಲ್ವಾನ್‌ ಭೀಕರ ಘಟನೆಯೂ ಸೇರಿದಂತೆ ಕಳೆದ ಕೆಲವು ತಿಂಗಳಿಂದ ನಡೆಯುತ್ತಿರುವ ಸರಣಿ ಘಟನಾವಳಿಗಳು ಚೀನಾ ರೂಪಿಸಿದ ಗ್ಲ್ಯಾಂಡ್‌ ಪ್ಲ್ಯಾನ್‌ನ ಭಾಗವೇ ಆಗಿದೆ ಎಂಬುದು ವಿಶ್ಲೇಷಕ ಅಭಿಪ್ರಾಯವಾಗಿದೆ. ಆದರೆ, ಇದು ಹೇಗೆ ಅಂತ್ಯವಾಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ.

ಟೆಂಟ್‌ನಿಂದ ಶುರುವಾಯ್ತು ಜಗಳ
ಕಳೆದ ಕೆಲವು ವಾರಗಳಿಂದ ಗಲ್ವಾನ್‌ ನದಿ ಕಣಿವೆಯಲ್ಲಿ ಚೀನಾ ಮತ್ತು ಭಾರತದ ಯೋಧರ ಮುಖಾಮುಖಿ ನಡೆಯುತ್ತಿತ್ತು. ಭಾರತಕ್ಕೆ ಸೇರಿದ ಜಾಗದಲ್ಲಿ ಚೀನಾದ ಹಲವು ಟೆಂಟ್‌ಗಳು ಎದ್ದಿದ್ದು ಹಾಗೂ ರಸ್ತೆ ನಿರ್ಮಾಣವನ್ನು ಭಾರತದ ಯೋಧರು ಆಕ್ಷೇಪಿಸಿದ್ದರು. ಇದನ್ನು ಬಗೆಹರಿಸಲು ಜೂ.6ರಂದು ಕೋರ್‌ ಕಮಾಂಡರ್‌ಗಳ ಮಟ್ಟದ ಸಭೆ ನಡೆದಿತ್ತು. ಎರಡೂ ಕಡೆಯವರೂ ಪರಸ್ಪರ ಒಪ್ಪಂದಕ್ಕೆ ಬಂದು, ಬಿಕ್ಕಟ್ಟು ನಿವಾರಿಸಲು ಮೊದಲ ಯತ್ನವಾಗಿ ಶಾಯಕ್‌ ಜಂಕ್ಷನ್‌ನಿಂದ ಒಂದು ಕಿಲೋಮೀಟರ್‌ನಷ್ಟು ಹಿಂದೆ ಸರಿಯಲು ಒಪ್ಪಿದ್ದರು.
ಈ ಹಿಂದೆ ಸರಿಯುವ ಪ್ರಕ್ರಿಯೆಗೆ ಭಾರತದ ಕಡೆಯಿಂದ ಉಸ್ತುವಾರಿ ವಹಿಸಿದ್ದವರು ಈಗ ಹುತಾತ್ಮರಾಗಿರುವ ಕರ್ನಲ್‌ ಸಂತೋಷ್‌ ಬಾಬು. ಭಾರತೀಯರು ಹಿಂದೆ ಸರಿದಿದ್ದರೂ, ಚೀನಾದ ಒಂದು ಟೆಂಟ್‌ ಮಾತ್ರ ಅಲ್ಲೇ ಇರುವುದನ್ನು ಅವರು ಗಮನಿಸಿದರು. ಕೂಡಲೇ ಚೀನಾದ ಸೈನಿಕರು ಹೊಯ್‌ಕಯ್‌ಗೆ ಮುಂದಾದರು. ಬ್ಯಾಟ್‌, ದೊಣ್ಣೆ, ತಂತಿಗಳಿಂದ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದರು. ಭಾರತೀಯರು ಯೋಧರು ಇದಕ್ಕೆ ತಯಾರಾಗಿ ಹೋಗಿರಲಿಲ್ಲ. ಆದರೆ, ಚೀನೀಯರ ದಾಳಿಯನ್ನು ಸಮರ್ಥವಾಗಿಯೇ ಎದುರಿಸಿದರು.

