ಕೊರೊನಾ ಒಡ್ಡಿದ ಅಗ್ನಿಪರೀಕ್ಷೆಯನ್ನು ಯಶಸ್ವಿಯಾಗಿ ದಾಟಲಾಗುತ್ತಿದೆ. ರಾಜ್ಯಾದ್ಯಂತ ಗುರುವಾರ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಸರಕಾರಿ ಯಂತ್ರಾಂಗದ ಕಾಳಜಿ, ಯೋಜನಾಬದ್ಧತೆ, ಕಾರ್ಯ ಸಮನ್ವಯದಿಂದ ವಿದ್ಯಾರ್ಥಿಗಳು ನಿರಾತಂಕವಾಗಿ ಮೊದಲನೇ ದಿನ ಪರೀಕ್ಷೆ ಬರೆದಿದ್ದಾರೆ. ಎಲ್ಲೆಡೆ ‘ಕೋವಿಡ್ ಸಂಹಿತೆ’ಯನ್ನು ಚಾಚೂ ತಪ್ಪದೆ ಪಾಲಿಸಿದ್ದರಿಂದ ಭಯದ ವಾತಾವರಣವಿರಲಿಲ್ಲ. ಸಣ್ಣ ಪುಟ್ಟ ಗೊಂದಲಗಳು, ಒಂದೆರಡು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಎಲ್ಲೂ ಕೂಡ ವ್ಯವಸ್ಥೆ ಹಳಿ ತಪ್ಪಿಲ್ಲ. ರಾಜ್ಯ ವ್ಯಾಪಿ ನೋಟ ಇಲ್ಲಿದೆ.
ವಿಕ ಬ್ಯೂರೊ ಬೆಂಗಳೂರು
ಕೋವಿಡ್-19 ಆತಂಕದ ನಡುವೆ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ಕನ್ನಡ ಪರೀಕ್ಷೆಗಳು ಗುರುವಾರ ಯಶಸ್ವಿಯಾಗಿ ನಡೆದಿದ್ದು, ಶೇ.98.3ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ರಾಜ್ಯಾದ್ಯಂತ ಒಟ್ಟು 2879 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು. ಕಳೆದ ವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ವೇಳೆ ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಉಂಟಾಗಿದ್ದ ಗೊಂದಲಗಳಿಂದಾಗಿ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತ್ತು. ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳ ಬಾಗಿಲಲ್ಲೇ ಆರೋಗ್ಯ ತಪಾಸಣೆ ನಡೆಸಿ, ಸ್ಯಾನಿಟೈಸರ್ ಹಾಗೂ ಮಾಸ್ಕ್ ನೀಡಿ ಕೊಠಡಿಗಳಿಗೆ ಕಳುಹಿಸಿಕೊಡಲಾಯಿತು. ಎಲ್ಲಾ ವಿದ್ಯಾರ್ಥಿಗಳ ಪೋಷಕರ ಮೊಬೈಲ್ಗಳಿಗೆ ಕೊಠಡಿ ಸಂಖ್ಯೆಗಳನ್ನು ಎಸ್ಎಂಎಸ್ ಮೂಲಕ ಕಳುಹಿಸಲಾಗಿತ್ತು. ಜತೆಗೆ, ಪ್ರತಿ ಕೇಂದ್ರದಲ್ಲಿ ಹೆಚ್ಚುವರಿ ನೋಟಿಸ್ ಬೋರ್ಡ್ಗಳನ್ನು ಅಳವಡಿಸುವ ಮೂಲಕ ಕೊಠಡಿ ಸಂಖ್ಯೆಗಳನ್ನು ನೋಡಲು ವಿದ್ಯಾರ್ಥಿಗಳು ಗುಂಪುಗೂಡದಂತೆ ಕ್ರಮ ವಹಿಸಲಾಗಿತ್ತು.
ಪರೀಕ್ಷಾ ಕೇಂದ್ರಗಳ ಒಳಗೆ ಮತ್ತು ಹೊರಗೆ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ಪಾಲಿಸಲು ದೈಹಿಕ ಶಿಕ್ಷಕರು, ಎನ್ಸಿಸಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗಿತ್ತು.
