ಭಾರತದ ‘ಕ್ವೀನ್’ ಮೇಲೆ ವಿದೇಶಿ ಔಷಧ ಲಾಬಿ ಕಣ್ಣು

ಭಾರತದಲ್ಲಿ ಉತ್ಪಾದನೆಯಾಗುವ ಮಲೇರಿಯಾ ಔಷಧ ಹೈಡ್ರೋಕ್ಲೋರೋಕ್ವಿನ್(ಎಚ್‌ಸಿಕ್ಯೂ)ನ ವ್ಯಾಪಾರವನ್ನು ಹದಗೆಡಿಸುವ ವಿದೇಶಿ ಔಷಧ ಕಂಪನಿಗಳ ಲಾಬಿ ಬಯಲಾಗಿದೆ. ಸುಳ್ಳು ಡೇಟಾ ಸಂಗ್ರಹ, ಅದನ್ನು ಆಧರಿಸಿ ವಿವಾದಿತ ಪ್ರಬಂಧ ಪ್ರಕಟಣೆ, ಅದನ್ನಾಧರಿಸಿ ಔಷಧದ ಮೇಲೆ ನಿರ್ಬಂಧ, ಮತ್ತೆ ತೆರವು – ಇತ್ಯಾದಿ ನಾಟಕೀಯ ಘಟನೆಗಳು ಹೀಗಿವೆ.

ಜಗತ್ತಿನ ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕ ‘ಲ್ಯಾನ್ಸೆಟ್’ ಕಳೆದ ವಾರ ಒಂದು ಸಂಶೋಧನ ಪ್ರಬಂಧವನ್ನು ಪ್ರಕಟಿಸಿತು. ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಹಲವು ಕಡೆ ಕೋವಿಡ್ ಪ್ರಕರಣಗಳಲ್ಲಿ ರೋಗಿಗೆ ಹೈಡ್ರೋಕ್ಲೋರೋಕ್ವಿನ್(ಎಚ್‌ಸಿಕ್ಯೂ) ಔಷಧ ನೀಡಲಾಗುತ್ತಿದೆ. ಇದು ಹಲವು ದಶಕಗಳಿಂದ ಮಲೇರಿಯಾ ಜ್ವರಕ್ಕೆ ಪರಿಣಾಮಕಾರಿಯಾಗಿ ಬಳಸುತ್ತಿರುವ ಔಷಧವಾಗಿದ್ದು, ಇದರ ಉತ್ಪಾದನೆ ನಡೆಯುತ್ತಿರುವುದು ಭಾರತದಲ್ಲಿ. ‘‘ಈ ಔಷಧವನ್ನು ನೀಡಿದ ಕೋವಿಡ್ ರೋಗಿಗಳಲ್ಲಿ ಮರಣ ಪ್ರಮಾಣ ಹೆಚ್ಚು ಇದೆ,’’ ಎಂದು ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಈ ಪ್ರಬಂಧ ಹೇಳಿತ್ತು. ಎಚ್‌ಸಿಕ್ಯೂ ಔಷಧದಿಂದ ಕೋವಿಡ್ ರೋಗಿಗಳಲ್ಲಿ ಹೃದಯದ ಕಾರ್ಯಕ್ಷಮತೆಯ ಮೇಲೆ ಋುಣಾತ್ಮಕ ಪರಿಣಾಮ ಉಂಟಾಗಿ, ಶ್ವಾಸಕೋಶದ ಉರಿಯೂತದ ಜೊತೆಗೆ ಹೃದಯದೊತ್ತಡದ ಏರುಪೇರಿನಿಂದ ಸಾವು ಸಂಭವಿಸಬಹುದು ಎಂದು ಹೇಳಲಾಗಿತ್ತು. ಭಾರತೀಯ ಮೂಲದ ಮನ್ದೀಪ್ ಮೆಹ್ರಾ, ಸಪನ್ ದೇಸಾಯಿ, ಎಎನ್ ಪಟೇಲ್ ಮತ್ತು ರುಷಿಟ್ಸ್ಕಾ ಎಫ್ ಎಂಬ ನಾಲ್ವರು ವೈದ್ಯವಿಜ್ಞಾನಿಗಳು ಈ ಪ್ರಬಂಧವನ್ನು ಜಂಟಿಯಾಗಿ ಬರೆದಿದ್ದರು.