ಬಂದೂಕುಗಳನ್ನು ಹೊಂದಿರಲಿಲ್ಲ
ಭಾರತ- ಚೀನಾ ಗಡಿಯಲ್ಲಿ ಕಾವಲು ಕಾಯುವ ಉಭಯ ದೇಶಗಳ ಪ್ಯಾಟ್ರೋಲಿಂಗ್‌ ಯೋಧರು ಬಂದೂಕುಗಳನ್ನು ಧರಿಸಿರುವಂತಿಲ್ಲ. ಇದು ಪರಸ್ಪರರ ನಡುವೆ ವಿಶ್ವಾಸ ವೃದ್ಧಿಗಾಗಿ 1996ರಲ್ಲಿ ನಡೆದ ಒಪ್ಪಂದದ ಒಂದು ಅಂಶ. ಮಿಲಿಟರಿ ಸಾಧನಗಳನ್ನೂ ಗಡಿಯ ಸಮೀಪಕ್ಕೆ ಒಯ್ಯುವಂತಿಲ್ಲ. ಯಾವುದೇ ಮಿಲಿಟರಿ ಡ್ರಿಲ್‌ ನಡೆಸುವಂತಿಲ್ಲ. ಗಡಿಯ ಸಮೀಪ ವಿಮಾನ, ಹೆಲಿಕಾಪ್ಟರ್‌ ಅಥವಾ ಡ್ರೋನ್‌ ಹಾರಿಸುವಂತಿಲ್ಲ.

ನದಿಗೆ ದೂಡಿದರು
ಚೀನಾದ ಯೋಧರ ಬ್ಯಾಟ್‌- ದೊಣ್ಣೆಗಳನ್ನು ಬರಿಗೈಯಿಂದ ಎದುರಿಸಿದ ಭಾರತೀಯ ಯೋಧರನ್ನು ಚೀನೀಯರು ಗಾಯಗೊಳಿಸಿ ಪಕ್ಕದಲ್ಲಿದ್ದ ಗಲ್ವಾನ್‌ ನದಿಗೆ ತಳ್ಳಿದರು. ಈ ನದಿಯ ನೀರು ಆಳದಲ್ಲಿದ್ದು, ವೇಗವಾಗಿ ಹರಿಯುತ್ತದೆ. ಜೊತೆಗೆ ಅತ್ಯಂತ ಶೀತಲವಾದ ಹಿಮನೀರು. ಇದರಿಂದ ಸೈನಿಕರ ಗಾಯಗಳು ಉಲ್ಬಣಿಸಿದೆ. ಗ್ಯಾಲ್ವನ್‌ ಪ್ರದೇಶದ ಭಾರತೀಯ ಕಡೆಯಲ್ಲಿ ವಾಹನಗಳು ತೆರಳುವುದಿಲ್ಲ. ಹೀಗಾಗಿ ಗಾಯಗೊಂಡ ಸೈನಿಕರನ್ನು ಬೇಸ್‌ ಕ್ಯಾಂಪ್‌ಗೆ ಎತ್ತಿಕೊಂಡು ತರಲಾಯಿತು. ಈ ಪ್ರದೇಶ ಸಮುದ್ರ ಮಟ್ಟದಿಂದ 14,000 ಅಡಿ ಎತ್ತರದಲ್ಲಿದ್ದು, ಆಮ್ಲಜನಕದ ಕೊರತೆಯಿದೆ. ಇದರಿಂದ ಗಾಯಾಳುಗಳಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಹೆಚ್ಚಿನ ಚಿಕಿತ್ಸಾ ವ್ಯವಸ್ಥೆ ಸ್ಥಳದಲ್ಲಿ ಇಲ್ಲದುದರಿಂದ, ಇಪ್ಪತ್ತು ಮಂದಿ ಹುತಾತ್ಮರಾಗಿದ್ದಾರೆ.