201 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ
ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ನಡೆಸಿದ ವೇಳೆ ನೆಗಡಿ, ಕೆಮ್ಮು, ಶೀತ ಸೇರಿದಂತೆ ಇತರೆ ಅನಾರೋಗ್ಯದಿಂದ ಬಳಲುತ್ತಿದ್ದ ಒಟ್ಟು 201 ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ, ಕಂಟೈನ್ಮೆಂಟ್ ವಲಯಗಳ ಒಟ್ಟು 998 ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು.
ನೆರೆ ರಾಜ್ಯಗಳ ಒಟ್ಟು 614 ವಿದ್ಯಾರ್ಥಿಗಳ ಪೈಕಿ 555 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ, 59 ಮಂದಿ ಗೈರು ಹಾಜರಿಯಾಗಿದ್ದರು. ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಿಕೊಂಡಿದ್ದ ಒಟ್ಟು 12,644 ವಲಸೆ ವಿದ್ಯಾರ್ಥಿಗಳ ಪೈಕಿ 12,548 ಮಂದಿ ಪರೀಕ್ಷೆಗೆ ಹಾಜರಾಗಿ, ಒಟ್ಟು 96 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಚಿಕ್ಕೋಡಿ ಶೈಕ್ಷ ಣಿಕ ಜಿಲ್ಲೆಯ ಗೋಕಾಕ ತಾಲೂಕಿನ ಎಲ್ಇಟಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ಸರಸ್ವತಿ ಗೋಟೆಣ್ಣವರ್ ಎಂಬ ವಿದ್ಯಾರ್ಥಿನಿಗೆ ಮೂರ್ಛೆ ಬಂದಿದ್ದರಿಂದ ಪರೀಕ್ಷಾ ಕೇಂದ್ರದಲ್ಲಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿದರು.
ಮಹಾರಾಷ್ಟ್ರದಿಂದ ಬಂದು ಪರೀಕ್ಷೆಗೆ ಹಾಜರು
ಮಹಾರಾಷ್ಟ್ರದ ಗೋರೆಗಾಂವ್, ಇಚಲಕರಂಜಿ ಸೇರಿದಂತೆ ಇತರೆಡೆಯ 51 ವಿದ್ಯಾರ್ಥಿಗಳು ರಾಜ್ಯದ ಚಿಕ್ಕೋಡಿ ಜಿಲ್ಲೆಯ ಬೋರ್ಗಾಂವ್, ಜಡಿಕೆಹಾಳ, ಕಾಗವಾಡ, ನಿಪ್ಪಾಣಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು. ಅಧಿಕಾರಿಗಳು ಬೆಳಗ್ಗೆ 6 ಗಂಟೆಗೆ ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೋಗಿ ಮಕ್ಕಳನ್ನು ಬರಮಾಡಿಕೊಂಡರು. ಗೋವಾದಲ್ಲಿ ಈ ಬಾರಿ ಎರಡು ಪರೀಕ್ಷಾ ಕೇಂದ್ರಗಳಲ್ಲಿಒಟ್ಟು 47 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕೋವಿಡ್-19 ಸೋಂಕಿತ ಓರ್ವ ವಿದ್ಯಾರ್ಥಿ ಗೈರಾಗಿದ್ದರು.
ಸ್ವಾಮೀಜಿಯಿಂದ ಮಾಸ್ಕ್ ವಿತರಣೆ
ಪಾವಗಡ ರಾಮಕೃಷ್ಣಾಶ್ರಮದ ಸ್ವಾಮಿ ಜಪಾನಂದ ಅಧಿವರು ಪಾವಗಡ ತಾಲೂಕಿನಲ್ಲಿ ಪರೀಕ್ಷೆ ಬರೆಯುತ್ತಿರುವ 3,300 ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಮಾಸ್ಕ್, ಸ್ಯಾನಿಟೈಸರ್ಗಳನ್ನು ಪೂರೈಸಿದರು.
