ಜಿ7 – ಅಮೆರಿಕದ ಕರೆ – ಚೀನಾದ ಕರಕರೆ – ಚೀನಾಗೆ ಮುಸುಕಿನ ಗುದ್ದು

ಜಾಗತಿಕ ವಾಣಿಜ್ಯ, ಆರ್ಥಿಕ ಸಮೀಕರಣವನ್ನು ತಿದ್ದಿ ಬರೆಯುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಜಿ7 ಗಂಪಿನಲ್ಲಿ ಭಾರತವನ್ನೂ ಸೇರಿಸಿಕೊಳ್ಳಬೇಕು ಎಂಬುದು ಅವರ ವಾದ. ಇದು ಯಾಕೆ ಹಾಗೂ ಇದರ ಪರಿಣಾಮಗಳೇನು?

ಜಿ7 ದೇಶಗಳ ಈ ವರ್ಷದ (46ನೇ) ಶೃಂಗಸಭೆ ಜೂನ್‌ 10- 12ರಂದು ಅಮೆರಿಕದ ಕ್ಯಾಂಪ್‌ ಡೇವಿಡ್‌ನಲ್ಲಿ ನಡೆಯಬೇಕಿತ್ತು. ಆದರೆ ಅದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದೂಡಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣ: ‘‘ಹೊಸ ಜಾಗತಿಕ ಸನ್ನಿವೇಶದಲ್ಲಿ ಜಿ7 ಎಂಬುದು ಅಪ್ರಸ್ತುತ ಸಂಘಟನೆಯಾಗಿದೆ. ಭಾರತ, ಆಸ್ಪ್ರೇಲಿಯಾ, ದಕ್ಷಿಣ ಕೊರಿಯಾ ಮತ್ತು ರಷ್ಯಾಗಳನ್ನು ಸೇರಿಸಿ ಅದನ್ನು ಬಲಿಷ್ಠಗೊಳಿಸಬೇಕು.’’ ಟ್ರಂಪ್‌ ಅವರ ಅಭಿಲಾಷೆ ಯಾವಾಗ ಪೂರ್ಣಗೊಳ್ಳುತ್ತದೋ ಗೊತ್ತಿಲ್ಲ. ಅಲ್ಲಿಯವರೆಗೂ ಜಿ7 ಸಮಾವೇಶ ಅನಿರ್ದಿಷ್ಟಾವಧಿಗೆ ಮುಂದೆ ಹೋಗಿದೆ.

ಜಿ7ನಲ್ಲಿ ಯಾರಿದ್ದಾರೆ?
ಜಿ7 ಎಂಬುದು ವಾಣಿಜ್ಯ ವ್ಯವಹಾರದಲ್ಲಿ ಮುಂದುವರಿದ ದೇಶಗಳ ಒಂದು ಸಮೂಹ. ಸದ್ಯ ಇದರಲ್ಲಿರುವ ದೇಶಗಳು ಅಮೆರಿಕ, ಬ್ರಿಟನ್‌, ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ ಮತ್ತು ಜಪಾನ್‌. ಸಮಾವೇಶದಲ್ಲಿ ವಿಶೇಷ ಆಹ್ವಾನಿತರಾಗಿ ಕೆಲವೊಮ್ಮೆ ಇತರ ದೇಶಗಳು ಭಾಗವಹಿಸುವುದುಂಟು. ಉದಾಹರಣೆಗೆ ಕಳೆದ ವರ್ಷ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಯುರೋಪ್‌ ಒಕ್ಕೂಟ ಬಹುತೇಕ ಪ್ರತಿವರ್ಷ ಭಾಗವಹಿಸುತ್ತದೆ. ಪ್ರಸ್ತುತ ಸಂಘಟನೆಯ ಅಧ್ಯಕ್ಷತೆಯನ್ನು ಅಮೆರಿಕ ಹೊತ್ತಿದೆ. 1975ರಲ್ಲಿ ಇದರ ಸ್ಥಾಪನೆಯಾಯಿತು. 1997ರಲ್ಲಿ ರಷ್ಯಾವನ್ನು ಸಂಘಟನೆಗೆ ಸೇರಿಸಿಕೊಳ್ಳಲಾಯಿತು. ಹೀಗಾಗಿ ಇದನ್ನು ಜಿ8 ಎಂದು ಕರೆಯಲಾಯಿತು. 2014ರಲ್ಲಿ, ಪಕ್ಕದ ದೇಶ ಉಕ್ರೇನ್‌ನ ಆಂತರಿಕ ವ್ಯವಹಾರಗಳಲ್ಲಿ ರಷ್ಯಾ ಹಸ್ತಕ್ಷೇಪ ನಡೆಸಿ, ಕ್ರಿಮಿಯಾ ದೇಶ ಅಲ್ಲಿಂದ ವಿಘಟಿತಗೊಳ್ಳಲು ಸಹಾಯ ಮಾಡಿತು. ಹೀಗಾಗಿ ರಷ್ಯಾವನ್ನು ಜಿ8ನಿಂದ ಹೊರಗೆ ಹಾಕಲಾಯಿತು. ಇದರಿಂದ ಒಕ್ಕೂಟ ಮತ್ತೆ ಜಿ7 ಆಯಿತು. ಈಗ ರಷ್ಯಾವನ್ನು ಪುನಃ ಸೇರಿಸಿಕೊಳ್ಳಬೇಕೆಂದು ಟ್ರಂಪ್‌ ಹೇಳುತ್ತಿದ್ದಾರೆ.