ಗಡಿಯಲ್ಲಿ ಸೇನೆ ಜಮಾವಣೆ
ಗಲ್ವಾನ್‌ ಕಣಿವೆಯಲ್ಲಿ ನಡೆದ ಚಕಮಕಿ ಹಾಗೂ ಯೋಧರ ಸಾವಿನ ಹಿನ್ನೆಲೆಯಲ್ಲಿ ಎರಡೂ ದೇಶಗಳು ಗಡಿ ಪ್ರದೇಶದಲ್ಲಿ ಹೆಚ್ಚಿನ ಸೇನೆ ಜಮಾವಣೆ ನಡೆಸಿವೆ. ಭಾರತೀಯ ವಾಯುಸೇನೆಯ ವಿಮಾನಗಳನ್ನು ಗಡಿಗೆ ಇನ್ನಷ್ಟು ಹತ್ತಿರದ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಚೀನಾ ಸೇನೆ ಸುಮಾರು 6000ದಷ್ಟು ಸೈನಿಕರನ್ನು, ಟ್ಯಾಂಕ್‌ ಹಾಗೂ ಮದ್ದುಗುಂಡುಗಳನ್ನು ಗಲ್ವಾನ್‌ ಪ್ರದೇಶಕ್ಕೆ ಕಳಿಸಿದೆ. ಭಾರತ ಕೂಡ ಸಾಕಷ್ಟು ಸಂಖ್ಯೆಯ ಸೈನಿಕರನ್ನು ಗಡಿಯುದ್ದಕ್ಕೂ ಜಮಾವಣೆ ಮಾಡಿದೆ. ಈ ಪ್ರಕ್ರಿಯೆಯ ಒಟ್ಟಾರೆ ಜವಾಬ್ದಾರಿಯನ್ನು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ವಹಿಸಿಕೊಂಡಿದ್ದಾರೆ. ಗಲ್ವಾನ್‌ ಮಾತ್ರವಲ್ಲದೆ, ಚೀನಾದೊಂದಿಗೆ ಗಡಿ ಹಂಚಿಕೊಂಡಿರುವಲ್ಲೆಲ್ಲ ಸೈನಿಕರನ್ನು ಅಲರ್ಟ್‌ ಮಾಡಲಾಗಿದೆ.

ತಿಕ್ಕಾಟಕ್ಕೆ ಕಾರಣವಾದ ರಸ್ತೆ ನಿರ್ಮಾಣ
ಉಭಯ ದೇಶಗಳ ಸೈನಿಕರ ತಿಕ್ಕಾಟಕ್ಕೆ ಕಾರಣವಾಗಿರುವುದು ರಸ್ತೆ ನಿರ್ಮಾಣ. ಗಡಿಯ ಸಮೀಪ, ನಮ್ಮದೇ ನೆಲದಲ್ಲಿ ರಸ್ತೆ ನಿರ್ಮಿಸುವುದಕ್ಕೂ ಚೀನಾ ಸದಾ ಆಕ್ಷೇಪ ತೆಗೆಯುತ್ತದೆ. ಈಗ ಚೀನಾದ ಆಕ್ಷೇಪಕ್ಕೆ ಕಾರಣವಾಗಿರುವುದು ದರ್ಬುಕ್‌- ಶಾಯಕ್‌- ದೌಲತ್‌ ಬೇಗ್‌ ಓಲ್ಡೀ ರಸ್ತೆ(ಡಿಎಸ್‌ಡಿಬಿಒ). ಇದು ಸುಮಾರು 255 ಕಿಲೋಮೀಟರ್‌ ಉದ್ದವಾಗಿದೆ. ಇದು ಎಷ್ಟು ಪ್ರಮುಖ ಎಂದರೆ, ಇದು ದೌಲತ್‌ ಬೇಗ್‌ ಓಲ್ಡೀ ವಿಮಾನ ನಿಲ್ದಾಣದಿಂದ ಲೇಹ್‌ ನಡುವಿನ ಪ್ರಯಾಣ ಸಮಯವನ್ನು 2 ದಿನಗಳಿಂದ 6 ಗಂಟೆಗಳಿಗೆ ಇಳಿಸುತ್ತದೆ. ಇದು ಗಲ್ವಾನ್‌ ನದಿಯ ಹಾಗೂ ವಾಸ್ತವಿಕ ಗಡಿರೇಖೆಯ ಪಕ್ಕದಲ್ಲೇ ಹಾದುಹೋಗುತ್ತದೆ. ಕ್ಸಿನ್‌ಜಿಯಾಂಗ್‌ ಮತ್ತು ಟಿಬೆಟ್‌ ನಡುವಿನ ಕಾರಕೋರಂ ಹೆದ್ದಾರಿ ಹಾದುಹೋಗಿರುವ ಆಕ್ಸಾಯ್‌ ಚಿನ್‌ ಪ್ರದೇಶವೂ ಈ ಭಾರತ ನಿರ್ಮಿತ ರಸ್ತೆಯ ಪಕ್ಕದಲ್ಲೇ ಇರಲಿದೆ. ಯುದ್ಧ ಸಮಭವಿಸಿದರೆ ಭಾರತಕ್ಕೆ ತನ್ನ ಸೇನೆಯನ್ನು ಕ್ಷಿಪ್ರ ಅವಧಿಯಲ್ಲಿ ಇಲ್ಲಿಗೆ ಕಳುಹಿಸಲು ಸಾಧ್ಯವಾಗುತ್ತದೆ. ಇದರಿಂದ ಚೀನಾಕ್ಕೆ ಆತಂಕ ಉಂಟಾಗಿದ್ದು, ರಸ್ತೆ ನಿರ್ಮಾಣಕ್ಕೆ ಕ್ಯಾತೆ ತೆಗೆಯುತ್ತಿದೆ.

