ಬಡವರಿಗೆ ಊಟ, ಸುರಕ್ಷತೆ ಪಾಠ

– ಇನ್ನೂ 5 ತಿಂಗಳು 80 ಕೋಟಿ ಜನರಿಗೆ ಉಚಿತ ಪಡಿತರ | ಶೀಘ್ರವೇ ಏಕರೂಪ ರೇಷನ್‌ ಕಾರ್ಡ್‌.

– ಪ್ರಧಾನಿ ನರೇಂದ್ರ ಮೋದಿ ಘೋಷಣೆ | ಅನ್‌ಲಾಕ್‌ ವೇಳೆ ನಿರ್ಲಕ್ಷ್ಯಕ್ಕೆ ಬೇಸರ, ಜನರ
ಸಹಕಾರಕ್ಕೆ ಮನವಿ.

ಹೊಸದಿಲ್ಲಿ: ದೇಶಾದ್ಯಂತ ಹೆಚ್ಚುತ್ತಿರುವ ಕೊರೊನಾ ಸೋಂಕಿನಿಂದ ಕಂಗಾಲಾಗಿರುವ
ಜನತೆಗೆ, ಅದರಲ್ಲೂ ನಿರುದ್ಯೋಗಿಗಳು ಮತ್ತು ಹಸಿವಿನಿಂದ ಬಳಲುತ್ತಿರುವ ಬಡ ಜನರಿಗೆ
ಪ್ರಧಾನಿ ಮೋದಿ ನೆರವಿನ ಪ್ಯಾಕೇಜ್‌ ಮುಂದುವರಿಸಿದ್ದಾರೆ. ‘ಗರೀಬ್‌ ಕಲ್ಯಾಣ್‌
ಯೋಜನೆ’ಯ ಅಡಿಯಲ್ಲಿ ಇನ್ನೂ 5 ತಿಂಗಳವರೆಗೆ ಬಡವರಿಗೆ ಉಚಿತ ಪಡಿತರ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಕೊರೊನಾ ಪ್ರಸರಣದ ಆತಂಕದಲ್ಲಿ ದಿನ ದೂಡುತ್ತಿರುವ ದೇಶದ ಜನರನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ದೇಶದ 80 ಕೋಟಿ ಬಡಜನರಿಗೆ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಮೂಲಕ ಉಚಿತ ದಿನಸಿ ನೀಡಲಾಗುತ್ತಿದೆ. ಇದನ್ನು ನವೆಂಬರ್‌ ಅಂತ್ಯದವರೆಗೂ ಮುಂದುವರಿಸಲಾಗುವುದು ಎಂದರು.

‘‘ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಹಬ್ಬಗಳ ಸೀಜನ್‌ ಶುರುವಾಗಲಿದೆ. ಈ ಸಂದರ್ಭದಲ್ಲಿ ಜನ ಸಂಕಷ್ಟ ಎದುರಿಸಬಾರದೆಂಬ ದೃಷ್ಟಿಯಿಂದ ಯೋಜನೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರ ಅಡಿಯಲ್ಲಿ 80 ಕೋಟಿ ಜನರಿಗೆ ಪ್ರತಿ ತಿಂಗಳು 5 ಕೆ.ಜಿ ಅಕ್ಕಿ, 1 ಕೆ.ಜಿ ಬೇಳೆ ಉಚಿತವಾಗಿ ದೊರೆಯಲಿದೆ. ಈ ಯೋಜನೆ ವಿಸ್ತರಣೆಗಾಗಿ ಸರಕಾರ 90,000 ಕೋಟಿ ರೂ. ವ್ಯಯಿಸಲಿದೆ,’’ ಎಂದರು.

ಒಂದು ದೇಶ, ಒಂದೇ ಪಡಿತರ ಕಾರ್ಡ್‌

ಕೆಲಸ ಅರಸಿ ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗುವ ಕಾರ್ಮಿಕರಿಗೆ, ಬಡವರಿಗೆ ಅನುಕೂಲವಾಗುವ ರೀತಿ ಏಕರೂಪ ದಿನಸಿ ವಿತರಣೆ ಕಾರ್ಡ್‌ ಶೀಘ್ರವೇ ಜಾರಿಗೆ ಬರಲಿದೆ ಎಂದು ಪ್ರಧಾನಿ ಸುಳಿವು ನೀಡಿದರು.