ಔಷಧ ಕಂಪನಿಗಳ ಲಾಬಿ?
ಭಾರತ ಔಷಧ ಉತ್ಪನ್ನಗಳ ವಲಯದಲ್ಲಿ ಇತ್ತೀಚೆಗೆ ಭಾರತ ದಾಪುಗಾಲಿಕ್ಕುತ್ತಿದೆ. ಭಾರತದ ಹಾಗೂ ಭಾರತೀಯ ಮೂಲದ ವೈದ್ಯರೂ ಜಾಗತಿಕ ರಂಗದಲ್ಲಿ ಒಳ್ಳೆಯ ಹೆಸರು ಗಳಿಸುತ್ತಿದ್ದಾರೆ. ಇದರಿಂದ ಅಮೆರಿಕ ಹಾಗೂ ಇತರ ದೇಶಗಳ ಔಷಧ ಕಂಪನಿಗಳ ಕಣ್ಣು ಕೆಂಪಾಗಿದೆ. ಭಾರತದಿಂದ ಬರುತ್ತಿರುವುದೆಲ್ಲ ಕಳಪೆ ಎಂದು ಸಾಧಿಸಲು ಇವು ಪ್ರಯತ್ನ ನಡೆಸುತ್ತಿವೆ. ಲ್ಯಾನ್ಸೆಟ್‌ನ ಈ ವಿವಾದಿತ ಬರಹದ ಹಿಂದೆ ಕೂಡ ಪಾಶ್ಚಾತ್ಯ ಔಷಧ ಲಾಬಿಯ ಕೈವಾಡ ಇರಬಹುದು ಎಂದು ಭಾರತೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತವೇ ಉತ್ಪಾದನೆ ಮೂಲ
ಇತ್ತೀಚೆಗೆ ಎಚ್‌ಸಿಕ್ಯೂ ಔಷಧದ ರಫ್ತನ್ನು ಭಾರತ ನಿಷೇಧಿಸಿದ್ದು ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡದ ಪರಿಣಾಮವಾಗಿ ಈ ನಿರ್ಬಂಧವನ್ನು ಸಡಿಲಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ (ಎಫ್‌ಡಿಎ) ಮಲೇರಿಯಾ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಲು ಅನುಮೋದಿಸಿತ್ತು. ಜತೆಗೆ ಕೊರೊನಾ ಪೀಡಿತರಿಗೂ ವೈದ್ಯರ ಸೂಚನೆಯ ಮೇರೆಗೆ ನೀಡಬಹುದು ಎಂದು ನಿರ್ದೇಶಿಸಲಾಗಿತ್ತು. ಮಲೇರಿಯಾ ಚಿಕಿತ್ಸೆಯಲ್ಲಿ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಭಾರತದಲ್ಲಿ ಹಿಂದಿನಿಂದಲೇ ವ್ಯಾಪಕವಾಗಿ ಉತ್ಪಾದನೆ ಮಾಡಲಾಗುತ್ತಿದೆ. ಜೆನೆರಿಕ್ ಔಷಧ ಮಳಿಗೆಗಳಲ್ಲಿಯೂ ಇದನ್ನು ಮಾರಾಟ ಮಾಡಲಾಗುತ್ತಿತ್ತು. ಭಾರತದಲ್ಲಿ ಬಹುಪಾಲು ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ಪಾದನೆಯನ್ನು ಮುಂಬಯಿ ಮೂಲದ ಐಪಿಸಿಎ ಲ್ಯಾಬ್ಸ್ ಮಾಡುತ್ತಿದೆ. ಅಮೆರಿಕದಲ್ಲಿ ಈ ಔಷಧವನ್ನು ಮಾರಾಟ ಮಾಡಲು 1955ರಲ್ಲಿ ಅನುಮತಿ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಅಗತ್ಯ ಔಷಧಗಳ ಪಟ್ಟಿಗೆ ಸೇರಿಸಿದೆ. 2017ರ ಮಾಹಿತಿ ಪ್ರಕಾರ, ಅಮೆರಿಕದಲ್ಲಿ ಇದು 128ನೇ ಹೆಚ್ಚು ಶಿಫಾರಸು ಮಾಡಲ್ಪಟ್ಟ ಔಷಧವಾಗಿದ್ದು, 50 ಲಕ್ಷ ಕ್ಕೂ ಅಧಿಕ ಜನರು ಬಳಸಿದ್ದಾರೆ.