ತನ್ನದೆಂದು ಹೇಳಿರಲೇ ಇಲ್ಲ
ಗಲ್ವಾನ್‌ ಪ್ರದೇಶ ತನ್ನದೆಂದು ಚೀನಾ ಹೇಳಿಕೊಳ್ಳುತ್ತಿರುವುದು ಈಗ. ಇದಕ್ಕೂ ಮೊದಲು ಅದು ಎಂದೂ ತನ್ನ ಭಾಗ ಎಂದು ಚೀನಾ ಹೇಳಿಕೊಂಡಿರಲೇ ಇಲ್ಲ. 1956ರಲ್ಲಿ ಆಕ್ಸಾಯ್‌ ಚಿನ್‌ ತನ್ನದೆಂದು ಚೀನಾ ಭೂಪಟದಲ್ಲಿ ಗುರುತಿಸಿದಾಗ, ಗಲ್ವಾನ್‌ ಅನ್ನು ಅದರಲ್ಲಿ ತೋರಿಸಿರಲಿಲ್ಲ. ನಂತರ ಭಾರತ ಇಲ್ಲಿ ಮಿಲಿಟರಿ ಶಿಬಿರಗಳನ್ನು ಸ್ಥಾಪಿಸಿತ್ತು. 1962ರ ಯುದ್ಧದಲ್ಲಿ ಇದನ್ನು ಚೀನಾ ಆಕ್ರಮಿಸಿತ್ತು.

ಗಲ್ವಾನ್‌ ತನ್ನದೇ ಎಂದ ಚೀನಾ
ಭಾರತೀಯ 20 ಯೋಧರ ಸಾವಿಗೆ ನೆಪವಾದ ಗಲ್ವಾನ್‌ ನದಿ ಕಣಿವೆ ಚೀನಾ ಸಾರ್ವಭೌಮತ್ವಕ್ಕೆ ಒಳಪಟ್ಟಿದೆ ಎಂದು ಚೀನಾ ವಿದೇಶಾಂಗ ಹಕ್ಕುದಾರಿಕೆ ಮಂಡಿಸಿದೆ.
ಲಡಾಖ್‌ನ ಈ ಪ್ರದೇಶ ಎಂದಿಗೂ ಚೀನಾಕ್ಕೆ ಸೇರಿದ್ದಾಗಿದೆ ಎಂದು ಹೇಳುತ್ತಲೇ ಭಾರತದೊಂದಿಗೆ ಬೀಜಿಂಗ್‌ ಇನ್ನು ಹೆಚ್ಚಿನ ಸಂಘರ್ಷವನ್ನು ಬಯಸುವುದಿಲ್ಲ ಎಂದೂ ಹೇಳಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಝಾವೊ ಲಿಜಿಯನ್‌ ಅವರು, ‘‘ಗಲ್ವಾನ್‌ ಕಣಿವೆಯ ಸಾರ್ವಭೌಮತ್ವ ಎಂದಿಗೂ ಚೀನಾಕ್ಕೆ ಸೇರಿದೆ,’’ ಎಂದು ಸ್ಪಷ್ಟವಾಗಿ ಹೇಳಿದರು.