ಕೇರಳದ ಗಡಿಯಿಂದ….
ಕೇರಳದ ಗಡಿ ಭಾಗಗಳಲ್ಲಿ ನೆಲೆಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 367 ವಿದ್ಯಾರ್ಥಿಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳ-ಕರ್ನಾಟಕದ ತಾಳಪಾಡಿ ಗಡಿ ಬಳಿ ಸ್ವಾಗತಿಸಿ ಒಟ್ಟು 92 ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಕರೆ ತಂದು, ಪರೀಕ್ಷೆ ನಂತರ ವಾಪಸ್ ಕರೆದುಕೊಂಡು ಹೋಗಿ ಬಿಡಲಾಯಿತು.
ಸೋಂಕಿತನಿಗೆ ನಿರಾಕರಣೆ
ಮಧುಗಿರಿ ಶೈಕ್ಷ ಣಿಕ ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪರೀಕ್ಷಾ ಕೇಂದ್ರದಲ್ಲಿಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಯ ತಾಯಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತನಿಗೆ ಪರೀಕ್ಷೆ ನಿರಾಕರಿಸಲಾಗಿತ್ತು. ಗುರುವಾರ ವಿದ್ಯಾರ್ಥಿಗೂ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಪೂರಕ ಪರೀಕ್ಷೆ ವೇಳೆ ಅವಕಾಶ ಕಲ್ಪಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಅವಕಾಶ ತಪ್ಪಿದ್ದಕ್ಕೆ ಕಣ್ಣೀರಿಟ್ಟ ಸೋಂಕಿತ ವಿದ್ಯಾರ್ಥಿ
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ತಮಿಳುನಾಡಿನಿಂದ ಬಂದಿದ್ದ ಕಿತ್ತೂರು ತಾಲೂಕಿನ ವಿದ್ಯಾರ್ಥಿ ಪರೀಕ್ಷೆ ಬರೆಯುವ ಅವಕಾಶ ತಪ್ಪಿದ್ದಕ್ಕೆ ಆಸ್ಪತ್ರೆಯಲ್ಲಿಯೇ ಕಣ್ಣೀರು ಸುರಿಸಿದ್ದಾನೆ. ಇದನ್ನು ಗಮನಿಸಿದ ವೈದ್ಯರು ಡಿಡಿಪಿಐ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬರುವ ಪೂರಕ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆಯಲು ಅವಕಾಶ ಇದೆ ಎಂದು ಡಿಡಿಪಿಐ ಎ.ಬಿ. ಪುಂಡಲೀಕ್ ಅವರು ವೈದ್ಯರ ಮೂಲಕ ವಿದ್ಯಾರ್ಥಿಗೆ ಸಮಾಧಾನ ಹೇಳಿಸಿದರು.
ವಿಶೇಷ ಕೊಠಡಿಗಳು
ಹಾಸನದಲ್ಲಿ 2,952 ವಿದ್ಯಾರ್ಥಿಗಳಿಗೆ 134 ಮಾರ್ಗದಲ್ಲಿ142 ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲ ಪೋಷಕರು ಮಕ್ಕಳನ್ನು ಬೈಕ್, ಕಾರು ಮತ್ತಿತರ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ವಾಪಸ್ ಕರೆದೊಯ್ದಯರು. ಚಾಮರಾಜ ನಗರ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ವಲಯದ 4 ವಿದ್ಯಾರ್ಥಿಗಳು, ಕೆಮ್ಮು ನೆಗಡಿಯಿಂದ ಬಳಲುತ್ತಿದ್ದ 5 ಮಂದಿ ಸೇರಿದಂತೆ ಒಟ್ಟು 9 ಮಂದಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಯಿತು.