ಎಚ್‌ಸಿಕ್ಯೂ ಪ್ರಯೋಗ ನಿಷೇಧ
ಲ್ಯಾನ್ಸೆಟ್‌ನ ಪ್ರಬಂಧದಲ್ಲಿ ವ್ಯಕ್ತವಾದ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವ ಆರೋಗ್ಯ ಸಂಸ್ಥೆ, ಜಗತ್ತಿನ ನಾನಾ ಕಡೆ ಕೋವಿಡ್ ರೋಗಿಗಳಿಗೆ ನೀಡಲಾಗುತ್ತಿದ್ದ ಎಚ್‌ಸಿಕ್ಯೂ ಔಷಧ ಪ್ರಯೋಗವನ್ನು ತಕ್ಷಣವೇ ನಿಲ್ಲಿಸುವಂತೆ ನಿರ್ದೇಶನ ನೀಡಿತು. ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನವನ್ನು ಹಲವು ದೇಶಗಳು ಪಾಲಿಸಿದವು ಹಾಗೂ ಇದರ ಬಳಕೆಯನ್ನು ನಿರ್ಬಂಧಿಸಲಾಯಿತು.

ಡೇಟಾ ಒದಗಿಸಲು ಭಾರತದ ಒತ್ತಡ: ಡೇಟಾವನ್ನು ಒದಗಿಸುವಂತೆ ಭಾರತ ಒತ್ತಾಯಿಸಿತು. ಆದರೆ ಹೊಣೆಯಿಂದ ಸರ್ಜಿಸ್ಫಿಯರ್ ಸಂಸ್ಥೆ ನುಣುಚಿಕೊಂಡಿತು. ಡೇಟಾ ಒದಗಿಸುವ ಸಂಸ್ಥೆಯ ಕಳ್ಳಾಟವಾಡಿದ್ದು ಬಹಿರಂಗಗೊಂಡ ಪರಿಣಾಮ, ಸಂಶೋಧನ ಬರಹ ಬರೆದವರಿಗೆ ತಮ್ಮ ಬರಹವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸಂಶೋಧನೆಯ ಬಗ್ಗೆ ಸಂಶಯ
ಈ ಸಂಶೋಧನೆಯ ಪ್ರಕಟಣೆ ಹಾಗೂ ಅದರಿಂದ ಈ ಔಷಧಿಯ ಬಗ್ಗೆ ಮೂಡುತ್ತಿರುವ ಋುಣಾತ್ಮಕ ಭಾವನೆಯನ್ನು ಕಂಡು ಭಾರತ ಕೂಡಲೇ ಪ್ರತಿಕ್ರಿಯಿಸಿತು. ಭಾರತದ ಅತ್ಯುನ್ನತ ವೈದ್ಯಕೀಯ ಸಂಸ್ಥೆ ಐಸಿಎಂಆರ್, ಎಚ್‌ಸಿಕ್ಯೂ ಬಳಕೆಯ ಹಿಂದೆ ದಶಕಗಳ ಕಾಲದ ಅನುಭವ ಹಾಗೂ ಸಂಶೋಧನೆಯ ಹಿನ್ನೆಲೆಯಿದೆ; ಇದರಿಂದ ಅಪಾಯವಿದೆ ಎನ್ನಲು ಯಾವುದೇ ಆಧಾರಗಳಿಲ್ಲ ಎಂದು ಪ್ರತಿಪಾದಿಸಿತು. ಹಲವಾರು ವೈದ್ಯವಿಜ್ಞಾನಿಗಳು ಸೇರಿ ಲ್ಯಾನ್ಸೆಟ್‌ಗೆ ಆಕ್ಷೇಪವನ್ನು