ಗಲ್ವಾನ್‌ ಗಡಿಗೆ ಸಂಬಂಧಿಸಿದ ವಿಷಯವೂ ಈಗಾಗಲೇ ಇತ್ಯರ್ಥವಾಗಿದ್ದು ಈಗೇಕೆ ಚೀನಾ ಅದರ ಮೇಲೆ ಹಕ್ಕು ಸಾಧಿಸುತ್ತಿದೆ ಎಂಬ ಪ್ರಶ್ನೆಗೆ ನೇರವಾಗಿ ಉತ್ತರ ನೀಡದ ಝಾವೊ, ‘‘ಗಲ್ವಾನ್‌ ಪ್ರದೇಶಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೇನಾ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ ನಡೆಯುತ್ತಿದೆ. ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದು ತುಂಬ ಸ್ಪಷ್ಟವಾಗಿದೆ. ಇದು ಚೀನಾಗೆ ಸೇರಿದ ಗಡಿಯಲ್ಲಿ ನಡೆದಿದೆ ಮತ್ತು ಇದಕ್ಕೆ ಚೀನಾವನ್ನು ಗುರಿಯಾಗಿಸಬಾರದು,’’ ಎಂದು ಹೇಳಿದರು. ಎಷ್ಟು ಚೀನಾ ಯೋಧರು ಮೃತಪಟ್ಟಿದ್ದಾರೆಂಬುದನ್ನು ತಿಳಿಸಲು ಅವರು ನಿರಾಕರಿಸಿದರು.

ಕೊನೆಯ ಗುಂಡು ಹಾರಿದ್ದು ಯಾವಾಗ?
ನೀವು ಪಾಕಿಸ್ತಾನದ ಗಡಿಯಲ್ಲಿ ಗುಂಡಿನ ಚಕಮಕಿ ಎಂಬ ಪದ ಪ್ರಯೋಗ ಕೇಳಿಯೇ ಇರುತ್ತಿರಿ. ಆದರೆ, ಚೀನಾ ಗಡಿಯಲ್ಲಿ ಯಾವತ್ತಾದರೂ ಗುಂಡಿನ ಚಕಮಕಿ ನಡೆಯಿತು ಎಂದು ಕೇಳಿದ್ದೀರಾ? ಕೇಳಿರಲು ಸಾಧ್ಯವಿಲ್ಲ. ಯಾಕೆಂದರೆ, ಉಭಯ ರಾಷ್ಟ್ರಗಳು ಮಾಡಿಕೊಂಡಿರುವ ಕೆಲವು ಒಪ್ಪಂದಗಳಿಂದಾಗಿ ಗಡಿಯಲ್ಲಿ ಗುಂಡಿನ ಸದ್ದು ಇರುವುದಿಲ್ಲ! ಹಾಗಾದರೆ, ಈ ಗಡಿಯಲ್ಲಿ ಕೊನೆಯ ಬಾರಿ ಗುಂಡು ಹಾರಿದ್ದು ಯಾವಾಗ?
1962ರ ಯುದ್ಧದ ಬಳಿಕ ಭಾರತ ಮತ್ತು ಚೀನಾ ಗಡಿಯಲ್ಲಿ ಒಮ್ಮೆ ಗುಂಡಿನ ಚಕಮಕಿ ನಡೆದಿದೆ. 1967 ಸಿಕ್ಕಿಮ್‌ನಲ್ಲಿ ಉಭಯ ರಾಷ್ಟ್ರಗಳ ಯೋಧರ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಆಗಲೂ ಸಾವು ನೋವು ಸಂಭವಿಸಿತ್ತು. ಇದೇ ಗುಂಡು ಹಾರಿದ ಕೊನೆಯ ಘಟನೆ ಎಂದು ಹೇಳುತ್ತಾರಾದರೂ, ಇದಾದ 8 ವರ್ಷದ ಬಳಿಕ ಅರುಣಾಚಲ ಪ್ರದೇಶದ ತುಲುಂಗ್‌ ಲಾ ಪಾಸ್‌ನಲ್ಲೂ ಚೀನಾ ಗುಂಡು ಹಾರಿಸಿತ್ತು. ಆದರೆ, ಈ ಘಟನೆ ಅಷ್ಟಾಗಿ ಗಮನ ಸಳೆದಿಲ್ಲ. ಆಗಲೂ ನಾಲ್ವರು ಭಾರತೀಯರು ಪ್ರಾಣ ನೀಗಿದ್ದರು. 