ಪರೀಕ್ಷಾ ಕೇಂದ್ರದ ಗೊಂದಲ, ಆತಂಕ
ರಾಯಚೂರಿನ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಪರೀಕ್ಷೆ ಕೇಂದ್ರಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಅವರ ನೋಂದಣಿ ಸಂಖ್ಯೆ ಇಲ್ಲದಿರುವುದು ಗೊತ್ತಾಗಿ ಗೊಂದಲ ಉಂಟಾಯಿತು. ಡಿಡಿಪಿಐ ಕಚೇರಿ ಹಿಂಭಾಗದಲ್ಲಿರುವ ಈ ಕಾಲೇಜಿನಿಂದ ಆ ವಿದ್ಯಾರ್ಥಿಗಳಿಗೆ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಸರಕಾರಿ ಬಾಲಕಿಯರ ಪಪೂ ಕಾಲೇಜಿಗೆ ತೆರಳುವಂತೆ ಸೂಚಿಸಲಾಯಿತು. ಕೆಲವೆಡೆ ಹಾಲ್ ಟಿಕೆಟ್ನಲ್ಲಿ ನಮೂದಾದ ಪರೀಕ್ಷೆ ಕೇಂದ್ರದ ವಿಳಾಸದ ಬದಲು ಬೇರೆಡೆಯ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಕೇಂದ್ರ ಹುಡುಕಿಕೊಂಡು ಅಲೆಯುವಂತಾಯಿತು.
ಶಿಕ್ಷಕರಿಂದ ವಿದ್ಯಾರ್ಥಿಗಳಿಗೇ ವಂದನೆ!
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಸೂಧಿರ್ತಿ ತುಂಬಲು ಶಾಲಾವರಣವನ್ನು ತಳಿರು ತೋರಣದಿಂದ ಸಿಂಗರಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು. ಜತೆಗೆ, ಪರೀಕ್ಷಾರ್ಥಿಗಳಿಗೆ ಅಧಿಕಾರಿಗಳು ಮತ್ತು ಶಿಕ್ಷಕರು ಗೌರವ ವಂದನೆಯೊಂದಿಗೆ ಬರಮಾಡಿಕೊಂಡದ್ದು ವಿಶೇಷವಾಗಿತ್ತು.
ಪರೀಕ್ಷೆಗೆ ಬೋಟ್ನಲ್ಲಿ ಬಂದರು
ಮಂಗಳೂರಿನಲ್ಲಿ ಕಸಬಾ ಬೇಂಗ್ರೆ ಭಾಗದ 27 ವಿದ್ಯಾರ್ಥಿಗಳು ಬೋಟ್ ಮೂಲಕ ಆಗಮಿಸಿದ್ದರು. ಬೋಟ್ನಿಂದ ಇಳಿಯುತ್ತಿದ್ದಂತೆಯೇ ಅಧಿಕಾರಿಗಳು ಆರೋಗ್ಯ ತಪಾಸಣೆ ನಡೆಸಿ, ಪ್ರತ್ಯೇಕ ವಾಹನಗಳಲ್ಲಿ ಕರೆತಂದು ಮಂಗಳೂರಿನ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟರು.
ಕೆಲವು ಕೇಂದ್ರಗಳಲ್ಲಿ ಥರ್ಮಲ್ ದೋಷ!
ರಾಯಚೂರು ಜಿಲ್ಲೆಯಲ್ಲಿ ಕೆಲವೆಡೆ ಥರ್ಮಲ್ ಯಂತ್ರ ದೋಷದಿಂದ ಆರೋಗ್ಯವಂತರಲ್ಲೂ ಹೆಚ್ಚಿನ ತಾಪ ಕಂಡು ಬಂತು. ಇದರಿಂದ ಕೆಲ ಕಾಲ ಆತಂಕ ಮನೆ ಮಾಡಿತು. ಕೊನೆಗೆ ಮತ್ತೊಂದು ಸಾಧನದಿಂದ ತಪಾಸಣೆ ನಡೆಸಿ, ತಾಪ ಮಟ್ಟವನ್ನು ಖಚಿತಪಡಿಸಿಕೊಂಡು ಒಳಕ್ಕೆ ಬಿಡಲಾಯಿತು.