ಸಲ್ಲಿಸಿದರು. ಸುಮಾರು 200 ಮಂದಿ ವೈದ್ಯವಿಜ್ಞಾನಿಗಳು ಸಹಿ ಮಾಡಿದ ಪತ್ರವನ್ನು ಲ್ಯಾನ್ಸೆಟ್‌ಗೆ ಕಳುಹಿಸಿ, ಡೇಟಾ ಮಾಹಿತಿಯನ್ನು ಒದಗಿಸುವಂತೆ ಕೇಳಲಾಯಿತು. ಮಾತ್ರವಲ್ಲ ಈ ವಿವಾದಿತ ಸಂಶೋಧನೆಯ ಹಿಂದಿರುವ ಡೇಟಾ, ಸಮೀಕ್ಷೆಯ ಪಾರದರ್ಶಕತೆಯ ಕೊರತೆ ಇತ್ಯಾದಿಗಳ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು. ಈ ಪ್ರಬಂಧವನ್ನು ಸಿದ್ಧಪಡಿಸಿದವರು ಚಿಕಾಗೋದ ಸರ್ಜಿಸ್ಫಿಯರ್ ಎಂಬ ಡೇಟಾ ಅನಾಲಿಸಿಸ್ ಸಂಸ್ಥೆಯಿಂದ ಮಾಹಿತಿಗಳನ್ನು ಪಡೆದಿರುವುದಾಗಿ ಹೇಳಿದ್ದರು. ಈ ಸರ್ಜಿಸ್ಫಿಯರ್ ಎಂಬ ಸಂಸ್ಥೆಯ ಮಾಲಿಕ ಸಪನ್ ದೇಸಾಯಿ ಎಂಬಾತನೂ ಈ ಲೇಖನ ಬರೆದವರಲ್ಲಿ ಒಬ್ಬ. ಏಷ್ಯಾ ಹಾಗೂ ಆಸ್ಪ್ರೇಲಿಯದಿಂದ ಡೇಟಾ ಪಡೆದಿರುವುದಾಗಿ ಸರ್ಜಿಸ್ಫಿಯರ್ ಹೇಳಿತ್ತು. ಆದರೆ ಈ ಡೇಟಾ ಪೂರ್ತಿ ನಕಲಿ ಎಂದು ಹೇಳಲಾಗುತ್ತಿದೆ. ಸರ್ಜಿಸ್ಫಿಯರ್ ಸಮೀಕ್ಷೆ ನಡೆಸಿದ ಸಮಯದಲ್ಲಿ ಇತ್ತೆಂದು ಉಲ್ಲೇಖಿಸಿದಷ್ಟು ಕೋವಿಡ್ ಕೇಸುಗಳು ಆ ಸಂದರ್ಭದಲ್ಲಿ ಇರಲೇ ಇಲ್ಲ! ಹಾಗೆಯೇ ಸರ್ಜಿಸ್ಫಿಯರ್‌ಗೆ ಮಾಹಿತಿಯನ್ನು ಒದಗಿಸಿದ ಆಸ್ಪತ್ರೆಗಳ ಡೇಟಾ ಸುರಕ್ಷತೆ, ಪಾರದರ್ಶಕತೆಯ ಬಗ್ಗೆ ಕೂಡ ಅಪನಂಬಿಕೆಗಳು ಮೂಡಲಾರಂಭಿಸಿದವು. ಕೇವಲ 11 ಉದ್ಯೋಗಿಗಳನ್ನು ಹೊಂದಿರುವ ಸರ್ಜಿಸ್ಫಿಯರ್ ಒಂದೇ ವಾರದಲ್ಲಿ 1200 ಆಸ್ಪತ್ರೆಗಳನ್ನು ಸಂದರ್ಶಿಸಿ ಅಷ್ಟೊಂದು ಮಾಹಿತಿ ಪಡೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಮೂಡಿತ್ತು.