ಜಿ7ನ ಪ್ರಸ್ತುತತೆ
1975ರಲ್ಲಿ ಜಿ7 ಸಂಘಟನೆ ರೂಪುಗೊಂಡಾಗ, ಒಟ್ಟಾರೆ ಜಗತ್ತಿನ ಜಿಡಿಪಿಯಲ್ಲಿ ಶೇ.75ರಷ್ಟು ಇದರ ಸದಸ್ಯ ರಾಷ್ಟ್ರಗಳ ಪಾಲಿದ್ದು, ಸಂಘಟನೆ ಬಲಿಷ್ಠವಾಗಿತ್ತು. ಆದರೆ ಇಂದು ಚೀನಾ, ಭಾರತ ಮುಂತಾದ ಇತರ ಬಲಿಷ್ಠ ಅರ್ಥವ್ಯವಸ್ಥೆಗಳು ರೂಪುಗೊಂಡಿದ್ದು, ಜಿ7ನ ಸಾಮರ್ಥ್ಯ‌ ಶಿಥಿಲಗೊಂಡಿದೆ. ಕಳೆದ ದಶಕದಲ್ಲಿ ಜಾಗತಿಕ ಜಿಡಿಪಿಯಲ್ಲಿ ಜಿ7ನ ಪಾಲು ಶೇ.40. ಇಂದು ಜಿ7ಗಿಂತ ಜಿ20 ಸಂಘಟನೆ ಹೆಚ್ಚು ಪ್ರಭಾವಶಾಲಿಯಾಗಿದೆ.

ಜಿ5, ಜಿ7, ಜಿ14, ಜಿ20…
ವಾಣಿಜ್ಯ ವಹಿವಾಟಿನ ಉದ್ದೇಶದಿಂದ ಹಲವಾರು ದೇಶಗಳು ಜೊತೆ ಸೇರಿಕೊಂಡು ಒಕ್ಕೂಟ ರಚಿಸಿಕೊಂಡಿವೆ. ಆಯಾ ಕಾಲದಲ್ಲಿ ಆಪ್ತವಾಗಿರುವ ದೇಶಗಳು ಜೊತೆ ಸೇರಿಕೊಂಡು ರಚಿಸಿದ ಒಕ್ಕೂಟಗಳು ನಂತರದ ಕಾಲದಲ್ಲಿ ಶಿಥಿಲಗೊಂಡದ್ದು ಇದೆ. ಪ್ರಸ್ತುತ ಬಲಿಷ್ಠವಾಗಿರುವ ಸಂಘಟನೆ ಎಂದರೆ ಜಿ20. ಇದರಲ್ಲಿ ಭಾರತ ಮತ್ತು ಚೀನಾ ಸೇರಿದಂತೆ 20 ದೇಶಗಳಿವೆ. ಜಿ5 ಎಂಬುದು ಐದು ದೇಶಗಳ ಸಮೂಹ- ಬ್ರೆಜಿಲ್‌, ಚೀನಾ, ಭಾರತ, ದಕ್ಷಿಣ ಆಫ್ರಿಕ, ಮೆಕ್ಸಿಕೋ. ಜಿ14 ಎಂಬುದು ಮೂಲತಃ ಜಿ5 ಹಾಗೂ ಜಿ7 ದೇಶಗಳ ಸಂಘಟನೆ. ಈ ಒಕ್ಕೂಟಗಳಿಗೆ ದೇಶಗಳು ಸೇರುವುದೂ ಮುನಿಸಿಕೊಂಡು ಬಿಡುವುದೂ ಇದ್ದದ್ದೇ. ಹಾಗೆಯೇ ಏಸಿಯಾನ್‌, ಬ್ರಿಕ್ಸ್‌ ಮುಂತಾದ ಸಂಘಟನೆಗಳೂ ಇವೆ. ಪ್ರತಿಯೊಂದಕ್ಕೂ ಅವುಗಳದೇ ಉದ್ದೇಶ, ಕಾರ್ಯವೈಖರಿ ಇದೆ.