1975 ಅಕ್ಟೋಬರ್‌ 20ರಂದು ಚೀನಿ ಯೋಧರು ಎಲ್‌ಎಸಿ ದಾಟಿ ಭಾರತದೊಳಗೆ ನುಗ್ಗಿದ್ದರು ಎಂದು ಭಾರತ ಹೇಳಿತ್ತು. ಆದರೆ, ಇದನ್ನು ಚೀನಾ ನಿರಾಕರಿಸಿತ್ತು. ಅಲ್ಲದೆ ಚೀನಿ ಪೋಸ್ಟ್‌ ಮೇಲೆ ಭಾರತದ ಕಡೆಯಿಂದ ದಾಳಿ ನಡೆದಿದೆ ಎಂದು ಆರೋಪಿಸಿತ್ತು ಕೂಡ. ವಾಸ್ತವದಲ್ಲಿ ಚೀನಾ ಯೋಧರೇ ಗುಂಡು ಹಾರಿಸಿದ್ದರು ಎಂದು ನವೆಂಬರ್‌ 3ರಂದು ಫ್ರಾನ್ಸ್‌ ಪತ್ರಿಕೆಯೊಂದರಲ್ಲಿ ಸುದ್ದಿ ಬಹಿರಂಗವಾಗಿತ್ತು. ಘಟನೆ ನಡೆದ ವಾರದ ಬಳಿಕ ಭಾರತವು ತನ್ನ ಯೋಧರ ಶವಗಳನ್ನು ಪಡೆದುಕೊಂಡಿತ್ತು.

ಡ್ರ್ಯಾಗನ್‌ ಸಂಹರಿಸಲು ರಾಮ ಸಿದ್ಧ!
ಗಲ್ವಾನ್‌ ಕಣಿವೆಯಲ್ಲಿ ನಡೆದ ಚೀನಾ ಮತ್ತು ಭಾರತೀಯ ನಡುವಿನ ಸಂಘರ್ಷವನ್ನು ಭಾರತೀಯ ಮಾಧ್ಯಮಗಳು ತುಂಬ ಮಹತ್ವ ನೀಡಿದ ಪ್ರಸಾರ ಮಾಡಿದರೆ, ಪ್ರಕಟಿಸಿದರೆ ಚೀನಾದ ಮಾಧ್ಯಮಗಳು ಏನೂ ಆಗಿಲ್ಲ ಎಂಬಂತೆಯೇ ವರ್ತಿಸಿವೆ. ಚೀನಾದ ಬಹುತೇಕ ಪತ್ರಿಕೆಗಳು, ಟಿವಿಗಳು ಈ ವಿಷಯವನ್ನು ನಗಣ್ಯವಾಗಿ ಪರಿಗಣಿಸಿವೆ. ಚೀನಾದ ಸರಕಾರಿ ಮಾಧ್ಯಮವಾಗಿರುವ ಗ್ಲೋಬಲ್‌ ಟೈಮ್ಸ್‌ ಐವರು ಚೀನಿ ಯೋಧರು ಮೃತಪಟ್ಟಿದ್ದಾರೆಂಬುದನ್ನು ಹೇಳಿದ್ದು ಬಿಟ್ಟರೆ ಮತ್ತೆನೂ ವಿವರಗಳನ್ನು ಒದಗಿಸಿಲ್ಲ. ಚೀನಾದ ಬಹುತೇಕ ಮಾಧ್ಯಮಗಳು ಇದೇ ರೀತಿಯಾಗಿ ವರ್ತಿಸಿವೆ. ಆದರೆ, ಥೈವಾನ್‌ ಸೇರಿದಂತೆ ಚೀನಾದ ನೆರೆಯ ರಾಷ್ಟ್ರಗಳು ಮಾತ್ರ ಈ ಘಟನೆಗೆ ಹೆಚ್ಚಿನ ಮಹತ್ವ ನೀಡಿ ಸುದ್ದಿ ಪ್ರಕಟಿಸಿವೆ. ಥೈವಾನ್‌ನ ‘ಥೈವಾನ್‌ ನ್ಯೂಸ್‌’ ಪತ್ರಿಕೆಯಂತೂ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಡ್ರ್ಯಾಗನ್‌ಗೆ ರಾಮ ಗುರಿಯಿಟ್ಟು ಬಾಣ ಬಿಡುವ ಚಿತ್ರವನ್ನು ಹಾಕಿ, ಭಾರತದ ರಾಮ ಚೀನಾ ಡ್ರ್ಯಾಗನ್‌ ಅನ್ನು ಎದುರಿಸಲಿದ್ದಾನೆಂಬ ಕ್ಯಾಪ್ಷನ್‌ ನೀಡಿದೆ. ಈ ಚಿತ್ರ ಇಂಟರ್ನೆಟ್‌ನಲ್ಲಿ ಸಖತ್‌ ವೈರಲ್‌ ಆಗಿದೆ. ಇನ್ನ ಭಾರತದ ಮಾಧ್ಯಮಗಳಂತೂ 20 ಯೋಧರ ಹುತಾತ್ಮ ಸುದ್ದಿಗೆ ಹೆಚ್ಚಿನ ಮಹತ್ವ ನೀಡಿ, ಚೀನಾದ ವಿರುದ್ಧ ಪ್ರತಿಕಾರ ತೆಗೆದುಕೊಳ್ಳುವ ಒತ್ತಡವನ್ನು ಹಾಕುತ್ತಿವೆ.