20 ಕೋಟಿ ಕುಟುಂಬಗಳಿಗೆ 31 ಸಾವಿರ ಕೋಟಿ

ಪಿಎಂಜಿಕೆಎವೈ ಅಡಿಯಲ್ಲಿ 1.75 ಲಕ್ಷ ಕೋಟಿ ರೂ. ನೆರವು ಘೋಷಿಸಲಾಗಿತ್ತು. ಅದರಂತೆ ಕಳೆದ ಮೂರು ತಿಂಗಳಲ್ಲಿ 20 ಕೋಟಿ ಬಡ ಕುಟುಂಬಗಳ ಬ್ಯಾಂಕ್‌ ಖಾತೆಗೆ (ಜನ್‌ಧನ್‌) 31,000 ಕೋಟಿ ರೂ. ಜಮೆ ಮಾಡಲಾಗಿದೆ. ದೇಶದ ಕೃಷಿಕರಿಗೆ ನೆರವಾಗಲು 9 ಕೋಟಿ ರೈತರ ಬ್ಯಾಂಕ್‌ ಖಾತೆಗಳಿಗೆ 18 ಸಾವಿರ ಕೋಟಿ ರೂ. ಜಮೆ ಮಾಡಿದ್ದೇವೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಕಾನೂನಿಗೆ ಪಿಎಂ ಅತೀತರಲ್ಲ

ಮಾಸ್ಕ್‌ ಧರಿಸದೆ ಹೊರ ಹೋಗಿದ್ದಕ್ಕಾಗಿ ದೇಶವೊಂದರ ಪ್ರಧಾನಿಗೂ 13 ಸಾವಿರ ರೂ. ದಂಡ ವಿಧಿಸಲಾಗಿದೆ. ಕಾನೂನಿಗೆ ಯಾರೂ ಅತೀತರಲ್ಲ ಎಂದು ಹೇಳುವ ಮೂಲಕ ಸುರಕ್ಷತೆ ನಿಯಮ ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬ ಸಂದೇಶವನ್ನು ಮೋದಿ ನೀಡಿದರು. ಬಲ್ಗೇರಿಯಾ ಪ್ರಧಾನಿ ಬೊಯ್ಕೊ ಬೊರಿಸೊವ್‌ ಅವರಿಗೆ 13 ಸಾವಿರ ರೂ. ದಂಡ ವಿಧಿಸಿದ ಪ್ರಕರಣವನ್ನು ಹೆಸರು ಹೇಳದೆಯೇ ಪ್ರಸ್ತಾಪಿಸಿದರು.

ನಿರ್ಲಕ್ಷ್ಯ ಬಿಡಿ, ಜೀವ ಕಾಪಾಡಿ

ಸರಿಯಾದ ಸಮಯಕ್ಕೆ ದೇಶದಲ್ಲಿ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಸಾವಿರಾರು ಜನರ ಪ್ರಾಣ ರಕ್ಷಣೆಯಾಗಿದೆ. ಆದರೆ ಅನ್‌ಲಾಕ್‌ 1.0 ಅವಧಿಯಲ್ಲಿ ಹಲವರು ಅಲಕ್ಷ್ಯ ತೋರಿ, ಮಾಸ್ಕ್‌ಗಳನ್ನು ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದನ್ನು ಕಂಡಿದ್ದೇವೆ. ಇದು ಸರಿಯಲ್ಲ. ಅನ್‌ಲಾಕ್‌ 2.0 ಅವಧಿಯಲ್ಲೂ ಮೊದಲಿನಂತೆಯೇ ಕಟ್ಟುನಿಟ್ಟಿನ ಸುರಕ್ಷತಾ ನಿಯಮ ಪಾಲನೆಯಾಗಲಿ. 3 ಅಡಿ ಅಂತರ ಕಾಯ್ದುಕೊಂಡು, ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಎಂದು ಕವಿಮಾತು ಹೇಳಿದರು. ಲಾಕ್‌ಡೌನ್‌ ಸಂದರ್ಭದ ಗಂಭೀರತೆ ಇರಿಸಿಕೊಂಡು ಎಲ್ಲ ಮುನ್ನೆಚ್ಚರಿಕೆಗಳು ಪಾಲಿಸಿದರೆ ಕೊರೊನಾ ವಿರುದ್ಧ ಹೋರಾಟ
ಯಶಸ್ವಿಯಾಗಬಹುದೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಮತ್ತೇನು ಹೇಳಿದರು?