ಚೀನಾ ಆಕ್ರಮಣಕ್ಕೆ ಇದೇ ಕಾರಣ?
ಜಿ7ಗೆ ಭಾರತಕ್ಕೆ ಅಮೆರಿಕ ಆಹ್ವಾನ ನೀಡಿರುವುದು ಚೀನಾದ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಲ್ಲಿ ಚೀನಾ, ಭಾರತದ ಗಡಿಪ್ರದೇಶದ ನಾಲ್ಕಾರು ಕಡೆಗಳಲ್ಲಿ ಕಾಲು ಕೆರೆದು ಗಡಿಯನ್ನು ಉಲ್ಲಂಘಿಸಿ ಬಂದಿರುವುದು ಈ ಬಗ್ಗೆ ತನ್ನ ಅಸಮಾಧಾನವನ್ನು ಸೂಚಿಸಲೆಂದೇ ಎಂದು ಕೆಲವು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಕೊರೊನಾ ವೈರಾಣು ಕುರಿತು ವಿಶ್ವಸಂಸ್ಥೆಯ ತನಿಖೆ, ಅಮೆರಿಕದ ನಿಲುವಿನ ಜೊತೆಗೆ ಭಾರತದ ಸಹಾನುಭೂತಿಗಳು ಚೀನಾವನ್ನು ಕೆರಳಿಸಿವೆ. ಕೊರೊನಾ ವಿಚಾರದಲ್ಲಿ ಕಾಲು ಕೆರೆಯುತ್ತಿರುವ ಅಮೆರಿಕದ ಮುಂದೆ, ತನ್ನ ಪರವಾಗಿ ನಿಲ್ಲುವಂತೆ ಚೀನಾ ಭಾರತವನ್ನು ಕೇಳಿಕೊಂಡಿದೆ. ಇದು ಚಿವುಟಿ ತೊಟ್ಟಿಲು ತೂಗುವ ಚೀನಾದ ನೀತಿಗೆ ಸರಿಯಾಗಿಯೇ ಇದ್ದು, ಭಾರತಕ್ಕೆ ನೀಡಿದ ಎಚ್ಚರಿಕೆ ಇರಬಹುದೆಂದು ಭಾವಿಸಲಾಗುತ್ತಿದೆ. ‘‘ಜಿ7ನ ವಿಸ್ತರಣೆ ಪ್ರಯತ್ನ ಅತ್ಯಂತ ಸಣ್ಣ ವೃತ್ತವೊಂದರ ರಚನೆಯೆನಿಸಲಿದ್ದು, ಚೀನಾದ ವಿರುದ್ಧ ನಡೆಸುವ ಇಂಥ ಯಾವುದೇ ಪ್ರಯತ್ನಗಳು ವಿಫಲವಾಗಲಿವೆ,’’ ಎಂದೇ ಅದು ಹೇಳಿದೆ.