ಟಿಕೆಟ್ ಕೊಟ್ಟ ನಿರ್ವಾಹಕ, ಕ್ರಮ ಸಾಧ್ಯತೆ
ಸರಕಾರ ವಿದ್ಯಾರ್ಥಿಗಳ ಪ್ರಯಾಣ ಉಚಿತ ಎಂದು ಹೇಳಿದ್ದರೂ ಸಾಗರದಿಂದ ಶಿವಮೊಗ್ಗಕ್ಕೆ ಒಂದೇ ಬಸ್ನಲ್ಲಿ ಬಂದ 40 ವಿದ್ಯಾರ್ಥಿಗಳಿಗೆ ಕಂಡಕ್ಟರ್ ಬಲವಂತವಾಗಿ ಹಣ ಪಡೆದು ಟಿಕೆಟ್ ಕೊಟ್ಟಿದ್ದಾರೆ. ನಿರ್ವಾಹಕನ ವಿರುದ್ಧ ಕ್ರಮ ಜರುಗಿಸುವುದಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿ ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಯುದ್ಧ ಗೆದ್ದ ಅನುಭವ
ವಿಜಯಪುರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಹಾಲ್ನಿಂದ ಯುದ್ಧ ಗೆದ್ದವರಂತೆ ಹೊರ ಬಂದರು. ಓದಿದ್ದೇ ಪ್ರಶ್ನೆಗಳು ಬಂದಿದ್ದವು. ಚೆನ್ನಾಗಿ ಬರೆದೆವು ಎಂದು ಬಹುತೇಕ ವಿದ್ಯಾರ್ಥಿಗಳು ಸಂಭ್ರಮದಿಂದ ಹೇಳಿದರು. ಕಂಟೈನ್ಮೆಂಟ್ ಪ್ರದೇಶದ 103 ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಪರೀಕ್ಷೆ ಬರೆದರು. ಸಾರಿಗೆ ಸಂಸ್ಥೆಗಳು ವೇಳಾಪಟ್ಟಿಯನ್ನು ಚಾಚೂ ತಪ್ಪದೆ ಪರಿಪಾಲಿಸಿದ್ದು ವಿಶೇಷ. ಕೊರೊನಾ ಸೋಂಕಿತ ವಿದ್ಯಾರ್ಥಿನಿಯೊಬ್ಬಳಿಗೆ ಪರೀಕ್ಷೆಗೆ ಅನುಮತಿ ನಿರಾಕರಿಸಲಾಯಿತು.
ಒಂದು ವಿಷಯದ ಪರೀಕ್ಷೆ ಬರೆದು, ಭಾರ ಕಡಿಮೆಯಾಗಿದ್ದಕ್ಕೆ ಸಂತಸವಾಗಿದೆ. ನಧಿಮಗೀಗ ಭಯವಿಲ್ಲ.
– ವಿಜಯ ನಾಯಕ ವಿಜಯಪುರ
ದುಃಖದ ಕ್ಷಣಗಳು…
ಮಗನನ್ನು ಬಿಡಲು ಬಂದ ತಂದೆ ಸಾಧಿವು
ರಾಯಚೂರು ಜಿಲ್ಲೆಯ ಸುಂಕೇಶ್ವರಹಾಳ ಗ್ರಾಮದ ಸರಕಾರಿ ಪ್ರೌಢ ಶಾಲೆ ಶಿಕ್ಷಕ ನಾಗರೆಡ್ಡಿ (57) ಅವರು ತಮ್ಮ ಪುತ್ರ ವಿಶ್ವನಾಥನನ್ನು ಪರೀಕ್ಷಾ ಕೇಂದ್ರಕ್ಕೆ ಬಿಡಲು ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾರೆ. ಅವರು ಮಗನನ್ನು ಗಬ್ಬೂರಿನ ಕೇಂದ್ರದಲ್ಲಿ ಬಿಟ್ಟು ಮಸರಕಲ್ ಗ್ರಾಮದ ಪರೀಕ್ಷಾ ಕೇಂದ್ರಕ್ಕೆ ಕರ್ತವ್ಯಕ್ಕೆ ತೆರಳಬೇಕಿತ್ತು. ಪುತ್ರನೂ ಗಾಯಗೊಂಡಿದ್ದಾನೆ.