ಅನ್‌ಲಾಕ್‌ 2.0 ಜಾರಿ ಜತೆ ಮಳೆಗಾಲದ ಹಿನ್ನೆಲೆಯಲ್ಲಿ ನೆಗಡಿ, ಶೀತದಂತಹ ಸಮಸ್ಯೆ ಹೆಚ್ಚಲಿವೆ, ಕಾಳಜಿ ವಹಿಸಿ.

ಸೂಕ್ತ ಸಮಯದ ಲಾಕ್‌ಡೌನ್‌ನಿಂದಾಗಿ ವಿಶ್ವದಲ್ಲೇ ಭಾರತ ಕೊರೊನಾ ಮೃತರ ಸಂಖ್ಯೆ ಕನಿಷ್ಠ ಪ್ರಮಾಣದಲ್ಲಿದೆ

ಮೂರು ಅಡಿಗಳ ಅಂತರ, 20 ಸೆಕೆಂಡ್‌ಗೂ ಹೆಚ್ಚು ಕಾಲ ಆಗಾಗ ಸಾಬೂನಿನಿಂದ ಕೈ ತೊಳೆಯುವುದು ತಪ್ಪಿಸಬೇಡಿ

ಆತ್ಮನಿರ್ಭರ ಭಾರತ, ವೋಕಲ್‌ ಫಾರ್‌ ಲೋಕಲ್‌ ಸಂಕಲ್ಪದೊಂದಿಗೆ ನಮ್ಮ ಎಲ್ಲ ಕೆಲಸಗಳು ಮುಂದುವರಿಯಲಿ

80 ಕೋಟಿ ಜನರಿಗೆ ಉಚಿತ ಪಡಿತರದ ಯಶಸ್ಸಿನ ಹಿಂದೆ ಹಿಂದೆ ರೈತರು, ಪ್ರಾಮಾಣಿಕ ತೆರಿಗೆದಾರರಿದ್ದಾರೆ.

ಬೆಂಗಳೂರಿನಲ್ಲಿ 4,500 ಹಾಸಿಗೆಗಳ ವ್ಯವಸ್ಥೆ

ಬೆಂಗಳೂರು: ಕೊರೊನಾ ಸೋಂಕಿತರ ಚಿಕಿತ್ಸೆ ನೀಡಲು ಸರಕಾರದ ಜತೆ ಕೈಜೋಡಿಸಲು ಖಾಸಗಿ ವೈದ್ಯ ಕಾಲೇಜುಗಳು ಸಮ್ಮತಿಸಿವೆ. 10 ದಿನಗಳಲ್ಲಿ ಒಟ್ಟು 11 ಖಾಸಗಿ ಕಾಲೇಜುಗಳಿಂದ ಬೆಂಗಳೂರಿನಲ್ಲಿ ಸುಮಾರು 4,500 ಬೆಡ್‌ಗಳು ಲಭ್ಯವಾಗಲಿವೆ. ತಕ್ಷಣವೇ ಎರಡು ಸಾವಿರದಷ್ಟು ಹಾಸಿಗೆಗಳು ದೊರೆಯಲಿವೆ. ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ಖಾಸಗಿ ಕಾಲೇಜು ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಈ ಬಗ್ಗೆ ಸಮ್ಮತಿ ವ್ಯಕ್ತವಾಗಿದೆ.

ರಾಜ್ಯದಲ್ಲಿ 20 ಸಾವು

ರಾಜ್ಯದಲ್ಲಿ ಮಂಗಳವಾರ ಒಂದೇ ದಿನ ಕೊರೊನಾಗೆ 20 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ 947 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 15 ಸಾವಿರ ದಾಟಿದೆ. ಈ ಮಧ್ಯೆ ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 418 ಮಂದಿ ಮೃತಪಟ್ಟಿದ್ದಾರೆ. 24 ಗಂಟೆಯಲ್ಲಿ 18,522 ಪ್ರಕರಣಗಳು ಪತ್ತೆಯಾಗಿವೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top