ಈಗೇಕೆ ಬದಲಾವಣೆ?
ಜಿ7 ವಿಸ್ತರಿಸುವ ಟ್ರಂಪ್‌ ಯೋಚನೆಯನ್ನು ಚೀನಾ ವಿರುದ್ಧ ಒಂದು ಬಲಿಷ್ಠ ಒಕ್ಕೂಟವನ್ನು ರೂಪಿಸುವ ಪ್ರಯತ್ನವೆಂದು ತಜ್ಞರು ಹೇಳುತ್ತಿದ್ದಾರೆ. ಬ್ರಿಕ್ಸ್‌, ಜಿ20 ಸೇರಿದಂತೆ ಹಲವು ಬಲಿಷ್ಠ ವ್ಯಾಪಾರ ಒಕ್ಕೂಟಗಳಲ್ಲಿ ಚೀನಾ ಕೂಡ ಇದ್ದು, ಚೀನಾದ ಉಪಸ್ಥಿತಿಯಿಲ್ಲದ ಒಂದು ಬಲಿಷ್ಠ ಒಕ್ಕೂಟವನ್ನು ರಚಿಸುವುದು ಟ್ರಂಪ್‌ ಉದ್ದೇಶವಾಗಿದೆ. ಕಳೆದ ಒಂದು ವರ್ಷದಿಂದಲೂ ಜಿ7 ಕಾರ್ಯವೈಖರಿಯ ಬಗ್ಗೆ ಅಮೆರಿಕಕ್ಕೆ ಸಮಾಧಾನವಿರಲಿಲ್ಲ ಹಾಗೂ ಚೀನಾದ ಹೆಚ್ಚುತ್ತಿರುವ ಪ್ರಭಾವ, ವ್ಯಾಪಾರ ವೈಖರಿಯ ಬಗ್ಗೆ ಆಕ್ರಮಣಕಾರಿ ಟೀಕೆಗಳನ್ನು ಮಾಡುತ್ತಲೇ ಬಂದಿದೆ. ಕೊರೊನಾ ವೈರಾಣುವಿನಿಂದಾಗಿ ತನಗೆ ಆಗಿರುವ ನಷ್ಟದ ಬಗ್ಗೆಯೂ ಅಮೆರಿಕ, ಚೀನಾವನ್ನು ಟೀಕಿಸಿದೆ. ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ಕುಂಠಿತಗೊಳಿಸಲು, ಅದರ ಪಕ್ಕದ ದೇಶವಾದ ಹಾಗೂ ವ್ಯಾಪಾರದಲ್ಲಿ ಚೀನಾಕ್ಕೆ ಪೈಪೋಟಿ ನೀಡುತ್ತಿರುವ ಭಾರತವನ್ನು ಬಳಸಿಕೊಳ್ಳುವುದು ಟ್ರಂಪ್‌ ಒಳ ಉದ್ದೇಶ. ಆಸ್ಪ್ರೇಲಿಯ ಕೂಡ ಇತ್ತೀಚೆಗೆ ಚೀನಾದ ನಿಲುವುಗಳನ್ನು ಕಟುವಾಗಿ ಟೀಕಿಸಿದ್ದು, ಅದನ್ನು ಕೂಡ ಜಿ7ಗೆ ಸೇರಿಸಲು ಟ್ರಂಪ್‌ ಮುಂದಾಗಿರುವುದನ್ನು ಗಮನಿಸಬಹುದು.

ಅಪೇಕ್ಷಿತ ಅತಿಥಿ
ಜಿ7 ದೇಶಗಳ ಸಮಾವೇಶಕ್ಕೆ ಭಾರತವನ್ನು ಆಗಾಗ ಅತಿಥಿಯಾಗಿ ಒಕ್ಕೂಟ ಆಹ್ವಾನಿಸುತ್ತಿದೆ. ಕಳೆದ ವರ್ಷ ಫ್ರಾನ್ಸ್‌ನ ಬಿಯಾರಿಟ್ಸ್‌ ನಲ್ಲಿ ನಡೆದ ಶೃಂಗದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಅದಕ್ಕೂ ಮುನ್ನ ಐದು ಬಾರಿ (2005- 2009) ಆಗಿನ ಪ್ರಧಾನಿ ಮನಮೋಹನ ಸಿಂಗ್‌ ಅವರು ಭಾಗವಹಿಸಿದ್ದರು.