ವಿದ್ಯುದಾಘಾತಕ್ಕೆ ತಂದೆ ಬಲಿ
ಮಗಳು ಪರೀಕ್ಷೆ ಬರೆಯಲು ಹೊರಟ ವೇಳೆ ತಂದೆ ವಿದ್ಯುದಾಘಾತಕ್ಕೆ ಬಲಿಯಾದ ಘಟನೆ ಬೆಳಗಾವಿ ಜಿಲ್ಲೆಯ ಯಮಕನಮರಡಿಯಲ್ಲಿ ನಡೆದಿದೆ. ರೈತ ರಮೇಶ್ ಬಸವಣ್ಣಿ ಗುರವ (43) ಬೆಳಗ್ಗೆ ಹೊಲಕ್ಕೆ ಹೋಗಿದ್ದರು. ಅಲ್ಲಿ ಬೋರ್ವೆಲ್ ಸ್ವಿಚ್ ಆನ್ ಮಾಡಲು ಹೊರಟಾಗ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪತ್ನಿ ವಿದ್ಯಾಶ್ರೀ, ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆಯಲ್ಲಿದ್ದ ಪುತ್ರಿ ಅಂಜಲಿ ಮತ್ತಿತರರು ಹೊಲಕ್ಕೆ ಹೋಗಿದ್ದಾರೆ. ಆಗ ಸ್ಥಳೀಯರು ‘ಏನೂ ಆಗಿಲ್ಲ, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ, ನೀನು ಪರೀಕ್ಷೆಗೆ ಹೋಗು.’’ ಎಂದು ಕಳುಹಿಸಿದ್ದಾರೆ. ಪರೀಕ್ಷೆ ಬರೆದು ಮರಳಿ ಬಂದಾಗ ಈ ಸುದ್ದಿ ಗೊತ್ತಾಯಿತು.
ಅಮ್ಮ ಅಗಲಿದ ನೋವು…
ಜೊಯಿಡಾ ತಾಲೂಕಿನ ಕ್ಯಾಸಲರಾಕ್ ಪ್ರೌಢಶಾಲೆ ವಿದ್ಯಾರ್ಥಿ ನೀಲೇಶ ಗಾಂವಕರ ಅವರ ತಾಯಿ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದರು. ಪೋಷಕರೊಂದಿಗೆ ಸಮಾಲೋಚಿಸಿದ ನೋಡಲ್ ಅಧಿಕಾರಿ ರಮೇಶ್ ಗುರುನಾಥ ಚೌದರಿ ಅವರು ವಿದ್ಯಾರ್ಥಿಯನ್ನು ಪರೀಕ್ಷೆ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸಿದರು.
ಬೈಕ್ನಲ್ಲಿ ಹೊರಟಿದ್ದಾಗ ಲಾರಿ ಡಿಕ್ಕಿ
ಮೂವರು ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಬೈಕ್ನಲ್ಲಿ ತೆರಳುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದು ಒಬ್ಬ ಮೃತಪಟ್ಟ ಮುಂಡರಗಿಯ ಬಾಗೇವಾಡಿಯಲ್ಲಿ ನಡೆದಿದೆ. ಸಿದ್ದಪ್ಪ ತಳವಾರ ಮೃತ ವಿದ್ಯಾರ್ಥಿ. ಲಾರಿಯು ಟಿಪ್ಪರ್ ಓವರ್ಟೇಕ್ ಮಾಡುವ ಭರದಲ್ಲಿ ಬೈಕ್ಗೆ ಡಿಕ್ಕಿಯಾಗಿದೆ.