ನದಿಗೆ ಗಲ್ವಾನ್‌ ಹೆಸರು ಬಂದಿದ್ದು ಹೇಗೆ?
ಭಾರತದ ಬಹುತೇಕ ನದಿಗಳಿಗೆ ದೇವತೆಗಳ ಹೆಸರುಗಳಿವೆ. ಇದಕ್ಕೆ ಕೆಲವು ನದಿಗಳ ಹೆಸರು ಅಪವಾದ ಆಗಿರಬಹುದು. ಆದರೆ, ‘ಗಲ್ವಾನ್‌’ ನದಿಯ ಹೆಸರಿನ ಹಿಂದೆ ಯಾವುದೇ ಪೌರಾಣಿಕ ಹಿನ್ನೆಲೆ ಇಲ್ಲ. ಸಿಂಧು ನದಿಯ ಪ್ರಮುಖ ಉಪನದಿಯಾಗಿರುವ ಗಲ್ವಾನ್‌ ನದಿ ಹೆಸರಿನ ಹಿಂದೆ ರೋಚಕ ಇತಿಹಾಸವಿದೆ.
‘ಗುಲಾಮ್‌ ರೂಸಲ್‌ ಗಲ್ವಾನ್‌’- ಇವರು ಲಡಾಖ್‌ನ ಅಪ್ರತಿಮ ಸಾಹಸಿ ಮತ್ತು ಶೋಧಕ. 19ನೇ ಶತಮಾನದಲ್ಲಿ ಟಿಬೆಟ್‌ನ ಪ್ರದೇಶದಲ್ಲಿ ನಡೆದ ಅನೇಕ ಶೋಧಗಳ ಹಿಂದೆ ಈ ಗಲ್ವಾನ್‌ ಅವರ ನೆರವು, ಮಾರ್ಗದರ್ಶನವಿದೆ. 12ನೇ ವಯಸ್ಸಿನಲ್ಲೇ ಸಾಹಸಿ ಕಾರ್ಯಕ್ಕೆ ಮುಂದಾದ ಗಲ್ವಾನ್‌, ಅಂದಿನ ಅನೇಕ ಸುಪ್ರಿಸಿದ್ಧ ಶೋಧಕರಿಗೆ ಈ ಪ್ರದೇಶದಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದ. ಬ್ರಿಟನ್‌, ಫ್ರಾನ್ಸ್‌, ಇಟಲಿ ಸೇರಿದಂತೆ ಯುರೋಪ್‌ನ ಅನೇಕರ ಸಾಹಸಿಗರಿಗೆ ಈತ ಜೊತೆಗಾರನಾಗಿದ್ದ. ದುರ್ಗಮ ಪ್ರದೇಶದಲ್ಲಿ ಸಾಹಸಿ ತಂಡಗಳನ್ನು ಪಾರು ಮಾಡಿ, ದಾರಿ ತೋರಿದ ಹೆಗ್ಗಳಿಕೆ ಗಲ್ವಾನ್‌ಗಿದೆ. ಹಾಗಾಗಿಯೇ ಈ ಪ್ರದೇಶದ ಹಲವು ಪ್ರದೇಶಗಳಿಗೆ ಗಲ್ವಾನ್‌ ಹೆಸರಿದೆ. ಚೀನಾ ಮತ್ತು ಭಾರತದ ನಡುವಿನ ಆಯಕಟ್ಟಿನ ಸ್ಥಳಕ್ಕೆ ಕಾರಣವಾಗಿರುವ, ಸಿಂಧು ನದಿಗೆ ಸೇರುವ ಮುನ್ನ 80 ಕಿ.