ಟ್ರಂಪ್‌ ನಿಲುವಿಗೆ ಟೀಕೆ
ಭಾರತವನ್ನು ಸೇರಿಸಿಕೊಳ್ಳುವುದಕ್ಕೆ ಯಾರದೇ ಆಕ್ಷೇಪವಿಲ್ಲ. ಆದರೆ ರಷ್ಯಾವನ್ನು ಸೇರಿಸಿಕೊಳ್ಳುವ ಟ್ರಂಪ್‌ ನಿಲುವನ್ನು ಬ್ರಿಟನ್‌ ತಿರಸ್ಕರಿಸಿದೆ. ಈ ಮಾತು ಒಟ್ಟಾರೆ ಜಿ7 ಸದಸ್ಯರಲ್ಲಿ ಗೊಂದಲ ಹುಟ್ಟುಹಾಕಿದೆ. ಟ್ರಂಪ್‌ ಅವರ ‘ಅಮೆರಿಕ ಫರ್ಸ್ಟ್‌’ ಪಾಲಿಸಿ ಇತರ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಎರಡು ಶೃಂಗಸಭೆಗಳಲ್ಲಿ ಜಿ7ನ ಇತರ ಸದಸ್ಯರು ಅಮೆರಿಕ ಅಧ್ಯಕ್ಷರ ಹಲವು ನಿರ್ಧಾರಗಳ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಇರಾನ್‌ ಪರಮಾಣು ಒಪ್ಪಂದ, ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಹಿಂತೆಗೆತ ಇತ್ಯಾದಿ ನಿರ್ಧಾರಗಳು ವಿವಾದವಾಗಿವೆ. ಜರ್ಮನಿಯ ಪ್ರಧಾನಿ ಏಂಜೆಲಾ ಮರ್ಕೆಲ್‌ ಅವರು ಟ್ರಂಪ್‌ರನ್ನು ಕಟುವಾಗಿ ಟೀಕಿಸಿದ್ದು, ಕ್ಯಾಂಪ್‌ ಡೇವಿಡ್‌ ಶೃಂಗಸಭೆಯ ಆಹ್ವಾನವನ್ನೂ ತಿರಸ್ಕರಿಸಿದ್ದಾರೆ.

ಭಾರತಕ್ಕೆಷ್ಟು ಲಾಭ?
ವಿಸ್ತರಿತ ಜಿ7 ಸಂಘಟನೆ ಸೇರುವುದರಿಂದ ಭಾರತಕ್ಕೆ ಖಂಡಿತವಾಗಿಯೂ ಲಾಭವಿದೆ. ವಾಣಿಜ್ಯ ಸಂಬಂಧಿ ವಿಚಾರಗಳಲ್ಲಿ ಅಮೆರಿಕದಂಥ ಬಲಿಷ್ಠ ರಾಷ್ಟ್ರ ಜೊತೆಗಿರುವುದು ಭಾರತಕ್ಕೆ ಲಾಭದಾಯಕ. ವ್ಯೂಹಾತ್ಮಕ ವಿಚಾರಗಳಲ್ಲಿ ಬಲಿಷ್ಠ ಮಿಲಿಟರಿ ಪವರ್‌ ಆಗಿರುವ ಅಮೆರಿಕ ಮತ್ತು ಚೀನಾವನ್ನು ಸುತ್ತುವರಿದ ದೇಶಗಳಾದ ರಷ್ಯಾ, ದಕ್ಷಿಣ ಕೊರಿಯಾ, ಆಸ್ಪ್ರೇಲಿಯಾಗಳ ಉಪಸ್ಥಿತಿ ಭಾರತಕ್ಕೆ ಸಹಾಯಕವಾಗಲಿದೆ. ಇತ್ತ ಚೀನಾ, ಏಸಿಯಾನ್‌ ದೇಶಗಳ ಜೊತೆಗೆ ವ್ಯಾಪಾರ ಸಂಬಂಧ ವೃದ್ಧಿಸಿಕೊಳ್ಳುತ್ತಿದ್ದು, ಆರ್‌ಸಿಇಪಿ ಹಾಗೂ ಆರ್‌ಒಬಿಯ ಹೆಸರಿನಲ್ಲಿ ಭಾರತವನ್ನು ಕಡೆಗಣಿಸಲು ಮುಂದಾಗಿದೆ. ವಾಣಿಜ್ಯ ಜಗತ್ತಿನಲ್ಲಿ ಅಪ್ರಸ್ತುತವಾಗದೆ ಇರಲು ಭಾರತ ಮತ್ತೊಂದು ಬಲಿಷ್ಠ ಒಕ್ಕೂಟವನ್ನು ಸೇರುವುದು ಅಗತ್ಯ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top