ಮಣಿದ ವಿಶ್ವ ಆರೋಗ್ಯ ಸಂಸ್ಥೆ
ಸಪನ್ ದೇಸಾಯಿಯನ್ನು ಹೊರತುಪಡಿಸಿ ಉಳಿದ ಮೂವರು ಲೇಖಕರು ಲ್ಯಾನ್ಸೆಟ್‌ನಿಂದ ತಮ್ಮ ಬರಹ ಹಿಂದೆಗೆದುಕೊಳ್ಳುವುದಾಗಿ ಘೋಷಿಸಿದರು. ಲ್ಯಾನ್ಸೆಟ್ ಪತ್ರಿಕೆ ಕೂಡ ಕೂಡಲೇ ಆ ಬರಹವನ್ನು ಹಿಂದೆಗೆದುಕೊಂಡು, ಬೇಷರತ್ತಾಗಿ ಕ್ಷಮೆ ಕೋರಿತು. ಈ ಹಿನ್ನಡೆಯಿಂದ ವಿಶ್ವ ಆರೋಗ್ಯ ಸಂಸ್ಥೆಗೂ ಮುಜುಗರವಾಯಿತು. ಅದು ಕೂಡ ಎಚ್‌ಸಿಕ್ಯೂ ನಿರ್ಬಂಧದ ತನ್ನ ಹಿಂದಿನ ನಿರ್ದೇಶನವನ್ನು ಹಿಂದೆಗೆದುಕೊಂಡು, ರೋಗಿಗಳಿಗೆ ಅದನ್ನು ನೀಡುವುದನ್ನು ಮುಂದುವರಿಸಬಹುದು ಎಂದಿತು.

ಭಾರತದಲ್ಲೇ ಒಂದು ಕೇಸ್
ಕೋವಿಡ್ ರೋಗಿಗಳ ಮೇಲೆ ಎಚ್‌ಸಿಕ್ಯೂ ಪ್ರಯೋಗಿಸಬಹುದು ಎಂದು ವೈದ್ಯಕೀಯ ಸಂಸ್ಥೆ ಗ್ರೀನ್ ಸಿಗ್ನಲ್ ನೀಡಿದಾಗ, ಪೀಪಲ್ ಫಾರ್ ಬೆಟರ್ ಟ್ರೀಟ್ಮೆಂಟ್ ಎಂಬ ಒಂದು ಎನ್‌ಜಿಒ, ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಮಾರಕ ಸೈಡ್ಎಫೆಕ್ಟ್‌ಗಳಿರುವ ಈ ಔಷಧವನ್ನು ಪ್ರಯೋಗಿಸಕೂಡದು ಎಂದು ವಾದಿಸಿತ್ತು. ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ತಾನು ಪರಿಣತನಲ್ಲ ಎಂದು, ಐಸಿಎಂಆರ್(ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ)ಗೆ ಅದನ್ನು ವರ್ಗಾಯಿಸಿತ್ತು.

ಭಾರತೀಯ ಔಷಧ ವಲಯ
ಇತ್ತೀಚಿನ ವರ್ಷಗಳಲ್ಲಿ ಔಷಧ ಉತ್ಪಾದನೆಯಲ್ಲಿ ಭಾರತ ಗಣನೀಯ ಪ್ರಗತಿ ಸಾಧಿಸಿದೆ. ಮೆಕಿನ್ಸೆ ಎಂಬ ಸಂಸ್ಥೆಯ ವರದಿ ಪ್ರಕಾರ, ಇಲ್ಲಿನ ಔಷಧ ಮಾರುಕಟ್ಟೆ ಗಾತ್ರ 55 ಶತಕೋಟಿ ಡಾಲರ್. ಇಲ್ಲಿನ ಜನರಿಕ್ ಔಷಧ ಮಾರುಕಟ್ಟೆಯೇ ಶೇ.80ರಷ್ಟಿದೆ. ಹೀಗಾಗಿ ಪಾಶ್ಚಾತ್ಯ ದುಬಾರಿ ಔಷಧಗಳೂ ಇಲ್ಲಿ ನೆಲೆ ಕಂಡುಕೊಳ್ಳಲು ಆಗಿಲ್ಲ. ರಫ್ತು ಪ್ರಮಾಣದಲ್ಲಿ ಭಾರತದ ಔಷಧೀಯ ವಲಯದ ರ್ಯಾಂಕ್‌ ಮೂರನೆಯದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top