ಮೀ. ಹರಿಯುವ ಈ ನದಿಗೆ ‘ಗಲ್ವಾನ್‌ ಎಂದು ಹೆಸರಿಟ್ಟು ಗೌರವಿಸಲಾಗಿದೆ. ತೀರಾ ಕೆಳಮಟ್ಟದಿಂದ ತನ್ನ ವೃತ್ತಿ ಆರಂಭಿಸಿದ ಗಲ್ವಾನ್‌ 47ನೇ ವಯಸ್ಸಿಗೆ ಅಕಾಲ ಮರಣಕ್ಕೀಡಾಗುವ ಹೊತ್ತಿಗೆ ಲೇಹ್‌ನ ಅಂದಿನ ಬ್ರಿಟಿಷ್‌ ಜಂಟಿ ಆಯುಕ್ತರಿಗೆ ಮುಖ್ಯ ಸಹಾಯಕನಾಗುವಷ್ಟರ ಮಟ್ಟಿಗೆ ಬೆಳೆದಿದ್ದ. ಈ ಎಲ್ಲ ಸಂಗತಿಗಳನ್ನು ಅವರ ಮರಿಮೊಮ್ಮಗ ಹೇಳಿಕೊಂಡಿದ್ದಾರೆ.

ಮದುವೆಯಾಗಲಿದ್ದ ಹುತಾತ್ಮ ಯೋಧರು
ಗಲ್ವಾನ್‌ ಕಣಿವೆಯಲ್ಲಿ ಹುತಾತ್ಮರಾದ ಇಬ್ಬರು ಯೋಧರಿಗೆ ಇದೇ ವರ್ಷದ ಕೊನೆಯಲ್ಲಿ ವಿವಾಹ ನಿಶ್ಚಯಿಸಲಾಗಿತ್ತು. ಆದರೆ ಹೆತ್ತವರು ಅವರ ಮದುವೆ ನೋಡುವ ಬದಲು ಮರಣವನ್ನು ಕಾಣಬೇಕಾಗಿ ಬಂದಿದೆ.
ಚಂಡೀಗಢದ ಯೋಧ ಗುರ್ಬೀಂದರ್‌ ಸಿಂಗ್‌(22)ಗೆ ಇದೇ ವರ್ಷದ ಕೊನೆಯಲ್ಲಿ ವಿವಾಹ ಕಳೆದ ವರ್ಷ ಇವರ ನಿಶ್ಚಿತಾರ್ಥ ನಡೆದಿದ್ದು, ಈ ವರ್ಷ ಅವರು ಸೇನೆಯಿಂದ ಮರಳುವುದನ್ನೇ ಕಾಯಲಾಗುತ್ತಿತ್ತು. ಚತ್ತೀಸ್‌ಗಢದ ಕಾಂಕೆರ್‌ ಜಿಲ್ಲೆಯ ಗಣೇಶ್‌ರಾಮ್‌ ಕುಂಜಮ್‌ ಅವರ ಮದುವೆಯನ್ನೂ ಇದೇ ವರ್ಷ ಮಾಡಲು ನಿರ್ಧರಿಸಲಾಗಿತ್ತು.
ಪಂಜಾಬ್‌ನ ಯೋಧರಲ್ಲಿ ನಾಲ್ವರು ಹುತಾತ್ಮರಾಗಿದ್ದಾರೆ. ಗುರುದಾಸ್ಪುರದ ಭೋಜರಾಜ್‌ ಗ್ರಾಮದ ಯೋಧ ನಯೀಬ್‌ ಸುಬೇದಾರ್‌ ಸತ್ನಾಮ್‌ ಸಿಂಗ್‌ ಅವರ ತಂದೆ, ತಮ್ಮ ಮಗನ ಬಲಿದಾನಕ್ಕಾಗಿ ತಾವು ಹೆಮ್ಮೆ ಪಡುವುದಾಗಿ ಹೇಳಿಕೊಂಡಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top