ವಿದ್ಯಾರ್ಥಿಗಳು ಅಸ್ವಸ್ಥ
ಗೋಕಾಕ್‌ನ ಪಟ್ಟ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ, ಬಾದಾಮಿ ತಾಲೂಕಿನಲ್ಲಿ ಅಲ್ಸರ್‌ನಿಂದ ಬಳಲುತ್ತಿದ್ದ ವಿದ್ಯಾರ್ಥಿ ಅಸ್ವಸ್ಥರಾದಾಗ ಅವರಿಗೆ ಕೂಡಲೇ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಬೈಲಹೊಂಗಲ ತಾಲೂಕಿನ ದೊಡ್ಡವಾಡ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಆರಂಭವಾದ ಗಂಟೆಯಲ್ಲಿ ವಿದ್ಯಾರ್ಥಿಗೆ ಫಿಟ್ಸ್ ಕಾಣಿಸಿಕೊಂಡಿತು.
ಪೋಷಕರಿಗೆ ಲಾಠಿ ರುಚಿ
ವಿಜಯಪುರದಲ್ಲಿ ಪರೀಕ್ಷೆ ಆರಂಭವಾದ ಬಳಿಕ ಪೋಷಕರು, ಸಾಮಾಜಿಕ ಅಂತರ ನಿಯಮ ಗಾಳಿಗೆ ತೂರಿ, ಕೇಂದ್ರದ ಬಳಿ ಗುಂಪಾಗಿ ನಿಂತಿದ್ದ ದೃಶ್ಯಗಳು ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಕಂಡುಬಂತು. ಬಳಿಕ ಅಂಥ ಗುಂಪುಗಳನ್ನು ಪೊಲೀಸರು ಚದುರಿಸಿದರು.
ಅಲ್ಲಲ್ಲಿ ಪರೀಕ್ಷೆ ಅಕ್ರಮಕ್ಕೆ ಯತ್ನ
ಕಲಬುರಗಿಯ ಹಳೇ ಜೇವರ್ಗಿ ರಸ್ತೆಯ ಪರೀಕ್ಷಾ ಕೇಂದ್ರ ಹಾಗೂ ವಿಜಯ ವಿದ್ಯಾಲಯ ಪರೀಕ್ಷಾ ಕೇಂದ್ರಗಳಲ್ಲಿ ಹಿಂದಿನಿಂದ ಕಾಂಪೌಂಡ್ ಹಾಗೂ ಕಟ್ಟಡಗಳನ್ನು ಏರಿ ಯುವಕರು ಚೀಟಿಗಳನ್ನು ತಲುಪಿಸುತ್ತಿದ್ದರು. ಮಾಧ್ಯಮವರದನ್ನು ಕಂಡು ಪೇರಿ ಕಿತ್ತರು.
ಡೈಜೆಸ್ಟ್ ಪತ್ತೆ, ಮೇಲ್ವಿಚಾರಕಿಗೆ ಕೊಕ್: ರಾಯಚೂರು ಪೊಲೀಸ್ ಕಾಲೊನಿಯ ಪರೀಕ್ಷಾ ಕೇಂದ್ರದ ಕೊಠಡಿಯ ಕಿಟಕಿಯಲ್ಲಿ ಡೈಜೆಸ್ಟ್ ಇಟ್ಟಿದ್ದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಅವರ ಭೇಟಿಯ ವೇಳೆ ತಿಳಿಯಿತು. ಕೆಂಡಾಮಂಡಲರಾದ ಅವರು ಕೊಠಡಿಯ ಮೇಲ್ವಿಚಾರಕಿ ಶೀಲಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅವರ ಜಾಗಕ್ಕೆ ಬೇರೊಬ್ಬರನ್ನು ನೇಮಿಸಲಾಯಿತು.
ಐವರು ಬಂಧನ: ಹಿರೇಕೆರೂರು ಪಟ್ಟಣದಲ್ಲಿನಕಲು ಮಾಡಲು ಸಹಕರಿಸಿದ ಆರೋಪ ಮೇಲೆ ಐವರನ್ನು ಬಂಧಿಸಿ, ನಂತರ ಜಾಮೀನಿನನ್ವಯ ಬಿಡುಗಡೆ ಮಾಡಲಾಗಿದೆ.